ಎರಡು ದಶಕದ ರೈತರ ಕಥೆಗೆ ದೃಶ್ಯರೂಪ – ಕೊಳಗ ಎಂಬ ಹೋರಾಟದ ಚಿತ್ರಣ

ಇದು ನಾ.ಡಿಸೋಜಾ ಕಥೆಯ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ಹೋರಾಟದ ಕಥೆಗಳು ತೆರೆಯ ಮೇಲೆ ರಾರಾಜಿಸಿವೆ. ಆ ಸಾಲಿಗೆ ರೈತ ಹೋರಾಟದ ಕಥೆಗಳೂ ಹೊಸದೇನಲ್ಲ. ಈಗ ಮತ್ತೊಂದು ರೈತರ ಹೋರಾಟದ ಕಥೆಯೊಂದು ಚಿತ್ರವಾಗಲು ಸಜ್ಜಾಗಿದೆ. ಹೌದು, ಇತ್ತೀಚೆಗೆ ಆ ಚಿತ್ರಕ್ಕೆ ಮುಹೂರ್ತವೂ ನೆರವೇರಿದೆ. ಅಂದಹಾಗೆ, ಆ ಚಿತ್ರದ ಹೆಸರು “ಕೊಳಗ”. ಇದು ನಾ.ಡಿಸೋಜಾ ಅವರ ಕಾದಂಬರಿ ಆಧಾರಿತ ಚಿತ್ರ. ಈ ಚಿತ್ರವನ್ನು ಪ್ರಸನ್ನ ಗೊರಲಕೆರೆ ನಿರ್ದೇಶಿಸುತ್ತಿದ್ದಾರೆ. ಸಂಭಾಷಣೆಯನ್ನೂ ಇವರೇ ಬರೆದಿದ್ದಾರೆ. ಇನ್ನು, ನಿಶಿತಾಗೌಡ ಅವರು ಚಿತ್ರಕಥೆ ಬರೆದು, ನಾಯಕಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರಸನ್ನ ಗೊರಲಕೆರೆ, ನಿರ್ದೇಶಕ

ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್‌, ಡಾ.ಅಶೋಕ್‌, ನಿರ್ದೇಶಕ ಎಸ್.‌ ನಾರಾಯಣ್‌, ಕೂಡ್ಲು ರಾಮಕೃಷ್ಣ, ಅವಿನಾಶ್‌ ಯು ಶಟ್ಟಿ ಸೇರಿದಂತೆ ಹಲವು ಗಣ್ಯರು ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಚಿತ್ರದಲ್ಲಿ ಆರೇಳು ಪ್ರಮುಖ ಪಾತ್ರಗಳು ಬರಲಿವೆ. ಇಡೀ ಕಥೆಯಲ್ಲಿ ಮೂರು ಪಾತ್ರಗಳು ಮಾತ್ರ ಹೈಲೈಟ್‌ ಆಗಿರಲಿವೆ. ಈ ಚಿತ್ರದಲ್ಲಿ ಆದಿಲೋಕೇಶ್‌ ಅವರು ಸ್ವಾಮೀಜಿ ಪಾತ್ರ ನಿಭಾಯಿಸುತ್ತಿದ್ದಾರೆ. ಇನ್ನುಳಿದಂತೆ ನಿಶಿತಾಗೌಡ ಹಾಗೂ ಕಿಶೋರ್‌ ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ.


ಈ ವೇಳೆ ಮಾತನಾಡಿದ ರೈತ ಮುಖಂಡ, ಕೋಡಿಹಳ್ಳಿ ಚಂದ್ರಶೇಕರ್‌, “ಕೊಳಗ” ಅನ್ನೋದು ಹಿಂದಿನ ಕಾಲದಲ್ಲಿ ರೈತರು ತಮ್ಮ ಧಾನ್ಯಗಳನ್ನು ಅಳೆಯಲು ಉಪಯೋಗಿಸುತ್ತಿದ್ದ ಒಂದು ಅಳತೆಗೋಲು. ರೈತಾಪಿ ವರ್ಗ ಹಾಗೂ ಭೂ ಮಾಲೀಕರ ನಡುವೆ ನಡೆಯುವಂತಹ ಘರ್ಷಣೆಯೇ ಈ ಕಥೆ. ಒಂದು ಮಹತ್ತರ ಬದಲಾವಣೆಗೆ ಕೊಳಗ ಹೇಗೆ ಕಾರಣವಾಯಿತು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಚಿತ್ರ ಎಲ್ಲರಿಗೂ ಗೆಲುವು ತರಲಿ ಎಂದು ಆಶಿಸಿದರು ಕೋಡಿಹಳ್ಳಿ.


ನಿರ್ದೇಶಕ ಕೂಡ್ಲು ರಾಮಕೃಷಷ್ಣ ಅವರು ಈವರೆಗೆ ಸುಮಾರು ೩೦ ಸಿನಿಮಾಗಳನ್ನು ನಿರ್ದೇಶಿಸಿದ್ದು, ಆ ಪೈಕಿ ೧೫ ಕಾದಂಬರಿ ಆಧಾರಿತ ಚಿತ್ರಗಳನ್ನೇ ಮಾಡಿದ್ದಾರೆ. ಆದರೆ, ಅವರಿಗೆ ನಾ.ಡಿಸೋಜ ಅವರ ಕಥೆ ಮಾಡಲಾಗಲಿಲ್ಲ ಎಂಬ ಬೇಸರವಿದೆಯಂತೆ. ಈ ಹಿಂದೆ ಕಾಗೋಡು ಸತ್ಯಾಗ್ರಹದ ಬಗ್ಗೆ ಗಿರೀಶ್‌ ಕಾಸರವಳ್ಳಿ ಅವರು ಸಾಕ್ಷ್ಯ ಚಿತ್ರ ನಿರ್ದೇಶಿಸಿದ್ದರು. ಈಗ ಪ್ರಸನ್ನ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಪರಿಣಾಮ ಬೀರುವ ಸಿನಿಮಾ ಆಗಲಿ ಎಂಬುದು ಕೂಡ್ಲು ರಾಮಕೃಷ್ಣ ಅವರ ಮಾತು.


ನಿರ್ದೇಶಕ ಪ್ರಸನ್ನ ಅವರು ಇದೊಂದು ೨೦ ವರ್ಷಗಳ ಕಾಲ ನಡೆದ ರೈತರ ದೊಡ್ಡ ಹೋರಾಟದ ಕಥೆ ಇದು ಎಂದರು. ನನ್ನ ತಾತ ಕಾಗೋಡು ಹೋರಾಟದಲ್ಲಿ ಭಾಗಿಯಾಗಿದ್ದರು. ಆಗಿನಿಂದಲೂ ಆ ವಿಚಾರಗಳು ನನ್ನೊಳಗಿದ್ದವು. ಆಗಿನ ಕಾಲದಲ್ಲಿ ರೈತ ಭೂಮಿ ಮೇಲೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದ. ಇತ್ತೀಚೆಗೆ ಅದು ಕಡಿಮೆಯಾಗುತ್ತಿದೆ. ಅದನ್ನು ಬೆಳೆಸುವ ಪ್ರಯತ್ನವಾಗಿ ಈ ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಈ ಚಿತ್ರಕ್ಕೆ ನೀನಾಸಂ ಮಂಜು, ಅವಿನಾಶ್‌ ಸೇರಿದಂತೆ ಹಲವರ ಸಹಕಾರವಿದೆ. ಚಿತ್ರಕ್ಕೆ ರಾಜಗುರು ಸಂಗೀತವಿದೆ. ಸುಜಿತ್‌ ನಾಯಕ್‌ ಸಂಕಲನವಿದೆ ಎಂದರು.

Related Posts

error: Content is protected !!