Categories
ಸಿನಿ ಸುದ್ದಿ

ಆ್ಯಕ್ಟಿಂಗ್‌ ಜತೆಗೆಯೇ ಗೊಬ್ಬರ ಮಾರಲು ಶುರು ಮಾಡಿದ್ರು ಈ ನಟಿ , ಈಗವರು ಅವನಿ ಗ್ರೀನ್ ಫ್ಯಾಕ್ಟರಿ ರೂವಾರಿ !

ಭೂಮಿ ಅಂದ್ರೆ ತಾಯಿ, ಅವಳ ಸೇವೆ ಮಾಡುವುದೇ ಪುಣ್ಯ ಅಂತಾರೆ ಈ‌ ನಟಿ, ಅವನಿ ಸಾವಯವ ಗೊಬ್ಬರ ತಯಾರಿಕೆಯ ಹಿಂದಿದೆ ಭೂಮಿ‌ ಮತ್ತು ರೈತರ ಆರೋಗ್ಯದ ಕಾಳಜಿ’.ಅವನಿ ಅಂದ್ರೇನು, ಬೆಳೆಗಳಿಗೆ ಹಾಕಿದ್ರೆ ಅದರಿಂದ ಆಗುವ ಲಾಭ ಏನು, ಅವರೇ ಹೇಳ್ತಾರೆ ಕೇಳಿ….

ಕಾಲಕ್ಕೆ ತಕ್ಕಂತೆ ಅನೇಕ‌ ಮಂದಿ ನಟ-ನಟಿಯರು ಆ್ಯಕ್ಟಿಂಗ್ ಜತೆಗೆಯೇ ಉದ್ಯಮ, ಕೃಷಿ, ಹೈನುಗಾರಿಕೆ ಅಂತ ಬದುಕಿನ ಹೊಸ ಸಾಹಸಗಳಲ್ಲಿ ತೊಡಗಿಸಿಕೊಂಡಿರುವುದು‌ ಹಳೇ ಸುದ್ದಿ. ಈಗಾಗಲೇ ಅನೇಕರು ಈ ಸಾಲಿನಲ್ಲಿ ಹೆಸರು‌ ಮಾಡಿದವರೇ. ಈಗ ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾದವರು ಕನ್ನಡದ ಮತ್ತೋರ್ವ ನಟಿ ಅಂಜಲಿ ಕೆ.ಆರ್. ಇವರೀಗ ‘ಅವನಿ ಗ್ರೀನ್ ಫ್ಯಾಕ್ಟರಿ’ ರೂವಾರಿ‌.

ಅಂಜಲಿ ಅಂದಾಕ್ಷಣ, ಇವರು’ ಕಂಕಣ ಭಾಗ್ಯ’ ಮತ್ತು ‘ಅನಂತನ ಅವಾಂತರ ‘ಚಿತ್ರಗಳ ನಾಯಕಿ ಅಲ್ಲ. ಸ್ಯಾಂಡಲ್‌ವುಡ್ ಗೆ ಈಗಷ್ಟೇ ಎಂಟ್ರಿಯಾದ ನಟಿ. ಇವರ ಪೂರ್ಣ ಹೆಸರು ಅಂಜಲಿ ರಾಮಚಂದ್ರ. ಭರತ ನಾಟ್ಯ, ಸಂಗೀತ ಹಾಗೂ ಸ್ಟೇಜ್ ಆ್ಯಂಕರಿಂಗ್ ನಲ್ಲಿ ಸಾಕಷ್ಟು ಹೆಸರು ಮಾಡಿದವರು. ಒಂದು ಡಾನ್ಸ್ ಸ್ಕೂಲ್ ನ ಶಿಕ್ಷಕಿ ಕೂಡ. ಹಾಗೆಯೇ ಒಂದಷ್ಟು ಸಿರೀಯಲ್ ಗಳಲ್ಲಿ ನಟಿಸಿ ಸಿಲ್ವರ್ ಸ್ಕ್ರೀನ್ ಗೂ‌ ಕಾಲಿಟ್ಟವರು‌. ಕಳೆದ ವರ್ಷವಷ್ಟೇ ರಿಲೀಸ್ ಆದ ‘ಮನೋರಥ’ ಹೆಸರಿನ ಚಿತ್ರದ ನಾಯಕಿ. ಈಗ ʼಸ್ವಚ್ಚ ಕರ್ನಾಟಕʼ ಹೆಸರಿನ ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ. ಅದೀಗ ರಿಲೀಸ್‌ಗೆ ರೆಡಿಯಿದೆ. ಅವರು ನಾಯಕಿ ಆಗಿ ಒಪ್ಪಿಕೊಂಡಿರುವ ಮತ್ತೊಂದು ಚಿತ್ರ ಇಷ್ಟರಲ್ಲಿಯೇ ಸೆಟ್ಟೇರಲಿದೆಯಂತೆ.

ಆದರೂ, ನಟನೆ ಅವರ ಪ್ಯಾಷನ್.. ಅದರ ಜತೆಗೆ ನೃತ್ಯ ಹಾಗೂ ಸಂಗೀತ ಕೂಡ. ಆದರೆ ಅವರೀಗ ನಟನೆಯ ಜತೆಗೆಯೇ ವೃತ್ತಿಯಾಗಿ ಗಂಭಿರವಾಗಿ ತೆಗೆದುಕೊಂಡಿದ್ದು ಉದ್ಯಮ. ಅದೇ ‘ಅವನಿ’ ಗ್ರೀನ್ ಫ್ಯಾಕ್ಟರಿʼ. ‘ಅವನಿ’ ಅಂದ್ರೆ ಭೂಮಿ. ಅದೇ ಹೆಸರಲ್ಲಿ ಸಾವಯವ ಗೊಬ್ಬರ ತಯಾರಿಸಿ, ಅದರ ಮಾರಾಟವನ್ನೇ ಗಂಭೀರವಾಗಿ ಸ್ವೀಕರಿಸಿದ್ದಾರೆ. ಕೃಷಿ ಬೆಳೆಗಳಿಗೆ ಹೇಳಿ ಮಾಡಿಸಿದ ಸಾವಯವ ಗೊಬ್ಬರ ಇದು. ಸದ್ಯಕ್ಕೆ ಈಗವರು ‘ಅವನಿ ಗ್ರೀನ್ ಫ್ಯಾಕ್ಟರಿ ‘ಯ ರೂವಾರಿಗಳಲ್ಲಿ ಒಬ್ಬರು. ಕುತೂಹಲ ಇರೋದು, ನಟನೆ, ನೃತ್ಯ, ಸಂಗೀತ ಹಾಗೂ ಸ್ಟೇಜ್‌ ಆಂಕರಿಂಗ್‌ ಜತೆಗೆಯೇ , ಈ ನಟಿ ಇದ್ಯಾವುದೋ ಗೊಬ್ಬರ ಮಾರುವ ಕೆಲಸಕ್ಕೆ ಯಾಕೆ ಕೈ ಹಾಕಿದ್ರು, ಗೊಬ್ಬರ ಮಾರುವುದಕ್ಕೂ ಅವರಿಗೂ ಅದೇನು ನಂಟು ಅಂತ. ಅದಕ್ಕಿರುವ ಉತ್ತರ ಒಂದೇ, ಅವರ ಓದು.
ನಟಿ ಅಂಜಲಿ ರಾಮಚಂದ್ರ ಅವರು ಓದಿದ್ದು ಬಯೋಟೆಕ್ ಎಂಜಿನಿಯರಿಂಗ್. ಬಯೋಟೆಕ್ ಅಂದ್ರೆ ನಿಮಗೆಲ್ಲ ಗೊತ್ತೇ ಇದೆ, ಅದೊಂದು ಜೈವಿಕ ಜಗತ್ತಿಗೆ ಸಂಬಂಧಿಸಿದ್ದು ಅಂತ. ಮಣ್ಣು, ಅದರೊಳಗಿನ ಜೀವಿಗಳು, ಬೆಳೆಗಳು, ತಿನ್ನುವ ಆಹಾರ ಪದಾರ್ಥಗಳು ಆಂತೆಲ್ಲ ಓದುತ್ತಾ, ಅದನ್ನೇ ಗಂಭೀರವಾಗಿ ಸ್ವೀಕರಿಸಿದ್ದರ ಫಲವೇ ಈ “ಅವನಿ ಗ್ರೀನ್ ಫ್ಯಾಕ್ಟರಿʼ ಯ ಆರಂಭದ ಗುಟ್ಟು ಅಂತ ಅವನಿ ಕುರಿತು ಮಾತಿಗಿಳಿಯುತ್ತಾರೆ ನಟಿ ಅಂಜಲಿ ರಾಮಚಂದ್ರ.

“ನಾನು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರು. ಆದರೂ ಹಳ್ಳಿ, ಮತ್ತು ಅಲ್ಲಿನ ಬದುಕು ನನಗೆ ಒಂಥರ ಆಸಕ್ತಿ. ಅದು ಇನ್ನಷ್ಟು ತೀವ್ರವಾಗಿದ್ದು ಬಯೋಟೆಕ್ ಎಂಜಿನಿಯರಿಂಗ್ ಸೇರಿದ ನಂತರ‌. ಬೆಂಗಳೂರಿನ ಸಪ್ತಗಿರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುವಾಗಲೇ ಭೂಮಿಗೆ ನನ್ನಿಂದಾದ ಸಹಾಯ ಮಾಡಬೇಕು, ರಸಾಯನಿಕ ಗೊಬ್ಬರ ಬಳಕೆಗೆ ಪರ್ಯಾಯವಾಗಿ ಏನಾದರೂ ಸಾವಯವ ಗೊಬ್ಬರ ಕಂಡು ಹಿಡಿಯಬೇಕೆಂದು ಆಲೋಚಿಸಿದೆ‌. ಅದರಲ್ಲೇ ಸಂಶೋಧನೆ‌ ಶುರು ಮಾಡಿದೆ. ಕಾಲೇಜಿನ ಪ್ರಾಧ್ಯಾಪಕರಾದ ಪ್ರಶಾಂತ್ ಕುಮಾರ್ ಇದಕ್ಕೆ ಸಾಥ್ ಕೊಟ್ಟರು. ತೆಂಗಿನ ನಾರು ಬಳಸಿ ಒಂದೊಳ್ಳೆಯ ಸಾವಯವ ಗೊಬ್ಬರ ತಯಾರಿಸಬಹುದೆಂಬ ಆಲೋಚನೆ ಬಂತು. ಒಂದಷ್ಟು ದಿನ ಅದರಲ್ಲೇ ಸಂಶೋಧನೆ ನಡೆಸಿ, ಕೊನೆಗೂ ಸಕ್ಸಸ್ ಕಂಡೆ ‘ ಎನ್ನುತ್ತಾರೆ ನಟಿ ಅಂಜಲಿ.

ನಟಿ ಅಂಜಲಿ ಅವರ ಸಂಶೋಧನೆಯ ಫಲವಾಗಿ ತಯಾರಿಸಲ್ಪಟ್ಟ ಗೊಬ್ಬರವೇ ಅವನಿ. ಇದು ಶುದ್ಧ ತೆಂಗಿನ ನಾರಿನಿಂದ ತಯಾರದ ಗೊಬ್ಬರ. ಪಕ್ಕಾ ಸಾವಯವ. ಇದು ಬಹು ಉಪಯೋಗಿ‌. ಅಡಿಕೆ, ತೆಂಗು, ಶುಂಠಿ ಸೇರಿದಂತೆ ಎಲ್ಲಾ ಬಗೆಯ ಬೆಳೆಗಳಿಗೆ ಶಕ್ತಿ ನೀಡುವುದಲ್ಲದೆ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ತೇವಾಂಶವನ್ನು ಬಹುಕಾಲ ಕಾಪಾಡುತ್ತದೆ. ‘ ನನ್ನ ಪ್ರಕಾರ ಈಗ ರೈತರು ತಮ್ಮ ಭೂಮಿಯ ಫಲವತ್ತತೆ ಉಳಿಸಿಕೊಳ್ಳಲು ಹಾಗೂ ತಾವು ಆರೋಗ್ಯವಂತರಾಗಿರಲು ಸಾವಯವ ಗೊಬ್ಬರ ಬಳಕೆ ಅನಿವಾರ್ಯ. ರಸಾಯನಿಕ ಗೊಬ್ಬರ ಬಳಕೆ ಭೂಮಿಯನ್ನು ಬಹುತೇಕ ಹಾಳು ಮಾಡಿದೆ. ಜತೆಗೆ ಆ ಗೊಬ್ಬರದಿಂದ ಬೆಳೆದ ಬೆಳೆಗಳನ್ನು ತಿಂದು ಜನರು ಕೂಡ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಇದು ನಿಲ್ಲಬೇಕಾದರೆ ʼಅವನಿʼಯಂತಹ ಸಾವಯವ ಗೊಬ್ಬರ ಬಳಕೆ ಅನಿವಾರ್ಯ’ ಎನ್ನುತ್ತಾರೆ ಅಂಜಲಿ.

ಅವನಿ ಗ್ರೀನ್ ಫ್ಯಾಕ್ಟರಿ ಈಗ ಗೊಬ್ಬರ ತಯಾರಿಕೆ ಮತ್ತು ಮಾರಾಟ ಎರಡು ಕ್ಷೇತ್ರದಲ್ಲೂ ಸಕ್ರಿಯವಾಗಿದೆ. ಕರ್ನಾಟಕ ತೆಂಗು ಮತ್ತು ನಾರು ಅಭಿವೃದ್ಧಿ ಸಂಸ್ಥೆ ಇದಕ್ಕೆ ಸಾಥ್ ನೀಡಿದೆ. ತಿಪಟೂರು ಹಾಗೂ ಗುಬ್ಬಿ‌ ನಡುವಿರುವ ತೆಂಗಿನ‌ ನಾರು ಅಭಿವೃದ್ಧಿ ಘಟಕದಲ್ಲೇ ಅವನಿ ಗೊಬ್ಬರ ತಯಾರಾಗುತ್ತದೆ‌ . ಇನ್ನು ಇದರ ಮಾರಾಟ ಪ್ರಕ್ರಿಯೆಗೆ ಅವನಿ ಗ್ರೀನ್ ಫ್ಯಾಕ್ಟರಿಯು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ತನ್ನ ಕಚೇರಿ ಹೊಂದಿದೆ. ಅಂಜಲಿ ಅವರ ಈ ಪ್ರಯತ್ನದಲ್ಲಿ ಸವಿತಾ ಹಾಗೂ ಡಯಾನಾ ಸಾಥ್‌ ನೀಡಿದ್ದಾರೆ. ಹಾಗೆಯೇ ಚಿತ್ರ ನಿರ್ದೇಶಕ ಗಿರೀಶ್‌ ಮೂಲಿಮನಿ ಕೂಡ ಕಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ತೆಂಗು, ಅಡಿಕೆ , ಬಾಳೆ, ಶುಂಠಿ ಸೇರಿದಂತೆ ಎಲ್ಲಾ ಬೆಳೆಗಳಿಗೂ ಇದು ಉಪಯುಕ್ತ ಗೊಬ್ಬರ. ಅದರಲ್ಲೂ ನಗರಗಳಲ್ಲಿನ ಗಾರ್ಡನ್‌ ಸಂಸ್ಕೃತಿಗೆ ಹೇಳಿ ಮಾಡಿಸಿದ ಗೊಬ್ಬರ ಎನ್ನುವುದು ಅಂಜಲಿ ಅವರ ಮಾತು. ಹೆಚ್ಚಿನ ಮಾಹಿತಿಗೆ 9243860725 ಹಾಗೂ gmail: avanigreen [email protected]
ಗೆ ಸಂಪರ್ಕಿಸಬಹುದು.

Categories
ಸಿನಿ ಸುದ್ದಿ

ಮದರಂಗಿ ಕೃಷ್ಣನ ಹೊಸ ಚಿತ್ರದಲ್ಲಿ ಪವರ್‌ಸ್ಟಾರ್‌!

ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್‌ ನಿರ್ದೇಶನ

“ಮದರಂಗಿ” ಕೃಷ್ಣ ಯಾವಾಗ “ಲವ್‌ ಮಾಕ್ಟೇಲ್‌” ಸಿನಿಮಾ ಮೂಲಕ ಸುದ್ದಿಯಾಗಿಬಿಟ್ಟರೋ, ಅಲ್ಲಿಂದ ಅವರ ಅದೃಷ್ಟದ ಬಾಗಿಲು ತೆರೆದಿದ್ದು ನಿಜ. ಸಾಲು ಸಾಲು ಸಿನಿಮಾಗಳಲ್ಲಿ ಮದರಂಗಿ ಕೃಷ್ಣ ನಟಿಸುತ್ತಿರೋದು ನಿಜ. ಈಗ ಹೊಸ ಸುದ್ದಿ ಅಂದರೆ, ನೃತ್ಯ ನಿರ್ದೇಶಕ ನಾಗೇಂದ್ರ ಪ್ರಸಾದ್‌ ಅವರಿಗೊಂದು ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಮದರಂಗಿ ಕೃಷ್ಣ ಹೀರೋ. ಇನ್ನು, ನಾಗೇಂದ್ರ ಪ್ರಸಾದ್‌ ಅವರು ಮಾಡುತ್ತಿರುವ ಹೊಸ ಚಿತ್ರದ ಮತ್ತೊಂದು ವಿಶೇಷ ಅಂದರೆ, ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು, ಸದ್ಯಕ್ಕೆ ಈ ಸುದ್ದಿ ಜೋರಾಗಿದೆ. ಅಂದಹಾಗೆ, ಕೃಷ್ಣ ನಟಿಸಿದರೋದು ಸ್ವಮೇಕ್‌ ಸಿನಿಮಾದಲ್ಲಲ್ಲ. ಬದಲಾಗಿ ತಮಿಳು ಸಿನಿಮಾದ ರಿಮೇಕ್‌ ಚಿತ್ರ. ಅದು “ಓ ಮೈ ಕಡವುಲೆ’ ಸಿನಿಮಾ. ಈ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲು ತಯಾರಿ ನಡೆಸಲಾಗಿದೆ. ಈ ಚಿತ್ರ ರಿಮೇಕ್‌ ಆಗಿದ್ದರೂ, ಕನ್ನಡಕ್ಕೆ ಒಂದಷ್ಟು ಬದಲಾವಣೆ ಮಾಡಿಕೊಂಡು. ಕನ್ನಡದಲ್ಲಿ ತಯಾರಾಗುತ್ತಿದೆ. ಇನ್ನು, ಈ ಮೂಲ ಚಿತ್ರದಲ್ಲಿ ಅಶೋಕ್ ಸೆಲ್ವನ್ ನಾಯಕರಾಗಿದ್ದರು. ರಿತಿಕಾ ಸಿಂಗ್ ನಾಯಕಿಯಾಗಿದ್ದರು. ಅತಿಥಿ ಪಾತ್ರದಲ್ಲಿ ನಟ ವಿಜಯ್ ಸೇತುಪತಿ ನಟಿಸಿದ್ದರು.

ಈಗ ಕನ್ನಡದಲ್ಲಿ ತಯಾರಾಗಲಿರುವ ಈ ಚಿತ್ರದಲ್ಲಿ ವಿಜಯ್‌ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರು ನಟಿಲು ಒಪ್ಪಿದ್ದಾರೆ ಎನ್ನಲಾಗಿದೆ. ಈಗಾಗಲೇ ಪುನೀತ್ ಅವರ ಜೊತೆ  ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಅವರು ನಟಿಸುವ ಬಗ್ಗೆ ಯೋಚಿಸಿದ್ದಾರೆ ಎನ್ನಲಾಗಿದೆ. ಅದೇನೆ ಇದ್ದರೂ, ಇಲ್ಲೀಗ ಸಿನಿಮಾತಂಡ ಕೂಡ ಆ ಕುರಿತಂತೆ ವಿಷಯ ಹೊರಹಾಕಬೇಕಿದೆ.  ನಾಗೇಂದ್ರ ಪ್ರಸಾದ್‌ ಅಂದಾಕ್ಷಣ, ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅದೇ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ಸಹೋದರ ಅಂದರೆ ಗೊತ್ತಾಗುತ್ತೆ. ಮೂಗುರು ಸುಂದರಂ ಅವರ ಮೂರನೇ ಪುತ್ರ ನಾಗೇಂದ್ರ ಪ್ರಸಾದ್‌ ಈಗಾಗಲೇ ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡಿದ್ದು, ಅಲ್ಲೂ ಜೋರು ಸುದ್ದಿಯಾಗಿದ್ದಾರೆ. ಕನ್ನಡದಲ್ಲಿ ನಾಗೇಂದ್ರ ಪ್ರಸಾದ್ ಅವರು “೧೨೩”, “ಮನಸೆಲ್ಲಾ ನೀನೆ” ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳ ಬಳಿಕ ಕನ್ನಡಕ್ಕೆ ಎಂಟ್ರಿ ಕೊಡುತ್ತಿರುವ ನಾಗೇಂದ್ರ ಪ್ರಸಾದ್ ಈಗ ಇಲ್ಲಿ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ತೆರೆ ಮೇಲೂ ಸೈ ಅಂತಾರೆ ಮಾಲೂರು ಶ್ರೀನಿವಾಸ್

 

ಇದೇ‌ ಮೊದಲ ಸಲ 5ಡಿ ಚಿತ್ರದಲ್ಲಿ ಖಡಕ್ ಕಾಪ್

ನೃತ್ಯ ನಿರ್ದೇಶಕನಾಗಿ ಇದ್ದವನು ನಾನು.‌ ಸದಾ ತೆರೆ ಹಿಂದೆ ಇರುವಂಥವನಿಗೆ ಒಳ್ಳೆಯ ಅವಕಾಶವಿದು.
ನಾನು ಈ ಹಿಂದೆ ಈಟಿವಿ, ಕಸ್ತೂರಿ, ಉದಯ, ಸುವರ್ಣ, ಜೀ ಕನ್ನಡ ಸೇರಿದಂತೆ ಡ್ಯಾನ್ಸ್ ರಿಯಾಲಿಟಿ ಶೋ ಮಾಡಿದ ಹೆಗ್ಗಳಿಕೆ ಇದೆ…

ಮಾಲೂರು ಶ್ರೀನಿವಾಸ್. ಕನ್ನಡ‌ ಚಿತ್ರರಂಗ ಕಂಡ ಯಶ್ವಿ ನೃತ್ಯ ನಿರ್ದೇಶಕ. ಈ ಬಣ್ಣದ ಲೋಕ ಸ್ಪರ್ಶಿಸಿ ಎರಡು ದಶಕ ಕಳೆದಿರುವ ಮಾಲೂರು ಶ್ರೀನಿವಾಸ್, ಸುಮಾರು 400ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ‌ ಕೆಲಸ‌ ಮಾಡಿದ್ದಾರೆ. ಕನ್ನಡದ ಬಹುತೇಕ ಸ್ಟಾರ್ ಸೇರಿದಂತೆ ಹೊಸಬರಿಗೂ ಸ್ಟೆಪ್ ಹೇಳಿಕೊಟ್ಟ ಕೀರ್ತಿ ಇವರದು.


ಇಷ್ಟಕ್ಕೂ ಈ ಡ್ಯಾನ್ಸ್ ಮಾಸ್ಟರ್ ಮಾಲೂರು ಶ್ರೀನಿವಾಸ್ ಕುರಿತು ಇಷ್ಟೊಂದು ಪೀಠಿಕೆ‌ಯಾಕೆ ಗೊತ್ತಾ? ಮಾಲೂರು ತೆರೆ ಹಿಂದಷ್ಟೇ ಅಲ್ಲ, ತೆರೆ ಮೇಲೂ ಕಾಣಿಸಿಕೊಂಡಿದ್ದಾರೆ. ಹಾಗಂತ, ಅವರಿಗೆ ಇದು ಹೊಸದಲ್ಲ. ಹಲವು ಸಿನಿಮಾಗಳಲ್ಲಿ ಸ್ಟಾರ್ ಜೊತೆ ಹೆಜ್ಜೆ ಹಾಕಿದ್ದಾರೆ.

ಸಣ್ಣಪುಟ್ಟ ಪಾತ್ರಕ್ಕೂ ಜೈ ಎಂದಿದ್ದಾರೆ. ಆದರೆ, ಈಗ ಮೊದಲ ಸಲ‌ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.
ಹೌದು, ಮಾಲೂರು ಶ್ರೀನಿವಾಸ್, ಎಅ್.ನಾರಾಯಣ್ ನಿರ್ದೇಶನದ “5ಡಿ” ಚಿತ್ರದಲ್ಲಿ ಒಂದೊಳ್ಳೆಯ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿ ಗನ್ ಹಿಡಿದಿದ್ದಾರೆ.


ಆ ಕುರಿತು ಹೇಳುವ ಮಾಲೂರು ಶ್ರೀನಿವಾಸ್, ” ಇದು ಮೊದಲ ಕಾಪ್ ಪಾತ್ರ. ನಾನು ಹಿಂದೆ ಒಂದಷ್ಟು ಸಿನಿಮಾದಲ್ಲಿ‌ ನಟಿಸಿದ್ದರೂ, ಈ ರೀತಿಯ ಪಾತ್ರ ಮಾಡಿರಲಿಲ್ಲ. ಈಗ ನಾರಾಯಣ್ ಸರ್ ನನ್ನ ಗುರುಗಳು. ಅವರ ಎಲ್ಲಾ ಸಿನಿಮಾಗಳಿಗೂ ನಾನೇ ಕೋರಿಯೋಗ್ರಾಫರ್. ಹಾಗಾಗಿ ಇಲ್ಲೂ ಹಾಡುಗಳಿಗೆ ಕೋರಿಯೋಗ್ರಾಫ್ ಮಾಡಿದ್ದೇನೆ. ನಾರಾಯಣ್ ಸರ್ ಇಲ್ಲಿ ಕಾಪ್ ಪಾತ್ರ ಮಾಡಿಸಿದ್ದಾರೆ. ಈಗಾಗಲೇ ಆ ಸೀನ್ ಚಿತ್ರೀಕರಣಗೊಂಡಿದೆ.


ನಾನೊಬ್ಬ ಕಡಕ್ ಪೊಲೀಸ್ ಅಧಿಕಾರಿ. ನನ್ ಕಂಟ್ರೋಲ್ ಇರುವ ಒಂದು ಪೊಲೀಸ್ ಸ್ಟೇಷನ್ ಅಧಿಕಾರಿ‌ ನಾನು. ಚೆನ್ನಾಗಿದೆ. ಮೂರು‌ ದಿನಗಳ ಕಾಲ‌ ನನ್ನ ಎಪಿಸೋಡ್ ಮಾಡಲಾಗಿದೆ. ಆದಿತ್ಯ ಅವರ ಜೊತೆಗಿನ ಕಾಂಬಿನೇಷನ್ ಇಲ್ಲ.


ಒಂದು ತನಿಖೆ ಅಧಿಕಾರಿ. ಒಳ್ಳೆಯ ಪಾತ್ರವದು. ನಿರ್ದೇಶಕರು ತುಂಬಾ ಚೆನ್ನಾಗಿ ತೋರಿಸಿದ್ದಾರೆ. ನಂಬರ್ ಆಫ್ ಶಾಟ್ಸ್, ಬಿಲ್ಡಪ್ಸ್ ಇವೆ. ಒಂದು ದಿನ ಫುಲ್ ಇಂಟ್ರಡಕ್ಷನ್ ಸೀನ್ ಮಾಡಿದ್ದಾರೆ. ಎಲ್ಲರಿಗೂ ಮಾಲೂರು ಸ್ಕ್ರೀನ್ ಮೇಲೆ ಬೇರೆ ರೀತಿ ಕಾಣುತ್ತಾರೆ. ಈ ಚಿತ್ರದಲ್ಲಿ ನಾನು ತೆರೆಯ ಹಿಂದೆ, ಮುಂದೆ ಎರಡು ರೀತಿ ಕೆಲಸ ಮಾಡಿದ್ದೇನೆ.

ಸಾಂಗ್ ಗೂ ಕೋರಿಯೊಗ್ರಾಫ್ ಮಾಡಿದ್ದೇನೆ. ಕಾಪ್ ಆಗಿಯೂ ನಟಿಸಿದ್ದೇನೆ. ಇದೊಂದು ಅಪರೂಪದ ಪಾತ್ರ. ನಾರಾಯಣ್ ಸರ್ ಕರೆದು ಈ ಪಾತ್ರ ಮಾಡಿ‌ ಅಂದಾಗ, ಇಲ್ಲ ಅನ್ನೋಕೆ ಆಗಲಿಲ್ಲ. ಮಾಡಿದೆ.
ನೃತ್ಯ ನಿರ್ದೇಶಕನಾಗಿ ಇದ್ದವನು ನಾನು.‌ ಸದಾ ತೆರೆ ಹಿಂದೆ ಇರುವಂಥವನಿಗೆ ಇದೊಂದು ಒಳ್ಳೆಯ ಅವಕಾಶ.
ನಾನು ಈ ಹಿಂದೆ ಈಟಿವಿ, ಕಸ್ತೂರಿ, ಉದಯ, ಸುವರ್ಣ, ಜೀ ಕನ್ನಡ ಸೇರಿದಂತೆ ಡ್ಯಾನ್ಸ್ ರಿಯಾಲಿಟಿ ಶೋ ಮಾಡಿದ ಹೆಗ್ಗಳಿಕೆ ಇದೆ.

ಬಹುತೇಕ ವಾಹಿನಿಗಳಿಗೆ ರಿಯಾಲಿಟಿ ಶೋಗಳಿಗೆ ಮೊದಲು ಎಂಟ್ರಿಕೊಟ್ಟವನು ಎಂಬ ಹೆಮ್ಮೆ‌ಯೂ ಇದೆ. ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಡ್ಯಾನ್ಸ್ ರಿಯಾಲಿಟಿ ಶೋ ಮಾಡಿದವನು. ಅಲ್ಲಿಂದ ಒಂದು ಡ್ಯಾನ್ಸ್ ಶೋ ಸಂಗ್ರಾಮ ಮಾಡಿದ ಖುಷಿ ಇದೆ. “ಕುಣಿಯೋಣು ಬಾರಾ” ಎಂಬ ಜನಪ್ರಿಯ ಶೋ ಮೂಲಕ ಹೊಸ ಡ್ಯಾನ್ಸ್ ಕ್ರಾಂತಿಯೇ ಆಗೋಯ್ತು. ಆಗಲೇ 9 ಸೀಸನ್ ಮಾಡಿದ್ದೆ. ಆ ದಿನಗಳಲ್ಲೇ‌ ನನಗೆ ಹೀರೋ ಆಗಿ ನಟಿಸುವ ಅವಕಾಶ ಬಂದಿದ್ದವು.

ಆದರೆ, ನಾನು ಆಗ ಬಿಝಿ ಇದ್ದಂತಹ ಕಾಲಘಟ್ಟ, ಒಂದು ಕಡೆ ರಿಯಾಲಿಟಿ ಶೋ, ಇನ್ನೊಂದು ಕಡೆ‌‌ ಸಾಲು‌ ಸಾಲು ಸಿನಿಮಾಗಳಿದ್ದವು. ಹಾಗಾಗಿ ಮಾಡಲು ಸಾಧ್ಯವಾಗಿರಲಿಲ್ಲ. ಈಗ ನಟನೆಯತ್ತ ವಾಲಿದ್ದೇನೆ. ನನಗೆ ಸೂಕ್ತ ಎನಿಸುವ ಪಾತ್ರ ಇದ್ದರೆ ಖಂಡಿತ ಮಾಡ್ತೀನಿ. ಸದ್ಯ ಒಂದಷ್ಟು ಸಿನಿಮಾಗಳ ಮಾತುಕತೆ ನಡೆಯುತ್ತಿದೆ” ಎನ್ನುತ್ತಾರೆ ಮಾಲೂರು ಶ್ರೀನಿವಾಸ್.


ಅದೇನೆ ಇರಲಿ‌‌ ದಶಕಗಳ‌ ಕಾಲ ನೃತ್ಯ ನಿರ್ದೇಶಕರಾಗಿರುವ ಮಾಲೂರು ಶ್ರೀನಿವಾಸ್, ಈಗ ನಟನೆ ಕಡೆ ಗಮನ ಹರಿಸಿದ್ದಾರೆ. ಒಬ್ಬ ಯಶಸ್ವಿ ಡ್ಯಾನ್ಸ್ ಮಾಸ್ಟರ್ ಆಗಿರುವ ಅವರು, ಒಳ್ಳೆಯ ಕಲಾವಿದರಾಗಿಯೂ ಹೊರ ಹೊಮ್ಮಲಿ ಎಂಬುದು “ಸಿನಿಲಹರಿ” ಹಾರೈಕೆ.

Categories
ಸಿನಿ ಸುದ್ದಿ

ಹಿಂದಿ ರಾಷ್ಟ್ರ ಭಾಷೆ- ದೊಡ್ಡ ರಂಗೇಗೌಡರ ಹೇಳಿಕೆಗೆ ನಟ ನಿಖಿಲ್‌ ಕುಮಾರ್‌ ವಿರೋಧ

ಅರವಿನ ಕೊರತೆಯಿಂದ ಹಾಗೆ ಹೇಳಿರಬಹುದು ಅಂತ ಕುಟುಕಿದ ನಟ 

ಹಿಂದಿ ಭಾಷೆ ಕುರಿತು ಸಾಹಿತಿ ಹಾಗೂ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ. ದೊಡ್ಡ ರಂಗೇ ಗೌಡರು ನೀಡಿರುವ ಹೇಳಿಕೆ ಭಾರೀ ವಿವಾದ ಹುಟ್ಟು ಹಾಕಿದೆ. ಸೋಷಲ್‌ ಮೀಡಿಯಾದಲ್ಲಿ ಅವರ ಹೇಳಿಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಾಕಷ್ಟು ಜನ ರಂಗೇಗೌಡರನ್ನು ಕಟುವಾದ ಮಾತುಗಳಿಂದ ಟೀಕಿಸಿದ್ದಾರೆ. ಈ ನಡುವೆಯೇ ನಟ ನಿಖಿಲ್‌ ಕುಮಾರ್‌ ಕೂಡ ರಂಗೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಬಹುಶ: ಇದು ಅವರ ಅರಿವಿನ ಕೊರತೆಯಾಗಿರಬಹುದು ಎಂದು ಹೇಳಿದ್ದಾರೆ.
” ಇಂಗ್ಲಿಷ್‌ ಗೆ ನಾವು ಮಣೆ ಹಾಕುತ್ತೇವೆ. ಹಿಂದಿಯನ್ನು ಏಕೆ ತಿರಸ್ಕಾರ ಮಾಡಬೇಕು, ಹಿಂದಿ ನಮ್ಮ ರಾಷ್ಟ್ರ ಭಾಷೆ ” ಎಂಬುದಾಗಿ ರಂಗೇಗೌಡರ ನೀಡಿರುವ ಹೇಳಿಕೆಗೆ ನಟ ನಿಖಿಲ್‌ ಕುಮಾರ್‌, ಸೋಷಲ್‌ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ” ಹಿಂದಿ ನಮ್ಮ ರಾಷ್ಟ್ರ ಭಾಷೆ , ಕನ್ನಡಿಗರಾದ ನಾವು ಅದನ್ನು ಒಪ್ಪಿಕೊಳ್ಳಬೇಕು ಎಂಬ ದೊಡ್ಡ ರಂಗೇಗೌಡರ ಮಾತು ಕೇಳಿ ಅಚ್ಚರಿಯಾಯಿತು. ಬಹುಶ: ಇದು ಅವರ ಅರವಿನಿ ಕೊರತೆಯಿಂದ ಆಗಿದೆʼ ಎಂದು ನಿಖಿಲ್‌ ಕುಟುಕಿದ್ದಾರೆ.ʼ

“ನಮ್ಮ ರಾಜ್ಯದ ಪ್ರತಿಯೊಂದು ಶಾಲೆಯಲ್ಲೂ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂಬ ವಿಚಾರವನ್ನು ಕಲಿಸುವ ಅವಶ್ಯಕತೆ ಇದೆ. ಇಲ್ಲದಿದ್ದರೆ, ಮುಂದಿನ ಪೀಳಿಗೆಯೂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ರೀತಿ ಹಿಂದಿ ರಾಷ್ಟ್ರೀಯ ಭಾಷೆ ಎಂದು ತಪ್ಪಾಗಿ ಭಾವಿಸಿಕೊಳ್ಳುವ ಸಾಧ್ಯತೆ ಇದೆʼ ಎಂಬುದಾಗಿ ನಟ ನಿಖಿಲ್‌ ಕುಮಾರ್‌ ಇದೇ ವೇಳೆ ಆತಂಕ ಹೊರ ಹಾಕಿದ್ದಾರೆ.

Categories
ಸಿನಿ ಸುದ್ದಿ

ಬಿಗ್‌ ಬಜೆಟ್‌ ನಿರ್ಮಾಪಕರಿಗೆ ಕೊರೊನಾ ಕಲಿಸಿದ ಹೊಸ ಪಾಠ!

ಅರಿವಾದ ಬಳಿಕ ನಾವೆಲ್ಲಾ ಒಂದೇ ಎಂಬ ಘೋಷಣೆ

ಈ ಹಿಂದೆ ಚಿತ್ರಮಂದಿರಕ್ಕೆ ಯಾರು  ಬರಲಿ, ಬಿಡಲಿ ಅದರ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹೊಸಬರಂತೂ ಸ್ಟಾರ್‌ ಚಿತ್ರಗಳ ಮಧ್ಯೆಯೂ ನುಸುಳಿ ಬಂದು ಜನರನ್ನ ಆಕರ್ಷಿಸಲು ಹೆಣಗಾಡುತಿದ್ದ ಪಾಡು ಹೇಳತೀರದು. ಆಗ, ನಿರ್ಮಾಪಕರ ನಡುವೆ ಅಷ್ಟಾಗಿ ಹೊಂದಾಣಿಕೆ ಇಲ್ಲದ ಕಾರಣವೋ ಏನೋ, ಒಂದಷ್ಟು ಚಿತ್ರಗಳು ಒಮ್ಮೆಲೆ ಚಿತ್ರಮಂದಿರಗಳಿಗೆ ಅಪ್ಪಳಿಸುವ ಮೂಲಕ ಗೊಂದಲ ಸೃಷ್ಟಿಸಿಬಿಡುತ್ತಿದ್ದವು. ಚಿತ್ರಮಂದಿರಕ್ಕೆ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರಿಂದ ಯಾವ ಸಿನಿಮಾ ನೋಡಬೇಕು, ಬಿಡಬೇಕು ಎಂಬ ಗೊಂದಲದಲ್ಲಿ ಪ್ರೇಕ್ಷಕ ಇರುತ್ತಿದ್ದದ್ದು ಕಾಮನ್.‌ ಕೊರೊನಾ ಮುನ್ನ ಇದೆಲ್ಲಾ ಸಹಜವಾಗಿಯೇ ಇತ್ತು. ಆದರೆ ಈಗ…

ಕನ್ನಡ ಚಿತ್ರರಂಗದಲ್ಲೀಗ ಸಿನಿಮಾಗಳ ಬಿಡುಗಡೆ ಪರ್ವ ಜೋರಾಗಿದೆ. ಕೊರೊನಾ ಹಾವಳಿ ಕಡಿಮೆಯಾದ ನಂತರದ ದಿನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈಗ ಕನ್ನಡ ಸಿನಿಮಾರಂಗದಲ್ಲಿ ಎಲ್ಲವೂ ಸರಿಯಾಗಿದೆ. ಹೌದು, ಕೊರೊನಾ ಮುಂಚಿನ ದಿನಗಳಲ್ಲಿ ಚಿತ್ರರಂಗ ಸಿಕ್ಕಾಪಟ್ಟೆ ಶೈನ್‌ ಆಗಿತ್ತು. ಹಾಗಂತ, ಈಗ ಇಲ್ಲವೆಂದಲ್ಲ. ಎಂದಿಗಿಂತಲೂ ಈಗ ಚಿತ್ರರಂಗ ಬಲವಾಗಿದೆ. ಜೋಶ್‌ ಆಗಿಯೂ ಇದೆ. ಈ ಮಾತು ನಿಜ. ಮೊದಲೆಲ್ಲಾ ವಾರಕ್ಕೆ ಎಂಟು, ಹತ್ತು ಸಿನಿಮಾಗಳು ತೆರೆಕಂಡಿದ್ದನ್ನು ಗಮನಿಸಬಹುದು.

ಅಗೆಲ್ಲಾ ಚಿತ್ರಮಂದಿರಕ್ಕೆ ಯಾರು  ಬರಲಿ, ಬಿಡಲಿ ಅದರ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹೊಸಬರಂತೂ ಸ್ಟಾರ್‌ ಚಿತ್ರಗಳ ಮಧ್ಯೆಯೂ ನುಸುಳಿ ಬಂದು ಜನರನ್ನ ಆಕರ್ಷಿಸಲು ಹೆಣಗಾಡುತಿದ್ದ ಪಾಡು ಹೇಳತೀರದು. ಹಾಗೆಲ್ಲಾ, ನಿರ್ಮಾಪಕರ ನಡುವೆ ಅಷ್ಟಾಗಿ ಹೊಂದಾಣಿಕೆ ಇಲ್ಲದ ಕಾರಣವೋ ಏನೋ, ಒಂದಷ್ಟು ಚಿತ್ರಗಳು ಒಮ್ಮೆಲೆ ಚಿತ್ರಮಂದಿರಗಳಿಗೆ ಅಪ್ಪಳಿಸುವ ಮೂಲಕ ಗೊಂದಲ ಸೃಷ್ಟಿಸಿಬಿಡುತ್ತಿದ್ದವು. ಚಿತ್ರಮಂದಿರಕ್ಕೆ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರಿಂದ ಯಾವ ಸಿನಿಮಾ ನೋಡಬೇಕು, ಬಿಡಬೇಕು ಎಂಬ ಗೊಂದಲದಲ್ಲಿ ಪ್ರೇಕ್ಷಕ ಇರುತ್ತಿದ್ದದ್ದು ಕಾಮನ್.‌ ಕೊರೊನಾ ಮುನ್ನ ಇದೆಲ್ಲಾ ಸಹಜವಾಗಿಯೇ ಇತ್ತು. ಆದರೆ ಈಗ…


ಈಗ ಕಾಲ ಬದಲಾಗಿದೆ. ಕೊರೊನಾ ಒಳ್ಳೆಯ ಪಾಠವನ್ನೂ ಕಲಿಸಿದೆ. ಅದರಲ್ಲೂ ಸಿನಿಮಾ ಮಂದಿಗೆ ಸಾಕಷ್ಟು ಪಾಠ ಕಲಿಸಿದೆ ಅಂದರೆ ತಪ್ಪಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಕಾರ್ಯಚಟುವಟಿಕೆಗಳು ಶುರುವಾಗಿದ್ದರೂ, ಚಿತ್ರರಂಗ ಮಾತ್ರ ಶುರುವಾಗಿರಲಿಲ್ಲ. ಸರ್ಕಾರ ಶೇ.೫೦ರಷ್ಟು ಮಾತ್ರ ಅನುಮತಿ ನೀಡಿದೆ. ಈ ಅನುಮತಿಯ ಆಧಾರದ ಮೇಲೆ ಎಲ್ಲವೂ ನಡೆಯುತ್ತಿದೆ. ಒಂದಷ್ಟು ಚಿತ್ರಗಳು ತೆರೆಕಂಡಿವೆ. ಈಗ ಬಿಗ್‌ ಬಜೆಟ್‌ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಕೊರೊನಾ ಸಾಕಷ್ಟು ಸಮಸ್ಯೆ ತಂದೊಡ್ಡಿದ್ದಲ್ಲದೆ, ಎಲ್ಲರಿಗೂ ಒಂದು ತಕ್ಕ ಪಾಠ ಕಲಿಸಿದ್ದರಿಂದಲೇ ಈಗ ಬಿಗ್‌ ಬಜೆಟ್‌ ಚಿತ್ರಗಳ ನಿರ್ಮಾಪಕರು ಒಂದಾಗಿದ್ದಾರೆ.

ತಮ್ಮ ತಮ್ಮಲ್ಲೇ ಬಿಡುಗಡೆಯ ಪೈಪೋಟಿ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲ, ಚಿತ್ರಮಂದಿರಗಳಲ್ಲಿ ಶೇಕಡವಾರು ಬದಲಾಗಿ, ಮೊದಲಿನಂತೆ ಬಾಡಿಗೆ ವ್ಯವಸ್ಥೆಯೇ ಇರಬೇಕು ಎಂದು ಒಕ್ಕೊರಲ ಮನವಿ ಮಾಡಿದ್ದಾರೆ. ಇಷ್ಟಕ್ಕೂ ಬಿಗ್‌ ಬಜೆಟ್‌ ನಿರ್ಮಾಪಕರು ಸೇರಿ ಹೀಗೆಲ್ಲಾ ಒಗ್ಗಟ್ಟಿನ ಮಂತ್ರ ಜಪಿಸೋಕೆ ಕಾರಣ, “ಪೊಗರು” ರಿಲೀಸ್.‌ ಹೌದು, ಇತ್ತೀಚೆಗೆ ಚಿತ್ರದ ಬಿಡುಗಡೆ ಕುರಿತು ಚಿತ್ರತಂಡ ಘೋಷಣೆ ಮಾಡಿತು. ಫೆಬ್ರವರಿ ೧೧ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಅಂದು ಆ ಚಿತ್ರದ ಬಿಡುಗಡೆ ಘೋಷಣೆ ಸಂದರ್ಭದಲ್ಲಿ ಎಲ್ಲರೂ ವೇದಿಕೆ ಮೇಲೆ ಒಗ್ಗಟ್ಟಿನ ಮಂತ್ರ ಜಪಿಸಿದ್ದು ದಿಟ. ಅಷ್ಟಕ್ಕೂ ಅವರು ಒಗ್ಗಟ್ಟು ಮಂತ್ರ ಹೇಳಿದ್ದಿಷ್ಟು. ಸಿನಿಮಾ ರಿಲೀಸ್‌ಗೆ ಸಾಲು ಸಾಲು ಬಿಗ್‌ ಬಜೆಟ್‌ ಚಿತ್ರಗಳು ಸಜ್ಜಾಗಿವೆ.

“ಪೊಗರುʼ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ, ಚಿತ್ರರಂಗದ ಬಹುತೇಕ ಬಿಗ್‌ ಬಜೆಟ್‌ ಸಿನಿಮಾ ನಿರ್ಮಾಪಕರು ವೇದಿಕೆಯಲ್ಲಿದ್ದು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಂದು ನಿರ್ಮಾಪಕ ಸೂರಪ್ಪ ಬಾಬು, ಪ್ರದರ್ಶಕರ ಸಂಘದ ಮುಖ್ಯಸ್ಥ ಓದು ಗೌಡರಿಗೆ ವಿನಂತಿ ಮಾಡಿದ್ದಿಷ್ಟು, “ನಾವೆಲ್ಲ ಇಷ್ಟು ಜನ ಒಟ್ಟಾಗಿ ಬಂದಿದ್ದೇವೆ. ಇಂತಹ ಕಷ್ಟಕಾಲದಲ್ಲೂ ಸಿನಿಮಾ ಬಿಡುಗಡೆ ಮಾಡಲು ಬಂದಿದ್ದೇವೆ. ಅದರಲ್ಲೂ “ಪೊಗರು” ಚಿತ್ರ ಮೊದಲು ಬಿಡುಗಡೆಯಾಗುತ್ತಿದೆ. ಅವರಿಗೆ ನಾವೆಲ್ಲಾ ಕೈ ಜೋಡಿಸಿ, ಬೆಂಬಲಕ್ಕೆ ನಿಂತಿದ್ದೇವೆ.

ಕಳೆದ ಒಂಭತ್ತು ತಿಂಗಳಿನಿಂದಲೂ ಭಾರೀ ಬಜೆಟ್ ನ ಚಿತ್ರ ನಿರ್ಮಾಪಕರು ತುಂಬಾ ಕಷ್ಟ ಪಟ್ಟಿದ್ದಾರೆ. ಉತ್ತರ ಕರ್ನಾಟಕ ಕಡೆಯಿಂದ ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತಿದೆ. ವಿನಂತಿ ಮಾಡುತ್ತಿದ್ದೇವೆ. ಹಿಂದೆ ಹೇಗೆ ನಡೆದುಕೊಂಡು ಬಂದಿತ್ತೋ, ಅದನ್ನೇ ಮುಂದುವರೆಸಿಕೊಂಡು ಬನ್ನಿ. ನೀವು ಯೋಚನೆ ಮಾಡಿ, ನಾವೆಲ್ಲಾ ನಿಮ್ಮೊಂದಿಗೆ ಇದ್ದೇವೆ. ಶಿವಣ್ಣ ಅವರ ಜೊತೆಗೂ ಚರ್ಚೆ ಮಾಡಿದ್ದೇವೆ. ಬಾಡಿಗೆ ವ್ಯವಸ್ಥೆಯನ್ನೇ ಮುಂದುವರೆಸಿಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಶೇರ್ ಬೇಡ. ಅದನ್ನು ಕೊಡೋದಿಕ್ಕೆ ಶುರು ಮಾಡಿದರೆ ಬಿಗ್ ಬಜೆಟ್ ಸಿನಿಮಾ ಮಾಡೋದಿಕ್ಕೆ ಆಗೋದಿಲ್ಲ. ಬಾಡಿಗೆ ವ್ಯವಸ್ಥೆ ಮುಂದುವರೆಯಬೇಕು” ಎಂಬ ಮನವಿ ಇಟ್ಟರು.


ಇದಷ್ಟೇ ಅಲ್ಲ, ಯಾವುದೇ ನಿರ್ಮಾಪಕ ಇರಲಿ, ಇನ್ನು ಮುಂದೆ ರಿಲೀಸ್‌ಗೆ ಫೈಟಿಂಗ್‌ ಮಾಡೋದು ಬೇಡ. ಯಾರದ್ದೋ ಒತ್ತಡದ ಆಸೆಗೆ ಸಿನಿಮಾ ರಿಲೀಸ್‌ ಮಾಡಬೇಡಿ. ಇದು ಎಲ್ಲರಿಗೂ ಒಳಿತು ಎಂಬ ಮಾತು ಕೂಡ ಇದೇ ವೇಳೆ ಎಲ್ಲಾ ನಿರ್ಮಾಪಕರಿಂದಲೂ ಕೇಳಿಬಂತು. ಅಂದಹಾಗೆ, ಮಾರ್ಚ್‌ ‌11ಕ್ಕೆ “ರಾಬರ್ಟ್” ಬಂದರೆ, ನಂತರದ ದಿನಗಳಲ್ಲಿ, ಏಪ್ರಿಲ್‌ 1 ರಂದು “ಯುವರತ್ನ”, ಏಪ್ರಿಲ್‌ 15 ಕ್ಕೆ “ಸಲಗ”, ಏಪ್ರಿಲ್‌ 25 ಕ್ಕೆ “ಕೋಟಿಗೊಬ್ಬ” , ಮೇ 15ಕ್ಕೆ “ಭಜರಂಗಿ ೨” ಹೀಗೆ ಬಿಡುಗಡೆಯಾಗಲಿವೆ. ಜೂನ್‌ನಲ್ಲಿ “ವಿಕ್ರಾಂತ್‌ ರೋಣ”, “ಕೆಜಿಎಫ್-‌೨” , ಆಗಸ್ಟ್‌ ನಲ್ಲಿ “ಚಾರ್ಲಿ” ಇತ್ಯಾದಿ ಚಿತ್ರಗಳು ಬರಲಿವೆ. ಹೀಗಾಗಿ ಮೊದಲಿನಂತೆ ಮನಸ್ಸಿಗೆ ಬಂದಂತೆ ರಿಲೀಸ್‌ ಮಾಡೋದು ಬೇಡ. ಮೊದಲೇ ಒಂದು ದಿನಾಂಕ ನಿಗಧಿಪಡಿಸಿ, ರಿಲೀಸ್‌ ಮಾಡಬೇಕು ಎಂಬ ಮಾತು ಜೋರಾಗಿ ಕೇಳಿಬಂತು.

ಅದೇನೆ ಇರಲಿ, ಕೊರೊನಾ ಬಳಿಕ ಎಲ್ಲರೂ ಪಾಠ ಕಲಿತಿರೋದು ನಿಜ. ಈಗ ಮಾತಾಡಿಕೊಂಡೇ ಸಿನಿಮಾ ರಿಲೀಸ್‌ ಮಾಡೋಣ ಅನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಅಂತೂ ಈಗಾದರೂ, ಸಿನಿಮಾ ಮಂದಿರಗಳಿಗೆ ಒಬ್ಬೊಬ್ಬರೇ ಬಂದು ಪ್ರೇಕ್ಷಕರನ್ನು ರಂಜಿಸಲು ಸಜ್ಜಾದರೆ ಸಾಕು. ಇದು ಕೊರೊನಾ ಹಿನ್ನೆಲೆಯಲ್ಲಿ ಮಾತ್ರವಲ್ಲ, ಕೊರೊನಾ ಹೋದ ಬಳಿಕವೂ, ಮುಂದಿನ ದಿನಗಳಲ್ಲೂ ಇದೇ ವ್ಯವಸ್ಥೆ ಮುಂದುವರೆದರೆ ಚಿತ್ರರಂಗ ಇನ್ನಷ್ಟು ಶೈನ್‌ ಆಗುವುದರಲ್ಲಿ ಎರಡು ಮಾತಿಲ್ಲ.

Categories
ಸಿನಿ ಸುದ್ದಿ

ಬಂಧಮುಕ್ತ ಗಿಣಿ, ಹೊರ ಬರ್ತಾರೆ ರಾಗಿಣಿ, 140 ದಿನಗಳ ಕಾಲ ಜೈಲಿನಲ್ಲಿದ್ದ ತುಪ್ಪದ ಬೆಡಗಿಗೆ ಆದ ಅನುಭವ ಏನು?

ಜೈಲಿನಿಂದ ಹೊರಬಂದ ನಂತರ‌ ಸಿನಿಮಾ ಮಂದಿಗೆ ದರ್ಶನ ಕೊಡ್ತಾರಾ ರಾಗಿಣಿ….


ತುಪ್ಪ ಬೇಕಾ ತುಪ್ಪ ಎನ್ಜುವ ಐಟಂ ಸಾಂಗ್ ಮೂಲಕ ತುಪ್ಪದ ಬೆಡಗಿ ಅಂತಲೇ ಖ್ಯಾತಿ ಪಡೆದ ನಟಿ ರಾಗಿಣಿ ದ್ವಿವೇದಿ ಇಂದು ಜೈಲಿನಿಂದ ಹೊರ ಬರುತ್ತಿದ್ದಾರೆ. ಮೊನ್ನೆಯಷ್ಟೇ ಸುಪ್ರಿಂ ಕೊರ್ಟ್ ನಲ್ಲಿ ಸಿಕ್ಕ ಜಾಮೀನಿ ನೊಂದಿಗೆ ರಾಗಿಣಿ ಬಂಧ ಮುಕ್ತಗೊಂಡಿದ್ದಾರೆ.
ಕೊನೆಗೂ 146 ದಿನಗಳ ಅವರ ಜೈಲುವಾಸ ಇಂದಿಗೆ ಮುಕ್ತಾಯ ಗೊಳ್ಳುತ್ತಿದೆ. ಅವರೊಂದಿಗೆ ಜೈಲು ಪಾಲಾಗಿದ್ದ ಗ್ಲಾಮರಸ್ ನಟಿ ಸಂಜನಾ ಈಗಾಗಲೇ ಹೊರ ಬಂದು ಹಲವು ದಿನ ಕಳೆದಿವೆ‌. ಅನಾರೋಗ್ಯದ ಕಾರಣದೊಂದಿಗೆ ಕೊರ್ಟ್ ಸಂಜನಾ ಅವರಿಗೆ ಷರತ್ತುಬದ್ದ ಜಾಮೀನು‌ನೀಡಿದೆ. ಇದಾದ ಬಳಿಕ ಈಗ ರಾಗಿಣಿ ಹೊರ ಬರುತ್ತಿದ್ದಾರೆ.‌


ಡ್ರಗ್ಸ್ ಕೇಸ್ ಪ್ರಕರಣ ಸ್ಯಾಂಡಲ್ವುಡ್ ನಲ್ಲಿ ಸಂಚಲನ ಮೂಡಿಸಿತ್ತು. ಈ ಪ್ರಕರಣದಲ್ಲಿ ಡ್ರಗ್ ಪೆಡ್ಲರ್ ಜತೆಗೆ ನಟಿಯರಾದ ಸಂಜನಾ ಹಾಗೂ ರಾಗಿಣಿ ಯವರನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ ನಂತರ ಕೋರ್ಟ್ ಅವರನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿತ್ತು. ಇದರ ಪರಿಣಾಮ ಇಬ್ಬರು ನಟಿಯರೂ, ಜೈಲು ಪಾಲಾಗಿದ್ದರು.

Categories
ಸಿನಿ ಸುದ್ದಿ

ಮರ್ಧನಿ ಎಂಬ ಥ್ರಿಲ್ಲರ್ – ಹೊಸ ಹುಡುಗನ ರಗಡ್ ಲುಕ್

ಪ್ರತಿಭಾವಂತರ ಸಸ್ಪೆನ್ಸ್ ಸ್ಟೋರಿ!

ಕನ್ನಡದಲ್ಲಿ ದಿನ‌ ಕಳೆದಂತೆ ಹೊಸಬರ ಚಿತ್ರಗಳು ಸೆಟ್ಟೇರುತ್ತಲೇ ಇವೆ. ಈಗಾಗಲೇ ಕೆಲವು ಚಿತ್ರಗಳು ಸದ್ದಿಲ್ಲದೆ ಸೆಟ್ಟೇರಿವೆ. ಆ ಸಾಲಿಗೆ “ಮರ್ಧನಿ” ಚಿತ್ರವೂ ಸೇರಿದೆ.ಅಂದಹಾಗೆ, ಕಿಚ್ಷ‌ ಸುದೀಪ್‌ ಅವರ ಸಹಕಾರದೊಂದಿಗೆ ಅಂಕಿತ ಫಿಲಂಸ್ ಬ್ಯಾನರಲ್ಲಿ ಭಾರತಿ ಜಗ್ಗಿ ನಿರ್ಮಿಸುತ್ತಿರುವ “ಮರ್ಧನಿ” ಚಿತ್ರಕ್ಕೆ ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನಲ್ಲಿ ಹತ್ತು ದಿನಗಳ ಚಿತ್ರೀಕರಣ ಮಾಡಲಾಗಿದೆ.
ಇನ್ನೂ ಇಪ್ಪತ್ತೈದು ದಿನಗಳ ಚಿತ್ರೀಕರಣ ಬಾಕಿಯಿದ್ದು, ಮಾರ್ಚ್ ನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ತಯಾರು ನಡೆಸಿದೆ.


ಈ ಹಿಂದೆ “ದೇವರಂಥ ಮನುಷ್ಯ” ಸಿನಿಮಾ ನಿರ್ದೇಶಿಸಿದ್ದ, ಕಿರಣ್‌ ಕುಮಾರ್ ವಿ‌. ಈ ಚಿತ್ರವನ್ನು ನಿರ್ದೇಶಿದ್ದಾರೆ.
ಇನ್ನು , ಈ ಚಿತ್ರಕ್ಕೆ ಅಕ್ಷಯ್ ಹೀರೋ. ಇವರು ಹೋಟೆಲ್ ಮ್ಯಾನೆಜ್‌ಮೆಂಟ್‌ ನಲ್ಲಿ ಗೋಲ್ಡ್ ಮೆಡಲ್, ಕರಾಟೆಯಲ್ಲಿ‌ ಬ್ಲ್ಯಾಕ್ ‌ಬೆಲ್ಟ್ ಹಾಗೂ ಗೋಲ್ಡ್ ಮೆಡಲ್ ಪಡೆದಿದ್ದಾರೆ. ರಾಜಕುಮಾರ್ ಸಂತೋಷಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅಕ್ಷಯ್ , ಈ ಚಿತ್ರದ ಮೂಲಕ ‌ನಾಯಕನಟರಾಗಿ‌ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅಕ್ಷಯ್ ಅವರೇ ಇದಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.

ಹಿತನ್ ಗೌಡ, ಮನೋಹರ್, ಭಾಗ್ಯಲಕ್ಷ್ಮೀ ಗೌಡ, ಮೈಸೂರು ಮಾಲತಿ, ಮಧು, ಸಂತೋಷ್ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ಮೂರು ಹಾಡುಗಳಿದ್ದು, ಹಿತನ್ ಹಾಸನ್ ಸಂಗೀತ ನೀಡಲಿದ್ದಾರೆ.

ಶಿವಸಾಗರ್ ಛಾಯಾಗ್ರಹಣ ಮಾಡಿದರೆ, ಎಂ.ಎನ್.ವಿಶ್ವ ಸಂಕಲನವಿದೆ. ಪ್ರೇಂ ನೃತ್ಯ ನಿರ್ದೇಶನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಗಜೇಂದ್ರ ಸಂಭಾಷಣೆ ಬರೆದಿದ್ದಾರೆ.
ಚಿತ್ರದಲ್ಲಿ ನಾಯಿಯೊಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವುದು ವಿಶೇಷ.

Categories
ಸಿನಿ ಸುದ್ದಿ

ಫ್ಯಾಮಿಲಿ ಪ್ಯಾಕ್ ನೋಡಲು ಬಂದ ಪವರ್ ಸ್ಟಾರ್ , ಚಿತ್ರ ತಂಡಕ್ಕೆ ಶುಭ ಕೋರಿ, ನಿರ್ದೆಶಕರ ಬೆನ್ನುತಟ್ಟಿದ ಪುನೀತ್ ರಾಜ್ ಕುಮಾರ್

ಇದು ಪಕ್ಕಾ ಮನರಂಜನೆಯ ಫ್ಯಾಮಿಲಿ ಪ್ಯಾಕ್ 

ಪಿಆರ್ ಕೆ ಪ್ರೊಡಕ್ಣನ್ ನಿರ್ಮಾಣದ ಫ್ಯಾಮಿಲಿ ಪ್ಯಾಕ್ ಚಿತ್ರದ ಚಿತ್ರೀಕರಣ ಕ್ಲೈಮ್ಯಾಕ್ಸ್ ತಲುಪಿದೆ. ಒಂದು ಸಾಂಗ ಹಾಗೂ ಆ್ಯಕ್ಣನ್ ಸನ್ನಿವೇಶದ ಚಿತ್ರೀಕರಣ ಮಾತ್ರ ಬಾಕಿ ಇದೆ. ಗುರುವಾರ( ಜ.21) ದಂದು‌ ಚಿತ್ರದ ನಿರ್ಮಾಪಕರೂ ಆದ ಪುನೀತ್ ರಾಜ್ ಕುಮಾರ್ , ಪತ್ನಿ ಅಶ್ವಿನಿ‌ ಅವರೊಂದಿಗೆ ಚಿತ್ರೀಕರಣ ಸ್ಥಳಕ್ಜೆ ಭೇಟಿನೀಡಿ, ಚಿತ್ರೀಕರಣ ವೀಕ್ಷಿಸಿ ದರು‌. ಹಾಗೆಯೇ ಚಿತ್ರ ತಂಡಕ್ಕೆ ಶುಭ ಕೋರಿದರು.

ನಿರ್ದೇಶಕ ಅರ್ಜುನ್ ಕುಮಾರ್, ಸಂಗೀತ ನಿರ್ದೇಶಕ ಗುರುಕಿರಣ್, ಸಂಭಾಷಣೆ ಬರೆದಿರುವ ಮಾಸ್ತಿ ಹಾಗೂ ಕಲಾವಿದರಾದ ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸಿಹಿಕಹಿ ಚಂದ್ರು, ಪದ್ಮಜಾ ರಾವ್, ಶರ್ಮಿತಾ ಗೌಡ ಉಪಸ್ಥಿತರಿದ್ದರು. ಪಕ್ಕಾ ಮನರಂಜನೆಯನ್ನೇ ಪ್ರಧಾನವಾಗಿರುವ ಈ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಲಿಖಿತ್ ಶೆಟ್ಟಿ ನಿರ್ಮಾಪಕರು.ಹಾಗೆಯೇ ಅರ್ಜುನ್ ಕುಮಾರ್ ನಿರ್ದೇಶಕ.

ನಟ‌ ಲಿಖಿತ್ ಶೆಟ್ಟಿ ನಿರ್ಮಾಣದ ಜತೆಗೆ ಈ ಚಿತ್ರದ ನಾಯಕ‌ನಟ ಕೂಡ. ಅಮೃತ ಅಯ್ಯಂಗಾರ್ ನಾಯಕಿ.
ಗುರುಕಿರಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಉದಯಲೀಲ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನವಿದೆ. ಚಿತ್ರಕ್ಕೆ ಮಾತು ಬರೆದಿದ್ದು ಮಾಸ್ತಿ. ಸದ್ಯಕ್ಕೆ ಚಿತ್ರದ ಚಿತ್ರೀಕರಣ ಇಲ್ಲಿ ತನಕ ಯಶಸ್ವಿಯಾಗಿ ಸಾಗಿ ಬಂದಿದ್ದು ಚಿತ್ರ ತಂಡಕ್ಕೂ ಖುಷಿ ಕೊಟ್ಟಿದೆ.

Categories
ಸಿನಿ ಸುದ್ದಿ

ಫೆ.5ಕ್ಕೆ ವಿನೋದ್‌ ಪ್ರಭಾಕರ್ ಅವರ‌ ಶ್ಯಾಡೊ ರಿಲೀಸ್

 

ಕೊರೊನಾ ಬಳಿಕ ರಿಲೀಸ್ ಆಗಲಿರುವ ಮೊದಲ ಸ್ಟಾರ್‌ ಚಿತ್ರ

ಕೊರೊನಾ ಹಾವಳಿ ನಂತರ ಅತ್ತ, ಚಿತ್ರರಂಗದ ಚಟುವಟಿಕೆಗಳು ಜೋರಾಗಿವೆ. ಈಗಾಗಲೇ ಸಿನಿಮಾಗಳ ಬಿಡುಗಡೆ ಪರ್ವ ಶುರುವಾಗಿದೆ. ಫೆಬ್ರವರಿ 5ಕ್ಕೆ ವಿನೋದ್ ಪ್ರಭಾಕರ್ ಅಭಿನಯದ “ಶ್ಯಾಡೊ” ಚಿತ್ರ ತೆರೆ ಕಾಣುತ್ತಿದೆ ಎಂಬುದು ವಿಶೇಷ. ಕೊರೊನಾ ಬಳಿಕ ರಿಲೀಸ್ ಆಗುತ್ತಿರುವ ಸ್ಟಾರ್ ನಟನ‌ ಮೊದಲ‌ ಸಿನಿಮಾ ಇದು ಎಂಬುದು ಸುದ್ದಿ.


ಚಿತ್ರವನ್ನು ರವಿಗೌಡ್ರು ನಿರ್ದೇಶನ ಮಾಡಿದರೆ, ಚಕ್ರಿ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರವನ್ನು ಧೀರಜ್ ಎಂಟರ್ ಪ್ರೈಸಸ್ ಮೂಲಕ ಮೋಹನ್‌ದಾಸ್‌ ಪೈ ಅವರು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ.‌
ಸಿನಿಮಾ ರಿಲೀಸ್ ಬಗ್ಗೆ ಮಾತನಾಡುವ ಮೋಹನ್ ದಾಸ್ ಪೈ, “ಈ ಚಿತ್ರದ ಮೇಲೆ ನಿರೀಕ್ಷೆ ಇದೆ. ಎಲ್ಲೆಡೆಯಿಂದಲೂ
ಒಳ್ಳೆಯ ಮೆಚ್ಚುಗೆ ಬರುತ್ತಿದೆ. ಹೀಗಾಗಿ ಈ ಚಿತ್ರ ಬಿಡುಗಡೆ ಬಗ್ಗೆ ಸಡನ್‌ ತೀರ್ಮಾನ ಮಾಡಿಕೊಂಡು ರಿಲೀಸ್ ಮಾಡುತ್ತಿದ್ದೇವೆ. ಲೀಡಿಂಗ್‌ ಸ್ಟಾರ್ ಸಿನಿಮಾ ಇದು. ಹಾಗಾಗಿ ರಿಲೀಸ್ ವಿಚಾರದಲ್ಲೂ ಲೀಡಿಂಗ್ ನಲ್ಲೇ ಇರಬೇಕು.ಬೆಂಬ ಕಾರಣಕ್ಕೆ ಸುಮಾರು 250ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ರಿಲೀಸ್ ಮಾಡಲಾಗುತ್ತಿದೆ.


ಎಬಿಸಿಡಿ ಕೆಟಗರಿಯ ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್‌ ಆಗಲಿದೆ. ನಿರ್ಮಾಪಕರಿಗೆ ಸಾಕಷ್ಟು ಸಮಸ್ಯೆ ಇದೆ. ಹಾಗಾಗಿ ಈಗ ಚಿತ್ರವನ್ನು ಸಡನ್ ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರ ಶೇ.100ರಷ್ಟು ಗೆಲುವು ಪಡೆಯಲಿದೆ ಎಂಬ ನಂಬಿಕೆ ಇದೆ.
ಸಣ್ಣ ಸೆಂಟರ್‌ಗಳಲ್ಲೂ ಚಿತ್ರ ರಿಲೀಸ್ ಆಗಲಿದೆ.
ಈಗಾಗಲೇ ಚಿತ್ರಮಂದಿರಗಳ ಮಾಲೀಕರ ಜೊತೆ ಮಾತಾಡಿದ್ದೇನೆ. ನಮ್ಮ ನಡುವೆ ಒಳ್ಳೆಯ ಗೆಳೆತನವಿದೆ. ಹಾಗಾಗಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ.

ಜನರಿಗೆ ಕೋವಿಡ್‌ನಿಂದ ತಲೆ ಕೆಟ್ಟೋಗಿದೆ. ಅವರಿಗೆ ಮನರಂಜನೆ‌ ಬೇಕು. ಶೇ.50ರಷ್ಟು ಅನುಮತಿ ಇದ್ದರೂ, ಜನರು ಬರುತ್ತಾರೆ ಎಂಬ ವಿಶ್ವಾಸ ಇದೆ. ಈ ಚಿತ್ರವನ್ನು
ಕೋಲಾರ, ಮುಳುಬಾಗಿಲು, ಹೊಸೂರು ಕಡೆಯಲ್ಲೂ ಹಾಕ್ತೀನಿ” ಎಂದು ವಿವರ ಕೊಟ್ಟರು ಮೋಹನ ದಾಸ್ ಪೈ.
ನಟ ವಿನೋದ್‌ ಪ್ರಭಾಕರ್ ಅವರಿಗೆ “ಶ್ಯಾಡೊ” ಬಿಡುಗಡೆ ಆಗುತ್ತಿರುವುದು ಖುಷಿ ಕೊಟ್ಟಿದೆ. ಆ ಬಗ್ಗೆ ಹೇಳುವ ಅವರು, ರಿಲೀಸ್ ಓಕೆ ಆದರೆ ಎಲ್ಲವೂ ಹರಿಬಿರಿಯಲ್ಲಿದೆ. ಇಂಡಸ್ಟ್ರಿ ಈಗಷ್ಟೇ ಸ್ಟಡಿಯಾಗುತ್ತಿದೆ. ಇಂತಹ ಸಮಯದಲ್ಲಿ ಪ್ರಚಾರವೂ ಅಗತ್ಯ. ಆದರೆ ಬಿಡುಗಡೆ ಸ್ವಲ್ಪ ಬೇಗ ಆಗುತ್ತಿದೆ. ಸ್ವಲ್ಪ ಅವಧಿಯಲ್ಲೇ ಪ್ರಚಾರ ಮಾಡಬೇಕಿದೆ. ಮಾಧ್ಯಮದ ಸಹಕಾರ ಜಾಸ್ತಿ ಬೇಕು ಎಂದು ಮನವಿ ಇಟ್ಟರು.


ಸಿನಿಮಾ ಬಗ್ಗೆ ಮಾತನಾಡಿದ ವಿನೋದ್, “ಮೊದಲ ಸಲ ಕ್ಲಾಸ್‌ನಲ್ಲಿ ಮಾಸ್‌ ಸಿನಿಮಾ ಮಾಡಿದ್ದೇನೆ. ನಿರ್ದೇಶಕ ರವಿಗೌಡ್ರು ಚೆನ್ನಾಗಿ ಮಾಡಿದ್ದಾರೆ. ಶರತ್‌ ಲೋಹಿತಾಶ್ವ ಅವರು ಸಿನಿಮಾದ ಉದ್ದಕ್ಕೂ ಪೋಲಿಸ್‌ ಪಾತ್ರದಲ್ಲಿ ಸಾಥ್ ನೀಡಿದ್ದಾರೆ. ನನ್ನ ಜೊತೆ ಶೋಬಿತಾ ರಾಣಾ ನಾಯಕಿಯಾಗಿದ್ದಾರೆ.
ಚೋಟಾ ಪ್ರಸಾದ್‌ ಎಡಿಟಿಂಗ್‌ ಮಾಡಿದ್ದಾರೆ. ಇಲ್ಲಿ‌ ವಿನೋದ್ ಮಾಸ್ಟರ್ ಅದ್ಭುತ ಸಾಹಸ‌ ಮಾಡಿಸಿದ್ದಾರೆ. ನನಗೆ ರೆಗ್ಯುಲರ್‌ ಆಕ್ಷನ್‌ ಅನಿಸಲಿಲ್ಲ. ಇಡೀ ಸಿನಿಮಾ ಹೈದರಾಬಾದ್‌ನಲ್ಲಿ ಮಾಡಲಾಗಿದೆ.
ಫೈಟ್ ಸೀನ್ ಗೆ ನಿರ್ದೇಶಕರು ಒಂದೇ ಕ್ಯಾಮೆರಾ ತಂದರು. ಕೇಳಿದ್ದಕ್ಕೆ, “ಇದು ಫೈಟ್‌ ಅಂತ ಮಾಡ್ತಾ ಇಲ್ಲ. ಸೀನ್‌ ರೀತಿ ಮಾಡ್ತಾ ಇದೀವಿ” ಅಂದ್ರು ಅವರ ಪ್ಲಾನಿಂಗ್ ಚೆನ್ನಾಗಿತ್ತು.


ಚಿತ್ರದಲ್ಲಿ ಎರಡು ಸಾಂಗ್‌ ಇದೆ. ಜೊತೆಗೆ ಆಕ್ಷನ್‌ ಪ್ಯಾಕ್‌, ಮನರಂಜನೆ ಹೆಚ್ಚು ಇದೆ. ಫೆ.5ಕ್ಕೆ ರಿಲೀಸ್ ಅಂದಾಗ, ಆಡಿಯನ್ಸ್‌ ಬರ್ತಾರಾ? ಎಂಬ ಅನುಮಾನ ಬಂತು. ಆದರೂ ಅಭಿಮಾನಿಗಳು ಸಿನಿಮಾ ನೋಡಿ ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ.
ಈ ಚಿತ್ರ ನೋಡುಗರಿಗೆ ಬೇರೆ ಫೀಲ್ ಸಿಗುತ್ತೆ. ನೋಡೋಕೆ ಬಂದವರು ಶೇ.100 ರಷ್ಟು ಖುಷಿ ಪಡುತ್ತಾರೆ. ಈ ಸಿನಿಮಾಗೆ ಮಾಲ್‌ ಆಡಿಯನ್ಸ್‌ ಜಾಸ್ತಿ ಆಗ್ತಾರೆ, ಯಾಕೆಂದರೆ ಕ್ಲಾಸ್‌ನಲ್ಲಿ ಮಾಸ್‌ ಸಿನಿಮಾ ಇದು. ಹಾಗಾಗಿ ಯಾರಿಗೂ ನಿರಾಶೆ ಆಗೋದಿಲ್ಲ ಎನ್ನುತ್ತಾರೆ ವಿನೋದ್.
ಚಿತ್ರದಲ್ಲಿ ಕಾಮಿಡಿ ನಟ ಲೋಕೇಶ್ ಕೂಡ‌ ನಟಿಸಿದ್ದು ಸಿನಿಮಾ ರಿಲೀಸ್ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಡಾ : ರಾಜ್‌ ಲೈಬ್ರರಿಯಲ್ಲಿ ಕಳವು ಮಾಡಿದ ಧ್ರುವ ಸರ್ಜಾ!

ಕದ್ದ ಮಾಲು ಏನು ಅಂತ ಗೊತ್ತಾಗುವುದಿಕ್ಕೆ ಇನ್ನಷ್ಟು ದಿನ ಬೇಕಂತೆ…!!

ನಟ ಧ್ರುವ ಸರ್ಜಾ ಮೇಲೆ ಕಳತನದ ಆರೋಪ ಬಂದಿದೆ. ವರನಟ ಡಾ. ರಾಜ್‌ಕುಮಾರ್‌ ಅವರ ಕಲಾ ಲೈಬ್ರರಿಯಿಂದ ಅವರು ಆಮೂಲ್ಯವಾದ ಒಂದು ವಸ್ತುವನ್ನು ಕಳವು ಮಾಡಿದ್ದಾರಂತೆ. ಅದನ್ನವರು ಕಾಪಿ ಮಾಡಿದ್ದು ಅಂತಾರೆ. ಆದರೆ ಹಾಗೆ ಮಾಡಿದ್ದು ಏನನ್ನು? ಸದ್ಯಕ್ಕೆ ಅದನ್ನವರು ರಿವೀಲ್‌ ಮಾಡಲು ರೆಡಿ ಇಲ್ಲ. ಅದು ಬೇರೆಯವರಿಗೂ ಗೊತ್ತಿಲ್ಲ. ಯಾಕಂದ್ರೆ, ಡಾ. ರಾಜ್‌ ಕಲಾ ಲೈಬ್ರರಿಯಿಂದ ಏನನ್ನು ಕದ್ದು ತಂದಿದ್ದೀಯಾ ಅಂತಲೂ ಯಾರು ವಿಚಾರಣೆ ನಡೆಸಿಲ್ಲ. ಹಾಗಾಗಿ ಅದೇನು ಅಂತ ಯಾರಿಗೂ ಗೊತ್ತಾಗಿಲ್ಲ. ಆದರೂ ʼಪೊಗರುʼ ಚಿತ್ರದಲ್ಲಿನ ಪಾತ್ರಕ್ಕಾಗಿ ತಾವೊಂದು ಅಮೂಲ್ಯವಾದ ವಸ್ತುವನ್ನು ಡಾ. ರಾಜ್‌ ಕುಮಾರ್‌ ಅವರ ಕಲಾ ಲೈಬ್ರರಿಯಿಂದ ಕಳವು ಮಾಡಿದ್ದೇನೆ ಅಂತ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ ಧ್ರುವ ಸರ್ಜಾ. ಅದೇನು ಅಂತ ಗೊತ್ತಾಗುವುದಕ್ಕೆ ಇನ್ನಷ್ಟು ದಿನ ಕಾಯಬೇಕು ಅಂತಲೂ ಅವರು ಹೇಳುತ್ತಾರೆ. ಹಾಗಾದ್ರೆ, ನಟ ಧ್ರುವ ಸರ್ಜಾ ಕದ್ದಿದ್ದು ಏನನ್ನು ? ಯಾಕಾಗಿ ? ಆ ಬಗೆಗಿನ ವಿಷಯ ಇಷ್ಟು….


” ಈ ಚಿತ್ರಕ್ಕೆ ನಾನೊಂದು ಕಳವು ಮಾಡಿದ್ದೇನೆ. ಅದೇನು ಅಂತ ನಾನು ಈಗಲೇ ಹೇಳುವುದಿಲ್ಲ. ಆದರೆ ಅದು ನನಗಾಗಿ ಅಲ್ಲ. ಪಾತ್ರಕ್ಕಾಗಿ. ಕತೆಯಲ್ಲಿನ ಪಾತ್ರಕ್ಕಾಗಿ ಸಣ್ಣಗಾಗಿದ್ದು, ಮತ್ತೆ ಅದೇ ಪಾತ್ರಕ್ಕಾಗಿ ದಪ್ಪ ಆಗಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಹೇಳೋದಿಕ್ಕೆ, ಹಾಗೆಯೇ ಕೇಳೋದಿಕ್ಕೆ ಇದು ಸುಲಭ. ಆದರೆ ಆ ಪ್ರೊಸೆಸ್‌ ಮುಗಿಯೋದಿಕ್ಕೆ ಒಂದು ವರ್ಷ ಆಗಿದೆ. ಅದು ಹೈಸ್ಕೂಲ್‌ ಹುಡುಗನ ಗೆಟಪ್. ಸಣ್ಣ ಆಗಬೇಕು ಅಂತಲೇ ಮೂರು ತಿಂಗಳು ಆದವು. ಅಷ್ಟು ದಿನ ಯಾವುದೇ ರೀತಿಯಲ್ಲಿ ಗಟ್ಟಿ ಪದಾರ್ಥ ತಿನ್ನದೇ ಬರೀ ಜ್ಯೂಸ್‌ ಕುಡಿದುಕೊಂಡೆ ಇದ್ದೆ. ಆ ಮೇಲೆ ಅಂದುಕೊಂಡಂತೆ 62 ಕೆ. ಜಿ ಕಡಿಮೆ ಆದೆ. ಹಾಗೆ ಆಗುವುದಕ್ಕೆ ಮಾಡಿದ ಸರ್ಕಸ್‌ ಅಷ್ಟಿಷ್ಟಲ್ಲ, ಡಯಟ್‌ ಹಾಗೂ ವರ್ಕೌಟ್‌ ಜತೆಗೆ ಯೋಗಾ ಕೂಡ ಮಾಡಿದೆ. ಯೋಗ ಪ್ರಾಕ್ಟಿಸ್‌ ಗೆ ನಂಗೆ ಪ್ರೇರಣೆ ವರನಟ ಡಾ. ರಾಜ್‌ ಕುಮಾರ್‌ . ಅವರ ಮಾಡುತ್ತಿದ್ದ ಯೋಗಾಸನಗಳ ಒಂದು ಕಲೆಯನ್ನು ಅವರಿಂದ ಸ್ಪೂರ್ತಿ ಪಡೆದು ಪ್ರಾಕ್ಟಿಸ್‌ ಮಾಡಿದೆ. ಮುಂದೆ ಅಷ್ಟೇ ದಿನಗಳಲ್ಲಿ ನನಗಿದ್ದ ಸವಾಲು ದಪ್ಪ ಆಗಿವುದು ಸಣ್ಣ ಆಗಿ ೬೨ ಕೆಜೆ ಇದ್ದವನು ಮುಂದೆ 100 ಕೆ.ಜಿ ಯಷ್ಟು ತೂಕ ಹೆಚ್ಚಿಸಿಕೊಂಡೆ. ನನಗಲ್ಲಿ ಸಣ್ಣಗಾಗಲು ಪ್ರಮುಖವಾಗಿ ಕಾರಣವಾಗಿದ್ದ ಡಾ. ರಾಜ್‌ ಅವರು ಮಾಡುತ್ತಿದ್ದ ಒಂದು ಯೋಗದ ಸ್ಪೂರ್ತಿ. ಸದ್ಯಕ್ಕೆ ಅದೇನು ಅಂತ ನಾನು ಹೇಳೋದಿಲ್ಲ. ಅದು ಚಿತ್ರ ನೋಡಿದಾಗಲೇ ಗೊತ್ತಾಗಲಿದೆ ” ಅಂದ್ರು ನಟ ಧ್ರುವ ಸರ್ಜಾ.

ಫೆ. 19 ಕ್ಕೆ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಚಿತ್ರ ಪೊಗರು ರಿಲೀಸ್‌ ಆಗುತ್ತಿದೆ. ಚಿತ್ರೋದ್ಯಮದಿಂದ ಇದಕ್ಕೆ ಬಹುದೊಡ್ಡ ಬೆಂಬಲ ಸಿಕ್ಕಿದೆ, ಸರಿ ಸುಮಾರು 1 ಸಾವಿರ ಸ್ಕ್ರೀನ್‌ ಮೇಲೆ ಈ ಚಿತ್ರ ತೆರೆ ಕಾಣುತ್ತಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರ ತಂಡ ಆಯೋಜಿಸಿದ್ದ ಪ್ರಚಾರದ ಮೊದಲ ಸುದ್ದಿ ಗೋಷ್ಠಿಯಲ್ಲಿ ಧ್ರುವ ಸರ್ಜಾ ಈ ವಿಷಯ ಹಂಚಿಕೊಂಡರು.

error: Content is protected !!