Categories
ಸಿನಿ ಸುದ್ದಿ

ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್‌ ಶಿಷ್ಯನ ಪಾರಿವಾಳ! ಒನ್‌ ಶಾಟ್‌ ಸಾಂಗ್‌ಗೆ ಭರಪೂರ ಮೆಚ್ಚುಗೆ

ಈಗಾಗಲೇ ಸಿಂಗಲ್‌ ಶಾಟ್‌ ಸಿನಿಮಾಗಳು ಬಂದಿವೆ. ಹಾಗೆಯೇ ಕೆಲವು ಸಿನಿಮಾಗಳ ಸಿಂಗಲ್‌ ಶಾಟ್‌ ದೃಶ್ಯಗಳೂ ಸುದ್ದಿಯಾಗಿವೆ. ಈ ಸಿಂಗಲ್‌ ಶಾಟ್‌ ಸಂಸ್ಕೃತಿ ಈಗಿನದಲ್ಲ. ಮೊದಲಿನಿಂದಲೂ ಸಿಂಗಲ್‌ ಶಾಟ್‌ ಕುರಿತ ಅನೇಕ ವಿಷಯಗಳು ಸುದ್ದಿಯಾಗಿವೆ. ಈಗ ಆ ಸಾಲಿಗೆ ಆಲ್ಬಂ ಸಾಂಗ್‌ವೊಂದು ಸುದ್ದಿಯಾಗುತ್ತಿದೆ ಎಂಬುದು ಈ ಹೊತ್ತಿನ ವಿಶೇಷ. ಹೌದು, ಆ ಆಲ್ಬಂ ಸಾಂಗ್‌ಗೆ “ಪಾರಿವಾಳ” ಎಂದು ಹೆಸರಿಡಲಾಗಿದೆ. ಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಅವರ ಸಹಾಯಕ ರಾಮ್ ಕಿರಣ್ ಅಂಥದ್ದೊಂದು ಸಾಹಸ ಮಾಡಿದ್ದಾರೆ.

ಸದ್ಯ “ಪಾರಿವಾಳ” ವಿಡಿಯೋ ಆಲ್ಬಂ ಸಾಂಗ್‌ ರಿಲೀಸ್‌ ಆಗಿದೆ. ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ. ಈ ವಿಡಿಯೋ ಆಲ್ಬಂ ಸಾಂಗ್‌ಗೆ ಅಗಸ್ತ್ಯ ಸಂತೋಷ್‌ ಅವರ ಸಾಹಿತ್ಯ ಮತ್ತು ಸಂಗೀತವಿದೆ. ಇನ್ನು, ಈ ಹಾಡಲ್ಲಿ ೫೦ ಮಂದಿ ನೃತ್ಯ ಕಲಾವಿದರು ನಟಿಸಿದ್ದಾರೆ. “ಪಾರಿವಾಳ” ಅಂದಾಕ್ಷಣ, ಅದೊಂದು ಫೀಲ್‌ ಸಾಂಗ್‌ ಅನ್ನೋದು ಗೊತ್ತಾಗುತ್ತೆ. ಆ ಫೀಲ್‌ ಸಾಂಗ್‌ ಅನ್ನು ತುಂಬಾ ವಿಭಿನ್ನವಾಗಿಯೇ ಕಟ್ಟಿಕೊಡಬೇಕು ಎಂಬ ಉದ್ದೇಶದಿಂದ ರಾಮ್‌ಕಿರಣ್‌, ಸಿಂಗಲ್‌ ಶಾಟ್‌ನಲ್ಲೇ ಸಾಂಗ್‌ ಚಿತ್ರೀಕರಿಸಬೇಕು ಎಂದು ನಿರ್ಧರಿಸಿ, ಕೊನೆಗೆ ತಾವು ಅಂದುಕೊಂಡಂತೆಯೇ ಸಾಂಗ್‌ ಮಾಡಿದ್ದಾರೆ.

ಮೋಹನ್‌ ಬಿ.ಕೆರೆ ಸ್ಟುಡಿಯೋದಲ್ಲಿ ಇಡೀ ಸಾಂಗ್‌ ಚಿತ್ರೀಕರಿಸಲಾಗಿದೆ. ಈ ಒನ್ ಶಾಟ್ ಸಾಂಗ್‌ನಲ್ಲಿ ರಾಮ್ ಕಿರಣ್ ಜೊತೆ ತೇಜಸ್ವಿನಿ ಶರ್ಮ ನಟಿಸಿದ್ದಾರೆ. “ಆರಂಭದಿಂದಲೂ ನಾಯಕ ತನ್ನ ಪ್ರೀತಿಯನ್ನು ಕಳೆದುಕೊಂಡು ತುಂಬಾನೇ ವ್ಯಥೆಯಲ್ಲೇ ತನ್ನ ಕಥೆ ಜೊತೆ ಪ್ರಿಯತಮೆ ಕುರಿತು ಹೇಳುವುದನ್ನು ಅರ್ಥಪೂರ್ಣವಾಗಿಯೇ ಸೆರೆಹಿಡಿಯಲಾಗಿದೆ.” ಈ ಹಾಡಲ್ಲಿ ನಾಯಕಿ ಕೂಡ ಪಾರಿವಾಳದಂತೆ ಬಂದು ಹೋಗುವುದು ವಿಶೇಷ. ಈ ಹಾಡಿನ ಇನ್ನೊಂದು ವಿಶೇಷ ಅಂದರೆ, ಕನ್ನಡ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗಿದೆ. ಇದೂಂದು ರೀತಿ ಪ್ಯಾನ್‌ ಇಂಡಿಯಾ ಸಾಂಗ್.‌
ಈ “ಪಾರಿವಾಳ” ಹಾಡನ್ನು ಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್‌ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

“ನಾನು “ಯುವರತ್ನ” ಚಿತ್ರದ ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ರಾಮ್ ಕಿರಣ್ ಬಂದು ನನಗೆ ಈ ಸಾಂಗ್ ಕೇಳಿಸಿದಾಗ, ನನಗೆ ಶಾಕ್ ಆಯಿತು. ಹಾಡು ತುಂಬಾ ಚೆನ್ನಾಗಿದೆ ಅಂದೆ. ನೀವು ಸಾಂಗ್‌ ಮಾಡಿಕೊಡಬೇಕು ಅಂದಾಗ, ಡೇಟ್‌ ಸಮಸ್ಯೆ ಅಂದೆ. ಕೊನೆಗೆ ರಾಮ್‌ ಕಿರಣ್‌, ಒಂದು ದಿನ ಕಾಲ್‌ ಮಾಡಿ, ನಾನು ವಿಡಿಯೊ ಆಲ್ಬಂ ಸಾಂಗ್‌ ಮಾಡುತ್ತಿದ್ದೇನೆ. ಅದು ಒನ್ ಶಾಟ್ ನಲ್ಲಿ ಅಂದರು. ನನಗೆ ಇನ್ನೂ ಗಾಬರಿಯಾಯಿತು. ಹೇಗೆ ಮಾಡುತ್ತಿರಿ? ಅದು ತುಂಬಾ ಕಷ್ಟ ಎಂದೆ. ಆದರೆ, ನನ್ನನ್ನು ಚೆನ್ನಾಗಿಯೇ ಅರ್ಥಮಾಡಿಕೊಂಡಿರುವ ರಾಮ್‌ ಕಿರಣ್‌, ಒಂದೊಂದು ವಿಷಯವನ್ನು ವಿವರಿಸಿದರು. ಆಗ ನನಗೆ ಅನಿಸಿದ್ದು, ಓಹೋ, ಈ ತರಹನೂ ಮಾಡಬಹುದಾ ಅಂತ. ನನ್ನ ಅಸಿಸ್ಟೆಂಟ್ ನಂಬರ್ ಒನ್ ಆಗಬೇಕು, ನಂಬರ್ ೨ ಆಗೋದು ಬೇಡ ಅನ್ನೋದೇ ನನ್ನ ಆಸೆ. ಈ ಹಾಡು ಸಖತ್‌ ಆಗಿದೆ ಎಂದು ಶಿಷ್ಯನ ಬೆನ್ನು ತಟ್ಟಿದರು ಚಿನ್ನಿ ಪ್ರಕಾಶ್.
ನಟ ರಾಮ್ ಕಿರಣ್‌ ಅವರು ತುಂಬಾನೇ ನರ್ವಸ್‌ ಆಗಿದ್ದರು. ಭಾವುಕರಾಗಿದ್ದ ಅವರು, “ಏನಾದರೂ ಡಿಫರೆಂಟ್ ಮಾಡು ಅಂತ ಮಾಸ್ಟರ್ ಹೇಳಿದ ಮಾತುಗಳು ನನಗೆ ಮಾದರಿಯಾಯಿತು. ಒಂದು ವರ್ಷದಿಂದ ತಯಾರು ಮಾಡುತ್ತಿದ್ದೆ. ಅವರ ಹೆಸರು ಉಳಿಸಬೇಕು. ಅದಕ್ಕೆ ಹೊಸದೇನಾದರೂ ಮಾಡಬೇಕು ಅಂತ ಒನ್‌ ಶಾಟ್‌ನಲ್ಲಿ ಈ ಹಾಡು ಮಾಡುವ ಬಗ್ಗೆ ಯೋಚಿಸಿದೆ. ಅಂದುಕೊಂಡಂತೆ ಮಾಡಿದ್ದೇನೆ. ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ. ಇನ್ನು, ನನ್ನ ಈ ಹಾಡಿಗೆ ಸಾಥ್‌ ಕೊಟ್ಟಿದ್ದು ಡಾನ್ಸರ್ಸ್. ರಾತ್ರಿಯಿಂದ ಮುಂಜಾನೆಯವರೆಗೂ ಎನರ್ಜಿಯಲ್ಲಿದ್ದು, ಸಹಕಾರ ನೀಡಿದರು.

ಈ ಹಾಡನ್ನು ಕನ್ನಡ ಮಾತ್ರವಲ್ಲಿ ಬೇರೆ ಭಾಷೆಯಲ್ಲೂ ಮಾಡಬೇಕು ಅಂದುಕೊಂಡೆ. ಹಾಗಾಗಿ ಐದು ಭಾಷೆಯಲ್ಲಿ ತಯಾರು ಮಾಡಿದ್ದೇನೆ” ಎಂದು ವಿವರ ಕೊಟ್ಟರು ರಾಮ್‌ ಕಿರಣ್.
ನಟಿ ತೇಜಸ್ವಿನಿ ಶರ್ಮಾ ಅವರಿಗೆ ಇದೊಂದು ಹೊಸ ಅನುಭವವಂತೆ. “ರಾಮ್‌ ಕಿರಣ್‌ ಅವರು ವಿಡಿಯೋ ಆಲ್ಬಂ ಬಗ್ಗೆ ಹೇಳಿದಾಗ, ಸ್ವಲ್ಪ ಕಷ್ಟ ಎನಿಸಿದರೂ ಓಕೆ ಅಂದೆ, ಕಷ್ಟ ಅಂದುಕೊಂಡಿದ್ದನ್ನು ಸುಲಭವಾಗಿ ಮಾಡಿದೆವು. ಚಿನ್ನಿ ಮಾಸ್ಟರ್ ಅವರ ಪ್ರೋತ್ಸಾಹ, ಡಾನ್ಸರ್ ಗಳ ಶ್ರಮ ಮೆಚ್ಚಲೇಬೇಕು ಎಂಬುದು ತೇಜಸ್ವಿನಿ ಶರ್ಮಾ ಮಾತು. ಇನ್ನು, ಶಶಾಂಕ್ ಶೇಷಗಿರಿ ಅವರು ಈ ಹಾಡಿಗೆ ಧ್ವನಿಯಾಗಿದ್ದಾರೆ. ವಿಶೇಷವೆಂದರೆ, ಅವರು ಈ ಐದು ಭಾಷೆಯಲ್ಲೂ ಹಾಡಿದ್ದಾರೆ ಅನ್ನೋದೇ ವಿಶೇಷ.

Categories
ಸಿನಿ ಸುದ್ದಿ

ನಟಿ ರಾಗಿಣಿ ಜತೆಗೆ ನಾಗೇಂದ್ರ ಪ್ರಸಾದ್‌ ಹೊಸ ಸಿನಿಮಾ, ಕಂಬಿ ಹಿಂದಿನ ಕತೆಗಳು ಅನ್ನೋ ಟೈಟಲ್‌ ಕೂಡ ಫಿಕ್ಸ್‌ !

ರಾಗಿಣಿ ಮತ್ತೆ ನಟನೆಯಲ್ಲಿ ಬ್ಯುಸಿ ಆಗುತ್ತಿದ್ದಾರೆ. ಹಾಗೆಯೇ ಸಭೆ ಸಮಾರಂಭ ಅಂತಲೂ ತಿರುಗಾಡುತ್ತಿದ್ದಾರೆ. ಈಗಾಗಲೇ ಮೂರ್ನಾಲ್ಕು ಸಿನಿಮಾಗಳಿಗೆ ರಾಗಿಣಿ ಬುಕ್‌ ಆಗಿದ್ದಾರೆ ಅಂತಲೂ ಸುದ್ದಿ ಇದೆ. ಈ ನಡುವೆಯೇ ಚಿತ್ರ ಸಾಹಿತಿ ಹಾಗೂ ನಿರ್ದೇಶಕ ನಾಗೇಂದ್ರ ಪ್ರಸಾದ್‌ ನಿರ್ದೇಶನದ ಹೊಸ ಸಿನಿಮಾದಲ್ಲೂ ರಾಗಿಣಿ ಅಭಿನಯಿಸುತ್ತಿದ್ದಾರೆಂಬ ಸುದ್ದಿ ಅಧಿಕೃತವಾಗಿಯೇ ರಿವೀಲ್ ಆಯಿತು.

ಅಜಯ್‌ ಕುಮಾರ್‌ ಸರ್ಕಲ್‌ನ 12 ಸಿನಿಮಾಗಳ ಪೋಸ್ಟರ್‌ ಲಾಂಚ್‌ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ನಾಗೇಂದ್ರ ಪ್ರಸಾದ್‌ ಅವರೇ ಈ ವಿಚಾರ ಬಹಿರಂಗ ಪಡಿಸಿದರು. ಕಂಬಿ ಹಿಂದಿನ ಕತೆಗಳು ಎನ್ನುವ ಟೈಟಲ್‌ ನಲ್ಲಿ ರಾಗಿಣಿ ಅವರ ಜತೆಗೊಂದು ಸಿನಿಮಾ ಮಾಡುತ್ತಿದ್ದೇನೆ. ಅದಕ್ಕೆ ನಾನು ನಿರ್ದೇಶಕ , ರಾಗಿಣಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆಂದು ನಾಗೇಂದ್ರ ಪ್ರಸಾದ್‌ ಹೇಳಿದರು. ಅವರ ಹೀಗೆ ಹೇಳುವಾಗ ಅವರೊಂದಿಗೆ ವೇದಿಕೆ ಮೇಲೆಯೇ ನಟಿ ರಾಗಿಣಿ ಇದ್ದರು.

ಕಾರ್ಯಕ್ರಮದ ನಂತರ ಮಾಧ್ಯಮದವರ ಜತೆಗೆ ಮಾತಿಗಿಳಿದ ನಟಿ ರಾಗಿಣಿ, ನಿರ್ದೇಶಕ ನಾಗೇಂದ್ರ ಪ್ರಸಾದ್‌ ಸಿನಿಮಾ ಮಾಡುವ ವಿಚಾರ ನಂಗೆ ಗೊತ್ತಿಲ್ಲ. ಅಂತಹ ಯಾವುದೇ ಮಾತುಕತೆ ಕೂಡ ನಡೆದಿಲ್ಲ ಎಂದರು. ಹಾಗಾದ್ರೆ ನಾಗೇಂದ್ರ ಪ್ರಸಾದ್‌ ಹೇಳಿದ್ದು ಸುಳ್ಳಾ ಅಂತ ಕೇಳಿದ ಪ್ರಶ್ನೆಗೆ , ನೀವು ಅವರನ್ನೇ ಕೇಳಿ ಎಂದರು ರಾಗಿಣಿ. ಹಾಗೆಯೇ ರಾಗಿಣಿ ಬಯೋಪಿಕ್‌ ಸಿನಿಮಾ ಆಗುತ್ತಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಗಿಣಿ, ಇದೆಲ್ಲ ತುಂಬಾ ಬೇಗ ಆಯಿತು. ಬಯೋಪಿಕ್‌ ಮಾಡುವಷ್ಟು ನಂಗೆ ವಯಸ್ಸು ಆಗಿಲ್ಲ. ಸಾಮಾನ್ಯವಾಗಿ ೭೫ ವರ್ಷಕ್ಕೆ ಹಾಗೆಲ್ಲ ಮಾಡ್ತಾರೆ. ಇದು ನಂಗೆ ಗೊತ್ತಿಲ್ಲ ಅಂದರು. ನಿರ್ಮಾಪಕ ಕೆ. ಮಂಜು ಅವರೊಂದಿಗೆ ಎರಡು ಸಿನಿಮಾ ಮಾಡುತ್ತಿದ್ದೇನೆ. ಹಾಗೆಯೇ ಕೃಷ್ಣ ಎಂಬುವರ ಜತೆಗೂ ಒಂದು ಸಿನಿಮಾ ಮಾಡುತ್ತಿದ್ದೇನೆ. ಒಟ್ಟಿನಲ್ಲಿ ಈ ವರ್ಷಕ್ಕೆ ಮೂರು ಸಿನಿಮಾ ಬರಲಿವೆ ಎಂದರು ರಾಗಿಣಿ.

Categories
ಸಿನಿ ಸುದ್ದಿ

ಬಿಗ್‌ಬಾಸ್‌ನಲ್ಲಿ ಸಂಬರಗಿ ಸಂಭ್ರಮ, ಅತೀಬುದ್ಧಿವಂತಿಕೆಯ ಆಟ ಬಲು ಜೋರು !

ಪ್ರಶಾಂತ್‌ ಸಂಬರಗಿ ರಾಜಕಾರಣಿನಾ ? ಗೊತ್ತಿಲ್ಲ. ಅವರು ಯಾವ ಆಂಗಲ್‌ ನಲ್ಲಿ ರಾಜಕಾರಣಿಯೋ. ಆದ್ರೆ, ಅವರು ರಾಜಕಾರಣಿ ಎನ್ನುವ ಕೆಟಗರಿಯಲ್ಲಿಯೇ ಕಲರ್ಸ್‌ ಕನ್ನಡ ” ಬಿಗ್‌ ಬಾಸ್‌ ಸೀಸನ್‌ 8ʼ ಕ್ಕೆ ಸೆಲೆಕ್ಟ್‌ ಮಾಡಿಕೊಂಡಿದೆ. ಅದು ಶುರುವಾಗಿ ಈಗಾಗಲೇ ಮೂರು ದಿನಗಳೂ ಕಳೆದು ಹೋಗಿವೆ. ಬಿಗ್‌ ಬಾಸ್‌ ಮನೆಯಲ್ಲೀಗ ಪ್ರಶಾಂತ್‌ ಸಂಬರಗಿ ಆಟ ಜೋರಾಗಿದೆ. ತಣ್ಣಗೆ ಸಂಬರಗಿ ಬಿಗ್‌ ಬಾಸ್‌ ಮನೆಯನ್ನೇ ಆವರಿಸಿಕೊಳ್ಳುತ್ತಿದ್ದಾರೆ. ತಾವೇ ಅತೀ ಬುದ್ಧಿವಂತರೂ ಎನ್ನುವ ಹಾಗೆ ಫೋಸು ನೀಡುತ್ತಿದ್ದಾರೆ. ಟಾಸ್ಕ್‌ ಗಳಲ್ಲಿ ಗೆದ್ದ ಪರಿಯನ್ನು ಸಂಭ್ರಮಿಸುವ ರೀತಿಯಂತೂ ಹೇಳತೀರದು. ಯುದ್ಧ ಗೆದ್ದ ಸಂಭ್ರಮ ಅವರ ಮುಖದಲ್ಲಿರುತ್ತದೆ.

ಮೊದಲ ದಿನವೇ ಬಿಗ್‌ ಬಾಸ್‌ ಮನೆಯಲ್ಲಿ ಸಂಬರಗಿ, ನಟಿ ದಿವ್ಯಾ ಉರುಡುಗ ಅವರೊಂದಿಗೆ ನಡೆದುಕೊಂಡ ರೀತಿಯೇ ವಿಚಿತ್ರವಾಗಿತ್ತು. ಟಾಸ್ಕ್‌ ವೊಂದರಲ್ಲಿ ಗೆದ್ದ ವೇಳೆ, ದಿವ್ಯಾ ಅವರನ್ನು ಎತ್ತಿಕೊಂಡು ಬಿಟ್ಟರು. ಅದೆಷ್ಟು ಸಲುಗೆಯೋ ಎನ್ನುವಂತೆ ಇದು ಕಂಡಿದ್ದು ಹೌದು. ಹಾಗೆಯೇ ಚರ್ಚೆಗಳ ವೇಳೆ, ಟಾಸ್ಕ ಸಂದರ್ಭದಲ್ಲಿ ಎಲ್ಲರನ್ನೂ ಅವರು ಡಾಮಿನೇಟ್‌ ಮಾಡುವ ಪರಿಯಂತೂ ಬಿಗ್‌ ಬಾಸ್‌ ಮನೆಯಲ್ಲಿ ತಣ್ಣಗೆ ಆಕ್ರೋಶದ ಭುಗಿಲೇಳುವಂತೆ ಮಾಡಿದೆ. ಇಷ್ಟರಲ್ಲಿಯೇ ಅದು ಸ್ಪೋಟಗೊಳ್ಳುವುದು ಗ್ಯಾರಂಟಿ ಆಗಿದೆ. ಮಂಗಳವಾರದ ಎಪಿಸೋಡ್‌ ನಲ್ಲಿ ಪ್ರಶಾಂತ್‌ ಸಂಬರಗಿ, ಬೆಂಗಳೂರಿನಲ್ಲಿನ ನಾಯಿ ಸಾಕುವವರ ಮೇಲೆ ತಮ್ಮ ಸಿಟ್ಟು ಹೊರ ಹಾಕಿದರು.

ಬೆಂಗಳೂರಿನಲ್ಲಿ ನಾಯಿ ಮಾಲೀಕರು ಫುಟ್‌ಬಾತ್‌ನಲ್ಲಿ ಅದರ ಮಲ ಮಾಡಿಸುತ್ತಾರೆ. ಇದರಿಂದ ಜನರು ಫುಟ್‌ಪಾತ್‌ನಲ್ಲಿ ಓಡಾಡಾಲು ಕಷ್ಟವಾಗುತ್ತದೆ. ನಾಯಿಯ ಮಲದಲ್ಲಿ ಸಿಕ್ಕಾಪಟ್ಟೆ ಬ್ಯಾಕ್ಟೀರಿಯ ಇರುತ್ತದೆ. ಹೀಗಾಗಿಯೇ ನಾನು ಇದರ ವಿರುದ್ಧ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೆ ಅಂತ ಹೀಗೆ ಹೇಳಿಕೊಳ್ಳುವಾಗ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ, ಒಂದಷ್ಟು ವಿವರ ಹೊರ ಹಾಕಿದರು. “ನಾನು ಹೇಳುವ ವಿಚಾರ ನಾಯಿ ಪ್ರಿಯರಿಗೆ ಬೇಸರ ತರಿಸಬಹುದು. ನಾನು ಒಂದು ವರ್ಷ ಸಿಂಗಾಪುರದಲ್ಲಿದ್ದೆ. ಅಲ್ಲಿ ನಾಯಿಗಳ ಮಲವನ್ನು ಸ್ವಚ್ಛವಾಗಿ ತೆಗೆಯುತ್ತಾರೆ. ಅಧ್ಯಯನವನ್ನು ಮಾಡಿದ್ದೇನೆ, ವಿಶ್ಲೇಷಣೆ ಮಾಡಿದ್ದೇನೆ. ನಾಯಿಗಳು ಮಾಡುವ ಮಲವನ್ನು ಅವರೇ ಎತ್ತಬೇಕು, ದಂಡ ಎತ್ತಬೇಕು ಅಂತ ಅರ್ಜಿ ಸಲ್ಲಿಸಿದ್ದೆ. ನಾನು ಹೊರಗಡೆ ನೋಡುವಾಗ ಯಾರಿಗಾದರೂ ಹೇಳಿದಾಗ ಕೂಡ ನಮ್ಮ ನಾಯಿ ಅಲ್ಲ ಅದು, ಬೇರೆಯವರ ನಾಯಿ ಅಂತಾರೆ. 5% ಜನರು ಮಾತ್ರ ಅದನ್ನು ಸ್ವಚ್ಛ ಮಾಡುತ್ತಾರೆ. ನಾಯಿ ಮಲದಿಂದ ಸಿಕ್ಕಾಪಟ್ಟೆ ರೋಗಗಳು ಬರುತ್ತವೆ” ಎಂದು ಬಿಗ್‌ ಬಾಸ್‌ ಮನೆಯಲ್ಲಿ ಹೇಳಿಕೊಂಡರು.

Categories
ಸಿನಿ ಸುದ್ದಿ

ಮಾರ್ಚ್‌ 19 ಕ್ಕೆ ತೆರೆಗೆ ಬರುತ್ತಿದೆ ” ಒಂದು ಗಂಟೆಯ ಕಥೆʼ

ನಿರ್ದೇಶಕ ರಾಘವ್‌ ದ್ವಾರ್ಕಿ ಮತ್ತೆ ಸುದ್ದಿಯಲ್ಲಿದ್ದಾರೆ. “ಮತ್ತೆ ಮುಂಗಾರುʼ ಚಿತ್ರದ ನಂತರ ಈಗವರು ಒಂದು ಗಂಟೆಯ ಕಥೆಯೊಂದನ್ನು ತೆರೆ ಮೇಲೆ ತೋರಿಸಲು ರೆಡಿಯಾಗಿದ್ದಾರೆ. ಅಂದ ಹಾಗೆ, ಒಂದು ಗಂಟೆಯ ಕಥೆ ಅನ್ನೋದು ರಾಘವ್‌ ದ್ವಾರ್ಕಿ ನಿರ್ದೇಶಸಿದ ಚಿತ್ರ. ದೇಶದಲ್ಲಿ ಇತ್ತೀಚೆಗೆ ಅತೀ ಹೆಚ್ಚು ಸುದ್ದಿಯಾದ ಅತ್ಯಾಚಾರದ ಪ್ರಕರಣಗಳ ಸುತ್ತ ಈ ಚಿತ್ರದ ಕತೆ ಹೆಣೆಯಲಾಗಿದೆಯಂತೆ. ರಿಯಲ್‌ ವೆಲ್ತ್‌ ವೆಂಚರ್‌ ಪ್ರೋಡಕ್ಷನ್‌ ಹೌಸ್‌ ಮೂಲಕ ರಾಘವ್‌ ದ್ವಾರ್ಕಿ, ಕಶ್ಯಪ್‌ ದಾಕೋಜು, ಕೆ.ಎಸ್.‌ ದುಶ್ಯಂತ್‌, ಶ್ವೇತಾ ದಾಕೋಜು ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ.
ಹೊಸ ಪ್ರತಿಭೆಗಳಾದ ಅಜಯ್‌ ರಾಜ್‌ ನಾಯಕರಾಗಿ ಅಭಿನಯಿಸಿದ್ದು, ಶನಾಯ ಕಟ್ಟೆ, ಸ್ವಾತಿ ಶರ್ಮಾ, ಪಾಪ ಪಾಂಡು ಚಿದಾನಂದ್‌, ಸಿಲ್ಲಿ ಲಲ್ಲಿ ಆನಂದ್‌, ಪ್ರಕಾಶ್‌ ತಮಿಳು ನಾಡು, ಯಶ್ವಂತ್‌ ಸರ್ದೇಶ್‌ ಪಾಂಡೆ, ಪ್ರಶಾಂತ್ ಸಿದ್ದಿ ಮತ್ತಿತರರು ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ದೇಶದಲ್ಲಿ ಇತ್ತೀಚೆಗೆ ಅತೀ ಹೆಚ್ಚು ಸುದ್ದಿಯಾದ ಅತ್ಯಾಚಾರದ ಪ್ರಕರಣಗಳನ್ನು ಆಧರಿಸಿ ಈ ಸಿನಿಮಾ ಮಾಡಿದ್ದಾರಂತೆ ನಿರ್ದೇಶಕ ರಾಘವ್‌ ದ್ವಾರ್ಕಿ. ” ಇದು ಮಹಿಳಾ ಪ್ರದಾನ ಚಿತ್ರವಾದರೂ, ಮಹಿಳೆಯರ ಮೇಲಿನ ಶೋಷಣೆಯೇ ಈ ಚಿತ್ರದ ಪ್ರಮುಖ ಕಥಾ ವಸ್ತು. ಅತ್ಯಾಚಾರದ ಘಟನೆಗಳ ಸುತ್ತ ಮುತ್ತ ಈ ಕತೆ ಹೆಣೆಯಲಾಗಿದೆ. ಕರ್ನಾಟಕದಲ್ಲೇ ನಡೆದ ಒಂದು ಘಟನೆಯೇ ಇದಕ್ಕೆ ಸ್ಪೂರ್ತಿ. ಜಗತ್ತಿನಲ್ಲಿ ಮಹಿಳೆಯರು ಹಾಗೂ ಮಕ್ಕಳಿಗಾಗುವ ಶೋಷಣೆ ಸುತ್ತ ಈ ಕಥೆ ಸಾಗುತ್ತದೆʼ ಎನ್ನುತ್ತಾರೆ ನಿರ್ದೇಶಕ ರಾಘವ್‌ ದ್ವಾರ್ಕಿ.

ಹಾಗಂತ ಇದು ಪೂರ್ಣ ಪ್ರಮಾಣದಲ್ಲಿ ಗಂಭೀರವಾದ ಸಿನಿಮಾ ಅಲ್ಲ. ಹಾಸ್ಯವೂ ಸಿನಿಮಾದ ಪ್ರಮುಖ ಅಂಶ. ಮಾಮೂಲಿಗಿಂತ ವಿಭಿನ್ನವಾದ ಕಥಾಹಂದರವಿರಲಿದೆ ಎನ್ನುತ್ತೆ ಚಿತ್ರತಂಡ.” ಸಿನಿಮಾ ಫುಲ್‌ ಕಾಮಿಡಿ ಪ್ಯಾಕೇಜ್‌ನಿಂದ ಕೂಡಿದೆ. ಶೇ.೯೦ ರಷ್ಟು ಮನರಂಜನೆ ಹೊಂದಿದೆ. ಹೀರೋ, ಹೀರೋಯಿನ್‌ ಜೊತೆ ಟ್ರಾವೆಲ್‌ ಮಾಡುವುದು, ಪ್ರಪೋಸ್‌ ಮಾಡುವುದು ನನ್ನ ಸಿನಿಮಾ ಜರ್ನಿ ಅಲ್ಲ. ಕಥೆ ಯೂನಿವರ್ಸಲ್‌ ಆಗಿರಬೇಕು, ಅದು ಜನರಿಗೆ ಮುಟ್ಟಬೇಕು ಎನ್ನುವುದು ನಮ್ಮ ಉದ್ದೇಶʼ ಎನ್ನುತ್ತಾರೆ ನಿರ್ದೇಶಕರು. ಚಿತ್ರಕ್ಕೆ ಬೆಂಗಳೂರು, ಮೈಸೂರು, ಮೇಲುಕೋಟೆ, ಶಿವನ ಸಮುದ್ರ, ಮಡಿಕೇರಿ ಮುಂತಾದ ಕಡೆಗಳಲ್ಲಿ ಶೂಟಿಂಗ್‌ ನಡೆದಿದೆ. ಮಾ.19ರಂದು ಚಿತ್ರ ಬಿಡುಗಡೆ ಆಗುತ್ತಿದೆ.

Categories
ಸಿನಿ ಸುದ್ದಿ

ಜಾಲಿ ಲೈಫಲ್ಲಿ ಸಾಧು ಕಿಲಕಿಲ! ಕಾಲೇಜ್‌ ಸ್ಟೋರಿಗೆ ಕೋಕಿಲ ಮಾಡಲಿದ್ದಾರೆ ನಿರ್ದೇಶನ

ಸಾಧುಕೋಕಿಲ ಈಗ ಏನ್‌ ಮಾಡುತ್ತಿದ್ದಾರೆ? ಈ ಪ್ರಶ್ನೆಗೆ ಉತ್ತರ ಅವರೀಗ ಹೊಸ ಚಿತ್ರವೊಂದರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಹೌದು, ನಟ, ಗಾಯಕ ಕಮ್‌ ಸಂಗೀತ ನಿರ್ದೇಶಕರಾಗಿ ಜನರನ್ನು ರಂಜಿಸಿರುವ ಸಾಧುಕೋಕಿಲ, ನಿರ್ದೇಶನದಲ್ಲೂ ಸೈ ಎನಿಸಿಕಕೊಂಡವರು. ಈಗ ಅವರೊಂದು ಹೊಸ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ “ಜಾಲಿ ಲೈಫ್‌” ಎಂದು ನಾಮಕರಣ ಮಾಡಲಾಗಿದೆ.


ಈ ಹಿಂದೆ “ತ್ರಿಕೋನ” ಚಿತ್ರ‌ ನಿರ್ಮಿಸಿದ್ದ ರಾಜಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಪೊಲೀಸ್ ಪ್ರಕ್ಕಿ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದಾರೆ. ರಾಜ್‌ಶೇಖರ್‌ ಅವರೇ ಚಿತ್ರದ ಕಥೆ, ಚಿತ್ರಕಥೆ ಬರೆದಿದ್ದಾರೆ.
ತಮ್ಮ ಸಂಸ್ಥೆ ಮೂಲಕ ಈ ವರ್ಷ ನಾಲ್ಕು ಚಿತ್ರಗಳನ್ನು ನಿರ್ಮಿಸುವುದಾಗಿ ನಿರ್ಮಾಪಕ ರಾಜಶೇಖರ್ ತಿಳಿಸಿದ್ದಾರೆ.‌ ಇನ್ನು, ಮಾರ್ಚ್‌ನಲ್ಲೇ ಚಿತ್ರೀಕರಣ ಶುರುವಾಗಲಿದೆ.


ಈಗಾಗಲೇ ಚಿತ್ರದ ತಾರಾಬಳಗ ಆಯ್ಕೆಗಾಗಿ ನಟ ಸುಚೀಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ವಿಭಿನ್ನವಾಗಿ ಆಡಿಶನ್ ನಡೆಸಲಾಗಿದೆ.
ರಂಗಾಯಣ, ನೀನಾಸಂ ಹಾಗೂ ಟೆಂಟ್ ಸಿನಿಮಾ ಮೂಲಕ ಸುಮಾರು 500 ರಿಂದ 600 ಪ್ರತಿಭಾವಂತರು ಆಡಿಶನ್ ಗೆ ಆಗಮಿಸಿದ್ದು, ಸದ್ಯಕ್ಕೆ 18 ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಚಿತ್ರದಲ್ಲಿ ಐದು ಹಾಡುಗಳಿದ್ದು, ಸಾಧುಕೋಕಿಲ ಅವರೇ ಸಂಗೀತ ನೀಡುತ್ತಿದ್ದಾರೆ. ಗುಂಡ್ಲುಪೇಟೆ ಸುರೇಶ್ ಅವರು ಕ್ಯಾಮೆರಾ ಹಿಡಿಯುತ್ತಿದ್ದಾರೆ. ಈ ಚಿತ್ರದಲ್ಲಿ ಸುಚೀಂದ್ರ ಪ್ರಸಾದ್ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.

Categories
ಸಿನಿ ಸುದ್ದಿ

ದರ್ಶನ್‌ – ತರುಣ್‌ ಸುಧೀರ್‌ ಜೋಡಿಯ ʼ ರಾಬರ್ಟ್‌ʼ ಇಷ್ಟರಲ್ಲೇಬರಲೇಬೇಕಿತ್ತು….ಯಾಕೆ ಗೊತ್ತಾ ?

ನಟ ದರ್ಶನ್‌ ಅಭಿಮಾನಿಗಳು ಹಬ್ಬ ಆಚರಿಸಲು ರೆಡಿಯಾಗಿದ್ದಾರೆ. ನಿರೀಕ್ಷೆಯಂತೆಯೇ ಮಾರ್ಚ್‌ ಕ್ಕೆ11 ಕನ್ನಡ ಚಿತ್ರರಂಗ ದೊಡ್ಡದೊಂದು ಸಿನಿಮಾ ಜಾತ್ರೆಗೆ ಸಾಕ್ಷಿಯಾಗುವುದು ಗ್ಯಾರಂಟಿ ಆಗಿದೆ. ದರ್ಶನ್‌ ಫ್ಯಾನ್ಸ್‌ ಮಾತ್ರ ಕಣ್ಣಿಗೆ ಎಣ್ಣೆ ಬಿಟ್ಟು ಕೊಂಡು ಆ ದಿನಕ್ಕೆ ಕಾಯುತ್ತಿದ್ದಾರೆ. ಆ ದಿನ ತಮ್ಮ ನೆಚ್ಚಿನ ನಟ ದಾಸ ತೆರೆ ಮೇಲೆ ಬರ್ತಾನೆ, ತಮ್ಮನ್ನೆಲ್ಲ ಭರಪೂರ ರಂಜಿಸುತ್ತಾನೆ ಅನ್ನೋದು ಅವರ ಅಭಿಮಾನಿಗಳ ನಿರೀಕ್ಷೆ.

ಅಷ್ಟು ಮಾತ್ರವಲ್ಲ, ರಾಜ್ಯದ ಇಡೀ ಸಿನಿಮಾ ಪ್ರೇಕ್ಷಕ ವರ್ಗವೂ ಕೂಡ ಆ ಕ್ಷಣವನ್ನೇ ಎದುರು ನೋಡುತ್ತಿದೆ. ಅದಕ್ಕೆ ಕಾರಣ ಹಲವು ಇವೆ. ಕೊರೋನಾದಿಂದಾಗಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗದೆ ಬೇಸತ್ತಿದ್ದಾರೆ. ಅವರಿಗೆಲ್ಲ ಈಗ ಮನರಂಜನೆ ಬೇಕಿದೆ. ಚಿತ್ರರಂಗಕ್ಕೂ ಅದನ್ನೇ ನಿರೀಕ್ಷೆ ಮಾಡುತ್ತಿದೆ. ʼರಾಬರ್ಟ್‌ʼ ಮೂಲಕ ನಾಡಿನ ಚಿತ್ರಮಂದಿರಗಳಲ್ಲಿ ಅಂತಹದೊಂದು ಜಾತ್ರೆ ಶುರುವಾದರೆ, ಚಿತ್ರರಂಗಕ್ಕೂ ಹೊಸ ಟಾನಿಕ್‌ ಅನ್ನೋದು ಚಿತ್ರೋದ್ಯಮದ ಬಯಕೆ.

ಕುತೂಹಲ ಇರೋದು ರಾಬರ್ಟ್‌ ಮೂಲಕ ಅದೆಲ್ಲ ಸಾಧ್ಯವಾಗುತ್ತಾ ಅನ್ನೋದು. ಖಂಡಿತಾ ಅದು ನಿಜವೂ ಅಗಲಿದೆ. ಯಾಕಂದ್ರೆ, ʼಒಡೆಯʼ ಚಿತ್ರದ ನಂತರ ನಟ ದರ್ಶನ್‌ ತೆರೆ ಮೇಲೆ ಬಂದಿಲ್ಲ. ಅದು ಬಂದು ಹೋಗಿಯೇ ಹೆಚ್ಚು ಕಡಿಮೆ ಇಲ್ಲಿಗೆ ಒಂದೂವರೆ ವರ್ಷ. ʼಯಜಮಾನʼ ಚಿತ್ರದ ನಂತರ ಬಂದ ಸಿನಿಮಾ ಅದು. ದರ್ಶನ್‌ ಅಂದ್ರೆ ಅಭಿಮಾನಿಗಳು ಏನೆಲ್ಲ ಇರಬೇಕೆಂದು ಬಯಸುತ್ತಾರೋ, ಅದೆಲ್ಲ ಅಲ್ಲಿತ್ತು ಅನ್ನೋದು ಬಿಟ್ಟರೆ, ಆ ಸಿನಿಮಾದಲ್ಲಿ ಹೊಸತನ ಕಾಣಲಿಲ್ಲ. ಹಾಗಾಗಿ ʼ ಒಡೆಯʼ ನಿರೀಕ್ಷೆಯಷ್ಟು ಅಭಿಮಾನಿಗಳನ್ನು ರಂಜಿಸಲಿಲ್ಲ. ಅದೊಂದು ಬೇಸರದಲ್ಲೀಗ ʼರಾಬರ್ಟ್‌ʼ ಚಿತ್ರದ ಮೇಲೆ ಬಹುದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ ದರ್ಶನ್‌ ಫ್ಯಾನ್ಸ್‌ ಹಾಗೂ ಸಿನಿಮಾ ಪ್ರೇಕ್ಷಕ ವರ್ಗ. ಹೆಚ್ಚು ಕಡಿಮೆ ಒಂದೂವರೆ ವರ್ಷದ ಆ ಕಾತರಕ್ಕೆ ಮಾರ್ಚ್‌ 11 ರಂದು ತೆರೆ ಬೀಳುತ್ತಿದೆ. ಅಂದುಕೊಂಡಂತೆ ʼರಾಬರ್ಟ್‌ʼ ಹೊಸ ದಾಖಲೆ ಬರೆಯುತ್ತಾ ? ಎನ್ನುವುದಷ್ಟೇ ಬಾಕಿ ಇದೆ.

ಸೋಲು-ಗೆಲುವಿನ ಲೆಕ್ಕಚಾರದಾಚೆಯೂ ಈ ಸಿನಿಮಾ ಈ ಹೊತ್ತಿಗೆ ಬರಲೇಬೇಕಿತ್ತು. ಕಾರಣ ಚಿತ್ರರಂಗಕ್ಕೊಂದು ಫೋರ್ಸ್‌ ಬೇಕಿತ್ತು. ಹಾಗಂತ ಇಲ್ಲಿ ತನಕ ಯಾರ ಸಿನಿಮಾ ಬಂದಿಲ್ಲವೇ? ಲಾಕ್‌ ಡೌನ್‌ ತೆರೆವಾದ ನಂತರ ಇಲ್ಲಿ ತನಕ ಸಾಕಷ್ಟು ಕನ್ನಡ ಸಿನಿಮಾ ಬಿಡುಗಡೆ ಆಗಿವೆ. ಇದರಲ್ಲಿ ನಿರೀಕ್ಷಿತ ಸಿನಿಮಾಗಳು ಕೂಡ ಇದ್ದವು. ಅನೇಕ ಕಾರಣಗಳಿಗೆ ಈ ಸಿನಿಮಾಗಳಿಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಕೋರೋನಾ ಭಯ ದೂರವಾಗದಿರುವುದು ಅದಕ್ಕೆ ಕಾರಣ. ಹಾಗೆ ನೋಡಿದರೆ ಅದನ್ನು ಕೊಂಚ ದೂರ ಮಾಡಿದ್ದು ʼಪೊಗರುʼ ಹವಾ. ಸ್ಟಾರ್‌ ಸಿನಿಮಾಗಳ ಪೈಕಿ ಮೊದಲು ಬಂದ ಸಿನಿಮಾ ಇದು. ಜನರಿಲ್ಲದೆ ಬಣಗುಡುತ್ತಿದ್ದ ಚಿತ್ರಮಂದಿರಗಳಲ್ಲಿ ಜನ ಕಂಡರು. ಅಂತೂ ಚಿತ್ರರಂಗ ಚೇತರಿಸಿಕೊಂಡಿತು ಎನ್ನುವ ಆಶಾಭಾವ ಮೂಡಿತು. ಆದರೂ ಇನ್ನೇನೋ ಬೇಕಿದೆ ಎನ್ನುವ ಕೊರಗು ಚಿತ್ರೋದ್ಯಮಕ್ಕೆ ಕಾಡುತ್ತಲೇ ಇತ್ತು. ಹಾಗಾಗಿ ರಾಬರ್ಟ್‌ ಬರಲೇಬೇಕಿತ್ತು ಎನ್ನುವ ಕೇಳಿ ಬಂದಿದ್ದು ಸುಳ್ಳಲ್ಲ.

” ರಾಬರ್ಟ್‌ʼ ಬಂದ್ರೆ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಕೊರೋನಾ ಭಯದ ಮೈ ಚಳಿ ಬಿಡುತ್ತೆ. ದರ್ಶನ್‌ ಅಭಿಮಾನಕ್ಕೆ ಜನ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡ್ತಾರೆ. ಬಂದ್‌ ಆಗಿ ಧೂಳು ಹಿಡಿದ ಚಿತ್ರಮಂದಿರಗಳಲ್ಲಿ ಕುರ್ಚಿಗಳು ಭರ್ತಿ ಆಗುತ್ತವೆ. ಮತ್ತೆ ಚಿತ್ರ ರಂಗದಲ್ಲಿ ಹಳೇ ವೈಭವ ಕಾಣಲಿದೆ ಅಂತ ಉದ್ಯಮದ ಕನವರಿಕೆ ಕೂಡ ʼ ರಾಬರ್ಟ್‌ʼ ಮೇಲಿದೆ. ಒಂದೂವರೆ ವರ್ಷದಿಂದ ಅವರ ಫ್ಯಾನ್ಸ್‌ ಸಿನಿಮಾ ಇಲ್ಲದೆ ಹಸಿದಿದ್ದಾರೆ. ರಾಬರ್ಟ್‌ ರಿಲೀಸ್‌ ಗೆ ಅಂತಲೇ ತುದಿಗಾಲ ಮೇಲೆ ನಿಂತಿದ್ದಾರೆ. ಫಸ್ಟ್‌ ಡೇ ಫಸ್ಟ್‌ ಶೋ ನಲ್ಲಿ ʼರಾಬರ್ಟ್‌ʼ ನೋಡಿ ಕಣ್ತುಂಬಿಕೊಳ್ಳಲೇಬೇಕೆಂದು ಹಠ ತೊಡ್ಡವರದ್ದು ದೊಡ್ಡ ಸಂಖ್ಯೆ ಇದೆ. ಹೀಗಾಗಿ ಆರಂಭದಲ್ಲೇ ರಾಬರ್ಟ್‌ ಚಿತ್ರ ಬಿಗ್‌ ಎಂಟ್ರಿ ಪಡೆಯುವುದು ನೂರರಷ್ಟು ಗ್ಯಾರಂಟಿ ಎನ್ನುತ್ತಿವೆ ಚಿತ್ರೋದ್ಯಮದ ಮೂಲಗಳು.

Categories
ಸಿನಿ ಸುದ್ದಿ

ಮತ್ತೆ ತಾಜ್‌ ಮಹಲ್! ಮುಕ್ತಾಯ ಹಂತದಲ್ಲಿ ಹೊಸಬರ ಸಿನಿಮಾ

“ತಾಜ್‌ ಮಹಲ್”…‌ ಕನ್ನಡದಲ್ಲಿ ಯಶಸ್ವಿಗೊಂಡ ಚಿತ್ರವಿದು. ಅಜೇಯ್‌ರಾವ್‌ ಅವರಿಗೆ ದೊಡ್ಡ ಬ್ರೇಕ್‌ ಕೊಟ್ಟಿದ್ದ ಸಿನಿಮಾ. ಈಗಾಗಲೇ ಇದೇ ಹೆಸರಲ್ಲಿ ಚಿತ್ರವೊಂದು ಮೂಡಿ ಬಂದಿದ್ದು, ಇಷ್ಟರಲ್ಲೇ ಸಿನಿಮಾ ಮುಕ್ತಾಯಗೊಳ್ಳಲಿದೆ. ಹೌದು, “ತಾಜ್‌ ಮಹಲ್‌ ೨” ಚಿತ್ರ ಈಗಾಗಲೇ ಚಿತ್ರೀಕರಣಗೊಂಡಿದ್ದು, ಮಾರ್ಚ್‌ ೧೫ರಿಂದ ಕೊನೆಯ ಹಂತದ ಚಿತ್ರೀಕರಣ ನಡೆಯಲಿದೆ.

ಶ್ರೀಗಂಗಾಂಭಿಕಾ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ದೇವರಾಜ ಕುಮಾರ್ ನಿರ್ದೇಶನ ಮಾಡಿದ್ದಾರೆ. ದೇವರಾಜ್‌ ಕುಮಾರ್‌ ಅವರೇ ಇಲ್ಲಿ ಹೀರೋ ಆಗಿದ್ದಾರೆ. ಅವರಿಗೆ ಸಮೃದ್ಧಿ ನಾಯಕಿಯಾಗಿದ್ದಾರೆ. ಇನನು, ದೇವರಾಜ್‌ ಕುಮಾರ್‌ ಅವರ ಕಥೆ, ಚಿತ್ರಕಥೆ ಚಿತ್ರಕ್ಕಿದೆ. ವೀನಸ್‌ ಮೂರ್ತಿ ಅವರು ಕ್ಯಾಮೆರಾ ಹಿಡಿದಿದ್ದಾರೆ. ಬೆಂಗಳೂರಿನ ಹೆಚ್ಎಂಟಿ ಲೇಔಟ್‌ನಲ್ಲಿ ಆರು ದಿನಗಳ‌ ಕಾಲ ಸಾಹಸ ಸನ್ನಿವೇಶ ಹಾಗೂ ಹಾಡಿನ‌ ಚಿತ್ರೀಕರಣ ನಡೆಯಲಿದ್ದು, ಈ ಮೂಲಕ ಚಿತ್ರದ ಚಿತ್ರೀಕರಣ ಮುಕ್ತಾಯವಾಗಲಿದೆ.‌

ಎಲ್ಲವೂ ಅಂದುಕೊಂಡಂತೆ ನಡೆದರೆ ಬರುವ ಮೇ ತಿಂಗಳಲ್ಲಿ ಟೀಸರ್‌ ಬಿಡುಗಡೆಯಾಗಲಿದ್ದು, ನಂತರ ಚಿತ್ರ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಮನ್ವರ್ಷಿ ನವಲಗುಂದ ಸಂಭಾಷಣೆಯ ಜೊತೆಗೆ ಹಾಡುಗಳನ್ನೂ ಬರೆದಿದ್ದಾರೆ. ವಿಕ್ರಮ್ ಸೆಲ್ವ ಸಂಗೀತವಿದೆ.

ಚಂದ್ರು ಬಂಡೆ ಸಾಹಸ ನಿರ್ದೇಶನ ಮಾಡಿದರೆ, ಧನಂಜಯ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವಿಜಯ್ ಅವರ ಸಂಕಲನವಿದೆ. ನೈಜ ಪ್ರೇಮಕಥೆ ಆಧರಿಸಿದ ಈ ಚಿತ್ರದಲ್ಲಿ ಜಿಮ್ ರವಿ, ಶೋಭರಾಜ್, ಶಿವರಾಂ, ತಬಲ ನಾಣಿ, ಕಡ್ಡಿ ಪುಡಿ ಚಂದ್ರು, ಕಾಕ್ರೋಜ್ ಸುಧಿ ಇತರರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ದರ್ಶನ್‌ ಅವರ “ರಾಬರ್ಟ್‌ʼ ಚಿತ್ರಕ್ಕೂ, ಪ್ರಧಾನಿಗೂ ಎಲ್ಲಿಂದೆಲ್ಲಿಯ ನಂಟು ? ಜಗದೀಶ್‌ ಶೆಟ್ಟರ್‌ ಆ ಕತೆ ಹೇಳ್ತಾರೆ ಕೇಳಿ….

ಸಿನಿಮಾಗಳ ಪ್ರೀ ರಿಲೀಸ್‌ ಈವೆಂಟ್‌ಗಳಿಗೂ ಈಗ ರಾಜಕೀಯ ಮೆರಗು ಸಿಗುತ್ತಿದೆ. ದಾವಣಗೆರೆಯಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ” ಪೊಗರುʼ ಚಿತ್ರದ ಆಡಿಯೋ ರಿಲೀಸ್‌ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದರು. ಭಾರೀ ಜನಸಾಗರವೇ ಸೇರಿದ್ದ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಚಿತ್ರದ ನಾಯಕ ಧ್ರುವ ಸರ್ಜಾ ಅವರ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಆ ಸರದಿ ʼರಾಬರ್ಟ್‌ʼ ಚಿತ್ರದ್ದು.

ಭಾನುವಾರ ( ಫೆ. 28) ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ “ರಾಬರ್ಟ್‌ʼ ಚಿತ್ರದ ಪ್ರೀ ರಿಲೀಸ್ಈ‌ವೆಂಟ್‌ ಕಾರ್ಯಕ್ರಮ ನಡೆಯಿತು.ಮಾಜಿ ಸಿಎಂ ಹಾಗೂ ಹಾಲಿ ಸಚಿವ ಜಗದೀಶ್‌ ಶೆಟ್ಟರ್‌ ಅಲ್ಲಿಗೆ ಮುಖ್ಯ ಅತಿಥಿಗಳಾಗಿ ಬಂದಿದ್ದರು.ಭಾರೀ ಜನಸಾಗರವೇ ನೆರೆದಿದ್ದ ವರ್ಣರಂಜಿತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಗದೀಶ್‌ ಶೆಟ್ಟರ್‌, ತಾವು ದರ್ಶನ್‌ ಅಭಿಮಾನಿ ಅಂತ ದರ್ಶನ್‌ ಅವರನ್ನು ಗುಣಗಾನ ಮಾಡಿದರು. ” ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ಸಿಗುವುದಾದರೆ ಅದು ಉತ್ತರ ಕರ್ನಾಟಕದಿಂದಲೇ ಸಾಧ್ಯ. ಹುಬ್ಬಳ್ಳಿ ಉತ್ತರ ಕರ್ನಾಟಕದ ಗಂಡು ಮೆಟ್ಟಿದ ನೆಲ. ಇಲ್ಲಿಗೆ ನಿಮ್ಮೆಲ್ಲರ ನೆಚ್ಚಿನ ನಟ ದರ್ಶನ್‌ ಬಂದಿದ್ದಾರೆ. ಅವರಿಗೆ ನಿಮ್ಮಲ್ಲೆರ ಬೆಂಬಲ ಬೇಕುʼ ಎಂದರು.

ಕಳೆದ ಒಂದು ವರ್ಷದಿಂದ ಕೊರೋನಾದಿಂದ ಇಡೀ ದೇಶ ಸಾಕಷ್ಟು ಅನಾನುಕೂಲ ಅನುಭವಿಸಿತು. ಹಾಗೆಯೇ ಚಿತ್ರೋದ್ಯಮ ಕೂಡ ಸಾಕಷ್ಟು ತೊಂದರೆ ಅನುಭವಿಸಿತು. ಈಗ ಚೇತರಿಕೆ ಕಾಣುತ್ತಿರುವುದು ಸಂತೋಷದ ಸಂಗತಿ. ಇದನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ಭಾರತಕ್ಕೆ ಮಾತ್ರವಲ್ಲ ಬೇರೆ ಬೇರೆ ದೇಶಗಳಿಗೂ ಕೊರೋನಾ ಲಸಿಕೆ ಕೊಡುವ ನಿಟ್ಟಿನಲ್ಲಿ ಪ್ರಧಾನಿ ದಿ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಹಾಗಾಗಿಯೇ ನಾವೆಲ್ಲ ಇಂದು ಇಲ್ಲಿ ಸೇರುವುದಕ್ಕೆ ಸಾಧ್ಯವಾಗಿದೆ. ಪ್ರಧಾನಿ ಅವರ ಪ್ರಯತ್ನ ಫಲವೇ ʼರಾಬರ್ಟ್‌ʼ ಚಿತ್ರಕ್ಕೂ ವರವಾಗಿದೆ. ಚಿತ್ರಕ್ಕೆ ಯಶಸ್ಸು ಸಿಗಲಿ ಅಂತ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದರು.

Categories
ಸಿನಿ ಸುದ್ದಿ

ಹೀರೋ ಚಿತ್ರದ ಚಿತ್ರೀಕರಣದ ವೇಳೆ ಪೆಟ್ರೋಲ್‌ ಬಾಂಬ್‌ ಸ್ಪೋಟಗೊಂಡಿದ್ದು ನಿಜವಾ ? ಇದು ನಡೆದಿದ್ದಾರೂ ಯಾವಾಗ ?

ಹೌದು, ಇಂತಹದೊಂದು ಪ್ರಶ್ನೆ ಇಲ್ಲಿ ಮೂಡುವುದಕ್ಕೂ ಕಾರಣವಿದೆ. ಈಗಾಗಲೇ ಮಾಹಿತಿ ಇರುವ ಹಾಗೆ ರಿಷಬ್‌ ಶೆಟ್ಟಿ ಅಭಿನಯದ ʼಹೀರೋʼ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಮಾರ್ಚ್‌ 5 ರಂದೇ “ಹೀರೋʼ ಚಿತ್ರ ತೆರೆಗೆ ಬರುತ್ತಿದೆ ಅಂತ ಚಿತ್ರ ತಂಡವೇ ಅನೌನ್ಸ್‌ ಮಾಡಿದೆ. ಅದಕ್ಕೆ ಪೂರಕವಾಗಿಯೇ ಚಿತ್ರತಂಡ ಕೂಡ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟಿದೆ. ಸದ್ಯಕ್ಕೆ ಅದರದ್ದೇ ಕೆಲಸದಲ್ಲಿ ಚಿತ್ರ ತಂಡ ಬ್ಯುಸಿ ಆಗಿದೆ. ಈ ನಡುವೆಯೇ “ಹೀರೋʼ ಚಿತ್ರದ ಆಕ್ಷನ್‌ ಸನ್ನಿವೇಶಗಳ ಚಿತ್ರೀಕರಣಕ್ಕೆ ಹಾಸನದ ಬೇಲೂರಿಗೆ ಹೋಗಿದ್ದಾಗ ಪೆಟ್ರೋಲ್‌ ಬಾಂಬ್‌ ಸ್ಪೋಟಗೊಂಡಿದ್ದು, ನಾಯಕ ರಿಷಬ್‌ ಶೆಟ್ಟಿ ಹಾಗೂ ನಾಯಕಿ ಗಾನವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನುವ ಸುದ್ದಿ ಸೋಮವಾರ ರಿವೀಲ್‌ ಆಗಿದೆ.

ರಾಜ್ಯದ ಪ್ರತಿಷ್ಟಿತ ಟಿವಿ ವಾಹಿನಿಗಳು ಹಾಗೂ ವೆಬ್‌ ಪೋರ್ಟಲ್‌ನಲ್ಲೂ ಪ್ರಕಟವಾಗಿದೆ. ಹಾಸನ ಸಮೀಪದ ಬೇಲೂರು ಸಮೀಪದ ಕಾಫಿ ಎಸ್ಟೇಟ್‌ ವೊಂದರಲ್ಲಿ ” ಹೀರೋʼ ಚಿತ್ರದ ಆಕ್ಷನ್‌ ಸನ್ನಿವೇಶಗಳನ್ನು ಚಿತ್ರೀಕರಿಸುವಾಗ ಈ ಅವಘಡ ನಡೆದಿದ್ದು, ಅದೃಷ್ಟವಶಾತ್‌ ಚಿತ್ರದ ನಾಯಕ ನಟ ರಿಷಬ್‌ ಶೆಟ್ಟಿ ಹಾಗೂ ನಾಯಕಿ ಗಾನವಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತ ಚಿತ್ರ ತಂಡದ ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ.

ಪ್ರಶ್ನೆ ಇರೋದು” ಹೀರೋʼ ಚಿತ್ರದ ಚಿತ್ರೀಕರಣದ ವೇಳೆ ಬೆಂಕಿ ಅವಘಡ ಸಂಭವಿಸಿದ್ದು ಯಾವಾಗ? ನಿಜಕ್ಕೂ ಇದು ನಿನ್ನೆ ಮೊನ್ನೆ ನಡೆದ ಘಟನೆಯಾ ? ಸೆನ್ಸಾರ್‌ ಮುಗಿಸಿ ರಿಲೀಸ್‌ ಗೆ ರೆಡಿಯಾಗಿರುವ ಚಿತ್ರಕ್ಕೆ ಮತ್ತೆ ಚಿತ್ರೀಕರಣ ನಡೆಸಲು ಸಾಧ್ಯವೇ?

ಒಂದು ಚಿತ್ರ ಸೆನ್ಸಾರ್‌ ಮುಗಿಸಿ, ರಿಲೀಸ್‌ ಗೆ ರೆಡಿಯಾಗಿರುವ ಹೊತ್ತಿನಲ್ಲಿ ಆ ಚಿತ್ರಕ್ಕೆ ಮತ್ತೆ ಚಿತ್ರೀಕರಣ ನಡೆಸಲು ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಮತ್ತೆ ಚಿತ್ರೀಕರಣ ಮಾಡಬೇಕಾದರೆ, ಮತ್ತೆ ಸೆನ್ಸಾರ್‌ಗೆ ಹೋಗಬೇಕು. ಅದರಲ್ಲೂ ಹೀರೋ ಚಿತ್ರ ಇನ್ನೇನು ರಿಲೀಸ್‌ ಆಗಲು ಮೂರೇ ದಿನ ಬಾಕಿಯಿದೆ. ಈ ಸಮಯದಲ್ಲಿ ಹೀರೋ ಚಿತ್ರದ ಚಿತ್ರೀಕರಣದ ವೇಳೆ ಬೆಂಕಿ ಅವಘಡ ಸಂಭವಿಸಿ, ಚಿತ್ರದ ನಾಯಕ ರಿಷಬ್‌ ಶೆಟ್ಟಿ ಹಾಗೂ ನಾಯಕಿ ಗಾನವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನು ಸುದ್ದಿ ಹೊಸತಂತೂ ಅಲ್ಲ. ಅದು ಹಳೇಯದೇ ಆಗಿರುತ್ತದೆ. ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಚಿತ್ರತಂಡ ಈಗ ಪ್ರಚಾರ ಗಿಮಿಕ್‌ ಗೆ ಈಗ ಬಳಸಿಕೊಂಡಿರುವುದಕ್ಕೂ ಸಾಧ್ಯತೆಯಿದೆ.

Categories
ಸಿನಿ ಸುದ್ದಿ

ಅನಘ ಎಂಬ ಭಯಪಡಿಸೋ ಸಿನಿಮಾ ಸಸ್ಪೆನ್ಸ್‌-ಕಾಮಿಡಿ ಕಥಾಹಂದರ ಮೂಲಕ ಹೊಸಬರ ಆಗಮನ

ಕನ್ನಡದಲ್ಲಿ ಸಾಕಷ್ಟು ಹಾರರ್‌ ಸಿನಿಮಾಗಳು ಬಂದಿವೆ. ಆ ಸಾಲಿಗೆ ಹೊಸಬರ “ಅನಘ” ಚಿತ್ರವೂ ಸೇರಿದೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿಸಿದ್ದು, ಇಷ್ಟರಲ್ಲೇ ಬಿಡುಗಡೆಯಾಗಲು ತಯಾರಿ ನಡೆಸುತ್ತಿದೆ. ಈ ಚಿತ್ರವನ್ನು ರಾಜು ನಿರ್ದೇಶನ ಮಾಡಿದ್ದಾರೆ. ಡಿ.ಪಿ.ಮಂಜುಳ ನಿರ್ಮಾಣ ಮಾಡಿದ್ದಾರೆ. ಇಲ್ಲಿ ನಾಯಕ, ನಾಯಕಿ ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳೇ ಕಾಣಿಸಿಕೊಂಡಿವೆ. ಇದೊಂದು ಸಸ್ಪೆನ್ಸ್, ಹಾರರ್, ಕಾಮಿಡಿ ಅಂಶಗಳನ್ನು ಹೊಂದಿದೆ.

ಕಥೆಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ದವಾಗುತ್ತಿರುವ ಸಿನಿಮಾ, ಈಗಾಗಲೇ ಬಿಡುಗಡೆ ಕೆಲಸದತ್ತ ಚಿತ್ರತಂಡ ಚಿತ್ತ ಹರಿಸಿದೆ. ಚಿತ್ರದಲ್ಲಿ ರಂಗಭೂಮಿ ಪ್ರತಿಭೆ ನಳೀನ್ ಕುಮಾರ್ ಮತ್ತು ಪವನ್ ಪುತ್ರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ “ಸಿಲ್ಲಿ ಲಲ್ಲಿ” ಖ್ಯಾತಿಯ ಶ್ರೀನಿವಾಸ್ ಗೌಡ್ರು, ಕಿರಣ ತೇಜ, ಕಿರಣ್ ರಾಜ್, ಕರಣ್ ಆರ್ಯನ್, ದೀಪ, ಖುಷಿ, ರಶ್ಮಿ ನಟಿಸಿದ್ದಾರೆ.

ವಿಶೇಷ ಪಾತ್ರದಲ್ಲಿ ನಂಜಪ್ಪ ಬೆನಕ ರಂಗಭೂಮಿ ಮತ್ತು ಹಾಸ್ಯ ಪಾತ್ರದಲ್ಲಿ ಮೋಟು ರವಿ, ಅಭಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ರಾಜು ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಬೆಂಗಳೂರು ಮತ್ತು ದೇವರಾಯನ ದುಗ೯ ಸುತ್ತ ಮುತ್ತ ಚಿತ್ರಿಕರಿಸಲಾಗಿದೆ. ಈ ಚಿತ್ರಕ್ಕೆ ಶಂಕರ್ ಅವರು ಕ್ಯಾಮೆರಾ ಹಿಡಿದರೆ, ಅವಿನಾಶ್ ಸಂಗೀತ ನೀಡಿದ್ದಾರೆ, ವೆಂಕಿ ಸಂಕಲನ ಮಾಡಿದ್ದಾರೆ. ಕೌರವ ವೆಂಕಟೇಶ್ ಸಾಹಸವಿದೆ. ಬಿಡುಗಡೆಗೆ ಜೋರು ಕೆಲಸ ನಡೆಯುತಿದ್ದು, ಇಷ್ಟರಲ್ಲೇ ಬಿಡುಗಡೆಯಾಗಲಿದೆ.

error: Content is protected !!