ಅದ್ದೂರಿ ಜೋಡಿ ಮತ್ತೆ ಒಂದಾಗಬೇಕು ಅನ್ನೋದು ಆಕ್ಷನ್ ಪ್ರಿನ್ಸ್ ಅಭಿಮಾನಿಗಳ ಬಹುದೊಡ್ಡ ಕನಸು. ಆ ಮಹಾಕನಸು ಕೊನೆಗೂ ಈಡೇರಿದೆ. ಧ್ರುವ ಹಾಗೂ ಎ.ಪಿ ಅರ್ಜುನ್ ಮತ್ತೆ ಒಂದಾಗಿದ್ದಾರೆ. ಒಂಭತ್ತು ವರ್ಷಗಳ ನಂತರ ಇಬ್ಬರು ಕೈ ಜೋಡಿಸಿದ್ದಾರೆ. ಅಭಿಮಾನಿ ದೇವರುಗಳ ಕನಸನ್ನ ಈಡೇರಿಸಿದ್ದಾರೆ.
ಅದ್ದೂರಿ ಧ್ರುವ ಡೆಬ್ಯೂ ಚಿತ್ರ. ನಾಯಕ ನಟನಾಗಿ ಬೆಳ್ಳಿ ಭೂಮಿ ಮೇಲೆ ಮೆರವಣಿಗೆ ಹೊರಟ ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲೇ ಭರವಸೆ ಮೂಡಿಸಿ ನಾಯಕನಟನ ಪಟ್ಟಕ್ಕೇರಿದ, ಸ್ಟಾರ್ ಸಿನಿಮಾಗಳಿಗೆ ಸೆಡ್ಡು ಹೊಡೆದು ಬೆಳ್ಳಿ ತೆರೆಮೇಲೆ ಗುಡುಗಿ ಸ್ಟಾರ್ ನಟ ಎನಿಸಿಕೊಳ್ಳೋಕೆ ಸಾಧ್ಯವಾಗಿಸಿದ ಮೊದಲ ಸಿನಿಮಾ.
ಇಂತಹ ಅದ್ಬುತ ಚಿತ್ರದ ಸಾರಥಿ ಎ. ಪಿ ಅರ್ಜುನ್. ಧ್ರುವ- ಅರ್ಜುನ್ ಕಾಂಬೋ ಮತ್ತೆ ಒಂದಾಗಿದೆ ಅಂದರೆ ನಿರೀಕ್ಷೆಗಳು ಗರಿಗೆದರುತ್ತವೆ.
ಅಭಿಮಾನಿ ವಲಯದಲ್ಲಿ ಮಾತ್ರವಲ್ಲ ಗಾಂಧಿ ನಗರದ ಮಂದಿ ಕೂಡ ಇವರಿಬ್ಬರ ಜುಗಲ್ ಬಂಧಿಯ ಮೇಲೆ ಕೂತೂಹಲ ಕೆರಳಿರುತ್ತೆ. ಬೆಳ್ಳಿತೆರೆ ಮಾತ್ರವಲ್ಲ ಬಾಕ್ಸ್ ಆಫೀಸ್ ಕೂಡ ಇವರಿಬ್ಬರು ಜೊತೆಯಾಗಿರುವ ಸುದ್ದಿಕೇಳಿ ಥ್ರಿಲ್ಲಾಗಿರುತ್ತೆ. ಆಕ್ಷನ್ ಪ್ರಿನ್ಸ್ ದುಬಾರಿಯಾಗೋದಕ್ಕೆ ಹೊರಟ್ದಿದ್ದರು. “ಪೊಗರು” ಡೈರೆಕ್ಟರ್ ಜೊತೆ ಮತ್ತೆ ಖದರ್ ತೋರಿಸುವುದಕ್ಕೆ ಹೊರಟಿದ್ದರು.
ಈ ನಡುವೆ ದುಬಾರಿಗೆ ಬ್ರೇಕ್ ಹಾಕಿ ಅದ್ದೂರಿ ಸಾರಥಿಯ ಜೊತೆ ಹೊರಟಿದ್ದಾರೆ. ಅಂದ್ಹಾಗೇ ಮತ್ತೆ ಒಂದಾಗಿರೋ ಅದ್ದೂರಿ ಜೋಡಿಗೆ ಉದಯ್ ಕೆ ಮೆಹ್ತಾ ಬಂಡವಾಳ ಹೂಡುತ್ತಿದ್ದಾರೆ. ಇವತ್ತು ಸಿನಿಮಾದ ಮುಹೂರ್ತ ನೆರವೇರಿದೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗ, ಚಿತ್ರದ ತಂತ್ರಜ್ಞರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.