ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ನಿಧನರಾದರು. ಅನಾರೋಗ್ಯದಲ್ಲಿ ಅವರಿಗೆ ಕಳೆದ ೨೦ ದಿನಗಳಿಂದಲೂ ಮನೆಯಲ್ಲೇ ಚಿಕಿತ್ಸೆ ಕೊಡಿಸುತ್ತಿದ್ದರು ನಟ ದುನಿಯಾ ವಿಜಯ್. ಬ್ರೈನ್ ಸ್ಟ್ರೋಕ್ ಆದ ಕಾರಣ ನಾರಾಯಣಮ್ಮ ತೀವ್ರ ಅನಾರೋಗ್ಯಕ್ಕೆ ಒಳಾಗಿದ್ದರು. ದಿನ ನಿತ್ಯವೂ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗುರುವಾರ ಚಿಕಿತ್ಸೆ ಫಲಿಸದೆ ನಾರಾಯಣಮ್ಮ ನಿಧನರಾಗಿದ್ದು, ಈ ವಿಚಾರವನ್ನು ನಟ ದುನಿಯಾ ವಿಜಯ್ ಅವರೇ ಖಚಿತ ಪಡಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕೊವಿಡ್ ನಿಂದ ಚೇತರಿಸಿಕೊಂಡಿದ್ದ ದುನಿಯಾ ವಿಜಯ್ ತಾಯಿ ನಾರಾಯಣಮ್ಮ, ಇನ್ನೇನು ಸಮಸ್ಯೆ ಬಗೆಹರಿಯಿತು ಎನ್ನುತ್ತಿರುವಾಗಲೇ ನಿಧನರಾಗಿದ್ದು, ನಟ ವಿಜಯ್ ಅವರನ್ನು ತೀವ್ರ ದುಃಖಕ್ಕೆ ತಳ್ಳಿದೆ. ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಚಿಕಿತ್ಸೆ ಕೊಡಿಸುತ್ತಿದ್ದಕ್ಕೂ ಕಾರಣ ಇದೆ ಅಂತ ದುನಿಯಾ ವಿಜಯ್ ಹೇಳಿದ್ದರು. ʼ ಅಮ್ಮನಿಗೆ ಆಸ್ಪತ್ರೆಗೆ ಹೋಗಲು ಇಷ್ಟವಿರಲಿಲ್ಲ.
ಹೀಗಾಗಿ ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸುತ್ತಿದ್ದೇನೆʼ ಅಂತ ಹೇಳಿಕೊಂಡಿದ್ದರು. ಆದರೆ ಗುರುವಾರ ಅವರು ನಿಧನರಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ. ದುನಿಯಾ ವಿಜಯ್ ಅವರ ತಾಯಿ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ನಡೆಯಲಿದೆ. ಆನೇಕಲ್ ನ ಕುಂಬಾರ ಹಳ್ಳಿಯಲ್ಲಿ ಅಂತಿಮ ವಿಧಿವಿಧಾನ ಮಾಡಲು ನಿರ್ಧಾರ ಮಾಡಿದ್ದಾಗಿ ಅವರು ತಿಳಿಸಿದ್ದಾರೆ