Categories
ಸಿನಿ ಸುದ್ದಿ

ಯಶ್ ನಟನೆಯ ರಾಕಿ ಚಿತ್ರಕ್ಕೆ 12ರ ಸಂಭ್ರಮ- ಪೂರ್ಣ ಪ್ರಮಾಣದ ಹೀರೋ ಆಗಿದ್ದ ಸಿನಿಮಾ

ನಾಗೇಂದ್ರ ಅರಸ್ ನಿರ್ದೇಶನದ ಎರಡನೇ‌ ಚಿತ್ರ

ಕನ್ನಡ ಚಿತ್ರರಂಗದಲ್ಲೀಗ ಸ್ಟಾರ್ ನಟರ ಸಾಲಲ್ಲಿ ಎದ್ದು ಕಾಣುವ ನಟ ಯಶ್, ಪೂರ್ಣ ಪ್ರಮಾಣದ ಹೀರೋ ಆಗಿ ನಟಿಸಿದ ಮೊದಲ ಚಿತ್ರ “ರಾಕಿ” ಚಿತ್ರಕ್ಕೆ ಈಗ ಹನ್ನೆರೆಡು ವರ್ಷದ ಸಂಭ್ರಮ.


ಯಶ್ ಅಭಿನಯದ “ರಾಕಿ” ಚಿತ್ರ ಅವರನ್ನು ಕನ್ನಡಕ್ಕೆ ಒಬ್ಬ ಪಕ್ಕಾ ನಟ ಮತ್ತು ಡ್ಯಾನ್ಸರ್ ಅನ್ನುವುದನ್ನು ಸಾಬೀತುಪಡಿಸಿತು. ಡಿಸೆಂಬರ್ 25, 2008ರಲ್ಲಿ “ರಾಕಿ” ಬಿಡುಗಡೆಯಾಗಿತ್ತು. ಇಂದಿಗೆ “ರಾಕಿ” ರಿಲೀಸ್ ಆಗಿ 12 ವರ್ಷಗಳು ಸಂದಿವೆ. ಯಶ್ ಈ ಒಂದು ದಶಕದಲ್ಲಿ ಇಡೀ ಭಾರತೀಯ ಚಿತ್ರರಂಗವೇ ಗುರುತಿಸುವಂತಹ ಚಿತ್ರ ಕೊಡುವ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಗಟ್ಟಿ ನೆಲೆ ಕಂಡಿದ್ದಾರೆ.


ಯಶ್ ಅವರನ್ನು ಪೂರ್ಣ ಪ್ರಮಾಣದ ನಾಯಕರನ್ನಾಗಿಸಿದ ಹೆಮ್ಮೆ ನಿರ್ದೇಶಕ ನಾಗೇಂದ್ರ ಅರಸ್ ಅವರದು. “ರಾಕಿ” ನಾಗೇಂದ್ರ ಅರಸ್ ನಿರ್ದೇಶನದ ಎರಡನೇ ಸಿನಿಮಾ.

ನಾಗೇಂದ್ರ ಅರಸ್

ಕೆಲವು ಸಿನಿಮಾಗಳು ಹೀಗೆ ಸುದ್ದಿಯಾಗುತ್ತವೆ ಅನ್ನುವುದಕ್ಕೆ ಇಂತಹ ಚಿತ್ರಗಳ ಮೂಲಕ ಬೆಳ್ಳಿತೆರೆಯಲ್ಲಿ ಹೆಸರು ಮಾಡಿದ ಹೀರೋಗಳು. ಯಶ್ ಯಶಸ್ವಿ ಚಿತ್ರಗಳ ಮೂಲಕ ನೆಲೆ ನಿಂತಿದ್ದಾರೆ. ಆ ಕಾರಣಕ್ಕೆ ಅವರ ಪೂರ್ಣ ಪ್ರಮಾಣದ ನಾಯಕರಾಗಿ ಅಭಿನಯಿಸಿದ “ರಾಕಿ” ಹನ್ನೆರಡು ವರ್ಷಗಳಾದರೂ ಸುದ್ದಿಯಾಗುತ್ತಿದೆ.

Categories
ಸಿನಿ ಸುದ್ದಿ

ಮುಖ ಮುಚ್ಚಿಕೊಂಡು ಬೀದಿ ಬೀದಿ ತಿರುಗಿದ ಬುಲ್‌ ಬುಲ್‌ ಬೆಡಗಿ‌!

 

ವೀರಂ ಚಿತ್ರಕ್ಕಾಗಿ ತಂಡದ ಜೊತೆ ಬೀದಿಗಿಳಿದರು ಡಿಂಪಲ್‌ ರಚಿತಾ

 

ಕನ್ನಡದ ನಟಿ ರಚಿತಾರಾಮ್‌ ಮುಖಕ್ಕೆ ಕೆಂಪು ವಸ್ತ್ರ ಕಟ್ಟಿಕೊಂಡು ಬೀದಿ ಬೀದಿ ಸುತ್ತುತ್ತಿದ್ದಾರೆ! ಅರೇ, ಹೀಗಂದಾಕ್ಷಣ ಇನ್ನೇನೋ ಕಲ್ಪನೆ ಮಾಡಿಕೊಳ್ಳಬೇಡಿ.

ರಚಿತಾರಾಮ್‌ ಬೀದಿ ಸುತ್ತಿರೋದು ನಿಜ. ಹಾಗಂತ ಇನ್ನೇನೋ ಕಾರಣಕ್ಕೆ ಅವರು ಬೀದಿ ಸುತ್ತಿಲ್ಲ. ಅವರು “ವೀರಂ” ಚಿತ್ರಕಕಾಗಿ ಕಾಸ್ಟ್ಯೂಮ್‌ ಖರೀದಿಸಲು  ಗುರುವಾರ ಕಮರ್ಷಿಯಲ್‌ ಸ್ಟ್ರೀಟ್‌ ಕಡೆ ಓಡಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದರಲ್ಲಿ ಮಾತನಾಡಿರುವ ರಚಿತಾರಾಮ್‌, “ನಾವು ಕಮರ್ಷಿಯಲ್‌ ಸ್ಟ್ರೀಟ್‌ಗೆ ಬಂದಿದ್ದೇವೆ. ಇದೊಂದು ಹೊಸ ಅನುಭವ. ಯಾರೂ ಕೂಡ ಕಂಡು ಹಿಡಿಯಲು ಆಗುತ್ತಿಲ್ಲ. ಎಲ್ಲರೂ ಮಾಸ್ಕ್‌ ಹಾಕಿಕೊಂಡಿದ್ದೇವೆ. ಇಡೀ ತಂಡ ನಮ್ಮೊಂದಿಗೆ ಇದೆ. ಖದರ್‌ ಕುಮಾರ್‌ ನಿರ್ದೇಶಕರು ನಮ್ಮ ಜೊತೆ ಇದ್ದಾರೆ.

ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಓಡಾಟ ನಡೆಸಿದ ರಚಿತಾರಾಮ್‌, ತಮಗೆ ಇಷ್ಟವಾದ, ಕಾಸ್ಟ್ಯೂಮ್‌ ಖರೀದಿಸಿದ್ದಾರೆ.  ಅವರು ಸುತ್ತಿದ ವಿಡಿಯೋ ಸದ್ಯಕ್ಕೆ ಹರಿದಾಡುತ್ತಿದೆ.

 

 

Categories
ಸಿನಿ ಸುದ್ದಿ

ಕನ್ನಡ ಹುಡುಗನ ಹಿಂದಿ ವೆಬ್‌ಸೀರೀಸ್‌ – ಮೇರಿ ಪಡೋಸಾನ್‌ಗೆ ಭರಪೂರ ಮೆಚ್ಚುಗೆ

ಒಂದೇ ದಿನ ಎಪಿಸೋಡ್‌ಗೆ ದಾಖಲೆ ವೀಕ್ಷಣೆ

 

ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಒಂದಷ್ಟು ನಿರೀಕ್ಷೆ ಹೆಚ್ಚಿರುವುದು ಗೊತ್ತೇ ಇದೆ. ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ ಮಾಲಿವುಡ್‌ ಕೂಡ ಈಗ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತಾಗಿದೆ. ಈಗಾಗಲೇ ಕನ್ನಡ ಸಿನಿಮಾಗಳು ಜೋರು ಸದ್ದು ಮಾಡಿರುವುದೇ ಪರಭಾಷಿಗರೂ ಕನ್ನಡದತ್ತ ತಿರುಗುತಿರುವುದು ಕಾರಣ. ಕನ್ನಡದ ಅನೇಕ ನಿರ್ದೇಶಕರು, ನಟ,ನಟಿಯರು ಪರಭಾಷೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಆ ಸಾಲಿಗೆ ಕನ್ನಡದ ಯುವ ನಿರ್ದೇಶಕರೊಬ್ಬರು ಬಾಲಿವುಡ್‌ನಲ್ಲಿ ಎಂಟ್ರಿಕೊಟ್ಟು, ಸೈ ಎನಿಸಿಕೊಂಡಿದ್ದಾರೆ.


ಹೌದು, ಧಾರಾವಾಡ ಮೂಲದ ಮಂಜು ನಂದನ್‌ ಈಗ ಬಾಲಿವುಡ್‌ನಲ್ಲಿ ವೆಬ್‌ಸೀರೀಸ್‌ ಮಾಡಿದ್ದಾರೆ. ಆ ಹೊಸ ವೆಬ್‌ಸೀರೀಸ್‌ಗೆ “ಮೇರಿ ಪಡೋಸಾನ್”‌ ಎಂದು ನಾಮಕರಣ ಮಾಡಲಾಗಿದೆ. ಸದ್ಯಕ್ಕೆ ಈ ವೆಬ್‌ ಸೀರೀಸ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಹತ್ತು ಎಪಿಸೋಡ್‌ಗಳ ಪೈಕಿ ಒಂದು ಎಪಿಸೋಡ್‌ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಸಾಕಷ್ಟು ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ತಮ್ಮ ನಿರ್ದೇಶನದ ಹಿಂದಿ ವೆಬ್‌ಸೀರೀಸ್‌ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ಮಂಜುನಂದನ್, “ಇದೊಂದು ಲವ್‌ ಕಾಮಿಡಿ ಜಾನರ್.‌ ಈಗಿನ ವೆಬ್‌ಸೀರೀಸ್‌ಗೆ ತಕ್ಕಂತಹ ಕಥೆಯನ್ನಿಟ್ಟುಕೊಂಡು ಮಾಡಲಾಗಿದೆ. ಈ ವೆಬ್‌ಸೀರೀಸ್‌ನಲ್ಲಿ ಬಾಲಿವುಡ್‌ ಕಲಾವಿದರು ಕಾಣಿಸಿಕೊಂಡಿದ್ದಾರೆ. ಮುಸ್ಕಾನ್‌ ಶರ್ಮ, ವಿಹಾನ್‌ ಗೋಯೆಲ್‌, ಸ್ವಾತಿ ಶರ್ಮ, ಜಸ್ವೀಲ್‌ ಅರೋರ ಇತರರು ನಟಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಈ ವೆಬ್‌ಸೀರೀಸ್‌ ಕೇವಲ ಒಂದು ಎಪಿಸೋಡ್‌ ಒಂದೇ ದಿನದಲ್ಲಿ ಎರಡು ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಇನ್ನು, ವಿಹಾನ್‌ ಗೋಯೆಲ್‌ ಕಥೆಯ ಜೊತೆಗೆ ಸಂಕಲನವನ್ನೂ ಮಾಡಿದ್ದಾರೆ. ನಾನು ನಿರ್ದೇಶನದ ಜೊತೆಗೆ ಪ್ರೊಡಕ್ಷನ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಶಿವು ನವಲಿಮಠ್‌ ಮತ್ತು ಪೌಲ್‌ ಕ್ಯಾಮೆರಾ ಹಿಡಿದಿದ್ದಾರೆ.


ಈ ವೆಬ್‌ಸೀರೀಸ್‌ ನಿರ್ದೇಶಕ ಮಂಜುನಂದನ್‌ ಬಗ್ಗೆ ಹೇಳುವುದಾದರೆ, ಈ ಮೊದಲು ಹಿಂದಿಯಲ್ಲಿ ಆಲ್ಬಂ ಸಾಂಗ್‌ ಮಾಡಿದ್ದರು. ನಂತರದ ದಿನಗಳಲ್ಲಿ, ಅಲ್ಲೇ ಒಂದಷ್ಟು ಮಂದಿಯ ಪರಿಚಯವಾಗಿ, ಬಾಲಿವುಡ್‌ ಜನರ ಸಂಪರ್ಕ ಬೆಳೆಸಿಕೊಂಡು ಈ ವೆಬ್‌ಸೀರೀಸ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೊಂದು ವಿಶೇಷವೆಂದರೆ, ಈ ವೆಬ್‌ಸೀರೀಸ್‌ ಅನ್ನು, ಕನ್ನಡದಲ್ಲೂ ಮಾಡುವ ಯೋಚನೆ ನಿರ್ದೇಶಕರಿಗಿದೆ. ಅಂದಹಾಗೆ, ಈ “ಮೇರಿ ಪಡೋಸಾನ್” ವೆಬ್‌ಸೀರೀಸ್‌ ಮಹಾರಾಷ್ಟ್ರದ ಅಂಬೋಲಿಯ ರೆಸಾರ್ಟ್‌ವೊಂದರಲ್ಲಿ ಹದಿನೈದು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಇನ್ನೊಂದು ವಿಶೇಷವೆಂದರೆ, ಕಲಾವಿದರನ್ನು ಹೊರತುಪಡಿಸಿ ಈ ವೆಬ್‌ಸೀರೀಸ್‌ನಲ್ಲಿ ಬಹುತೇಕ ಕನ್ನಡಿಗರೇ ಸೇರಿ ಕೆಲಸ ಮಾಡಿರುವುದು ವಿಶೇಷ.

Categories
ಸಿನಿ ಸುದ್ದಿ

ಥಿಯೇಟರ್‌ಗೆ ಶೇ.100 ಅವಕಾಶ ಕೊಡಿ – ಸರ್ಕಾರಕ್ಕೆ ನೆನಪಿರಲಿ ಪ್ರೇಮ್‌ ಮನವಿ

ಹೋಟೆಲ್‌, ಪಬ್‌, ರೆಸ್ಟೋರೆಂಟ್‌ಗೆ ಇಲ್ಲದ ನಿಯಮ ಚಿತ್ರರಂಗಕ್ಕೆ ಯಾಕೆ?

ಕೊರೊನಾ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಷ್ಟೇ ಅಲ್ಲ, ಬದುಕನ್ನೇ ಕಸಿದುಕೊಂಡಿದೆ. ಅನೇಕ ಕ್ಷೇತ್ರಗಳು ನೆಲಕಚ್ಚಿದ್ದು ಉಂಟು. ಸರ್ಕಾರ ಕೆಲವು ಉದ್ಯಮ ನಡೆಸಲು ಅವಕಾಶ ಕೊಟ್ಟರೆ, ಇನ್ನೂ ಕೆಲವು ಉದ್ಯಮಗಳಿಗೆ ನಿಯಮ ಸೂಚನೆ ನೀಡಿ ಅವಕಾಶ ಕೊಟ್ಟಿದೆ. ಅದರಲ್ಲಿ ಚಿತ್ರರಂಗವೂ ಒಂದು. ಎಲ್ಲಾ ಉದ್ಯಮಕ್ಕೂ ಸರ್ಕಾರ ದುಡಿಮೆಗೆ ಅವಕಾಶ ಕಲ್ಪಿಸಿದೆ. ಆದರೆ, ಚಿತ್ರರಂಗಕ್ಕೆ ಮಾತ್ರ ಶೇ.೫೦ರಷ್ಟು ಅವಕಾಶ ಕಲ್ಪಿಸಿದೆ. ಸ್ಟಾರ್‌ ಸಿನಿಮಾಗಳನ್ನು ಹೊರತುಪಡಿಸಿದರೆ ಚಿತ್ರಮಂದಿರಗಳು ಶೇ.೬೦, ೫೦ ಮಾತ್ರ ಭರ್ತಿ ಆಗುತ್ತವೆ. ಈಗ ಶೇ.೫೦ಕ್ಕೆ ಮಾತ್ರ ಅನುಮತಿ ಕೊಡಲಾಗಿದೆ.

ಸ್ಟಾರ್‌ ಸಿನಿಮಾ ರಿಲೀಸ್‌ ಆದರೂ, ಶೇ.೫೦ರಷ್ಟು ಮಾತ್ರ ಅವಕಾಶ. ಹೀಗಾಗಿ ದೊಡ್ಡ ಬಜೆಟ್‌ನ ಸಿನಿಮಾಗಳು ಬಿಡುಗಡೆ ಮಾಡಲು ಹಿಂಜರಿಯುತ್ತಿವೆ. ಕೋಟಿಗಟ್ಟಲೆ ಬಂಡವಾಳ ಹೂಡಿ, ಈಗ ರಿಲೀಸ್‌ ಮಾಡಿಬಿಟ್ಟರೆ, ಶೇ.೫೦ರಷ್ಟು ಜನ ಬರಲು ಅವಕಾಶವಿದೆ. ಇನ್ನರ್ಧ ನಿರ್ಮಾಪಕರಿಗೂ ನಷ್ಟ. ಥಿಯೇಟರ್‌ ಮಾಲೀಕರಿಗೂ ಸಮಸ್ಯೆ. ಹೀಗಾಗಿ, ಶೇ.೧೦೦ ರಷ್ಟು ಅನುಮತಿ ಕೊಟ್ಟಾಗಲಷ್ಟೇ ಸ್ಟಾರ್‌ ಸಿನಿಮಾಗಳು ರಿಲೀಸ್‌ ಆಗುತ್ತವೆ. ಉಳಿದಂತೆ ಸಣ್ಣ ಬಜೆಟ್‌ನ ಸಿನಿಮಾಗಳು, ಹೊಸಬರ ಚಿತ್ರಗಳು ಕೂಡ ಥಿಯೇಟರ್‌ ಕಡೆ ಮುಖ ಮಾಡುತ್ತವೆ.

ಈ ನಿಟ್ಟಿನಲ್ಲಿ ನಟ ನೆನಪಿರಲಿ ಪ್ರೇಮ್‌ ಕೂಡ ಸರ್ಕಾರಕ್ಕೆ ಒಂದಷ್ಟು ಮನವಿ ಮಾಡಿದ್ದಾರೆ. “ಸರ್ಕಾರ ಶೇ.೫೦ರಷ್ಟು ಮಾತ್ರ ಚಿತ್ರಮಂದಿರಕ್ಕೆ ಅನುಮತಿ ನೀಡಿದೆ. ಹೀಗಾಗಿ ಮನರಂಜನೆ ಕ್ಷೇತ್ರ ಮಂಕಾಗಿದೆ. ಬೇರೆ ಉದ್ಯಮಗಳಿಗೆ ಪೂರ್ಣ ಅನುಮತಿ ನೀಡಲಾಗಿದೆ. ಆದರೆ, ಚಿತ್ರರಂಗಕ್ಕೆ ಆ ಅವಕಾಶವಿಲ್ಲ. ಬಾರ್‌, ಪಬ್‌, ರೆಸ್ಟೋರೆಂಟ್‌, ಹೋಟೆಲ್‌ಗಳಿಗೆ ಇಲ್ಲಿದ ನಿಯಮ ಚಿತ್ರರಂಗಕ್ಕೆ ಯಾಕೆ? ಈ ಫಿಫ್ಟಿ ಎಂಬ ಕಾನ್ಸೆಪ್ಟ್‌ನಿಂದ ಚಿತ್ರರಂಗ ಇನ್ನೂ ಚೇತರಿಸಿಕೊಳ್ಳಲು ಆಗಿಲ್ಲ. ಸರ್ಕಾರ ಶೇ.೧೦೦ರಷ್ಟು ಅನುಮತಿ ಕೊಟ್ಟರೆ, ಚಿತ್ರರಂಗ ಖಂಡಿತವಾಗಲೂ ಮೊದಲಿನಿಂತೆ ಎದ್ದು ನಿಲ್ಲುತ್ತದೆ. ಹಾಗಾಗಿ, ಇತ್ತ ಗಮನಿಸುವ ಮೂಲಕ ಚಿತ್ರೋದ್ಯಮದ ಕಡೆಯೂ ಒಲವು ತೋರಬೇಕು ಎಂದು ನೆನಪಿರಲಿ ಪ್ರೇಮ್‌ ಮನವಿ ಮಾಡಿದ್ದಾರೆ.


ಪ್ರೇಮ್‌ ಅಭಿನಯದ “ಪ್ರೇಮಂ ಪೂಜ್ಯಂ” ಚಿತ್ರ ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಪ್ರೇಮ್‌ ಅವರಿಗೂ ಈ ಚಿತ್ರ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಅವರೇ ಹೇಳುವಂತೆ, ಅದೊಂದು ಹೊಸ “ಗೀತಾಂಜಲಿ” ಅನ್ನುತ್ತಾರೆ. “ಪ್ರೇಮಂ ಪೂಜ್ಯಂ” ಕಾಯಾ ವಾಚಾ ಮನಸ ಮಾಡಿರುವ ಚಿತ್ರ. ಸದ್ಯಕ್ಕೆ ಚೆನೈನಲ್ಲಿ ಎಸ್‌ಎಫ್‌ಎಕ್ಸ್‌ ಕೆಲಸ ನಡೆಯುತ್ತಿದೆ. ಚಿತ್ರದ ಮೇಲೆ ಸಾಕಷ್ಟು ನಂಬಿಕೆ ಇರುವುದಾಗಿ ಹೇಳುವ ಪ್ರೇಮ್‌ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಕೊರೊನಾ ಹಾವಳಿ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾದ ಬಳಿಕ ಹೊಸ ಘೋಷಣೆ ಮಾಡುವ ಉತ್ಸಾಹದಲ್ಲೂ ಇದ್ದಾರೆ.

Categories
ಸಿನಿ ಸುದ್ದಿ

ಕಾಸರವಳ್ಳಿ ಚಿತ್ರಕ್ಕೆ ರೋಮ್‌ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಸಿನಿಮಾಗೆ ಸಿಕ್ಕ ಗೌರವ

 

ಗಿರೀಶ್‌ ಕಾಸರವಳ್ಳಿ ನಿರ್ದೇಶನದ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಚಿತ್ರಕ್ಕೆ ಪ್ರತಿಷ್ಠಿತ ರೋಂ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಫರ್ಧಾತ್ಮಕ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ. ರೋಂನಲ್ಲಿ ನಡೆದ ಏಷ್ಯಾಟಿಕಾ ಚಿತ್ರೋತ್ಸವದಲ್ಲಿ ಡಿಸೆಂಬರ್‌ ೨೧ರಂದು ಈ ಸಿನಿಮಾ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಗಿದೆ.

ಗಿರೀಶ್‌ ಕಾಸರವಳ್ಳಿ

“ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಚಿತ್ರ ಖ್ಯಾತ ಸಾಹಿತಿ, ಗೀತ ರಚನೆಕಾರ ಜಯಂತ್‌ ಕಾಯ್ಕಿಣಿ ಅವರ “ಹಾಲಿನ ಮೀಸೆ” ಕಥೆ ಆಧರಿಸಿದೆ. ಆ ಕಥೆಯಲ್ಲಿ ಬರುವ ಪಾತ್ರವೊಂದನ್ನುಬೆಳೆಸಿ, ಸಮಕಾಲೀನ ಸಾಮಾಜಿಕ ಜ್ವಲಂತ ದ್ವಂದ್ವವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ದಾಸ ಶ್ರೇಷ್ಠ ಪುರಂದರ ದಾಸರ ಹಾಡೊಂದರ ಶೀರ್ಷಿಕೆ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಈ ದ್ವಂದ್ವವನ್ನು ಅತ್ಯಂತ ಮಾರ್ಮಿಕವಾಗಿ ಸೂಚಿಸುತ್ತದೆ. ಸುಖವನ್ನು ಅರಸುತ್ತಾ ಹೋಗುವ ಈ ಕಾಲದ ನಮ್ಮ ಪಯಣ ಮನಶಾಂತಿಗೆ ಎರವಾಗುತ್ತಿದೆಯೇ ಅನ್ನುವ ಈ ದಾಸರ ಪದದಲ್ಲಿ ವ್ಯಕ್ತವಾಗುವ ಆತಂಕವೂ ಚಿತ್ರದ ಸತ್ವವಾಗಿದೆ.

ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು, ೬೦ರ ದಶಕದ ಕನಸು ಮತ್ತು ಈ ಕಾಲದ ತಳಮಳ ಇವೆರೆಡೂ ಕಥಾನಾಯಕನ ಮನೋಗತಿಯನ್ನು ರೂಪಿಸುತ್ತಿರುವ ನೆಲೆಗಳು. ಕಾಲಘಟ್ಟ ಭಿನ್ನವಾದಂತೆ ಪರಿಸರವೂ ಬದಲಾಗುತ್ತದೆ ಅನ್ನೋದೇ ಕಥೆ.  “ದ್ವೀಪ” ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಹೆಚ್.ಎಂ.ರಾಮಚಂದ್ರ ಹಾಲ್ಕೆರೆ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಎಸ್.ಆರ್.ರಾಮಕೃಷ್ಣ ಅವರ ಸಂಗೀತವಿದೆ. ಎಸ್.ಗುಣ ಶೇಖರನ್‌ ಸಂಕಲನವಿದೆ. ಅಪೂರ್ವ ಕಾಸರವಳ್ಳಿ ಜಂಟಿ ನಿರ್ದೇಶನವಿದೆ. ಅನನ್ಯ ಕಾಸರವಳ್ಳಿ ಅವರ ವಸ್ತ್ರ ವಿನ್ಯಾಸವಿದ್ದು, ಸಾವಂತ್‌, ಕಿರಣ್‌ ಕುಮಾರ್‌ ಹಾಗೂ ಯಶವಂತ ಯಾದವ್‌ ಅವರ ಸಹನಿರ್ದೇನವಿದೆ. ಬಾಸುಮ ಕೊಡಗು ಅವರ ಕಲಾನಿರ್ದೇಶನ ರಮೇಶ್‌ ಬಾಬು ಅವರ ಪ್ರಸಾಧನ ಇದೆ. ಮೋಹನ್‌ ಕಾಮಾಕ್ಷಿ ಅವರ ತಾಂತ್ರಿಕ ನೆರವು ಚಿತ್ರಕ್ಕಿದೆ.

ಶಿವಕುಮಾರ್‌, ನಿರ್ಮಾಪಕ

 

ಚಿತ್ರದಲ್ಲಿ ದ್ರುಶಾ ಕೊಡಗು, ಆರಾಧ್ಯ, ಪ್ರವರ್ಥ ರಾಜು ಮತ್ತ ನಲ್ಮೆ. ಉಳಿದ ಮುಖ್ಯ ಪಾತ್ರಗಳಲ್ಲಿ ಪವಿತ್ರ, ಮಾಲತೇಶ್‌, ಕೆ.ಜಿ.ಕೃಷ್ಣಮೂರ್ತಿ, ಚೆಸ್ವಾ, ರಶ್ಮಿ, ಬಿ.ಎಂ.ವೆಂಕಟೇಶ್‌, ಪುಷ್ಪಾ ರಾಘವೇಂದ್ರ, ಸುಜಾತ ಶೆಟ್ಟಿ ಇತರರು ಇದ್ದಾರೆ.
೨೦೧೦ ರಲ್ಲಿ “ಕೂರ್ಮಾವತಾರ” ಚಿತ್ರದ ಬಳಿಕ ಸಾಕ್ಷ್ಯಚಿತ್ರ ನಿರ್ಮಾಣದತ್ತ ಮುಖಮಾಡಿದ್ದ ಗಿರೀಶ್‌ ಕಾಸರವಳ್ಳಿ ಅವರು ಹತ್ತು ವರ್ಷಗಳ ಬಳಿಕ ಒಂದೊಳ್ಳೆಯ ಸಿನಿಮಾ ಮಾಡಿದ್ದು, ಇದು ಅವರ ೧೫ನೇ ಚಿತ್ರ. ಇನ್ನು, ಹಲವಾರು ಯಶಸ್ವಿ ಧಾರಾವಾಹಿ ನಿರ್ಮಿಸಿರುವ ನಿರ್ಮಾಪಕ ಎಸ್.ವಿ.ಶಿವಕುಮಾರ್‌ ಅವರ ಮೂರನೇ ಸಿನಿಮಾ ಇದು. ಸಿನಿಮಾ ರೆಡಿಯಾಗಿದ್ದು, ಕೊರೊನಾ ಸಮಸ್ಯೆ ಬಗೆಹರಿದ ಬಳಿಕ ಚಿತ್ರಮಂದಿರದಲ್ಲಿ ತೆರೆಗೆ ಬರಲಿದೆ.

 

Categories
ಸಿನಿ ಸುದ್ದಿ

ಕನ್ನಡಕ್ಕೆ ಬಂದ ಶಿಲ್ಪಾಶೆಟ್ಟಿ! ಶುಗರ್‌ ಫ್ಯಾಕ್ಟರಿ ಸೇರಿದ ಗ್ಲಾಮರ್‌ ಬೆಡಗಿ

ಜನವರಿ 28ರಿಂದ ಶೂಟಿಂಗ್‌ ಶುರು

ಶಿಲ್ಪಾ ಶೆಟ್ಟಿ

“ಲವ್‌ ಮಾಕ್ಟೇಲ್‌” ಖ್ಯಾತಿಯ ಕೃಷ್ಣ ಅಭಿನಯದ “ಶುಗರ್‌ ಫ್ಯಾಕ್ಟರಿ” ಸಿನಿಮಾ ಬಗ್ಗೆ ಗೊತ್ತೇ ಇದೆ. ಚಿತ್ರವನ್ನು ದೀಪಕ್‌ ಅರಸ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಮೂವರು ನಾಯಕಿಯರು. ಈಗಾಗಲೇ ಸೊನಾಲ್ ಮಾಂತೆರೊ ಹಾಗೂ ಅದ್ವಿತಿ ಶೆಟ್ಟಿ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ಅವರ ಜೊತೆಗೆ ಇನ್ನೊಬ್ಬ ನಾಯಕಿಯ ಆಯ್ಕೆ ಮಾತ್ರ ಆಗಿರಲಿಲ್ಲ. ಈಗ ಮೂರನೇ ನಾಯಕಿಯೂ ಸಿಕ್ಕಾಗಿದೆ. ಅದು ಬೇರಾರೂ ಅಲ್ಲ, ಶಿಲ್ಪಾಶೆಟ್ಟಿ. ಅರೇ, ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ನಾಯಕಿಯಾಗಿ ಬರುತ್ತಿದ್ದಾರಾ? ಈ ಪ್ರಶ್ನೆ ಎದುರಾಗಬಹುದು. ಆದರೆ, ಆ ಶಿಲ್ಪಾಶೆಟ್ಟಿ ಅಲ್ಲವೇ ಅಲ್ಲ. “ಶುಗರ್‌ ಫ್ಯಾಕ್ಟರಿ”ಗೆ ಎಂಟ್ರಿ ಕೊಡುತ್ತಿರುವ ನಾಯಕಿಯ ಹೆಸರಿದು. ಶಿಲ್ಪಾಶೆಟ್ಟಿ ಈ ಸಿನಿಮಾಗೆ ನಾಯಕಿಯಾಗಿದ್ದು, ಈಗಾಗಲೇ ಕನ್ನಡ, ತುಳು ಭಾಷೆಯ ಕೆಲವು ಚಿತ್ರಗಳಲ್ಲಿ ಹಾಗೂ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಜನವರಿ 28ರಿಂದ ಬೆಂಗಳೂರಿನಲ್ಲಿ “ಶುಗರ್‌ ಫ್ಯಾಕ್ಟರಿ” ಚಿತ್ರೀಕರಣ ಆರಂಭವಾಗಲಿದೆ. ಅಂದಹಾಗೆ, ಈ ಚಿತ್ರ ಬಾಲಮಣಿ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಗಿರೀಶ್. ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌ ಈ ಚಿತ್ರದಲ್ಲಿ ಏಳು ಹಾಡುಗಳಿದ್ದು, ಚೇತನ್ ಕುಮಾರ್, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಇತರರು ಸಾಹಿತ್ಯ ಬರೆದಿದ್ದಾರೆ. ಕಬೀರ್ ರಫಿ ಸಂಗೀತ ನೀಡುತ್ತಿರುವ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ.

Categories
ಸಿನಿ ಸುದ್ದಿ

ಮತ್ತೆ ಕೃಷ್ಣನ್‌ ಜಪ..! ಅಜೇಯ್‌ರಾವ್‌ಗೆ ಸ್ಟೋರಿ ಬರೆದ ಶಶಾಂಕ್‌

ಗುರುದೇಶಪಾಂಡೆ ನಿರ್ಮಾಣದಲ್ಲಿ ಶಂಕರ್‌ ನಿರ್ದೇಶನ

ಅಜೇಯ್‌ರಾವ್

ನಟ ಅಜೇಯ್‌ರಾವ್ ಅಂದಾಕ್ಷಣ, ನೆನಪಾಗೋದೇ “ಕೃಷ್ಣ”. ಹೌದು, “ಕೃಷ್ಣನ್‌ ಲವ್‌ ಸ್ಟೋರಿ” ದೊಡ್ಡ ಹಿಟ್‌ ಕೊಟ್ಟ ಚಿತ್ರ. ಶಶಾಂಕ್‌ ಹಾಗೂ ಅಜೇಯ್‌ರಾವ್‌ ಕಾಂಬಿನೇಷನ್‌ನಲ್ಲಿ “ಕೃಷ್ಣನ್‌ ಲವ್‌ ಸ್ಟೋರಿ”, “ಕೃಷ್ಣ ಲೀಲಾ” ಚಿತ್ರಗಳು ಬಂದಿವೆ. ಈ ಮೂರು ಸಿನಿಮಾಗಳು ಯಶಸ್ವಿಯಾಗಿವೆ. ಇದೇ ಸೀರಿಸ್‌ನಲ್ಲೇ ಚಿತ್ರ ಬಂದಿದ್ದೂ ಉಂಟು. ಈಗ ಮತ್ತೊಮ್ಮೆ “ಕೃಷ್ಣನ್”‌ ಜೋಡಿ ಒಂದಾಗುತ್ತಿದೆ ಎಂಬುದೇ ಈ ಹೊತ್ತಿನ ವಿಶೇಷ.

ಶಶಾಂಕ್‌

ಹೌದು, ಈಗ ನಿರ್ದೇಶಕ ಶಶಾಂಕ್‌ ಅವರು ನಟ ಅಜೇಯ್‌ರಾವ್‌ ಅವರಿಗಾಗಿಯೇ ಹೊಸ ಕಥೆಯೊಂದನ್ನು ರೆಡಿ ಮಾಡಿದ್ದಾರೆ. ಈ ಚಿತ್ರದಲ್ಲಿ ಅಜೇಯ್‌ ರಾವ್‌ ಮತ್ತೆ ಕೃಷ್ಣನಾಗಿ ಕಾಣಿಸಿಕೊಳ್ಳಲಿದ್ದಾರೆಯೇ? ಹೀಗೊಂದು ಪ್ರಶ್ನೆ ಮತ್ತು ಕುತೂಹಲವಿದೆ. ಆ ಚಿತ್ರಕ್ಕೆ ಇನ್ನೂ ನಾಮಕರಣ ಮಾಡಿಲ್ಲ. ಇದೂ ಕೂಡ “ಕೃಷ್ಣ”ನ್‌ ಸರಣಿ ಇರಬಹುದೇನೋ ಎಂಬ ಸಣ್ಣ ನಿರೀಕ್ಷೆಯೂ ಇದೆ. ಅದೇನೆ ಇದ್ದರೂ ಚಿತ್ರದ ಶೀರ್ಷಿಕೆ ಅನಾವರಣಗೊಂಡಾಗ ಮಾತ್ರವಷ್ಟೇ, ಎಲ್ಲವೂ ಹೊರಬೀಳಲಿದೆ.

ಗುರುದೇಶಪಾಂಡೆ

ಜ.೨೪ರಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಶಶಾಂಕ್‌ ಹಾಗೂ ಅಜೇಯ್‌ರಾವ್‌ ಜೋಡಿಯ ಮೋಡಿ ಒಂದಷ್ಟು ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರಕ್ಕೆ ಜನಪ್ರಿಯ ನಾಯಕಿಯೊಬ್ಬರು ಬರುತ್ತಿದ್ದು, ಚಿತ್ರತಂಡ ಆ ನಾಯಕಿಯ ಹೆಸರನ್ನು ಗೌಪ್ಯವಾಗಿಸಿದೆ. ಮುಹೂರ್ತ ದಿನ ಆ ನಟಿ ಯಾರೆಂಬುದನ್ನು ಚಿತ್ರತಂಡ ಬಹಿರಂಗಪಡಿಸಲಿದೆ. ಈ ಚಿತ್ರಕ್ಕೆ ಶಂಕರ್‌ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಚಿತ್ರ. ಇನ್ನು, ಶಂಕರ್‌, “ಜಂಟಲ್‌ ಮೆನ್‌”, “ಪಡ್ಡೆಹುಲಿ” “ರುದ್ರ ತಾಂಡವ” ಸೇರಿದಂತೆ ಗುರುದೇಶಪಾಂಡೆ ಅವರ ಹಲವು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಶಂಕರ್‌

ಇನ್ನು, ಜಿ ಸಿನಿಮಾಸ್‌ ಬ್ಯಾನರ್‌ನಲ್ಲಿ ಚಿತ್ರ ತಯಾರಾಗುತ್ತಿದ್ದು, ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಈ ಬ್ಯಾನರ್‌ನಲ್ಲಿ “ಜಂಟಲ್‌ಮನ್‌” ಸಿನಿಮಾ ಕೊಟ್ಟಿರುವ ನಿರ್ಮಾಪಕರು, “ಪೆಂಟಗಾನ್‌” ಸಿನಿಮಾವನ್ನೂ ನಿರ್ಮಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರು, ನಿರ್ಮಾಪಕರು ಈ ಹಿಂದೆ ಅಜೇಯ್‌ರಾವ್‌ ಜೊತೆ “ರೈನ್‌ಬೋ” ಸಿನಿಮಾ ಮಾಡಬೇಕಿತ್ತು. ಆ ಚಿತ್ರವನ್ನು ಮುಂದಕ್ಕೆ ಹಾಕಿ, ಈ ಸಿನಿಮಾವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.
ಹೊಸ ಸಿನಿಮಾದ ಕಥೆಯೇ ಒಂದು ರೀತಿ ವಿಭಿನ್ನವಾಗಿದೆ. ಈಗಿನ ಟ್ರೆಂಡ್‌ಗೆ ತಕ್ಕ ಕಥೆ ಮಾಡಲಾಗಿದೆ. ಆ ಕಾರಣಕ್ಕೆ ಗುರುದೇಶಪಾಂಡೆ ತಮ್ಮ “ರೈನ್‌ಬೋ” ಚಿತ್ರವನ್ನು ಮುಂದಕ್ಕೆ ಹಾಕಿ ಹೊಸ ಚಿತ್ರಕ್ಕೆ ಕೈ ಹಾಕಿದ್ದಾಗಿ ಹೇಳುತ್ತಾರೆ ಅವರು. ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಶಶಾಂಕ್‌ ಅವರ ಕಥೆ. ಜೊತೆಗೆ ಆಜೇಯ್‌ರಾವ್‌ ಎಂಬ ಸಕ್ಸಸ್‌ ನಟ. ಇನ್ನು, ಶಂಕರ್‌ ಈ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ಆ ಉಪಕರಣಗಳನ್ನ ಇನ್ನೆಲ್ಲಿ ಬಿಸಾಡುತ್ತಾರೋ?- ನಿರ್ದೇಶಕರ ಸಂಘಕ್ಕಾದ ಘಟನೆಗೆ ಸಾಧು ಬೇಸರ

 

ಸಂಘವನ್ನು ಕೆಳಮಟ್ಟಕ್ಕೆ ತಂದಿದ್ದು ನೋವಾಗಿದೆ

ಕನ್ನಡದ ಹೆಸರಾಂತ ನಿರ್ದೇಶಕ ಪುಟ್ಟಣ ಕಣಗಾಲ್ ಹುಟ್ಟು ಹಾಕಿದ ‘ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ’ದ ಘನತೆ, ಗೌರವ ಬೀದಿಗೆ ಬಿದ್ದ ಸುದ್ದಿಯನ್ನು ಮೊದಲು ಬ್ರೇಕ್‌ ಮಾಡಿದ್ದು “ಸಿನಿ ಲಹರಿ” ಸುದ್ದಿ ಹರಡುತ್ತಿದ್ದಂತೆಯೇ ಅನೇಕ ನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಚಿತ್ರರಂಗದ ಹಲವು ಗಣ್ಯರು ಬೇಸರ ಹೊರಹಾಕಿದ್ದುಂಟು. ನಟ ಕಮ್‌ ನಿರ್ದೇಶಕ ಸಾಧುಕೋಕಿಲ ಅವರೂ ಸಹ ನಿರ್ದೇಶಕರ ಸಂಘಕ್ಕೆ ಬಂದ ಪರಿಸ್ಥಿತಿ ಕುರಿತು ತೀವ್ರ ಬೇಸರ ಹೊರಹಾಕಿದ್ದಾರೆ. ಹೌದು, ಅವರು ನಿರ್ದೇಶಕ ನಾಗೇಂದ್ರ ಅರಸ್‌ ಅವರಿಗೆ ಕಳುಹಿಸಿರುವ ಆಡಿಯೋವೊಂದು ಜೋರಾಗಿಯೇ ಹರಿದಾಡುತ್ತಿದೆ. ಆ ಆಡಿಯೋದಲ್ಲಿ ಸಾಧುಕೋಕಿಲ ಒಂದಷ್ಟು ಬೇಸರ ವ್ಯಕ್ತಪಡಿಸಿರುವುದು ಗೊತ್ತಾಗಿದೆ. ಆ ಆಡಿಯೋದಲ್ಲಿ ಸಾಧುಕೋಕಿಲ ಮಾತನಾಡಿರುವ ಸಂಕ್ಷಿಪ್ತ ವಿವರ ಇಲ್ಲಿದೆ.


“ನಾಗೇಂದ್ರ ಅರಸ್‌, ಚಿತ್ರರಂಗದ ಮಾನ ಮರ್ಯಾದೆ ಅಷ್ಟೇ ಅಲ್ಲ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಕಚೇರಿಯೊಳಗಿದ್ದ ಎಲ್ಲಾ ಪೀಠೋಪಕರಣಗಳನ್ನು ರೋಡ್‌ಗೆ ಹಾಕಲಾಗಿದೆ. ಇದಕ್ಕಿಂತ ದೊಡ್ಡ ಅವಮಾನವಿಲಲ್.‌ ದೊಡ್ಡ ದೊಡ್ಡ ನಿರ್ದೇಶಕರು ಕಟ್ಟಿದ, ಪಾಲಿಸಿದ ಸಂಘ ಇಂದು ಬೀದಿಗೆ ಬಂದಿದೆಯೆಂದರೆ ಹೇಗೆ? ಯಾರೋ ಬಾಡಿಗೆ ಕಟ್ಟದಿದ್ದರಿಂದ ಆ ಬಾಡಿಗೆ ಮನೆ ಓನರ್‌ ನಿರ್ದೇಶಕರ ಸಂಘದ ಉಪಕರಣಗಳನ್ನೆಲ್ಲಾ ರೋಡ್‌ಗೆ ಬೀಸಾಕುತ್ತಾರೆ ಅಂದರೆ ಏನರ್ಥ. ಅಲ್ಲಿ ನಾಲ್ಕೈದು ಜನ ಹುಡುಗರು ನಿಂತು ಬಾಯಿ ಬಡ್ಕೋತ್ತಾ ಇದಾರೆ. ವಿ.ನಾಗೇಂದ್ರ ಪ್ರಸಾದ್‌ ಮುಂಬೈನಲ್ಲಿದ್ದಾರಂತೆ. ಟೇಶಿ ವೆಂಕಟೇಶ್‌ ಏನ್‌ ಮಾಡ್ತಾ ಇದ್ದಾರೋ ಗೊತ್ತಿಲ್ಲ. ಇನ್ನು, ಆ ಸಾಮಾನುಗಳನ್ನು ಎಲ್ಲಿ ಬಿಸಾಕುತ್ತಾರೋ, ನಿರ್ದೇಶಕರ ಸಂಘವನ್ನು ಈ ಕೆಳಮಟ್ಟಕ್ಕೆ ತಂದು ಬಿಸಾಡಿದ್ರಲ್ಲ ಛೇ…” ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಸಾಧು.


2018 ರಲ್ಲಷ್ಟೇ ವಿಜಯನಗರದಿಂದ ನಾಗರಬಾವಿಗೆ ಸ್ಥಳಾಂತರವಾಗಿದ್ದ ಸಂಘದ ಕಚೇರಿಯ ಕಟ್ಟಡದ ಬಾಡಿಗೆ ಕಟ್ಟದ ಪರಿಣಾಮ, ಕಟ್ಟಡದ ಮಾಲೀಕ ಸಂಘದ ವಿರುದ್ಧ ಪೊಲೀಸ್ ಠಾಣೆಯ ಮೇಟ್ಟೆಲೇರಿದ್ದಲ್ಲದೆ, ಕಚೇರಿಯಲ್ಲಿನ‌ ಪೀಠೋಪಕರಣ ಹೊರ ಹಾಕಿ, ಸಂಘದ ಪದಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಹಜವಾಗಿಯೇ ಈ ಘಟನೆ ಸಂಘದ ಹಲವು ಪದಾಧಿಕಾರಿಗಳಲ್ಲಿ ತೀವ್ರ ಬೇಸರ ತರಿಸಿದೆ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘವು ಇದುವರೆಗೂ ಕಾಪಾಡಿಕೊಂಡು‌ ಬಂದಿದ್ದ ಘನತೆ, ಗೌರವ ವಿನಾಕಾರಣ ಬೀದಿಗೆ ಬಂದಿರುವುದು ತೀವ್ರ ನೋವುಂಟು ಮಾಡಿದೆ ಅಂತ ಸಂಘದ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ ಸಂಘದ ಕಚೇರಿ ಬಾಡಿಗೆ, ವಾಟರ್ ಬಿಲ್, ಕರೆಂಟ್ ಬಿಲ್ ಬ್ಯಾಲೆನ್ಸ್ ಕಳೆದ‌ ಡಿಸೆಂಬರ್ ತಿಂಗಳಿನಿಂದಲೇ ಇದೆ ಎನ್ನಲಾಗಿದೆ. ಕೊರೋನಾ ಸಮಸ್ಯೆ ನಿರ್ದೇಶಕರು ಸೇರಿದಂತೆ ಇಡೀ‌ ಚಿತ್ರೋದ್ಯಮವನ್ನು ತೀವ್ರವಾಗಿ ಕಾಡಿದ್ದು ಸುಳ್ಳಲ್ಲ. ಕೆಲಸ ಇಲ್ಲದೆ ಮನೆ ಹಿಡಿದ ನಿರ್ದೇಶಕರ ಸಂಘದ ಪಧಾಧಿಕಾರಿಗಳ ನೆರವಿಗೆ ಸಂಘ‌ ನಿಂತುಕೊಂಡಿತು. ಈ ಬೆಳವಣಿಗೆ ಸಂಘದ ಆರ್ಥಿಕ‌ ಮುಗ್ಗಟ್ಟುಗೆ ಕಾರಣ ಎನ್ನಲಾಗಿದೆ.

 

Categories
ಸಿನಿ ಸುದ್ದಿ

ಕ್ರಿಸ್ಮಸ್‌ಗೆ ಅವನು ಇವಳು! ನಡೆದ ಘಟನೆ ಮರೆತು ಮುಂದೆ ಸಾಗು ಅಂತಾರೆ ಹೊಸಬರು

ಅವನಲ್ಲಿ ಇವಳಿಲ್ಲಿ ಚಿತ್ರದಲ್ಲೊಂದು ವಿಶೇಷ ಸಂದೇಶ

ಜಾಹ್ನವಿ, ನಾಯಕಿ

ಕೊರೊನಾ ಹಾವಳಿ ನಡುವೆಯೂ ಚಿತ್ರರಂಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಹೊಸಬರ ಜೊತೆ ಹಳಬರೂ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಆ ನಿಟ್ಟಿನಲ್ಲಿ ಹೊಸಬರ “ಅವನಲ್ಲಿ ಇವಳಿಲ್ಲಿ” ಚಿತ್ರ ಕೂಡ ತೆರೆಗೆ ಬರಲು ಸಜ್ಜಾಗಿದೆ. ಡಿಸೆಂಬರ್‌ ೨೫ರ ಕ್ರಿಸ್ಮಸ್‌ಗೆ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಸಂದೇಶ್‌ ಕೃಷ್ಣಮೂರ್ತಿ ನಿರ್ದೇಶಕರಾಗುತ್ತಿದ್ದಾರೆ. ಮೂಲತಃ ತೀರ್ಥಹಳ್ಳಿಯವರಾದ ಸಂದೇಶ್‌ ಕೃಷ್ಣಮೂರ್ತಿ ಅವರಿಗೆ ಇದು ಮೊದಲ ಸಿನಿಮಾ ಆಗಿದ್ದರೂ, ಸಾಕಷ್ಟು ಅನುಭವ ಇದೆ.

ದುನಿಯಾ ರಶ್ಮಿ, ನಾಯಕಿ

ಕಳೆದ ಹದಿನೈದು ವರ್ಷಗಳಿಂದಲೂ ಇಂಡಸ್ಟ್ರಿಯಲ್ಲಿರುವ ಸಂದೇಶ್‌ ಕೃಷ್ಣಮೂರ್ತಿ, ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ಆರಂಭದಲ್ಲಿ “ಪ್ರೀತಿ ಇಲ್ಲದ ಮೇಲೆ” ಧಾರಾವಾಹಿಗೆ ಸಂಕಲನಕಾರರಾಗಿ ಕೆಲಸ ಶುರುಮಾಡಿದ ಸಂದೇಶ್‌, ನಂತರದ ದಿನಗಳಲ್ಲಿ ಸಾಕಷ್ಟು ಬಿಗ್‌ ಸೀರಿಯಲ್‌ಗಳಿಗೂ ಕೆಲಸ ಮಾಡಿದ್ದುಂಟು. ಅಲ್ಲಿ ಕೆಲಸ ಮಾಡುತ್ತಲೇ ಅವರು ಸಿನಿಮಾ ಮಾಡುವ ಕನಸು ಕಂಡವರು. ಅದು ಅವರ ದಶಕದ ಕನಸು ಕೂಡ. ಆ ಕನಸು ಈಗ “ಅನವಲ್ಲಿ ಇವಳಿಲ್ಲಿ “ಸಿನಿಮಾ ಮೂಲಕ ಈಡೇರಿದೆ. ಅಂದುಕೊಂಡಂತೆ ಅವರು ಸಿನಿಮಾ ಮಾಡಿ, ಇದೀಗ ಡಿಸೆಂಬರ್‌ ೨೫ರಂದು ಬಿಡುಗಡೆಯಾಗುವ ಮಟ್ಟಕ್ಕೆ ಬಂದಿದೆ ಎಂಬುದು ವಿಶೇಷ.

ಪ್ರಭು ಮುಂಡ್ಕರ್, ಹೀರೋ

ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಸಂಕಲನವನ್ನೂ ಮಾಡಿದ್ದಾರೆ. ಚಿತ್ರಕ್ಕೆ ಪ್ರಭು ಮುಂಡ್ಕರ್‌ ಅವರು ನಾಯಕರಾದರೆ, ಅವರಿಗೆ ಇಬ್ಬರು ನಾಯಕಿಯರು. ಜಾಹ್ನವಿ ಜ್ಯೋತಿ ಹಾಗೂ “ದುನಿಯಾ” ರಶ್ಮಿ ನಾಯಕಿಯರಾಗಿದ್ದಾರೆ. ತಮ್ಮ ಚೊಚ್ಚಲ ಸಿನಿಮಾ ಕುರಿತು “ಸಿನಿ ಲಹರಿ” ಜೊತೆ ಮಾತನಾಡಿದ ನಿರ್ದೇಶಕ ಸಂದೇಶ್‌, “ಇದೊಂದು ಲವ್‌ ಅಂಡ್‌ ಆಕ್ಷನ್‌ ಕುರಿತಾದ ಸಿನಿಮಾ. ಎಲ್ಲರ ಲೈಫಲ್ಲೂ ನೋವು ಅನ್ನೋದು ಕಾಮನ್.‌ ‌

ಸಂದೇಶ್‌ ಕೃಷ್ಣಮೂರ್ತಿ, ನಿರ್ದೇಶಕ

ಒಂದು ಆಘಾತ ಆದಾಗ, ಸಹಜವಾಗಿಯೇ ನೋವು ಆಗುತ್ತೆ, ಆದರೆ, ಅದನ್ನೇ ಇಟ್ಟುಕೊಂಡು ಯೋಚಿಸುತ್ತಾ ಕೂತರೆ, ಜೊತೆಗಿದ್ದವರ ಲೈಫು ಹಾಳಾಗುತ್ತೆ. ಆದ ಘಟನೆ ಆಗಿಹೋಗಿದೆ. ಅದನ್ನು ಮರೆತು ಮುಂದೆ ನಡೆಯಬೇಕು, ಜೊತೆಗೆ ಇದ್ದವರೊಂದಿಗೆ ಚೆನ್ನಾಗಿ ಬದುಕಬೇಕು ಎಂಬ ಸಂದೇಶದೊಂದಿಗೆ ಸಿನಿಮಾ ಮಾಡಲಾಗಿದೆ” ಎಂದು ವಿವರ ಕೊಡುತ್ತಾರೆ ಸಂದೇಶ್.‌

ಲಕ್ಷ್ಮಿನಾರಾಯಣ್‌ ರಾಜ್‌ ಅರಸ್

ಕೆ.ಕಲ್ಯಾಣ್‌ ಮತ್ತು ಗೌಸ್‌ಪೀರ್‌ ಸಾಹಿತ್ಯವಿದೆ. ಆನಂದ್‌ ಆಡಿಯೋ ಮೂಲಕ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರು, ಶ್ರೀರಂಗಪಟ್ಟಣ, ಪಾಂಡವಪುರ, ಮೈಸೂರು, ಸಕಲೇಶಪುರ ಸೇರಿದಂತೆ ಒಟ್ಟು ೪೦ ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಇನ್ನು, ಈ ಚಿತ್ರವನ್ನು ಲಕ್ಷ್ಮೀನಾರಾಯಣ ರಾಜ್‌ ಅರಸ್ ಅವರು ನಿರ್ಮಾಣ ಮಾಡಿದ್ದಾರೆ. ರವಿಕಿಶೋರ್‌ ಛಾಯಾಗ್ರಹಣವಿದೆ. ರೋಣದ ಬಕ್ಕೇಶ್‌ ಮತ್ತು ಕಾರ್ತಿಕ್‌ ಅವರ ಸಂಗೀತವಿದೆ. ನಾಲ್ಕು ಹಾಡುಳಿದ್ದು, ಎರಡು ಮೆಲೋಡಿ, ಒಂದು ಪ್ಯಾಥೋ, ಒಂದು ಹ್ಯಾಪಿ ಸಾಂಗ್‌ ಚಿತ್ರದಲ್ಲಿದೆ. ಡಿ.೨೫ರಂದು ಪ್ರಮುಖ ಚಿತ್ರಮಂದಿರದಲ್ಲಿ ತ್ರಿವೇಣಿಯಲ್ಲಿ ಬಿಡುಗಡೆಯಾಗಲಿದೆ. ಇದರೊಂದಿಗೆ ಮಲ್ಟಿಪ್ಲೆಕ್ಸ್‌ ಮತ್ತು ಪಿವಿಆರ್‌ ಸೇರಿದಂತೆ ಒಟ್ಟು ೮೦ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

Categories
ಸಿನಿ ಸುದ್ದಿ

ಲವ್ ಮೂಡಲ್ಲಿ ಶಶಿಕುಮಾರ್  ಪುತ್ರ! ಓ ಮೈ ಲವ್ ಅಂತಾರೆ ಅಕ್ಷಿತ್

ಸ್ಮೈಲ್ ಶ್ರೀನುಗೆ ಹೊಸ ಪ್ರೇಮ ಭಾಷ್ಯ ಬರೆಯೋ ಉತ್ಸಾಹ…

ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್‍ ಇತ್ತೀಚೆಗಷ್ಟೇ ಹೊಸ ಸಿನಿಮಾ ಅನೌನ್ಸ್ ಮಾಡಿದ್ದು ಗೊತ್ತೇ ಇದೆ. ಅದರ ಬೆನ್ನಲ್ಲೇ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಆ ಚಿತ್ರಕ್ಕೆ ‘ಓ ಮೈ ಲವ್’ ಎಂಬ ಹೆಸರಿಡಲಾಗಿದೆ.

ಸ್ಮೈಲ್ ಶ್ರೀನು, ನಿರ್ದೇಶಕ

ಈ ಚಿತ್ರಕ್ಕೆ  ಸ್ಮೈಲ್ ಶ್ರೀನು ನಿರ್ದೇಶಕರು. ಈ ಹಿಂದೆ ” ತೂಫಾನ್”, “ಬಳ್ಳಾರಿ ದರ್ಬಾರ್” ಹಾಗೂ “18 ಟು 25” ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಈಗ ಮತ್ತೊಂದು ವಿಭಿನ್ನ ಪ್ರೇಮಕಥೆಯನ್ನು ತೆರೆಮೇಲೆ ತರಲು ಸಜ್ಜಾಗಿದ್ದಾರೆ.

ಇದೊಂದು ರೊಮ್ಯಾಂಟಿಕ್ ಕಥಾಹಂದರದ ಸಿನಿಮಾ. ಹದಿಹರೆಯದ ವಯಸಿನಲ್ಲಿ ಯುವ ಹೃದಯಗಳ ಮನದಲ್ಲಿ ಉಂಟಾಗುವ ತಳಮಳ, ಪ್ರೀತಿ, ಪ್ರೇಮದ ಕುರಿತ ಅಂಶಗಳು ಇಲ್ಲಿರಲಿವೆ.

ಇನ್ನು ನಿರ್ದೇಶಕ ಸ್ಮೈಲ್‍ ಶ್ರೀನು  ಈ ಬಾರಿ ರೆಗ್ಯುಲರ್ ಪ್ಯಾಟ್ರನ್ ಬಿಟ್ಟು ಬೇರೆ ಥರದ ನಿರೂಪಣೆಯೊಂದಿಗೆ ಸಿನಿಮಾ ಮಾಡಲು ಹೊರಟಿದ್ದಾರೆ. ಚಿತ್ರಕ್ಕೆ ಜಿಸಿಬಿ ರಾಮಾಂಜಿನಿ ಅವರು ಕಥೆ ಬರೆದು ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ನಿರ್ದೇಶಕ ಶ್ರೀನು, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ರೊಮ್ಯಾಂಟಿಕ್ ಲವ್‍ಸ್ಟೋರಿ ಜೊತೆಗೆ ಫ್ಯಾಮಿಲಿ ಎಲಿಮೆಂಟ್ಸ್ ಮತ್ತು ಹಾಸ್ಯ ಮಿಶ್ರಣಗೊಂಡಿದೆ.

ಒಂದೊಳ್ಳೆಯ ಲವ್ ಸ್ಟೋರಿ ಇದಾಗಿದ್ದು, ಈ ಚಿತ್ರದ ಮೂಲಕ ಹೊಸ ಪ್ರೇಮ ಭಾಷ್ಯ ಬರೆಯುವ ಉತ್ಸಾಹದಲ್ಲಿದ್ದಾರೆ. ಇದೊಂದು ಬಿಗ್‍ ಬಜೆಟ್ ಸಿನಿಮಾ. ಎಲ್ಲಾ ವಿಷಯದಲ್ಲೂ ಅದ್ಧೂರಿತನ ಇರಲಿದೆ ಎಂಬುದು ನಿರ್ದೇಶಕರ ಮಾತು. ಇನ್ನು ಈ ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್ ಜೊತೆ ನಾಯಕಿಯಾಗಿ ಕೀರ್ತಿ ಕಲಕೇರಿ ಅಭಿನಯಿಸುತ್ತಿದ್ದಾರೆ.

ಉಳಿದಂತೆ ಚಿತ್ರದಲ್ಲಿ ಸಾಧು ಕೋಕಿಲಾ, ದೀಪಿಕಾ ಆರಾಧ್ಯ ಸೇರಿದಂತೆ ಇತರರೂ  ನಟಿಸಲಿದ್ದಾರೆ. ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಚರಣ್ ಅರ್ಜುನ್ ಅವರ ಸಂಗೀತವಿದೆ.

ರಿಯಲ್ ಸತೀಶ್ ಅವರ ಸಾಹಸ ನಿರ್ದೇಶನ, ಆಕಾಶ್‍ಕುಮಾರ್ ಚವನ್ ಅವರ ಸಹನಿರ್ದೇಶನ  ಚಿತ್ರಕ್ಕಿದೆ. ಬೆಂಗಳೂರು, ಮಂಗಳೂರು, ಮಡಿಕೇರಿ, ಹೈದರಾಬಾದ್ ಸೇರಿದಂತೆ ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

error: Content is protected !!