ದರ್ಶನ್‌ ಫ್ಯಾನ್ಸ್‌ಗೆ ಇದು ಸಂಭ್ರಮದ ಸುದ್ದಿ – ಮೆಜೆಸ್ಟಿಕ್‌ ಚಿತ್ರ ಬಂದು ಹತ್ತೊಂಬತ್ತು ವರ್ಷ

ಸಂತಸದಲ್ಲಿ ಮಿಂದೆದ್ದ ದಚ್ಚು ಹುಡುಗರು

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಹೌದು, ದರ್ಶನ್‌ ಅವರ “ರಾಬರ್ಟ್‌” ಸಿನಿಮಾ ಬಿಡುಗಡೆ ದಿನವನ್ನು ಈಗಾಗಲೇ ಅನೌನ್ಸ್‌ ಮಾಡಿದೆ. ತೆಲುಗಿನಲ್ಲೂ ಚಿತ್ರ ತೆರೆಗೆ ಬರುತ್ತಿದೆ. ಇದು ಅವರ ಫ್ಯಾನ್ಸ್‌ಗೆ ದೊಡ್ಡ ಖುಷಿಯ ವಿಷಯವೆಂದರೆ, ಇನ್ನೊಂದು ಸಂತಸದ ಸುದ್ದಿಯೂ ಇದೆ. ಹೌದು, ದರ್ಶನ್‌ ಅಭಿನಯದ “ಮೆಜೆಸ್ಟಿಕ್‌” ಚಿತ್ರ ಬಿಡುಗಡೆಯಾಗಿ ಇಂದಿಗೆ ೧೯ ವರ್ಷಗಳು ಸಂದಿವೆ.

“ಮೆಜಸ್ಟಿಕ್‌” ಅವರ ಬದುಕಿನ ದಿಕ್ಕನ್ನೇ ಬದಲಿಸಿದ ಚಿತ್ರ. “ಮೆಜೆಸ್ಟಿಕ್‌” ಬಳಿಕ ಅವರು ಇದುವರೆಗೂ ತಿರುಗಿ ನೋಡಿದವರೇ ಅಲ್ಲ, ಅಲ್ಲಿಂದ ಬಣ್ಣದ ಲೋಕದಲ್ಲಿ ಮಿಂದೆದ್ದ ದರ್ಶನ್‌ ಈಗ‌ ಕನ್ನಡದ ಪಾಲಿಗೆ ಬಹುದೊಡ್ಡ ಸ್ಟಾರ್‌ನಟ. ಕ್ರಮೇಣ ಒಳ್ಳೆಯ ಚಿತ್ರಗಳ ಮೂಲಕವೇ ಅವರು ಸದ್ದು ಮಾಡುತ್ತಲೇ ಬಂದರು. “ಕಲಾಸಿಪಾಲ್ಯ”, “ಗಜ”, “ಚಿಂಗಾರಿ”, “ಬೃಂದಾವನ”, “ಸರ್ದಾರ್”, “ಜಗ್ಗುದಾದ”, “ದಾಸ” ಹೀಗೆ ಸಾಕಷ್ಟು ಹಿಟ್ ಚಿತ್ರಗಳನ್ನು ಕನ್ನಡ ಕಲಾರಸಿಕರಿಗೆ ನೀಡಿದ್ದಾರೆ. “ಮೆಜೆಸ್ಟಿಕ್‌” ಪಕ್ಕಾ ಮಾಸ್‌ ಸಿನಿಮಾ. ಅಲ್ಲಿಂದಲೇ ದರ್ಶನ್‌ ಅವರಿಗೆ ಮಾಸ್‌ ಫ್ಯಾನ್ಸ್‌ ಹುಟ್ಟುಕೊಂಡರು.

ಈಗ ಎಲ್ಲಿ ನೋಡಿದರೂ ದರ್ಶನ್‌ ಅವರ ಅಭಿಮಾನಿಗಳದ್ದೇ ಸುದ್ದಿ. ಅದರಲ್ಲೂ ದರ್ಶನ್‌ ಅಂದಾಕ್ಷಣ ನೆನಪಾಗೋದೇ ಮಾಸ್‌ ಫೀಲ್.‌ ಸದಾ ಸದಭಿರುಚಿಯ ಚಿತ್ರ ಕೊಡುತ್ತ ಬಂದಿರುವ ದರ್ಶನ್‌ ಅವರ “ಮೆಜೆಸ್ಟಿಕ್‌” ಚಿತ್ರದ ಬಗ್ಗೆಯೇ ಈಗ ಎಲ್ಲರ ಮಾತು. ಮತ್ತೆ ಮತ್ತೆ “ಮೆಜಸ್ಟಿಕ್‌” ನೆನಪಾಗುತ್ತೆ ಅಂದರೆ, ಅದರೊಳಗಿರುವ ಕಂಟೆಂಟ್.‌

ಅದೇನೆ ಇರಲಿ, ಇಂಥದ್ದೊಂದು ಸಿನಮಾ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ ದರ್ಶನ್‌ ಇಂದಿಗೂ ಮಾಸ್‌ ಹೀರೋ ಆಗಿಯೇ ಗಟ್ಟಿನೆಲೆ ಕಂಡಿದ್ದಾರೆ. ಅಂದಹಾಗೆ, ಪಿ.ಎನ್.ಸತ್ಯ ನಿರ್ದೇಶಿಸಿದ ಸಿನಿಮಾ ಇದು. ರಾಮಮೂರ್ತಿ, ಬಾ.ಮ.ಹರೀಶ್‌ ಇದರ ಹಿಂದೆ ಇದ್ದು, ತಯಾರು ಮಾಡಿದವರು.

Related Posts

error: Content is protected !!