ನಟಿಯರಿಗೆ ಸವಾಲೊಡ್ಡಿದ ಬಾಲಿವುಡ್‌ ನಟಿ ಕಂಗನಾ!

ಹಾಲಿವುಡ್‌ ತಾರೆಯರಿಗೆ ತಮ್ಮನ್ನು ಹೋಲಿಸಿ ಟ್ವೀಟ್ ಮಾಡಿದ  ಕ್ವೀನ್‌!

 

ವಿವಾದಿತ ಹೇಳಿಕೆ, ಟ್ವೀಟ್‌ಗಳ ಮೂಲಕ ಸುದ್ದಿಯಾಗುವ ಕಂಗನಾ ಮತ್ತೊಂದು ಇಂಥದ್ದೇ ಟ್ವೀಟ್‌ನೊಂದಿಗೆ ಹಾಜರಾಗಿದ್ದಾರೆ. “ಸದ್ಯ ನನ್ನಂತೆ ವಿಭಿನ್ನ ಪಾತ್ರಗಳಿಗೆ ನ್ಯಾಯ ಸಲ್ಲಿಸುವಂಥ ಮತ್ತೊಬ್ಬ ನಟಿ ಈ ಭೂಮಿ ಮೇಲಿಲ್ಲ. ಹಾಲಿವುಡ್‌ ನಟಿ ಮೆರಿಲ್ ಸ್ಟ್ರೀಪ್‌ ಅವರಂತೆ ನಾನು ‘ಕಚ್ಛಾ ಪ್ರತಿಭೆ’. ಅಲ್ಲದೆ ನಟಿ ಗಾಲ್‌ ಗ್ಯಾಡೋಟ್‌ ಅವರಂತೆ ಆಕ್ಷನ್‌ ಮತ್ತು ಗ್ಲಾಮರ್ ಪಾತ್ರಗಳಿಗೂ ನಾನು ಸೈ” ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ಕಂಗನಾ ಪ್ರಸ್ತುತ ವಿಭಿನ್ನ ಪಾತ್ರಗಳ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಕ್ಷನ್‌-ಥ್ರಿಲ್ಲರ್‌ ‘ಧಾಕಡ್‌’, ಬಯೋಪಿಕ್‌ ‘ತಲೈವಿ’ ಸಿನಿಮಾಗಳ ಆಶ್‌ಟ್ಯಾಗ್‌ಗಳೊಂದಿಗೆ ಅವರು ಈ ಟ್ವೀಟ್ ಮಾಡಿದ್ದಾರೆ. ಕಂಗನಾ ಟ್ವೀಟ್‌ಗೆ ನೆಟ್ಟಿಗರು ಹತ್ತಾರು ರೀತಿ ತಮಾಷೆಯ ಟ್ವೀಟ್‌ಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ‘ಸುದ್ದಿಯಲ್ಲಿರಲು, ತಮ್ಮ ಸಿನಿಮಾ ಪ್ರಚಾರಕ್ಕಾಗಿ ಕಂಗನಾ ಏನು ಬೇಕಾದರೂ ಮಾಡುತ್ತಾರೆ, ಈ ಟ್ವೀಟ್‌ಗಳಲ್ಲಿ ನಾನು, ನಾನು ಎನ್ನುವುದನ್ನು ಸಾಕಷ್ಟು ಬಾರಿ ಬಳಕೆ ಮಾಡಿರುವ ನಿಮಗೆ ಮಾನಸಿಕ ವೈದ್ಯರ ಅವಶ್ಯಕತೆ ಇದೆ!” ಎನ್ನುವ ಪ್ರತಿಕ್ರಿಯೆಯ ಒಕ್ಕಣಿಯ ಟ್ವೀಟ್‌ಗಳು ಕಾಣಿಸುತ್ತಿವೆ.

ಇದೊಂದು ಟ್ವೀಟ್‌ಗೆ ಸುಮ್ಮನಾಗದ ಕಂಗನಾ ಮತ್ತೊಂದು ಟ್ವೀಟ್ ಮಾಡಿ, “ಈ ವಿಚಾರವಾಗಿ ನಾನು ಚರ್ಚೆಗೆ ಸಿದ್ಧಳಿದ್ದೇನೆ. ಜಗತ್ತಿನ ಯಾವುದೇ ಭಾಗದಲ್ಲಿ ಯಾರಾದರೂ ನನ್ನಂತೆ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿ ಯಶಸ್ವಿಯಾಗಿರುವುದನ್ನು ತೋರಿಸಲಿ. ಆಗ ನಾನು ಅವರಿಗೆ ಶರಣಾಗುತ್ತೇನೆ” ಎಂದು ಸವಾಲು ಹಾಕಿದ್ದಾರೆ.

‘ಧಾಕಡ್‌’ ಚಿತ್ರೀಕರಣದಲ್ಲಿರುವ ಕಂಗನಾ ಅವರು ನಟಿ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ ‘ತಲೈವಿ’ಯಲ್ಲೂ ನಟಿಸುತ್ತಿದ್ದಾರೆ. ‘ತೇಜಸ್‌’ ಮತ್ತು ‘ಮಣಿಕರ್ಣಿಕಾ2’ ಅವರ ಮುಂದಿನ ಸಿನಿಮಾಗಳು. ಸೆಟ್ಟೇರಲಿರುವ ಮತ್ತೊಂದು ಪೊಲಿಟಿಕಲ್ ಡ್ರಾಮಾ ಹಿಂದಿ ಚಿತ್ರದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಲಿದ್ದಾರೆ. ಇತ್ತೀಚೆಗೆ ಅವರು ಆ ಪಾತ್ರದಲ್ಲಿನ ತಮ್ಮ ಚಿತ್ರವನ್ನು ಟ್ವೀಟ್ ಮಾಡಿದ್ದರು.

Related Posts

error: Content is protected !!