ಬುರ್ಜ್‌ ಖಲೀಫ ಮೇಲೆ ಕನ್ನಡ ಧ್ವಜ ರಾರಾಜಿಸಿದ್ದು ಹೇಗೆ – ಒಂದೊಂದು ವಿಷಯವೂ ರೋಚಕ…

ವಿಕ್ರಾಂತ್‌ ರೋಣ ಅನಾವರಣ ಹಿಂದಿನ ಕಥೆ

ಕಿಚ್ಚ ಸುದೀಪ್‌ ಅಭಿನಯದ “ವಿಕ್ರಾಂತ್‌ ರೋಣ” ಶೀರ್ಷಿಕೆ ಜಗತ್ತಿನ ಅತೀ ಎತ್ತರದ ಕಟ್ಟಡದ ಖ್ಯಾತಿ ಪಡೆದಿರುವ ದುಬೈನ “ಬುರ್ಜ್‌ ಖಲೀಫ” ಮೇಲೆ ಅನಾವರಣಗೊಂಡಿದ್ದು ಎಲ್ಲರಿಗೂ ಗೊತ್ತು. ಅತ್ಯಂತ ಎತ್ತರದ ಕಟ್ಟಡದ ಮೇಲೆ ಕನ್ನಡ ಸಿನಿಮಾವೊಂದರ ಶೀರ್ಷಿಕೆ ಅನಾವರಣಗೊಂಡಿದ್ದು ಇದೇ ಮೊದಲು. ಅಷ್ಟೇ ಅಲ್ಲ, ಅದೊಂದು ಐತಿಹಾಸಿಕ ಕ್ಷಣವಂತೂ ಹೌದು. ಬುರ್ಜ್‌ ಖಲೀಫ ಕಟ್ಟಡದ ಮೇಲೆ ಕನ್ನಡ ಸಿನಿಮಾವೊಂದರ ಶೀರ್ಷಿಕೆ ಅನಾವರಣ ಮಾಡುವುದು ಅಂದರೆ ತುಸು ಶ್ರಮದ ಕೆಲಸವೇ ಅಂಥದ್ದೊಂದು ಕೆಲಸಕ್ಕೆ “ವಿಕ್ರಾಂತ್‌ ರೋಣ” ಚಿತ್ರತಂಡ ಸಾಕ್ಷಿಯಾಗಿದೆ. ಇಷ್ಟೇ ಆಗಿದ್ದರೆ ಅದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಬರ್ಜ್‌ ಖಲೀಫ ಕಟ್ಟಡದ ಮೇಲೆ ಕನ್ನಡ ಧ್ವಜ ರಾರಾಜಿಸಿದ್ದು ವಿಶೇಷವೇ ಸರಿ. ಆ ಕುರಿತು ಒಂದಷ್ಟು ರೋಚಕ ವಿಷಯಗಳಿವೆ. ಹಾಗೆ ಹೇಳುವುದಾದರೆ…


ಬುರ್ಜ್‌ ಖಲೀಫ ಕಟ್ಟಡದಲ್ಲಿ ಬೇರೆ ಬೇರೆ ದೇಶಗಳ ಧ್ವಜಗಳನ್ನು ಹಾರಿಸಬಹುದು. ಹಾಗೆಯೇ, “ವಿಕ್ರಾಂತ್‌ ರೋಣ” ಚಿತ್ರದ ನಿರ್ಮಾಪಕ ಜಾಕ್‌ ಮಂಜು ಅವರು ಇಂಡಿಯನ್‌ ಫ್ಲಾಗ್‌ ಹಾರಿಸುವ ಹುಮ್ಮಸ್ಸಿನಲ್ಲಿದ್ದರು. ಆದರೆ, ಅಲ್ಲಿ ಬೇಗನೇ ಅನುಮತಿ ಸಿಗಲಿಲ್ಲ. ಯಾಕೆಂದರೆ, ಎಂಬೆಸ್ಸಿ ಮೂಲಕ ಅನುಮತಿ ಪಡೆಯಬೇಕಿತ್ತು. ಅದಕ್ಕೆಲ್ಲ ಸಮಯವೂ ಇರಲಿಲ್ಲ. ಕಡಿಮೆ ಅವಧಿ ಇದ್ದುದರಿಂದ ನಿರ್ಮಾಪಕ ಜಾಕ್‌ ಮಂಜು, ಏನಾದರೂ ಸರಿ, ಕನ್ನಡ ಧ್ವಜ ಹಾರಿಸಬೇಕು ಅಂದುಕೊಂಡು ಮುಂದಾದರು. ಎರಡು ವಾರದಲ್ಲಿ ಶೀರ್ಷಿಕೆ ಅನಾವರಣಗೊಳ್ಳಬೇಕಿತ್ತು. ಸಮಯ ಕಡಿಮೆ ಇದ್ದುರಿಂದ ಎಂಬೆಸ್ಸಿ ಅನುಮತಿ ಅಸಾಧ್ಯ. ಹಾಗಾಗಿ ಅಲ್ಲಿ ಕನ್ನಡ ಧ್ವಜ ಹಾರಿಸಿಬಿಟ್ಟರು. ಆದರೆ, ಕನ್ನಡಿಗರನ್ನು ಹೊರತುಪಡಿಸಿ ಅಲ್ಲಿರುವ ಮಂದಿಗೆ ಕನ್ನಡ ಧ್ವಜದ ಬಣ್ಣದ ಬಗ್ಗೆ ಅಷ್ಟೇನೂ ಐಡಿಯಾ ಇರಲಿಲ್ಲ. ಬುರ್ಜ್‌ ಖಲೀಫ ಕಟ್ಟಡದ ಮೇಲೆ ಕನ್ನಡ ಧ್ವಜ ರಾರಾಜಿಸಿತು.

ಸ್ಕ್ರೀನಿಂಗ್‌ ಆಗಿದ್ದು 6 ಕಿಮೀ ದೂರದಿಂದ...
ಎಲ್ಲರೂ ಬುರ್ಜ್‌ ಖಲೀಫ ಮೇಲೆ ನಮ್ಮ ಕನ್ನಡ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು ನೋಡಿ ಹೆಮ್ಮೆ ಎನಿಸಿದ್ದು ನಿಜ. ಕನ್ನಡ ಧ್ವಜ ಕಾಣಿಸಿಕೊಂಡಿದ್ದೂ ಕೂಡ ಅಷ್ಟೇ ಸಂಭ್ರಮ ಎನಿಸಿತು. ಆದರೆ, ಆ ಕಟ್ಟಡದ ಮೇಲೆ ಇಷ್ಟೆಲ್ಲಾ ಸಾಧ್ಯವಾಗಬೇಕಾದರೆ, ಎಲ್ಲವೂ ಸುಲಭವಾಗಿರಲಿಲ್ಲ. ಬುರ್ಜ್‌ ಖಲೀಫ ಮೇಲೆ “ವಿಕ್ರಾಂತ್‌ ರೋಣ” ಚಿತ್ರದ ಶೀರ್ಷಿಕೆ ಮೂಡಲು, ಕನ್ನಡ ಧ್ವಜ ರಾರಾಜಿಸಲು ಸುಮಾರು 6  ಕಿ.ಮೀ ದೂರದಲ್ಲೇ ಪ್ರೊಜೆಕ್ಟರ್ ಸೆಟಪ್‌ ಮಾಡಿ ಆ ನಂತರ ಲೇಸರ್‌ ಮೂಲಕ ಸ್ಕ್ರಿನಿಂಗ್‌ ಮಾಡಲಾಗಿದೆ.

ದೊಡ್ಡ ಕಟ್ಟಡದ ಮೇಲೆ ಇಷ್ಟೆಲ್ಲಾ ಬರಬೇಕಾದರೆ, ದೂರದಿಂದಲೇ ಪ್ರೊಜೆಕ್ಟರ್ ಸೆಟಪ್‌ ಮಾಡಲೇಬೇಕಾದ ಪರಿಸ್ಥಿತಿ ಇತ್ತು. ಅದಕ್ಕಾಗಿ ಕಿಲೋಮೀಟರ್‌ಗೊಂದೊಂದು ಕ್ಯಾಮೆರಾ ಸೆಟಪ್‌ ಮಾಡಿ ಸುಮಾರು ನಾಲ್ಕೈದು ಪ್ರೊಜೆಕ್ಟರ್‌ಗಳ ಮೂಲಕ ಆ ವ್ಯವಸ್ಥೆ ಮಾಡಲಾಗಿದೆ. ಇನ್ನು, ಕೋವಿಡ್‌ ಇದ್ದುದರಿಂದ ಆರು ಜನರ ಮೇಲೆ ಗುಂಪಾಗಲು ಅಲ್ಲಿ ಅವಕಾಶವೂ ಇರಲಿಲ್ಲ. ಹೇಗೋ, “ವಿಕ್ರಾಂತ್‌ ರೋಣ” ತಂಡ, ಇಷ್ಟಿಷ್ಟು ಜನರನ್ನು ಇಟ್ಟುಕೊಂಡು ಅಸಾಧ್ಯವಾದದ್ದನ್ನು ಸಾಧಿಸಿದೆ. ವಿಶೇಷ ಕಾರ್ಯಕ್ರಮ ವೀಕ್ಷಿಸಲು ದುಬೈ ಕನ್ನಡಿಗರು ಬರುತ್ತಾರಾ ಎಂಬ ಪ್ರಶ್ನೆ ಕೂಡ ಚಿತ್ರತಂಡಕ್ಕಿತ್ತು. ಆದರೆ, ಅವರ ನಿರೀಕ್ಷೆ ಮೀರಿ ಜನರು ಸೇರಿದ್ದು ಮರೆಯಲಾರದ ವಿಷಯ ಎಂಬುದು ಚಿತ್ರತಂಡದ ಮಾತು.

ಬುರ್ಜ್‌ ಖಲೀಫಗೆ ಮಾಡಿದ ಖರ್ಚಲ್ಲಿ ನಾಲ್ಕು ಕಲಾತ್ಮಕ ಚಿತ್ರ ಮಾಡಬಹುದಿತ್ತು!
ಇಂಥದ್ದೊಂದು ಸಾಹಸಕ್ಕೆ ಮುಂದಾದ ಜಾಕ್‌ ಮಂಜು, ಬುರ್ಜ್‌ ಖಲೀಫ ಮೇಲೆ “ವಿಕ್ರಾಂತ್‌ ರೋಣ” ಟೈಟಲ್‌ ಜೊತೆ ಕನ್ನಡ ಧ್ವಜ ರಾರಾಜಿಸಬೇಕೆನಿಸಿದ್ದು ನವೆಂಬರ್‌ನಲ್ಲಿ ಮಕ್ಕಳ ಜೊತೆ ಕುಳಿತು ಊಟ ಮಾಡುವಾಗ, ಕನ್ನಡ ಬಗ್ಗೆ, ಧ್ವಜದ ಬಗ್ಗೆ ಮಾತುಕತೆ ನಡೆಸುತ್ತಿದ್ದರಂತೆ.

ಅತೀ ಎತ್ತರದಲ್ಲಿ ಬಾವುಟ ಹಾರಬೇಕು ಎಂಬ ಮಾತುಗಳು ಕೇಳಿಬರುತ್ತಿದ್ದಂತೆಯೇ, ಜಾಕ್‌ಮಂಜು ಅವರಿಗೊಂದು ಯೋಚನೆ ಬಂದಿದೆ. ಯಾಕೆ ದುಬೈನಲ್ಲಿರುವ ಬುರ್ಜ್‌ ಖಲೀಫ ಮೇಲೆ ಇದನ್ನೆಲ್ಲಾ ಮಾಡಬಾರದು ಅಂತಂದುಕೊಂಡು ಇಷ್ಟೆಲ್ಲಾ ಮಾಡಲು ಕಾರಣವಾಯಿತು ಎನ್ನುತ್ತಾರೆ ಜಾಕ್‌ ಮಂಜು. ಅಂದಹಾಗೆ, ಅದಕ್ಕೆಲ್ಲಾ ಕೋಟಿಗಟ್ಟಲೆ ಖರ್ಜು ಬೇಕೇ ಬೇಕು. ಆದರೆ, ದೊಡ್ಡ ಮಟ್ಟದಲ್ಲೇ ಸುದೀಪ್‌ ಅವರ ಚಿತ್ರದ ಟೈಟಲ್‌ ಲಾಂಚ್‌ ಮಾಡಬೇಕು ಅಂದುಕೊಂಡು, ಈ ಕೆಲಸ ಮಾಡಿದ್ದಾರೆ. ಇನ್ನು, ಅಲ್ಲಿಗೆ ಖರ್ಚು ಮಾಡಿದ ಹಣದಲ್ಲಿ ನಾಲ್ಕು ಕಲಾತ್ಮಕ ಚಿತ್ರಗಳನ್ನು ಮಾಡಬಹುದಿತ್ತು ಎಂಬ ಮಾತುಗಳು ಕೇಳಿಬರುತ್ತಿರುವುದಂತೂ ನಿಜ.

Related Posts

error: Content is protected !!