ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ ತಾರಾಪುತ್ರ ದುಲ್ಕರ್ ಸಲ್ಮಾನ್
ನಟ ದುಲ್ಕರ್ ಸಲ್ಮಾನ್ ಇನ್‌ಸ್ಟಾಗ್ರಾಂನಲ್ಲಿ ತಮ್ಮ ತಂದೆ ಮಮ್ಮೂಟಿ ಅವರ ಹೊಸ ಸಿನಿಮಾ ‘ಭೀಷ್ಮ’ ಫಸ್ಟ್‌ಲುಕ್ ಶೇರ್ ಮಾಡಿದ್ದಾರೆ. ಅಲ್ಲಿ ಮಮ್ಮೂಟಿಯ ಎರಡು ಫೋಟೋಗಳಿವೆ. ಕಪ್ಪು ಷರ್ಟ್ ತೊಟ್ಟ ಅವರ ದಿಟ್ಟ ನೋಟ ಪಾತ್ರದ ಬಗ್ಗೆ ಕುತೂಹಲ ಮೂಡಿಸುತ್ತದೆ. “ನಿಮಗೆ ಚಿತ್ರದ ಫಸ್ಟ್‌ಲುಕ್ ತೋರಿಸುತ್ತಿದ್ದೇನೆ. ನಿರ್ದೇಶಕ ಅಮಲ್ ನೀರದ್ ಮತ್ತು ಅಪ್ಪನ ಕಾಂಬಿನೇಷನ್ ಎಂದಾಕ್ಷಣ ನನಗೆ ‘ಬಿಗ್ ಬಿ’ ಚಿತ್ರ ನೆನಪಾಗುತ್ತದೆ. ಇವರಿಬ್ಬರೂ ಮತ್ತೊಮ್ಮೆ ‘ಭೀಷ್ಮ’ ಚಿತ್ರದಲ್ಲಿ ಮನರಂಜನೆ ಒದಗಿಸುವ ಸಂಪೂರ್ಣ ವಿಶ್ವಾಸ ನನಗಿದೆ. ಚಿತ್ರತಂಡದ ಎಲ್ಲರಿಗೂ ಶುಭವಾಗಲಿ” ಎಂದು ದುಲ್ಕರ್ ಬರೆದಿದ್ದಾರೆ.
ಅಮಲ್ ನೀರದ್ ನಿರ್ದೇಶನದಲ್ಲಿ ಮಮ್ಮೂಟಿ ಅವರ ಎರಡನೇ ಚಿತ್ರವಿದು. ಈ ಹಿಂದೆ 2007ರಲ್ಲಿ ತೆರೆಕಂಡಿದ್ದ ಈ ಜೋಡಿಯ ಸಿನಿಮಾ ‘ಬಿಗ್ ಬಿ’ ದೊಡ್ಡ ಯಶಸ್ಸು ಕಂಡಿತ್ತು. ಮಮ್ಮೂಟಿ ಕೂಡ ಫೋಟೋಗಳನ್ನು ‘ಭೀಷ್ಟ ಪರ್ವ’ ಆಶ್‌ಟ್ಯಾಗ್ ಅಡಿ ಶೇರ್ ಮಾಡಿದ್ದಾರೆ. ಚಿತ್ರದ ಇತರೆ ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ ಇನ್ನೂ ಮಾಹಿತಿ ಹೊರಬೀಳಬೇಕಿದೆ. ಇನ್ನು ಮಾರ್ಚ್ 4ರಂದು ಮಮ್ಮೂಟಿ ‘ದಿ ಪ್ರೀಸ್ಟ್’ ಸಿನಿಮಾದೊಂದಿಗೆ ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ. ಮಿಸ್ಟರಿ ಥ್ರಿಲ್ಲರ್ ಎನ್ನಲಾಗುತ್ತಿರುವ ಈ ಚಿತ್ರದ ನಿರ್ದೇಶಕ ಜಾಫಿನ್ ಟಿ.ಚಾಕೋ. ಮಂಜು ವಾರಿಯರ್, ನಿಖಿಲಾ ವಿಮಲ್, ಶ್ರೀನಾಥ್ ಭಾಸಿ, ಸಾನಿಯಾ ಅಯ್ಯಪ್ಪನ್ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.