ರಿಲೀಸ್‌ ಆಯ್ತು ಆಕ್ಷನ್‌-ಥ್ರಿಲ್ಲಿಂಗ್‌ ‘ಎಫ್‌9’ ಟೀಸರ್‌ !

ಜನಪ್ರಿಯ ‘ಫಾಸ್ಟ್‌ ಅಂಡ್‌ ಫ್ಯೂರಿಯಸ್‌’ ಹಾಲಿವುಡ್‌ ಸರಣಿ ಸಿನಿಮಾ ತೆರೆಗೆ ರೆಡಿ

ಹಾಲಿವುಡ್‌ನ ಅತ್ಯಂತ ಜನಪ್ರಿಯ ‘ಫಾಸ್ಟ್‌ ಅಂಡ್ ಫ್ಯೂರಿಯಸ್‌’ ಸರಣಿಯ ನೂತನ ಸಿನಿಮಾ ‘ಎಫ್‌9’ ಟೀಸರ್ ಬಿಡುಗಡೆಯಾಗಿದೆ. ಮೂವತ್ತು ಸೆಕೆಂಡ್‌ಗಳ ಚಿಕ್ಕ ಅವಧಿಯ ಟೀಸರ್ ಎನ್ನುವುದು ವಿಶೇ‍ಷ! ಭರಪೂರ ಆಕ್ಷನ್ ಜೊತೆ ಇಲ್ಲಿ ಫ್ಯಾಮಿಲಿ ಸೆಂಟಿಮೆಂಟ್‌ ಕೂಡ ಯತೇಚ್ಛವಾಗಿ ಇರುವಂತಿದೆ. ಕಳೆದ ಸರಣಿ ಸಿನಿಮಾಗಳಿಗಿಂತ ಕೊಂಚ ಭಿನ್ನವಾಗಿರಲಿದೆ ಎಂದು ನಿರ್ದೇಶಕ ಜಸ್ಟಿನ್ ಲಿನ್ ಮೊದಲೇ ಹೇಳಿಕೊಂಡಿದ್ದರು. ಅದರ ಸೂಚನೆ ಟೀಸರ್‌ನಲ್ಲಿ ಕಾಣಿಸುತ್ತದೆ. ಕುಟುಂಬದ ಸೀನ್‌, ಔತಣಕೂಟದೊಂದಿಗೆ ಆರಂಭವಾಗುವ ಟೀಸರ್‌ ಆಕ್ಷನ್‌ಗೆ ತೆರೆದುಕೊಳ್ಳುತ್ತದೆ. ಜಾನ್‌ ಸೆನಾ, ಹೆಲನ್ ಮಿರನ್‌ರ ನಗು, ಚಾರ್ಲ್ಸ್‌ ಥೆರೋನ್‌ ಕಣ್ಣು ಹೊಡೆವುದೇಕೆ ಎನ್ನುವುದು ಸಸ್ಪೆನ್ಸ್‌!

“ಬದಲಾವಣೆ ಜಗದ ನಿಯಮ. ಆದರೆ ಒಂದು ವಿಚಾರದಲ್ಲಿ ಬದಲಾವಣೆ ಕಾಣಿಸಲು ಸಾಧ್ಯವೇ ಇಲ್ಲ” ಎನ್ನುತ್ತಾರೆ ವಿನ್‌ ಡೀಸೆಲ್‌. ಈ ಸಂಭಾಷಣೆ, ಪಾತ್ರದೊಂದಿಗೆ ನಿರ್ದೇಶಕರು ಏನು ಹೇಳಲು ಹೊರಟಿರಬಹುದು ಎನ್ನುವ ಕುತೂಹಲ ಉಳಿಯುತ್ತದೆ. ಡೇನಿಯಲ್ ಕೇಸಿ ಅವರೊಡಗೂಡಿ ಜಸ್ಟಿನ್ ಲಿನ್ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ.

ಇದು ‘ಫಾಸ್ಟ್‌ ಅಂಡ್ ಫ್ಯೂರಿಯಸ್‌’ ಸರಣಿಯ ಒಂಬತ್ತನೇ ಸಿನಿಮಾ. ಈ ಸರಣಿಯ ಮುಂದಿನ ಎರಡು ಚಿತ್ರಗಳನ್ನೂ ಜಸ್ಟಿನ್ ಅವರೇ ನಿರ್ದೇಶಿಸಲಿದ್ದಾರೆ ಎನ್ನುವ ಘೋಷಣೆ ಈಗಾಗಲೇ ಹೊರಬಿದ್ದಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಚಿತ್ರ 2020ರ ಕೊನೆಯಲ್ಲಿ ಬಿಡುಗಡೆಯಾಗಬೇಕಿತ್ತು. ಕೋವಿಡ್‌ನಿಂದಾಗಿ ಚಿತ್ರದ ಬಿಡುಗಡೆ ದಿನಾಂಕ 2021ರ ಮೇ 28ಕ್ಕೆ ನಿಗಧಿಯಾಗಿದೆ. ಟೈರಿಸ್ ಗಿಬ್ಸನ್‌, ಕ್ರಿಸ್‌ ಲ್ಯುಡಾಕ್ರಿಸ್‌, ಸಂಗ್ ಕಾಂಗ್‌, ಚಾರ್ಲ್ಸ್‌ ಥೆರೋನ್‌, ಹೆಲನ್ ಮಿರನ್‌, ಜೋರ್ಡಾನ್ ಬ್ರ್ಯೂಸ್ಟರ್‌, ಜಾನ್ ಸೆನಾ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

Related Posts

error: Content is protected !!