Categories
ಸಿನಿ ಸುದ್ದಿ

ಸಿನಿಮಾ ಪ್ರೀತಿಸೋ ಹುಡುಗರಿಗೆ ಸೈಕೋ ಕಾಟ !

ಅಂಜು ಎಂಬ ಹೊಸಬರ ಸಸ್ಪೆನ್ಸ್‌ ಥ್ರಿಲ್ಲರ್‌

ಎರಡನೇ ಹಂತಕ್ಕೆ ಚಿತ್ರತಂಡ ಸಜ್ಜು

ಕನ್ನಡದಲ್ಲಿ ಈಗಂತೂ ಹೊಸಬರ ಅನೇಕ ಸಿನಿಮಾಗಳು ಸೆಟ್ಟೇರುತ್ತಿವೆ. ಆ ಸಾಲಿಗೆ “ರಸಗುಲ್ಲ ಅಂಜು” ಎಂಬ ಸಿನಿಮಾ ಕೂಡ ಸೇರಿದೆ. ಈ ಚಿತ್ರಕ್ಕೆ ರಾಜೀವ್‌ ಕೃಷ್ಣ ನಿರ್ದೇಶಕರು. ಕಥೆ, ಚಿತ್ರಕಥೆ ಕೂಡ ಇವರದೇ. ಈಗಾಗಲೇ ನಿರ್ದೇಶಕರು ಸದ್ದಿಲ್ಲದೆಯೇ ಮೊದಲ ಹಂತವನ್ನು ಮುಗಿಸಿದ್ದಾರೆ. ಸದ್ಯಕ್ಕೆ ಏಳು ದಿನಗಳ ಚಿತ್ರೀಕರಣ ಬಾಕಿ ಉಳಿದಿದ್ದು, ತೆಲುಗಿನ ನಟ ಬಾನುಚಂದರ್‌ ಹಾಗೂ ಅಭಿಜಿತ್‌ ಅವರ ಡೇಟ್‌ ನೋಡಿಕೊಂಡು ಚಿತ್ರೀಕರಿಸಿದರೆ ಚಿತ್ರೀಕರಣ ಮುಕ್ತಾಯ. ಇದು ಟೆನ್ ಟ್ರೀಸ್ ಫಿಲಂ ಪ್ರೊಡಕ್ಷನ್ ಹೌಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಇತ್ತೀಚೆಗಷ್ಟೇ ಚಿಂತಾಮಣಿಯಲ್ಲಿರುವ ಶ್ರೀಪ್ರಸನ್ನ ಆಂಜನೇಯ ದೇವಾಲಯದಲ್ಲಿ ಮುಹೂರ್ತ ನೆರವೇರಿತ್ತು.

ಅಷ್ಟೇ ವೇಗದಲ್ಲಿ ನಿರ್ದೇಶಕರು ಮೊದಲ ಹಂತವನ್ನು ಮುಗಿಸಿದ್ದಾರೆ. ಚಿತ್ರಕ್ಕೆ “ಖೇಲ್” ಚಿತ್ರದ ನಿರ್ಮಾಪಕ ಮಾರ್ಕೆಟ್ ಸತೀಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, “ಲೆಕ್ಕಾಚಾರ” ಚಿತ್ರದ ನಿರ್ಮಾಪಕ ಆರ್.ಚಂದ್ರು ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಈ ಚಿತ್ರದ ಕುರಿತು ಹೇಳುವ ನಿರ್ದೇಶಕ, ರಾಜೀವ್‌ ಕೃಷ್ಣ, “ಇದೊಂದು ಗೆಳೆಯ, ಗೆಳತಿಯರ ನಡುವಿನ ಚಿತ್ರ. ಬೆಂಗಳೂರಿನಿಂದ ಹೈದರಾಬಾದ್‌ಗೆ ಸಿನಿಮಾ ಆಡಿಷನ್‌ಗಾಗಿ ಪ್ರಯಾಣ ಬೆಳೆಸುವ ಮೂವರು ನಾಯಕ, ನಾಯಕಿಯರ ನಡುವೆ ಐದು ಮಂದಿ ಸೈಕೋಗಳು ಎಂಟ್ರಿಯಾಗುತ್ತಾರೆ. ಅವರಿಂದ ಆಗುವವಂತಹ ಅನಾಹುತಗಳೇನು, ಅವರು ಆ ಸೈಕೋಗಳಿಂದ ಪಾರಾಗಲು ಹೇಗೆಲ್ಲಾ ಕಷ್ಟಪಡುತ್ತಾರೆ ಎಂಬ ಕಥಾಹಂದರ ಇಲ್ಲಿದೆ.

ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವಾಗಿದ್ದು, ಹಿರಿಯ ನಟ ಅಭಿಜಿತ್ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿಗ್‌ಬಾಸ್ ಬೆಡಗಿ ಸೋನು ಪಾಟೀಲ್, ರಮ್ಯ, ಯಶಸ್ಸಿನಿ ನಟಿಸುತ್ತಿದ್ದಾರೆ.  ನಾಯಕರಾಗಿ ರಾಜ್‌ಪ್ರತೀಕ್, ಉಲಿಬೆಲೆ ರಾಜೇಶ್ ರೆಡ್ಡಿ, ಹಾಗೂ ಸಿದ್ಧಾರ್ಥ ಇದ್ದಾರೆ. ಖಳನಾಯಕರಾಗಿ ಮುಂಬೈನ ರಾಜೇಶ್ ಮುಂಡ್ಕೂರ್, ಆನಂದ್ ರಂಗ್ರೇಜ್‌ ನಟಿಸುತ್ತಿದ್ದಾರೆ. ಇವರೊಂದಿಗೆ ಚಿತ್ರದಲ್ಲಿ ನರಸಾಪುರ ಸಂದೀಪ್, ಭಕ್ತರಹಳ್ಳಿ ರವಿ, ರೇಣುಕಾ ಜೀವನ್, ಶಿವು, ಅಬ್ದುಲ್ ರೆಹಮಾನ್ ಇದ್ದಾರೆ. ಚಿತ್ರಕ್ಕೆ ವಿನುಮನಸು ಸಂಗೀತವಿದೆ. ರಮೇಶ್ ಕೊಯಿರಾ ಛಾಯಾಗ್ರಹಣವಿದೆ.

ಮಲ್ಲಿ ಸಂಕಲನ ಮಾಡಿದರೆ, ಸುರೇಶ್ ಕಂಬಳಿ ಸಾಹಿತ್ಯವಿದೆ. ಶಿವು ಸಾಹಸ ಮಾಡಿದ್ದಾರೆ. ಭಕ್ತರಹಳ್ಳಿ ರವಿ ನಿರ್ಮಾಣ ನಿರ್ವಹಣೆ ಇದೆ. ಡಾ.ಪ್ರಭು ಗಂಜಿಹಾಳ ಮತ್ತು ಡಾ.ವೀರೇಶ್ ಹಂಡಗಿ ಕಲಾನಿರ್ದೇನವಿದೆ. ಈಗಾಗಲೇ ಚಿಕ್ಕಬಳ್ಳಾಪುರ ಚಿಂತಾಮಣಿ ನಂದಿಗಿರಿ ಸೇರಿದಂತೆ ಹಲವು ಕಡೆ ಚಿತ್ರೀಕರಣ ಮಗಿಸಿರುವ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸವದತ್ತಿ ಮತ್ತು ಗಜೇಂದ್ರಗಡ ಕಡೆ ಪ್ರಯಾಣ ಬೆಳೆಸಲಿದೆ.

Categories
ಸಿನಿ ಸುದ್ದಿ

ಜನವರಿ 21ಕ್ಕೆ ಫ್ಯಾಂಟಮ್‌ ಹೊಸ ಸುದ್ದಿ! ಶೀರ್ಷಿಕೆ ಬದಲಾದೀತೆ?

ವಿಕ್ರಾಂತ್‌ ರೋಣ ಟೈಟಲ್‌ ಪಕ್ಕಾ ಆಗುವ ಸಾಧ್ಯತೆ ಇದೆ

ಕನ್ನಡದಲ್ಲೀಗ ಸಿನಿಮಾ ಸುದ್ದಿಗಳ ಸುರಿಮಳೆ. ಹೌದು, ಕೊರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆಯೇ, ಅತ್ತ ಸಿನಿಮಾರಂಗದ ಚಟುವಟಿಕೆಗಳೂ ಜೋರಾಗಿವೆ. ಈಗ ಹೊಸ ಸುದ್ದಿಯೆಂದರೆ, ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾ ತಂಡದಿಂದ ಒಂದು ಸುದ್ದಿ ಹೊರಬಿದ್ದಿದೆ. ಈಗಾಗಲೇ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಜೋರು ಸುದ್ದಿ ಮಾಡಿತ್ತು. ಚಿತ್ರದ ಟೀಸರ್‌, ಟ್ರೇಲರ್‌ ಬಗ್ಗೆಯೂ ಸಿನಿಮಾ ಮಂದಿಗೆ ಕುತೂಹಲವಿದೆ. ಸದ್ಯಕ್ಕೆ “ಫ್ಯಾಂಟಮ್‌” ಚಿತ್ರತಂಡದಿಂದ ಜನವರಿ 21ರಂದು ಹೊಸ ಪ್ರಕಟಣೆಯೊಂದು ಹೊರಬೀಳಲಿದೆ ಎಂಬ ಸುದ್ದಿ ಬಂದಿದೆ. ಈ ಕುರಿತಂತೆ, ಸ್ವತಃ ನಿರ್ದೇಶಕ ಅನೂಪ್‌ ಭಂಡಾರಿ ತಮ್ಮ ಟ್ವೀಟ್‌ ಮೂಲಕ ಮಾಹಿತಿ ಕೊಟ್ಟಿದ್ದಾರೆ. ಜನವರಿ ೨೧ ಸಂಜೆ4.03ಕ್ಕೆ “ಫ್ಯಾಂಟಮ್‌” ಚಿತ್ರದ ಮುಖ್ಯವಾದ ಪ್ರಕಟಣೆ ಇದೆ ಎಂದು ಹೊಸದೊಂದು ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ವಿಷಯ ಹಂಚಿಕೊಂಡಿದ್ದಾರೆ.


ಅಂದಹಾಗೆ, ಆ ಮುಖ್ಯವಾದ ವಿಷಯ ಏನಿರಬಹುದು? ಈ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಸಿನಿಮಾದ ಬಿಡುಗಡೆಯ ದಿನವನ್ನು ಘೋಷಣೆ ಮಾಡಬಹುದಾ? ಈ ಪ್ರಶ್ನೆ ಕೂಡ ಹರಿದಾಡುತ್ತಿದೆಯಾದರೂ, ಏನಿರಬಹುದು ಎಂಬ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಕಾರಣ, ಮೊದಲ ಪೋಸ್ಟರ್‌ ನೋಡಿದವರಿಗೆ ಸಾಕಷ್ಟು ಭರವಸೆ ಮೂಡಿಸಿತ್ತು. ಇನ್ನು, ಪ್ಯಾನ್‌ ಇಂಡಿಯಾ ಸಿನಿಮಾ ಅನ್ನುವುದರಲ್ಲಿ ಎರಡು ಮಾತಿಲ್ಲ. ಅದೇನೆ ಮಾಹಿತಿ ಇದ್ದರೂ, ಜನವರಿ 21ರಂದು ಹೊರಬರಲಿದೆ.


ಚಿತ್ರದ ಶೀರ್ಷಿಕೆ ಬದಲಾಗಬಹುದಾ?
ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರದ ಶೀರ್ಷಿಕೆ ಬದಲಾಗಬಹುದು ಎಂಬ ಸುದ್ದಿಯೂ ಇದೆ. ಈಗಾಗಲೇ “ಫ್ಯಾಂಟಮ್” ಶೀರ್ಷಿಕೆ ಬೇರೆ ಬ್ಯಾನರ್‌ನಲ್ಲಿದೆ ಎನ್ನಲಾಗಿದ್ದು, ಹಾಗಾಗಿ ಚಿತ್ರಕ್ಕೆ ಬೇರೆ ಟೈಟಲ್‌ ಇಡುವ ಬಗ್ಗೆಯೂ ಚಿತ್ರತಂಡ ಯೋಚಿಸಿದೆ ಎನ್ನಲಾಗಿದೆ. ಅಂದಹಾಗೆ, ಈ “ಫ್ಯಾಂಟಮ್” ಚಿತ್ರದಲ್ಲಿ ಸುದೀಪ್ ಅವರು ವಿಕ್ರಾಂತ್ ರೋಣ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಹಾಗೊಂದು ವೇಳೆ ಶೀರ್ಷಿಕೆ ಬದಲಾದರೆ, “ವಿಕ್ರಾಂತ್‌ ರೋಣ” ಎಂಬ ಶೀರ್ಷಿಕೆ ಪಕ್ಕಾ ಆದರೂ ಆಗಬಹುದು.

ಕಿಚ್ಚ ಸುದೀಪ್‌ ಅಭಿನಯದ ” ಫ್ಯಾಂಟಮ್‌ʼ ಚಿತ್ರದ ಟೈಟಲ್‌ ಬದಲಾಗುತ್ತಾ?

ಈ ಹಿಂದೆಯೇ “ಸಿನಿಲಹರಿ” “ಫ್ಯಾಂಟಮ್‌” ಚಿತ್ರದ ಶೀರ್ಷಿಕೆ ಬದಲಾಗಬಹುದು ಎಂಬ ಕುರಿತಂತೆ ಸುದ್ದಿ ಪ್ರಕಟಿಸಿತ್ತು. ಅದರಲ್ಲಿ “ಫ್ಯಾಂಟಮ್‌” ಬದಲಾಗಿ “ವಿಕ್ರಾಂತ್‌ ರೋಣ” ಟೈಟಲ್‌ ಫಿಕ್ಸ್‌ ಆಗಬಹುದು ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಜಾಕ್‌ಮಂಜು ನಿರ್ಮಾಪಕರು.

 

Categories
ಸಿನಿ ಸುದ್ದಿ

ಕಲರ್‌ಫುಲ್‌ ಫೀಲ್ಡ್‌ಗೆ ಮತ್ತೆ ಬಂದ ಬಿಂದು – ಬಾಲನಟಿಯಿಂದ ನಾಯಕಿಯವರೆಗೆ

ನಮ್ಮ ಸಂಸ್ಕೃತಿ ಬಿಂಬಿಸುವ ಪಾತ್ರಕ್ಕೆ ಬಿಂದುಶ್ರೀ ಹುಡುಕಾಟ

ಈ ಬಣ್ಣದ ಲೋಕದ ಸೆಳೆತವೇ ಹಾಗೆ. ಇಲ್ಲಿ ಒಮ್ಮೆ ಎಂಟ್ರಿಯಾದರೆ ಮುಗೀತು. ಮತ್ತೆ ಮತ್ತೆ ಬಣ್ಣ ಹಚ್ಚಲೇಬೇಕೆನಿಸುವುದು ಸಹಜ. ಈಗಾಗಲೇ ಅಂತಹ ಅನೇಕ ಪ್ರತಿಭೆಗಳು ಕನ್ನಡದಲ್ಲಿ ಬಂದು ಮಿಂದೆದ್ದಿದ್ದಾರೆ. ಆ ಸಾಲಿಗೆ ಬಿಂದುಶ್ರೀ ಎಂಬ ನವನಟಿ ಕೂಡ ಈಗ ಹೊಸ ರೀತಿಯ ಪಾತ್ರಗಳನ್ನು ಎದುರು ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ಒಳ್ಳೆಯ ಪಾತ್ರ, ನಿರ್ಮಾಣ ಸಂಸ್ಥೆಯಲ್ಲಿ ಅವಕಾಶ ಸಿಕ್ಕರೆ ಕೆಲಸ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ. ಹೌದು, ಬಿಂದುಶ್ರೀ ಚನ್ನಗಿರಿ ಮೂಲದ ಹುಡುಗಿ. ಈ ಹುಡುಗಿಗೆ ಸಿನಿಮಾರಂಗ ಹೊಸದೇನಲ್ಲ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದವರು. “ಶ್ರೀರಸ್ತು ಶುಭಮಸ್ತು”,”ಶಿವಪ್ಪ ನಾಯಕ”,”ಪ್ರೀತ್ಸೋದ್‌ ತಪ್ಪಾ” ಸೇರಿದಂತೆ ಈವರೆಗೆ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲೂ ಇವರ ಪ್ರಯಣ ಸಾಗಿದೆ. “ಕಾವ್ಯಾಂಜಲಿ”, “ಗೌತಮಿ” ಮೆಗಾ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ನಟನೆ ಜೊತೆಗೆ ಓದು ಕೂಡ ಮುಖ್ಯ ಎಂಬ ಕಾರಣಕ್ಕೆ ನಟನೆಯನ್ನು ಮೊಟಕುಗೊಳಿಸಿ, ಓದಿನತ್ತ ಗಮನಹರಿಸಿದ್ದರು ಬಿಂದುಶ್ರೀ. ಇನ್ನು, ಇವರ ತಂದೆ ಸಿವಿಲ್‌ ಎಂಜಿನಿಯರ್.‌ ಅವರ ತಂದೆ ಮಾತಿನ ಪ್ರಕಾರ, ಪದವಿ ಪಡೆದರು. ಅದರಲ್ಲೂ ಅವರದು ಪದವಿಯಲ್ಲಿ ಹದಿನಾರನೇ ರ‍್ಯಾಂಕ್.

ಪ್ರತಿಷ್ಠಿತ ಕಂಪೆನಿಯಲ್ಲಿ ಬಿಂದುಶ್ರೀ ಟೆಕ್ಕಿಯಾಗಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ತಾಯಿ ಶಾಸ್ತ್ರೀಯ ಸಂಗೀತ ಕಲಿತವರ. ವೃತ್ತಿಪರ ಗಾಯಕಿಯೇನಲ್ಲ. ಆದರೆ, ಅವರ ಆಸೆಯಂತೆ ತಂದೆಯ ಮನವೊಲಿಸಿ, ಪುನಃ ನಟನೆಗೆ ಮರಳಲು ರೆಡಿಯಾಗಿದ್ದಾರೆ.  ಕುರಿತು ಸ್ವತಃ ಬಿಂದುಶ್ರೀ ಹೇಳುವುದಿಷ್ಟು, “ನನಗೆ ನಟನೆ ಮೇಲೆ ಆಸಕ್ತಿ ಇದೆ. ಹಾಗಂತ ಸಿಕ್ಕ ಸಿಕ್ಕ ಪಾತ್ರಗಳನ್ನೆಲ್ಲಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಪರೂಪ ಎಂಬಂತಹ, ಚಾಲೆಂಜಿಂಗ್‌ ಇರುವ, ನಮ್ಮ ಸಂಸ್ಕ್ರತಿ ಬಿಂಬಿಸುವಂತಹ ಪಾತ್ರಗಳು ಬಂದರೆ ನಾನು ಕೆಲಸ ಮಾಡಲು ಇಷ್ಟಪಡ್ತೀನಿ. ಯಾವುದೇ ದೊಡ್ಡ ಬ್ಯಾನರ್ ಇದ್ದರೂ, ಸರಿ, ನನಗೆ ಒಪ್ಪುವ ಮಾತ್ರ ಮಾತ್ರ ಮಾಡುತ್ತೇನೆ. ವಿನಾಕಾರಣ ಬೇರೆ ರೀತಿಯ ಪಾತ್ರ ಮಾಡಲಾರೆ” ಎಂಬುದು ಬಿಂಬಶ್ರೀ ಮಾತು.
ಇತ್ತೀಚೆಗೆ ಬಿಂದುಶ್ರೀ ಅಭಿನಯದ “ಮಹಿಷಾಸುರ” ಚಿತ್ರ ರಿಲೀಸ್‌ ಆಗಿತ್ತು. ಈ ಚಿತ್ರದಲ್ಲಿ ಬಿಂದುಶ್ರೀ ನಟಿಸಿದ್ದಾರೆ. ಇವರ ಎರಡನೇ ಚಿತ್ರ “ಲಡ್ಡು” ಸಿನಿಮಾ ಕೂಡ ಇಷ್ಟರಲ್ಲೇ ಬಿಡುಗಡೆಯಾಗಲಿದೆ. “ಮಿ. ಅಂಡ್ ಮಿಸಸ್ ಜಾನು” ಚಿತ್ರದಲ್ಲೂ ಬಿಂದುಶ್ರೀ ನಟಿಸುತ್ತಿದ್ದಾರೆ. ಸದ್ಯಕ್ಕೆ ಬಿಂದುಶ್ರೀ ಮೂರು ಕಥೆ ಗಳನ್ನು ಕೇಳಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಹೊಸ ಸಿನಿಮಾ ಬಗ್ಗೆ ಮಾಹಿತಿ ಕೊಡುವುದಾಗಿ ಹೇಳುತ್ತಾರೆ ಬಿಂದಶ್ರೀ. ಅದೇನೆ ಇರಲಿ, ಕೈತುಂಬ ಸಂಬಳ ಸಿಗುವ ಕೆಲಸಕ್ಕೆ ಗುಡ್‌ಬೈ ಹೇಳಿ, ಚಿತ್ರರಂಗಕ್ಕೆ ಕಾಲಿಟ್ಟ ಬಗ್ಗೆ ಬಿಂದುಶ್ರೀ ಅವರಿಗೆ ಹೆಮ್ಮೆ ಇದೆ. ಟ್ರೆಡಿಷನಲ್‌ ಪಾತ್ರ ನನಗಿಷ್ಟ. ಅಪ್ಪನಿಗೂ ಅಂಥದ್ದೇ ಪಾತ್ರ ಮಾಡಬೇಕು ಎಂಬ ಬಯಕೆ. ಆ ಕುರಿತು ಸಲಹೆ, ಸೂಚನೆಯನ್ನೂ ನೀಡಿದ್ದಾರೆ. ಸದ್ಯ ನಾನು ನಾಯಕಿ ಆಗಿರವುದನ್ನು ನೋಡಲು ಅಮ್ಮ ಇಲ್ಲ ಎಂಬ ಬೇಸರವಿದೆ. ಸದ್ಯ ಇಬ್ಬರು ತಂಗಿಯರಿಗೆ ಅಭಿನಯದಲ್ಲಿ ಆಸಕ್ತಿ ಇಲ್ಲ. ಅಂದು ರವಿಚಂದ್ರನ್, ಸೌಂದರ್ಯ ಅವರಿಗೆ ಅಭಿಮಾನಿಯಾಗಿದ್ದ ಬಿಂದುಶ್ರೀ, ಇಂದು ರಾಧಿಕಾಪಂಡಿತ್, ದರ್ಶನ್ ಅವರ ಅಪ್ಪಟ ಅಭಿಮಾನಿ. ಅದೇನೆ ಇರಲಿ, ಪಕ್ಕಾ ಕನ್ನಡದ ಹುಡುಗಿಯಾಗಿರುವ ಬಿಂದುಶ್ರೀ ಇದೀಗ ಹೊಸ ಬಗೆಯ ಪಾತ್ರಗಳನ್ನು ಎದುರು ನೋಡುತ್ತಿದ್ದಾರೆ.

Categories
ಸಿನಿ ಸುದ್ದಿ

ಗೆದ್ದವರ ಹೊಸ ಭರವಸೆಯ ಚಿತ್ರ ! ಕಮರೊಟ್ಟು ಕಡೆಯಿಂದ ಹೊಸ ಚೆಕ್ ಪೋಸ್ಟ್ ಕಡೆಗೆ

ಕಮರೊಟ್ಟು ಜೋಡಿಯ ಹೊಸ ಚಿತ್ರಕ್ಕೆ ಪೂಜೆ

ಕನ್ನಡ ಚಿತ್ರರಂಗ ಈಗ ಗರಿಗೆದರಿದೆ. ಕೊರೊನೊ ಭಯ ದೂರವಾಗುತ್ತಿದ್ದಂತೆಯೇ ಅತ್ತ ಸಿನಿಮಾ ಮಂದಿಯ ಮೊಗದಲ್ಲಿ ಮಂದಹಾಸ ಮೂಡಿದೆ. ದಿನ ಕಳೆದಂತೆ ಹೊಸಬರ ಚಿತ್ರಗಳು ಸೆಟ್ಟೇರುತ್ತಿವೆ. ಒಂದಷ್ಟು ಚಿತ್ರಗಳು ಬಿಡುಗಡೆಯಾಗುತ್ತಿವೆ. ಅದೇ ಉತ್ಸಾಹದಲ್ಲೇ ಸಿನಿ ಮಂದಿ ಅಖಾಡಕ್ಕಿಳಿದಿದ್ದಾರೆ.

ಈಗ ಅಂಥದ್ದೇ ಹೊಸ ಹುಮ್ಮಸ್ಸು, ಹುರುಪಿನೊಂದಿಗೆ ಚಿತ್ರತಂಡವೊಂದು ಸ್ಕ್ರಿಪ್ಟ್ ಪೂಜೆ ನೆರವೇರಿಸಿದೆ.
ಹೌದು, ಈ ಹಿಂದೆ “ಕಮರೊಟ್ಟು ಚೆಕ್ ಪೋಸ್ಟ್” ಎಂಬ ಯಶಸ್ಸಿನ ಸಿನಿಮಾ ಕೊಟ್ಟಿದ್ದ ನಿರ್ದೇಶಕ ಪರಮೇಶ್ ಈಗ ಹೊಸ ಚಿತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ.


ವಿಶೇಷವೆಂದರೆ, “ಕಮರೊಟ್ಟು ಚೆಕ್ ಪೋಸ್ಟ್” ಯಶಸ್ಸಿನ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದ ಉತ್ಪಲ್ ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತದೇ ಯಶಸ್ಸಿನ ಜೋಡಿ ಹೊಸ ಮೋಡಿ ಮಾಡಲು ಹೊರಟಿದೆ.


ಅಂದಹಾಗೆ, ಅವರ ಕನಸಿನ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. “ಕಮರೊಟ್ಟು ಚೆಕ್ ಪೋಸ್ಟ್” ಕೊಟ್ಟ ಗೆಲುವು ಪುನಃ ಈ ಚಿತ್ರ ಮಾಡೋಕೆ ಕಾರಣವಾಗಿದೆ.
ಈ ಬಾರಿ‌ ನಿರ್ದೇಶಕ ಪರಮೇಶ್, ಒಂದೊಳ್ಳೆಯ ಕಥೆ ಹೆಣೆದು ಚಿತ್ರಕ್ಕೆ ಅಣಿಯಾಗಿದ್ದಾರೆ. ಸದ್ಯಕ್ಕೆ ತೀರ್ಥಹಳ್ಳಿಯಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿದೆ.

ಈ ಚಿತ್ರದ ತೆರೆಯ ಮೇಲೆ ಯಾರೆಲ್ಲ ಇದ್ದಾರೆ, ತೆರೆಯ ಹಿಂದೆ ಯಾರೆಲ್ಲ ಇರಲಿದ್ದಾರೆ ಎಂಬುದಕ್ಕೆ ಇನ್ನೂ ಮಾಹಿತಿ ಇಲ್ಲ. ಒಳ್ಳೆಯ ದಿನ‌ ಸ್ಕ್ರಿಪ್ಟ್ ಪೂಜೆ ಮಾಡಿರುವ ಪರಮೇಶ್ ಮತ್ತು ಉತ್ಪಲ್ ಕನ್ನಡಕ್ಕೆ ಮತ್ತೊಂದು ಹೊಸ ಬಗೆಯ ಸಿನಿಮಾ ಕಟ್ಟಿಕೊಡಲು ಉತ್ಸುಕರಾಗಿದ್ದಾರೆ.


ಅದೇನೆ ಇರಲಿ, ಒಂದು ಚಿತ್ರ ಆಗುತ್ತಿದ್ದಂತೆಯೇ, ನಿರ್ದೇಶಕ ಮತ್ತು ಹೀರೋ ಮಧ್ಯೆ ಮಾತುಕತೆಯೆ ನಿಂತು ಹೋಗುವ ಈ ಕಾಲದಲ್ಲಿ, ಪುನಃ ಒಟ್ಟಾಗಿ ಒಂದು ಹೊಸ ಸಿನಿಮಾ ಮಾಡಲು ಅಣಿಯಾಗುವುದು ನಿಜಕ್ಕೂ ಅವರಿಬ್ಬರ ನಡುವಿನ ಬಾಂಡಿಂಗ್ ಮುಖ್ಯ. ಇಲ್ಲಿ ಇಬ್ಬರು ಪರಸ್ಪರ ಇಟ್ಟುಕೊಂಡಿರುವ ನಂಬಿಕೆ ಇದಕ್ಕೆ‌ ಬಲವಾದ ಕಾರಣ.


ಇದು ಕೂಡ ಮತ್ತೊಂದು ದೊಡ್ಡ ಗೆಲುವು ಕೊಡುವ ಸಿನಿಮಾ ಆಗಿ ಹೊರಬರಲಿ ಅನ್ನೋದೇ “ಸಿನಿಲಹರಿ” ಹಾರೈಕೆ.

Categories
ಸಿನಿ ಸುದ್ದಿ

ಗೋವಾ ಚಿತ್ರೋತ್ಸವದಲ್ಲಿ ಸುದೀಪ್ ಶೈನಿಂಗ್ – ಕನ್ನಡದಲ್ಲೇ ಮಾತು ಶುರು ಮಾಡಿದ ಕಿಚ್ಚ

ಪಣಜಿ ಚಿತ್ರೋತ್ಸವದಲ್ಲಿ ಸುದೀಪ್ ಗೆ ಗೌರವ

ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಕನ್ನಡದ ಖ್ಯಾತ ನಟ ಸುದೀಪ್ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.
ಈ ಅಪರೂಪದ ಅವಕಾಶಕ್ಕೆ ಸಾಕ್ಷಿಯಾದ ಸುದೀಪ್, ಆ ಸಮಾರಂಭದ ವೇದಿಕೆಯಲ್ಲಿ ಕನ್ಮಡದಲ್ಲೇ ಮಾತು ಆರಂಭಿಸಿದ್ದು ಎಲ್ಲರಿಗೂ ಖುಷಿ ಕೊಟ್ಟಿದೆ.

ಪಣಜಿಯಲ್ಲಿ ನಡೆಯುತ್ತಿರುವ ಈ ಚಿತ್ರೋತ್ಸವ
ಜ.16ರಿಂದ ಜ.24ರವರೆಗೆ ನಡೆಯುತ್ತಿದೆ.
ಪ್ರತಿಷ್ಠಿತ ‘ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ’ (IFFI) 51ನೇ ಆವೃತ್ತಿಯು ಜ.16ರಿಂದ ಆರಂಭವಾಗಿದ್ದು, ಉದ್ಘಾಟನೆಗೆ ಸುದೀಪ್ ಮುಖ್ಯ ಅತಿಥಿಯಾಗಿ ಭಾಗವಹಿಸಿರುವುದು ವಿಶೇಷ.

ಈ ಚಿತ್ರೋತ್ಸವದಲ್ಲಿ ಹಲವಾರು ವಿದೇಶಗಳಿಂದ ಸಿನಿಮಾ‌ ಗಣ್ಯರು, ಸಿನಿ ಪ್ರೇಮಿಗಳು ಆಗಮಿಸಿದ್ದರು.
ಆ ಕಾರ್ಯಕ್ರಮದಲ್ಲಿ ಸುದೀಪ್ ಕನ್ನಡ ಮಾತನಾಡುವ ಅಲ್ಲಿ ನೆರೆದಿದ್ದವರ ಮನ ಗೆದ್ದಿದ್ದಾರೆ ಸುದೀಪ್.
‘ಪ್ರತಿಯೊಬ್ಬರಿಗೂ ಕನ್ನಡ ಚಿತ್ರರಂಗದ ಪರವಾಗಿ ಹಾಗೂ ಕರ್ನಾಟಕದ ಪರವಾಗಿ ಈ ಕಿಚ್ಚನಿಂದ ನಮಸ್ತೆ’ ಎಂದು ಕನ್ನಡದಲ್ಲಿಯೇ ಹೇಳುವ ಮೂಲಕ ಸುದೀಪ್‌ ಮಾತು ಶುರು ಮಾಡಿ ಭಾಷೆ ಪ್ರೀತಿ ತೋರಿದ್ದಾರೆ.

‘ಸಿನಿಮಾ ಮತ್ತು ಕ್ರೀಡೆ ಎಂಬುದು ನಮ್ಮೆಲ್ಲರನ್ನೂ ಬೆಸೆದಿದೆ. ಆ ಕಾರಣಕ್ಕಾಗಿಯೇ ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಸಿನಿಮಾ ಎಂಬುದು ಈ ಬಾರಿ ಎಲ್ಲೆಲ್ಲೂ ಹಬ್ಬಲಿ. ದೇಶ ಸುತ್ತು, ಕೋಶ ಓದು ಎಂಬ ಮಾತನ್ನು ನಾನು ಕೇಳಿದ್ದೇನೆ. ಈ ಎರಡನ್ನೂ ಸಿನಿಮಾ ಒದಗಿಸುತ್ತದೆ. ನನಗೆ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು’ ಎಂದಿದ್ದಾರೆ ಸುದೀಪ್‌.

Categories
ಸಿನಿ ಸುದ್ದಿ

ರಮೇಶ್‌ ಸುರೇಶ್‌ ಚಿತ್ರಕ್ಕೆ ಕುಂಬಳಕಾಯಿ – ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ ಚಿತ್ರತಂಡ

ಸಂಭ್ರಮದಲ್ಲಿ ಮಿಂದೆದ್ದ ರಮೇಶ್‌ ಸುರೇಶ್‌ ತಂಡ

ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಹೊಸಬರ “ರಮೇಶ್‌ ಸುರೇಶ್”‌ ಸುದ್ದಿಯಲ್ಲಿದೆ. ಈ ಸುದ್ದಿಗೆ ಕಾರಣ, ಈ ಚಿತ್ರದ ಮೂಲಕ ಬಹುತೇಕ ಹೊಸಬರೇ ಗಾಂಧಿನಗರಕ್ಕೆ ಕಾಲಿಟ್ಟಿರುವುದು ಒಂದಾದರೆ, ರಂಗಭೂಮಿಯ ಗುಬ್ಬಿವೀರಣ್ಣ ಅವರ ಮರಿಮೊಮ್ಮಗ ಈ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿರುವುದು.

“ರಮೇಶ್‌ ಸುರೇಶ್‌” ಚಿತ್ರ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹೆಸರಘಟ್ಟ ಸುತ್ತಮುತ್ತಲಿರುವ ಕಾಡಿನಲ್ಲಿ ಭರ್ಜರಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವುದರೊಂದಿಗೆ ಚಿತ್ರತಂಡ ಚಿತ್ರಕ್ಕೆ ಕುಂಬಳಕಾಯಿ ಒಡೆಯುವ ಮೂಲಕ ಚಿತ್ರೀಕರಣ ಪೂರೈಸಿದೆ.

ಬಹುತೇಕ ಹೊಸ ಪ್ರತಿಭೆಗಳೇ ತುಬಿರುವ‌ ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಇಲ್ಲಿ ಇಬ್ಬರು ಹೀರೋಗಳಿದ್ದಾರೆ. ಇಬ್ಬರು ನಿರ್ದೇಶಕರಿದ್ದಾರೆ. ಇಬ್ಬರು ನಿರ್ಮಾಪಕರಿದ್ದಾರೆ. ಹೀರೋಗಳಿಗೆ ಒಬ್ಬರೇ ನಾಯಕಿ ಅನ್ನೋದಷ್ಟೇ ವಿಶೇಷ.

ಅಂದಹಾಗೆ, ಈ ಚಿತ್ರಕ್ಕೆ ಬೆನಕ ಗುಬ್ಬಿ ವೀರಣ್ಣ ಹಾಗೂ ಯಶ್ ರಾಜ್ ನಾಯಕರು. ಇವರಿಗೆ ಚಂದನಾ ಸೇಗು ನಾಯಕಿ. ನಾಗರಾಜ್ ಮಲ್ಲಿಗೇನಹಳ್ಳಿ ಮತ್ತು ರಘುರಾಜ್ ಗೌಡ ನಿರ್ದೇಶಕರು.

ಯಶ್ ರಾಜ್, ಚಂದನಾ, ಬೆನಕ

ಆರ್. ಕೆ. ಟಾಕೀಸ್ ಬ್ಯಾನರ್ ಮೂಲಕ ಕೃಷ್ಣ ಪಿ. ಹಾಗೂ ಶಂಕರ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇವರೆಲ್ಲರಿಗೂ ಇದು ಮೊದಲ ಅನುಭವ. ಸದ್ಯಕ್ಕೆ ಚಿತ್ರೀಕರಣ ಪೂರೈಸಿರುವ ಚಿತ್ರತಂಡ, ಮಾತಿನ ಭಾಗವನ್ನೂ ಬಹುತೇಕ ಮುಗಿಸಿದೆ. ಈ ಚಿತ್ರದ ಹೈಲೈಟ್ ಅಂದರೆ ಸಾಧುಕೋಕಿಲ ಮತ್ತು ತೆಲುಗಿನ‌ ಖ್ಯಾತ ನಟ ಸತ್ಯ ಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮೋಹನ್ ಜುನೇಜಾ ಮತ್ತು ಅನೇಕ ರಂಗಪ್ರತಿಭೆಗಳು ನಟಿಸಿದ್ದಾರೆ.

ಕೃಷ್ಣ, ಪಿ. ನಿರ್ಮಾಪಕರು

“ರಮೇಶ್‌ ಸುರೇಶ್‌” ಚಿತ್ರದ ಬಗ್ಗೆ ಹೇಳುವುದಾದರೆ, ಚಿತ್ರದ ಶೀರ್ಷಿಕೆ ನೋಡಿದಾಕ್ಷಣ ಇದೊಂದು ಹಾಸ್ಯಮಯ ಚಿತ್ರ ಎಂಬುದನ್ನು ಸಾರುತ್ತದೆ. ಕಥೆ ಕೂಡ‌ ಹಾಸ್ಯವಾಗಿಯೇ ಸಾಗಲಿದೆ ಎಂಬುದು ನಿರ್ದೇಶಕದ್ವಯರ ಮಾತು. ಚಿತ್ರದಲ್ಲಿ ಬೆನಕ ಹಾಗೂ ಯಶುರಾಜ್ ಸೋಮಾರಿ ಹುಡುಗರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲಸವಿಲ್ಲದ ಆಲೆಮಾರಿ ಹುಡುಗರಾಗಿ ಕಾಣಿಸಿಕೊಂಡಿರುವ ಅವರು, ‘ಇಲ್ಲಿ ಕಥೆಯೇ ಹೀರೋ’ ಎನ್ನುತ್ತಾರೆ.

ಮಾಸ್ಟರ್ ರಕ್ಷಿತ್ ಕೃಷ್ಣ

ಹಾಸ್ಯದ ಜೊತೆಗೆ ಎಮೋಶನ್ಸ್‌ ಕೂಡ ಚಿತ್ರದಲ್ಲಿದೆ. ಸಿನಿಮಾ‌ ಅಪ್ಟಟ‌ ಮನರಂಜನೆಯ ಜೊತೆಗೆ ಸಂದೇಶವನ್ನು ಕೊಡಲಿದೆ ಎಂಬುದು ಚಿತ್ರ ತಂಡದ ಮಾತು. ಇನ್ನು ನಾಯಕರಿಬ್ಬರಿಗೂ ಇದು ಚೊಚ್ಚಲ ಚಿತ್ರ. ಹೊಸಬರನ್ನು ನಂಬಿ ಅವರಿಗೆ ಉತ್ಸಾಹ ತುಂಬಿ ನಿರ್ಮಾಪಕದ್ವಯರಾದ ಕೃಷ್ಣ ಹಾಗೂ ಶಂಕರ್ ಅವರು ಅವಕಾಶ ಕೊಟ್ಟಿದ್ದಾರೆ. ಹೊಸ ಪ್ರತಿಭೆಗಳ‌ ಮೇಲೆ ಭರವಸೆ ಇಟ್ಟು ನಿರ್ದೇಶಕರಾದ ನಾಗರಾಜ್‌ ಮತ್ತು ರಘರಾಜ್‌ ಗೌಡ ಕೂಡ ತಮ್ಮ ಕೆಲಸ ಮಾಡಿ ಮುಗಿಸಿದ್ದಾರೆ.

ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಪ್ರಮೋದ್‌ ಮರವಂತೆ ಇತರರು ಹಾಡು ಬರೆದಿದ್ದಾರೆ. ವಿಶ್ವಜಿತ್ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.
ಈ ಚಿತ್ರದ ಮೂಲಕ ಗುಬ್ಬಿ ವೀರಣ್ಣ ಅವರ ಮರಿ ಮೊಮ್ಮಗ ಬೆನಕ ಚಿತ್ರರಂಗ ಪ್ರವೇಶಿಸಿದ್ದಾರೆ. ಇವರು ಗುಬ್ಬಿ ವೀರಣ್ಣ ಅವರ ಮೊಮ್ಮಗ ಸದಾಶಿವ ಅವರ ಪುತ್ರ. ರಂಗಭೂಮಿ ಕುಟುಂಬದ ಹಿನ್ನೆಲೆ ಇರುವ ಬೆನಕ ಗುಬ್ಬಿ ವೀರಣ್ಣ, ಹಲವು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. “ಮನ್ಮಥ ವಿಜಯ’,”ರೂಪಾಂತರ’ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. “ಮಾವನ ಮನೆ ರೊಟ್ಟಿ’ ಸೇರಿದಂತೆ ಹಲವು ನಾಟಕಗಳಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿದ ಬೆನಕ ಗುಬ್ಬಿ ವೀರಣ್ಣ, ಈಗ “ರಮೇಶ್ ಸುರೇಶ್” ಚಿತ್ರದ ಮೂಲಕ ಬಣ್ಣದ ಲೋಕಕ್ಕೆ‌ ಎಂಟ್ರಿಯಾಗಿದ್ದಾರೆ.

ಮತ್ತೊಬ್ಬ ಹೀರೋ ಯಶ್ ರಾಜ್ ಕೂಡ ರಂಗಭೂಮಿ‌ ಹಿನ್ನೆಲೆಯಿಂದ ಬಂದವರು. ಸದ್ಯ ತುಮಕೂರಿನಲ್ಲಿ‌ ವಿಜೆಯಾಗಿರುವ ಯಶ್ ರಾಜ್, ಕಾರ್ಯಕ್ರಮಗಳ‌ ಮೂಲಕ ಸಾಕಷ್ಟು ಮಾನವೀಯ ಕೆಲಸಗಳಿಗೂ ಕಾರಣರಾಗಿದ್ದಾರೆ. ಕಲೆಯನ್ನೇ ನಂಬಿರುವ ಯಶ್ ರಾಜ್ ಗಾಂಧಿನಗರದಲ್ಲಿ ಗಟ್ಟಿ‌ನೆಲೆ ಕಂಡುಕೊಳ್ಳುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಒಬ್ಬ ನಟನಿಗೆ ಏನೆಲ್ಲಾ ಅರ್ಹತೆ ಇರಬೇಕೋ ಎಲ್ಲವನ್ನೂ ಕರಗತ ಮಾಡಿಕೊಂಡು ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ ಯಶ್‌ರಾಜ್.
ಸಾಮಾನ್ಯವಾಗಿ ಹೊಸಬರಿಗೆ ಸಿನಿಮಾ‌ ಇಂಡಸ್ಟ್ರಿಯಲ್ಲಿ ಅವಕಾಶ‌ ಸಿಗೋದು ತುಬಾನೇ ಕಷ್ಟ. “ರಮೇಶ್ ಸುರೇಶ್” ಚಿತ್ರದ ನಿರ್ದೇಶಕರಾದ ನಾಗರಾಜ್ ಹಾಗೂ ರಘುರಾಜ್ ಗೌಡ ಮತ್ತು ಹೀರೋಗಳಾದ ಬೆನಕ ಮತ್ತು ಯಶ್ ರಾಜ್ ಅವರಲ್ಲಿರುವ ಪ್ರತಿಭೆ ಹಾಗೂ ಶ್ರದ್ಧೆ ನೋಡಿ ಎಲ್ಲಕ್ಕಿಂತಲೂ ಹೆಚ್ಚಾಗಿ ಕಥಾಹಂದರದಲ್ಲಿರುವ ಗಟ್ಟಿತನ‌ ನೋಡಿ ನಿರ್ಮಾಪಕರಾದ ಕೃಷ್ಣ ಮತ್ತು ಶಂಕರ್ ಅವಕಾಶ ನೀಡಿದ್ದಾರೆ.

ಈಗಾಗಲೇ ಚಿತ್ರದ ಕೆಲ ದೃಶ್ಯ ನೋಡಿ ಹಾಡು ಕೇಳಿರುವ ನಿರ್ಮಾಪಕರಿಗೆ ಕನ್ನಡದಲ್ಲಿ ಹೊಸ ಬಗೆಯ ಕಥೆ ಇರುವ ಚಿತ್ರ ಮಾಡಿರುವ ಖುಷಿ ಇದೆ. ಈಗಾಗಲೇ ಗಾಂಧಿನಗರದಲ್ಲಿ ಕೊಂಚ ಸುದ್ದಿಯಾಗಿರುವ “ರಮೇಶ್ ಸುರೇಶ್” ಚಿತ್ರ ಆದಷ್ಟು ಬೇಗ ರಿಲೀಸ್‌ಗೆ ರೆಡಿಯಾಗುತ್ತಿದೆ. ಇಷ್ಟರಲ್ಲೇ ಚಿತ್ರದ ಟ್ರೇಲರ್‌ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸಿದೆ.

Categories
ಸಿನಿ ಸುದ್ದಿ

ಶಶಿ ಕಣ್ಣಲ್ಲಿ ಸಿನಿಮಾ ಬೆಳಕು – ನಟಿಸಲು ಬಂದು ನಿರ್ಮಾಣ, ನಿರ್ದೇಶನಕ್ಕೂ ಇಳಿದ ಕನಸುಗಾರ

ಗುಣಮಟ್ಟ-ಸದಭಿರುಚಿಯ ಚಿತ್ರ ಕೊಡೋದೇ ನನ್ನ ಗುರಿ

ಶಶಿಧರ್‌, ನಿರ್ಮಾಪಕ, ನಿರ್ದೇಶಕ

ಸಿನಿಮಾ ಅನ್ನೋದು ಒಂದು ತಪಸ್ಸು. ಇಲ್ಲಿ ಅದೆಷ್ಟೇ ತಪಸ್ಸು ಮಾಡಿದರೂ ಯಶಸ್ಸು ಅನ್ನೋದು ತುಸು ಕಷ್ಟವೇ. ತಪಸ್ಸಿನ ಜೊತೆ ಇಲ್ಲಿ ಪ್ರತಿಭೆ, ಅದೃಷ್ಟ ಇರಲೇಬೇಕು. ಹಣವಿದ್ದಾಕ್ಷಣ, ಸಾಧಿಸಬಹುದು ಅನ್ನುವುದು ಕೇವಲ ಭ್ರಮೆ. ಸಿನಿಮಾ ಮೇಲಿನ ಪ್ರೀತಿ, ಶ್ರದ್ಧೆ, ಭಕ್ತಿ ಮತ್ತು ಕಲೆಯ ಮೇಲೆ ಅತೀವ ಗೌರವ ಇದ್ದವರಿಗೆ ಮಾತ್ರ ಕಲಾದೇವಿ ಒಲಿಯುತ್ತಾಳೆ. ಬಣ್ಣದ ಲೋಕದಲ್ಲಿ ಮಿಂದೇಳುವುದು ಸುಲಭದ ಮಾತಲ್ಲ. ಕಲಾದೇವಿ ಎಲ್ಲರಿಗೂ ಒಲಿಯೋದಿಲ್ಲ. ಅಪಾರ ಪರಿಶ್ರಮ ಕೂಡ ಬೇಕು. ಸಿನಿಮಾ ಮೇಲಿನ ಪ್ರೀತಿ, ಶ್ರದ್ಧೆ, ಭಕ್ತಿ ಮತ್ತು ಗೌರವ ಇಟ್ಟುಕೊಂಡಿದ್ದರಿಂದಲೇ ಇಂದು ನಟ, ನಿರ್ಮಾಪಕ ಕಮ್‌ ನಿರ್ದೇಶಕ ಶಶಿಧರ್‌ ಕೆ.ಎಂ. ಸ್ಯಾಂಡಲ್‌ವುಡ್‌ನಲ್ಲೊಂದು ಛಾಪು ಮೂಡಿಸಲು ಸಾಧ್ಯವಾಗಿದೆ.


ಇಷ್ಟಕ್ಕೂ ಶಶಿಧರ್‌ ಕೆ.ಎಂ. ಅಂದಾಕ್ಷಣ ಬಹಳಷ್ಟು ಮಂದಿಗೆ ಕೊಂಚ ಗೊಂದಲವಾಗಬಹುದು. ಅದೇ, “ಡಾಟರ್‌ ಆಫ್‌ ಪಾರ್ವತಮ್ಮ” ಸಿನಿಮಾದ ನಿರ್ಮಾಪಕ, “ವೀರಂ” ಚಿತ್ರದ ಮೇನ್‌ ಸ್ಟ್ರೆಂಥ್‌, “ಶುಗರ್‌ಲೆಸ್‌” ಚಿತ್ರದ ನಿರ್ದೇಶಕ ಅಂದಾಗ ಮಾತ್ರ, ಶಶಿಧರ್‌ ಥಟ್ಟನೆ ನೆನಪಾಗುತ್ತಾರೆ. ಹೌದು, ಅದೇ ಶಶಿಧರ್‌ ಬಗ್ಗೆ ಇಲ್ಲಿ ಹೇಳಲಾಗುತ್ತಿದೆ. ಇಷ್ಟಕ್ಕೂ ಶಶಿಧರ್‌ ಕುರಿತು ಇಲ್ಲೇಕೆ ಇಷ್ಟೊಂದು ಪೀಠಿಕೆ ಅಂದರೆ, ಶಶಿಧರ್‌ ಇಂಡಸ್ಟ್ರಿಗೆ ಬಂದಿದ್ದು, ತಾನೊಬ್ಬ ಕಲಾವಿದ ಎನಿಸಿಕೊಳ್ಳಬೇಕು ಅನ್ನುವ ಕಾರಣಕ್ಕೆ. ಆದರೆ, ಅವರು ಕಲಾವಿದನಾಗುವುದರ ಜೊತೆಗೆ ತಾನೊಬ್ಬ ನಿರ್ಮಾಪಕರಾಗಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶಕರಾಗಿಯೂ ಗುರುತಿಸಿಕೊಂಡಾಗಿದೆ.

ರಚಿತಾ, ಪ್ರಜ್ವಲ್-‌ ವೀರಂ

ನಿರ್ಮಾಣ, ನಿರ್ದೇಶನದಲ್ಲೂ ಸೈ

ನಿಜ, ಶಶಿಧರ್‌ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಕೇವಲ ಮೂರು ವರ್ಷಗಳಷ್ಟೇ ಕಳೆದಿವೆ. ಅವರು ಇಲ್ಲಿಗೆ ಬಂದಿದ್ದೇ, ತಾನೊಬ್ಬ ಕಲಾವಿದ ಆಗಬೇಕು ಅಂತ. ಈವರೆಗೆ ಅವರು ಸುಮಾರು ಹದಿನೈದು ಚಿತ್ರಗಳಲ್ಲಿ ತರಹೇವಾರಿ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದಾರೆ. ಬೆಳ್ಳಿತೆರೆಯ ಜೊತೆ ಜೊತೆಯಲ್ಲಿ ಕಿರುತೆರೆಯನ್ನೂ ಸ್ಪರ್ಶಿಸಿದ್ದಾರೆ. ಕಿರುತೆರೆಯಲ್ಲೂ ಆರು ಧಾರಾವಾಹಿಗಳಲಿ ಬಣ್ಣ ಹಚ್ಚಿಕೊಂಡಿದ್ದುಂಟು. ಅದರಾಚೆಗೆ ಶಶಿಧರ್‌ ಧೈರ್ಯ ಮಾಡಿ, ನಿರ್ಮಾಣಕ್ಕೂ ಜೈ ಅಂದರು. ತಮ್ಮ ದಿಶಾ ಎಂಟರ್‌ಟೈನರ್ಸ್‌ ಬ್ಯಾನರ್‌ನಲ್ಲಿ ಮೊದಲು ಹರಿಪ್ರಿಯಾ ಅಭಿನಯದ “ಡಾಟರ್‌ ಆಫ್‌ ಪಾರ್ವತಮ್ಮ” ಸಿನಿಮಾ ನಿರ್ಮಾಣ ಮಾಡಿದರು. ಇವರೊಂದಿಗೆ ಹಲವು ಗೆಳೆಯರು ಕೈ ಜೋಡಿಸಿದರು.

ಈ ಚಿತ್ರದಲ್ಲಿ ಸುಮಲತಾ ಅಂಬರೀಶ್‌ ಕೂಡ ನಟಿಸಿದ್ದು ವಿಶೇಷ. ಚೊಚ್ಚಲ ನಿರ್ಮಾಣ ಸಿನಿಮಾ ಮೂಲಕ ಶಶಿಧರ್‌ ಗಾಂಧಿನಗರಿಗರ ಕಣ್ಣಿಗೆ ಬಿದ್ದದ್ದು ನಿಜ. ಅಲ್ಲಿಂದ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟ ಶಶಿಧರ್‌, ನಿರ್ದೇಶನಕ್ಕೂ ಅಣಿಯಾದರು. “ಶುಗರ್‌ಲೆಸ್‌” ಎಂಬ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ತಾನೊಬ್ಬ ನಿರ್ದೇಶಕ ಅನ್ನುವುದನ್ನೂ ಸಾಬೀತುಪಡಿಸಿದರು. ಇದರ ಜೊತೆ ಜೊತೆಯಲ್ಲೇ ಅವರು ಪ್ರಜ್ವಲ್‌ ದೇವರಾಜ್‌ ಹಾಗೂ ರಚಿತಾರಾಮ್‌ ಅಭಿನಯದ “ವೀರಂ” ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಅದ್ಧೂರಿ ಬಜೆಟ್‌ ಚಿತ್ರವಾಗಿದ್ದು, ಸದ್ಯ ಚಿತ್ರೀಕರಣದಲ್ಲಿದೆ.

 

ಸಿನ್ಮಾ ಪ್ರೀತಿಯೇ ಇದಕ್ಕೆಲ್ಲಾ ಕಾರಣ…

ಒಬ್ಬ ಕಲಾವಿದ ನಿರ್ಮಾಣ ಮಾಡುವುದು ಅಂದರೆ ಅದು ಸುಲಭದ ಮಾತಲ್ಲ. ಇಲ್ಲಿ ಧೈರ್ಯ ಇರಬೇಕು, ಜೊತೆಗೆ ನಾನು ಮಾಡಬಲ್ಲೆ ಎಂಬ ಭರವಸೆ ಹೊಂದಿರಬೇಕು. ಇವೆರೆಡು ಇದ್ದುದರಿಂದಲೇ ಶಶಿಧರ್‌ ಇಂದು ಎರಡು ಸಿನಿಮಾ ನಿರ್ಮಾಣ ಮಾಡಿ, ಒಂದು ಚಿತ್ರ ನಿರ್ದೇಶನ ಮಾಡಿರೋದು. ಕನ್ನಡ ಸಿನಿಮಾರಂಗ ಈಗ ಇನ್ನಷ್ಟು ಶೈನ್‌ ಆಗುತ್ತಿದೆ. ಕೊರೊನಾ ಸಮಯದಲ್ಲೂ ಅದೇ ಧೈರ್ಯ ಇಟ್ಟುಕೊಂಡು ನಿರ್ಮಾಣ ಮಾಡುವುದೆಂದರೆ ನಿಜಕ್ಕೂ ಅದು ಸಿನಿಮಾ ಮೇಲಿರುವ ಕಾಳಜಿ, ಪ್ರೀತಿಯನ್ನು ಎತ್ತಿತೋರಿಸುತ್ತದೆ. ಶಶಿಧರ್‌ ಅವರಿಗೆ ಸಿನಿಮಾ ಮೇಲಿರುವ ಪ್ರೀತಿ ಇದನ್ನೆಲ್ಲಾ ಎಷ್ಟೇ ಕಷ್ಟ ಬಂದರೂ ಮಾಡಲೇಬೇಕು ಎನ್ನುವಷ್ಟರ ಮಟ್ಟಿಗೆ ಸಜ್ಜಾಗಿ, ಪ್ರೊಫೆಷನಲ್‌ ಆಗಿಯೇ ಮಾಡುತ್ತಿದ್ದಾರೆ.

ಒಳ್ಳೇ ಸಿನ್ಮಾ ಕೊಡುವ ಗುರಿ 

ತಮ್ಮ ಸಿನಿ ಜರ್ನಿ ಕುರಿತು ಹೇಳುವ ಶಶೀಧರ್‌, “ನಾನು ಇಲ್ಲಿಗೆ ಬಂದದ್ದು ಆಕಸ್ಮಿಕ. ನಟನಾಗಬೇಕು ಅಂತ ಬಂದೆ. ನಿರ್ಮಾಪಕನಾದೆ, ನಿರ್ದೇಶಕನೂ ಆಗಿದ್ದೇನೆ. ಅದರಲ್ಲೂ ನಾನು ದೊಡ್ಡ ನಿರ್ಮಾಪಕ ಆಗಬೇಕು ಅಂತಾಗಲಿ, ನಿರ್ದೇಶಕ ಎನಿಸಿಕೊಳ್ಳಬೇಕು ಅಂತಾಗಲಿ ಇಲ್ಲ. ಕನ್ನಡಕ್ಕೆ ಸದಭಿರುಚಿಯ ಚಿತ್ರಗಳನ್ನು ಕೊಡಬೇಕು. ಕನ್ನಡ ಚಿತ್ರರಂಗಕ್ಕೆ ನಮ್ಮ ದಿಶಾ ಎಂಟರ್‌ಟೈನರ್ಸ್‌ ಬ್ಯಾನರ್‌ ಒಳ್ಳೆಯ ಕೊಡುಗೆ ಕೊಡಬೇಕು ಅನ್ನುವುದಷ್ಟೇ ನನ್ನ ಉದ್ದೇಶ. ಆ ನಿಟ್ಟಿನಲ್ಲಿ ಮೊದಲು ಮಹಿಳಾ ಪ್ರಧಾನವುಳ್ಳ “ಡಾಟರ್‌ ಆಫ್‌ ಪಾರ್ವತಮ್ಮ” ಸಿನಿಮಾ ಮಾಡಿದೆ. ಆ ನಂತರ ಸಾಮಾಜಿಕ ಕಳಕಳಿ ಇರುವ, ಒಳ್ಳೆಯ ಸಂದೇಶ ಸಾರುವ “ಶುಗರ್ಲೆಸ್‌” ಸಿನಿಮಾ ನಿರ್ದೇಶಿಸಿದೆ. ಈಗ “ವೀರಂ” ಎಂಬ ಪಕ್ಕಾ ಮಾಸ್‌ ಚಿತ್ರ ಮಾಡುತ್ತಿದ್ದೇನೆ.

ಇಷ್ಟೆಲ್ಲಾ ಸಾಧ್ಯವಾಗಿರೋದು, ಸಿನಿಮಾ ಮೇಲಿರುವ ಪ್ರೀತಿಗಾಗಿ. “ವೀರಂ” ದೊಡ್ಡ ಸ್ಕೇಲ್‌ನಲ್ಲಿ ತಯಾರಾಗುತ್ತಿದೆ. ದಿಶಾ ಎಂಟರ್‌ಟೈನರ್ಸ್‌ ಬ್ಯಾನರ್‌ ಮೂಲಕ ಯಾವುದೇ ಚಿತ್ರ ಹೊರಬಂದರೂ ಗುಣಮಟ್ಟದಲ್ಲಿ ರಾಜಿ ಆಗುವುದಿಲ್ಲ. ಒಳ್ಳೆಯ ಸಿನಿಮಾಗಳೇ ಮೂಡಿಬರಲಿವೆ. ಸದ್ಯಕ್ಕೆ “ಶುಗರ್‌ಲೆಸ್”‌ ಮೇಲೆ ಅತಿಯಾದ ಭರವಸೆ ಇದೆ. ನಾನು ನಿರ್ದೇಶನ ಮಾಡಿದ್ದೇನೆ ಎಂಬ ಕಾರಣಕ್ಕೆ ಅಲ್ಲ. ಅದೊಂದು ಒಳ್ಳೆಯ ಕಂಟೆಂಟ್‌ ಇರುವ ಚಿತ್ರ. ಈ ಸಿನಿಮಾವನ್ನು ನಾನು ಪುಷ್ಕರ್ ಫಿಲ್ಮ್ಸ್ ಸಹಯೋಗದಲ್ಲಿ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದೇನೆ. ಈ ಮೂಲಕ ಡಯಾಬಿಟಿಸ್‌ ಕುರಿತ ಕಥೆ ಹೇಳಿದ್ದೇನೆ.

ಪೃಥ್ವಿ ಅಂಬರ್‌ – ಶುಗರ್‌ಲೆಸ್

ಕಥೆ ಜೊತೆ ಒಂದು ಬ್ಲಾಕ್‌ ಕಾಮಿಡಿಯಲ್ಲೇ ಗಂಭೀರ ವಿಷಯ ಹೇಳಲು ಮುಂದಾಗಿದ್ದೇನೆ. ಇಂದು ಡಯಾಬಿಟಿಕ್‌ ಅನ್ನೋದು, ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇದೆ. ಆದರೆ, ಅದೇ ಸುಮಾರು 30 ವರ್ಷದ ಯುವಕನಿಗೆ ಡಯಾ ಬಿಟಿಸ್‌ ಬಂದಾಗ, ಅವರ ಬದುಕು ಹೇಗೆ ಇರುತ್ತೆ. ನಿತ್ಯ ಅವನ ಬದುಕಲ್ಲಿ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ ಎಂಬ ವಿಷಯ ಇಲ್ಲಿ ಹೈಲೈಟ್”. ಯಾವ ಭಾಷೆಯಲ್ಲೂ ಈ ರೀತಿಯ ಕಂಟೆಂಟ್‌ ಇರದ ಕಾರಣ, ಇದನ್ನೇ ಇಟ್ಟು ಕೊಂಡು ಹೊಸ ವ್ಯಾಖ್ಯಾನದೊಂದಿಗೆ ಸಿನಿಮಾ ಮಾಡಲು ಹೊರಟಿದ್ದೇನೆ” ಎನ್ನುತ್ತಾರೆ ಶಶಿಧರ್.‌


ಸದ್ಯಕ್ಕೆ ಶಶಿಧರ್‌ ಅವರೀಗ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಸ್ಟಾರ್‌ ಒಬ್ಬರಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅದಾಗಲೇ ಆ ಸ್ಟಾರ್‌ ನಟರಿಗೆ ಅಡ್ವಾನ್ಸ್‌ ಕೂಡ ಕೊಟ್ಟಿದ್ದಾರಂತೆ. “ವೀರಂ” ಚಿತ್ರ ಮುಕ್ತಾಯಗೊಂಡ ನಂತರ ಆ ಸ್ಟಾರ್‌ ನಟರ ಜೊತೆಗಿನ ಚಿತ್ರವನ್ನು ಅನೌನ್ಸ್‌ ಮಾಡುವ ಉದ್ದೇಶ ಶಶಿಧರ್‌ ಅವರಿಗಿದೆ. ಇನ್ನೊಂದು ಖುಷಿಯ ವಿಷಯವೆಂದರೆ, ಅವರ ನಿರ್ಮಾಣದ “ವೀರಂ” ಚಿತ್ರಕ್ಕೆ ವಾಹಿನಿಯೊಂದರಿಂದ ಸ್ಯಾಟಲೆಟ್ ಬೇಡಿಕೆ ಬಂದಿದ್ದು, ಆ ಕುರಿತಂತೆ ಮಾತುಕತೆ ನಡೆಯುತ್ತಿದೆಯಂತೆ.

 

Categories
ಸಿನಿ ಸುದ್ದಿ

ಬ್ಯಾಡ್‌ ಮ್ಯಾನರ್ಸ್‌ಗೆ ಮುಹೂರ್ತ – ದರ್ಶನ್‌, ಸುಮಲತಾ ಶುಭಹಾರೈಕೆ ಮಂಡ್ಯದ ನೆಲದಲ್ಲೇ ಮೊದಲ ದಿನದ ಚಿತ್ರೀಕರಣ ಶುರು

ಶುಗರ್‌ ಫ್ಯಾಕ್ಟರಿಯ ರಗಡ್‌ ಸೆಟ್‌ನಲ್ಲಿ ಶೂಟಿಂಗ್‌

ಅಭಿಷೇಕ್‌ ಅಂಬರೀಶ್ “ಅಮರ್” ಚಿತ್ರದ ಬಳಿಕ ಯಾವ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅವರು ಯಾವಾಗ, “ದುನಿಯಾ” ಸೂರಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಕೊಟ್ಟಾಗ, ನಿರೀಕ್ಷೆ ಮತ್ತಷ್ಟು ಹೆಚ್ಚಾಯಿತು.

ನಂತರದ ದಿನಗಳಲ್ಲಿ ಯಾವ ಸಿನಿಮಾ, ಚಿತ್ರದ ಟೈಟಲ್‌ ಏನು ಎಂಬ ಪ್ರಶ್ನೆಗಳಿಗೂ ಕಾಲ ಕ್ರಮೇಣ ಉತ್ತರವೂ ಸಿಕ್ಕಿತು. ಹೌದು, “”ಬ್ಯಾಡ್‌ ಮ್ಯಾನರ್ಸ್‌” ಶೀರ್ಷಿಕೆ ಹೊರಬೀಳುತ್ತಿದ್ದಂತೆಯೇ ಸಾಕಷ್ಟು ನಿರೀಕ್ಷೆಯೂ ಹುಟ್ಟಿಸಿತು.

ಸಂಕ್ರಾಂತಿ ದಿನದಂದ ಅದಕ್ಕೀಗ ಮುಹೂರ್ತವೂ ನೆರವೇರಿದೆ. ಹೌದು, ಬಹು ನಿರೀಕ್ಷಿತ “ದುನಿಯಾ” ಸೂರಿ ನಿರ್ದೇಶನದ ಔಟ್ ಅಂಟ್ ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಚಿತ್ರ “ಬ್ಯಾಡ್ ಮ್ಯಾನರ್ಸ್”ಗೆ ಜನವರಿ ೧೫ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮುಹೂರ್ತ ನೆರವೇರಿದೆ.

ಈ ವೇಳೆ ಅಭಿಷೇಕ್‌ ಅಂಬರೀಶ್, ಸಂಸದೆ ಸುಮಲತಾ ಅಂಬರೀಶ್‌,‌ ನಿರ್ದೇಶಕ ಸೂರಿ, ನಿರ್ಮಾಪಕ ಕೆ.ಎಂ ಸುಧೀರ್, ಛಾಯಾಗ್ರಹಕ ಶೇಖರ್, ಸಂಭಾಷಣೆಕಾರ ಮಾಸ್ತಿ ಮಂಜು ಇತರರು ಉಪಸ್ಥಿತರಿದ್ದರು. ಮಗನ ಎರಡನೇ ಚಿತ್ರಕ್ಕೆ ಸುಮಲತಾ ಅವರು ಕ್ಲಾಪ್‌ ಮಾಡಿ ಶುಭಹಾರೈಸಿದರು. ಈ ವೇಳೆ ದರ್ಶನ್‌ ಕೂಡ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ‌

ಕೆ.ಪಿ.ಶ್ರೀಕಾಂತ್, ನಿರ್ದೇಶಕ ವಿಜಯ್ ಪ್ರಕಾಶ್ ಇತರರು ಉಪಸ್ಥಿತರಿದ್ದರು. ಈಗಾಗಲೇ ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ ಹಾಕಲಾಗಿರುವ ರಗಡ್‌ ಸೆಟ್ ನಲ್ಲಿ “ಬ್ಯಾಡ್ ಮ್ಯಾನರ್ಸ್”ಗೆ ಚಿತ್ರದ ಚಿತ್ರೀಕರಣ ಶುರುವಾಗಿದೆ.

 

Categories
ಸಿನಿ ಸುದ್ದಿ

ಹೈದರಾಬಾದ್‌ನಲ್ಲಿ ನಡೆಯಿತು ಸಲಾರ್‌ಗೆ ಮುಹೂರ್ತ – ಪ್ರಭಾಸ್‌ ಚಿತ್ರಕ್ಕೆ ಯಶ್‌ ಶುಭಹಾರೈಕೆ

 ಕನ್ನಡ-ತೆಲುಗು ಚಿತ್ರರಂಗದ ಮಹಾ ಸಮ್ಮಿಲನ

ಉಪ ಮುಖ್ಯಮಂತ್ರಿ   ಅಶ್ವತ್ಥನಾರಾಯಣ ‌ ಭಾಗಿ

ತೆಲುಗಿನ ಖ್ಯಾತ ನಟ ಪ್ರಭಾಸ್ ಹಾಗೂ ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಜೋಡಿಯ “ಸಲಾರ್‌” ಚಿತ್ರಕ್ಕೆ ಶುಕ್ರವಾರ (ಜನವರಿ ೧೫) ಮುಹೂರ್ತ ನೆರವೇರಿದೆ.  ಹೊಂಬಾಳೆ ಫಿಲಂಸ್ ಬ್ಯಾನರ್‌ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣದ “ಸಲಾರ್” ಚಿತ್ರಕ್ಕೆ  ಹೈದರಾಬಾದ್ ನಲ್ಲಿ ಜೋರಾಗಿಯೇ ಮುಹೂರ್ತ ನೆರವೇರಿದೆ.  ಮುಹೂರ್ತದಲ್ಲಿ ಪ್ರಭಾಸ್‌,  ನಟ ಯಶ್‌, ನಿರ್ದೇಶಕ ಪ್ರಶಾಂತ್‌ ನೀಲ್‌, ನಿರ್ಮಾಪಕರಾದ ವಿಜಯ್‌ ಕಿರಗಂದೂರು ಹಾಜರಿದ್ದು, ಪರಸ್ಪರ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು.  ಆರಂಭದಲ್ಲಿ ಸಿನಿಮಾ ಅನೌನ್ಸ್ ಆಗುತ್ತಿದ್ದಂತೆಯೇ, ದೊಡ್ಡ ನಿರೀಕ್ಷೆ ಹುಟ್ಟಿಸಿತ್ತು.

 

ಈಗ ಚಿತ್ರತಂಡ ಶೂಟಿಂಗ್ ಹೋಗಲು ಸಜ್ಜಾಗುತ್ತಿದೆ.  ಪ್ರಶಾಂತ್ ನೀಲ್ ನಿರ್ದೇಶನದ “ಸಲಾರ್” ಇಂಡಿಯನ್ ಸಿನಿಮಾ ಎಂದು ಚಿತ್ರ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಿದೆ. ಅದರಂತೆ ಇದೀಗ ಚಿತ್ರದ ಮುಹೂರ್ತಕ್ಕೆ ತಂಡ ತಯಾರಿ ನಡೆಸಿದ್ದು, ಶುಕ್ರವಾರ ಹೈದರಾಬಾದ್ ನಲ್ಲಿ ಬೆಳಗ್ಗೆ 11 ಗಂಟೆಗೆ ಪೂಜೆ ನೆರವೇರಿಸಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.

ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕವೇ “ಸಲಾರ್” ಚಿತ್ರ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ರಭಾಸ್ ಲುಕ್ ಸಹ ಅಷ್ಟೇ ಕುತೂಹಲ ಕೆರಳಿಸಿದೆ. ಇದೀಗ ತಮ್ಮ ಲುಕ್ ಬಗ್ಗೆಯೂ ಪ್ರಭಾಸ್ ಮಾತನಾಡಿದ್ದಾರೆ. ‘ಈ ಸಿನಿಮಾದ ಮುಹೂರ್ತ ಮತ್ತು ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದಕ್ಕೆ ನಾನು ತುಂಬ ಕೌತುಕನಾಗಿದ್ದೇನೆ. ನನ್ನ ಲುಕ್ ಹೇಗಿರಲಿದೆ ಎಂಬುದನ್ನು ಅಭಿಮಾನಿಗಳಿಗೆ ತೋರಿಸಲು ಅಷ್ಟೇ ಉತ್ಸುಕನಾಗಿದ್ದೇನೆ ಎಂದು ಈ ಹಿಂದೆಯೇ  ಪ್ರಭಾಸ್ ಹೇಳಿಕೊಂಡಿದ್ದರು.

ಸದ್ಯಕ್ಕೆ ಚಿತ್ರತಂಡ ಮುಹೂರ್ತ ಮುಗಿಸಿದೆ. ಇದೇ ತಿಂಗಳ ಅಂತ್ಯಕ್ಕೆ ಚಿತ್ರೀಕರಣಕ್ಕೂ ಚಾಲನೆ ನೀಡಲಿದೆ.  ಚಿತ್ರದಲ್ಲಿ ಇನ್ನು ಯಾರೆಲ್ಲಾ ಕಲಾವಿದರು ಇರಲಿದ್ದಾರೆ ಎಂಬ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಬಹಿರಂಗ ಪಡಿಸಲಿದೆ.

 

ಮಕರ ಸಂಕ್ರಮಣದ ನಂತರ ಕನ್ನಡ ಚಿತ್ರರಂಗಕ್ಕೆ ಮತ್ತು ಭಾರತೀಯ ಚಿತ್ರಪ್ರೇಮಿಗಳಿಗೆ ಭರ್ಜರಿ ಸುದ್ದಿ ನೀಡಿರುವ ʼಸಲಾರ್‌ʼ ಚಿತ್ರತಂಡದ ಸಂಭ್ರಮದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭಾಗವಹಿಸಿದ್ದರು. ಬೆಳಗ್ಗೆ 11 ಗಂಟೆಗೆ ಸರಿಯಾಗಿ ಮುಹೂರ್ತದ ಪೂಜೆ ನೆರವೇರಿತು. ಚಿತ್ರದ ಹೀರೋ ಪ್ರಭಾಸ್‌, ತೆಲುಗು ಮತ್ತು ಕನ್ನಡ ಚಿತ್ರರಂಗಗಳ ಅನೇಕ ಗಣ್ಯರು, ತಾರೆಯರು ಪಾಲ್ಗೊಂಡು ಶುಭ ಹಾರೈಸಿದರು. ʼಸಲಾರ್‌ʼ ಚಿತ್ರದ ಮುಹೂರ್ತದ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿ ಹೊರಹೊಮ್ಮಿದೆ.

ಡಿಸಿಎಂ ಶುಭ ಹಾರೈಕೆ

ಉಪ ಮುಖ್ಯಮಂತ್ರಿ ಡಾ.ಸಿಎ.ಎನ್.ಅಶ್ವತ್ಥನಾರಾಯಣ ಮಾತನಾಡಿ, “ಕನ್ನಡದಲ್ಲಿ ತಮ್ಮ ಹೊಂಬಾಳೆ ಫಿಲ್ಮ್ಸ್‌ ವತಿಯಿಂದ ʼಕೆಜಿಎಫ್ ಚಾಪ್ಟರ್‌-1ʼ, ʼಕೆಜಿಎಫ್‌ ಚಾಪ್ಟರ್-‌2ʼ ಅದಕ್ಕೂ ಹಿಂದೆ ಇನ್ನು ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ವಿಜಯ್‌ ಕಿರಗಂದೂರು, “ಸಲಾರ್‌” ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಹಾಗೆಯೇ ಕೆಜಿಎಫ್‌ ಸರಣಿ ಚಿತ್ರಗಳ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ ಪ್ರಶಾಂತ್‌ ನೀಲ್‌ ಅವರು ʼಸಲಾರ್‌ʼ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದರಲ್ಲೂ ಪ್ರಭಾಸ್‌ ಅವರ ಈ ಚಿತ್ರ ಮಾಡುತ್ತಿರುವುದು ತುಂಬಾ ಸಂತೋಷ ಉಂಟು ಮಾಡಿದೆ.

ಈ ಮೂಲಕ ಭಾಷೆ, ಗಡಿಗಳನ್ನು ಮೀರಿ ಕನ್ನಡ-ತೆಲುಗು ಚಿತ್ರರಂಗಗಳು ಒಂದಾಗಿ ಮುಂದೆ ಹೋಗುತ್ತಿರುವುದಕ್ಕೆ ಆನಂದವಾಗಿದೆ. ಇಡೀ ಚಿತ್ರತಂಡಕ್ಕೆ ಶುಭವಾಗಲಿ. ʼಬಾಹುಬಲಿʼ ಚಿತ್ರದಿಂದ ಕನ್ನಡದ ಅಭಿಮಾನಿಗಳ ಮನಗೆದ್ದಿರುವ ಪ್ರಭಾಸ್‌ ಅವರು ʼಸಲಾರ್‌ʼ ಚಿತ್ರದಿಂದ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಲಿದ್ದಾರೆ” ಎಂದರು.

ಪ್ರಭಾಸ್‌ ಜತೆಯ ಕೆಲಸ ಖುಷಿ ಷಿ ಸಂಗತಿ

“ನಾನು ʼಬಾಹುಬಲಿʼ ಚಿತ್ರವನ್ನು ನೋಡಿ ಪ್ರಭಾಸ್‌ ಅವರಿಗೆ ಫಿದಾ ಆಗಿದ್ದೆ. ಈಗ ಅವರ ಜತೆಯಲ್ಲೇ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ. ಈ ಮೂಲಕ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ “ಸಲಾರ್”ʼ ಚಿತ್ರವನ್ನು ತಯಾರು ಮಾಡುತ್ತಿದ್ದೇವೆ. ನಮ್ಮ “ಕೆಜಿಎಫ್‌” ಚಿತ್ರವನ್ನು ಡೈರೈಕ್ಟ್‌ ಮಾಡಿರುವ ಪ್ರಶಾಂತ್‌ ನೀಲ್‌ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ” ಎಂಬದು ನಿರ್ಮಾಪಕ ವಿಜಯ್‌ ಕಿರಗಂದೂರು ಮಾತು.

“ಸಲಾರ್‌”  ಚಿತ್ರಕ್ಕೆ ಪ್ರಭಾಸ್‌ ಅವರ ಹೊರತಾಗಿ ನಾಯಕ ನಟಿ, ಇನ್ನಿತರೆ ತಾರಾಬಳಗ ಆಯ್ಕೆಯಾಗಿಲ್ಲ. ಚಿತ್ರವನ್ನು ಅನೌನ್ಸ್‌ ಮಾಡಿದಾಗ ಹೊರಬಿದ್ದ ಸಲಾರ್‌ ಫಸ್ಟ್‌ಲುಕ್‌ ದೇಶದೆಲ್ಲೆಡೆ ವೈರಲ್‌ ಆಗಿತ್ತು. ಪ್ರಭಾಸ್‌ ಈಗಾಗಲೇ ʼರಾಧೆ ಶ್ಯಾಂʼ ಚಿತ್ರದಲ್ಲಿ ನಟಿಸುತ್ತಿದ್ದು, ಅದರ ಚಿತ್ರೀಕರಣ ಕೊನೆ ಹಂತದಲ್ಲಿದೆ. ʼಆದಿಪುರುಷ್‌ʼ ಚಿತ್ರದ ಶೂಟಿಂಗ್‌ ಇನ್ನೇನು ಆರಂಭವಾಗಬೇಕಿದೆ. ಇದರ ಜತೆಯಲ್ಲೇ ಈಗ ʼಸಲಾರ್‌ʼ ಚಿತ್ರವೂ ಟೇಕಾಫ್‌ ಆಗಿದೆ. ನಟ ಯಶ್, ರವಿ ಬಸ್ರೂರ್​, ಭುವನ್​ ಗೌಡ ಸೇರಿದಂತೆ ಕೆಜಿಎಫ್‌ ಚಿತ್ರತಂಡದ ಅನೇಕರು ಪಾಲ್ಗೊಂಡಿದ್ದರು. ಅದರಲ್ಲೂ ಯಶ್‌ ಪ್ರಮುಖ ಆಕರ್ಷಣೆಯಾಗಿದ್ದರು.

ʼಈಶ್ವರ್‌ʼ ಚಿತ್ರದಿಂದ ಮೊದಲುಗೊಂಡು ʼಸಾಹೋʼ ತನಕ ಪ್ರಭಾಸ್‌‌ ನಟಿಸಿದ ಒಟ್ಟು 19 ಚಿತ್ರಗಳು ರಿಲೀಸ್‌ ಆಗಿವೆ. ಈ ಪೈಕಿ ʼಬಾಹುಬಲಿ-ದಿ ಬಿಗಿನಿಂಗ್‌ʼ ಹಾಗೂ ʼಬಾಹುಬಲಿ-ಕನ್‌ಕ್ಲೂಶನ್‌ʼ ಭಾರತ ಮಾತ್ರವಲ್ಲದೆ ಜಾಗತಿಕವಾಗಿಯೂ ಸದ್ದು ಮಾಡಿದ್ದವು. ಇದೀಗ ಅವರು ನಟಿಸುತ್ತಿರುವ ʼಸಲಾರ್‌ʼ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರೀ ಕ್ರೇಜ್‌ ಸೃಷ್ಟಿ ಮಾಡಿದೆ.

 

Categories
ಸಿನಿ ಸುದ್ದಿ

ಲಂಕಾಸುರನ ಆರ್ಭಟ ಶುರು -ಸಂಕ್ರಾಂತಿಗೆ ಶುರುವಾಯ್ತು ವಿನೋದ್‌ಪ್ರಭಾಕರ್‌ ಚಿತ್ರ

ಮರಿಟೈಗರ್‌ ಜೊತೆ ಲೂಸ್‌ ಮಾದ ಜೋಡಿ

ಸಂಕ್ರಾಂತಿಯ ಸಂಭ್ರಮ ಈ ವರ್ಷ ತುಸು ಜೋರಾಗಿಯೇ ಇದೆ. ಹಲವು ಸಿನಿಮಾಗಳು ಸಂಕ್ರಮಣದಂದು ಸೆಟ್ಟೇರಿವೆ. ಕೆಲವು ಚಿತ್ರಗಳು ಚಿತ್ರೀಕರಣ ಶುರುಮಾಡಿವೆ. ಆ ನಿಟ್ಟಿನಲ್ಲಿ ವಿನೋದ್‌ ಪ್ರಭಾಕರ್‌ ಅವರ ಅಭಿನಯದ “ಲಂಕಾಸುರ” ಸಿನಿಮಾಗೂ ಕೂಡ ಚಾಲನೆ ಸಿಕ್ಕಿದೆ. ಸುಗ್ಗಿ ಹಬ್ಬದಂದು “ಲಂಕಾಸುರ” ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ದೊಡ್ದ ಬಸ್ತಿಯ ಶ್ರೀಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಚಾಲನೆ ಸಿಕ್ಕಿದೆ. ಈ ಚಿತ್ರದಲ್ಲಿ ವಿನೋದ್‌ಪ್ರಭಾಕರ್‌ ಅವರೊಂದಿಗೆ “ಲೂಸ್‌ ಮಾದ” ಯೋಗೀಶ್‌ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

 

ಎ.ಎಂ.ಎಸ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ ಚಿತ್ರಕ್ಕೆ ನಿರ್ಮಾಪಕರ ಪುತ್ರರಾದ ಮಾ. ಮಾನಸ್ ಪ್ರಜ್ವಲ್ ಹಾಗೂ ಶ್ರೇಯಸ್ ಪ್ರಜ್ವಲ್ ಕ್ಯಾಮೆರಾ ಚಾಲನೆ ‌ಮಾಡಿದರು.‌ ನಿರ್ದೇಶಕರ ಪುತ್ರ ಮಾ.ಯೋಜಿತ್ ಕ್ಲಾಪ್‌ ಮಾಡಿದರು. ಸಂಕ್ರಾಂತಿ ದಿನದಂದು ಶುರುವಾದ ಈ ಚಿತ್ರದ ಚಿತ್ರೀಕರಣ, ಫೆಬ್ರವರಿ 15 ರವರೆಗೂ ಬೆಂಗಳೂರು ಹಾಗೂ ಮೈಸೂರಿನಲ್ಲಿ ಮೊದಲ‌ ಹಂತದ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಪಾರ್ವತಿ ಅರುಣ್, ಸಹಾನಾ ಗೌಡ ಇತರರು ನಟಿಸಿದ್ದಾರೆ. “ದುನಿಯಾ” ನಿರ್ಮಾಪಕರಾದ ಸಿದ್ದರಾಜು, ವಿನೋದ್ ‌ಮಾಸ್ಟರ್ ಇತರರು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಅಂದಹಾಗೆ, ಹಿಂದೆ “ಮೂರ್ಕಲ್ ಎಸ್ಟೇಟ್” ಚಿತ್ರವನ್ನು ನಿರ್ದೇಶಿಸಿದ್ದ, ಪ್ರಮೋದ್ ಕುಮಾರ್ “ಲಂಕಾಸುರ” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ವಿಜೇತ್‌ ಕೃಷ್ಣ ಸಂಗೀತ ನೀಡಿದ್ದಾರೆ. ಸುಜ್ಞಾನ್‌ ಅವರ ಛಾಯಾಗ್ರಹಣವಿದೆ. ಚೇತನ್ ಡಿಸೋಜ, ದೀಪು ಎಸ್ ಕುಮಾರ್ ಸಂಕಲನವಿದೆ. ಮೋಹನ್ ನೃತ್ಯ ನಿರ್ದೇಶನವಿದೆ.

error: Content is protected !!