ಮಿತ್ರ ಫಿಲ್ಮ್‌ ಅಕಾಡೆಮಿ – ನಟಿಸೋರಿಗೊಂದು ಹೊಸ ವೇದಿಕೆ ಕಲ್ಪಿಸಿಕೊಟ್ಟ ಹಾಸ್ಯ ಕಲಾವಿದ

ಹಾಸ್ಯ ನಟ ಕಮ್‌ ನಿರ್ಮಾಪಕ ಮಿತ್ರ ಅಂದಾಕ್ಷಣ ನೆನಪಾಗೋದೇ “ರಾಗ” ಎಂಬ ಅದ್ಭುತ ಸಿನಿಮಾ. ಹೌದು, ಈ ಚಿತ್ರದ ಮೂಲಕ ನಿರ್ಮಾಪಕ ಎನಿಸಿಕೊಂಡ ಮಿತ್ರ, ಒಂದೊಳ್ಳೆಯ ಸಿನಿಮಾ ನಿರ್ಮಿಸಿದ ಕಲಾವಿದ ಎಂಬ ಮಾತಿಗೂ ಕಾರಣರಾದರು. ನೂರಾರು ಸಿನಿಮಾಗಳ ಮೂಲಕ ಕನ್ನಡ ಚಿತ್ರರಸಿಕರ ಪಾಲಿಗೆ ಪ್ರೀತಿಯ ನಟ ಎನಿಸಿಕೊಂಡಿರುವ ಮಿತ್ರ ಅವರೀಗ ಹೊಸದೊಂದು ಕಾರ್ಯಕ್ಕೆ ಕೈ ಹಾಕಿದ್ದಾರೆ. ಹಾಗಂತ, ಹೊಸ ಸಿನಿಮಾ ನಿರ್ಮಾಣಕ್ಕಿಳಿದು ಬಿಟ್ಟರಾ? ಈ ಪ್ರಶ್ನೆ ಎದುರಾಗೋದು ಸಹಜ.

ಆದರೆ, ಮಿತ್ರ, ಹೊಸ ಸಿನಿಮಾ ಮಾಡೋಕೆ ಸಜ್ಜಾಗಿರೋದು ಸತ್ಯ. ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಿವೆಯಾದರೂ, ಈಗ ಅವರೊಂದು ಹೊಸ ಯೋಚನೆಯಲ್ಲಿದ್ದಾರೆ. ಆ ಯೋಚನೆ ಮತ್ತು ಯೋಜನೆ ಬೇರೇನೂ ಅಲ್ಲ, ಅವರೀಗ “ಆರ್‌ಕೆ ಮಿತ್ರ ಫಿಲ್ಮ್‌ ಅಕಾಡೆಮಿ” ಶುರು ಮಾಡಿದ್ದಾರೆ. ಇದು ಅವರ ಹೊಸ ಕನಸು. ಅವರ ಈ ಹೊಸ ಯೋಜನೆ ಅವರದೇ ಕೂರ್ಗ್‌ನಲ್ಲಿರುವ ಸ್ವರ್ಣಭೂಮಿ ರೆಸಾರ್ಟ್‌ನಲ್ಲಿ ಶುರುವಾಗುತ್ತಿದೆ. ಫೆಬ್ರವರಿ ೨೮ರಿಂದ ಶುರುವಾಗಲಿರುವ ಆವರ “ಆರ್‌ಕೆ ಮಿತ್ರ ಫಿಲ್ಮ ಅಕಾಡೆಮಿ” ಮೂಲಕ ಕೇವಲ ನಟನಾ ತರಬೇತಿ ನಡೆಯಲಿದೆ. ಇದೊಂದು ವಿನೂತನ ಮತ್ತು ಅಪರೂಪ ಎನಿಸುವ ನಟನಾ ತರಬೇತಿ ಎನ್ನುವ ಮಿತ್ರ, “ಸಿನಿಲಹರಿ” ಜೊತೆ ತಮ್ಮ ಅಕಾಡೆಮಿಯೊಳಗಿನ ಮಾಹಿತಿ ಹಂಚಿಕೊಂಡರು.


“ನಾನೊಬ್ಬ ಹಾಸ್ಯ ಕಲಾವಿದನಾಗಿ. ಸದಾ ಹೊಸತನ್ನೇ ಬಯಸುತ್ತಿರುತ್ತೇನೆ. ಏನಾದರೊಂದು ಮಾಡಬೇಕೆಂಬ ತುಡಿತ ನನ್ನದು. ಆ ನಿಟ್ಟಿನಲ್ಲಿ ನಾನು ಸಿನಿಮಾರಂಗದಲ್ಲಿದ್ದುಕೊಂಡೇ “ರಾಗ” ಎಂಬ ಒಂದೊಳ್ಳೆಯ ಚಿತ್ರವನ್ನು ನಿರ್ಮಿಸಿದೆ. ಅದರಿಂದ ನನಗೆ ಹಣ ಬರದಿದ್ದರೂ, ಒಂದೊಳ್ಳೆಯ ಸಿನಿಮಾ ಮಾಡಿದ ತೃಪ್ತಿ ಇದೆ. ಇನ್ನು, ಇದರ ನಡುವೆ ನಾನು ನಟನೆಯಲ್ಲೂ ಬಿಝಿ ಇದ್ದೇನೆ. ಒಂದಷ್ಟು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಕೆಲವು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಇನ್ನಷ್ಟು ಚಿತ್ರಗಳ ಮಾತುಕತೆಯೂ ನಡೆಯುತ್ತಿದೆ. ಇದರ ನಡುವೆಯೇ ನಾನು ಕೂರ್ಗ್‌ನಲ್ಲಿ ಸ್ವರ್ಣಭೂಮಿ ರೆಸಾರ್ಟ್‌ವೊಂದನ್ನು ನಡೆಸುತ್ತಿದ್ದೇನೆ. ಮೂಲತಃ ರೆಸಾರ್ಟ್‌ ಉದ್ಯಮದಿಂದಲೇ ನಾನು ಸಿನಿಮಾ ಲೋಕಕ್ಕೆ ಬಂದವನು. ಹಾಗಾಗಿ, ರೆಸಾರ್ಟ್‌ ಜೊತೆ ನನಗೆ ಅವಿನಾಭಾವ ಸಂಬಂಧವೂ ಇದೆ. ಈಗ ಕೂರ್ಗ್‌ನಲ್ಲಿ ವಿಶಾಲವಾಗಿ, ಸುಸಜ್ಜಿತವಾಗಿ ತಲೆಎತ್ತಿರುವ ಸ್ವರ್ಣಭೂಮಿ ರೆಸಾರ್ಟ್‌ನಲ್ಲೀ “ಆರ್‌ಕೆ ಮಿತ್ರ ಫಿಲ್ಮ ಅಕಾಡೆಮಿ” ಶುರು ಮಾಡಿ, ಆ ಮೂಲಕವೇ ರಂಗತರಬೇತಿ ಶಿಬಿರ ಆಯೋಜಿಸುತ್ತಿದ್ದೇನೆ. ಅದು ಹದಿನೈದು ದಿನಗಳ ಶಿಬಿರವಾಗಿದ್ದು, ಅಲ್ಲಿ ನಟನೆ ತರಗತಿ ಮಾತ್ರ ನಡೆಯಲಿದೆ.

ಈ ಹದಿನೈದು ದಿನಗಳಲ್ಲಿ ನುರಿತ ಕಲಾವಿದರು, ತಾಂತ್ರಿಕ ವರ್ಗದವರು, ಸಿನಿಮಾ ಪತ್ರಕರ್ತರು ಬಂದು ಶಿಬಿರಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ನಟನೆ ಬಗ್ಗೆ ಒಂದಷ್ಟು ಮಾಹಿತಿಯನ್ನೂ ಕೊಡಲಿದ್ದಾರೆ. ಉಳಿದಂತೆ ಶಿಬಿರದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿತಿಗಳಿಗೆ ನಾವೇ ಕಿರುಚಿತ್ರ ತಯಾರು ಮಾಡಿ, ಅವರ ಪ್ರತಿಭೆಗೊಂದು ವೇದಿಕೆ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಹದಿನೈದು ದಿನಗಳ ಕಾಲ ಅಲ್ಲೇ ವಾಸ್ತವ್ಯ, ಊಟ, ತಿಂಡಿಯ ವ್ಯವಸ್ಥೆಯೂ ಇರಲಿದೆ. ಹದಿನೈದು ದಿನಗಳ ಕಾಲ ರೆಸಾರ್ಟ್‌ನಲ್ಲಿ ತಂಗುವುದರ ಜೊತೆಗೆ ಸುಪ್ತ ಪ್ರತಿಭೆ ಆಚೆ ತರುವ ಕೆಲಸ ನಡೆಯುತ್ತದೆ. ಹೆಚ್ಚಿನ ವಿವರಗಳಿಗೆ “www.rkmithrafilmacademy.com” ವೆಬ್‌ಸೈಟ್‌ ವೀಕ್ಷಿಸಬಹುದಾಗಿದೆ.


ವಿಶೇಷವಾಗಿ ಹೇಳುವುದಾದರೆ, ಈ ಹದಿನೈದು ದಿನದ ತರಬೇತಿಯ ಬ್ಯಾಚ್‌ನಲ್ಲಿ ಕೇವಲ ೨೦ ಜನರಿಗೆ ಮಾತ್ರ ಅವಕಾಶವಿದೆ. ತಿಂಗಳಿಗೊಂದು ಬ್ಯಾಚ್‌ ನಡೆಯುತ್ತಿದ್ದು, 20 ಜನರ ಮೇಲೆ ಎಷ್ಟೇ ಹಣ ಕೊಟ್ಟರೂ, ಅವಕಾಶ ಇರುವುದಿಲ್ಲ. ಇಲ್ಲಿ ಹಣಕ್ಕಿಂತ ಮೊದಲು, ಒಂದೊಳ್ಳೆಯ ವೇದಿಕೆ ಕಲ್ಪಿಸಬೇಕೆಂಬುದು ನಮ್ಮ ಉದ್ದೇಶ. ನಿರ್ದೇಶನದ ಕನಸು ಕಟ್ಟಿಕೊಂಡಿರುವವರಿಗೆ ಇಲ್ಲಿ ಕಿರುಚಿತ್ರ ನಿರ್ದೇಶನಕ್ಕೂ ಅವಕಾಶ ಮಾಡಿಕೊಡುತ್ತಿದ್ದು, ಆ ಕಿರುಚಿತ್ರದ ನಿರ್ಮಾಣವನ್ನೂ ಆರ್‌ಕೆ ಮಿತ್ರ ಫಿಲ್ಮ್ಮ್ಸ್‌ ಅಕಾಡೆಮಿ ನೋಡಿಕೊಳ್ಳಲಿದೆ. ಅವರ ಶಾರ್ಟ್‌ ಸಿನಿಮಾ ನಮ್ಮದೇ ಚಾನೆಲ್‌ನಲ್ಲೂ ಪ್ರಸಾರ ಮಾಡಲಿದ್ದೇವೆ. ರಾಜ್ಯದ ಯಾವುದೇ ಮೂಲೆಯಿಂದಲೂ ಸಿನಿಮಾ ಮೇಲೆ ಪ್ರೀತಿ ಇದ್ದವರು ಬಂದವರಿಗೆ ಇಲ್ಲಿ ಅವಕಾಶವಿದೆ. ಮೊದಲು ರಿಜಿಸ್ಟರ್‌ ಮಾಡಿಕೊಂಡವರಿಗೆ ಮೊದಲ ಆದ್ಯತೆ. ಇಲ್ಲಿ ಸಂಪೂರ್ಣ ಹೊಸ ರೀತಿಯ ಅನುಭವದ ಜೊತೆ, ನಟನೆ ಕಲಿಕೆಯ ವೇದಿಕೆ ವ್ಯವಸ್ಥೆ ಮಾಡಲಾಗುವುದು” ಎನ್ನುತ್ತಾರೆ ಮಿತ್ರ.

Related Posts

error: Content is protected !!