ಹಾರರ್‌ ಸಿನಿಮಾ ರೂಹಿ ಟ್ರೇಲರ್ ಔಟ್‌!

ಹಾರ್ದಿಕ್ ಮೆಹ್ತಾ ನಿರ್ದೇಶನದ ‘ರೂಹಿ’ ಕಾಮಿಡಿ-ಹಾರರ್ ಹಿಂದಿ ಸಿನಿಮಾದ ‌ಟ್ರೇಲರ್‌  ಇಂದು ಬಿಡುಗಡೆಯಾಗಿದೆ. ಹಾರರ್‌ಗೆ ಅಗತ್ಯವಿರುವ ಹಿನ್ನೆಲೆ ಸಂಗೀತ, ಗ್ರಾಫಿಕ್ ವಿ‍ಶ್ಯುಯಲ್ಸ್‌ಗಳೊಂದಿಗೆ ನೋಡುಗರಿಗೆ ಅಂಜಿಕೆ ಬರುವಂತಿದೆ ಟ್ರೇಲರ್.‌  ರಾಜ್‌ಕುಮಾರ್ ರಾವ್, ಜಾಹ್ನವಿ ಕಪೂರ್ ಮತ್ತು ವರುಣ್ ಶರ್ಮಾ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ಹಾರರ್‌ ಜೊತೆ ಸಂದೇಶವೊಂದನ್ನು ಸಾರುವ ಸೂಚನೆ ನೀಡುತ್ತದೆ.

ಹಾರ್ದಿಕ್ ಮೆಹ್ತಾ ಈ ಹಿಂದೆ ‘ಕಾಮ್‌ಯಾಬ್‌’ (2018) ಹಿಂದಿ ಸಿನಿಮಾ ನಿರ್ದೇಶಿಸಿದ್ದರು. ಅದಕ್ಕೂ ಎರಡು ವರ್ಷಗಳ ಹಿಂದೆ  ‘ಟ್ರಾಪ್ಡ್‌’ ಚಿತ್ರಕಥೆಯಲ್ಲಿ ಭಾಗಿಯಾಗಿದ್ದವರು. ‘ರೂಹಿ’ಯಾಗಿ ಜಾಹ್ನವಿ ಕಪೂರ್ ವಸ್ತ್ರವಿನ್ಯಾಸ, ಮೇಕಪ್‌ ಸೂಕ್ತವಾಗಿದ್ದು, ಜಾಹ್ನವಿ ಪಾತ್ರವನ್ನು ಅರಿತು ನಟಿಸಿರುವಂತಿದೆ. ಮದುವೆ ನಂತರ ಹನಿಮೂನ್‌ಗೆ ತೆರೆಳುವ ದಂಪತಿ ಕಂಡರೆ ಪ್ರೇತಾತ್ಮ ‘ರೂಹಿ’ಗೆ ಅಸಮಾಧಾನ.

ರೂಹಿಯಿಂದ ಯುವತಿಯರನ್ನು ರಾಜ್‌ಕುಮಾರ್ ರಾವ್ ಮತ್ತು ವರುಣ್ ಶರ್ಮಾ ಹೇಗೆ ಕಾಪಾಡುತ್ತಾರೆ ಎನ್ನುವುದು ಕಥಾವಸ್ತು. ಇಬ್ಬರು ನಾಯಕರು ಪ್ರೇತಾತ್ಮದ ಬಗ್ಗೆ ಕನಿಕರದಿಂದ ಸಮಸ್ಯೆಯನ್ನು ನಿಭಾಯಿಸುವಾಗ ಸಂಭವಿಸುವ ತಮಾಷೆಗಳು ಅಲ್ಲಲ್ಲಿ ಕಾಣಿಸುತ್ತವೆ. ಕತ್ತನ್ನು 360 ಡಿಗ್ರಿ ತಿರುಗಿಸುವುದು, ಕಾಲುಗಳನ್ನು ತಿರುವು, ಮುರುವು ಮಾಡುವ ‘ರೂಹಿ’ ಪಾತ್ರದಲ್ಲಿ ಜಾಹ್ನವಿ ಭರವಸೆ ಮೂಡಿಸುತ್ತಾರೆ.

Related Posts

error: Content is protected !!