ಅಮೀರ್‌ ಸಿನಿಮಾದಿಂದ ಸೇತುಪತಿ ಹೊರ ಬಂದಿದ್ದೇಕೆ!?

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಅಮೀರ್ ಖಾನ್‌ರ ‘ಲಾಲ್ ಸಿಂಗ್ ಛಡ್ಡಾ’ ಹಿಂದಿ ಚಿತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸಬೇಕಿತ್ತು. ಟಾಮ್ ಹ್ಯಾಂಕ್‌ ನಟಿಸಿದ್ದ ಜನಪ್ರಿಯ ಹಾಲಿವುಡ್ ಸಿನಿಮಾ ‘ಫಾರೆಸ್ಟ್ ಗಂಪ್‌’ ರೀಮೇಕಿದು. ಅಮೀರ್ ನಾಯಕನಾಗಿ ನಟಿಸುತ್ತಿದ್ದರೆ ಚಿತ್ರದಲ್ಲಿ ಇನ್ನೆರೆಡು ಪ್ರಮುಖ ಪಾತ್ರಗಳಿದ್ದವು. ಕರೀನಾ ಕಪೂರ್‌ ಅವರದ್ದು ಒಂದು ಪಾತ್ರ. ಮತ್ತೊಂದು ಪ್ರಮುಖ ಪಾತ್ರಕ್ಕೆ ವಿಜಯ್ ಸೇತುಪತಿ ಆಯ್ಕೆಯಾಗಿದ್ದರು.


ಕೋವಿಡ್ ಕಾರಣದಿಂದಾಗಿ ‘ಲಾಲ್ ಸಿಂಗ್ ಛಡ್ಡಾ’ ಶೂಟಿಂಗ್ ನಿಂತುಹೋಗಿತ್ತು. ಮತ್ತೆ ಚಿತ್ರೀಕರಣ ಆರಂಭವಾದಾಗ ಚಿತ್ರತಂಡದಲ್ಲಿ ಸೇತುಪತಿ ಹೆಸರು ಬಿಟ್ಟುಹೋಗಿತ್ತು. “ಸೇತುಪತಿ ಹಿಂದಿ ಚಿತ್ರಕ್ಕಾಗಿ ತಮ್ಮ ದೇಹದ ತೂಕ ಇಳಿಸಿಕೊಳ್ಳಬೇಕಿತ್ತು. ಅದು ಸಾಧ್ಯವಾಗದ ಕಾರಣ ಅವರು ಚಿತ್ರದಿಂದ ಹೊರಗುಳಿಯಬೇಕಾಯ್ತು” ಎನ್ನುವ ವದಂತಿಯಿತ್ತು. ಈ ವದಂತಿಗಳನ್ನು ಅಲ್ಲಗಳೆದಿರುವ ಅವರು, “ಕೋವಿಡ್ ಕಾರಣದಿಂದಾಗಿ ನನ್ನ ಸಿನಿಮಾ ಯೋಜನೆಗಳೆಲ್ಲಾ ತಲೆಕೆಳಗಾದವು. ಐದು ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡಿದ್ದೆ. ಹಾಗಾಗಿ ಹಿಂದಿ ಚಿತ್ರಕ್ಕೆ ಡೇಟ್ಸ್ ಹೊಂದಿಸಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದಿದ್ದಾರೆ.

ಹಿಂದಿ ಚಿತ್ರದಲ್ಲಿ ನಟಿಸುವಂತೆ ಸ್ವತಃ ಅಮೀರ್ ಖಾನ್ ಅವರೇ ಒತ್ತಡ ತಂದಿದ್ದರು ಎನ್ನುತ್ತಾರೆ ಸೇತುಪತಿ. “ತಮಿಳುನಾಡಿನಲ್ಲಿ ನನ್ನ ಚಿತ್ರದ ಶೂಟಿಂಗ್ ನಡೆಯುವಲ್ಲಿಯೇ ಅಮೀರ್ ಬಂದಿದ್ದರು. ಕಾರಣಾಂತರಗಳಿಂದ ಚಿತ್ರದ ನಿರ್ದೇಶಕ ಅದ್ವೈತ್‌ ಚಂದನ್ ಬಂದಿರಲಿಲ್ಲ. ಅಮೀರ್ ಸ್ಕ್ರಿಪ್ಟ್ ಹಾಗೂ ನನ್ನ ಪಾತ್ರದ ಬಗ್ಗೆ ಹೇಳಿದ್ದರು. ಅವರು ಕತೆ ಹೇಳುವ ರೀತಿಯೇ ಸೊಗಸು. ಬ್ಯುಸಿ ಶೆಡ್ಯೂಲ್‌ನಿಂದಾಗಿ ಹಿಂದಿ ಚಿತ್ರ ಕೈತಪ್ಪಿತು. ಮುಂದೊಮ್ಮೆ ಅವರೊಂದಿಗೆ ನಟಿಸುವ ಅವಕಾಶ ಕಳೆದುಕೊಳ್ಳುವುದಿಲ್ಲ” ಎನ್ನುವ ಅವರು ವದಂತಿಗಳನ್ನು ಸಂಪೂರ್ಣ ಅಲ್ಲಗಳೆಯುತ್ತಾರೆ.

Related Posts

error: Content is protected !!