ತಮಿಳು ಮೂಲದ ಬಹುಭಾಷಾ ನಟಿ ಓವಿಯಾ ವಿರುದ್ಧ ಬಿಜೆಪಿ ಪಕ್ಷದ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ. ಭಾನುವಾರವಷ್ಟೆ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿಗೆ ಭೇಟಿ ನೀಡಿದ್ದರು. ಅದರ ಹಿಂದಿನ ದಿನ ನಟಿ ಓವಿಯಾ ‘ಗೋಬ್ಯಾಕ್ ಮೋದಿ ’ ಆಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದರು. ನಟಿಯ ಈ ಟ್ವೀಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಇದೀಗ ಬಿಜೆಪಿ ಸದಸ್ಯರು ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ನಟಿ ಓವಿಯಾ ಈ ಹಿಂದೆ ಯಶ್ ಅಭಿನಯದ ಸೂಪರ್ ಹಿಟ್ ‘ಕಿರಾತಕ’ ಚಿತ್ರದ ನಾಯಕಿಯಾಗಿ ನಟಿಸಿದ್ದರು. ಅದಾದ ನಂತರ ಅವರು ‘ಮಿಸ್ಟರ್ ಮೊಮ್ಮಗ’ ಚಿತ್ರದೊಂದಿಗೆ ಮತ್ತೆ ಕನ್ನಡಕ್ಕೆ ಬಂದಿದ್ದರು. ತಮಿಳು ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಹೆಸರು ಮಾಡಿದ್ದ ಅವರು ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. “ತಮ್ಮ ಟ್ವೀಟ್ ಮೂಲಕ ನಟಿ ಸಾರ್ವಜನಿಕ ಅಶಾಂತಿ ಉಂಟುಮಾಡಿದ್ದಾರೆ.
ಅವರ ಈ ಟ್ವೀಟ್ ಹಿಂದಿನ ಉದ್ದೇಶ, ಅವರ ಇತರೆ ಸಂಪರ್ಕಗಳ ಬಗ್ಗೆ ತನಿಖೆಯಾಗಲಿ” ಎನ್ನುವ ಒಕ್ಕಣಿಯೊಂದಿಗೆ ಪಕ್ಷದ ಕಾರ್ಯಕರ್ತರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಓವಿಯಾ ಅವರಿಂದ ಇದಕ್ಕೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.