Categories
ಸಿನಿ ಸುದ್ದಿ

ಎ ವಿಲನ್‌ ಫ್ರಮ್‌ ಕುಂದಾಪುರ! ಭಲೇ ವಜ್ರಾಂಗ್

ಕನ್ನಡಕ್ಕೆ ಮತ್ತೊಬ್ಬ ವಜ್ರದಂತಹ ಖಳನಟ

ಹೀರೋನೇ ಆಗಬೇಕಿಲ್ಲ, ವಿಲನ್‌ ಪಾತ್ರಕ್ಕೂ ಸೈ

ನಾನು ಇಲ್ಲಿಗೆ ಬಂದಿರೋದೇ ಒಬ್ಬ ಕಲಾವಿದ ಆಗಬೇಕು ಅಂತಾನೇ ಹೊರತು, ನಾನೊಬ್ಬ ಹೀರೋ ಆಗಬೇಕು ಅಂತಲ್ಲ. ಹೀರೋ ಪಾತ್ರಗಳೇ ಬೇಕು ಎಂಬ ಡಿಮ್ಯಾಂಡ್‌ ಕೂಡ ಇಲ್ಲ. ವಿಲನ್‌ ಪಾತ್ರವಿರಲಿ, ಹೀರೋ ಪಾತ್ರವಿರಲಿ ಎರಡರಲ್ಲೂ ನಟನೆ ಇದೆ. ಹಾಗಾಗಿ ಅಲ್ಲಿ ವಿಭಿನ್ನ ಎನಿಸಲ್ಲ. ಪಾತ್ರದಲ್ಲಿ ತೂಕವಿದೆಯಾ ಎಂಬುದನ್ನು ನೋಡಿ ನಾನು ಪಾತ್ರ ಆಯ್ಕೆ ಮಾಡಿಕೊಳ್ತೀನಿ. ಒಟ್ಟಾರೆ, ಮಾಡುವ ಪಾತ್ರ ಜನರಿಗೆ ಇಷ್ಟವಾಗಬೇಕು, ಗುರುತಿಸುವಂತಿದ್ದರೆ ಸಾಕು.

ಮಾಡೆಲ್‌ನಿಂದ ಸಿನಿಮಾವರೆಗೂ…
ಕನ್ನಡ ಚಿತ್ರರಂಗಕ್ಕೆ ಮಾಡೆಲ್‌ ಕ್ಷೇತ್ರದಿಂದ ಬಂದವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಸಾಕಷ್ಟು ಮಂದಿ ಮಾಡೆಲ್‌ನಿಂದ ಎಂಟ್ರಿಯಾದವರ ಪೈಕಿ, ಕೆಲವರಷ್ಟೇ ಇಲ್ಲಿ ಗಟ್ಟಿನೆಲೆ ಕಂಡುಕೊಳ್ಳಲು ಸಾಧ್ಯವಾಗಿದೆ. ಅಂತಹವರ ಸಾಲಿಗೆ ವಜ್ರಾಂಗ್‌  ಶೆಟ್ಟಿ ಕೂಡ ಒಬ್ಬರು. ಅಜಾನುಬಾಹುನಂತಿರುವ ವಜ್ರಾಂಗ್‌  ಶೆಟ್ಟಿ , ಕನ್ನಡ ಚಿತ್ರರಂಗಕ್ಕೆ ಬಂದು ಆರು ವರ್ಷಗಳು ಗತಿಸಿವೆ. ಈ ಆರು ವರ್ಷಗಳಲ್ಲಿ ಅವರು ಹದಿನೈದು ಸಿನಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸಬರಿಂದ ಹಿಡಿದು ಸ್ಟಾರ್‌ ನಟರ ಸಿನಿಮಾಗಳಲ್ಲಿ ವಿಲನ್‌ ಆಗಿ ಮಿಂಚಿದ್ದಾರೆ ಅನ್ನೋದು ವಿಶೇಷ. ತಮ್ಮ ಸಿನಿಜರ್ನಿ ಕುರಿತು ಸ್ವತಃ ವಜ್ರಾಂಗ್‌  ಶೆಟ್ಟಿ  “ಸಿನಿಲಹರಿ” ಜೊತೆ ಒಂದಷ್ಟು ಮಾತನಾಡಿದ್ದಾರೆ.

ಓವರ್‌ ಟು ವಜರಂಗ್‌ ಶೆಟ್ಟಿ…
“ನಾನು ಮೂಲತಃ ಕುಂದಾಪುರ ತಾಲೂಕಿನ ಟೆಕ್ಕಟ್ಟೆ ಗ್ರಾಮದ ಸಾಮಾನ್ಯ ಹುಡುಗ. ಬಿಸಿಎ ಓದು ಮುಗಿಸಿ, ನೇರವಾಗಿ ಬೆಂಗಳೂರಿಗೆ ಬಂದವನು. ಸಿನಿಮಾ ಎಂಬ ಕನಸೇ ಕಾಣದ ನನಗೆ ಸಿನಿಮಾ ಅನ್ನೋ ಅವಕಾಶ ತಾನಾಗಿಯೇ ಬಂತು. 2014ರಲ್ಲಿ ನಾನು ಈ ಬಣ್ಣದ ಲೋಕವನ್ನು ಪ್ರವೇಶ ಮಾಡಿದೆ. “ಸಿದ್ಧಾರ್ಥ” ನನ್ನ ಅಭಿನಯದ ಮೊದಲ ಚಿತ್ರ. ವಿನಯ್‌ರಾಜಕುಮಾರ್‌ ಎದುರು ವಿಲನ್‌ ಆಗಿ ನಟಿಸಿದ ಖುಷಿ ಆ ಸಿನಿಮಾ ಮೂಲಕ ಹೆಚ್ಚಿತು. ಖಳನಾಯಕನಾಗಿ ಮೊದಲ ಸಲ ತೆರೆ ಮೇಲೆ ರಾರಾಜಿಸಿದ ಆ ಕ್ಷಣ ನಿಜಕ್ಕೂ ಅದ್ಭುತ.

ಆ ಸಿನಿಮಾ ಇನ್ನೇನು ಶೂಟಿಂಗ್‌ ನಡೆಯುತ್ತಿರುವಾಗಲೇ ನನಗೆ “ನಮಕ್‌ ಹರಾಮ್‌” ಚಿತ್ರದಲ್ಲೂ ಖಳನಟನಾಗಿ ನಟಿಸುವ ಅವಕಾಶ ಸಿಕ್ಕಿತು. ಆ ಚಿತ್ರದ ಚಿತ್ರೀಕರಣ ಇರುವಾಗಲೇ, “ಮಂತ್ರಂ” ಎಂಬ ಹೊಸ ಚಿತ್ರಕ್ಕೆ ನಾನು ಹೀರೋ ಆಗಿಯೂ ನಟಿಸಿದೆ. ಅದಾದ ಬಳಿಕ ವೆಂಕಟ್‌ ಭಾರಧ್ವಜ್‌ ಅವರ ನಿರ್ದೇಶನದ “ಬಬ್ಲೂಷ” ಚಿತ್ರದಲ್ಲಿ ಬಬ್ಲೂಷ ಎಂಬ ಮೇಜರ್‌ ಪಾತ್ರ ನಿರ್ವಹಿಸಿದೆ. ಆ ಸಿನಿಮಾದ ನಟನೆಗೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆಯೂ ಸಿಕ್ಕಿತು. ನಂತರ “ಮಾದ ಮತ್ತು ಮಾನಸಿ” ಚಿತ್ರದಲ್ಲಿ ಸೆಕೆಂಡ್‌ ಲೀಡ್‌ ಮಾಡಿದೆ. ಅದರೊಂದಿಗೆ “ಕಿನಾರೆ” ಸಿನಿಮಾದಲ್ಲೂ ಸೆಕೆಂಡ್‌ ಲೀಡ್ ಪಾತ್ರ ಮಾಡಿದೆ. ಮಾಲಾಶ್ರೀ ಅವರ “ಉಪ್ಪು ಹುಳಿ ಖಾರ” ಚಿತ್ರದಲ್ಲಿ ಅವರ ಎದುರು ವಿಲನ್‌ ಆಗಿಯೂ ನಟಿಸಿದ್ದೇನೆ. ಉಳಿದಂತೆ ಹೊಸಬರ “ಕಿಸ್‌” ಚಿತ್ರದಲ್ಲೂ ವಿಲನ್.‌ ಅದೇನೋ ಗೊತ್ತಿಲ್ಲ. ಬಹುತೇಕ ಸಿನಿಮಾಗಳಲ್ಲಿ ಖಳನಟನ ಪಾತ್ರಗಳೇ ಹುಡುಕಿ ಬರುತ್ತಿವೆ” ಎನ್ನುತ್ತಾರೆ ವಜ್ರಾಂಗ್‌  ಶೆಟ್ಟಿ .

ಪಾಸಿಟಿವ್-ನೆಗೆಟಿವ್‌ ಎರಡಕ್ಕೂ ಸೈ
ದರ್ಶನ್‌ ಜೊತೆ ಎರಡು ಸಿನಿಮಾಗಳಲ್ಲಿ ವಿಲನ್‌ ಆಗಿ ನಟಿಸಿರುವ ವಜ್ರಾಂಗ್‌  ಶೆಟ್ಟಿ ಅವರಿಗೆ ಹೆಮ್ಮೆ ಇದೆ. “ಯಜಮಾನ” ಚಿತ್ರದಲ್ಲೊಂದು ಸಣ್ಣ ಪಾತ್ರ ನಿರ್ವಹಿಸಿದ ಬಳಿಕ ಪುನಃ, “ರಾಬರ್ಟ್‌” ಚಿತ್ರದಲ್ಲಿ ಒಂದು ನೆಗೆಟಿವ್‌ ರೋಲ್‌ ಮಾಡಿದ್ದೇನೆ. ಯಾವಾಗ “ಯಜಮಾನʼ ಸಿನಿಮಾದಲ್ಲಿ ಸಣ್ಣದ್ದಾಗಿ ಕಾಣಿಸಿಕೊಂಡೆನೋ, ಅಲ್ಲಿಂದ ಸಾಕಷ್ಟು ಅವಕಾಶಗಳು ಹುಡುಕಿ ಬಂದಿದ್ದುಂಟು. ಅವೆಲ್ಲವೂ ನೆಗೆಟಿವ್‌ ಪಾತ್ರಗಳೇ. ನನಗೆ ನೆಗೆಟಿವ್‌, ಪಾಸಿಟಿವ್‌ ಬಗ್ಗೆ ಗೊತ್ತಿಲ್ಲ. ಒಂದೊಳ್ಳೆಯ ಪಾತ್ರವಿದ್ದರೆ, ಅದು ನೆಗೆಟಿವ್‌ ಇರಲಿ, ಪಾಸಿಟಿವ್‌ ಆಗಿರಲಿ ಮಾಡ್ತೀನಿ. ಪಾತ್ರದಲ್ಲಿ ತೂಕವಿರಬೇಕಷ್ಟೇ.

ಯಾವುದೇ ಪಾತ್ರವಿದ್ದರೂ ಬ್ಯಾಲೆನ್ಸ್‌ ಮಾಡಿಕೊಂಡು ಕೆಲಸ ಮಾಡ್ತೀನಿ. ಸದ್ಯಕ್ಕೆ ರಿಲೀಸ್‌ಗೆ ಈಗ ನಾಲ್ಕು ಚಿತ್ರಗಳಿವೆ. ಈಗ ಪುನೀತ್‌ರಾಜಕುಮಾರ್‌ ಅಭಿನಯದ “ಜೇಮ್ಸ್‌” ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ದಿಗಂತ್‌ ಅವರ “ಮಾರಿಗೋಲ್ಡ್‌” ಚಿತ್ರದಲ್ಲೂ ನೆಗೆಟಿವ್‌ ರೋಲ್.‌ “ರೂಮ್‌ಬಾಯ್‌” ಸಿನಿಮಾದಲ್ಲೂ ನೆಗೆಟಿವ್‌ ಶೇಡ್‌ ಇದೆ. ಉಳಿದಂತೆ ಎರಡು ಹೊಸ ಚಿತ್ರಗಳ ಮಾತುಕತೆ ನಡೆಯುತ್ತಿದೆ. ಆ ಪೈಕಿ ಒಂದು ಲೀಡ್‌ ಪಾತ್ರ, ಇನ್ನೊಂದು ದೊಡ್ಡ ಬ್ಯಾನರ್‌ನ ಚಿತ್ರ” ಎಂದು ವಿವರ ಕೊಡುತ್ತಾರೆ ವಜ್ರಾಂಗ್‌  ಶೆಟ್ಟಿ .‌

ಗಾಡ್‌ ಫಾದರ್‌ ಇಲ್ಲದೇ ಬಂದವನು
ನಾನು ಇಲ್ಲಿಗೆ ಬಂದಿರೋದೇ ಒಬ್ಬ ಕಲಾವಿದ ಆಗಬೇಕು ಅಂತಾನೇ ಹೊರತು, ನಾನೊಬ್ಬ ಹೀರೋ ಆಗಬೇಕು ಅಂತಲ್ಲ. ಹೀರೋ ಪಾತ್ರಗಳೇ ಬೇಕು ಎಂಬ ಡಿಮ್ಯಾಂಡ್‌ ಕೂಡ ಇಲ್ಲ. ವಿಲನ್‌ ಪಾತ್ರವಿರಲಿ, ಹೀರೋ ಪಾತ್ರವಿರಲಿ ಎರಡರಲ್ಲೂ ನಟನೆ ಇದೆ. ಹಾಗಾಗಿ ಅಲ್ಲಿ ವಿಭಿನ್ನ ಎನಿಸಲ್ಲ. ಪಾತ್ರದಲ್ಲಿ ತೂಕವಿದೆಯಾ ಎಂಬುದನ್ನು ನೋಡಿ ನಾನು ಪಾತ್ರ ಆಯ್ಕೆ ಮಾಡಿಕೊಳ್ತೀನಿ. ಒಟ್ಟಾರೆ, ಮಾಡುವ ಪಾತ್ರ ಜನರಿಗೆ ಇಷ್ಟವಾಗಬೇಕು, ಗುರುತಿಸುವಂತಿದ್ದರೆ ಸಾಕು. ನಿಜ ಹೇಳುವುದಾದರೆ, ನಾನಿಲ್ಲಿಗೆ ಬರುವ ಮುನ್ನ, ಸಿನಿಮಾ ಕನಸು ಕಂಡವನಲ್ಲ.

2014 ರಲ್ಲಿ ನಾನು “ಮಿಸ್ಟರ್‌ ‌ ಕುಂದಾಪುರ” ಆದವನು. ಅಲ್ಲಿಂದ ಬೆಂಗಳೂರು ಬರುವುದಕ್ಕೆ ಒಂದು ಕಾರಣ ಸಿಕ್ತು. ಇಲ್ಲಿಗೆ ಬಂದು ಒಂದು ಕಂಪೆನಿಯಲ್ಲಿ ವರ್ಷ ಕೆಲಸ ಮಾಡಿದೆ. ಆದರೆ, ಅದೇಕೋ ನನಗೆ ಇಂಟ್ರೆಸ್ಟ್‌ ಎನಿಸಲಿಲ್ಲ. ನನ್ನ ಕೆಲಸ ಇದಲ್ಲ ಅನ್ನಿಸತೊಡಗಿತು. ಮಾಡೆಲ್‌ ಕ್ಷೇತ್ರದಿಂದ ಬಂದವನಾಗಿದ್ದರಿಂದ ಕ್ರಮೇಣ ನನಗೂ ಎಲ್ಲೋ ಒಂದ ಕಡೆ ಸಿನಿಮಾ ಮೇಲೆ ಒಲವು ಮೂಡ ತೊಡಗಿತು. ಆದರೆ, ಗಾಡ್‌ಫಾದರ್‌ ಅನ್ನೋರು ನನಗೆ ಯಾರೂ ಇಲ್ಲ. ಹೇಗೆ ಸಿನಿಮಾರಂಗವನ್ನು ತಲುಪುವುದು ಎಂಬ ಪ್ರಶ್ನೆ ಕಾಡಿದ್ದು ನಿಜ. ಹೀಗಿರುವಾಗಲೇ ಗೆಳೆಯರೊಬ್ಬರ ಗೆಳೆಯರ ಮಗನ ಸಿನಿಮಾವೊಂದು ನಡೆಯುತ್ತಿತ್ತು. ಅಲ್ಲಿಗೆ ಕರೆದುಕೊಂಡು ಹೋದ ಗೆಳೆಯನಿಂದ ಒಂದು ಸಣ್ಣ ಪಾತ್ರ ಮಾಡುವ ಅವಕಾಶ ಸಿಕ್ಕಿತು. ನಂತರ “ಸಿದ್ಧಾರ್ಥ” ಸಿನಿಮಾದ ಆಡಿಷನ್‌ಗೆ ಹೋದೆ. ಸ್ವಲ್ಪ ದಿನಗಳ ಬಳಿಕ ಆ ತಂಡದಿಂದ ಆಯ್ಕೆಯಾದ ಬಗ್ಗೆ ಫೋನ್‌ ಬಂತು. ಆ ಸಿನಿಮಾದಲ್ಲಿ ನಟಿಸಿದ್ದೇ ತಡ, ಅಲ್ಲಿಂದ ಇಲ್ಲಿಯವರೆಗೆ ತಿರುಗಿ ನೋಡಿಲ್ಲ. ಬಂದ ಪಾತ್ರಗಳನ್ನು ಇಷ್ಟಪಟ್ಟು, ಪ್ರೀತಿಯಿಂದ ಮಾಡುತ್ತಿದ್ದೇನೆ.

ಗಟ್ಟಿನೆಲೆ ಕಾಣೋ ಆಸೆ
ಈವರೆಗೆ ನನಗೆ ಸಿನಿಮಾ ಅತೀವ ತೃಪ್ತಿ ಕೊಟ್ಟಿದೆ. ಇಷ್ಟವಾದ ಕೆಲಸ ಬಿಟ್ಟು ಬಂದಿದ್ದಕ್ಕೂ ಈ ಕಲೆ ನನ್ನ ಕೈ ಹಿಡಿದಿದೆ. ಸಿನಿಮಾ ನನಗೆ ಅನ್ನ ಕೊಟ್ಟಿದೆ. ಒಳ್ಳೆಯ ಗೌರವವನ್ನೂ ಕೊಟ್ಟಿದೆ. ಅಪಾರ ಜನರ ಪ್ರೀತಿಯನ್ನೂ ನೀಡಿದೆ. ಇದಕ್ಕಿಂತ ಬೇರೇನು ಬೇಕು. ಸದ್ಯಕ್ಕೆ ಬೇರೆ ಭಾಷೆಯಿಂದ ಅವಕಾಶ ಬಂದಿಲ್ಲ. ಹಾಗೊಂದು ವೇಳೆ ಒಳ್ಳೆಯ ಪಾತ್ರ ಬಂದರೆ ಖಂಡಿತ ಮಾಡ್ತೀನಿ. ಆದರೆ, ಮೊದಲು ಕನ್ನಡಕ್ಕೆ ಆದ್ಯತೆ ನೀಡ್ತೀನಿ. ಇಲ್ಲೇ ಗಟ್ಟಿನೆಲೆಯೂರಬೇಕು ಎಂಬ ಮಹಾದಾಸೆ ನನ್ನದು. ಸಿನಿಮಾಗೆ ಬರುವ ಮುನ್ನ ಯಾವುದರಲ್ಲೂ ಪಕ್ವತೆ ಇರಲಿಲ್ಲ.

ಇಲ್ಲಿ ಅವಕಾಶಗಳು ಬರತೊಡಗಿದ ಮೇಲೆ, ನಟನೆ ಕಲಿತೆ, ಡ್ಯಾನ್ಸ್‌ ಕಲಿತೆ, ಸ್ಟಂಟ್‌ ಕೂಡ ಕಲಿತಿದ್ದೇನೆ. ಒಬ್ಬ ನಟನಿಗೆ ಬೇಕಾದ ಎಲ್ಲಾ ಕ್ವಾಲಿಟೀಸ್‌ ಬಗ್ಗೆಯೂ ತಿಳಿದುಕೊಂಡು ಅದನ್ನೇ ಫಾಲೋ ಮಾಡುತ್ತಿದ್ದೇನೆ. ರೆಗ್ಯುಲರ್‌, ವ್ಯಾಯಾಮ, ಜಿಮ್‌ ಮಾಡುತ್ತಿದ್ದೇನೆ. ಒಂದಷ್ಟು ಹೊಸ ಬಗೆಯ ಚಿತ್ರಗಳನ್ನು ನೋಡುತ್ತಲೇ ಕಲಿಯುತ್ತಿದ್ದೇನೆ. ಇವತ್ತು ನಾನೇನೆ ಆಗಿದ್ದರೂ, ಅದು ನನ್ನ ಅಪ್ಪ, ಅಮ್ಮ, ಅಕ್ಕಂದಿರ ಸಹಕಾರದಿಂದ. ಅವರ ಸಹಕಾರ ಇರದಿದ್ದರೆ ನಾನು ಇಲ್ಲಿಗೆ ಬರುತ್ತಿರಲಿಲ್ಲ. ನಟ ಆಗುತ್ತಿರಲಿಲ್ಲ. ಹಾಗೆಯೇ ನನಗೆ ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರ ಸಹಕಾರವನ್ನು ಎಂದಿಗೂ ಮರೆಯೋದಿಲ್ಲ ಎನ್ನುತ್ತಾರೆ ವಜ್ರಾಂಗ್‌  ಶೆಟ್ಟಿ .

Categories
ಸಿನಿ ಸುದ್ದಿ

ಸ್ಕೂಲ್‌ ಬಾಯ್‌ ಧ್ರುವ ! ಪೊಗರು ಚಿತ್ರದ ಸ್ಟುಡೆಂಟ್‌ ಪಾತ್ರದ ಗೆಟಪ್‌ ಇದು

ಈ ಪಾತ್ರಕ್ಕಾಗಿ  ವರ್ಷಗಟ್ಟಲೆ ಶ್ರಮ

ಯಾವುದೇ ಒಬ್ಬ ಹೀರೋ ಇರಲಿ, ತನ್ನ ಪಾತ್ರಕ್ಕೆ ತಕ್ಕಂತೆ ರೆಡಿಯಾಗಿಬಿಡುತ್ತಾನೆ. ಅದು ಗೆಟಪ್‌ ಆಗಿದ್ದರೆ ಸ್ವಲ್ಪ ಸುಲಭ. ಆದರೆ, ಇಡೀ ದೇಹವನ್ನೇ ವರ್ಕೌಟ್‌ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಲ್ಲುವುದೆಂದರೆ ಸುಮ್ಮನೇನಾ? ಧ್ರುವ ಸರ್ಜಾ, “ಪೊಗರು” ಚಿತ್ರದಲ್ಲಿ ಹತ್ತನೇ ತರಗತಿ ಹುಡುಗನ ಪಾತ್ರ ಮಾಡಿದ್ದಾರೆ. ಹೌದು, ಧ್ರುವ ಸರ್ಜಾ ಅವರು ಆ ಪಾತ್ರಕ್ಕಾಗಿಯೇ ಸಾಕಷ್ಟ ತಯಾರಿ ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಂತಿದ್ದಾರೆ. ಎಲ್ಲರಿಗೂ ಒಂದು ಪ್ರಶ್ನೆ ಸಹಜವಾಗಿಯೇ ಎದುರಾಗಬಹುದು.

ಧ್ರುವ ಸರ್ಜಾ ಅವರು, ಸಿಕ್ಕಾಪಟ್ಟೆ ದಪ್ಪಗಿದ್ದಾರೆ, ಅವರು ಸ್ಕೂಲ್‌ ಪಾತ್ರ ಮಾಡೋಕೆ ಸಾಧ್ಯನಾ? ಅದರಲ್ಲೂ ಎಸ್ಸೆಸ್ಸೆಲ್ಸಿ ಹುಡುಗನ ಪಾತ್ರ ಅಂದರೆ ಅಸಾಧ್ಯ ಅಂತೆಲ್ಲಾ ಮಾತಾಡಿಕೊಳ್ಳಬಹುದು. ಆದರೆ, ಧ್ರುವ ಸರ್ಜಾ ಅವರು ಆ ಪಾತ್ರದಲ್ಲಿ ಜೀವಿಸಿದ್ದಾರೆ ಎಂದರೆ ನಂಬಲೇಬೇಕು. ಅವರು ತಮ್ಮ ದೇಹದ ತೂಕ ಇಳಿಸಿಕೊಂಡೇ ಪಾತ್ರ ನಿರ್ವಹಿಸಿದ್ದಾರೆ. ಅದಕ್ಕಾಗಿ ಅವರು ವರ್ಷಗಟ್ಟಲೇ ತಯಾರಿ ಮಾಡಿಕೊಂಡಿದ್ದುಂಟು.


ಧ್ರುವ ಸರ್ಜಾ ಅವರು “ಪೊಗರು” ಚಿತ್ರದಲ್ಲಿ ಸ್ಕೂಲ್ ಬಾಯ್ ಅಂದರೆ, ಜನರು ನಂಬಲಕ್ಕಿಲ್ಲ. ಇದು ನಂಬಲು ಅಸಾದ್ಯವಾದರೂ ನಂಬಲೇ ಬೇಕು. ಆ ಪಾತ್ರಕ್ಕಾಗಿಯೇ ಅವರು ಮೂರು ವರ್ಷ ಸಮಯ ತೆಗೆದುಕೊಂಡಿದ್ದಲ್ಲದೆ, ಮೂರು ವರ್ಷಗಳ ಕಾಲ ಯಾವ ಸಿನಿಮಾ ಮುಂದೆ ಬಂದರೂ ಅವರು ಒಪ್ಪದೆ, ಆ ಪಾತ್ರಕ್ಕಾಗಿಯೇ ಬಂದ ಸಿನಿಮಾ ಮುಂದೂಡಿದ್ದು ನಿಜಕ್ಕೂ ಮೆಚ್ಚಲೇಬೇಕು. ಇದುವರೆಗೂ ಬೇರೆ ಸಿನಿಮಾಗಳನ್ನು ಅವರು ಯಾಕೆ ಒಪ್ಪಿಕೊಂಡಿಲ್ಲ ಎಂಬುದಕ್ಕೆ ಇದೇ ಕಾರಣವಂತೆ. ಸ್ಕೂಲ್‌ ಬಾಯ್‌ ಪಾತ್ರಕ್ಕಾಗಿಯೇ ಧ್ರುವ ಅವರು ೬೫ ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸಿನಿಮಾ ಪ್ರೀತಿ ಅಂದರೆ ಇದೇ ಅಲ್ಲವೇ?

 

Categories
ಸಿನಿ ಸುದ್ದಿ

ಸಾವಿರ ಪರದೆ ಮೇಲೆ ಪೊಗರು ಅಬ್ಬರ! ಫೆ.19 ರಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಹಬ್ಬ

3 ವರ್ಷಗಳ ಬಳಿಕ ತೆರೆ ಮೇಲೆ ಧ್ರುವ ಸರ್ಜಾ ಸಿನ್ಮಾ

ಕೊರೋನಾ ನಂತರ ಚಿತ್ರರಂಗಕ್ಕೆ ಬಹುದೊಡ್ಡ ಎನರ್ಜಿ ತುಂಬಲು ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷೆಯ ಸಿನಿಮಾ “ಪೊಗರು” ಸಜ್ಜಾಗಿದೆ. ಈಗಾಗಲೇ ಚಿತ್ರ ತಂಡ ಪ್ರಕಟಿಸಿರುವಂತೆ, ಫೆಬ್ರವರಿ 19 ರಂದು ಈ ಚಿತ್ರ ದೇಶಾದ್ಯಂತ ಅದ್ಧೂರಿಯಾಗಿಯೇ ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ ಇದು ಕನ್ನಡದ ಜತೆಗೆ ತಮಿಳು ಹಾಗೂ ತೆಲುಗಿನಲ್ಲೂ ಬರುತ್ತಿದೆ ಎಂಬುದೇ ಈ ಹೊತ್ತಿನ ಸುದ್ದಿ.

ಇನ್ನೂ ಒಂದು ವಿಶೇಷವೆಂದರೆ, ಕೊರೋನಾ ನಂತರ ಬರುತ್ತಿರುವ ಮೊದಲ ಸ್ಟಾರ್ ಸಿನಿಮಾ ಯಾವುದು ಅಂತ ಪ್ರೇಕ್ಷಕರು ಎದುರು ನೋಡುತ್ತಿದ್ದಾಗ, ನಿರೀಕ್ಷೆಯಂತೆಯೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ “ಪೊಗರು” ತೆರೆಗೆ ಬರುತ್ತಿದೆ. ಅಲ್ಲಿಗೆ ಕೊರೊನಾ ಭಯ ದೂರವಾಗುತ್ತಿದ್ದಂತೆಯೇ, ಮೊದಲು ತನ್ನ “ಪೊಗರು” ತೋರಿಸಲು ಚಿತ್ರ ರೆಡಿಯಾಗಿದೆ.

ಕೊರೋನಾ ಆತಂಕ ಈಗಲೂ ಇರುವಾಗ ಈ ಚಿತ್ರದ ಬಿಡುಗಡೆ ಇಡೀ ಚಿತ್ರ ತಂಡವೇ ಬೆಂಬಲ ಕೊಟ್ಟಿದೆ. ನಿರ್ಮಾಪಕ ಗಂಗಾಧರ್ ಭರ್ಜರಿಯಾಗಿಯೇ ಚಿತ್ರವನ್ನು ಬಿಡುಗಡೆ ಮಾಡಲು ಜೋರಾದ ಸಿದ್ದತೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಒಂದು ಸಾವಿರ ಸ್ಕ್ರೀನ್‌ಗಳಿಗೂ ಹೆಚ್ಚು “ಪೊಗರು” ತೆರೆ ಮೇಲೆ ಕಾಣಿಸಿಕೊಳ್ಳುತ್ತಿದೆ. ಕನ್ನಡದ ಮಟ್ಟಿಗೆ ಕೊರೋನಾ ನಂತರ ಇಷ್ಟು ಪ್ರಮಾಣದಲ್ಲಿ ತೆರೆಗೆ ಬರುತ್ತಿರುವ ಮೊದಲ ಸಿನಿಮಾ ಎನ್ನುವ ಹೆಸರು “ಪೊಗರು” ಚಿತ್ರಕ್ಕೆ ಸಲ್ಲುತ್ತದೆ.

ಹಾಗೆಯೇ ವಿಜಯ್ ಅಭಿನಯದ ತಮಿಳಿನ “ಮಾಸ್ಟರ್” ಸಿನಿಮಾ ಹೊರತುಪಡಿಸಿದರೆ ತಮಿಳು ಮತ್ತು ತೆಲುಗಿನಲ್ಲೂ ಇದೇ ಮೊದಲು ಅತೀ ಹೆಚ್ಚು ಪರದೆಗಳ ಮೇಲೆ ರಾರಾಜಿಸುತ್ತಿರುವ ಬಿಗ್‌ ಬಜೆಟ್‌ ಚಿತ್ರ. ಅಂದಹಾಗೆ, ಚಿತ್ರವನ್ನು ರಿಲೀಸ್‌ ಮಾಡುತ್ತಿರುವ ಕುರಿತು ಮಾಹಿತಿ ಹಂಚಿಕೊಳ್ಳಲೆಂದೇ ಚಿತ್ರತಂಡ ಮಾಧ್ಯಮ ಎದುರು ಬಂದಿತ್ತು. ನಿರ್ಮಾಪಕ ಗಂಗಾಧರ್‌, ನಿರ್ದೇಶಕ ನಂದ ಕಿಶೋರ್, ಧ್ರುವ ಸರ್ಜಾ, ಕಲಾವಿದರಾದ ಕರಿ ಸುಬ್ಬು, ಧರ್ಮ, ಗಿರಿಜಾ ಲೋಕೇಶ್, ರಾಘವೇಂದ್ರ ರಾಜ್ ಕುಮಾರ್ ಇತರರು ತಮ್ಮ ಚಿತ್ರದ ಅನುಭವ ಹಂಚಿಕೊಂಡರು.

ಪೊಗರು ಚಿತ್ರದಲ್ಲಿ ರಾಘಣ್ಣ
ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಆ ವಿಶೇಷತೆಗಳಲ್ಲಿ ಒಂದನ್ನು ಹೆಸರಿಸುವುದಾದರೆ, ಈ ಮಾಸ್‌ ಸಿನಿಮಾದಲ್ಲಿ ರಾಘವೇಂದ್ರ ರಾಜಕುಮಾರ್‌ ಕೂಡ ನಟಿಸಿದ್ದಾರೆ ಎಂಬುದೇ ದೊಡ್ಡ ಸುದ್ದಿ. ಇಡೀ ಭಾರತ ಚಿತ್ರರಂಗವೇ ತಿರುಗಿ ನೋಡುವಂತೆ ಕನ್ನಡ ಸಿನಿಮಾರಂಗ ಬೆಳೆದು ನಿಂತಿದೆ. ಆ ಕುರಿತಂತೆ ಖುಷಿ ಹಂಚಿಕೊಂಡ ರಾಘವೇಂದ್ರ ರಾಜಕುಮಾರ್‌, “ಪೊಗರು” ಚಿತ್ರತಂಡದಲ್ಲಿ ನಾನಿದ್ದೇನೆ ಅನ್ನುವುದೇ ಖುಷಿ. ಇಲ್ಲಿ ನನಗೆ ಇಷ್ಟವಾದ ಪಾತ್ರವಿದೆ. ಅದೊಂದು ರೀತಿಯ ವಿಭಿನ್ನ ಪಾತ್ರವಾಗಿದೆ. ಧ್ರುವ ಸರ್ಜಾ ಅವರಲ್ಲಿ ನಾನು ಶಿವಣ್ಣ ಮತ್ತು ಅಪ್ಪು ಅವರನ್ನು ಕಂಡಿದ್ದೇನೆ. ಇಡೀ ದೇಶವೇ ತಿರುಗಿ ನೋಡುವಂತಹ ಸಿನಿಮಾ ಮಾಡಿದ್ದಾರೆ. ಖಂಡಿತವಾಗಿಯೂ ಈ ಚಿತ್ರ ದೊಡ್ಡ ಗೆಲುವು ಕೊಡುತ್ತದೆ ಎಂಬ ವಿಶ್ವಾಸ ನನಗಿದೆ ಎಂಬುದು ರಾಘಣ್ಣ ಅವರ ಮಾತು.

ಆ ಪಾತ್ರಕ್ಕಾಗಿ ಮೂರು ವರ್ಷ ಯಾವ ಚಿತ್ರ ಒಪ್ಪಿಲ್ಲ ಧ್ರುವ

ಪೊಗರು ಸಿನಿಮಾದಲ್ಲಿ ಧ್ರುವ ಸ್ಕೂಲ್ ಬಾಯ್. ಆಗಿ ನಟಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಅದರಲ್ಲೂ ಅವರು ಅದು ಕೂಡ 10 ನೇ ತರಗತಿ ಹುಡುಗ. ಕೆಲವರಿಗೆ ಇದು ನಂಬಲು ಅಸಾದ್ಯವಾದರೂ ನಂಬಲೇ ಬೇಕು. ಹೌದು, “ಪೊಗರು” ಸಿನಿಮಾದಲ್ಲಿ ಈ ಪಾತ್ರಕ್ಕಾಗಿಯೇ ಅವರು ಮೂರು ವರ್ಷ ಸಮಯ ತೆಗೆದುಕೊಂಡಿದ್ದಂತೆ. ಅದಿನ್ಜು ಎಲ್ಲಿಯೂ ರಿವೀಲ್ ಆಗಿಲ್ಲವಂತೆ. ಆ ಪಾತ್ರಕ್ಕಾಗಿಯೇ ಧ್ರುವ ಸರ್ಜಾ ಮೂರು ವರ್ಷ ಯಾವುದೇ ಸಿನಿಮಾ ಒಪ್ಪುಕೊಂಡಿಲ್ಲವಂತೆ. ಅವರೇಕೆ ಇದುವರೆಗೂ ಬೇರೆ ಸಿನಿಮಾ ಒಪ್ಪಿಕೊಂಡಿಲ್ಲ ಎಂಬುದಕ್ದಿಕೆ ಇದೇ ಕಾರಣವಂತೆ. ಮೊದಲು ಅವರು 65ಕೆಜಿಗೆ ದೇಹದ ತೂಕ ಇಳಿಸಿಕೊಂಡಿದ್ದಾರೆ.  ಆಮೇಲೆ 120 ಕೆಜಿ ಆದರಂತೆ. ಹಾಗಾಗಿಯೇ ಬೇರೆ ಸಿನಿಮಾ ಒಪ್ಪಿಕೊಂಡಿಲ್ಲ.  ಅದೇನೆ ಇರಲಿ, ಧ್ರುವ ಅವರ ಈ ಶ್ರದ್ಧೆಯನ್ನು  ಇಡೀ ಚಿತ್ರ ತಂಡ ಕೊಂಡಾಡಿದೆ.

ಪೊಗರು ವಿತರಣೆಗೆ ಸಾಥ್
ಒಂದು ಸಿನಿಮಾ ಅಂದಮೇಲೆ ವಿತರಣೆ ಭರ್ಜರಿಯಾಗಿಯೇ ಇರಬೇಕು. ಅದರಲ್ಲೂ ಬಹುನಿರೀಕ್ಷೆಯ “ಪೊಗರು” ಚಿತ್ರದ ಬಿಡುಗಡೆ ಅಂದಮೇಲೆ ಕೇಳಬೇಕೆ, ಭರ್ಜರಿಯಾಗಿಯೇ ಇರುತ್ತೆ. ಈ ಚಿತ್ರದ ವಿತರಣೆಯಲ್ಲಿ ಪುಷ್ಕರ್‌ ಮಲ್ಲಿಕಾರ್ಜುನ್‌, ಕೆ.ಪಿ.ಶ್ರೀಕಾಂತ್‌ ಅವರು ಸಾಥ್‌ ಕೊಡುತ್ತಿರುವುದು ವಿಶೇಷ. ಕನ್ನಡದ ಮಟ್ಟಿಗೆ “ಪೊಗರು” ದೊಡ್ಡ ಸ್ಕೇಲ್‌ ಸಿನಿಮಾ. ಹೀಗಾಗಿ ಬಿಡುಗಡೆ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿರಲಿದೆ. ಸಾವಿರಾರು ಪರದೆ ಮೇಲೆ ಪೊಗರು ಅಬ್ಬರಿಸುತ್ತದೆ ಅಂದಮೇಲೆ ಕೇಳಬೇಕೆ, ಅದಕ್ಕೆ ಸರಿಯಾದ ವ್ಯಕ್ತಿಗಳು ಜೊತೆ ಇರಬೇಕು. ಕನ್ನಡದ ಮಟ್ಟಿಗೆ ಇದೊಂದು ಮೈಲಿಗಲ್ಲು ಆಗುವಂತಹ ಚಿತ್ರ.

ಧ್ರುವ ಸರ್ಜಾ ಅವರ ಈ ಚಿತ್ರ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹೆಚ್ಚಿಸಿತ್ತು. ಅದೇ ನಿರೀಕ್ಷೆ ಬಿಡುಗಡೆಯವರೆಗೂ ಕಾಯ್ದುಕೊಂಡು ಬಂದಿದೆ. ಅಂದಹಾಗೆ, ಧ್ರುವ ಸರ್ಜಾ ಅವರ ಚಿತ್ರ ಈ ಹಿಂದೆ ತೆರೆಕಂಡು ಮೂರು ವರ್ಷ ಆಗಿತ್ತು. ಮೂರು ವರ್ಷದ ಬಳಿಕ “ಪೊಗರು” ತೆರೆ ಕಾಣುತ್ತಿದೆ ಎಂಬುದೇ ವಿಶೇಷ.

ಬಾಡಿಗೆ ವ್ಯವಸ್ಥೆ ಮುಂದುವರೆಯಲಿ

ಇದು ಓದು ಗೌಡರಿಗೆ ನಿರ್ಮಾಪಕ ಸೂರಪ್ಪ ಬಾಬು ಅವರಿ ಮಾಡಿದ ವಿನಂತಿ. “ನಾವೆಲ್ಲ ಇಷ್ಟು ಜನ ಒಟ್ಟಾಗಿ ಬಂದಿದ್ದೇವೆ. ಇಂತಹ ಕಷ್ಟಕಾಲದಲ್ಲೂ ಸಿನಿಮಾ ಬಿಡುಗಡೆ ಮಾಡಲು ಬಂದಿದ್ದೇವೆ. ಅದರಲ್ಲೂ “ಪೊಗರು” ಚಿತ್ರ ಮೊದಲು ಬಿಡುಗಡೆಯಾಗುತ್ತಿದೆ. ಅವರಿಗೆ ನಾವೆಲ್ಲಾ ಕೈ ಜೋಡಿಸಿ, ಬೆಂಬಲಕ್ಕೆ ನಿಂತಿದ್ದೇವೆ. ಕಳೆದ ಒಂಭತ್ತು ತಿಂಗಳಿನಿಂದಲೂ ಭಾರೀ ಬಜೆಟ್ ನ ಚಿತ್ರ ನಿರ್ಮಾಪಕರು  ತುಂಬಾ ಕಷ್ಟ ಪಟ್ಟಿದ್ದಾರೆ. ಉತ್ಥರ ಕರ್ನಾಟಕ ಕಡೆಯಿಂದ ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತಿದೆ.  ವಿನಂತಿ ಮಾಡುತ್ತಿದ್ದೇವೆ. ಹಿಂದೆ ಹೇಗೆ ನಡೆದುಕೊಂಡು ಬಂದಿತ್ತೋ, ಅದನ್ನೇ ಮುಂದುವರೆಸಿಕೊಂಡು ಬನ್ನಿ. ನೀವು ಯೋಚನೆ ಮಾಡಿ, ನಾವೆಲ್ಲಾ ನಿಮ್ಮೊಂದಿಗೆ ಇದ್ದೇವೆ. ಶಿವಣ್ಣ ಅವರ ಜೊತೆಗೂ ಚರ್ಚೆ ಮಾಡಿದ್ದೇವೆ. ಓದುಗೌಡರೆ ಇದನ್ನೆಲ್ಲ ಬಿಟ್ಟು ಬಿಡಿ.  ಬಾಡಿಗೆ ವ್ಯವಸ್ಥೆಯನ್ನೇ ಮುಂದುವರೆಸಿಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಶೇರ್ ಬೇಡ. ಅದನ್ನು ಕೊಡೋದಿಕ್ಕೆ ಶುರು ಮಾಡಿದರೆ ಬಿಗ್ ಬಜೆಟ್ ಸಿನಿಮಾ ಮಾಡೋದಿಕ್ಕೆ ಆಗೋದಿಲ್ಲ. ಬಾಡಿಗೆ ವ್ಯವಸ್ಥೆ ಮುಂದುವರೆಯಬೇಕು” ಎಂಬ ಮನವಿ ಇಟ್ಟರು.

ಇನ್ಮುಂದೆ  ರಿಲೀಸ್ ಫೈಟ್‌ ಇಲ್ಲ

ಯಾವುದೇ ನಿರ್ಮಾಪಕ ಇರಲಿ, ಇನ್ನು ಮುಂದೆ ರಿಲೀಸ್‌ಗೆ ಫೈಟಿಂಗ್‌ ಮಾಡೋದು ಬೇಡ. ಯಾರದ್ದೋ ಒತ್ತಡದ ಆಸೆಗೆ ಸಿನಿಮಾ ರಿಲೀಸ್‌ ಮಾಡಬೇಡಿ. ಇದು ಎಲ್ಲರಿಗೂ ಒಳಿತು ಎಂಬ ಮಾತು ಕೂಡ ಇದೇ ವೇಳೆ ಕೇಳಿಬಂತು. ಅಂದಹಾಗೆ, ಮಾರ್ಚ್‌ ‌11ಕ್ಕೆ “ರಾಬರ್ಟ್” ಬಂದರೆ, ನಂತರದ ದಿನಗಳಲ್ಲಿ, ಏಪ್ರಿಲ್‌ 1 ರಂದು  “ಯುವರತ್ನ”, ಏಪ್ರಿಲ್‌ 15 ಕ್ಕೆ “ಸಲಗ”, ಏಪ್ರಿಲ್‌ 25 ಕ್ಕೆ “ಕೋಟಿಗೊಬ್ಬ” ,  ಮೇ 15ಕ್ಕೆ “ಭಜರಂಗಿ ೨”  ಹೀಗೆ  ಬಿಡುಗಡೆಯಾಗಲಿವೆ.   ಜೂನ್‌ನಲ್ಲಿ “ವಿಕ್ರಾಂತ್‌ ರೋಣ”, “ಕೆಜಿಎಫ್-‌೨” , ಆಗಸ್ಟ್‌ ನಲ್ಲಿ “ಚಾರ್ಲಿ” ಇತ್ಯಾದಿ ಚಿತ್ರಗಳು ಬರಲಿವೆ.

Categories
ಗ್ಲಾಮರ್‌ ಕಾರ್ನರ್

ನಿಖಿತಾ ಸ್ವಾಮಿ ಸಿನಿ ಜರ್ನಿ  ಸದ್ದು ಜೋರು – ಸಾಫ್ಟ್‌ವೇರ್‌ ಹುಡುಗಿಯ ಗ್ಲಾಮರ್‌ ಕನಸು

ಫೇಸ್‌ಬುಕ್‌ ತಂದ ಅವಕಾಶ

ಈ ಸಿನಿಮಾ ಮೇಲಿನ ಪ್ರೀತಿಯೇ ಅಂಥದ್ದು. ಬಹುತೇಕ ಸಾಫ್ಟ್‌ವೇರ್‌ ಮಂದಿಯೇ ಈ ಸಿನಿಮಾರಂಗವನ್ನು ಸ್ಪರ್ಶಿಸಿದೆ. ಈಗಲೂ ಒಬ್ಬೊಬ್ಬರು ಕಾಲಿಡುತ್ತಲೇ ಇದ್ದಾರೆ. ಅಂತಹವರ ಸಾಲಿಗೆ ನಿಖಿತಾಸ್ವಾಮಿ ಕೂಡ ಒಬ್ಬರು. ಈ ನಿಖಿತಾಸ್ವಾಮಿ ಅಪ್ಪಟ ಕನ್ನಡದ ಚೆಲುವೆ. ಈ ಹುಡುಗಿ ಗಾಂಧಿನಗರದ ಅಂಗಳಕ್ಕೆ ಬರೋಕೆ ಕಾರಣವೇ ರೋಚಕ. ಅಷ್ಟಕ್ಕೂ ಈ ಹುಡುಗಿ ಯಾರು, ಯಾವ ಸಿನಿಮಾ ಮಾಡಿದ್ದಾರೆ, ಇಲ್ಲಿಗೆ ಬಂದದ್ದು ಹೇಗೆ? ಈ ಕುರಿತಂತೆ “ಸಿನಿಲಹರಿ”ಯ ಒಂದು ರೌಂಡಪ್.‌

ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆ ಅನೇಕ ನಟಿಯರು ಎಂಟ್ರಿಯಾಗುತ್ತಲೇ ಇದ್ದಾರೆ. ಗ್ಲಾಮರ್‌ ಜೊತೆಗೆ ಪ್ರತಿಭೆಯನ್ನೂ ಇಲ್ಲಿ ಪ್ರದರ್ಶಿಸಲು ಅಣಿಯಾಗಿದ್ದಾರೆ. ಆದರೆ, ಅದೃಷ್ಟ ಅನ್ನೋದು ಇಲ್ಲಿ ಬಹುಮುಖ್ಯ. ಸ್ಯಾಂಡಲ್‌ವುಡ್‌ನಲ್ಲಿ ತಾನು ನೆಲೆಯೂರಬೇಕು ಎಂದು ಕಪ್ಪು-ಬಿಳಿ ಕಣ್ಣಲ್ಲಿ ಕಲರ್‌ಫುಲ್‌ ಕನಸು ಕಟ್ಟಿಕೊಂಡು ಬರುವ ಹುಡುಗಿಯರಿಗೇನೂ ಕಮ್ಮಿ ಇಲ್ಲ. ಇಲ್ಲಿ ನೂರಾರು ನಟಿಮಣಿಗಳು ಕನ್ನಡಕ್ಕೆ ಕಾಲಿಟ್ಟಿದ್ದಾರೆ, ಅಂತಹವರ ಪೈಕಿ ಒಂದಷ್ಟು ಹುಡುಗಿಯರು ಸುದ್ದಿಯಾಗಿದ್ದಾರೆ. ಇನ್ನು ಕೆಲವರು ನೆಲೆ ನಿಲ್ಲೋಕೆ ಮುಂದಾಗಿದ್ದಾರೆ. ಇಲ್ಲೀಗ ಗಟ್ಟಿನೆಲೆ ನಿಲ್ಲಲು ಪೂರ್ಣ ಪ್ರಮಾಣದಲ್ಲಿ ತಯಾರಾಗಿರುವ ನಟಿಯೊಬ್ಬರು ಸಿನಿಮಾ ಮೇಲೊಂದು ಸಿನಿಮಾ ಮಾಡಿ, ಇಲ್ಲೊಂದಷ್ಟು ನೆಲೆ ಕಾಣುವ ಕನಸು ಕಾಣುತ್ತಿದ್ದಾರೆ. ಆ ನಿಟ್ಟಿನಲ್ಲಿ ಅವರೀಗ ಒಂದಷ್ಟು ಮೆಟ್ಟಿಲನ್ನೂ ಏರಿದ್ದಾರೆ.

ಹೌದು, ಮೊದಲೇ ಹೇಳಿದಂತೆ ನಿಖಿತಾ ಸ್ವಾಮಿ ಅಪ್ಪಟ ಕನ್ನಡದ ಹುಡುಗಿ. ಈ ಬಣ್ಣದ ಲೋಕಕ್ಕೆ ಬರುವ ಮುನ್ನ, ಎಂಜಿನಿಯರಿಂಗ್‌ ಪದವಿ ಮುಗಿಸಿ, ಇನ್ಫೋಸಿಸ್‌ ಸಂಸ್ಥೆಯಲ್ಲಿ ಕೆಲಸ ಮಾಡಿದವರು. ಅದರ ಜೊತೆಯಲ್ಲೇ ಅವರು ಮಾಡೆಲಿಂಗ್‌ ಕೂಡ ಮಾಡಿಕೊಂಡಿದ್ದಾರೆ. ನಿಖಿತಾ ಸ್ವಾಮಿ ಅವರಿಗೆ ಕನ್ನಡ ಚಿತ್ರರಂಗದಲ್ಲಿ ತಾನೊಬ್ಬ ಒಳ್ಳೆಯ ಕಲಾವಿದೆ ಆಗಬೇಕು ಎಂಬ ಬಹುದ ದೊಡ್ಡ ಕನಸು. ಒಂದರ ಮೇಲೊಂದರಂತೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಈ ಹುಡುಗಿಯ ಒಂದಷ್ಟು ಸಿನಿಮಾಗಳು ಸಾಲು ಸಾಲಾಗಿ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿವೆ. ನಿಖಿತಾ ಸ್ವಾಮಿ ಕನ್ನಡದ ಜೊತೆ ಜೊತೆಗೆ ಪರಭಾಷೆಯಲ್ಲೂ ಒಂದು ಸಿನಿಮಾ ಮಾಡಿದ್ದಾರೆ. ಈಗಾಗಲೇ ಆ ಚಿತ್ರ ರಿಲೀಸ್‌ಗೂ ರೆಡಿಯಾಗಿದೆ.


ತಮ್ಮ ಸಿನಿಪಯಣದ ಕುರಿತು ಸ್ವತಃ ನಿಖಿತಾ ಸ್ವಾಮಿ ಅವರು ಹೇಳುವುದಿಷ್ಟು. “ನಾನು ಮೂಲತಃ ಬೆಂಗಳೂರಿನವಳು. ಸಿನಿಮಾಗೆ ಬರಬೇಕು ಎಂಬ ಯಾವ ಉದ್ದೇಶವೂ ಇರಲಿಲ್ಲ. ಒಮ್ಮೆ ಫೇಸ್‌ಬುಕ್‌ನಲ್ಲಿ ಒಂದಷ್ಟು ಫೋಟೋಗಳನ್ನು ಅಪ್‌ಲೋಡ್‌ ಮಾಡಿದ್ದೆ. ಅವುಗಳನ್ನು ನೋಡಿ ಒಂದು ಚಿತ್ರತಂಡ, ನನಗೆ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡಿತು. ಬಯಸದೆ ಬಂದ ಅವಕಾಶ ಅಂದುಕೊಂಡು ನಾನೂ ಗ್ರೀನ್‌ಸಿಗ್ನಲ್‌ ಕೊಟ್ಟೆ. ನನ್ನ ಮೊದಲ ಚಿತ್ರ “ಸದ್ದು”. ಅಲ್ಲಿಂದ ನನ್ನ ಸಿನಿಮಾ ಜರ್ನಿ ಶುರುವಾಯಿತು.

ನಾನು ಎಂಜಿನಿಯರಿಂಗ್‌ ಪದವಿ ಓದಿದ್ದೇನೆ. ಮಾಡೆಲಿಂಗ್‌ ಮಾಡಿಕೊಂಡಿದ್ದವಳಿಗೆ ಸಿನಿಮಾ ಜಗತ್ತು ಮೆಲ್ಲನೆ ಕೈ ಬೀಸಿ ಕರೆಯಿತು. ಹಾಗಾಗಿ ನಾನು ಈ ಬಣ್ಣದ ಲೋಕವನ್ನು ಸ್ಪರ್ಶಿಸಿದ್ದೇನೆ ಎಂದು ಹೇಳುವ ನಿಖಿತಾ ಸ್ವಾಮಿ, ಎಂಜಿನಿಯರಿಂಗ್‌ ಮುಗಿದ ಬಳಿಕ ನಾನು ಇನ್ಫೋಸಿಸ್‌ ಸಂಸ್ಥೆಯಲ್ಲಿ ಕೆಲಸ ಮಾಡುವುದರ ಜೊತೆಯಲ್ಲೇ ಮಾಡೆಲಿಂಗ್‌ ಮಾಡಿಕೊಂಡಿದ್ದೆ. ಅಲ್ಲಿಂದ ನನಗೆ ಕೆಲವು ಬ್ರಾಂಡ್‌ಕಂಪೆನಿಗಳಲ್ಲಿ ಜಾಹಿರಾತು ಮಾಡುವ ಅವಕಾಶ ಸಿಕ್ಕಿತು. ಹಾಗೆ ಸಿಕ್ಕ ಅವಕಾಶವನ್ನು ನಾನು ಚೆನ್ನಾಗಿಯೇ ಬಳಸಿಕೊಂಡೆ. ಹೇರ್‌ ಆಯಿಲ್‌, ಜ್ಯೂವೆಲ್ಸ್‌ ಹಾಗೂ ಉಡುಪು ಜಾಹಿರಾತುಗಳಲ್ಲಿ ಕಾಣಿಸಿಕೊಂಡೆ. ಹಲವು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದೇ ತಡ, ಒಂದಷ್ಟು ಅವಕಾಶ ಬರಲು ಶುರುವಾದವು.


ಒಂದು ವರ್ಷ ಮಾತ್ರ ನಾನು ಇನ್ಫೋಸಿಸ್‌ಸಂಸ್ಥೆಯಲ್ಲಿ ಕೆಲಸ ಮಾಡಿದೆ. ಆಮೇಲೆ ಸಿನಿಮಾರಂಗಕ್ಕೆ ಎಂಟ್ರಿಯಾದೆ. “ಸದ್ದು” ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಯಾದೆ. ಈ ಸಿನಿಮಾಗೆ ಆಯ್ಕೆಯಾಗಿದ್ದೇ ಒಂದು ರೋಚಕ ಎನ್ನುವ ನಿಖಿತಾಸ್ವಾಮಿ, ನಾನು ಫೇಸ್‌ಬುಕ್‌ನಲ್ಲಿ ನನ್ನ ಮಾಡೆಲ್‌ಫೋಟೋಸ್‌ಗಳು ಹಾಗೂ ಜಾಹಿರಾತುಗಳ ಕ್ಲಿಪ್ಪಿಂಗ್‌ಹಾಕಿದ್ದನ್ನು ನೋಡಿದ “ಸದ್ದು” ಚಿತ್ರತಂಡ, ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಕಲ್ಪಿಸಿತು. ಆ ಬಳಿಕ ನಾನು ಒಂದಷ್ಟು ನಟನೆಯಲ್ಲೂ ಗಟ್ಟಿಗೊಳ್ಳಬೇಕು ಅಂತ ನಿರ್ಧಾರ ಮಾಡಿದೆ.

 

ಉಮಾ ಮಹೇಶ್ವರಿ ಎನ್ನುವವರ ಬಳಿ ನಾನು ನಟನೆ ತರಬೇತಿ ಪಡೆದುಕೊಂಡೆ. ಅಲ್ಲಿ ಸಾಕಷ್ಟು ಕಲಿತುಕೊಳ್ಳಲು ಸಾಧ್ಯವಾಯಿತು. ಅದೀಗ ನನಗೆ ಸಾಕಷ್ಟು ಸುಲಭವಾಗಿದೆ ಎಂಬುದು ಅವರ ಮಾತು. ಮೊದಲ ಚಿತ್ರ “ಸದ್ದು” ಮಾಡುತ್ತಿದ್ದಂತೆಯೇ ನನಗೆ ಒಂದರ ಮೇಲೊಂದು ಚಿತ್ರಗಳಲ್ಲಿ ನಟಿಸುವ ಅವಕಾಶ ಒದಗಿ ಬಂತು. ಆ ಚಿತ್ರದ ನಂತರ ನಾನು “ಬ್ರಹ್ಮಪುತ್ರ” ಚಿತ್ರದಲ್ಲಿ ನಟಿಸಿದೆ. ಅದಾದ ನಂತರ “ಸನ್ಮಾನ್ಯ” ಸಿನಿಮಾ ಹುಡುಕಿ ಬಂತು. ಅಲ್ಲಿಂದ ನಾನು “ಜಲ್ಲಿಕಟ್ಟು”, “ಒಂದು ದಿನ ಒಂದು ಕ್ಷಣ”,” ಆಕಾಶವಾಣಿ” ಚಿತ್ರಗಳಲ್ಲಿ ನಟಿಸಿದ್ದೇನೆ. ಸದ್ಯಕ್ಕೆ “ಜಲ್ಲಿಕಟ್ಟು”, ತೆಲುಗಿನ “ಇಪ್ಪುಡುನುಂಚಿ ಆರಂಭ”, “ಬ್ರಹ್ಮ ಪುತ್ರ”, “ಆಕಾಶವಾಣಿ”, “ಧ್ರುಗಾಂತ” ಚಿತ್ರಗಳು ಬಿಡುಗಡೆಯಾಗಬೇಕಿದೆ” ಎಂದು ವಿವರ ಕೊಡುತ್ತಾರೆ ನಿಖಿತಾ ಸ್ವಾಮಿ.

ಟಕಿಲಾ ನಶೆಯಲ್ಲಿ
ಇನ್ನು, ಹೊಸಬರ ಚಿತ್ರಗಳಲ್ಲಿ ನಟಿಸುತ್ತಿದ್ದರೂ, ನನಗೆ ಹಿರಿಯ ನಿರ್ದೇಶಕರ ಜೊತೆ ನಟಿಸುವ ಅವಕಾಶವೂ ಸಿಕ್ಕಿದೆ. ಹೌದು, “ಟಕಿಲಾ” ಎಂಬ ಚಿತ್ರದಲ್ಲೂ ನಾನು ನಟಿಸುತ್ತಿದ್ದೇನೆ. ಈ ಸಿನಿಮಾಗೆ ಪ್ರವೀಣ್‌ನಾಯಕ್‌ನಿರ್ದೇಶಕರು. ಇದು ನಾಗಚಂದ್ರ ನಿರ್ಮಾಣದ ಚಿತ್ರ. ಈ ಸಿನಿಮಾಗೆ ಧರ್ಮ ಕೀರ್ತಿರಾಜ್‌ಹೀರೋ. ಅವರಿಗೆ ನಾನು ನಾಯಕಿಯಾಗಿ ನಟಿಸಿದ್ದೇನೆ. ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ ಈಗ ಚಿತ್ರ ನಿರ್ಮಾಣದ ಸಾಹಸಕ್ಕೆ ಮುಂದಾಗಿದ್ದಾರೆ ಎಂಬುದು ವಿಶೇಷ.

“ಟಕಿಲಾ” ಎಂಬ ಪದ ಕೇಳುತ್ತಿದ್ದಂತೆಯೇ, ಎಲ್ಲರಿಗೂ ಹಾಗೊಮ್ಮೆ ಪಬ್‌ನೆನಪಾಗುತ್ತದೆ. ಹೌದು, ಶೀರ್ಷಿಕೆ ಹೀಗಿದ್ದಾಕ್ಷಣ, ಸಿನಿಮಾದಲ್ಲೂ ಆ ನಶೆಯೇ ತೇಲಾಡುತ್ತದೆ ಅಂತೇನಿಲ್ಲ. “ಟಿಕಿಲಾ” ಅಂದರೇನೆ ನಶೆ. ಆದರೆ, ಅದನ್ನು ಈ ಚಿತ್ರದಲ್ಲಿ ಮನರಂಜನೆಯ ಮೂಲಕ ಪ್ರೇಕ್ಷಕರಿಗೆ ನೀಡಲು ಹೊರಟಿದ್ದಾರೆ ಎಂಬುದು ಅವರ ಮಾತು.


“ಟಕಿಲಾ” ಈ ತಿಂಗಳ ಅಂತ್ಯದಲ್ಲಿ ಶುರುವಾಗಲಿದೆ. ಈಗಾಗಲೇ ಚಿತ್ರದ ಪ್ರೀ ಪ್ರೊಡಕ್ಷನ್‌ಕೆಲಸಗಳು ಮುಗಿದಿವೆ. ಇದೊಂದು ಲವ್‌, ಸೆಂಟಿಮೆಂಟ್‌ ಹಾಗೂ ಥ್ರಿಲ್ಲರ್ ಕಥಾ ಹಂದರದ ಚಿತ್ರ. ಅಂದಹಾಗೆ, ನಿರ್ದೇಶಕ ಕೆ. ಪ್ರವೀಣ್‌ನಾಯಕ್‌ಅವರಿಗೆ ಇದು ನಾಲ್ಕನೇ ಚಿತ್ರ. ಈಗಾಗಲೇ ಅವರು ʼಜಡ್‌ʼ, ʼಹೂಂ ಅಂತೀಯಾ, ಉಹೂಂ ಅಂತೀಯಾʼ ಹಾಗೂ ʼಮೀಸೆ ಚಿಗುರಿದಾಗʼ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಅದೇ ಅನುಭವದಲ್ಲೀಗ “ಟಕಿಲಾ” ಚಿತ್ರಕ್ಕೆ ಕೈ ಹಾಕಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನೂ ಪ್ರವೀಣ್‌ನಾಯಕ್‌ಹೊತ್ತಿದ್ದಾರೆ. ಚಿತ್ರಕ್ಕೆ ಪಿ.ಕೆ.ಎಚ್.‌ದಾಸ್‌ಛಾಯಾಗ್ರಹಣವಿದೆ. ಟಾಪ್‌ಸ್ಟಾರ್‌ರೇಣು ಸಂಗೀತವಿದೆ. ಗಿರೀಶ್‌ಸಂಕಲನವಿದೆ. ಪ್ರಶಾಂತ್‌ಕಲಾನಿರ್ದೇನವಿದೆ. ಚಿತ್ರದಲ್ಲಿ ಸುಮನ್‌, ಜಯರಾಜ್‌, ಸುಷ್ಮಿತಾ, ಪ್ರವೀಣ್‌ನಾಯಕ್‌ಇದ್ದಾರೆ. ಬೆಂಗಳೂರು, ನೆಲಮಂಗಲ, ದೇವರಾಯನ ದುರ್ಗ ಹಾಗೂ ಸಕಲೇಶಪುರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

Categories
ಸಿನಿ ಸುದ್ದಿ

ಇನ್ಸ್‌ಪೆಕ್ಟರ್ ವಿಕ್ರಂ ಫೆಬ್ರವರಿ 5ಕ್ಕೆ ರಿಲೀಸ್‌ – ಪ್ರಜ್ವಲ್‌ ಅಭಿನಯದ ಮಾಸ್‌ ಚಿತ್ರವಿದು

 ಅಂದು ಶಿವಣ್ಣ ಇಂದು ಪ್ರಜ್ವಲ್

ಕನ್ನಡ ಚಿತ್ರರಂಗ ಇದೀಗ ಶೈನ್‌ ಆಗುತ್ತಿದೆ. ಹೌದು, ಈಗ ಕನ್ನಡ ಸಿನಿಮಾಗಳ ಬಿಡುಗಡೆಯ ಪರ್ವ. ಕೊರೊನಾ ಬಳಿಕ ಮೆಲ್ಲನೆ ಚೇತರಿಸಿಕೊಂಡಿರುವ ಚಿತ್ರರಂಗ, ಈಗ ಸಿನಿಮಾ ಬಿಡುಗಡೆ ಬಗ್ಗೆ ಹೆಚ್ಚು ಒಲವು ತೋರಿಸಿದೆ. ಆ ನಿಟ್ಟಿನಲ್ಲಿ ಈಗಾಗಲೇ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಸ್ಟಾರ್‌ ಚಿತ್ರಗಳು ಸಹ ಬಿಡುಗಡೆ ದಿನವನ್ನು ಘೋಷಿಸಿವೆ. ಈಗ ಪ್ರಜ್ವಲ್ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ”‌ ಚಿತ್ರ ಕೂಡ ತನ್ನ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಹೌದು, ಫೆಬ್ರವರಿ 5ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.


“ಇನ್ಸ್‌ಪೆಕ್ಟರ್‌ ವಿಕ್ರಂ” ಅಂದಾಕ್ಷಣ, ಶಿವರಾಜಕುಮಾರ್‌ ಅವರ ನೆನಪಾಗುತ್ತದೆ. ಯಾಕೆಂದರೆ, ಶಿವಣ್ಣ ಅಭಿನಯದ ಸಿನಿಮಾ ಇದು. ಆ ದಿನಗಳಲ್ಲೇ ಸೂಪರ್‌ ಹಿಟ್‌ ಸಿನಿಮಾ ಇದು. ಈಗ ಮತ್ತದೇ ಶೀರ್ಷಿಕೆಯಡಿ ಸಿನಿಮಾ ಚಿತ್ರೀಕರಣಗೊಂಡು, ಬಿಡುಗಡೆಯಾಗುತ್ತಿದೆ. ಇಲ್ಲಿ ಪ್ರಜ್ವಲ್‌ ದೇವರಾಜ್‌ ಅವರು ಇನ್ಸ್‌ಪೆಕ್ಟರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದೇ ವಿಶೇಷ. ಶ್ರೀನರಸಿಂಹ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಿಂದೆ ರಮೇಶ್‌ ಅರವಿಂದ್‌ ಅವರ “ಪುಷ್ಪಕ ವಿಮಾನ” ಚಿತ್ರ ನಿರ್ಮಿಸಿದ್ದ ವಿಖ್ಯಾತ್‌ ಎ.ಆರ್.‌ ಅವರು ಈ ಚಿತ್ರವನ್ನು ಅದ್ಧುರಿಯಾಗಿಯೇ ನಿರ್ಮಾಣ ಮಾಡಿದ್ದಾರೆ.

ಚಿತ್ರಕ್ಕೆ ನವೀನ್‌ಕುಮಾರ್‌ ಕ್ಯಾಮೆರಾ ಹಿಡಿದರೆ, ಅನೂಪ್‌ ಸೀಳಿನ್‌ ಅವರ ಸಂಗೀತ ನಿರ್ದೇಶನವಿದೆ. ಗುರು ಕಶ್ಯಪ್‌ ಅವರು ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ. ಹರೀಶ್‌ ಕೊಮ್ಮೆ ಅವರ ಸಂಕಲನ ಚಿತ್ರಕ್ಕಿದೆ. ಥ್ರಿಲ್ಲರ್‌ ಮಂಜು ಮತ್ತು ವಿನೋದ್‌ ಅವರು ಭರ್ಜರಿ ಸ್ಟಂಟ್ಸ್‌ ಮಾಡಿಸಿದ್ದಾರೆ. “ಇನ್ಸ್‌ಪೆಕ್ಟರ್‌ ವಿಕ್ರಂ” ಅಂದರೆ, ಖಡಕ್‌ ಪೊಲೀಸ್‌ ಅಧಿಕಾರಿಯ ನೆನಪಾಗುತ್ತೆ. ಇಲ್ಲಿ ಪ್ರಜ್ವಲ್‌ ರಗಡ್‌ ಲುಕ್‌ನಲ್ಲೂ ಇದ್ದಾರೆ. ಪಕ್ಕಾ ಪೊಲೀಸ್‌ ಅಧಿಕಾರಿಯಾಗಿ, ಎದುರಾಳಿಗಳನ್ನು ಹಿಗ್ಗಾಮುಗ್ಗ ಚಚ್ಚುವಲ್ಲೂ ನಟಿಸಿದ್ದಾರೆ. ಇನ್ನು, ಇದೊಂದು ಮಾಸ್‌ ಸಿನಿಮಾ ಅಂತ ಪ್ರತ್ಯಕೇವಾಗಿ ಹೇಳಬೇಕಿಲ್ಲ.

ಸದ್ಯಕ್ಕೆ ಚಿತ್ರ ಬಿಡುಗಡೆಯ ದಿನವನ್ನು ಅನೌನ್ಸ್‌ ಮಾಡಿದೆ. ಪ್ರಜ್ವಲ್‌ ಅಭಿನಯದ ಈ ಚಿತ್ರ ಈ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ. ಪ್ರಜ್ವಲ್‌ ಅವರ ಅಭಿನಯದ ಸಾಲು ಸಾಲು ಸಿನಿಮಾಗಳು ರೆಡಿಯಾಗಿವೆ. “ಅಬ್ಬರ” ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. “ಅರ್ಜುನ್‌ ಗೌಡ” ಸಿನಿಮಾ ಕೂಡ ತೆರೆಗೆ ಬರಲು ಅಣಿಯಾಗುತ್ತಿದೆ. “ಅಬ್ಬರ” ಚಿತ್ರಕ್ಕೆ ರಾಮ್‌ನಾರಾಯಣ್‌ ನಿರ್ದೇಶನ ಮಾಡಿದರೆ, “ಅರ್ಜುನ್‌ ಗೌಡ” ಚಿತ್ರವನ್ನು ಲಕ್ಕಿ ಶಂಕರ್‌ ನಿರ್ದೇಶಿಸಿದ್ದಾರೆ. ಇನ್ನು, ಖದರ್‌ ಕುಮಾರ್‌ ನಿರ್ದೇಶನದ “ವೀರಂ” ಸಿನಿಮಾ ಚಿತ್ರೀಕರಣದಲ್ಲಿದೆ.

 

Categories
ಸಿನಿ ಸುದ್ದಿ

ಕಲ್ಲಳ್ಳಿ ಹುಡುಗರ ಭಜನೆ ಪ್ರಸಂಗ! ಭಜನಾ ಮಂಡಳಿ ಹಿನ್ನೆಲೆಯಲ್ಲೊಂದು ಸಿನಿಮಾ

ಹೊಸಬರ ಭಜನೆ ಹಾಡಲ್ಲೊಂದು ಪ್ರಣಯ ಗೀತೆ

ತೇಜಸ್‌, ನಿರೂಷಾ ಶೆಟ್ಟಿ

ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ “ಭಜನಾ” ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅದು ಸಂಭ್ರಮಕ್ಕೂ ಉಂಟು ದುಃಖಕ್ಕೂ ಉಂಟು. ಯಾವುದೇ ಕಾರ್ಯಕ್ರಮ, ಹಬ್ಬ, ಜಾತ್ರೆಗಳಿದ್ದರೆ, ಅಲ್ಲಿ ಈ ಭಜನಾ ಮಂಡಳಿ ಸದಸ್ಯರು ಒಂದೊಳ್ಳೆಯ ಕಾರ್ಯಕ್ರಮ ನೀಡುವುದು ಸಹಜ. ಈಗಲೂ ಗ್ರಾಮೀಣ ಭಾಗದಲ್ಲಿ ಅದೊಂದು ಪ್ರಮುಖವಾದ ಕಲಾ ಕಾರ್ಯಕ್ರಮವೆಂದೇ ಹೈಲೈಟ್‌ ಆಗಿದೆ. ಇಷ್ಟಕ್ಕೂ ಇಲ್ಲೇಕೆ “ಭಜನಾ” ಕುರಿತು ಹೇಳಲಾಗುತ್ತಿದೆ ಎಂಬ ಪ್ರಶ್ನೆ ಎದುರಾಗಬಹುದು.

ವಿಷಯವಿಷ್ಟೇ, “ಭಜನಾ” ವಿಷಯ ಇಟ್ಟುಕೊಂಡೇ ಇಲ್ಲೊಂದು ಹೊಸಬರ ತಂಡ ಹೀಗೊಂದು ಸಿನಿಮಾ ಮಾಡಿ ಮುಗಿಸಿದೆ. ಆ ಹೊಸ ಸಿನಿಮಾಗೆ “ಕಲ್ಲಳ್ಳಿ ಭಜನಾ ಮಂಡಳಿ” ಎಂದು ನಾಮಕರಣ ಮಾಡಲಾಗಿದೆ. ಶೀರ್ಷಿಕೆ ನೋಡಿದರೆ, ಇದೊಂದು ಭಜನಾ ವಿಷಯಕ್ಕೆ ಸಂಬಂಧಿಸಿದ ಚಿತ್ರ ಇರಬೇಕು ಅಂದುಕೊಂಡರೆ ಆ ಊಹೆ ಖಂಡಿತವಾಗಿಯೂ ತಪ್ಪು. ಹೌದು, ಇಲ್ಲಿ ಭಜನಾ ಅಂಶಗಳಿವೆಯಾದರೂ, ಇಲ್ಲೊಂದು ಹಾಸ್ಯದ ಹೊನಲಿದೆ. ಜೊತೆಗೊಂದು ಗೆಳೆಯರ ಬಳಗದ ಬಾಂಧವ್ಯವಿದೆ. ಇವೆಲ್ಲದರ ಜೊತೆಯಲ್ಲೊಂದು ಪ್ರೀತಿಯ ಪಯಣವೂ ಇದೆ. ಈ ಸಿನಿಮಾ ಈಗಾಗಲೇ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದು, ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಈ ಚಿತ್ರದ ಮೂಲಕ ಯತೀಶ್‌ ನೆಲ್ಕುದ್ರಿ ಅವರು ನಿರ್ದೇಶಕನ ಪಟ್ಟ ಅಲಂಕರಿಸುತ್ತಿದ್ದಾರೆ. ರಾಘವೇಂದ್ರ ಕ್ರಿಯೇಟರ್ಸ್‌ ಅಂಡ್‌ ಮೂವೀಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಪ್ರಕಾಶ್‌ ವಾರದ್‌, ಪ್ರದೀಪ್‌ ಬಳ್ಳೆಕೆರೆ, ತೇಜಸ್‌, ಯತೀಶ್‌ ನೆಲ್ಕುದ್ರಿ ಅವರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಸಾಮಾನ್ಯವಾಗಿ “ಕಲ್ಲಳ್ಳಿ ಭಜನಾ ಮಂಡಳಿ” ಅಂದಾಕ್ಷಣ, ಒಂದೂರಿನ ಭಜನಾ ಮಂಡಳಿ ಇರಬಹುದು ಎಂಬ ಮಾತು ಕೇಳಿಬರುತ್ತೆ. ಇಂಥದ್ದೊಂದು ಶೀರ್ಷಿಕೆ ಇಡಲು ಕಾರಣ, ಕಲ್ಲಳ್ಳಿ ಎಂಬ ಗ್ರಾಮದಲ್ಲಿ ಭಜನಾ ಮಂಡಳಿ ಸ್ಥಾಪನೆಯ ಉದ್ದೇಶದಿಂದ ಶುರುವಾಗುವ ಕಥೆ ಆಗಿರುವುದರಿಂದ ಚಿತ್ರಕ್ಕೆ “ಕಲ್ಲಳ್ಳಿ ಭಜನಾ ಮಂಡಳಿ” ಎಂದು ಹೆಸರಿಡಲಾಗಿದೆ.

ಹೆಸರೇ ಹೇಳುವಂತೆ, ಇದೊಂದು ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಚಿತ್ರ. ಒಂದು ಹಾಸ್ಯಮಯ ಕಥೆ ಇಲ್ಲಿದೆ.  ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ಕುರಿತು ಮಾತನಾಡುವ ನಿರ್ದೇಶಕ ಯತೀಶ್‌ ನೆಲ್ಕುದ್ರಿ, “ನಾನು ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಅನುಭವಿ ನಿರ್ದೇಶಕರ ಬಳಿ ಒಂದಷ್ಟು ಕಲಿತಿದ್ದೇನೆ. ಆ ಅನುಭವದಿಂದ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದೇನೆ. ಈ ಚಿತ್ರ ನೋಡುಗರಿಗೆ ತಮ್ಮ ಅಕ್ಕ-ಪಕ್ಕದಲ್ಲಿ ನಡೆಯುವ ಕಥೆಯೇನೋ ಎಂಬಂತೆ ಭಾಸವಾಗುತ್ತದೆ. ಆದಷ್ಟು ನೈಜತೆಗೆ ಹತ್ತಿರವಾಗಿರಲಿದೆ.

ಹಳ್ಳಿಯ ಸೊಗಡಿನ ಜೊತೆಗೆ ಮುಗ್ಧತೆ ತುಂಬಿರುವ ಪ್ರೀತಿಯ ಹಾದಿಯಲ್ಲಿ ಚಿತ್ರದ ಕಥೆ ಸಾಗುತ್ತದೆ, ಕಲ್ಲಳ್ಳಿ ಎಂಬ ಹಳ್ಳಿಯಲ್ಲಿ ಭಜನಾ ಮಂಡಳಿಯ ಸ್ಥಾಪನೆಯ ಉದ್ಧೇಶದಿಂದ ಶುರುವಾಗುವ ಕಥೆಯಲ್ಲಿ ಅನೇಕ ಹಾಸ್ಯಮಯ ಪ್ರಸಂಗಗಳಿವೆ. ಇಲ್ಲಿ ಪ್ರೀತಿ, ಗೆಳೆತನ ಇತ್ಯಾದಿ ವಿಷಯಗಳೂ ತುಂಬಿವೆ. ಚಿತ್ರಕ್ಕೆ ಹರೀಶ್ ಕಿಲಗೆರೆ ಕಥೆ ಬರೆದಿದ್ದಾರೆ. ಅವರೊಂದಿಗೆ ನಾನು ಚಿತ್ರಕಥೆಯಲ್ಲಿ ಕೈ ಜೋಡಿಸಿದ್ದೇನೆ” ಎಂದು ವಿವರ ಕೊಡುತ್ತಾರೆ ಯತೀಶ್‌ ನೆಲ್ಕುದ್ರಿ.

ಯತೀಶ್‌ ನೆಲ್ಕುದ್ರಿ, ನಿರ್ದೇಶಕ

ಇನ್ನು, ಈ ಚಿತ್ರದಲ್ಲಿ ತೇಜಸ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ನಿರೂಷ ಶೆಟ್ಟಿ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ನಿಶಾಂತ್ ಗುಡಿಹಳ್ಳಿ, ಪ್ರದೀಪ್ ಬಳ್ಳೆಕೆರೆ, ಪ್ರಕಾಶ್ ವಾರದ್, “ಕಾಮಿಡಿ ಕಿಲಾಡಿ” ಖ್ಯಾತಿಯ ರವಿ, ಎಸ್ ಮತ್ತು ಮಣಿಕಂಠ ಜೊತೆಗಿದ್ದಾರೆ. “ಭಜನಾ ಮಂಡಳಿಯ” ಮಾಸ್ತರ್ ಆಗಿ ಮನದೀಪ್ ರಾಯ್ ನಟಿಸಿದ್ದಾರೆ. ವೇಣುಗೋಪಾಲ್ ಮತ್ತು ಪ್ರಣಯಮೂರ್ತಿ ಅವರು ಪ್ರಮುಖ ಅಕರ್ಷಣೆ. ಕಿರುತೆರೆಯ “ನಂದಿನಿ” ಧಾರಾವಾಹಿಯ ಭರತ್ ಎಂ.ಜೆ. ಮತ್ತಿತರು ಕಾಣಿಸಿಕೊಂಡಿದ್ದಾರೆ.

ಮಲ್ಲೇಶ್ ವಂದಿಲ್ಲರ್ ಮಾತುಗಳನ್ನು ಪೋಣಿಸಿದ್ದಾರೆ. ವಿನೋದ್‌ ಕುಮಾರ್‌ ಅವರು ಚಿತ್ರದ ಗೀತೆಗಳನ್ನು ಬರೆದಿದ್ದಾರೆ. ಸಂದೀಪ್‌ ಸಂಗೀತ ನೀಡಿದ್ದಾರೆ, “ಕಲ್ಲಳ್ಳಿ ಭಜನಾ ಮಂಡಳಿ” ಎಂಬ ಚಿತ್ರಕ್ಕೆ ಭಜನೆಯ ಹಾಡು ಇಲ್ಲದಿದ್ದರೆ ಹೇಗೆ? ಮೂರು ದಶಕಗಳ ಕಾಲ ಭಜನೆ ಹಾಡುಗಳಲ್ಲಿ ಅನುಭವ ಇರುವ ಬೆಳಗಾವಿಯ ಪರುಶುರಾಮ್ ದೇವಗಾವ್ ಮತ್ತು ತಂಡ ಚಿತ್ರದ ಹಾಡಿಗೆ ಧ್ವನಿಯಾಗಿದೆ.

ಇನ್ನು, ನವೀನ್ ಸಜ್ಜು ಕೂಡ ಒಂದು ಹಾಡನ್ನು ಹಾಡಿದ್ದಾರೆ. ಚಿತ್ರಕ್ಕೆ ರಾಮಲಿಂಗಮ್ ಕ್ಯಾಮೆರಾ ಹಿಡಿದಿದ್ದಾರೆ. ಸದ್ಯಕ್ಕೆ ಚಿತ್ರೀಕರಣ ಪೂರ್ಣಗೊಂಡಿದ್ದು, ಸಂಕಲನ ಕಾರ್ಯದಲ್ಲಿ ನಿರತವಾಗಿದೆ. ಎಲ್ಲಾ ಕೆಲಸ ಮುಗಿಸಿಕೊಂಡು ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ.

ನಿಶಾಂತ್‌ ಗುಡಿಹಳ್ಳಿ

 

Categories
ಸಿನಿ ಸುದ್ದಿ

ಹೊಸಬರ ಹೊಸ ವೇಷ – ವಿನೋದ್‌ ಪ್ರಭಾಕರ್‌ ಶುಭಹಾರೈಕೆ

ಒಂದೇ ಹಂತದಲ್ಲಿ ಶೂಟಿಂಗ್‌ ಮುಗಿಸೋ ಯೋಚನೆ

ದಿನ ಕಳೆದಂತೆ ಹೊಸ ಚಿತ್ರಗಳು ಸೆಟ್ಟೇರುತ್ತಲೇ ಇವೆ. ಆ ಸಾಲಿಗೆ ಈಗ ಹೊಸಬರು ಸೇರಿ ಮಾಡುತ್ತಿರುವ “ವೇಷ” ಕೂಡ ಸೇರಿದೆ. ಹಂಸಿನಿ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ “ವೇಷ”ಕ್ಕೆ ಮಹಾಕಾಳಿ ದೇವಾಲಯದಲ್ಲಿ ಮುಹೂರ್ತ ನಡೆದಿದೆ. ಮುಹೂರ್ತಕ್ಕೆ ಆಗಮಿಸಿದ ನಟ ವಿನೋದ್‌ ಪ್ರಭಾಕರ್‌ ಅವರು ಹೊಸಬರ ತಂಡಕ್ಕೆ ಶುಭಹಾರೈಸಿದ್ದಾರೆ. ಜನವರಿ 27ರಿಂದ ಒಂದೇ ಹಂತದಲ್ಲಿ ಚಿತ್ರೀಕರಣ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಬಹುತೇಕ ಹೊಸಬರೇ ಸೇರಿ ಈ ಚಿತ್ರ ಮಾಡುತ್ತಿದ್ದು, ಈಗಾಗಲೇ “ಉಡುಂಬಾ”, “ಗೂಳಿಹಟ್ಟಿ” ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇರುವ ಪವನ್ ಕೃಷ್ಣ “ವೇಷ” ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನು, ರಘು ಈ ಚಿತ್ರದ ಹೀರೋ. ಇದರೊಂದಿಗೆ ನಿರ್ಮಾಪಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ನಿರ್ದೇಶನದ ಚಿತ್ರದ ಬಗ್ಗೆ ಮಾತನಾಡುವ ಪವನ್‌ಕೃಷ್ಣ, ” ಇದೊಂದು ಮಾಸ್, ಕಾಮಿಡಿ, ಸೆಂಟಿಮೆಂಟ್ ಮತ್ತು ಸಸ್ಪೆನ್ಸ್ ಹೀಗೆ ಈ ನಾಲ್ಕು ಅಂಶಗಳು “ವೇಷ” ಚಿತ್ರದ ಹೈಲೈಟ್‌. ಜೀವನದಲ್ಲಿ ಪ್ರತಿಯೊಬ್ಬರು ಒಂದೊಂದು “ವೇಷ” ಹಾಕಿರುತ್ತಾರೆ. ಇಲ್ಲಿ ಎಲ್ಲರಿಗೂ ಒಂದೊಂದು ವೇಷವಿದೆ. ಅದನ್ನು ಹಾಕಿದ ಉದ್ದೇಶ ಏನು ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ಎನ್ನುವ ಅವರು, ಜನವರಿ 27ರಿಂದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದ್ದು, ಉಡುಪಿ, ಚಿಕ್ಕಮಗಳೂರು, ಕುಂದಾಪುರ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆಯಲಿದೆ. ಒಟ್ಟಾರೆ 40 ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಸಿ, ಪೂರ್ಣಗೊಳಿಸುವ ಉದ್ದೇಶವಿದೆ ಎನ್ನುತ್ತಾರೆ ನಿರ್ದೇಶಕರು.

ಕಿರುತೆರೆಯ ನಟಿ ವಾಣಿಶ್ರೀ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, “ಯುವ ತಂಡದ ಜತೆಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ಇದೆ. ಹೊಸಬರ ಸಿನಿಮಾಗಳು ಹೆಚ್ಚೆಚ್ಚು ಬರಬೇಕು. ಅವರಿಂದಲೇ ನಮಗೂ ಕೆಲಸ ಸಿಗುತ್ತದೆ” ಎನ್ನುತ್ತಾರೆ ವಾಣಿಶ್ರೀ. ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ಮಾಪಕನಾಗಿಯೂ ರಘು ಕಾಣಿಸಿಕೊಳ್ಳುತ್ತಿದ್ದಾರೆ. ಮೂಲತಃ ರಘು ರಂಗಭೂಮಿ ಹಿನ್ನಲೆಯಿಂದ ಬಂದವರು. ಹಲವು ನಾಟಕ ಬರೆದು ಅಭಿನಯಿಸಿದ್ದಾರೆ. ಕೆಲ ವರ್ಷಗಳಿಂದ ರಂಗಭೂಮಿಯಿಂದಲೂ ದೂರ ಉಳಿದಿದ್ದ ಅವರೀಗ “ವೇಷ” ಸಿನಿಮಾ ಮೂಲಕ ಎಂಟ್ರಿಯಾಗುತ್ತಿದ್ದಾರೆ. ಹೊಸ ಬಗೆಯ ಕಥೆಯೊಂದಿಗೆ ಆಗಮಿಸುತ್ತಿರುವ ಅವರಿಗೆ ಚಿತ್ರದ ಮೇಲೆ ನಂಬಿಕೆ ಇದೆಯಂತೆ.


ಮಂಜು ಪಾವಗಡ ಚಿತ್ರದಲ್ಲಿ ಶಿಕ್ಷಕನ ಪಾತ್ರ ಮಾಡಿದರೆ, ಜಯ್ ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಸೌಖ್ಯ ಗೌಡ ಮತ್ತು ನಿಧಿ ಮಾರೋಲಿ ನಾಯಕಿಯರು. ಅವರಿಲ್ಲಿ ಸಾಂಪ್ರದಾಯಿಕ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೇಹಾ ಗೌಡ ಇಲ್ಲಿ ತಂಗಿ ಪಾತ್ರ ಮಾಡುತ್ತಿದ್ದಾರೆ. ಚಿತ್ರದ 3 ಹಾಡುಗಳಿಗೆ ಮನೀಷ್ ಮೋಯ್ಲಿ ಸಾಹಿತ್ಯ ಬರೆದಿದ್ದಾರೆ. ಉತ್ತಮ್ ಸಾರಂಗ್ ಸಂಗೀತವಿದೆ. ಕಿರಿಕ್ ಹುಡುಗ ಕೀರ್ತನ್ ಶೆಟ್ಟಿ ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಸುರೇಂದ್ರ ಪಣಿಯೂರ್ ಛಾಯಾಗ್ರಹಣ ಮಾಡಿದರೆ, ಸನತ್ ಉಪ್ಪುಂದ ಸಂಕಲನವಿದೆ. ಪವನ್‌ ಕುಮಾರ್‌ ಸಂಭಾಷಣೆ ಬರೆದಿದ್ದಾರೆ. ಜಾಗ್ವಾರ್ ಸಣ್ಣಪ್ಪ ಸಾಹಸವಿದೆ. ಪಿ. ರಾಮ್ ನೃತ್ಯ ನಿರ್ದೇಶನ ಮಾಡಿದ್ದಾರೆ.

Categories
ಸಿನಿ ಸುದ್ದಿ

ಪೊಗರು ರಿಲೀಸ್‌ ಬಗ್ಗೆ ಕೊನೆಗೂ ರಶ್ಮಿಕಾ ಮಾತಾಡಿಬಿಟ್ಟರು!

ರಿಲೀಸ್‌ ಕುರಿತು ಬಾಯಿಬಿಡದ ರಶ್ಮಿಕಾಗೆ ಮಾತಿನ ಬಿಸಿ ತಟ್ಟಿತ್ತು

ಟ್ವೀಟ್‌ ಮೂಲಕ ಜೈ ಅಂದ ಮಂದಣ್ಣ

ಧ್ರುವಸರ್ಜಾ ಅಭಿನಯದ “ಪೊಗರು” ಸಿನಿಮಾ ಫೆಬ್ರವರಿ ೧೯ರಂದು ಬಿಡುಗಡೆಯಾಗಲಿದೆ. ಈ ಕುರಿತಂತೆ, ಸ್ವತಃ ಧ್ರುವ ಸರ್ಜಾ ಅವರೇ ವಿಡಿಯೋ ಮಾಡುವ ಮೂಲಕ ದಿನಾಂಕವನ್ನು ಘೋಷಣೆ ಮಾಡಿದ್ದರು. ಲಾಕ್‌ಡೌನ್‌ ಬಳಿಕ ಬಿಡುಗಡೆಯಾಗುತ್ತಿರುವ ಬಿಗ್‌ ಬಜೆಟ್‌ ಸಿನಿಮಾ ಇದಾಗಿದ್ದು, ಧ್ರುವ ಸರ್ಜಾ ಅವರ ಅಭಿಮಾನಿಗಳಿಗಂತೂ ಸಖತ್‌ ಖುಷಿಯಾಗಿದೆ. ಇನ್ನು, ಈ ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡುತ್ತಿದ್ದಂತೆಯೇ, ಚಿತ್ರತಂಡ ಕೂಡ ಬಿಡುಗಡೆಯ ತಯಾರಿಯನ್ನು ಜೋರಾಗಿಯೇ ನಡೆಸಿದೆ.

ಆದರೆ, ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಮಾತ್ರ, “ಪೊಗರು” ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದ್ದರೂ, ಕೂಡ ಅವರು ಎಲ್ಲೂ ಸಹ ಚಿತ್ರದ ಬಗ್ಗೆ ಒಂದೇ ಒಂದು ಪೋಸ್ಟ್‌ ಮಾಡಿಲ್ಲ. ಆ ಕುರಿತಂತೆ ಹೇಳಿಕೊಂಡಿರಲಿಲ್ಲ. ಕನ್ನಡ ಚಿತ್ರರಂಗದಿಂದಲೇ ಎಂಟ್ರಿಯಾಗಿ, ಈಗ ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ, ಅವರು ತಮ್ಮ ಚಿತ್ರದ ಕುರಿತು ಮಾತನಾಡಿಲ್ಲ ಎಂಬ ಆಕ್ರೋಶಕ್ಕೆ ಕಾರಣರಾಗಿದ್ದರು.

ಹಲವು ಜನರು ಟ್ವೀಟ್‌ ಮಾಡುವ ಮೂಲಕ ಕಾಲೆಳೆದಿದ್ದರು. ಆಮೇಲೆ ಎಚ್ಚೆತ್ತುಕೊಂಡಿರುವ ರಶ್ಮಿಕಾ ಮಂದಣ್ಣ, ಇದೀಗ, ಧ್ರುವಸರ್ಜಾ ಅವರು ಹಂಚಿಕೊಂಡಿರುವ ಪೋಸ್ಟ್‌ವೊಂದನ್ನು ತಮ್ಮ ಟ್ವೀಟ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಪೊಗರು ರಿಲೀಸ್‌ಗೆ ಕೇವಲ ೩೦ ದಿನಗಳು ಎಂದು ಹಾಕಿಕೊಂಡಿದ್ದಾರೆ. ಸದ್ಯಕ್ಕೆ ರಶ್ಮಿಕಾ ಮಂದಣ್ಣ, ಟ್ವೀಟ್‌ ಮಾಡಿದ ಮೇಲೆ, ಅವರ ವಿರುದ್ಧದ ಮಾತುಗಳು ಕಡಿಮೆಯಾಗುತ್ತಿವೆ.
ಅಂದಹಾಗೆ, ನಂದಕಿಶೋರ್‌ ನಿರ್ದೇಶನದ ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ “ಕರಾಬು” ಹಾಡು ಎಲ್ಲೆಲ್ಲೂ ಸದ್ದು ಮಾಡಿದೆ. ಅಷ್ಟೇ ಅಲ್ಲ, ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ “ಪೊಗರು” ಸಿನಿಮಾ ಕೂಡ ಒಂದು. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ “ಪೊಗರು” ಕೊನೆಗೂ ಚಿತ್ರಮಂದಿರಕ್ಕೆ ಬರುತ್ತಿದೆ. ಅಭಿಮಾನಿಗಳು ಇದೀಗ ಚಿತ್ರ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ.

Categories
ಸಿನಿ ಸುದ್ದಿ

ಸಿನಿಮಾ ಪ್ರೀತಿಸೋ ಹುಡುಗರಿಗೆ ಸೈಕೋ ಕಾಟ !

ಅಂಜು ಎಂಬ ಹೊಸಬರ ಸಸ್ಪೆನ್ಸ್‌ ಥ್ರಿಲ್ಲರ್‌

ಎರಡನೇ ಹಂತಕ್ಕೆ ಚಿತ್ರತಂಡ ಸಜ್ಜು

ಕನ್ನಡದಲ್ಲಿ ಈಗಂತೂ ಹೊಸಬರ ಅನೇಕ ಸಿನಿಮಾಗಳು ಸೆಟ್ಟೇರುತ್ತಿವೆ. ಆ ಸಾಲಿಗೆ “ರಸಗುಲ್ಲ ಅಂಜು” ಎಂಬ ಸಿನಿಮಾ ಕೂಡ ಸೇರಿದೆ. ಈ ಚಿತ್ರಕ್ಕೆ ರಾಜೀವ್‌ ಕೃಷ್ಣ ನಿರ್ದೇಶಕರು. ಕಥೆ, ಚಿತ್ರಕಥೆ ಕೂಡ ಇವರದೇ. ಈಗಾಗಲೇ ನಿರ್ದೇಶಕರು ಸದ್ದಿಲ್ಲದೆಯೇ ಮೊದಲ ಹಂತವನ್ನು ಮುಗಿಸಿದ್ದಾರೆ. ಸದ್ಯಕ್ಕೆ ಏಳು ದಿನಗಳ ಚಿತ್ರೀಕರಣ ಬಾಕಿ ಉಳಿದಿದ್ದು, ತೆಲುಗಿನ ನಟ ಬಾನುಚಂದರ್‌ ಹಾಗೂ ಅಭಿಜಿತ್‌ ಅವರ ಡೇಟ್‌ ನೋಡಿಕೊಂಡು ಚಿತ್ರೀಕರಿಸಿದರೆ ಚಿತ್ರೀಕರಣ ಮುಕ್ತಾಯ. ಇದು ಟೆನ್ ಟ್ರೀಸ್ ಫಿಲಂ ಪ್ರೊಡಕ್ಷನ್ ಹೌಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಇತ್ತೀಚೆಗಷ್ಟೇ ಚಿಂತಾಮಣಿಯಲ್ಲಿರುವ ಶ್ರೀಪ್ರಸನ್ನ ಆಂಜನೇಯ ದೇವಾಲಯದಲ್ಲಿ ಮುಹೂರ್ತ ನೆರವೇರಿತ್ತು.

ಅಷ್ಟೇ ವೇಗದಲ್ಲಿ ನಿರ್ದೇಶಕರು ಮೊದಲ ಹಂತವನ್ನು ಮುಗಿಸಿದ್ದಾರೆ. ಚಿತ್ರಕ್ಕೆ “ಖೇಲ್” ಚಿತ್ರದ ನಿರ್ಮಾಪಕ ಮಾರ್ಕೆಟ್ ಸತೀಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, “ಲೆಕ್ಕಾಚಾರ” ಚಿತ್ರದ ನಿರ್ಮಾಪಕ ಆರ್.ಚಂದ್ರು ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಈ ಚಿತ್ರದ ಕುರಿತು ಹೇಳುವ ನಿರ್ದೇಶಕ, ರಾಜೀವ್‌ ಕೃಷ್ಣ, “ಇದೊಂದು ಗೆಳೆಯ, ಗೆಳತಿಯರ ನಡುವಿನ ಚಿತ್ರ. ಬೆಂಗಳೂರಿನಿಂದ ಹೈದರಾಬಾದ್‌ಗೆ ಸಿನಿಮಾ ಆಡಿಷನ್‌ಗಾಗಿ ಪ್ರಯಾಣ ಬೆಳೆಸುವ ಮೂವರು ನಾಯಕ, ನಾಯಕಿಯರ ನಡುವೆ ಐದು ಮಂದಿ ಸೈಕೋಗಳು ಎಂಟ್ರಿಯಾಗುತ್ತಾರೆ. ಅವರಿಂದ ಆಗುವವಂತಹ ಅನಾಹುತಗಳೇನು, ಅವರು ಆ ಸೈಕೋಗಳಿಂದ ಪಾರಾಗಲು ಹೇಗೆಲ್ಲಾ ಕಷ್ಟಪಡುತ್ತಾರೆ ಎಂಬ ಕಥಾಹಂದರ ಇಲ್ಲಿದೆ.

ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವಾಗಿದ್ದು, ಹಿರಿಯ ನಟ ಅಭಿಜಿತ್ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿಗ್‌ಬಾಸ್ ಬೆಡಗಿ ಸೋನು ಪಾಟೀಲ್, ರಮ್ಯ, ಯಶಸ್ಸಿನಿ ನಟಿಸುತ್ತಿದ್ದಾರೆ.  ನಾಯಕರಾಗಿ ರಾಜ್‌ಪ್ರತೀಕ್, ಉಲಿಬೆಲೆ ರಾಜೇಶ್ ರೆಡ್ಡಿ, ಹಾಗೂ ಸಿದ್ಧಾರ್ಥ ಇದ್ದಾರೆ. ಖಳನಾಯಕರಾಗಿ ಮುಂಬೈನ ರಾಜೇಶ್ ಮುಂಡ್ಕೂರ್, ಆನಂದ್ ರಂಗ್ರೇಜ್‌ ನಟಿಸುತ್ತಿದ್ದಾರೆ. ಇವರೊಂದಿಗೆ ಚಿತ್ರದಲ್ಲಿ ನರಸಾಪುರ ಸಂದೀಪ್, ಭಕ್ತರಹಳ್ಳಿ ರವಿ, ರೇಣುಕಾ ಜೀವನ್, ಶಿವು, ಅಬ್ದುಲ್ ರೆಹಮಾನ್ ಇದ್ದಾರೆ. ಚಿತ್ರಕ್ಕೆ ವಿನುಮನಸು ಸಂಗೀತವಿದೆ. ರಮೇಶ್ ಕೊಯಿರಾ ಛಾಯಾಗ್ರಹಣವಿದೆ.

ಮಲ್ಲಿ ಸಂಕಲನ ಮಾಡಿದರೆ, ಸುರೇಶ್ ಕಂಬಳಿ ಸಾಹಿತ್ಯವಿದೆ. ಶಿವು ಸಾಹಸ ಮಾಡಿದ್ದಾರೆ. ಭಕ್ತರಹಳ್ಳಿ ರವಿ ನಿರ್ಮಾಣ ನಿರ್ವಹಣೆ ಇದೆ. ಡಾ.ಪ್ರಭು ಗಂಜಿಹಾಳ ಮತ್ತು ಡಾ.ವೀರೇಶ್ ಹಂಡಗಿ ಕಲಾನಿರ್ದೇನವಿದೆ. ಈಗಾಗಲೇ ಚಿಕ್ಕಬಳ್ಳಾಪುರ ಚಿಂತಾಮಣಿ ನಂದಿಗಿರಿ ಸೇರಿದಂತೆ ಹಲವು ಕಡೆ ಚಿತ್ರೀಕರಣ ಮಗಿಸಿರುವ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸವದತ್ತಿ ಮತ್ತು ಗಜೇಂದ್ರಗಡ ಕಡೆ ಪ್ರಯಾಣ ಬೆಳೆಸಲಿದೆ.

Categories
ಸಿನಿ ಸುದ್ದಿ

ಜನವರಿ 21ಕ್ಕೆ ಫ್ಯಾಂಟಮ್‌ ಹೊಸ ಸುದ್ದಿ! ಶೀರ್ಷಿಕೆ ಬದಲಾದೀತೆ?

ವಿಕ್ರಾಂತ್‌ ರೋಣ ಟೈಟಲ್‌ ಪಕ್ಕಾ ಆಗುವ ಸಾಧ್ಯತೆ ಇದೆ

ಕನ್ನಡದಲ್ಲೀಗ ಸಿನಿಮಾ ಸುದ್ದಿಗಳ ಸುರಿಮಳೆ. ಹೌದು, ಕೊರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆಯೇ, ಅತ್ತ ಸಿನಿಮಾರಂಗದ ಚಟುವಟಿಕೆಗಳೂ ಜೋರಾಗಿವೆ. ಈಗ ಹೊಸ ಸುದ್ದಿಯೆಂದರೆ, ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾ ತಂಡದಿಂದ ಒಂದು ಸುದ್ದಿ ಹೊರಬಿದ್ದಿದೆ. ಈಗಾಗಲೇ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ. ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಜೋರು ಸುದ್ದಿ ಮಾಡಿತ್ತು. ಚಿತ್ರದ ಟೀಸರ್‌, ಟ್ರೇಲರ್‌ ಬಗ್ಗೆಯೂ ಸಿನಿಮಾ ಮಂದಿಗೆ ಕುತೂಹಲವಿದೆ. ಸದ್ಯಕ್ಕೆ “ಫ್ಯಾಂಟಮ್‌” ಚಿತ್ರತಂಡದಿಂದ ಜನವರಿ 21ರಂದು ಹೊಸ ಪ್ರಕಟಣೆಯೊಂದು ಹೊರಬೀಳಲಿದೆ ಎಂಬ ಸುದ್ದಿ ಬಂದಿದೆ. ಈ ಕುರಿತಂತೆ, ಸ್ವತಃ ನಿರ್ದೇಶಕ ಅನೂಪ್‌ ಭಂಡಾರಿ ತಮ್ಮ ಟ್ವೀಟ್‌ ಮೂಲಕ ಮಾಹಿತಿ ಕೊಟ್ಟಿದ್ದಾರೆ. ಜನವರಿ ೨೧ ಸಂಜೆ4.03ಕ್ಕೆ “ಫ್ಯಾಂಟಮ್‌” ಚಿತ್ರದ ಮುಖ್ಯವಾದ ಪ್ರಕಟಣೆ ಇದೆ ಎಂದು ಹೊಸದೊಂದು ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ವಿಷಯ ಹಂಚಿಕೊಂಡಿದ್ದಾರೆ.


ಅಂದಹಾಗೆ, ಆ ಮುಖ್ಯವಾದ ವಿಷಯ ಏನಿರಬಹುದು? ಈ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಸಿನಿಮಾದ ಬಿಡುಗಡೆಯ ದಿನವನ್ನು ಘೋಷಣೆ ಮಾಡಬಹುದಾ? ಈ ಪ್ರಶ್ನೆ ಕೂಡ ಹರಿದಾಡುತ್ತಿದೆಯಾದರೂ, ಏನಿರಬಹುದು ಎಂಬ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಕಾರಣ, ಮೊದಲ ಪೋಸ್ಟರ್‌ ನೋಡಿದವರಿಗೆ ಸಾಕಷ್ಟು ಭರವಸೆ ಮೂಡಿಸಿತ್ತು. ಇನ್ನು, ಪ್ಯಾನ್‌ ಇಂಡಿಯಾ ಸಿನಿಮಾ ಅನ್ನುವುದರಲ್ಲಿ ಎರಡು ಮಾತಿಲ್ಲ. ಅದೇನೆ ಮಾಹಿತಿ ಇದ್ದರೂ, ಜನವರಿ 21ರಂದು ಹೊರಬರಲಿದೆ.


ಚಿತ್ರದ ಶೀರ್ಷಿಕೆ ಬದಲಾಗಬಹುದಾ?
ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರದ ಶೀರ್ಷಿಕೆ ಬದಲಾಗಬಹುದು ಎಂಬ ಸುದ್ದಿಯೂ ಇದೆ. ಈಗಾಗಲೇ “ಫ್ಯಾಂಟಮ್” ಶೀರ್ಷಿಕೆ ಬೇರೆ ಬ್ಯಾನರ್‌ನಲ್ಲಿದೆ ಎನ್ನಲಾಗಿದ್ದು, ಹಾಗಾಗಿ ಚಿತ್ರಕ್ಕೆ ಬೇರೆ ಟೈಟಲ್‌ ಇಡುವ ಬಗ್ಗೆಯೂ ಚಿತ್ರತಂಡ ಯೋಚಿಸಿದೆ ಎನ್ನಲಾಗಿದೆ. ಅಂದಹಾಗೆ, ಈ “ಫ್ಯಾಂಟಮ್” ಚಿತ್ರದಲ್ಲಿ ಸುದೀಪ್ ಅವರು ವಿಕ್ರಾಂತ್ ರೋಣ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಹಾಗೊಂದು ವೇಳೆ ಶೀರ್ಷಿಕೆ ಬದಲಾದರೆ, “ವಿಕ್ರಾಂತ್‌ ರೋಣ” ಎಂಬ ಶೀರ್ಷಿಕೆ ಪಕ್ಕಾ ಆದರೂ ಆಗಬಹುದು.

ಕಿಚ್ಚ ಸುದೀಪ್‌ ಅಭಿನಯದ ” ಫ್ಯಾಂಟಮ್‌ʼ ಚಿತ್ರದ ಟೈಟಲ್‌ ಬದಲಾಗುತ್ತಾ?

ಈ ಹಿಂದೆಯೇ “ಸಿನಿಲಹರಿ” “ಫ್ಯಾಂಟಮ್‌” ಚಿತ್ರದ ಶೀರ್ಷಿಕೆ ಬದಲಾಗಬಹುದು ಎಂಬ ಕುರಿತಂತೆ ಸುದ್ದಿ ಪ್ರಕಟಿಸಿತ್ತು. ಅದರಲ್ಲಿ “ಫ್ಯಾಂಟಮ್‌” ಬದಲಾಗಿ “ವಿಕ್ರಾಂತ್‌ ರೋಣ” ಟೈಟಲ್‌ ಫಿಕ್ಸ್‌ ಆಗಬಹುದು ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಜಾಕ್‌ಮಂಜು ನಿರ್ಮಾಪಕರು.

 

error: Content is protected !!