ಕನ್ನಡ ಚಿತ್ರರಂಗದ ಸ್ಟಾರ್ ನಟ ಯಶ್ ಅವರ ತಂದೆ-ತಾಯಿಯೊಂದಿಗೆ ಗ್ರಾಮಸ್ಥರು ಜಮೀನು ಕಾಂಪೌಂಡ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಎಬ್ಬಿಸಿದ್ದು, ಈ ಸಂಬಂಧ ಯಶ್ ಅವರು ಮಂಗಳವಾರ ಹಾಸನ ಜಿಲ್ಲೆಯ ದುದ್ದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ತಾವು ಖರೀದಿಸಿದ್ದ ಜಮೀನಿಗೆ ರಸ್ತೆ ನಿರ್ಮಿಸುವ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಮತ್ತು ಯಶ್ ಕುಟುಂಬದ ನಡುವೆ ಗದ್ದಲ ಎದ್ದಿತ್ತು. ಈ ವಿಚಾರವಾಗಿ ಯಶ್ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ಜಗಳ ದೊಡ್ಡದ್ದಾಗಿತ್ತು. ಈ ಬಗ್ಗೆ ಅಸಮಾಧಾನಗೊಂಡ ಯಶ್ ಅವರು, ಹಾಸನ ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿದ್ದರು. ಪೊಲೀಸರೊಂದಿಗೆ ಚರ್ಚೆ ಮಾಡಿದ ನಂತರ ಮಾಧ್ಯಮ ಎದುರು ಮಾತನಾಡಿದ ಯಶ್, “ನಾವು ಕಷ್ಟಪಟ್ಟು ಜಮೀನು ಖರೀದಿಸಿದ್ದೇವೆ. ಈಗ ಕಾಂಪೌಂಡ್ ಹಾಕಿಸುತ್ತಿದ್ದೇವೆ. ಕೆಲಸ ಮಾಡುತ್ತಿದ್ದ ಹುಡುಗರ ಮೇಲೆ ಕೈ ಮಾಡಲಾಗುತ್ತಿದೆ ಇದು ಸರಿಯಲ್ಲ. ರಸ್ತೆ ವಿಚಾರವಾಗಿ ಮಾತುಕತೆ ನಡೆದಿದೆ. ಮಾತುಕತೆಯಲ್ಲೇ ಬಗಹರಿಸಿಕೊಳ್ಳಬೇಕು. ಕೆಲಸ ಮಾಡುವ ಹುಡುಗರ ಮೇಲೆ ಕೈ ಮಾಡಿದ್ರೆ ಸುಮ್ಮನೆ ಇರಲಿಕ್ಕೆ ಆಗಲ್ಲ. ನಮ್ಮ ಜೊತೆ ಕೆಲಸ ಮಾಡೋರು ಅಂದರೆ ನಮ್ಮ ಮನೆಯವರ ರೀತಿ. ತಂದೆ-ತಾಯಿ ಬಗ್ಗೆಯೂ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಹಾಗಾಗಿ ಬಂದಿದ್ದೇನೆ.
ದುಡ್ಡು ಮಾಡಬೇಕು ಅಂದರೆ ಬೆಂಗಳೂರಲ್ಲೇ ಮಾಡಬಹುದು ‘ರಸ್ತೆಯನ್ನು ದೇವಸ್ಥಾನಕ್ಕೆ ಹೋಗಲು ಮಾಡಿದ್ದಾರೆ. ಅದು ನಮಗೆ ಬೇಕು ಎಂದು ಮಾಡಿಲ್ಲ. ಹಾಸನಕ್ಕೆ ಬಂದು ನಾನ್ಯಾಕೆ ಜಮೀನು ಮಾಡಬೇಕು. ದುಡ್ಡು ಮಾಡಬೇಕು ಎಂದರೆ ಬೆಂಗಳೂರಲ್ಲೇ ಆಸ್ತಿ ಮಾಡಬಹುದಲ್ವಾ. ನಾವು ಕೃಷಿ ಮಾಡಬೇಕು. ಅದು ನನ್ನ ಆಸೆ. ಅವರು ಹಳ್ಳಿ ಜನ, ನಮ್ಮ ತಂದೆ ತಾಯಿಯೂ ಹಳ್ಳಿ ಜನ. ಮಾತುಕತೆ ನಡೆದಿದೆ. ಹೇಗೆ ಮಾತಾಡಬೇಕು ಅನ್ನೋದೇ ಗೊತ್ತಿಲ್ಲ. ‘ಮೀಡಿಯಾ ಇದೆ ಅಂತಾರೆ, ಎಲ್ಲರದೂ ಅದೇ ಆಗಿದೆ. ಮೀಡಿಯಾ ಇದ್ದರೆ ಇರಲಿ ಬಿಡಿ. ನಾವೂ ಅಪ್ಪ ಅಮ್ಮನಿಗೆ ಹುಟ್ಟಿರುವ ಮಕ್ಕಳೆ. ತಂದೆ ತಾಯಿ ಬಗ್ಗೆ ಮಾತನಾಡಿದಾಗ ನಮ್ಮ ಇಮೇಜ್ ನೋಡಿಕೊಂಡು ಕೂರಲು ಆಗಲ್ಲ. ಎಲ್ಲಿಂದಲೋ ಬಂದವರು, ಇಲ್ಲಿಗೆ ಬಂದಿದ್ದಾರೆ ಅಂತ ಕೇಳ್ತಾರಂತೆ ಎಂದಿದ್ದಾರೆ ಯಶ್. ಏನಿದು ಘಟನೆ ? ಯಶ್ ಅವರ ತಂದೆ ಅರುಣ್ ಕುಮಾರ್ ಮತ್ತು ತಾಯಿ ಪುಷ್ಪ ಇಬ್ಬರು ತಮ್ಮ ಜಮೀನಿನಲ್ಲಿ ಕೆಲಸ ಮಾಡಿಸುತ್ತಿರುವಾಗ ಗ್ರಾಮಸ್ಥರ ನಡುವೆ ಮಾತಿಗೆ ಮಾತು ಬೆಳೆದಿದೆ. ಜಮೀನಿಗೆ ರಸ್ತೆ ನಿರ್ಮಾಣ ಮಾಡಲು ಜೆಸಿಬಿಯಲ್ಲಿ ಕೆಲಸ ಮಾಡಿಸುತ್ತಿದ್ದ ವೇಳೆ ಗ್ರಾಮಸ್ಥರು ಅಡ್ಡಿ ಪಡಿಸಿದ್ದರು. ಈ ವೇಳೆ ಶುರುವಾದ ಗಲಾಟೆ ಮಾತಿಗೆ ಮಾತು ಬೆಳೆದು ಯಶ್ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ದೊಡ್ಡ ಜಗಳವಾಗಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ್ದಾರೆ.