ಚಿತ್ರ ವಿಮರ್ಶೆ
ಮಚ್ ಹಾಕೋರಿಗೇ ಹೆದರಲಿಲ್ಲ… ಇನ್ನು ಸ್ಕೆಚ್ ಹಾಕೋರಿಗೆ ಹೆದರ್ತೀನಾ..”
– ಈ ಡೈಲಾಗ್ ಬರುವ ಹೊತ್ತಿಗೆ, ಒಂದು ಹಂತದಲ್ಲಿ ಸಿನಿಮಾದ ಮೊದಲರ್ಧ ಮುಗಿದು, ತನ್ನ ವೇಗವನ್ನು ಹೆಚ್ಚಿಸಿಕೊಂಡಿರುತ್ತೆ. ಮುಂದೇನಾಗುತ್ತೆ ಎಂಬ ಕುತೂಹಲವೂ ಕೂಡ ಕ್ಷಣ ಕ್ಷಣಕ್ಕೂ ಹೆಚ್ಚುತ್ತಾ ಹೋಗುತ್ತೆ. ಆ ಕುತೂಹಲವನ್ನು ವರ್ಣಿಸುವುದು ತುಸು ಕಷ್ಟ. ಅಂಥದ್ದೊಂದು ಕುತೂಹಲ ಕೆರಳಿಸಿರುವ “ರಾಬರ್ಟ್” ನಿಜಕ್ಕೂ ಅದ್ಧೂರಿ “ದರ್ಶನ” ನೀಡಿದೆ ಎನ್ನಬಹುದು.
ಇಷ್ಟು ದಿನ “ರಾಬರ್ಟ್” ಎದುರು ನೋಡುತ್ತಿದ್ದವರಿಗೆ ಖಂಡಿತ ಇಲ್ಲಿ ನಿರಾಸೆ ಆಗುವುದಿಲ್ಲ. ದರ್ಶನ್ ಅಭಿಮಾನಿಗಳಿಗಂತೂ ಪಕ್ಕಾ ಮಾಸ್ ಎಂಟರ್‌ಟೈನ್‌ಮೆಂಟ್ ಚಿತ್ರವಿದು. ಕಾಸು ಕೊಟ್ಟು ಬಾಸು ನೋಡಿದವರಿಗೆ ಪಾನ್ ಮಸಾಲ ತಿಂದಷ್ಟೇ ಖುಷಿ. “ರಾಬರ್ಟ್” ಒಂದು ರಿವೇಂಜ್ ಕಥೆ ಹಿನ್ನೆಲೆಯಲ್ಲಿ ಸಾಗುವ ಚಿತ್ರ. ರಿವೇಂಜ್ ಸ್ಟೋರಿ ಕನ್ನಡಕ್ಕೆ ಹೊಸದಲ್ಲ. ಆದರೆ, ನಿರ್ದೇಶಕ ತರುಣ್ ಸುಧೀರ್ ಅವರ ಈ “ರಿವೇಂಜ್” ವಿಭಿನ್ನ ಎನ್ನಬಹುದು. ಇಲ್ಲಿ ಕಥೆ ಇದೆ, ಚಿತ್ರಕಥೆಗೊಂದು ವೇಗವಿದೆ. ಸಿನಿಮಾದ ಅವಧಿ ಹೆಚ್ಚಾಯಿತು ಎನಿಸಿದರೂ, ಅಲ್ಲಲ್ಲಿ ಕಾಣುವ ಹಾಡುಗಳು ನೋಡುಗರ ಮನಮುಟ್ಟಿ, ಸುಮ್ಮನೆ ನೋಡಿಸಿಕೊಂಡು ಹೋಗುವ ತಾಕತ್ತು “ರಾಬರ್ಟ್”ಗಿದೆ.
ಸಾಮಾನ್ಯವಾಗಿ ದರ್ಶನ್ ಸಿನಿಮಾಗಳಲ್ಲಿ ಹೊಡಿ, ಬಡಿ, ಕಡಿ ಅಂಶಗಳು ಇದ್ದೇ ಇರುತ್ತೆ. ಇಲ್ಲೂ ಆ ಎಲ್ಲಾ ಅಂಶಗಳಿದ್ದರೂ, ಅವುಗಳ ಜೊತೆ ಒಂದಷ್ಟು ಮನಸ್ಸಿಗೆ ನಾಟುವ ಅಂಶಗಳು ಇವೆ. ದ್ವೇಷ, ಆಕ್ರೋಶ, ಗೆಳೆತನ, ಪ್ರೀತಿ, ಧರ್ಮ, ಅಧರ್ಮ ಅಂಶಗಳು ಇಲ್ಲಿ ಮೇಳೈಸಿವೆ. ಅವೆಲ್ಲವನ್ನೂ ರುಚಿಸುವಂತೆ ಕಟ್ಟಿಕೊಟ್ಟಿರುವ ನಿರ್ದೇಶಕರ ಶ್ರಮ ಇಲ್ಲಿ ಎದ್ದು ಕಾಣುತ್ತದೆ.
ಒಂದು ಸಿನಿಮಾ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ ಅಂದರೆ, ಅದರಲ್ಲಿರುವ ಗಟ್ಟಿ ಕಥೆ ಮತ್ತು ಅದನ್ನು ಅಷ್ಟೇ ಅಂದವಾದ ನಿರೂಪಣೆ. ಇಲ್ಲಿ ದೊಡ್ಡ ತಾರಾಬಳಗವನ್ನೇ ಕಟ್ಟಿಕೊಂಡು ಎಲ್ಲರಿಗೂ ಆದ್ಯತೆ ಕೊಡುವುದು ತಲೆನೋವಿನ ಕೆಲಸವೇ. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಸುಂದರ “ದರ್ಶನ” ಮಾಡಿಸುವಲ್ಲಿ ತರುಣ್ ಸುಧೀರ್ ಯಶಸ್ವಿಯಾಗಿದ್ದಾರೆ.
ಸಿನಿಮಾದ ವೇಗ ಹೆಚ್ಚಿಸಿರೋದು ಚಿತ್ರಕಥೆ ಮತ್ತು ಹಿನ್ನೆಲೆ ಸಂಗೀತ. ಇವುಗಳಿಗೆ ಸಾಥ್ ನೀಡಿರೋದು ಸಂಕಲನ ಹಾಗು ಆಗಾಗ ಕಾಣುವ ಸುಂದರ ಹಾಡುಗಳು. ಎಲ್ಲವನ್ನೂ ತೆರೆಯ ಮೇಲೆ ಚೆಂದ ಕಾಣಿಸಿರುವ ಛಾಯಾಗ್ರಹಣ ಕೂಡ ಇಲ್ಲಿ ಕಮ್ಮಿ ಏನಿಲ್ಲ. ಪ್ರತಿಯೊಂದು ಪಾತ್ರದ ಮಾತುಗಳೂ ಕೂಡ ಚಿತ್ರದ ಬಿಗಿಹಿಡಿತಕ್ಕೆ ಕಾರಣವಾಗಿವೆ.
“ರಾಬರ್ಟ್” ಬಗ್ಗೆ ಇನ್ನೂ ಆಳವಾಗಿ ಹೇಳುವುದಾದರೆ, ತೆರೆಯ ಮೇಲೆ ಎಲ್ಲವೂ ಅದ್ಧೂರಿಯಾಗಿಯೇ ದರ್ಶನವಾಗಿದೆ. ಪ್ರತಿಯೊಂದು ದೃಶ್ಯ ಕೂಡ ಅದ್ಭುತ ಎನಿಸುವಷ್ಟರ ಮಟ್ಟಿಗೆ ಕಟ್ಟಿಕೊಡಲಾಗಿದೆ. ಅದು ಮಾತಿನ ಭಾಗವಿರಲಿ, ಹಾಡಿರಲಿ, ಫೈಟ್ ಇರಲಿ ಎಲ್ಲವೂ ಭರಪೂರವಾಗಿರಬೇಕು ಅಂದುಕೊಂಡೇ ನಿರ್ಮಾಪಕರು ಹಣ ಸುರಿದಿರುವುದು “ರಾಬರ್ಟ್” ನೋಡಿದವರಿಗೆ ಗೊತ್ತಾಗದೇ ಇರದು. ಒಂದು ಸಿನಿಮಾ ಅಚ್ಚುಕಟ್ಟಾಗಿ ಮೂಡಬೇಕಾದರೆ, ಕಥೆ ಇದ್ದರೆ ಸಾಲದು, ತೆರೆ ಮೇಲೆ ಕಾಣಿಸುವ ನಟ,ನಟಿ, ಕಲಾವಿದರಿದ್ದರೆ ಸಾಲದು, ತೆರೆ ಹಿಂದೆ ಇರುವವರ ಪಾತ್ರವೂ ಇರಲೇಬೇಕು. ಅದನ್ನಿಲ್ಲಿ ಕಾಣಬಹುದು. “ರಾಬರ್ಟ್” ಆರ್ಭಟಕ್ಕೆ, ಅಂದಕ್ಕೆ ಒಗ್ಗಟ್ಟಿನ ಮಂತ್ರ ಕಾರಣ ಎನ್ನಬಹುದು. ಟೀಮ್ ಕೆಲಸ ಒಂದೊಳ್ಳೆಯ ಸಿನಿಮಾ ಆಗಲು ಕಾರಣವಾಗಿದೆ ಅಂತ ಮುಲಾಜಿಲ್ಲದೆ ಹೇಳಬಹುದು.
ಸಿನಿಮಾದಲ್ಲಿ ತುಂಬಾ ಹೈಲೈಟ್ ಅಂದರೆ, ಪಂಚಿಂಗ್ ಡೈಲಾಗ್‌ಗಳು. ಇಲ್ಲಿ ಹೀರೋ ಬರೀ ಎದುರಾಳಿಗಳಿಗೆ ಪಂಚಿಂಗ್ ಡೈಲಾಗ್ ಕೊಡ್ತಾರೆ ಅಂದುಕೊಂಡರೆ ಆ ಊಹೆ ತಪ್ಪು. ಹೀರೋ ಇಲ್ಲಿ ಮನಮುಟ್ಟುವ ಮಾತುಗಳನ್ನೂ ಹೇಳುತ್ತಾನೆ, ಕಣ್ಣಂಚು ಒದ್ದೆಯಾಗಿಸುವಂತಹ ಮಾತನ್ನೂ ಹೊರಹಾಕುತ್ತಾನೆ. “ಮಡಿ ಮೈಲಿಗೆಗಿಂತ ಮನುಷ್ಯತ್ವ ಮುಖ್ಯ, ಒಳ್ಳೇತನಕ್ಕೆ ಪಾಪ ಅಂಟಲ್ಲ, ಕೆಟ್ಟತನಕ್ಕೆ ಪುಣ್ಯ ಬರಲ್ಲ, ಒಬ್ಬರ ಲೈಫಲ್ಲಿ ಹೀರೋ ಆಗಬೇಕಾದರೆ, ಮತ್ತೊಬ್ಬರ ಲೈಫಲ್ಲಿ ವಿಲನ್ ಆಗಬೇಕು..”ಈ ರೀತಿಯ ಹಲವು ಡೈಲಾಗ್‌ಗಳು ಇಡೀ ಚಿತ್ರದುದ್ದಕ್ಕೂ ಬಂದು ಇನ್ನಷ್ಟು ರೋಚಕತೆ ಎನಿಸುತ್ತವೆ. ಕೆಲವು ಡೈಲಾಗ್‌ಗಳು ಭಾವುಕತೆಗೂ ದೂಡುತ್ತವೆ. ಇಲ್ಲಿ ರಾಬರ್ಟ್ ಬಗ್ಗೆ ಎಷ್ಟು ಹೇಳಿದರೂ, ತೆರೆ ಮೇಲಿನ ಅಬ್ಬರದ ಬಗ್ಗೆ ವರ್ಣಿಸಲು ಆಗಲ್ಲ. ಅಂತಹ ಅಬ್ಬರದ ದರ್ಶನ ಮಾಡಲೇಬೇಕೆನಿಸಿದರೆ ಮಿಸ್ ಮಾಡದೆ ರಾಬರ್ಟ್ ನೋಡಿ.
ಇದು ರಾಬರ್ಟ್ ಕಥೆ…
ರಾಬರ್ಟ್ ಮತ್ತು ರಾಘವ್ ಇಲ್ಲಿ ಇಬ್ಬರಿದ್ದಾರೆ. ಈ ಎರಡು ಪಾತ್ರಗಳಲ್ಲೂ ದರ್ಶನ್ ಅವರೇ ಇದ್ದಾರೆ. ಹಾಗಾದರೆ, ದರ್ಶನ್ ಅವರಿಲ್ಲಿ ಡಬ್ಬಲ್ ಪಾತ್ರ ಮಾಡಿದ್ದಾರಾ? ಈ ಪ್ರಶ್ನೆ ಕಾಡಿದರೂ ಅಚ್ಚರಿ ಇಲ್ಲ. ರಾಬರ್ಟ್ ಮತ್ತು ರಾಘವ್ ಎರಡೂ ಪಾತ್ರದಲ್ಲೂ ದರ್ಶನ್ ಇದ್ದಾರೆ. ಯಾಕೆ ಅನ್ನುವ ಕುತೂಹಲವಿದ್ದರೆ ಚಿತ್ರ ನೋಡಿ.
ಕಥೆ ಶುರುವಾಗೋದೇ ಉತ್ತರ ಪ್ರದೇಶದ ಕುಸ್ತಿ ಅಖಾಡದಲ್ಲಿ. ರಾಬರ್ಟ್ ಕಥೆ ಲಕ್ನೋದಲ್ಲಿ ನಡೆಯುತ್ತೆ ಎಂಬುದು ವಿಶೇಷ. ಅಲ್ಲಿ ದರ್ಶನ್ ಆಂಜನೇಯನಾಗಿಯೂ ಮಿಂಚುತ್ತಾರೆ! ಅರೇ, ಹೌದಾ ಯಾಕೆ ಅನ್ನುವುದಕ್ಕೆ ಚಿತ್ರ ನೋಡಬೇಕು. ರಾಬರ್ಟ್ ಇಲ್ಲಿ ರಾಘವ್ ಆಗಿ ಬದಲಾಗ್ತಾನೆ ಎಂಬ ಸಣ್ಣ ಸುಳಿವು ಸಿಕ್ಕರೂ ಯಾಕೆ ಅನ್ನೋದೇ ರೋಚಕ. ಮೊದಲರ್ಧ ಇಲ್ಲಿ ರಾಘವನ ಅವತಾರ ತಾಳಿರುವ ದರ್ಶನ್, ದ್ವಿತಿಯಾರ್ಧದಲ್ಲಿ ರಾಬರ್ಟ್ ಆಗಿ ಅಬ್ಬರಿಸುತ್ತಾರೆ. ಅದಕ್ಕೆ ಹತ್ತಾರು ಟ್ವಿಸ್ಟ್‌ಗಳಿವೆ. ಅವುಗಳೇ ಚಿತ್ರದ ಜೀವಾಳ.
ತರುಣ್ ಸುಧೀರ್, ನಿರ್ದೇಶಕ
ಒಬ್ಬ ನಾನಾ. ಅವನೊಬ್ಬ ಅಂಡರ್‌ವರ್ಲ್ಡ್ ಡಾನ್. ಇನ್ನೊಬ್ಬ ಸರ್ಕಾರ್ ಅನು ಆ ಡಾನ್ ಸಹೋದರ. ಒಂದು ಹಂತದಲ್ಲಿ ಇಬ್ಬರೂ ಮಂಗಳೂರಿನ ಹಿಡಿತಕ್ಕಾಗಿ ಬೇರೆ ಬೇರೆ ಆಗ್ತಾರೆ. ನಾನಾ ಬಳಿ ರಾಬರ್ಟ್-ರಾಘವ ಕೆಲಸ ಮಾಡ್ತಾರೆ. ಸರ್ಕಾರ್ ದಂಧೆಗಳಿಗೆ ಇವರಿಬ್ಬರೂ ಅಡ್ಡವಾಗ್ತಾರೆ. ಒಂದು ಘಟನೆಯಲ್ಲಿ ನಾನಾ ಪುತ್ರನ ಕೆಟ್ಟ ಕೆಲಸಕ್ಕೆ ಬೇಸತ್ತ ರಾಬರ್ಟ್-ರಾಘವ ಅವನನ್ನು ಕೊಲೆ ಮಾಡ್ತಾರೆ. ಅತ್ತ, ಒಂದು ಪ್ರೀತಿ ಕಥೆ ಕೂಡ ಚಿಗುರೊಡೆಯುತ್ತೆ. ಮುಂದೆ ರಾಘವ ಕೊಲೆಯಾಗ್ತಾನೆ. ರಾಬರ್ಟ್ ಕೊಲೆಗಾರ ಅನ್ನೋ ಪಟ್ಟ ಬರುತ್ತೆ. ಮಂಗಳೂರಿಂದ ರಾಬರ್ಟ್ ಲಕ್ನೋಗೆ ಶಿಫ್ಟ್ ಆಗ್ತಾನೆ. ಮುಂದೇನಾಗುತ್ತೆ ಅನ್ನೋದನ್ನು ತೆರೆ ಮೇಲೆ ನೋಡಬೇಕು.
ಚಿತ್ರದಲ್ಲಿ ಜಗಪತಿ ಬಾಬು ನಾನಾ ಪಾತ್ರದಲ್ಲಿ ಮಿಂಚಿದ್ದಾರೆ. ಒಂದೊಳ್ಳೆಯ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರವಿಶಂಕರ್ ಕೂಡ ಎಂದಿನಂತೆ ಘರ್ಜಿಸಿದ್ದಾರೆ, ಅಲ್ಲಲ್ಲಿ ನಗಿಸೋ ಪ್ರಯತ್ನವನ್ನೂ ಮಾಡಿದ್ದಾರೆ. ದರ್ಶನ್ ಅವರ ಪಾತ್ರದ ಬಗ್ಗೆ ಹೇಳಲೇಬೇಕು. ಬಾಸು ಕೊಂಚ ರೌಡಿನೇ. ಆ ಪಾತ್ರವನ್ನು ಅಷ್ಟೇ ಅಂದವಾಗಿಸಿದ್ದಾರೆ. ದರ್ಶನ್ ಅವರ ಸಿನಿಮಾ ಕೆರಿಯರ್‌ನಲ್ಲಿ ಇರುವ ಚಿತ್ರಗಳ ಪಾತ್ರಗಳ ಬಗ್ಗೆ ಹೆಸರಿಸುವುದಾದರೆ “ರಾಬರ್ಟ್” ಚಿತ್ರವನ್ನು ಪ್ರಧಾನವಾಗಿ ತೆಗೆದುಕೊಳ್ಳಲ್ಲಡ್ಡಿಯಿಲ್ಲ. ಅವರ ಅಭಿನಯ ಇಲ್ಲಿ ಬೇರೆ ರೀತಿಯದ್ದೇ ಖುಷಿ ಕೊಡುತ್ತದೆ. ಎರಡು ಶೇಡ್ ಇದ್ದರೂ, ಎರಡರಲ್ಲೂ ಔಟ್ ಸ್ಟ್ಯಾಂಡಿಂಗ್! ವಿಶೇಷವಾಗಿ ತೊತ್ಲ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಎಂದಿಗಿಂತಲೂ ಜಾಸ್ತಿ ಪಂಚಿಂಗ್ ಡೈಲಾಗ್, ಫೈಟ್‌ನಲ್ಲಿ ಇಷ್ಟವಾದರೆ, ಡ್ಯಾನ್ಸ್‌ನಲ್ಲಂತೂ ನೋಡಗರನ್ನೂ ಸ್ಟೆಪ್ ಹಾಕುವ ರೀತಿ ಹೆಜ್ಜೆ ಹಾಕಿ ಶಿಳ್ಳೆ,ಚಪ್ಪಾಳೆಗೆ ಕಾರಣರಾಗುತ್ತಾರೆ. ಇನ್ನು, ವಿನೋದ್ ಪ್ರಭಾಕರ್ ಕೂಡ ಇಲ್ಲಿ ಗೆಳೆಯನ ಪಾತ್ರದಲ್ಲಿ ಮಿಂಚಿದ್ದಾರೆ. ಅವರಿಗೂ ಇಲ್ಲಿ ತೂಕವಾದ ಪಾತ್ರ ಸಿಕ್ಕಿದ್ದು, ಅಷ್ಟೇ ಅದ್ಭುತವಾಗಿಯೇ ನಿರ್ವಹಿಸಿದ್ದಾರೆ. ಇವರಿಬ್ಬರ ನಡುವೆ ಒಂದು ಗೆಳೆತನ, ಕಾದಾಟವಿದೆ. ಅದನ್ನು ನೋಡಿದವರಿಗೆ “ನವಗ್ರಹ” ಸಿನಿಮಾ ನೆನಪಾಗದೇ ಇರದು. ನಾಯಕಿ ಆಶಾಭಟ್ ಮೊದಲ ಚಿತ್ರವಾದರೂ, ಇಷ್ಟವಾಗುತ್ತಾರೆ. ಹಾಡು-ಕುಣಿತ, ಮಾತುಕತೆ ಎಲ್ಲದರಲ್ಲೂ ಬೋಲ್ಡ್. ದೇವರಾಜ್, ಅವಿನಾಶ್, ಅಶೋಕ್, ಜಾನ್ಸನ್ ಡಿಸೋಜ, ಸೋನಾಲ್ ಮಾಂತೆರೊ, ಶಿವರಾಜ್ ಕೆ.ಆರ್.ಪೇಟೆ, ಚಿಕ್ಕಣ್ಣ ರವಿಚೇತನ್, ರವಿಕಿಶನ್, ಕರಿಸುಬ್ಬು, ಅಭಿ ದ್ವಾರಕೀಶ್, ಎಲ್ಲರೂ ಸಿಕ್ಕ ಪಾತ್ರವನ್ನು ಚೊಕ್ಕವಾಗಿಯೇ ಮಾಡುವ ಮೂಲಕ ಗಮನಸೆಳೆಯುತ್ತಾರೆ.
ಅರ್ಜುನ್ ಜನ್ಯ ಸಂಗೀತದ ಎಲ್ಲಾ ಹಾಡುಗಳು ಗುನುಗುವಂತಿವೆ. ಸುಧಾಕರ್ ಎಸ್.ರಾಜ್ ಅವರ ಕ್ಯಾಮೆರಾ ಕೈಚಳಕದಲ್ಲಿ “ರಾಬರ್ಟ್” ಅತೀ ಸುಂದರ. ಇನ್ನು, ಇಡೀ ಚಿತ್ರದಲ್ಲಿ ರಾಜಶೇಖರ್ ಚಂದ್ರಮೌಳಿ ಮಾತುಗಳು ಹಿಡಿದಿಡುತ್ತವೆ. ರಾಮ್ ಲಕ್ಷ್ಮಣ್, ಅನ್ಬು ಅರಿವು, ವಿನೋದ್ ಅವರ ಸ್ಟಂಟ್ಸ್ ಚಿತ್ರದ
ಮತ್ತೊಂದು ಹೈಲೈಟ್. ಕೆ.ಎಂ.ಪ್ರಕಾಶ್ ಅವರ ಚುರುಕಾದ ಸಂಕಲನ, ವಿ.ಹರಿಕೃಷ್ಣ ಅವರ ಹಿನ್ನೆಲೆ ಸಂಗೀತ ಚಿತ್ರದ ಜೀವಂತಿಕೆಗೆ ಸಾಕ್ಷಿ.
ನಿರ್ದೇಶನ: ತರುಣ್ ಸುಧೀರ್
ನಿರ್ಮಾಣ: ಉಮಾಪತಿ ಶ್ರೀನಿವಾಸ್
ಸಂಗೀತ: ಅರ್ಜುನ್ ಜನ್ಯ-ಹರಿಕೃಷ್ಣ
ತಾರಾಗಣ: ದರ್ಶನ್, ಜಗಪತಿಬಾಬು, ಜಾನ್ಸನ್ ಡಿಸೋಜ, ಆಶಾಭಟ್, ಸೋನಾಲ್ ಮಾಂತೆರೊ, ವಿನೋದ್ ಪ್ರಭಾಕರ್, ದೇವರಾಜ್, ಅವಿನಾಶ್, ಚಿಕ್ಕಣ್ಣ, ಅಶೋಕ್ ಇತರರು.
- ವಿಜಯ್ ಭರಮಸಾಗರ