Categories
ಸಿನಿ ಸುದ್ದಿ

ಚಿತ್ರರಂಗದ ಮೇಲೆ ಕೊರೊನಾ ಆತಂಕದ ತೂಗುಕತ್ತಿ ! ಮತ್ತೆ ಲಾಕ್‌ಡೌನ್‌ ಆಗಿಬಿಟ್ಟರೆ ಚಿತ್ರರಂಗದ ಸ್ಥಿತಿಗತಿ ಏನಾಗಬಹದು?

ಈಗಷ್ಟೇ ಚಿತ್ರರಂಗ ಚೇತರಿಸಿಕೊಳ್ಳುತ್ತಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕೊರೊನಾ ಒಕ್ಕರಿಸಿ ಆತಂಕ ಸೃಷ್ಟಿಸಿತ್ತಲ್ಲದೆ, ಲಾಕ್‌ಡೌನ್‌ಗೂ ಕಾರಣವಾಗಿ ಎಲ್ಲರ ಬದುಕನ್ನೇ ಬರಡಾಗಿಸಿದ್ದು ಸುಳ್ಳಲ್ಲ. ಈಗ ಮತ್ತದೇ ಆತಂಕ ಶುರುವಾಗುತ್ತಿದೆ! ಹೌದು, ಇದು ನಿಜ ಕೂಡ. ಕೊರೊನಾ ಹಾವಳಿ ನಿಯಂತ್ರಣವಾಗುತ್ತಿದ್ದಂತೆ ಎಲ್ಲವೂ ಸಹಜ ಸ್ಥಿತಿಗೆ ಬಂದಿದ್ದೇನೋ ಸತ್ಯ. ಆದರೆ, ಈಗ ದಿನ ಕಳೆದಂತೆ ಮತ್ತೆ ಕೊರೊನಾ ಪಾಸಿಟಿವ್‌ ಕೇಸುಗಳು ಹೆಚ್ಚುತ್ತಿವೆ. ಸರ್ಕಾರ ಕೂಡ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗುತ್ತಿದೆ. ಒಂದು ವೇಳೆ ಸರ್ಕಾರ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ, ಪುನಃ ಲಾಕ್‌ಡೌನ್‌ಗೆ ಮುಂದಾದರೆ? ಖಂಡಿತವಾಗಿಯೂ ಚಿತ್ರರಂಗ ಮೇಲೇಳಲು ವರ್ಷಗಳೇ ಬೇಕಾದೀತು. ಕಳೆದ ಒಂದು ವರ್ಷದ ಕೊರೊನಾ ಹೊಡೆತಕ್ಕೆ ಇನ್ನೂ ಚಿತ್ರರಂಗ ಚೇತರಿಸಿಕೊಂಡಿಲ್ಲ. ಮತ್ತೆ ಕೊರೊನಾ ಹಾವಳಿ ಎದುರಾಗಿ ಏನಾದರೊಂದು ಸಮಸ್ಯೆಗೆ ಕಾರಣವಾಗಿಬಿಟ್ಟರೆ, ಚಿತ್ರರಂಗವನ್ನೇ ನಂಬಿದವರ ಪಾಡೇನು ಎಂಬ ಪ್ರಶ್ನೆ ಈಗ ಎದುರಾಗಿದೆ.

ಸದ್ಯಕ್ಕೆ ಚಿತ್ರರಂಗದವರಲ್ಲಿ ಎರಡನೇ ಅಲೆ ಎಂಬ ಮಾತು ಭಾರೀ ಆತಂಕಕ್ಕೆ ಕಾರಣವಾಗಿದೆ. ಮೆಲ್ಲನೆ ಕೇಸುಗಳು ಹೆಚ್ಚುತ್ತಿವೆ. ವ್ಯಾಕ್ಸಿನ್‌ ಬಂದಿದ್ದರೂ, ನಿಯಂತ್ರಣವಾಗುತ್ತಿಲ್ಲವಾದ್ದರಿಂದ ಸರ್ಕಾರ ಸಭೆ ನಡೆಸುತ್ತಿದೆ. ಹಾಗೇನಾದರೂ ಒಂದು ವೇಳೆ ಲಾಕ್‌ಡೌನ್‌ಗೆ ಸರ್ಕಾರ ಮುಂದಾದರೆ ಚಿತ್ರರಂಗದವರ ಸ್ಥಿತಿ ಇನ್ನಷ್ಟು ಗಂಭೀರವಾಗುವುದರಲ್ಲಿ ಅನುಮಾನವಿಲ್ಲ.

ಈಗಾಗಲೇ ಸರ್ಕಾರ ಕೂಡ ಕೆಲವು ಕ್ರಮ ಕೈಗೊಂಡಿದೆ. ಮದುವೆ, ಜಾತ್ರೆ ಇನ್ನಿತರೆ ಸಮಾರಂಭಗಳಿಗೆ ಕೊಂಚ ಬ್ರೇಕ್‌ ಹಾಕಿದೆ. ಇತಿಮಿತಿಯಲ್ಲೇ ನಡೆಸಬೇಕು ಎಂಬ ಷರತ್ತು ಹಾಕಿದೆ. ಈ ನಿಟ್ಟಿನಲ್ಲಿ ಸಿನಿಮಾರಂಗ ಕೂಡ ಪ್ರಶ್ನೆ ಮಾಡಿಕೊಳ್ಳುವಂತಾಗಿದೆ. ಈಗಾಗಲೇ ಹಲವು ಚಿತ್ರತಂಡಗಳು ಹಾಕಿಕೊಂಡಿದ್ದ ಲೆಕ್ಕಾಚಾರಗಳು ಕೂಡ ಉಲ್ಟಾ ಆಗುತ್ತಿವೆ. ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ” ಚಿತ್ರದ ಕಾರ್ಯಕ್ರಮ ಕೂಡ ಕ್ಯಾನ್ಸಲ್‌ ಆಗಿದೆ. ಹೌದು, ಮೈಸೂರಲ್ಲಿ “ಯುವ ಸಂಭ್ರಮ” ಹೆಸರಲ್ಲಿ ಕಾರ್ಯಕ್ರಮ ನಡೆಸಲು ಚಿತ್ರತಂಡ ಯೋಜನೆ ರೂಪಿಸಿತ್ತು. ಆದರೆ, ಕೊರೊನಾದ ಎರಡನೇ ಹಂತದ ಅಲೆ ಹೆಚ್ಚಿದ್ದರಿಂದ, ಎಚ್ಚೆತ್ತುಕೊಂಡ ಚಿತ್ರತಂಡ ತಕ್ಷಣವೇ “ಯುವ ಸಂಭ್ರಮ” ರದ್ದು ಮಾಡಿತು. ಇನ್ನು, ಸರ್ಕಾರ ಜನಸಂದಣಿ ಆಗುವ ಸ್ಥಳಗಳ ಮೇಲೆ ಏನಾದರೂ ಗಂಭೀರ ಕ್ರಮಕ್ಕೆ ಮುಂದಾದರೆ, ಚಿತ್ರಮಂದಿರಗಳಿಗೆ ಭಾರೀ ಪೆಟ್ಟು ಬೀಳಬಹುದು.

ಈಗಷ್ಟೇ ಚಿತ್ರಮಂದಿರಗಳತ್ತ ಜನರು ದಾಪುಗಾಲು ಇಡುತ್ತಿದ್ದಾರೆ. ಈ ಬೆನ್ನಲ್ಲೇ ಪುನಃ ಚಿತ್ರಮಂದಿರಗಳನ್ನು ಮುಚ್ಚಿಸುವ ಕ್ರಮ ಕೈಗೊಂಡರೆ ಚಿತ್ರರಂಗ ದಿಕ್ಕು ತೋಚದಂತಾಗುತ್ತದೆ.
ಈಗಾಗಲೇ ಒಂದು ವರ್ಷದಿಂದ ಕಾದು ಸೋತಿರುವ ಚಿತ್ರಗಳು ಈಗ ಬಿಡುಗಡೆಗೆ ಸಜ್ಜಾಗುತ್ತಿವೆ. ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿದ್ದಂತೆಯೇ, ನಾ ಮುಂದು, ನೀ ಮುಂದು ಅಂತ ಸಾಲು ಸಾಲು ಸಿನಿಮಾಗಳು ತೆರೆಕಂಡು ಸೋತು ಸಣ್ಣಗಾಗಿದ್ದೂ ಇದೆ. ಈಗ ಬಿಡುಗಡೆಯ ಡೇಟ್‌ ಕೂಡ ಏರುಪೇರಾಗಬಹುದು.

“ಪೊಗರು” ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ಬೆನ್ನಲ್ಲೇ ಸ್ಟಾರ್‌ ಚಿತ್ರಗಳಾದ, “ರಾಬರ್ಟ್‌”, “ಕೋಟಿಗೊಬ್ಬ 3”, “ಯುವರತ್ನ”,”ಕೆಜಿಎಫ್‌2″, “ಸಲಗ” ಚಿತ್ರಗಳು ಬಿಡುಗಡೆ ದಿನವನ್ನು ಘೋಷಿಸಿಕೊಂಡಿವೆ. ಈಗ ಇದ್ದಕ್ಕಿದ್ದಂತೆ ಚಿತ್ರಮಂದಿರಗಳ ಪ್ರದರ್ಶನಕ್ಕೆ ಷರತ್ತು ಹಾಕಿದರೆ, ಒಂದು ವೇಳೆ ಮುಚ್ಚಬೇಕೆಂಬ ಆದೇಶ ಹೊರಡಿಸಿದರೆ, ಬಿಡುಗಡೆಗೆ ಸಜ್ಜಾಗಿರುವ ಸಿನಿಮಾಗಳ ಪಾಡೇನು, ನಿರ್ಮಾಪಕರ ಸ್ಥಿತಿ ಏನು? ಸ್ಟಾರ್‌ ಚಿತ್ರಗಳ ಜೊತೆಗೆ ಸಣ್ಣಪುಟ್ಟ ಚಿತ್ರಗಳ ದೊಡ್ಡ ಪಟ್ಟಿಯೇ ಇದೆ. ಕೊರೊನಾ ಹಾವಳಿ ಮತ್ತೆ ಶುರುವಾಗಿ, ಲಾಕ್‌ಡೌನ್‌ ಮಾಡಿ ಚಿತ್ರಮಂದಿರಗಳು, ಮಲ್ಟಪ್ಲೆಕ್ಸ್‌ ಬಂದ್‌ ಮಾಡಿದ್ದಲ್ಲಿ, ಚಿತ್ರರಂಗವನ್ನೇ ನಂಬಿದವರ ಬದುಕು ಅಕ್ಷರಶಃ ಬೀದಿಪಾಲಾಗುತ್ತದೆ. ಅಂದಾಜಿನ ಪ್ರಕಾರ ಮುನ್ನೂರಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಕಳೆದ ವರ್ಷ ಬಿಡುಗಡೆ ಆಗಬೇಕಿದ್ದ ಸಿನಿಮಾಗಳು ಈಗ ಸ್ವಲ್ಪ ಸುಧಾರಿಸಿಕೊಂಡು ಬರುವ ತಯಾರಿಯಲ್ಲಿವೆ. ಈಗ ನೋಡಿದರೆ, ಪುನಃ ಕೊರೊನಾ ಭಯ ಹುಟ್ಟಿಸುತ್ತಿದೆ. ಹೀಗಾದರೆ, ಹೊಸ ನಿರ್ಮಾಪಕರ ಗತಿ ಏನು?
ಈಗಾಗಲೇ ಕೊರೊನಾದ ಎರಡನೇ ಅಲೆ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ, ಚಿತ್ರೋತ್ಸವ ಕೂಡ ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿದೆ. ಹಲವು ಕಾರ್ಯಕ್ರಮಗಳಿಗೂ ಕಡಿವಾಣ ಬೀಳುತ್ತಿದೆ. ಇದು ಗಂಭೀರವಾಗಿಬಿಟ್ಟರೆ, ಸಿನಿಮಾವನ್ನೇ ನಂಬಿ ಹಣ ಹಾಕಿದವರ ಸ್ಥಿತಿ ಏನಾಗಬೇಡ?

ಕಳೆದ ವರ್ಷ ಕೊರೊನಾ ಎಂಟ್ರಿಯಾಗುವ ಮುನ್ನವೇ, “ದಿಯಾ” ಮತ್ತು “ಲವ್‌ ಮಾಕ್ಟೇಲ್‌” ಚಿತ್ರಗಳು ಗೆದ್ದು ಬೀಗಿದ್ದವು. ಕೊರೊನಾ ಹೊಡೆತದ ಮಧ್ಯದಲ್ಲೂ ಫೀನಿಕ್ಸ್‌ನಂತೆ ಎದ್ದು ಗೆದ್ದಿದ್ದವು. ಈ ವರ್ಷ ಮಾರ್ಚ್‌ನಲ್ಲಿ “ರಾಬರ್ಟ್‌” ಕೂಡ ಬಿಡುಗಡೆಯಾಗಿ ಚಿತ್ರರಂಗಕ್ಕೆ ಒಂದಷ್ಟು ಧೈರ್ಯ ತುಂಬಿದೆ. ಎಲ್ಲಾ ಕಡೆ ಅಬ್ಬರ ಮುಂದುವರೆಸಿದೆ. ಇದರ ಹಿಂದೆಯೇ ಒಂದಷ್ಟು ಸ್ಟಾರ್‌ ಸಿನಿಮಾಗಳು, ಹೊಸಬರ ಸಿನಿಮಾಗಳೂ ಕೂಡ ಅದೇ ಜೋಶ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿವೆ. ಆದರೆ, ಸರ್ಕಾರ ಗಂಭೀರವಾಗಿ ಕ್ರಮ ಕೈಗೊಂಡುಬಿಟ್ಟರೆ, ಪರಿಸ್ಥಿತಿ ಘೋರವಾಗಿರುತ್ತೆ.
ಒಂದು ಸಿನಿಮಾ ಮಾಡುವ ಕಷ್ಟ, ನಿರ್ಮಾಪಕರಿಗಷ್ಟೇ ಗೊತ್ತು. ಎಲ್ಲಿಂದಲೋ ಹಣ ತಂದು, ಸಾಲ ಮಾಡಿ, ಬಡ್ಡಿ ಕಟ್ಟಿ, ಸಿನಿಮಾ ಮಾಡುತ್ತಾನೆ. ಆದರೆ, ಆ ಹಣ ಹಿಂದಿರುಗುತ್ತದೆ ಎಂಬ ಯಾವ ಗ್ಯಾರಂಟಿಯೂ ಇರೋದಿಲ್ಲ. ಒಂದು ಸಿನಿಮಾ ಶುರುವಾದರೆ, ನೂರಾರು ಕುಟುಂಬ ಬದುಕು ಕಟ್ಟಿಕೊಳ್ಳುತ್ತೆ. ಆದರೆ, ಸಿನಿಮಾ ನಿರ್ಮಾಪಕನಿಗೇ ದೊಡ್ಡ ಪೆಟ್ಟು ಬಿದ್ದರೆ, ಅಂತಹ ಕುಟುಂಬಗಳೂ ಪೆಟ್ಟು ತಿನ್ನುತ್ತವೆ. ಬಹಳಷ್ಟು ಸರ್ಕಸ್‌ ಮಾಡಿಯೇ ನಿರ್ಮಾಪಕ ಸಿನಿಮಾ ಮುಗಿಸಿರುತ್ತಾನೆ. ಇನ್ನೇನು ರಿಲೀಸ್‌ಗೆ ಸಜ್ಜಾಗುತ್ತಿರುವ ಹೊತ್ತಿಗೆ ಮತ್ತೊಂದು ಆತಂಕದ ತೂಗುಕತ್ತಿ ನೇತಾಡುತ್ತಿರುವುದು ನಿಜಕ್ಕೂ ಬೇಸರದ ವಿಷಯ. ಸದ್ಯಕ್ಕೆ ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳಲು ಮುಂದಾದರೆ, ಚಿತ್ರರಂಗ ಕೂಡ ಟಾರ್ಗೆಟ್‌ ಆಗಿರುತ್ತೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಹಾಗೆ ಆಗದಿರಲಿ ಎಂಬುದೇ “ಸಿನಿಲಹರಿ” ಆಶಯ.

Categories
ಸಿನಿ ಸುದ್ದಿ

ಅನಘ ಚಿತ್ರತಂಡಕ್ಕೆ ನಟ ಉಪೇಂದ್ರ ಸಾಥ್‌ – ರಿಲೀಸ್‌ಗೆ ರೆಡಿಯಾಗಿರುವ ಸಿನಿಮಾ ಟ್ರೇಲರ್‌ ಹೊರ ಬಂತು

ಸಾಮಾನ್ಯವಾಗಿ ಹೊಸಬರ ಸಿನಿಮಾಗಳಿಗೆ ಸ್ಟಾರ್‌ ನಟರು ಸಾಥ್‌ ಕೊಡುವುದು ಹೊಸದೇನಲ್ಲ. ಸದಾ ಹೊಸಬರ ಚಿತ್ರಗಳ ಟ್ರೇಲರ್‌, ಆಡಿಯೋ, ಟೀಸರ್‌, ಪೋಸ್ಟರ್‌ಗಳ ರಿಲೀಸ್‌ ಮಾಡುವ ಮೂಲಕ ಶುಭಹಾರೈಸುತ್ತಲೇ ಇದ್ದಾರೆ. ಈಗ “ಅನಘ” ಸಿನಿಮಾ ತಂಡಕ್ಕೂ ಉಪೇಂದ್ರ ಸಾಥ್‌ ನೀಡಿದ್ದಾರೆ. ಹೌದು, ದೀಕ್ಷಾ ಫಿಲಂಸ್ ಸಮೂಹ ಸಿನಿಮಾ ಬ್ಯಾನರ್‌ನಡಿ ತಯಾರಾಗಿರುವ ಈ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಉಪೇಂದ್ರ ಅವರು ಟ್ರೇಲರ್‌ ರಿಲೀಸ್‌ ಮಾಡಿ ಶುಭಹಾರೈಸಿದ್ದಾರೆ.

ಡಿ.ಪಿ.ಮಂಜುಳಾ ನಾಯಕ ನಿರ್ಮಾಪಕರು. ರಾಜು ಎನ್.ಆರ್. ಚಿತ್ರದ ನಿರ್ದೇಶಕರು. ಇವರಿಗಿದು ಮೊದಲ ನಿರ್ದೇಶನದ ಸಿನಿಮಾ. ಕಥೆ ಚಿತ್ರಕಥೆ, ಸಂಭಾಷಣೆ ಕೂಡ ಇವರದೇ. ಬಹುತೇಕ ಹೊಸ ಪ್ರತಿಭೆಗಳೇ ಈ ಚಿತ್ರದಲ್ಲಿವೆ. ಇದೊಂದು ಸಸ್ಪೆನ್ಸ್, ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಚಿತ್ರ. ಈ ಮೂಲಕ ಪ್ರೇಕ್ಷಕರನ್ನು ರಂಜಿಸಲು ಚಿತ್ರತಂಡ ಸಜ್ಜಾಗಿದೆ. ಈಗಾಗಲೇ ಬಿಡುಗಡೆಗೆ ಸಜ್ಜಾಗಿರುವ ಚಿತ್ರತಂಡ, ಪ್ರಚಾರ ಕಾರ್ಯಕ್ಕೆ ರೆಡಿಯಾಗಿದೆ. ರಂಗಭೂಮಿ ಪ್ರತಿಭೆ ನಳೀನ್‌ ಕುಮಾರ್ ಮತ್ತು ಪವನ್‌ಪುತ್ರ ಚಿತ್ರದ ಆಕರ್ಷಣೆ. ಇನ್ನುಳಿದಂತೆ “ಸಿಲ್ಲಿ ಲಲ್ಲಿ” ಖ್ಯಾತಿಯ ಶ್ರೀನಿವಾಸ್‌ಗೌಡ್ರು, ಕಿರಣತೇಜ, ಕಿರಣ್‌ರಾಜ್, ಕರಣ್‌ ಆರ್ಯನ್, ದೀಪ, ರೋಹಿತ್, ಖುಷಿ, ರಶ್ಮಿ ಹಾಗೂ ವಿಶೇಷ ಪಾತ್ರದಲ್ಲಿ ನಂಜಪ್ಪ ಬೆನಕ, ಮೋಟು ರವಿ, ಅಭಿ ಮತ್ತು ವಿರೇಶ ಇತರರು ನಟಿಸಿದ್ದಾರೆ. ಇನ್ನು ಬೆಂಗಳೂರು, ದೇವರಾಯನದುರ್ಗದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಶಂಕರ್ ಅವರ ಛಾಯಾಗ್ರಹಣವಿದೆ. ಅವಿನಾಶ್ ಸಂಗೀತ ನೀಡಿದ್ದಾರೆ, ವೆಂಕಿ ಯುಡಿವಿ ಸಂಕಲನ ಮಾಡಿದರೆ, ಕೌರವ ವೆಂಕಟೇಶ್ ಸಾಹಸವಿದೆ.

Categories
ಸಿನಿ ಸುದ್ದಿ

ಮಂಗಳೂರು ಆಟೋ! ಹೀಗೆ ಶುಭಾಪೂಂಜಾಗೆ ಕರೀತಾರಂತೆ!! ಯಾಕೆ ಅಂತ ಸುದೀಪ್‌ ಕೇಳಿದ್ದಕ್ಕೆ ಸ್ಪಷ್ಟನೆ ಕೊಟ್ರು ಶುಭಾ

“ನನ್ನನ್ನು ಎಲ್ಲರೂ ಮಂಗಳೂರು ಆಟೋ ಅಂತಾರೆ…”
ಹೀಗೆ ಹೇಳಿದ್ದು ಬೇರಾರೂ ಅಲ್ಲ, ನಟಿ ಶುಭಾಪೂಂಜಾ. ಸಂದರ್ಭ: ಬಿಗ್‌ಬಾಸ್‌ ರಿಯಾಲಿಟಿ ಶೋ. ಭಾನುವಾರ ಬಿಗ್‌ಬಾಸ್ ಸೀಸನ್ ೮ ರ ಎಲ್ಯುಮಿನೇಷನ್ ಪ್ರಕ್ರಿಯೆ ಮುಗಿದು ಹೋಯಿತು. ಆ ಮನೆಯಲ್ಲಿ ಯಾರು ಇಷ್ಟ ಆಗ್ತಾರೆ? ಯಾರು ಇಷ್ಟ ಆಗಲ್ಲ? ಅಂತ ಸುದೀಪ್‌ ಪ್ರಶ್ನಿಸಿದಾಗ, ಮನೆಯಲ್ಲಿರೋ ಎಲ್ಲರೂ ಒಂದೊಂದು ಹೆಸರನ್ನು ಬೋರ್ಡ್‌ಗೆ ಅಂಟಿಸಿದರು. ಹೆಚ್ಚಿನವರಿಗೆ ಬೈಕ್ ರೈಡರ್ ಅರವಿಂದ್ ಇಷ್ಟವಾದರೆ, ನಿರ್ಮಲಾ ಚೆನ್ನಪ್ಪ ಅವರು ಇಷ್ಟವಾಗಲ್ಲ ಅಂತ ನೇರವಾಗಿ ಹೇಳಿಕೊಂಡರು. ಈ ಪ್ರಕ್ರಿಯೆ ಮುಗಿದ ಬಳಿಕ, ನಟಿ ಶುಭಾಪೂಂಜಾ ಅವರಿಗೆ ಸುದೀಪ್‌ ಅವರಿಂದ ಚಪ್ಪಾಳೆ ಸಿಕ್ಕಿತು. ಅದೇ ಖುಷಿಯಲ್ಲಿ ಶುಭಾ ಮನೆಯ ಸದಸ್ಯರನ್ನು ನಗಿಸಿದರು.

ಈ ವೇಳೆ ಶುಭಾಪೂಂಜಾ, ಹೇಳಿದ್ದಿಷ್ಟು. “ಎಲ್ಲರೂ ನನ್ನನ್ನು ಲಗೇಜ್‌ಗೆ ಹೋಲಿಸುತ್ತಾರೆ. ಮಂಗ್ಳೂರ್ ಆಟೋ ಅಂತಾರೆ. ನಾನು ನಡೆಯೋದು ಹಾಗೇನೆ ಅಂತೆ. ಲಗೇಜ್ ತುಂಬಿಕೊಂಡ ಆಟೋ ತರಹ ನಾನು ನಡೆಯೋದು ಅಂದ್ರು‌. ಮಂಗಳೂರು ಆಟೋಗೆ ಯಾಕೆ ಹೋಲಿಸುತ್ತಾರೆ ಅಂತ ಸುದೀಪ್‌ ಪ್ರಶ್ನಿಸಿದಾಗ, ಶುಭಾ ಹೇಳಿದ್ದು ಹೀಗೆ, “ಬಾಡಿ ಮೊದಲು ಮುಂದಿರುತ್ತದೆ, ಆದ ಮೇಲೆ ನಾನು ನಡೆಯುತ್ತೇನೆ. ಯಾವತ್ತೂ ಮಂಗಳೂರಿನ ಆಟೋಗಳು ಫುಲ್ ಲಗೇಜ್ ತುಂಬಿಕೊಂಡಿರುತ್ತವೆ” ಜೋರು ನಗೆಬುಗ್ಗೆ ಎಬ್ಬಿಸಿದರು ಶುಭಾ.

ಇನ್ನು, ನನಗೆ ಅಳೋಕೆ ಬರೋದಿಲ್ಲ. ಬಿಗ್‌ಬಾಸ್ ಮನೆಯಲ್ಲಿ ಒಳ್ಳೊಳ್ಳೆ ಡ್ರೆಸ್, ಐ ಶಾಡೋ ಹಾಕುತ್ತ ಮಿಂಚಬೇಕು ಅಂತ ಅನ್ಕೊಂಡಿದ್ದೆ. ಕಲರ್ ಕಲರ್ ಬೂಟ್ಸ್ ಹಾಕಬೇಕು ಅಂದುಕೊಂಡಿದ್ದೆ.‌ ಆದರೆ, ಅದು ಯಾವುದು ಇಲ್ಲಿ ಪ್ರಯೋಜನವಿಲ್ಲ. ಕೆಲವೊಮ್ಮೆ ಅಳು ಬರಬೇಕಾದ ವಿಚಾರದಲ್ಲಿ ಅಳು ಬರೋದೆ ಇಲ್ಲ. ಡೈರೆಕ್ಟರ್ ಎಷ್ಟೋ ಬಾರಿ ಬೇಜಾರಾಗುತ್ತಿದ್ದರು‌. ನನಗೆ ಕಾಮಿಡಿ ಸೀನ್‌ಗಳು ಮ್ಯಾಚ್ ಆಗುತ್ತವೆ ಅಂತ ಶುಭಾ ಎಲ್ಲರೆದುರು ತಮ್ಮ ಬಗ್ಗೆ ಹೇಳಿಕೊಂಡರು.

Categories
ಆಡಿಯೋ ಕಾರ್ನರ್

ಕಸ್ತೂರಿ ಹಾಡು! ಮಾ.19ರಂದು ದಿನೇಶ್‌ ಬಾಬು ನಿರ್ದೇಶನದ 50ನೇ ಸಿನಿಮಾ ಕಸ್ತೂರಿ ಮಹಲ್ ಲಿರಿಕಲ್ ಸಾಂಗ್ ರಿಲೀಸ್

ಕನ್ನಡದಲ್ಲಿ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ದಿನೇಶ್ ಬಾಬು ಇದೀಗ “ಕಸ್ತೂರಿ ಮಹಲ್‌” ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಬಹುಬೇಗನೇ ಸಿನಿಮಾದ ಚಿತ್ರೀಕರಣ ಮುಗಿಸಿರವ ದಿನೇಶ್‌ ಬಾಬು, “ಕಸ್ತೂರಿ ಮಹಲ್‌” ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಅಣಿಯಾಗುತ್ತಿದ್ದಾರೆ. ಅದಕ್ಕೂ ಮುನ್ನ ಚಿತ್ರದ ಲಿರಿಕಲ್‌ ವಿಡಿಯೊ ಬಿಡುಗಡೆಯಾಗಲಿದೆ. ಮಾರ್ಚ್‌ 19ರಂದು ಚಿತ್ರದ ಲಿರಿಕಲ್‌ ಹಾಡು ಹೊರಬರುತ್ತಿದ್ದು, ಮೇ ಆಥವಾ ಜೂನ್‌ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ. ಇದು ದಿನೇಶ್‌ ಬಾಬು ನಿರ್ದೇಶನದ 50ನೇ ಸಿನಿಮಾ ಎಂಬುದು ವಿಶೇಷ. ಎ೨ ಮ್ಯೂಸಿಕ್ ಮೂಲಕ ಲಿರಿಕಲ್ ಹಾಡು ಬಿಡುಗಡೆಯಾಗುತ್ತಿದೆ. ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ಬರೆದಿರುವ “ನಾನ್ಯಾರು ನನಗೆ ಯಾರು” ಎಂಬ ಈ ಹಾಡನ್ನು ಅನುರಾಧಾ ಭಟ್ ಹಾಡಿದ್ದಾರೆ.

ಇತ್ತೀಚೆಗೆ ನಟ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ, ಮೆಚ್ಚುಗೆ ಸೂಚಿಸಿದ್ದ ಈ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಜೋರು ಸದ್ದು ಮಾಡುತ್ತಿದೆ. ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸ್ಕಂದ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ಕಾಶಿಮ ರಫಿ, ನೀನಾಸಂ ಅಶ್ವಥ್ , ಅಕ್ಷರ್‌ ಇತರರಿದ್ದಾರೆ.‌

ಇದೊಂದ ಸಸ್ಪೆನ್ಸ್‌, ಹಾರರ್‌ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ದಿನೇಶ್ ಬಾಬು ಅವರೇ ನಿರ್ದೇನದ ಜೊತೆಗೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಶ್ರೀ ಭವಾನಿ‌ ಆರ್ಟ್ಸ್ ಬ್ಯಾನರ್‌ನಲ್ಲಿ ರವೀಶ್ ಆರ್.ಸಿ. ಚಿತ್ರವನ್ನು ನಿರ್ಮಿಸಿದ್ದಾರೆ. ಇವರೊಂದಿಗೆ ನವೀನ್ ಆರ್.ಸಿ. ಹಾಗೂ ಅಕ್ಷಯ್ ಸಿ.ಎಸ್ ಅವರ ಸಹ ನಿರ್ಮಾಣವಿದೆ. ಪಿ.ಕೆ.ಹೆಚ್ ದಾಸ್‌, ಛಾಯಾಗ್ರಹಣವಿದೆ. ಹರೀಶ್ ಕೃಷ್ಣ ಅವರ ಸಂಕಲನ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ಮೈಸೂರಲ್ಲಿ ರತ್ನನ್‌ ಸಂಭ್ರಮ! ಪುನೀತ್‌ ರಾಜ್‌ಕುಮಾರ್ ಬರ್ತ್‌ಡೇಗೆ ಫೀಲ್‌ ದಿ ಪವರ್‌ ಸಾಂಗು‌ ರಿಲೀಸ್ – ಏಪ್ರಿಲ್‌ 1ಕ್ಕೆ ‌ ಯುವರತ್ನ

ಕನ್ನಡದಲ್ಲೀಗ ಸಿನಿಮಾಗಳ ಬಿಡುಗಡೆ ಪರ್ವ. ಸ್ಟಾರ್‌ ಸಿನಿಮಾಗಳು ಬಿಡುಗಡೆಗೆ ಸಾಲುಗಟ್ಟಿವೆ. ಆ ಸಾಲಲ್ಲಿ ಈಗ ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ” ಕೂಡ ಇದೆ. ಏಪ್ರಿಲ್‌ 1ರಂದು ಅದ್ಧೂರಿಯಾಗಿ ರಿಲೀಸ್‌ ಆಗುತ್ತಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ವಿಜಯ್‌ ಕಿರಗಂದೂರು ನಿರ್ಮಾಣದ ಈ ಚಿತ್ರವನ್ನು ಸಂತೋಷ್‌ ಆನಂದರಾಮ್‌ ನಿರ್ದೇಶಿಸಿದ್ದಾರೆ.

ಬಿಡುಗಡೆ ಮುನ್ನ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿರುವ ಚಿತ್ರತಂಡ, ಆ ನಿಟ್ಟಿನಲ್ಲಿ ಜೋರು ತಯಾರಿ ನಡೆಸಿದೆ. ಮಾರ್ಚ್‌ 20ರಂದು ಮೈಸೂರಿನಲ್ಲಿ “ಯುವರತ್ನ” ಈವೆಂಟ್‌ ನಡೆಸಲಿದೆ “ಯುವ ಸಂಭ್ರಮ” ಹೆಸರಲ್ಲಿ ನಡೆಯುವ ಈವೆಂಟ್‌ಗೆ ಈಗಾಗಲೇ ಸಾಕಷ್ಟು ರೂಪುರೇಷೆಗಳು ಸಿದ್ಧಗೊಳ್ಳುತ್ತಿವೆ. ಇತ್ತೀಚೆಗೆ “ಯುವ ಸಂಭ್ರಮ” ಕಾರ್ಯಕ್ರಮದ ಲೋಗೋ ಕೂಡ ಲಾಂಚ್‌ ಮಾಡಲಾಗಿದೆ.

ಮೈಸೂರಲ್ಲಿ ಈವೆಂಟ್‌ ನಡೆಸುವುದಕ್ಕೂ ಮುನ್ನ, ಮಾರ್ಚ್‌ 17ರಂದು ಪುನೀತ್‌ ರಾಜ್‌ಕುಮಾರ್‌ ಅವರ ಬರ್ತ್‌ಡೇ ಹಿನ್ನೆಲೆಯಲ್ಲಿ ಫೀಲ್‌ ದಿ ಪವರ್‌ ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ. ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಅವರು ಹಲವು ಯೋಜನೆ ಹಾಕಿಕೊಂಡ ಬಗ್ಗೆ ಹೇಳುವುದಿಷ್ಟು. “ಮೈಸೂರಲ್ಲಿ ಪ್ರೀ ರಿಲೀಸ್‌ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಅಂದು ಸಂಗೀತ ನಿರ್ದೇಶಕ ತಮನ್‌, ಗಾಯಕರಾದ ವಿಜಯಪ್ರಕಾಶ್‌, ಅರ್ಮಾನ್‌ ಮಲ್ಲಿಕ್‌ ಸೇರಿದಂತೆ ಸಿನಿಮಾ ತಾರೆಯರು ಭಾಗವಹಿಸುತ್ತಿದ್ದಾರೆ.

ಮೈಸೂರಲ್ಲಿ ಕಳೆದ ವರ್ಷ ದಸರಾ ಆಚರಣೆಯಾಗಲಿಲ್ಲ. ಅದನ್ನು ಮರುಕಳಿಸಲು “ಯುವ ಸಂಭ್ರಮ” ಹೆಸರಲ್ಲಿ ಈವೆಂಟ್‌ ಮಾಡಲು ಮುಂದಾಗಿದ್ದೇವೆ. ಮೈಸೂರಿನ ಮಹಾರಾಜಾ ಮೈದಾನದಲ್ಲಿ ಈ ಈವೆಂಟ್‌ ನಡೆಯಲಿದೆ. ಇನನು, ಮಾ.17ರಂದು ಪುನೀತ್‌ ಅವರ ಹುಟ್ಟುಹಬ್ಬ. ಅದಕ್ಕಾಗಿ ಅಂದು “ಫೀಲ್‌ ದ ಪವರ್” ಹಾಡು ಬಿಡುಗಡೆಯಾಗುತ್ತಿದೆ. ಇದೇ ಮೊದಲ ಸಲ ಪುನೀತ್‌ ಅವರ ಈ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಮಾರ್ಚ್‌ 27ರಂದು ಹೈದರಾಬಾದ್‌ನಲ್ಲಿ ದೊಡ್ಡ ಈವೆಂಟ್‌ ನಡೆಯಲಿದೆ. ಏಪ್ರಿಲ್‌ ೧ರಂದು ಚಿತ್ರ ಬಿಡುಗಡೆಯಾಗಲಿದೆ” ಎಂಬುದು ನಿರ್ದೇಶಕರ ಮಾತು.

ತೆಲುಗಿನಲ್ಲಿ “ಯುವರತ್ನ” ಚಿತ್ರವನ್ನು ದಿಲ್‌ ರಾಜು ಹಾಗೂ ಸಾಯಿಕೋರ ರಿಲೀಸ್‌ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರ ದುಬೈ ಅಮೆರಿಕಾ, ಆಸ್ಟೃೇಲಿಯಾದಲ್ಲೂ ರಿಲೀಸ್‌ ಆಗುತ್ತಿದೆ. ಯುಕೆಯಲ್ಲಿ ಥಿಯೇಟರ್‌ ಓಪನ್‌ ಆಗದ ಕಾರಣ, ಅಲ್ಲಿ ರಿಲೀಸ್‌ ಮಾಡುತ್ತಿಲ್ಲ. ವಿಶ್ವದಲ್ಲಿ ಕನ್ನಡಿಗರು ಎಲ್ಲೆಲ್ಲಿ ಇದ್ದಾರೋ, ಅಲ್ಲೆಲ್ಲಾ ಈ ಚಿತ್ರ ರಿಲೀಸ್‌ ಆಗಲಿದೆ ಎಂಬುದು ಚಿತ್ರತಂಡದ ಮಾತು.

ನಟ ಪುನೀತ್ ರಾಜಕುಮಾರ್‌ ಅವರಿಗೆ “ಯುವರತ್ನ” ಚಿತ್ರದ ಮೇಲೆ ಸಾಕಷ್ಟು ಭರವಸೆ ಇದೆಯಂತೆ. ಅದಕ್ಕೆ ಕಾರಣ, ಚಿತ್ರದ ಕಥೆಯಂತೆ. ಆ ಕುರಿತು ಪುನೀತ್‌ ಹೇಳುವುದು ಹೀಗೆ. “ಮೈಸೂರಲ್ಲಿ ಒಳ್ಳೆಯ ಈವೆಂಟ್‌ ಆಗುತ್ತಿದೆ. ಎರಡು ತಿಂಗಳಿನಿಂದ ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿವೆ. ಜನರು ಕೂಡ ಚಿತ್ರಮಂದಿರಕ್ಕೆ ಹೋಗಿ ನೋಡುತ್ತಿದ್ದಾರೆ. ಮುಂದೆಯೂ ಒಳ್ಳೆಯ ಚಿತ್ರಗಳು ಬರುತ್ತವೆ. ನನಗೆ ಹೊಂಬಾಳೆ ಫಿಲಂಸ್‌ ಜೊತೆ ಮೂರನೇ ಸಿನಿಮಾ. ನಿರ್ದೇಶಕ ಜೊತೆ ಎರಡನೇ ಚಿತ್ರ. ಇದು ಅಭಿಮಾನಿಗಳಿಗೆ ಮಾಡಿದ ಸಿನಿಮಾವಲ್ಲ. ಎಲ್ಲಾ ವರ್ಗಕ್ಕೂ ಇಷ್ಟವಾಗುವ ಚಿತ್ರ. ಒಳ್ಳೆಯ ಸಂದೇಶವನ್ನು ಇಲ್ಲಿ ಕಾಣಬಹುದು” ಎನ್ನುತ್ತಾರೆ ಪುನೀತ್.

ಈ ಚಿತ್ರದಲಿ “ಡಾಲಿ” ಧನಂಜಯ್‌ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಆ ಬಗ್ಗೆ ಹೇಳುವ ಅವರು, “ನನಗೆ ಇಲ್ಲಿ ಒಳ್ಳೆಯ ರೋಲ್‌ ಸಿಕ್ಕಿದೆ. ಒಂದೊಳ್ಳೆಯ ಸಿನಿಮಾದ ಭಾಗವಾಗಿದ್ದೇನೆ ಅಂತ ಹೇಳಲು ಖುಷಿಯಾಗುತ್ತಿದೆ. ಸಾಕಷ್ಟು ವ್ಯಾಲ್ಯು ಇರುವಂತಹ ಚಿತ್ರವಿದು. ಈ ಚಿತ್ರ ನೋಡುಗರಿಗೆ ಸಖತ್‌ ಮನರಂಜನೆಯಂತೂ ಸಿಗಲಿದೆ. ಹಾಗೆಯೇ ಒಂದಷ್ಟು ಹೊಸ ವಿಷಯಗಳನ್ನೂ ತಿಳಿದುಕೊಳ್ಳಬಹುದು” ಎನ್ನುತ್ತಾರೆ ಧನಂಜಯ್.‌
ಸೋನುಗೌಡ ಕೂಡ ಇಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಆ ಕುರಿತು ಹೇಳುವ ಸೋನುಗೌಡ, “ನಾನು ಅಪ್ಪು ಸರ್‌ ಜೊತೆ “ರಾಮ್‌” ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದೆ. ಈಗ ಇಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ನಿರ್ದೇಶಕರು ಹೇಳಿದಂತೆಯೇ ಸಿನಿಮಾ ಶೂಟ್‌ ಮಾಡಿದ್ದಾರೆ. ನಾನು ಕೂಡ ಅಪ್ಪು ಅಭಿಮಾನಿ. ಬಿಗ್‌ ಬ್ಯಾನರ್‌ನಲ್ಲಿ, ಬಿಗ್‌ ಸ್ಟಾರ್‌ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ. ಇಲ್ಲಿ ಪ್ರತಿ ಪಾತ್ರಕ್ಕೂ ಆದ್ಯತೆ ಇದೆ ಎಂಬುದು ಸೋನು ಮಾತು.

‌ಚಿತ್ರದಲ್ಲಿ ದಿಗಂತ್ ಸೇರಿದಂತೆ ಹಲವರು ನಟಿಸಿದ್ದಾರೆ. ಇನ್ನು, ಈ ಚಿತ್ರದ ಈವೆಂಟ್‌ ಜವಾಬ್ದಾರಿಯನ್ನು ಶ್ರೇಯಸ್‌ ಮೀಡಿಯಾ ವಹಿಸಿಕೊಂಡಿದೆ. ನವರಸನ್‌ ಈ ಈವೆಂಟ್‌ನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ಶ್ರೇಯಸ್‌ ಮೀಡಿಯಾ “ಪೊಗರು”,”ರಾಬರ್ಟ್”‌ ಚಿತ್ರಗಳ ಈವೆಂಟ್‌ ನಡೆಸಿದೆ. ಇದು ಮೂರನೇ ಈವೆಂಟ್‌ ಎಂಬುದು ವಿಶೇಷ.

Categories
ಸಿನಿ ಸುದ್ದಿ

ಕಲ್ಟ್‌ ಕ್ರಿಟಿಕ್‌ ಮೂವಿ ಅವಾರ್ಡ್‌ನಲ್ಲಿ “ದಾರಿ ಯಾವುದಯ್ಯ ವೈಕುಂಠಕೆ” ಸಿನಿಮಾಗೆ ಮೂರು ಪ್ರಶಸ್ತಿಗಳ ಗರಿ

ಕನ್ನಡ ಸಿನಿಮಾಗಳು ಈಗ ಎಲ್ಲೆಡೆ ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ಆ ಸಾಲಿಗೆ ಈಗ “ದಾರಿ ಯಾವುದಯ್ಯ ವೈಕುಂಠಕೆ” ಸಿನಿಮಾವೂ ಸೇರಿದೆ. ಹೌದು, ಕೊಲ್ಕತ್ತಾದಲ್ಲಿ ನಡೆಯುವ ಕಲ್ಟ್‌ ಕ್ರಿಟಿಕ್‌ ಮೂವಿ ಅವಾರ್ಡ್‌ನಲ್ಲಿ ಒಂದಲ್ಲ, ಎರಡಲ್ಲ ಮೂರು ಪ್ರಶಸ್ತಿಗಳು ಲಭಿಸಿವೆ. ಚಿತ್ರವನ್ನು ಶರಣಪ್ಪ ಎಂ ಕೊಟಗಿ ನಿರ್ಮಾಣ ಮಾಡಿದ್ದಾರೆ.

ಪೂರ್ಣ ಚಂದ್ರ ಅವರಿಗೆ ಉತ್ತಮ‌ ನಿರ್ದೇಶಕ ಪ್ರಶಸ್ತಿ ದಕ್ಕಿದೆ. ನಟ ಬಲ ರಾಜವಾಡಿ ಅವರಿಗೆ ಉತ್ತಮ ಪೋಷಕ ನಟ ಪ್ರಶಸ್ತಿ ಹಾಗೂ ಚಿತ್ರಕ್ಕೆ ಬೆಸ್ಟ್ ಔಟ್ ಸ್ಟಾಂಡಿಂಗ್ ಅಚೀವ್ ಮೆಂಟ್ ಅವಾರ್ಡ್ ಬಂದಿದೆ.‌ ಸಹಜವಾಗಿಯೇ ಈ ಪ್ರಶಸ್ತಿ ಲಭಿಸಿದ್ದು, ಚಿತ್ರತಂಡಕ್ಕೆ ಖುಷಿ ನೀಡಿದೆ. ಚಿತ್ರ ಈಗಾಗಲೇ ಬಿಡುಗಡೆಗೂ ಸಜ್ಜಾಗಿದೆ. ಚಿತ್ರಕ್ಕೆ ಮೂರು ವಿಭಾಗಗಳಲ್ಲಿ ಪ್ರಶಸ್ತಿ ಬಂದಿರುವುದಕ್ಕೆ ಚಿತ್ರತಂಡ ಸಂಭ್ರಮಪಟ್ಟಿದೆ.

ಈಗಾಗಲೇ ಒಂದಷ್ಟು ಚಿತ್ರೋತ್ಸವಗಳಲ್ಲಿ ಈ ಚಿತ್ರ ಆಯ್ಕೆಯಾಗಿದ್ದು, ಪ್ರದರ್ಶನ ಕಾಣಲಿದೆ. ಚಿತ್ರದಲ್ಲಿ ವರ್ಧನ್ ನಾಯಕರಾಗಿ ಅಭಿನಯಿಸಿದ್ದಾರೆ. ಪೂಜ (ತಿಥಿ ಖ್ಯಾತಿ), ಬಲ ರಾಜವಾಡಿ, ಶೀಬಾ, ಪ್ರಶಾಂತ್ ರಾವ್ ವರ್ಕು, ಅನುಷಾ, ಸ್ಪಂದನ ಪ್ರಸಾದ್, ಅರುಣ್ ಮೂರ್ತಿ ಮುಂತಾದವರು ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಚಿರು ಅಭಿನಯದ ಕೊನೆಯ ಸಿನಿಮಾ ಮಾರ್ಚ್‌ 26ಕ್ಕೆ ರಿಲೀಸ್‌- ರಣಂ ಚಿತ್ರದಲ್ಲಿ ಸರ್ಜಾ ಪೊಲೀಸ್‌ ಅಧಿಕಾರಿ

ನಟ ಚಿರಂಜೀವಿ ಸರ್ಜಾ ಅಭಿನಯದ “ರಣಂ” ಸಿನಿಮಾವೊಂದು ಇದೀಗ ಬಿಡುಗಡೆಗೆ ಸಜ್ಜಾಗಿದೆ. ಹೌದು, “ರಣಂ” ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ‌ ಚೇತನ್‌ (ಆ ದಿನಗಳು) ಹೀರೋ. ಇದರಲ್ಲಿ ವಿಶೇಷ ಪಾತ್ರದ ಮೂಲಕ ಚಿರಂಜೀವಿ ಸರ್ಜಾ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರ ಮಾರ್ಚ್‌ ೨೬ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸುಮಾರು 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ “ರಣಂ” ತೆರೆ ಕಾಣಲಿದೆ ಎಂಬುದು ವಿಶೇಷ. ಈಗಾಗಲೇ ಕನ್ನಡದಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟಿರುವ ಆರ್. ಎಸ್. ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಆರ್. ಶ್ರೀನಿವಾಸ್ (ಕನಕಪುರ) ಅವರು ನಿರ್ಮಾಣ ಮಾಡಿದ್ದಾರೆ. ಇದು ಅವರ 21ನೇ ಚಿತ್ರ. ಇವರೊಂದಿಗೆ ಕಿರಣ್ ಗೌಡ ಈ ಚಿತ್ರದ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.‌

“ರಣಂ” ಚಿರಂಜೀವಿ ಸರ್ಜಾ‌ ಅವರು ನಟಿಸಿ, ಡಬ್ಬಿಂಗ್ ಮಾಡಿರುವ ಕೊನೆಯ ಚಿತ್ರ. ವಿ.ಸಮುದ್ರ ನಿರ್ದೇಶನದ ಈ ಚಿತ್ರಕ್ಕೆ ರವಿಶಂಕರ್ ಹಾಗೂ ಎಸ್ ಚಿನ್ನ ಸಂಗೀತ ನೀಡಿದ್ದಾರೆ. ನಿರಂಜನ್ ಬಾಬು ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಥ್ರಿಲ್ಲರ್ ಮಂಜು, ರವಿವರ್ಮ ಹಾಗೂ ವಿಜಯ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಚೇತನ್ ಕುಮಾರ್ ಹಾಗೂ ಎ.ಪಿ.ಅರ್ಜುನ್ ರಚಿಸಿದ್ದಾರೆ. ಸಂಭಾಷಣೆಯನ್ನು ಪಾರ್ವತಿ ಚಂದು ಮತ್ತು ಮೋಹನ್ ಬರೆದಿದ್ದಾರೆ. ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಮಧುಸೂದನ್, ಕಾರ್ತಿಕ್, ಅಭಿಲಾಶ್, ಹರೀಶ್, ಪ್ರವೀಣ್, ಬೆಸೆಂಟ್ ರವಿ ಮುಂತಾದವರು ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಇಷ್ಟರಲ್ಲೇ ಸಿಗಲಿದೆ ಮೋಕ್ಷ! ಮಾರ್ಚ್ 27ಕ್ಕೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಟ್ರೇಲರ್ ರಿಲೀಸ್

ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆ. ಬರಲು ಸಜ್ಜಾಗಿವೆ ಈಗಲೂ ಒಂದಷ್ಟು ಹೊಸಬರ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾಗಳು ಸೆಟ್ಟೇರುತ್ತಲೇ ಇವೆ. ಆದರೆ, ಎಲ್ಲಾ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ ಕಥಾಹಂದರ ಒಳಗೊಳ್ಳುವ ಮೂಲಕ ಹೊಸತನ ಸೃಷ್ಟಿಸಲು ಬರುತ್ತಿವೆ. ಆ ಸಾಲಿಗೆ ಈಗ ಮತ್ತೊಂದು ಹೊಸಬರ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಕೂಡ ಸೇರಿದೆ. ಆ ಚಿತ್ರಕ್ಕೆ “ಮೋಕ್ಷ” ಎಂದು ಹೆಸರಿಡಲಾಗಿದೆ.

ಇದೊಂದು ವಿಭಿನ್ನ ಶೀರ್ಷಿಕೆ ಇರುವ ಸಿನಿಮಾ. ಅಂತೆಯೇ ಚಿತ್ರದ ಕಥೆ ಕೂಡ ಅಷ್ಟೇ ವಿಭಿನ್ನವಾಗಿದೆ. ಅಂದಹಾಗೆ, ಇದೀಗ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್‌ 27ರಂದು ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.‌ ಈ ಚಿತ್ರಕ್ಕೆ ಸಮರ್ಥ್‌ ನಾಯಕ್‌ ನಿರ್ದೇಶಕರು. ಚಿತ್ರದ ಕಥೆ, ಚಿತ್ರಕಥೆ ಜವಾಬ್ದಾರಿಯೂ ಇವರದೇ. ಇದು ಇವರಿಗೆ ಮೊದಲ ನಿರ್ದೇಶನದ ಸಿನಿಮಾ ಆಗಿದ್ದರೂ, ನಿರ್ದೇಶನದ ಅನುಭವ ಇವರಿಗಿದೆ. ಈಗಾಗಲೇ ಸಾಕಷ್ಟು ಜಾಹೀರಾತು ನಿರ್ಮಿಸಿ ಅನುಭವವಿರುವ ಸಮರ್ಥ್ ನಾಯಕ್, ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.

ಇದೊಂದು ಗೊಂದಲಗೊಳಿಸುವ, ರೋಚಕತೆ ಎನಿಸುವ, ಭಯಾನಕ, ನಿಗೂಢ ಕಥೆ ಇರುವಂತಹ ಸಸ್ಪೆನ್ಸ್‌ ಇದರಲ್ಲಿದೆ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಸಮರ್ಥ್‌ ನಾಯಕ್.‌ ಚಿತ್ರದ ಎಲ್ಲಾ ಪಾತ್ರಗಳಲ್ಲೂ ವಿಶೇಷತೆ ಇದೆ. ವಿಶೇಷವಾಗಿ ಮಾಸ್ಕ್ ಮ್ಯಾನ್ ಎಂಬ ಪಾತ್ರ ಚಿತ್ರದ ಮುಖ್ಯ ಆಕರ್ಷಣೆ ಎಂಬುದು ನಿರ್ದೇಶಕರ ಮಾತು.

ಜಯಂತ್ ಕಾಯ್ಕಿಣಿ, ಕುಮಾರ್ ದತ್ ಅವರು ಬರೆದಿರುವ ಎರಡು ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಕಿಶನ್ ಮೋಹನ್ ನೀಡಿದ್ದಾರೆ. ಗುರುಪ್ರಶಾಂತ್ ರೈ, ಜೋಮ್ ಜೋಸಫ್, ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದರೆ, ವರುಣ್ ಕುಮಾರ್ ಅವರ ಸಂಕಲನ ಚಿತ್ರಕ್ಕಿದೆ. ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಾರಕ್ ಪೊನ್ನಪ್ಪ, ಭೂಮಿ ಅಜ್ಞಾನಿ, ಪ್ರಶಾಂತ್ ನಟನ ಮುಂತಾದ ವರು ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಕಲಾಪೋಷಕರ ಮಠಕ್ಕೊಂದು ಭಕ್ತಿಗೀತೆ! ಸಿದ್ಧವಾಗಲಿದೆ ಸಿದ್ಧನಕೊಳ್ಳ ಮಠದ ಭಕ್ತರ ಅರ್ಥ ಪೂರ್ಣ ಹಾಡು !

ಸಿನಿಮಾ ಮಂದಿಗೂ ಮಠಗಳಿಗೂ ಅವಿನಾಭಾವ ಸಂಬಂಧವಿದೆ. ಕೆಲವು ರಾಜಕಾರಣಿಗಳಿಗೂ ಕೂಡ ಮಠಗಳೆಂದರೆ ಅಚ್ಚುಮೆಚ್ಚು ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದಕ್ಕೆ ಕಾರಣ, ಆಯಾ ಮಠಗಳ ಶ್ರೀಗಳ ಆಶೀರ್ವಾದದಿಂದಲೇ ಇಂದು ಉನ್ನತ ಹುದ್ದೆ ಅಲಂಕರಿಸಿರುವ ಅದೆಷ್ಟೋ ರಾಜಕಾರಣಿಗಳಿದ್ದಾರೆ. ಅಂತೆಯೇ, ಕಲಾವಿದರು ಕೂಡ ಗುರುತಿಸಿಕೊಂಡು ಬೆಳೆದಿದ್ದೂ ಇದೆ. ಇಷ್ಟಕ್ಕೂ ಈಗ ಇಲ್ಲೇಕೆ ಮಠಗಳ ವಿಷಯ ಎಂಬ ಪ್ರಶ್ನೆ ಎದುರಾಗಬಹುದು. ಈ ಸುದ್ದಿಗೆ ಕಾರಣ, ಸಿದ್ಧನಕೊಳ್ಳ ಮಠದ ಗುರು ಶ್ರೀ ಡಾ.ಶಿವಕುಮಾರ ಶ್ರೀಗಳು. ಹೌದು, ಸಿದ್ಧನಕೊಳ್ಳ ಮಠ ಅಂದರೆ, ಅದೊಂದು ಭಕ್ತಿತಾಣ. ನೆಮ್ಮದಿ ವಾತಾವರಣ ಸೃಷ್ಠಿಸುವ ಜಾಗ. ಸಿದ್ಧನಕೊಳ್ಳ ಮಠ ಈಗ ಸುದ್ದಿಯಲ್ಲಿದೆ. ಇದರ ಇತಿಹಾಸ ದೊಡ್ಡದೇ ಇದೆ. ಈ ಮಠಕ್ಕೂ ಸಿನಿಮಾ ಕಲಾವಿದರಿಗೂ ಸಾಕಷ್ಟು ನಂಟಿದೆ ಅಂದರೆ ನಂಬಲೇಬೇಕು.

ಹೌದು, 1974ರಲ್ಲಿ ಬಂದ “ಸಂಪತ್ತಿಗೆ ಸವಾಲ್‌” ಚಿತ್ರದ ಚಿತ್ರೀಕರಣ ಕೂಡ ಇದೇ ಸಿದ್ಧನಕೊಳ್ಳದಲ್ಲಿ ನಡೆದಿದೆ. ಆ ಸಂದರ್ಭದಲ್ಲಿ ಮಠದ ಶ್ರೀಗಳು ಡಾ.ರಾಜಕುಮಾರ್‌ ಅವರಿಗೆ ಪ್ರೀತಿಯಿಂದಲೇ ಆಶೀರ್ವದಿಸಿ, ನಾಡಿನಲ್ಲಿ ಒಳ್ಳೆಯ ಗಾಯಕರಾಗುತ್ತೀರಿ ಅಂತಾನೂ ಹೇಳಿ ಆಶೀರ್ವದಿಸಿದ್ದರಂತೆ. ಆಮೇಲೆ ಡಾ.ರಾಜಕುಮಾರ್‌ ಯಾವ ಮಟ್ಟದ ಗಾಯಕರಾದರು ಅನ್ನೋದು ಎಲ್ಲರಿಗೂ ಗೊತ್ತು. ಸಿದ್ಧನಕೊಳ್ಳದ ಮಠ ಅಂದರೆ, ಅದು ಕಲಾಪೋಷಕರ ಮಠ ಅಂತ ಕರೆಸಿಕೊಳ್ಳುತ್ತದೆ.

ಅದಕ್ಕೆ ಕಾರಣ, ಪ್ರತಿ ವರ್ಷವೂ ಈ ಮಠ ಸಿದ್ಧಶ್ರೀ ಪ್ರಶಶಸ್ತಿ ಪ್ರದಾನ ಮಾಡಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ. ಈಗ ಕೊರೊನಾ ಹಾವಳಿ ನಂತರವೂ ಮಠ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಲು ತಯಾರು ನಡೆಸುತ್ತಿದೆ. ಹಾಗೆ, ನೋಡಿದರೆ, ಉತ್ತರ ಕರ್ನಾಟಕದಲ್ಲಿ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ.
ಇಷ್ಟಕ್ಕೂ ಈ ಸಿದ್ಧನಕೊಳ್ಳ ಮಠದ ಬಗ್ಗೆ ಹೇಳೋಕೆ ಕಾರಣ, “ಸಿದ್ಧನಕೊಳ್ಳ ಭಕ್ತರ ಗೀತೆ” ಎಂಬ ಹೆಸರಿನ ಆಲ್ಬಂ ಸಾಂಗ್‌ ಮಾಡಲು ತಯಾರಿ ನಡೆದಿದೆ.

ಈ ಆಲ್ಬಂ ಸಾಂಗ್‌ಗೆ ನಿರ್ದೇಶಕ ಗೋಪಿ ಕೆರೂರ್‌ ನೇತೃತ್ವ ವಹಿಸುತ್ತಿದ್ದಾರೆ. ಅವರೇ ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಬಾಲಸುಬ್ರಹ್ಮಣ್ಯಂ ಅವರ ಶಿಷ್ಯರಾಗಿರುವ ಉದಯ್‌ ಅಂಕೋಲ ಅವರ ಸಂಗೀತವಿದೆ. ಜೊತೆಗೆ ಹಾಡುಗಳಿಗೆ ಅವರೇ ಧ್ವನಿಯಾಗಿದ್ದಾರೆ. ಈ ಆಲ್ಬಂ ವಿಶೇಷವೆಂದರೆ, ಸಿದ್ಧನಕೊಳ್ಳ ಮಠದ ಜೊತೆಗೆ ಮಹಾಕೂಟೇಶ್ವರ ಮತ್ತು ಬಾದಾಮಿ ಬನಶಂಕರಿ ದೇವಿ ಮೇಲೆಯೂ ಹಾಡುಗಳು ರಚಿತವಾಗಿವೆ. ಸಿದ್ಧನಕೊಳ್ಳ ಮಠದ ಗುರುಗಳಾದ ಡಾ. ಶ್ರೀ ಶಿವಕುಮಾರ್ ಸ್ವಾಮೀಜಿಗಳು ಈ ಆಲ್ಬಂನ ಮುಖ್ಯ ಆಕರ್ಷಣೆ. ಹೌದು, ಈ ಆಲ್ಬಂನಲ್ಲಿ ಶ್ರೀಗಳು ಕೂಡ ನಟಿಸುತ್ತಿದ್ದಾರೆ ಎಂಬುದು ವಿಶೇಷ. ಸಹಜವಾಗಿಯೇ ಸಿದ್ಧನಕೊಳ್ಳ ಮಠದ ಭಕ್ತರಿಗೆ ಶ್ರೀಗಳ ನೇತೃತ್ವದಲ್ಲಿ ಸಿದ್ಧಗೊಳ್ಳುತ್ತಿರುವ ಆಲ್ಬಂನಲ್ಲಿ ಶ್ರೀಗಳು ನಟಿಸುತ್ತಿರುವುದು ಕೂಡ ಸಂತೋಷ ತಂದಿದೆ.


ಆಲ್ಬಂನಲ್ಲಿರುವ ನಾಲ್ಕು ಭಕ್ತಿಗೀತೆಗಳು ಸಿನಿಮಾ ಶೈಲಿಯಲ್ಲೇ ಮೂಡಿಬರಲಿದೆ ಎಂಬುದನ್ನು ವಿವರಿಸುತ್ತಾರೆ ನಿರ್ದೇಶಕ ಗೋಪಿ ಕೆರೂರ್. “ಸಿದ್ಧನಕೊಳ್ಳ ಭಕ್ತರ ಗೀತೆʼ ಆಲ್ಬಂ ನಿರ್ದೇಶನದ ಬಗ್ಗೆ ಹೇಳುವ ಗೋಪಿ ಕೆರೂರ್‌, “ಈ ಆಲ್ಬಂಗೆ ಗೀತೆ ಬರೆಯಲು ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ. ದೇವರ ಬಗ್ಗೆ ನಾಲ್ಕು ಪದ ಬರೆಯುವುದು ಖುಷಿ ಕೊಟ್ಟಿದೆ. ಸಿದ್ಧನಕೊಳ್ಳ ಮಠದ ಶ್ರೀಗಳ ಪ್ರೋತ್ಸಾಹವೇ ಇದಕ್ಕೆ ಕಾರಣ. ಮಾರ್ಚ್‌ ಅಂತ್ಯದಲ್ಲಿ ಈ ಆಲ್ಬಂಗೆ ಚಾಲನೆ ಸಿಗಲಿದೆ.
ಅದ್ಧೂರಿಯಾಗಿಯೇ ಆಲ್ಬಂ ಚಿತ್ರೀಕರಿಸುವ ಯೋಜನೆ ಇದೆ. ಎಪಿಕ್‌ ಕ್ಯಾಮೆರಾ ಬಳಸಿ, ಸುಮಾರು ಹದಿನೈದು ದಿನಗಳ ಕಾಲ ಚಿತ್ರೀಕರಿಸಲು ಉದ್ದೇಶಿಸಲಾಗಿದೆ. ಒಟ್ಟು, ಈ ಆಲ್ಬಂಗೆ ಹತ್ತು ಲಕ್ಷಕ್ಕೂ ಹೆಚ್ಚು ವೆಚ್ಚವಾಗಲಿದೆ. ಬನಶಂಕರಿ, ಮಹಾಕೂಟ, ಸಿದ್ಧನಕೊಳ್ಳ, ಹುಲಿಗೆಮ್ಮನ ಕೊಳ್ಳ ಸೇರಿದಂತೆ ಇತರೆ ತಾಣಗಳಲ್ಲಿ ಆಲ್ಬಂ ಚಿತ್ರೀಕರಣ ನಡೆಯಲಿದೆ.

ಇನ್ನು, ಇಲ್ಲಿ ಪ್ರತಿ ದಿನ ಸುಮಾರು 150 ರಿಂದ 200 ಜನ ಜೂನಿಯರ್‌ ಕಲಾವಿದರನ್ನು ಇಟ್ಟುಕೊಂಡು ಹಾಡುಗಳನ್ನು ಚಿತ್ರೀಕರಿಸಲಾಗುವುದು. ಇವರೊಂದಿಗೆ ಇಬ್ಬರು ಜನಪ್ರಿಯ ತಾರೆಯರೂ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ” ಎಂದು ವಿವರಿಸುತ್ತಾರೆ ಗೋಪಿ ಕೆರೂರ್. ಉತ್ತರ ಕರ್ನಾಟಕದ ಇಳಕಲ್‌ ತಾಲೂಕಿನಲ್ಲಿರುವ ಸಿದ್ಧನಕೊಳ್ಳ ಮಠ, ಐಹೊಳೆ-ಪಟ್ಟದಕಲ್ಲು ಸ್ಥಳದಿಂದ ಹತ್ತು ಕಿ.ಮೀ.ದೂರದಲ್ಲಿದೆ. ಈಗಾಗಲೇ ಈ ಮಠಕ್ಕೆ ಹಲವು ರಾಜಕಾರಣಿಗಳು, ಸಿನಿಮಾ ತಾರೆಯುರು ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಕಲಾಪೋಷಕರ ಮಠ ಎಂದೇ ಗುರುತಿಸಿಕೊಂಡಿರುವ ಈ ಮಠದ ಬಗ್ಗೆ ಇದೇ ಮೊದಲ ಸಲ ಆಲ್ಬಂ ಸಾಂಗ್‌ ಚಿತ್ರೀಕರಿಸಲಾಗುತ್ತಿದೆ.

Categories
ಸಿನಿ ಸುದ್ದಿ

ಬಾಕ್ಸಾಫೀಸ್‌ ಸುಲ್ತಾನ್‌ ಮತ್ತೆ ಸೌಂಡು- ಗಳಿಕೆಯಲ್ಲಿ ಹೊಸ ದಾಖಲೆ ಬರೆದ ರಾಬರ್ಟ್!

ಕನ್ನಡದ ಬಹುನಿರೀಕ್ಷಿತ ಚಿತ್ರ “ರಾಬರ್ಟ್‌” ಅಬ್ಬರ ಎಲ್ಲೆಡೆ ಜೋರಾಗಿದೆ. ಬಿಡುಗಡೆಯಾದ ಮೊದಲ ದಿನವೇ ಬಾಕ್ಸಾಫೀಸ್‌ ಚಿಂದಿ ಉಡಾಯಿಸಿದೆ. ಬಾಕ್ಸ್‌ ಆಫೀಸ್‌ ಸುಲ್ತಾನ್‌ ಎಂದೇ ಕರೆಸಿಕೊಳ್ಳುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ “ರಾಬರ್ಟ್‌” ಗಳಿಕೆಯಲ್ಲಿ ದೊಡ್ಡ ಮೊಟ್ಟದ ದಾಖಲೆ ಬರೆದಿದೆ. ಚಿತ್ರತಂಡ ಅಧಿಕೃತವಾಗಿಯೇ ಮೊದಲ ದಿನದ ಕಲೆಕ್ಷನ್‌ ರಿಪೋರ್ಟ್‌ ಹೊರ ಹಾಕಿದೆ. ಅವರ ಕಲೆಕ್ಷನ್‌ ರಿಪೋರ್ಟ್‌ ಪ್ರಕಾರ, “ರಾಬರ್ಟ್‌” ಚಿತ್ರ ಕರ್ನಾಟಕದಲ್ಲಿ 17.24ಕೋಟಿ ರೂ. ಗಳಿಕೆ ಕಂಡಿದೆ. ಈ ಮೂಲಕ ಅಚ್ಚರಿಯನ್ನೂ ಮೂಡಿಸಿದೆ.

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ “ರಾಬರ್ಟ್” ಮಾರ್ಚ್11ರ ಶಿವರಾತ್ರಿ ಹಬ್ಬದಂದು ಅದ್ದೂರಿಯಾಗಿ ತೆರೆಗೆ ಬಂದಿದ್ದು ಎಲ್ಲರಿಗೂ ಗೊತ್ತಿದೆ. ಕರ್ನಾಟಕ ಸೇರಿದಂತೆ ಇತರೆ ರಾಜ್ಯದಲ್ಲೂ ತೆರೆಕಂಡಿರುವ “ರಾಬರ್ಟ್” ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯಕ್ಕೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ “ರಾಬರ್ಟ್” ತನ್ನ ಮೊದಲ ದಿನದ ಕಲೆಕ್ಷನ್ನಲ್ಲಿ ದಾಖಲೆ ಬರೆದು ಬೀಗುತ್ತಿದೆ.
ಕನ್ನಡ ಚಿತ್ರವೊಂದು ಮೊದಲ ದಿನವೇ ದೊಡ್ಡ ಮೊತ್ತದ ಗಳಿಕೆ ಕಂಡಿರವುದು ಕನ್ನಡ ಚಿತ್ರರಂಗದ ವಿಚಾರದಲ್ಲಿ ಖುಷಿಯ ಸಂಗತಿ. ಇನ್ನು ಹೈದರಾಬಾದ್‌ನಲ್ಲೂ “ರಾಬರ್ಟ್” ಉತ್ತಮ ಗಳಿಕೆ ಕಂಡಿದೆ. ಮೊದಲ ದಿನ ಆಂಧ್ರ ಹಾಗು ತೆಲಂಗಾಣದಲ್ಲಿ 3.12 ಕೋಟಿ ರೂ. ಬಾಚಿದ್ದು, ದರ್ಶನ್ ಅವರ ಚಿತ್ರ ಮೊದಲ ಸಲ ತೆಲುಗಿನಲ್ಲಿ ಅದ್ದೂರಿ ಬಿಡುಗಡೆ ಕಂಡಿದೆ.

ಇನ್ನು, ಚಿತ್ರಮಂದಿರಗಳ ವಿಚಾರದಲ್ಲೂ ದಾಖಲೆ ನಿರ್ಮಿಸಿದ್ದ “ರಾಬರ್ಟ್”, ಕನ್ನಡ ಮತ್ತು ತೆಲುಗಿನಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಕರ್ನಾಟಕದಲ್ಲಿ ಏರಿಯಾ ಗಳಿಕೆ ಕುರಿತು ಹೇಳುವುದಾದರೆ, ಬಿಕೆಟಿ ಮತ್ತು ಸೌತ್‌ ಕೆನರಾ 2 ಕೋಟಿ, ಎಂಎಂಸಿಎಚ್‌ 2 ಕೋಟಿ, ಚಿತ್ರದುರ್ಗ ಮತ್ತು ದಾವಣಗೆರೆ 2.24 ಕೋಟಿ, ಶಿವಮೊಬ್ಬ 1 ಕೋಟಿ, ಹೈದರಾಬಾದ್‌ ಕರ್ನಾಟಕ 3 ಕೋಟಿ, ಬಾಂಬೆ ಕರ್ನಾಟಕ 2 ಕೋಟಿ ರೂ.ಗಳಿಕೆ ಕಂಡಿದೆ.

ಇದು ನಿಜಕ್ಕೂ ಹೆಮ್ಮೆಯ ವಿಷಯವೇ. ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿಕೆ ಕಂಡಿದೆ ಎಂಬುದನ್ನಿಲ್ಲಿ ಗಮನಿಸಬಹುದು. ಮೊದಲ ಬಾರಿಗೆ ಕನ್ನಡದ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮಾರ್ಚ್11ರ ಬೆಳಗ್ಗೆ 6 ಗಂಟೆಯಿಂದಲೇ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಸಾಲುಗಟ್ಟಿ ನಿಂತು ಚಿತ್ರ ವೀಕ್ಷಿಸಿದ್ದು ವಿಶೇಷ. ಎರಡನೇ ದಿನದಲ್ಲೂ “ರಾಬರ್ಟ್‌” ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿರುವುದು ಸಹಜವಾಗಿಯೇ ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ.

error: Content is protected !!