ಸಿನಿಮಾ ಅನ್ನೋದೇ ಹಾಗೆ. ಇಲ್ಲಿ ಒಮ್ಮೆ ಎಂಟ್ರಿಯಾದರೆ ಮುಗೀತು. ಒಂದು ವಿಭಾಗದಲ್ಲಿ ಕಲಿತವರು ಮೆಲ್ಲನೆ ಒಂದೊಂದೇ ವಿಭಾಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮೇಲೇಳಬೇಕು, ಗುರುತಿಸಿಕೊಂಡು ಏನಾದರೊಂದು ಸಾಧನೆ ಮಾಡಬೇಕು ಅನ್ನುವ ಛಲ ಬಂದೇ ಬರುತ್ತೆ. ಈ ನಿಟ್ಟಿನಲ್ಲಿ ಯುವ ನಟ ಶ್ರೇಯಸ್ ಚಿಂಗ ಕೂಡ ಸೇರಿದ್ದಾರೆ.
ಇವರೊಬ್ಬರೇ ಅಲ್ಲ, ಇವರೊಂದಿಗೆ ನಟಿ ಎಸ್ಟರ್ ನರೋನ್ಹಾ ಕೂಡ ಸೇರಿದ್ದಾರೆ ಅನ್ನೋದು ಈ ಹೊತ್ತಿನ ವಿಶೇಷ. ಹೌದು, ನಟನಾಗಿ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಶ್ರೇಯಸ್ ಚಿಂಗ ಈಗ ಮೊದಲ ಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ನಟಿಯಾಗಿದ್ದ ಎಸ್ಟರ್ ನರೋನ್ಹಾ ಅವರು ಕೂಡ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅಂದಹಾಗೆ, ಶ್ರೇಯಸ್ ಚಿಂಗ ನಿರ್ದೇಶನದ ಚಿತ್ರಕ್ಕೆ “ದಿ ವೇಕೆಂಟ್ ಹೌಸ್” ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರ ಕನ್ನಡದ ಜೊತೆಯಲ್ಲಿ ಕೊಂಕಣಿ ಭಾಷೆಯಲ್ಲೂ ತಯಾರಾಗುತ್ತಿದೆ ಎಂಬುದು ವಿಶೇಷ.
ಚಿತ್ರವನ್ನು ಜಾನೆಟ್ ನೊರೊನ್ಹಾ ಪ್ರೊಡಕ್ಷನ್ಸ್ ಮೂಲಕ ಜಾನೆಟ್ ನೊರೊನ್ಹಾ ನಿರ್ಮಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಏಪ್ರಿಲ್ ೫ರಂದು ಚಿತ್ರದ ಫಸ್ಟ್‌ಲುಕ್ ರಿಲೀಸ್ ಆಗಿದೆ.
ನಿರ್ದೇಶಕ ಶ್ರೇಯಸ್ ಚಿಂಗ ಅವರು ನಟನೆ ಜೊತೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಅವರು ಸುಮಾರು 150೦ಕ್ಕೂ ಹೆಚ್ಚು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವುದರಿಂದ ಅವರಿಗೆ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಂಬಿಕೆ ಇದೆ. ಇನ್ನು ನಟಿ ಎಸ್ಟರ್ ನರೋನ್ಹಾ ಅವರಿಗೂ ಇದು ಮೊದಲ ಸಂಗೀತ ನಿರ್ದೇಶನದ ಅನುಭವ. ಅವರಿಗೂ ಒಳ್ಳೆಯ ಕಥೆ ಇರುವ ಚಿತ್ರಕ್ಕೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ.
ನಿರ್ಮಾಪಕ ಜಾನೆಟ್ ನೊರೊನ್ಹಾ ಅವರಿಗೆ ಇದು ಮೂರನೇ ನಿರ್ಮಾಣದ ಸಿನಿಮಾ. ಈ ಹಿಂದೆ ಅವರು “ಸೋಫಿಯಾ ಎ ಡ್ರೀಮ್ ಗರ್ಲ್” ಎಂಬ ಸಿನಿಮಾ ಮಾಡಿದ್ದರು. ಇದಕ್ಕೆ 2018ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ನಂತರ ಜಾಕಿಶ್ರಾಫ್ ಮತ್ತು ಎಸ್ಟರ್ ನೊರೊನ್ಹಾ ನಟಿಸಿದ “ಕಾಂತಾರ್” ೆಂಬ ಕೊಂಕಣಿ ಸಿನಿಮಾ ಕೂಡ ನಿರ್ಮಿಸಿದ್ದರು. ವಿದೇಶದಲ್ಲಿ ಈ ಚಿತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು. ಈಗ “ದಿ ವೇಕೆಂಟ್ ಹೌಸ್” ಸಿನಿಮಾ ಮಾಡಿದ್ದಾರೆ. ಚಿತ್ರಕ್ಕೆ ಎಸ್ಟರ್ ನರೋನ್ಹಾ ಅವರು ಸಂಗೀತದ ಜೊತೆ ಸಾಹಿತ್ಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ನಿರ್ದೇಶಕರೂ ಇಲ್ಲಿ ನಿರ್ದೇಶನದ ಜೊತೆ ಮಾತುಗಳನ್ನು ಪೋಣಿಸಿದ್ದಾರೆ. ವಿಜಯ್ ರಾಜ್ ಸಂಕಲನವಿದೆ. ಸದ್ಯ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು, ಇಷ್ಟರಲ್ಲೇ ಸಿನಿಮಾದ ಪೂರ್ಣ ಮಾಹಿತಿ ಕೊಡುವುದಾಗಿ ನಿರ್ದೇಶಕ ಶ್ರೇಯಸ್ ಚಿಂಗ ಹೇಳಿದ್ದಾರೆ.