ಕಬ್ಜ ಶೂಟಿಂಗ್ ವೇಳೆ ಅವಘಡ : ಉಪ್ಪಿ ತಲೆಗೆ ಬಿತ್ತು ಪೆಟ್ಟು ಅಪಾಯದಿಂದ ಪಾರಾದ ರಿಯಲ್‌ಸ್ಟಾರ್ ಉಪೇಂದ್ರ

ಚಿತ್ರೀಕರಣ ಸಮಯದಲ್ಲಿ ಆಗಾಗ ಒಂದಷ್ಟು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಇದು ಹೊಸದೇನಲ್ಲ. ಎಷ್ಟೋ ಸಲ, ಸಾಹಸ ಸನ್ನಿವೇಶಗಳಲ್ಲಿ ಇಂತಹ ಅವಘಡಗಳು ಸಂಭವಿಸುವುದುಂಟು. ಈಗ ಇಲ್ಲಿ ಹೇಳಹೊರಟಿರುವ ವಿಷಯ, “ಕಬ್ಜ’ ಚಿತ್ರದ್ದು. ಹೌದು, ಉಪೇಂದ್ರ ಅಭಿನಯದ “ಕಬ್ಜ” ಆರಂಭದಿಂದಲೂ ಜೋರು ಸದ್ದು ಮಾಡುತ್ತಲೇ ಇದೆ. ಈಗ ಮತ್ತೊಂದು ಸುದ್ದಿಗೂ ಕಾರಣವಾಗಿದೆ. ಹಾಗಂತ, ಅದು ಖುಷಿ ಪಡುವ ಸುದ್ದಿಯಲ್ಲ. ಬದಲಾಗಿ, ಬೇಸರ ಪಡುವ ಸುದ್ದಿ. ವಿಷಯ ಏನಪ್ಪಾ ಅಂದರೆ, ಉಪೇಂದ್ರ ಅವರು ಚಿತ್ರದ ಸಾಹಸ ದೃಶ್ಯದಲ್ಲಿ ನಟಿಸುತ್ತಿದ್ದರು. ಈ ವೇಳೆ, ವಿಲನ್ ಬೀಸಿದ ಕಬ್ಬಿಣದ ರಾಡ್ ಆಕಸ್ಮಿಕವಾಗಿ ಅವರ ತಲೆಗೆ ಬಿದ್ದ ಪರಿಣಾಮ, ಅವರಿಗೆ ಪೆಟ್ಟಾದ ಘಟನೆ ನಡೆದಿದೆ.

ಹೌದು, ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ “ಕಬ್ಜ” ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಸ್ಟಂಟ್ ಶೂಟಿಂಗ್ ಸಮಯದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ರಾಡ್ ತಗುಲಿ ಈ ಅವಘಡ ಸಂಭವಿಸಿದೆ. ಖಳನಾಯಕ ರಾಡ್ ನಿಂದ ಹೊಡೆಯುವ ಸನ್ನಿವೇಶದಲ್ಲಿ ಉಪೇಂದ್ರ ಅವರು ತಪ್ಪಿಸಿಕೊಳ್ಳಬೇಕಾಗಿತ್ತು.

ಈ ವೇಳೆ ಆಕಸ್ಮಿಕವಾಗಿಯೇ ಉಪ್ಪಿಗೆ ರಾಡ್ ತಾಗಿದೆ. ಅಲ್ಲಿದ್ದ ಚಿತ್ರತಂಡದವರು ಕೂಡಲೇ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಹೆಚ್ಚು ಅಪಾಯ ಸಂಭವಿಸದ ಕಾರಣ, ಪುನಃ ಉಪೇಂದ್ರ ಅವರು ಸ್ಪಲ್ಪ ಹೊತ್ತು ಚೇತರಿಸಿಕೊಂಡ ಬಳಿಕ ಶೂಟಿಂಗ್ ನಿಲ್ಲಿಸದೆಯೇ ಅದೇ ಉತ್ಸಾಹದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ನಿರ್ದೇಶಕ ಆರ್.ಚಂದ್ರು ಅವರು, ಸ್ಥಳದಲ್ಲಿದ್ದು, ಉಪೇಂದ್ರ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಆ ನಂತರ ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ಬಳಿಕ ಎಲ್ಲರೂ ಅದೇ ಉತ್ಸಾಹದಿಂದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.

Related Posts

error: Content is protected !!