ಮನದುಂಬಿ ಹೇಳುವೆನು ನೀ ಕೋಟಿಯಲಿ ಒಬ್ಬನೇ…! ಕೋಟಿಗೊಬ್ಬ 3 ಲಿರಿಕಲ್‌ ವಿಡಿಯೋಗೆ ಭರಪೂರ ಮೆಚ್ಚುಗೆ

ಸದ್ಯಕ್ಕೆ ಕನ್ನಡದಲ್ಲಿ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದು “ಕೋಟಿಗೊಬ್ಬ 3 ” ಹೌದು, ಕಿಚ್ಚ ಸುದೀಪ್‌ ಅಭಿನಯದ “ಕೋಟಿಗೊಬ್ಬ 3” ಸಿನಿಮಾ ಪ್ರೇಕ್ಷಕರ ಮುಂದೆ ಬರೋಕೆ ತಯಾರಿ ನಡೆಸಿದೆ. ಈಗಾಗಲೇ ಪೋಸ್ಟರ್‌ ಮತ್ತು ಟೀಸರ್‌ ಮೂಲಕ ಸಾಕಷ್ಟು ಮೆಚ್ಚುಗೆ ಪಡೆದು ಕುತೂಹಲ ಮೂಡಿಸಿರುವ ಈ ಚಿತ್ರದ ಹೊಸ ಲಿರಿಕಲ್‌ ಹಾಡೊಂದು ಬಿಡುಗಡೆಯಾಗಿದ್ದು, ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ.

ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದ್ದು, ಒಳ್ಳೆಯ ಕಾಮೆಂಟ್ಸ್‌ ಕೂಡ ಬರುತ್ತಿದೆ. ಇನ್ನು, ಈ ಹಾಡು ಕಿವಿಗಿಂಪೆನಿಸುವಂತಿದೆ. ಮಧುರವಾಗಿರುವ ಈ ಹಾಡನ್ನು ಬರೆದಿರೋದು ಯೋಗರಾಜ್‌ಭಟ್.‌ ಯೋಗರಾಜ್‌ ಭಟ್‌ ಅಂದಾಕ್ಷಣ, ಒಂದಷ್ಟು ಆಡು ಭಾಷೆ ಪದ ಬಳಕೆ ಮಾಡಿ ಹಾಡು ಗೀಚುವುದು ಕಾಮನ್‌ ಅಂದುಕೊಂಡಿದ್ದವರಿಗೆ, ಈ ಹಾಡು ನಿಜಕ್ಕೂ ಭಟ್ಟರ ಪದಗಳಲ್ಲೇ ಮೂಡಿ ಬಂದಿದೆಯಾ ಅನಿಸುವಷ್ಟರ ಮಟ್ಟಿಗೆ ಚೆನ್ನಾಗಿದೆ. ಒಂದೊಳ್ಳೆಯ ಮೆಲೋಡಿ ಸಾಂಗ್‌ ಇದಾಗಿದ್ದು, ಕೇಳುಗರು ಮತ್ತೆ ಮತ್ತೆ ಕೇಳಬೇಕೆನಿಸುವಷ್ಟರ ಮಟ್ಟಿಗೆ ಸಾಹಿತ್ಯ ಮೂಡಿಬಂದಿದೆ.

“ಯಾತಕೆ ನಿನ್ನನೆ ಬಯಸಿದೆ ಹೃದಯ, ನಿನ್ನಲಿ ಏನಿದೆಯೋ ಮಹರಾಯ ಮಾಮೂಲಿ ಅಲ್ಲ ನೀನು ಮನದುಂಬಿ ಹೇಳುವೆನು ನೀ ಕೋಟಿಯಲಿ ಒಬ್ಬನೇ….” ಎಂದು ಸಾಗುವ ಈ ಹಾಡನ್ನು ಶ್ರೇಯಾ ಘೋಷಾಲ್‌ ಹಾಡಿದ್ದಾರೆ. ಒಂದೊಳ್ಳೆಯ ಲಿರಿಕಲ್‌ ವಿಡಿಯೋ ಇದಾಗಿದ್ದು, ಆನಂದ್‌ ಆಡಿಯೋ ಯುಟ್ಯೂಬ್‌ ಚಾನೆಲ್‌ನಲ್ಲಿ ಸದ್ಯಕ್ಕೆ ಹಾಡು ಟ್ರೆಂಡಿಂಗ್‌ನಲ್ಲಿರುವುದಂತೂ ನಿಜ. ಕಿಚ್ಚ ಸುದೀಪ್‌ ಅಭಿನಯದ ಈ ಚಿತ್ರದಲ್ಲಿ ನಾಯಕಿಯಾಗಿ ಮಡೋನಾ ಸೆಬಾಸ್ಟಿನ್‌ ಇದ್ದಾರೆ. ಜೊತೆಯಲ್ಲಿ ಶ್ರದ್ಧಾದಾಸ್, ರವಿಶಂಕರ್‌ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಇನ್ನು, ಶಿವಕಾರ್ತಿಕ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸೂರಪ್ಪ ಬಾಬು ಅವರು ದೊಡ್ಡ ಮಟ್ಟದಲ್ಲೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಚಿತ್ರಕ್ಕೆ ಪ್ರವೀಣ್‌ ಆಂಟೋನಿ ಸಂಕಲನವಿದೆ. ಕನಾಲ್‌ ಕಣ್ಣನ್‌, ವಿಜಯ್‌ ಇತರರು ಭರ್ಜರಿ ಸ್ಟಂಟ್‌ ಕಂಪೋಸ್‌ ಮಾಡಿದ್ದಾರೆ. ಸುದೀಪ್‌ ಅಭಿಮಾನಿಗಳ ಪಾಲಿಗೆ ಈ ಹಾಡು ಎವರ್‌ಗ್ರೀನ್‌ ಆಗುವುದಂತೂ ನಿಜ. ಅಷ್ಟರಮಟ್ಟಿಗೆ ಸಾಂಗ್‌ ಮೂಡಿಬಂದಿದೆ. “ಪೈಲ್ವಾನ್”‌ ಚಿತ್ರದ ಬಳಿಕ ಸುದೀಪ್‌ ಅವರು “ಕೋಟಿಗೊಬ್ಬ 3” ಸಿನಿಮಾದಲ್ಲಿ ನಟಿಸಿದ್ದಾರೆ. ಹೆಚ್ಚು ಕಮ್ಮಿ ಒಂದುವರೆ ವರ್ಷದ ನಂತರ ಬರುತ್ತಿರುವ ಸಿನಿಮಾ ಆಗಿರುವುದರಿಂದ ಸಹಜವಾಗಿಯೇ ಸುದೀಪ್‌ ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಿದೆ. ಕೊರೊನಾ ಹೊಡೆತಕ್ಕೆ ತತ್ತರಿಸಿದ್ದ ಚಿತ್ರರಂಗ ಕೂಡ ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ.

ಈಗಾಗಲೇ ಸ್ಟಾರ್‌ ನಟರ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪುನಃ ಚೈತನ್ಯ ತುಂಬಿಕೊಡುತ್ತಿವೆ. ಈ ನಿಟ್ಟಿನಲ್ಲೀಗ “ಕೋಟಿಗೊಬ್ಬ 3” ಸಿನಿಮಾ ಕೂಡ ತೆರೆಗೆ ಬರಲು ಸಜ್ಜಾಗುತ್ತಿದೆ. “ಕೋಟಿಗೊಬ್ಬ” ದೊಡ್ಡ ಸಕ್ಸಸ್‌ ಕಂಡ ಸಿನಿಮಾ. ಆ ಬಳಿಕ ಕೋಟಿಗೊಬ್ಬ ಸೀರೀಸ್‌ ಶುರುವಾಯ್ತು. ಸುದೀಪ್‌ ಕೂಡ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಆ ನಂಬಿಕೆಯಲ್ಲೇ ಈಗ “ಕೋಟಿಗೊಬ್ಬ 3” ಸಿನಿಮಾ ಕೂಡ ದೊಡ್ಡ ಯಶಸ್ಸು ತಂದುಕೊಡುತ್ತದೆ ಎಂದೇ ಅವರ ಅಭಿಮಾನಿಗಳು ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

Related Posts

error: Content is protected !!