ಸಿನಿಮಂದಿ ಬದುಕಲ್ಲಿ ಕೊರೋನಾ ಎಂಬ ಹೆಮ್ಮಾರಿ ನರ್ತನ – ಆತಂಕದಲ್ಲಿ ಇಡೀ ಕನ್ನಡ ಚಿತ್ರೋದ್ಯಮ

ಚಿತ್ರರಂಗದ ಪಾಡು ಮುಂದೇನು? ಅರೇ, ಇದೆಂಥಾ ಮಾತು ಎಂಬ ಪ್ರಶ್ನೆ ಎದುರಾದರೆ ಅಚ್ಚರಿ ಏನಿಲ್ಲ. ಆದರೆ, ಈಗಿನ ವಾಸ್ತವತೆಯನ್ನು ನೋಡಿದಾಗ, ಚಿತ್ರರಂಗದ ಪಾಡು ಏನಾಗಬಹುದು ಎಂಬ ಆತಂಕ ಖಂಡಿತ ಕಾಡದೇ ಇರದು. ಕನ್ನಡ ಚಿತ್ರರಂಗ ಈಗ ಅಕ್ಷರಶಃ ಕುಗ್ಗಿ ಹೋಗಿದೆ. ಮೊದಲೇ ಕೊರೊನಾ ಹೊಡೆತದಿಂದ ತತ್ತರಿಸಿದ್ದ ಸಿನಿಮಾ ಉದ್ಯಮ, ಇತ್ತೀಚೆಗಷ್ಟೇ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿತ್ತು. ಅದರ ಬೆನ್ನಲ್ಲೇ ಈಗ ಪುನಃ ಅರ್ಧ ಭರ್ತಿ ಆದೇಶವೂ ಹೊರಬಿದ್ದಿದೆ. ಮೊದಲೇ ನಲುಗಿದ್ದ ಕನ್ನಡ ಚಿತ್ರರಂಗ, ಈಗ ಮತ್ತಷ್ಟು ನಲುಗಿ ಹೋಗುವುದಂತೂ ನಿಜ. ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗುತ್ತಿದ್ದಂತೆಯೇ ಸರ್ಕಾರ ಎಚ್ಚೆತ್ತುಕೊಂಡು ಟಫ್‌ರೂಲ್ಸ್‌ಮಾಡಿದ್ದೇನೋ ನಿಜ. ಎಂಟು ಪ್ರಮುಖ ಜಿಲ್ಲೆಗಳಲ್ಲಿ ಈ ಆದೇಶ ಹೊರಬಿದ್ದಿದೆ. ಚಿತ್ರರಂಗಕ್ಕೂ ಇದರ ಬಿಸಿ ತಟ್ಟಿದೆ. ಈ ನಿರ್ಧಾರದಿಂದ ಚಿತ್ರೋದ್ಯಮ ಏನೆಲ್ಲಾ ಸಂಕಷ್ಟ ಎದುರಿಸುತ್ತೆ ಅನ್ನೋದೇ ಸದ್ಯ ಎದುರಿಗಿರುವ ಪ್ರಶ್ನೆ.

ಚಿತ್ರರಂಗವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದವರ ಸ್ಥಿತಿಯಂತೂ ಹೇಳತೀರದು. ಇಲ್ಲಿ ಕೋಟಿ ನಿರ್ಮಾಪಕರು, ಸ್ಟಾರ್‌ನಿರ್ದೇಶಕರು, ಸ್ಟಾರ್‌ನಟರಿಂದ ಹಿಡಿದು ಕಟ್ಟ ಕಡೆಯ ಕಾರ್ಮಿಕರೂ ಇದ್ದಾರೆ. ಈಗ ಅವರೆಲ್ಲರೂ ಒಂದೇ ದೋಣಿಯಲ್ಲಿರುವಂತಹ ಪರಿಸ್ಥಿತಿ ಬಂದೊದಗಿದೆ. ಲಾಕ್‌ಡೌನ್‌ಸಂದರ್ಭದಲ್ಲಂತೂ ಚಿತ್ರರಂಗದಲ್ಲಿ ದುಡಿಮೆ ಮಾಡುವವರ ಪರಿಸ್ಥಿತಿ ಡೋಲಾಯಮಾನವಾಗಿತ್ತು. ಮೆಲ್ಲೆನೆ ಉಸಿರಾಡಲು ಅವಕಾಶ ಸಿಕ್ತು ಅಂತ ನಿಟ್ಟುಸಿರು ಬಿಡುವ ಹೊತ್ತಲೇ ಪುನಃ ಅದಕ್ಕೆ ಬ್ರೇಕ್‌ಬಿತ್ತು. ಇದರಿಂದ ಈಗ ಅಕ್ಷರಶಃ ಚಿತ್ರರಂಗದ ಅನೇಕರು ಬೀದಿಗೆ ಬರುವಂತಹ ಸ್ಥಿತಿ ಎದುರಾಗುತ್ತಿದೆ. ಇದು ಹೀಗೆ ಮುಂದುವರೆದರೆ, ಖಂಡಿತವಾಗಿಯೂ ಕನ್ನಡ ಚಿತ್ರರಂಗ ದೊಡ್ಡ ಆತಂಕದ ಅಲೆಯನ್ನು ಎದುರಿಸಬೇಕಾಗುತ್ತೆ. ಚಿತ್ರರಂಗವನ್ನು ನಂಬಿದ ಸಾವಿರಾರು ಕುಟುಂಬಗಳಿವೆ. ಲಕ್ಷಾಂತರ ಜನರಿದ್ದಾರೆ. ಎಲ್ಲಾ ನಿರ್ಮಾಣ, ನಟನೆ, ನಿರ್ದೇಶನ, ಕಾಸ್ಟ್ಯೂಮ್‌, ಪ್ರೊಡಕ್ಷನ್ಸ್‌, ಮೇಕಪ್‌, ಟ್ರಾನ್ಸ್‌ಪೋರ್ಟ್‌ಸೇರಿದಂತೆ ಹಲವು ವಿಭಾಗಗಳಲ್ಲಿ ಕೆಲಸ ಮಾಡುವ ಸಿನಿಮಂದಿ ಬದುಕು ಮೂರಾಬಟ್ಟೆಯಾಗುವಂತಹ ಭೀತಿಯಲ್ಲಿದೆ. ಕೊರೊನಾ ತಂದಿಟ್ಟ ಆತಂಕದಿಂದಾಗಿ ಇಲ್ಲಿ ಅನ್ನದಾತ ಎನಿಸಿಕೊಂಡವರೂ ಕೂಡ ಒದ್ದಾಡಿದ ಉದಾಹರಣೆಗೇನೂ ಕಮ್ಮಿ ಇಲ್ಲ.

ಈ ಕಲರ್‌ಫುಲ್‌ದುನಿಯಾದಲ್ಲಿ ಬಣ್ಣ ಬಣ್ಣದ ಕನಸು ಕಟ್ಟಿಕೊಂಡಿದ್ದ ಅದೆಷ್ಟೋ ಮಂದಿ ಮೊಗದಲ್ಲಿ ಆತಂಕದ ಛಾಯೆ ಮೂಡಿದೆ. ಕಳೆದ ಒಂದು ವರ್ಷದಿಂದಲೂ ಇದೇ ಅತಂತ್ರ ಪರಿಸ್ಥಿತಿಯಲ್ಲಿರುವ ಚಿತ್ರರಂಗಕ್ಕೆ ಮತ್ತೆ ದೊಡ್ಡ ಹೊಡೆತ ಬಿದ್ದಿರುವುದನ್ನು ನೋಡಿದರೆ, ಅಂತಿಮ ಹಂತ ತಲುಪುವ ಸೂಚನೆಯೇನೋ ಎಂಬಂತೆ ಭಾಸವಾಗುತ್ತಿದೆ.
ಈಗಷ್ಟೇ ಚಿತ್ರರಂಗ ಚೇತರಿಸಿಕೊಳ್ಳುತ್ತಿತ್ತು. ಕಳೆದ ವರ್ಷ ಇದೇ ತಿಂಗಳಲ್ಲಿ ಕೊರೊನಾ ಒಕ್ಕರಿಸಿ ಆತಂಕ ಸೃಷ್ಟಿಸಿತ್ತಲ್ಲದೆ, ಲಾಕ್‌ಡೌನ್‌ಗೂ ಕಾರಣವಾಗಿ ಎಲ್ಲರ ಬದುಕನ್ನೇ ಬರಡಾಗಿಸಿತ್ತು. ಈಗ ಮತ್ತದೇ ಆತಂಕ ಶುರುವಾಗುತ್ತಿದೆ! ಅರ್ಧ ಭರ್ತಿ ಆದೇಶದಿಂದ ಚಿತ್ರರಂಗ ಮತ್ತೆ ಮೊದಲಿನಂತಾಗಲು ವರ್ಷಗಳೇ ಬೇಕಾಗಬಹುದೇನೋ? ಕಳೆದ ಒಂದು ವರ್ಷದ ಕೊರೊನಾ ಹೊಡೆತಕ್ಕೆ ಇನ್ನೂ ಚಿತ್ರರಂಗ ಚೇತರಿಸಿಕೊಂಡಿಲ್ಲ. ಮತ್ತೆ ಕೊರೊನಾ ಹಾವಳಿ ಎದುರಾಗಿ ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಚಿತ್ರರಂಗವನ್ನೇ ನಂಬಿದವರ ಪಾಡು ಅತಂತ್ರದಲ್ಲಿರುವುದಂತೂ ಸತ್ಯ.

“ರಾಬರ್ಟ್‌” ಚಿತ್ರ ಬಿಡುಗಡೆ ನಂತರ ಚಿತ್ರರಂಗದ ಮೊಗದಲ್ಲಿ ಮಂದಹಾಸ ಮೂಡಿತ್ತು. ಮತ್ತೆ ಆ ದಿನಗಳಿಗೆ ಚಿತ್ರರಂಗ ಮರಳುತ್ತೆ ಎಂಬ ಲೆಕ್ಕಾಚಾರವೂ ಜೋರಾಗಿತ್ತು. ಆ ಚಿತ್ರದ ಬಳಿಕ ಪುನೀತ್‌ರಾಜಕುಮಾರ್‌ಅಭಿನಯದ “ಯುವರತ್ನ” ರಿಲೀಸ್‌ಆಯ್ತು. ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿದ್ದಂತೆಯೇ ಪುನಃ, ಅರ್ಧ ಭರ್ತಿ ಆದೇಶ ಹೊರಬಿತ್ತು. “ಯುವರತ್ನ” ಬಳಿಕ ಅದೆಷ್ಟೋ ಸಿನಿಮಾಗಳು ಚಿತ್ರಮಂದಿರಕ್ಕೆ ಬರಲು ಉತ್ಸಾಹ ತೋರಿದ್ದವು. ವರ್ಷಗಟ್ಟಲೆ ಕಾದಿದ್ದ ಸಿನಿಮಾಗಳಿಗೆ ಸರ್ಕಾರದ ಈ ಆದೇಶದಿಂದ ಆಘಾತವಾಗಿದ್ದು ಸುಳ್ಳಲ್ಲ. ಸಾಲ ಸೂಲ ಮಾಡಿ ಸಿನಿಮಾ ಮಾಡಿದ್ದ ಅನೇಕ ಹೊಸ ನಿರ್ಮಾಪಕರು, ಹೇಗೋ ರಿಲೀಸ್‌ಮಾಡಿ, ಬದುಕಿ ಬಿಡೋಣ ಅಂದುಕೊಂಡಿದ್ದರು. ಈಗ ನೋಡಿದರೆ, ಅದಕ್ಕೂ ಕಲ್ಲು ಬಿದ್ದಂತಾಗಿದೆ. ಮೂಲಗಳ ಪ್ರಕಾರ ೩೫೦ ಕ್ಕೂ ಹೆಚ್ಚು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ. ಈ ಇಷ್ಟೂ ಚಿತ್ರಗಳ ಬಜೆಟ್‌ಲೆಕ್ಕ ಹಾಕಿದರೆ, ಸಾವಿರ ಕೋಟಿ ಮೀರುತ್ತೆ.

ಇಲ್ಲಿ ಹಣ ಹಾಕಿ ಹಣ ತೆಗೆಯುತ್ತೇನೆ ಅನ್ನೋದು ಕಷ್ಟದ ಮಾತು. ಹೋಗಲಿ ಹಾಕಿದ ಹಣ ತೆಗೆಯೋಣ ಅಂತಂದುಕೊಂಡರೂ, ಕೊರೊನಾ ಹೊಡೆತ ಕೊಟ್ಟಿದೆ. ಹೇಗೋ ಬಂದಷ್ಟು ಬರಲಿ ಅಂದುಕೊಂಡು ರಿಲೀಸ್‌ಗೆ ಸಜ್ಜಾಗಿದ್ದರೂ, ಅರ್ಧ ಭರ್ತಿ ಆದೇಶ ಮತ್ತಷ್ಟು ನರಳುವಂತೆ ಮಾಡಿಬಿಟ್ಟಿದೆ. ಹೇಗೋ ಒಂದಷ್ಟು ಸಿನಿಮಾಗಳು ಚಿತ್ರೀಕರಣ ಶುರುಮಾಡಿದ್ದವು. ಈಗ ಶೂಟಿಂಗ್‌ಮಾಡೋಕೂ ಹಿಂದೆ ಮುಂದೆ ನೋಡುವಂತಹ ಸ್ಥಿತಿ ಬಂದೊದಗಿದೆ. ಹೇಗೋ ಚಿತ್ರೀಕರಣ ಶುರುವಾಯ್ತು ಅಂತ ಕಾರ್ಮಿಕ ವಲಯ ಸಂಭ್ರಮದಲ್ಲೇ ಇತ್ತು. ಆದರೀಗ, ಅವರ ಅನ್ನಕ್ಕೂ ಕುತ್ತು ಬರುವಂತಾಗಿದೆ. ಅವರ ಗೋಳಿನ ದನಿ ಮಾತ್ರ ಅಲ್ಲೇ ಗಿರಕಿಹೊಡೆಯುವಂತಾಗಿದೆ.

ಅದೇನೆ ಇರಲಿ, ಸರ್ಕಾರದ ಈ ಕ್ರಮದಿಂದ ಸಿನಿಮಾಗಳಿಗೆ ಪೆಟ್ಟು ಕೊಟ್ಟಿದ್ದಷ್ಟೇ ಅಲ್ಲ, ನಿರ್ಮಾಪಕರನ್ನೂ ಹೈರಾಣಾಗಿಸಿದೆ. ಚಿತ್ರಮಂದಿರಗಳಲ್ಲಿ ದುಡಿಯುವ ಕೈಗಳು ಹಿಜುಕಿಕೊಳ್ಳುವಂತಾಗಿದೆ. ಈಗಷ್ಟೇ ಚಿತ್ರಮಂದಿರಗಳತ್ತ ಜನರು ದಾಪುಗಾಲು ಇಡುತ್ತಿದ್ದರು. ಈ ಬೆನ್ನಲ್ಲೇ ಪುನಃ ಚಿತ್ರಮಂದಿರಗಳಿಗೆ ಅರ್ಧ ಭರ್ತಿ ಎಂಬ ನಿರ್ಧಾರದಿಂದ ಇಡೀ ಚಿತ್ರೋದ್ಯಮವೇ ದಿಕ್ಕು ತೋಚದಂತಾಗಿ ಕುಳಿತಿದೆ. ಈಗಾಗಲೇ ಒಂದು ವರ್ಷದಿಂದ ಕಾದು ಸೋತು, ಸಣ್ಣಗಾಗಿರುವ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದವು. ಈಗ ಆ ಚಿತ್ರಗಳ ಬಿಡುಗಡೆ ದಿನಾಂಕ ಕೂಡ ಮುಂದೆ ಹೋಗುತ್ತಿವೆ. ಕೋಟಿ ಹಣ ಹಾಕಿ ನಿರ್ಮಿಸಿದ್ದ ನಿರ್ಮಾಪಕ ಕೂಡ ಮತ್ತಷ್ಟು ದಿನ ಒದ್ದಾಡುವಂತಹ ಸ್ಥಿತಿ ಬಂದೊದಗಿದೆ. “ಯುವರತ್ನ” ಮೇಲೇಳುವ ಹೊತ್ತಲ್ಲೇ ಈ ನಿರ್ಧಾರ ಹೊರಬಂದಿದೆ.

“ಕೋಟಿಗೊಬ್ಬ 3”, “ಸಲಗ”, ”ಕೆಜಿಎಫ್‌″, “ಕೃಷ್ಣ ಟಾಕೀಸ್‌”, “ಭಜರಂಗಿ” ಸೇರಿದಂತೆ ಹಲವು ಚಿತ್ರಗಳು ಬಿಡುಗಡೆ ದಿನವನ್ನು ಘೋಷಿಸಿದ್ದವು. ಈಗ ಅನಿವಾರ್ಯ ಎಂಬಂತೆ ಮಂದಕ್ಕೆ ಹೋದರೂ ಅಚ್ಚರಿ ಇಲ್ಲ. ಒಂದು ವೇಳೆ ಈ ನಿರ್ಧಾರ ಮತ್ತಷ್ಟು ಕಠಿಣಗೊಂಡರೆ, ಸಿನಿಮಾರಂಗದ ಪಾಡೇನು, ಸ್ಟಾರ್‌ಚಿತ್ರಗಳ ಜೊತೆಗೆ ಸಣ್ಣಪುಟ್ಟ ಚಿತ್ರಗಳ ದೊಡ್ಡ ಪಟ್ಟಿಯೂ ಇದೆ. ಆ ಎಲ್ಲಾ ಸಿನಿಮಾ ನಿರ್ಮಾಪಕರ ಸ್ಥಿತಿ ಏನಾಗಬೇಡ? ಚಿತ್ರರಂಗವನ್ನೇ ನಂಬಿದವರ ಬದುಕು ಹೇಗಾಗಬೇಡ? ಒಂದು ಸಿನಿಮಾ ಮಾಡುವ ಕಷ್ಟ, ನಿರ್ಮಾಪಕರಿಗಷ್ಟೇ ಗೊತ್ತು. ಎಲ್ಲಿಂದಲೋ ಹಣ ತಂದು, ಸಾಲ ಮಾಡಿ, ಬಡ್ಡಿ ಕಟ್ಟಿ, ಸಿನಿಮಾ ಮಾಡುತ್ತಾನೆ. ಆದರೆ, ಆ ಹಣ ಹಿಂದಿರುಗುತ್ತದೆ ಎಂಬ ಯಾವ ಗ್ಯಾರಂಟಿಯೂ ಇಲ್ಲಿರೋದಿಲ್ಲ. ಒಂದು ಸಿನಿಮಾ ಶುರುವಾದರೆ, ನೂರಾರು ಕುಟುಂಬ ಬದುಕು ಕಟ್ಟಿಕೊಳ್ಳುತ್ತೆ. ಆದರೆ, ಸಿನಿಮಾ ನಿರ್ಮಾಪಕನಿಗೇ ದೊಡ್ಡ ಪೆಟ್ಟು ಬಿದ್ದರೆ, ಅಂತಹ ಕುಟುಂಬಗಳೂ ಹೊಡೆತ ತಿನ್ನುತ್ತವೆ. ಇನ್ನೇನು ರಿಲೀಸ್‌ಗೆ ಸಜ್ಜಾಗುತ್ತಿರುವ ಹೊತ್ತಿಗೆ ಮತ್ತೊಂದು ಆತಂಕದ ತೂಗುಕತ್ತಿ ನೇತಾಡುತ್ತಿರುವುದು ನಿಜಕ್ಕೂ ಬೇಸರದ ವಿಷಯ. ಮತ್ತದೇ ಭಯ ಹುಟ್ಟಿಸುತ್ತಿರುವ ಕೊರೊನಾ, ಚಿತ್ರರಂಗದವರ ಬಣ್ಣವನ್ನು ಅಳಿಸದಂತಿರಲಿ ಎಂಬುದೇ ಸಿನಿಲಹರಿಯ ಆಶಯ.

Related Posts

error: Content is protected !!