ಶಿಕ್ಷಣ ಮಾಫಿಯಾ ವಿರುದ್ಧ ಯುವರತ್ನನ ಹೋರಾಟ, ನೋಡುವ ಪ್ರೇಕ್ಷಕನಿಗೂ ಕೊಡ್ತಾನೆ ಒಂದಷ್ಟು ಪೇಚಾಟ!

ಯುವರತ್ನ ಚಿತ್ರ ವಿಮರ್ಶೆ

ಯುವರತ್ನ ಸ್ಟಾರ್‌ ಕಥೆಯಾ ಅಥವಾ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರಾ? ಸಿನಿಮಾ ನೋಡಿ ಹೊರ ಬಂದ ಪ್ರೇಕ್ಷಕರು ಹೀಗೊಂದು ಜಡ್ಜ್‌ ಮೆಂಟ್‌ಗೆ ಬರೋದು ಅಷ್ಟು ಸುಲಭ ಇಲ್ಲ. ಯಾಕಂದರೆ, ಯುವರತ್ನ ಪುನೀತ್‌ ರಾಜ್‌ಕುಮಾರ್‌ ಸಿನಿಮಾ ಅನ್ನೋದು ಎಷ್ಟು ಸತ್ಯವೋ, ಹಾಗೆಯೇ ಪುನೀತ್‌ ರಾಜ್‌ಕುಮಾರ್‌ ಯುವರತ್ನದ ಸ್ಟಾರ್‌ ಅನ್ನೋದು ಅಷ್ಟು ಸತ್ಯ. ಹೌದು, ಯುವರತ್ನ ಇರೋದೇ ಹಾಗೆ. ಮಾಸ್‌, ಕ್ಲಾಸ್‌ ಅಂತ ಎರಡು ಮಿಕ್ಸ್‌ ಆದ ಒಂದು ಸಿನಿಮಾ ಹೇಗಿರಬೇಕೋ ಹಾಗೆಯೇ ಈ ಚಿತ್ರವೂ ಇದೆ. ಈಗಾಗಲೇ ಇದು ಜನಪ್ರಿಯತೆ ಪಡೆದುಕೊಂಡಂತೆ ಪಕ್ಕಾ ಪವರ್‌ ಪ್ಯಾಕ್ಡ್‌ ಸಿನಿಮಾ. ಮುಖ್ಯವಾಗಿ ಯುವ ಜನರೇ ಇದರ ಟಾರ್ಗೆಟ್.

‌ಹಾಗಂತ ಬರೀ ಯೂತ್‌ಗಷ್ಟೇ ಸಿಮೀತವಾದ ಕಥೆ ಇದಲ್ಲ, ಮಕ್ಕಳ ಭವಿಷ್ಯ ಹಾಗಿರಬೇಕು, ಹೀಗಿರಬೇಕು ಅಂತೆಲ್ಲ ಕನಸು ಕಾಣುವ ಪ್ರತಿಯೊಬ್ಬ ತಂದೆ-ತಾಯಿ ಕೂಡ ನೋಡಲೇಬೇಕಾದ ಸಿನಿಮಾ. ಯಾಕಂದ್ರೆ ಈ ಸಿನಿಮಾ ಕಥೆ ಇರೋದೆ ಎಜುಕೇಷನ್‌ ಮಾಫಿಯಾ ಕುರಿತು. ಶಿಕ್ಷಣ ಅನ್ನೋದು ಇವತ್ತು ಪ್ರತಿಯೊಬ್ಬರಿಗೂ ಅತ್ಯಗತ್ಯ. ಹಾಗಂತ ಅದೀಗ ಪುಕ್ಕಟ್ಟೆ ಸಿಗುತ್ತಿಲ್ಲ. ಅದು ಕೂಡ ಬಿಸಿನೆಸ್.‌ ಅದನ್ನೇ ಬಂಡವಾಳವಾಗಿಸಿಕೊಂಡವರು ಸರ್ಕಾರಿ ಕಾಲೇಜುಗಳನ್ನು ಹೇಗೆ ಮುಗಿಸುವ ಸಂಚು ರೂಪಿಸುತ್ತಾರೆ ಎನ್ನುವುದರ ಸುತ್ತವೇ ಯುವರತ್ನದ ಕಥೆ ಹೆಣೆದಿದ್ದಾರೆ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್.

ಕಥೆ ತುಂಬಾ ಪ್ರಸ್ತುತವಾದದ್ದು. ಅಂದರೆ ಸಮಕಾಲೀನ ವಿಷಯ. ಅದನ್ನು ಒಂದು ಕಥೆಯಾಗಿಸಿ, ಅಚ್ಚುಕಟ್ಟಾಗಿ ನಿರೂಪಿಸಿರುವುದೇ ವಿಶೇಷ. ಅದರೆ, ತಾವಂದುಕೊಂಡಿದ್ದೆನ್ನೆಲ್ಲಾ ಸಿನಿಮಾದಲ್ಲಿ ತೋರಿಸಬೇಕೆನ್ನುವ ನಿರ್ದೇಶಕರ ಹಂಬಲವನ್ನು ಪ್ರೇಕ್ಷಕ ತಡೆದುಕೊಳ್ಳುವುದು ಕೊಂಚ ಕಷ್ಟವಂತೂ ಹೌದು. ಒಂದಷ್ಟು ಲ್ಯಾಗ್‌ ಎನಿಸಿದ ಹಾಗನಿಸುತ್ತೆ. ಮೊದಲರ್ಧ ಸರಾಗವಾಗಿಯೇ ಸಾಗುವ ಸಿನಿಮಾ, ದ್ವಿತಿಯಾರ್ಧ ಕೊಂಚ ಭಾರವೇನೋ ಎಂಬ ಭಾಸವಾಗುತ್ತದೆ. ಯವರತ್ನ ಪವರ್ ಪ್ಯಾಕ್ಡ್ ಚಿತ್ರ ಎಂಬುದನ್ನು ಮುಲಾಜಿಲ್ಲದೆಯೇ ಹೇಳಿಬಿಡಬಹುದು. ಪವರ್ ಇದ್ಮೇಲೆ ಕಂಪ್ಲೀಟ್ ಫ್ಯಾಮಿಲಿ ಪ್ಯಾಕ್ ಇದ್ದೇ ಇರುತ್ತೆ‌ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಅಂದಹಾಗೆ, ಯುವರತ್ನ ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಜೊತೆ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನು ಹೊತ್ತು ಬಂದಿದೆ. ಈ ಹಿಂದೆ ಅದನ್ನು ಟೀಸರ್ ಮತ್ತು ಟ್ರೇಲರ್ ಸಾಬೀತುಪಡಿಸಿತ್ತು. ಇದೀಗ ಸಿನಿಮಾ ತೆರೆಕಂಡಿದ್ದು ಯುವರತ್ನ ಸಮಾಜಕ್ಕೆ‌ ಮಾದರಿ ಚಿತ್ರ ಎಂಬುದಂತೂ ಪಕ್ಕಾ. ಅಭಿ ಸಿನಿಮಾ ನಂತರ ಕಾಲೇಜ್ ಹುಡುಗನ ಪಾತ್ರಕ್ಕೆ ಬಣ್ಣ ಹಚ್ಚಿರುವ ಅಪ್ಪು, ಪವರ್ ಆಫ್ ಯೂತ್ ಅನ್ನೋದನ್ನ ಮತ್ತೆ ಇಲ್ಲಿ ಸಾಬೀತುಪಡಿಸಿದ್ದಾರೆ. ಲಾಸ್ಟ್ ಬೆಂಚ್ ಸ್ಟುಡೆಂಟ್ ಪವರ್ ಏನು‌ ಎಂಬುದನ್ನು ಇಲ್ಲಿ ಅಪ್ಪು ಪ್ರೂ ಮಾಡಿ ತೋರಿಸಿದ್ದಾರೆ. ಅಪ್ಪು ಯುವರತ್ನನ ರೂವಾರಿ. ಅವರಿಗೆ ನಾಯಕಿ ಸಯೇಶಾ. ಅವರ ಸುತ್ತ ಪ್ರಕಾಶ್‌ ರೈ, ಸಾಯಿ ಕುಮಾರ್‌, ಅವಿನಾಶ್‌, “ಡಾಲಿ” ಧನಂಜಯ್‌, ದಿಗಂತ್‌, ಸೋನುಗೌಡ, ರಂಗಾಯಣ ರಘು, ಸಾಧು ಕೋಕಿಲ, ಕುರಿ ಪ್ರತಾಪ್‌, ರಾಜೇಶ್‌ ನಟರಂಗ, ಸುಧಾರಾಣಿ, ಅರುಣ ಬಾಲರಾಜ್‌, ಕಾಕ್ರೋಚ್‌ ಸುಧಿ, ಅರುಗೌಡ ಹೀಗೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಒಂದು ರೀತಿ ಅಗತ್ಯಕ್ಕಿಂತಲೂ ಹೆಚ್ಚೇ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಇಷ್ಟಾದರೂ ಪ್ರತಿಯೊಂದು ಪಾತ್ರವೂ ಇಲ್ಲಿ ಹೈಲೈಟ್‌ ಎನಿಸುತ್ತದೆ. ಅವರೆಲ್ಲ ಏನೆಲ್ಲ ಪಾತ್ರಗಳಲ್ಲಿ ಹೇಗೆಲ್ಲ್‌ ರಂಜಿಸುತ್ತಾರೆ ಅನ್ನೋದನ್ನು ನೀವು ಚಿತ್ರದಲ್ಲೇ ನೋಡ್ಬೇಕು.
ಯುವರತ್ನನಿಗೆ ಪವರ್ ತುಂಬಿರುವುದು ದೊಡ್ಮನೆ ರಾಜಕುಮಾರ.

ಇಂಟರ್ವೆಲ್‌ವರೆಗೆ ಫುಲ್ ಪವರ್ ಫುಲ್. ಇಂಟರ್ವೆಲ್‌ ನಂತರ ಸಿನಿಮಾ ವೇಗ ಕೊಂಚ ಮಂದಗತಿಯಲ್ಲಿ ಸಾಗುತ್ತದೆ. ಯುವರತ್ನ ಲ್ಯಾಗ್ ಎನಿಸೋಕೂ ಶುರುವಾಗುತ್ತೆ. ಆದರೂ ಅಲ್ಲಲ್ಲಿ ಕಾಣುವ ಹಾಡುಗಳು, ಸ್ಟಂಟ್‌ಗಳು ಅವೆಲ್ಲವನ್ನೂ ಪಕ್ಕಕ್ಕೆ ಸರಿಸುತ್ತದೆ. ಯೂಥ್‌ಗೆ ಇಲ್ಲಿ ಮನರಂಜನೆಗಂತೂ ಮೋಸ ಆಗೋದಿಲ್ಲ. ಸಯೇಶಾ ಮತ್ತು ಪುನೀತ್‌ ಅವರ ಕೆಮಿಸ್ಟ್ರಿ ಅಷ್ಟೇನು ಕಿಕ್ ಕೊಡಲ್ಲ ಅನ್ನೋದು ಬಿಟ್ಟರೆ, ಸಂಭಾಷಣೆಯಲ್ಲಿ ಧಮ್‌ ಇದೆ. ಚಿತ್ರಕಥೆ ಕೂಡ ವೇಗದಲ್ಲಿದೆ. ಚಂದದ ನಿರೂಪಣೆಯೂ ಇದೆ. ಭರ್ಜರಿ ಮೇಕಿಂಗ್‌ ಕೂಡ ಇಷ್ಟವಾಗುತ್ತದೆ. ಇವೆಲ್ಲವನ್ನೂ ಅಂದಗಾಣಿಸಿರೋದು ಕ್ಯಾಮರಾ ಕೈಚಳಕ‌. ಕೆಲವು ಹಾಸ್ಯ ದೃಶ್ಯಗಳಲ್ಲಿ ಕತ್ತರಿ ಪ್ರಯೋಗ ಮಾಡಬಹುದಿತ್ತು. ಅನಗತ್ಯ ದೃಶ್ಯಕ್ಕೆ ಕತ್ತರಿ ಬಿದ್ದಿದ್ದರೆ, “ಯುವರತ್ನ” ಇನ್ನಷ್ಟು ಶೈನ್‌ ಆಗಿರುತ್ತಿದ್ದ. ಆದರೂ, ಇಲ್ಲಿ ಕೊಟ್ಟ ಕಾಸಿಗೆ ಮೋಸವಂತೂ ಇಲ್ಲ.

ಪುನೀತ್‌ ನಟನೆ ಇಲ್ಲಿ ಗಮನಸೆಳೆಯುತ್ತೆ. ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಸ್ಟುಡೆಂಟ್‌ ಆಗಿ ಇಷ್ಟವಾಗುತ್ತಾರೆ. ಡ್ಯಾನ್ಸ್‌ನಲ್ಲೂ ಮೋಡಿ ಮಾಡಿದ್ದಾರೆ. ಇಲ್ಲೂ ಕೂಡ ಸಿಗ್ನೇಚರ್‌ ಸ್ಟೆಪ್‌ ಇದೆ. ಅದನ್ನು ಹೇಳುವುದಕ್ಕಿಂತ ನೋಡಿ ಅನ್ನುವುದೇ ಒಳಿತು. ಸಯೇಶಾ ಅಂದವಾಗಿದ್ದಾರೆ ಅನ್ನೋದು ಬಿಟ್ಟರೆ, ನಟನೆಗೆ ಹೆಚ್ಚು ಜಾಗ ಗಿಟ್ಟಿಸಿಕೊಂಡಿಲ್ಲ. ಹಾಗಾಗಿ ಅವರ ನಟನೆ ಬಗ್ಗೆ ಹೆಚ್ಚು ಹೇಳುವುದು ಕಷ್ಟ. ಇಡೀ ಸಿನಿಮಾದಲ್ಲಿ ಮತ್ತೊಂದು ವಿಶೇಷತೆ ಅಂದರೆ ಅದು ಪ್ರಕಾಶ್‌ ರೈ. ಅವರು ಚಿತ್ರದುದ್ದಕ್ಕೂ ಕಾಣಿಸಿಕೊಂಡಿದ್ದಾರೆ. ಚಿತ್ರದ ಕೇಂದ್ರಬಿಂದು ಅಂದರೂ ತಪ್ಪಿಲ್ಲ. ಅವರ ಸುತ್ತ ಸಾಗುವ ಯುವರತ್ನ ಚಿತ್ರದಲ್ಲಿ ಕಾಣಿಸಿಕೊಂಡಿರುವ ಪ್ರತಿ ಪಾತ್ರಗಳು ತಮ್ಮದೇ ಛಾಪು ಮೂಡಿಸಿವೆ. ತಮನ್‌ ಸಂಗೀತದ ಹಾಡುಗಳಲ್ಲಿ ಎರಡು ಪರವಾಗಿಲ್ಲ. ಹಿನ್ನೆಲೆ ಸಂಗೀತ ಕೂಡ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಸಂಕಲನ ಕೂಡ ಚಿತ್ರದ ವೇಗಕ್ಕೆ ಹೆಗಲು ಕೊಟ್ಟಿದೆ. ಇನ್ನು ಒಂದೊಂದು ಫೈಟ್‌ ಕೂಡ ಅಷ್ಟೇ ಅದ್ಧೂರಿಯಾಗಿ ಮೂಡಿಬಂದಿವೆ. ಅದೇನೆ ಇದ್ದರೂ, ಯುವರತ್ನ ಒಂದೇ ವರ್ಗಕ್ಕಂತೂ ಸೀಮಿತವಲ್ಲ ಅನ್ನುವುದನ್ನು ಸಿನಿಮಾ ನೋಡಿದವರಿಗೆ ಗೊತ್ತಾಗುತ್ತೆ. ಯುವರತ್ನ ಯಾವುದರ ವಿರುದ್ಧ ಹೋರಾಡುತ್ತಾನೆ, ಯಾರ ವಿರುದ್ಧ ಗುಡುಗುತ್ತಾನೆ ಎಂಬ ಕುತೂಹಲವಿದ್ದರೆ ಒಮ್ಮೆ ಯುವರತ್ನನನ್ನು ಕಣ್ತುಂಬಿಕೊಳ್ಳಿ.

ಚಿತ್ರ : ಯುವರತ್ನ * ನಿರ್ದೇಶಕ : ಸಂತೋಷ್‌ ಆನಂದ ರಾಮ್‌ * *ನಿರ್ಮಾಪಕ : ವಿಜಯ್‌ ಕಿರಗಂದೂರು * ತಾರಾಗಣ : ಪುನೀತ್‌, ಸಯ್ಯೇಶಾ, ಪ್ರಕಾಶ್‌ ರೈ, ಅವಿನಾಶ್‌, ಡಾಲಿ ಧನಂಜಯ್‌, ಸಾಯಿಕುಮಾರ್‌, ದಿಗಂತ್‌, ಸೋನುಗೌಡ ಇತರರು.

Related Posts

error: Content is protected !!