Categories
ಟಾಲಿವುಡ್ ಸಿನಿ ಸುದ್ದಿ

ದೃಶ್ಯಂ ಸರಣಿಗೆ ರೆಡಿಯಾದ ವೆಂಕಿ! ಜೀತು ಜೋಸೆಫ್ ನಿರ್ದೇಶನದಲ್ಲೇ ಬರಲಿರುವ ಚಿತ್ರ

ಜೀತು ಜೋಸೆಫ್ ನಿರ್ದೇಶನದಲ್ಲಿ ಮೋಹನ್‌ಲಾಲ್ – ಮೀನಾ ನಟಿಸಿರುವ ‘ದೃಶ್ಯಂ2’ ಮೊನ್ನೆಯಷ್ಟೇ ಅಮೇಜಾನ್ ಪ್ರೈಂನಲ್ಲಿ ಪ್ರೀಮಿಯರ್ ಆಗಿದೆ. ವೀಕ್ಷಕರು ಮತ್ತು ವಿಶ್ಲೇಷಕರು ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ‘ದೃಶ್ಯಂ2’ ತೆಲುಗು ರೀಮೇಕ್ ಸೆಟ್ಟೇರುತ್ತಿದೆ. ಜೀತು ಜೋಸೆಫ್ ಅವರೇ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ವೆಂಕಟೇಶ್ ನಟಿಸುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದ್ದು, ಉಳಿದ ತಾರಾಬಳಗದ ಆಯ್ಕೆ ಜಾರಿಯಲ್ಲಿದೆ.

ನಿರ್ದೇಶಕ ಜೀತು ಜೋಸೆಫ್ ಇಂದು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ‘ದೃಶ್ಯಂ2’ ತೆಲುಗು ಅವತರಣಿಕೆಯನ್ನು ಘೋಷಿಸಿದ್ದಾರೆ. ನಟ ವೆಂಕಟೇಶ್ ಮತ್ತಿತರರೊಂದಿಗಿನ ಅವರ ಫೋಟೋ ಜೊತೆಗೆ ಈ ಸುದ್ದಿ ಹೊರ ಬಿದ್ದಿದೆ. ‘ದೃಶ್ಯಂ’ ಮೊದಲ ಸರಣಿಯ ತೆಲುಗು ಅವತರಣಿಕೆ 2014ರಲ್ಲಿ ತೆರೆಕಂಡಿತ್ತು. ಆ ಚಿತ್ರವನ್ನು ಸುಪ್ರಿಯಾ ನಿರ್ದೇಶಿಸಿದ್ದರು. ಅಲ್ಲಿ ವೆಂಕಟೇಶ್ ಜೊತೆ ಮೀನಾ, ನಾದಿಯಾ ನಟಿಸಿದ್ದರು.

ಅಮೇಜಾನ್‌ ಪ್ರೈಮ್‌ನಲ್ಲಿ ಪ್ರೀಮಿಯರ್ ಆಗಿರುವ ‘ದೃಶ್ಯಂ2’ ಮಲಯಾಳಂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟ ಮೋಹನ್ ಲಾಲ್ ಅವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಯಶಸ್ಸಿಗೆ ಕಾರಣರಾದ ತಂತ್ರಜ್ಞರು ಹಾಗೂ ವೀಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸದ್ಯ ‘ದೃಶ್ಯಂ2’ ತೆಲುಗು ಅವತರಣಿಕೆ ಸೆಟ್ಟೇರುತ್ತಿದ್ದು, ಮುಂದಿನ ದಿನಗಳಲ್ಲಿ ಕನ್ನಡ, ತಮಿಳು ಮತ್ತು ಹಿಂದಿಯಲ್ಲೂ ತಯಾರಾಗುವ ಸಾಧ್ಯತೆಗಳಿವೆ. ಕನ್ನಡ ‘ದೃಶ್ಯ’ದಲ್ಲಿ ರವಿಚಂದ್ರನ್ ನಟಿಸಿದ್ದರು. ಸರಣಿಯಲ್ಲೂ ಅವರೇ ಇರುತ್ತಾರೆಯೇ ಎಂದು ಕಾದುನೋಡಬೇಕು.

Categories
ಸಿನಿ ಸುದ್ದಿ

ದಿಗಂತ್ ಹೊಸ ಚಿತ್ರಕ್ಕೆ ಪೂಜೆ – ಮತ್ತೊಂದು ಶಾರ್ಪ್‌ ಸಿನ್ಮಾ ಹಿಂದೆ ಬಂದ ನಿರ್ದೇಶಕ ಗೌಸ್‌ಪೀರ್‌

ಗೌಸ್‌ಪೀರ್‌ ಮತ್ತು ದಿಗಂತ್‌  ಕಾಂಬಿನೇಷನ್‌ನಲ್ಲಿ ಈ ಹಿಂದೆ “ಶಾರ್ಪ್‌ ಶೂಟರ್‌” ಚಿತ್ರ ಬಂದಿತ್ತು. ಫನ್ನಿ ಎಲಿಮೆಂಟ್ಸ್‌ನೊಂದಿಗೆ ನೋಡುಗರನ್ನು ರಂಜಿಸಿತ್ತು. ಅದೇ ಜೋಡಿ ಈಗ ಮೋಡಿ ಮಾಡುವಂತಹ ಸ್ಕ್ರಿಪ್ಟ್‌ನೊಂದಿಗೆ ಬರುತ್ತಿದೆ. ದಿಗಂತ್‌ ಕೂಡ ಗೌಸ್‌ಪೀರ್‌ ಕಥೆ ಕೇಳಿ ಥ್ರಿಲ್‌ ಅಗಿದ್ದು, ಹೊಸ ಬಗೆಯ ಕಥೆಗೆ ಖುಷಿಯಾಗಿದ್ದಾರೆ

ದೂದ್‌ಪೇಡ ಅಂತಾನೇ ಕರೆಸಿಕೊಳ್ಳುವ ನಟ ದಿಗಂತ್‌, ಸದ್ಯಕೀಗ ಫುಲ್‌ ಬಿಝಿ. ಇತ್ತೀಚೆಗಷ್ಟೇ ದಿಗಂತ್‌ “ಮಾರಿಗೋಲ್ಡ್‌” ಚಿತ್ರಕ್ಕೆ ಡಬ್‌ ಮಾಡುವ ಮೂಲಕ ಸಿನಿಮಾ ಕೆಲಸವನ್ನು ಮುಗಿಸಿದ್ದಾರೆ. ಅದರ ಬೆನ್ನ ಹಿಂದೆಯೇ ಅವರ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರವನ್ನೂ ಮುಗಿಸಿದ್ದಾರೆ. ಈಗ ಹೊಸ ಚಿತ್ರಕ್ಕೂ ಜೈ ಎಂದಿದ್ದಾರೆ. ಹೌದು, ಗೀತ ರಚನೆಕಾರ, ಸಂಭಾಷಣೆಕಾರ ಕಮ್ ನಿರ್ದೇಶಕ‌ ಗೌಸ್‌ಪೀರ್‌ ನಿರ್ದೇಶನದ ಹೊಸ ಚಿತ್ರಕ್ಕೆ ದಿಗಂತ್‌ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಚಿತ್ರಕ್ಕೆ ಇತ್ತೀಚೆಗೆ ಸ್ಕ್ರಿಪ್ಟ್‌ ಪೂಜೆ ಕೂಡ ನೆರವೇರಿದೆ.

ಜಯನಗರದ ವಿನಾಯಕ ದೇವಾಲಯದಲ್ಲಿ ಚಿತ್ರಕ್ಕೆ ಪೂಜೆ ನಡೆದಿದ್ದು, ಚಿತ್ರಕ್ಕೆ ಅದ್ಧೂರಿ ಚಾಲನೆಯೂ ದೊರೆತಿದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ಸದ್ಯ ಸ್ಕ್ರಿಪ್ಟ್‌ಗೆ ಚಾಲನೆ ದೊರೆತಿದ್ದು, ಬರವಣಿಗೆಯ ಕೆಲಸಗಳು ಅಂತಿಮ ಹಂತದಲ್ಲಿವೆ. ದಿಗಂತ್‌ ಸದ್ಯಕ್ಕೆ “ಗಾಳಿಪಟ 2” ಚಿತ್ರಕ್ಕಾಗಿ ವಿದೇಶಕ್ಕೆ ಹಾರಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಮುಗಿಸಿಕೊಂಡು ಬಂದ ಬಳಿಕ ಗೌಸ್‌ಪೀರ್‌ ನಿರ್ದೇಶನದ ಚಿತ್ರೀಕರಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಇನ್ನು, ಈ ಚಿತ್ರವನ್ನು ಗೌಸ್‌ಪೀರ್‌ ಗೆಳೆಯರು ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಹರಿಸಿರಿ ಎಂಟರ್‌ಟೈನರ್‌ನ ಉಮಾಶಂಕರ್‌ ಎಂ.ಜಿ.(ಆನಂದ್) ಪ್ರಕೃತಿ ಪ್ರೊಡಕ್ಷನ್ಸ್‌ನ ಶರಣಪ್ಪ, ಗೌರಮ್ಮ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ದಿಗಂತ್‌ ಹೀರೋ ಎನ್ನುವುದು ಪಕ್ಕಾ ಆಗಿದೆ. ಇನ್ನುಳಿದಂತೆ ಚಿತ್ರದಲ್ಲಿ ಯಾರೆಲ್ಲಾ ಇರಲಿದ್ದಾರೆ, ಶೀರ್ಷಿಕೆ ಏನು, ಎಲ್ಲೆಲ್ಲಿ ಚಿತ್ರೀಕರಣ ನಡೆಯಲಿದೆ, ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಇರುತ್ತಾರೆ ಎನ್ನುವುದಕ್ಕೆ ಇಷ್ಟರಲ್ಲೇ ಮಾಹಿತಿ ಕೊಡುವುದಾಗಿ ಹೇಳುತ್ತಾರೆ ನಿರ್ದೇಶಕ ಗೌಸ್‌ಪೀರ್.‌

ಗೌಸ್‌ಪೀರ್‌, ಶರಣಪ್ಪ,ಆನಂದ್

ಅಂದಹಾಗೆ, ಗೌಸ್‌ಪೀರ್‌ ನಿರ್ದೇಶನದ ಈ ಚಿತ್ರ ವಿಭಿನ್ನ ಜಾನರ್‌ನಲ್ಲಿದ್ದು, ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶಗಳೇ ಇಲ್ಲಿ ಹೈಲೈಟ್ ಆಗಿವೆಯಂತೆ. ಈಗಿನ ಟ್ರೆಂಡ್‌ಗೆ ತಕ್ಕಂತಹ ಕಥೆ ಇದಾಗಿದ್ದು, ದಿಗಂತ್‌ ಅವರನ್ನಿಲ್ಲಿ ಹೊಸ ರೂಪದಲ್ಲಿ ತೋರಿಸುವ ಯೋಚನೆ ನಿರ್ದೇಶಕರಗಿದೆಯಂತೆ. ಈ ಪಾತ್ರದಲ್ಲಿ ದಿಗಂತ್‌ ಹೊಸ ರೂಪ ತಾಳಲಿದ್ದಾರೆ ಎನ್ನುವ ನಿರ್ದೇಶಕರು, ದಿಗಂತ್‌ ಅವರು ಇದೇ ಮೊದಲ ಬಾರಿಗೆ ಅಂಥದ್ದೊಂದು ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನುತ್ತಾರೆ ನಿರ್ದೇಶಕ ಗೌಸ್‌ಪೀರ್.‌


ಗೌಸ್‌ಪೀರ್‌ ಮತ್ತು ದಿಗಂತ್‌ ಅವರ ಕಾಂಬಿನೇಷನ್‌ನಲ್ಲಿ ಈ ಹಿಂದೆ “ಶಾರ್ಪ್‌ ಶೂಟರ್‌” ಚಿತ್ರ ಬಂದಿತ್ತು. ಅದೊಂದು ಫನ್ನಿ ಎಲಿಮೆಂಟ್ಸ್‌ನೊಂದಿಗೆ ನೋಡುಗರನ್ನು ರಂಜಿಸಿತ್ತು. ಪುನಃ ಅದೇ ಜೋಡಿ ಈಗ ಮೋಡಿ ಮಾಡುವಂತಹ ಸ್ಕ್ರಿಪ್ಟ್‌ನೊಂದಿಗೆ ಬರುತ್ತಿದೆ. ದಿಗಂತ್‌ ಕೂಡ ಗೌಸ್‌ಪೀರ್‌ ಕಥೆ ಕೇಳಿ ಥ್ರಿಲ್‌ ಅಗಿದ್ದು, ಹೊಸ ಬಗೆಯ ಕಥೆಯಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗಿದ್ದಾರೆ. ಅದೇನೆ ಇರಲಿ, ದಿಗಂತ್‌ ಈಗ ಎಚ್ಚರದ ಆಯ್ಕೆಯಲ್ಲಿದ್ದಾರೆ. ಹಾಗಾಗಿಯೇ, ತಮಗೆ ಇಷ್ಟವಾಗುವಂತಹ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ. “ಶಾರ್ಪ್‌ ಶೂಟರ್‌” ಮೂಲಕ ಎಲ್ಲರನ್ನು ಸೆಳೆದಿದ್ದ ಗೌಸ್‌ಪೀರ್‌ ಮತ್ತು ದಿಗಂತ್‌, ಈಗ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯೊಂದಿಗೆ ಬರುತ್ತಿದ್ದಾರೆ. “ಗಾಳಿಪಟ 2” ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಬಂದ ಬಳಿಕ ಚಿತ್ರಕ್ಕೆ ಚಾಲನೆ ದೊರೆಯಲಿದೆ.

Categories
ಸಿನಿ ಸುದ್ದಿ

ಕಾಲಾಪತ್ಥರ್‌ ಚಿತ್ರಕ್ಕೆ ಅಪೂರ್ವ ನಾಯಕಿ – ವಿಕ್ಕಿ ವರುಣ್‌ ಜೊತೆಯಲ್ಲಿ ಡಿಂಗುಡಾಂಗು!


“ಕೆಂಡ ಸಂಪಿಗೆ” ಹುಡುಗ ವಿಕ್ಕಿ ವರುಣ್‌ ಅವರು ಹೊಸ ಚಿತ್ರ “ಕಾಲಾಪತ್ಥರ್” ಅನೌನ್ಸ್‌ ಮಾಡಿದ್ದು ಗೊತ್ತೇ ಇದೆ. ಈ ಚಿತ್ರಕ್ಕೆ ನಾಯಕಿ ಯಾರು ಎಂಬುದನ್ನು ಚಿತ್ರತಂಡ ಗೌಪ್ಯವಾಗಿಟ್ಟಿತ್ತು. ಈಗ ತಂಡ ನಾಯಕಿ ಯಾರೆಂಬುದನ್ನು ಹೇಳಿದೆ. ಹೌದು, “ಕಾಲಾಪತ್ಥರ್‌” ಚಿತ್ರಕ್ಕೆ ‘ಅಪೂರ್ವ’ ಆಯ್ಕೆಯಾಗಿದ್ದಾರೆ. ಅಪೂರ್ವ ಅವರು ಈ ಹಿಂದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ “ಅಪೂರ್ವ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದರು. ಅದಾದ ಬಳಿಕ “ವಿಕ್ಟರಿ 2” ಚಿತ್ರದಲ್ಲೂ ಅಪೂರ್ವ ನಟಿಸಿದ್ದರು. ಈಗ ವಿಕ್ಕಿ ವರುಣ್‌ ಅವರಿಗೆ “ಕಾಲಪತ್ಥರ್” ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.


ಅಂದಹಾಗೆ, “ಕಾಲಾಪತ್ಥರ್‌” ಚಿತ್ರದ ಟೈಟಲ್‌ ಲಾಂಚ್‌ ಆದ ದಿನವೇ ಒಂದಷ್ಟು ಗೊಂದಲವಾಗಿತ್ತು. ಆ ಶೀರ್ಷಿಕೆ ಕಾಂಟ್ರೋವರ್ಸಿಯೂ ಆಗಿತ್ತು. ಟೈಟಲ್‌ ಗೆ ಬೆಂಗಳೂರಿನ ಮಾಜಿ ರೌಡಿಯೊಬ್ಬರು ಆಕ್ಷೇಪಣೆ ಎತ್ತಿದ್ದಾರೆನ್ನುವ ಸುದ್ದಿ ಇತ್ತು. ಆದರೆ, ಅದು ನಿಜಾನ? ಅನ್ನೋದು ಕನ್ಫರ್ಮ್‌ ಇರಲಿಲ್ಲ. ಆದರೆ ಹಾಗೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡಿದ್ದಂತೂ ನಿಜ. ಟೈಟಲ್‌ಗೆ ಆಕ್ಷೇಪ ಎತ್ತಿ ಮಾಜಿ ರೌಡಿಯೊಬ್ಬರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರಂತೆ.

 

ತಮ್ಮದೇ ಬಯೋಗ್ರಪಿ ಎತ್ತಿಕೊಂಡು ಕೆಲವರು ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು ಎಂಬುದಾಗಿ ಅವರು ದೂರು ಸಲ್ಲಿಸಿದ್ದರಂತೆ ಎಂಬುದಾಗಿ ಸುದ್ದಿ ಇತ್ತು. ಆದರೆ ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಸ್ಪಷ್ಟಪಡಿಸಿದ್ದು, ಆ ರೀತಿಯ ಯಾವುದೇ ದೂರು ಬಂದಿಲ್ಲ ಎಂದಿತ್ತು. ಅದೇನೆ ಇರಲಿ, ವಿಕ್ಕಿ ವರುಣ್‌ ಅಭಿನಯದ “ಕಾಲಾ ಪತ್ಥರ್‌ʼ ಚಿತ್ರ ಸದ್ಯ ಸುದ್ದಿ ಮಾಡುತ್ತಿದೆ. ಚಿತ್ರದ ಶೀರ್ಷಿಕೆಯೇ ಮಾಸ್‌ ಆಗಿದೆ. ಕಥೆ ಕೂಡ ಹಾಗೆಯೇ ಇದೆ ಎಂಬುದು ಅವರ ಮಾತು.

Categories
ಸಿನಿ ಸುದ್ದಿ

‘ಪಿಕೆ’ ಸೀಕ್ವೆಲ್‌ನಲ್ಲಿ ರಣಬೀರ್‌!

ಏಳು ವರ್ಷಗಳ ಹಿಂದೆ ತೆರೆಕಂಡಿದ್ದ ಅಮೀರ್ ಖಾನ್ ನಟನೆಯ ‘ಪಿಕೆ’ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಪ್ರಯೋಗ ವಿಶಿಷ್ಟ ಕತೆಯಿಂದಾಗಿ ಗಮನಸೆಳೆದಿದ್ದ ಸಿನಿಮಾ. ಆ ಚಿತ್ರದ ಕೊನೆಯ ಸನ್ನಿವೇಶವೊಂದರಲ್ಲಿ ನಟ ರಣಬೀರ್ ಕಪೂರ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಹಿರಾನಿ ರಣಬೀರ್ ಪಾತ್ರ ಸೃಷ್ಟಿಸಿದ್ದಾರೆ ಎಂದು ಆಗಲೇ ಗುಲ್ಲಾಗಿತ್ತು.

ಚಿತ್ರ ಕಂಡು ವರ್ಷಗಳೇ ಆದ್ದರಿಂದ ಜನರು ಅದನ್ನು ಮರೆತೇ ಬಿಟ್ಟಿದ್ದರು. ಇದೀಗ ಹಿರಾನಿ ‘ಪಿಕೆ’ ಸೀಕ್ವೆಲ್‌ ಕುರಿತು ಪ್ರಸ್ತಾಪಿಸುತ್ತಿದ್ದಾರೆ. ಬಹುತೇಕ ರಣಬೀರ್ ಕಪೂರ್ ನಟಿಸುವುದು ಖಾತ್ರಿಯಾಗಿದೆ. ಮೂಲ ಚಿತ್ರದ ಹೀರೋ ಅಮೀರ್ ಖಾನ್ ಇಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.  ಅರ್ಹ ಮೂಲಗಳಿಂದ ‘ಪಿಕೆ’ ಸರಣಿ ಕುರಿತಂತೆ ಸುದ್ದಿ ಬಂದಿದ್ದರೂ ಹಿರಾನಿ ಈಗಲೇ ಅದನ್ನು ಖಚಿತಪಡಿಸಲು ಇಚ್ಛಿಸುತ್ತಿಲ್ಲ.

“ಸರಣಿ ಸಿನಿಮಾಗಳನ್ನು ಮಾಡಿ ಹಣ ಮಾಡುವುದಿದ್ದರೆ ನಾನು ಮುನ್ನಾಭಾಯ್‌ ಚಿತ್ರದ ನಾಲ್ಕಾರು ಸರಣಿ ಹಾಗೂ ಪಿಕೆ ಚಿತ್ರದ ಮೂರ್ನಾಲ್ಕು ಸರಣಿ ಮಾಡಿಬಿಡುತ್ತಿದ್ದೆ. ಆದರೆ ನನಗೆ ಕತೆ ಮುಖ್ಯ. ವಿಶಿಷ್ಟ ಕತೆ ಮಾಡಿಕೊಂಡು ಹೊಸ ಚಿತ್ರವನ್ನೇ ಮಾಡುತ್ತೇನೆ” ಎನ್ನುತ್ತಾರವರು. ‘ಪಿಕೆ’ ಸರಣಿಗೆ ಅಭಿಜಿತ್ ಜೋಷಿ ಕತೆ ರಚಿಸುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿ ಚಿತ್ರದ ಅಧಿಕೃತ ಘೋಷಣೆ ಹೊರಬೀಳಲಿದೆ.

Categories
ಸಿನಿ ಸುದ್ದಿ

ರಿಲೀಸ್ ಗೆ ರೆಡಿಯಾಯ್ತು ಧನುಷ್‌ ‘ಅತ್ರಂಗಿ ರೇ’! ಅಕ್ಷಯ್ -ಸಾರಾ ಕೂಡ ಹೈಲೈಟ್

ಅಕ್ಷಯ್ ಕುಮಾರ್, ಸಾರಾ ಅಲಿ ಖಾನ್ ಮತ್ತು ಧನುಷ್ ನಟನೆಯ ‘ಅತ್ರಂಗಿ ರೇ’ ಹಿಂದಿ ಸಿನಿಮಾ ತೆರೆಗೆ ಸಿದ್ಧವಾಗಿದೆ. ಆನಂದ್ ಎಲ್‌ ರಾಯ್ ನಿರ್ದೇಶನದ ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ ಎನ್ನುವುದು ವಿಶೇಷ. ಚಿತ್ರ ಇದೇ ಆಗಸ್ಟ್‌ 6ರಂದು ತೆರೆಕಾಣಲಿದೆ ಎಂದು ಚಿತ್ರತಂಡ ಇಂದು ಘೋಷಿಸಿದೆ. ಈ ಚಿತ್ರದಲ್ಲಿ ಧನುಷ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅಕ್ಷಯ್ ಕುಮಾರ್‌ ‘ವಿಶೇಷ’ ಪಾತ್ರವಿದೆ ಎನ್ನುವುದು ಚಿತ್ರತಂಡದ ಹೇಳಿಕೆ.

‘ಅತ್ರಂಗಿ ರೇ’ ಅಕ್ಷಯ್ ಕುಮಾರ್‌ಗೆ 2021ರಲ್ಲಿ ತೆರೆಕಾಣುತ್ತಿರುವ ಮೂರನೇ ಚಿತ್ರವಾಗಲಿದೆ. ಈ ಹಿಂದೆ 2013ರಲ್ಲಿ ಧನುಷ್ ಅವರು ಆನಂದ್ ಎಲ್‌ ರಾಯ್‌ ನಿರ್ದೇಶನದ ‘ರಾಂಝಾ’ ಹಿಂದಿ ಚಿತ್ರದಲ್ಲಿ ನಟಿಸಿದ್ದರು. ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ದೊಡ್ಡ ಮನ್ನಣೆ ಪಡೆಯಲಿಲ್ಲ. ಅದಾಗಿ ಎಂಟು ವರ್ಷಗಳ ನಂತರ ರಾಯ್ ಮತ್ತು ಧನುಷ್ ಈ ಸಿನಿಮಾದಲ್ಲಿ ಒಟ್ಟಾಗಿದ್ದಾರೆ.

ಹಿಮಾನ್ಶು ಶರ್ಮಾ ಚಿತ್ರಕಥೆ ರಚಿಸಿರುವ ಚಿತ್ರಕ್ಕೆ ಇರ್ಷಾದ್ ಕಮಿಲ್‌ ಗೀತೆಗಳನ್ನು ಬರೆದಿದ್ದಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ಚಿತ್ರೀಕರಣ ಶುರುವಾಗಿ ಕೋವಿಡ್ ಕಾರಣದಿಂದಾಗಿ ನಿಂತುಹೋಗಿತ್ತು. ಮತ್ತೆ ಅಕ್ಟೋಬರ್‌ನಿಂದ ಮಧುರೈ, ದಿಲ್ಲಿಯಲ್ಲಿ ಚಿತ್ರೀಕರಣಗೊಂಡು ಶೂಟಿಂಗ್ ಮುಗಿಸಿದೆ.

Categories
ಸಿನಿ ಸುದ್ದಿ

ಶಿವರಾಜಕುಮಾರ್‌ ಅವರ ಕಲರ್‌ಫುಲ್‌ ಜರ್ನಿಗೆ 35 – ಶುಭ ಹಾರೈಸಿದ ಕಿಚ್ಚ ಸುದೀಪ್


ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಿಸಿದ ಶಿವಣ್ಣ

ಕನ್ನಡ ಸಿನಿಮಾರಂಗದಲ್ಲಿ ದಶಕಗಳನ್ನು ಸವೆಸುವುದೆಂದರೆ ಅದು ಸುಲಭದ ಮಾತಲ್ಲ. ಇಲ್ಲಿ ಅನೇಕರು ಹಲವು ದಶಕಗಳನ್ನು ಪೂರೈಸಿದ್ದಾರೆ. ಇತ್ತೀಚೆಗಷ್ಟೇ ‌ಸುದೀಪ್‌ ಅವರ ಸಿನಿಮಾ ಪಯಣಕ್ಕೆ 25 ವರ್ಷ ಪೂರೈಸಿತ್ತು. ಈಗ ಶಿವರಾಜಕುಮಾರ್‌ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 35 ವರ್ಷಗಳು ಪೂರೈಸಿವೆ. “ಆನಂದ್” ಚಿತ್ರದ ಮೂಲಕ ಕಲರ್‌ಫುಲ್‌ ರಂಗವನ್ನು ಸ್ಪರ್ಶಿಸಿದ ಶಿವರಾಜಕುಮಾರ್‌, ಈಗ ಯಶಸ್ವಿಯಾಗಿ 35 ವರ್ಷಗಳನ್ನು ಪೂರೈಸಿದ್ದಾರೆ.

ಈವರೆಗೆ 120ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಶಿವರಾಜಕುಮಾರ್‌, ಈಗಲೂ ಕನ್ನಡ ಚಿತ್ರರಂಗದ ಬೇಡಿಕೆ ನಟ ಅನ್ನೋದು ವಿಶೇಷ. ಶಿವರಾಜಕುಮಾರ್‌ ಅಭಿಮಾನಿಗಳು ಪ್ರೀತಿಯಿಂದಲೇ 35 ವರ್ಷದ ಸಂಭ್ರಮವನ್ನು ಆಚರಿಸಿದ್ದಾರೆ. ಶಿವರಾಜಕುಮಾರ್‌ ಅವರ ಮನೆಗೆ ತೆರಳಿದ ಅಭಿಮಾನಿಗಳ ಸಂಘದ ಪದಾಧಿಕಾರಿಗಳು, ಶಿವಣ್ಣ ಅವರನ್ನು ಸನ್ಮಾನಿಸಿದ್ದಾರೆ. ಈ ವೇಳೆ ಅಭಿಮಾನಿಗಳ ಜೊತೆ ಶಿವರಾಜಕುಮಾರ್‌, ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ.


ಇನ್ನು, ಶಿವರಾಜಕುಮಾರ್‌ ಅವರು ಈ 35 ವರ್ಷಗಳ ಸಿನಿಪಯಣಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ನಟರು, ನಟಿಯರು ಶುಭ ಹಾರೈಸಿದ್ದಾರೆ. ಕಿಚ್ಚ ಸುದೀಪ್ ಕೂಡ, ಟ್ವಿಟ್ಟರ್‌ನಲ್ಲಿ ಶುಭಹಾರೈಸಿದ್ದಾರೆ. “ಚಿತ್ರರಂಗದಲ್ಲಿ 35 ವರ್ಷಗಳನ್ನು ಪೂರ್ಣಗೊಳಿಸಿದ ವರ್ಸಟೈಲ್ ನಟ ಶಿವಣ್ಣ ಅವರಿಗೆ ಶುಭಾಶಯಗಳು. ದೊಡ್ಡ ಸಾಧನೆ ಇದು. ಚಿತ್ರರಂಗದಲ್ಲಿ ನೀವು ಮೈಲುಗಲ್ಲು ಸಾಧಿಸಿದ್ದೀರಿ. ಸಂತೋಷವಾಗಿರಿ’ ಎಂದು ಶುಭಹಾರೈಸಿದ್ದಾರೆ.


ಈ ಸುದೀರ್ಘ ಸಿನಿಮಾ ಪಯಣದಲ್ಲಿ ಶಿವರಾಜಕುಮಾರ್‌ ಅವರು, ಅನೇಕ ಗೆಲುವು ಕಂಡಿದ್ದಾರೆ. ಅಷ್ಟೇ ಸೋಲು ಕಂಡಿದ್ದಾರೆ. ಗೆಲುವು, ಸೋಲು ಏನೇ ಇದ್ದರೂ, ಸಮಾನಾಗಿಯೇ ಸ್ವೀಕರಿಸಿ, ಅಭಿಮಾನಿಗಳ ಪಾಲಿಗೆ ಪ್ರೀತಿಯ ಹೀರೋ ಆಗಿದ್ದಾರೆ. ಶಿವರಾಜಕುಮಾರ್‌, ಈಗಲೂ ಬಿಝಿ ನಟ ಅನ್ನೋದು ವಿಶೇಷ. ಅವರ “ಭಜರಂಗಿ-2” ಚಿತ್ರ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. “ಅಭಿಮಾನಿಗಳಿಂದಲೇ ನನಗೆ ಇಷೊಂದು ಎನರ್ಜಿ ಇದೆ. ಚಿತ್ರರಂಗ, ಅಭಿಮಾನಿಗಳು, ಮಾಧ್ಯಮ ಎಲ್ಲರ ಸಹಕಾರದಿಂದ ಇಷ್ಟು ವರ್ಷ ಪೂರೈಸಿದ್ದೇನೆ. ಈ ಹೆಸರು, ಸ್ಟಾರ್ ಗಿರಿ ಎಲ್ಲವೂ ಅಭಿಮಾನಿಗಳಿಂದ ಸಿಕ್ಕಿದ್ದು’ ಎಂದು ಹೇಳಿದ್ದಾರೆ.

Categories
ಸಿನಿ ಸುದ್ದಿ

ಕ್ರಿಕೆಟ್ ಸಿನಿಮಾ ‘83’ ಜೂನ್‌ 4ಕ್ಕೆ‌ ರಿಲೀಸ್


ಕಪಿಲ್‌ ದೇವ್ ನಾಯಕತ್ವದಲ್ಲಿ ಚೊಚ್ಚಲ ಕ್ರಿಕೆಟ್ ವಿಶ್ವಕಪ್‌ ಗೆದ್ದ ಸಂಭ್ರಮವನ್ನು ದಾಖಲಿಸುವ ‘83’ ಹಿಂದಿ ಸಿನಿಮಾ ಜೂನ್‌ 4ಕ್ಕೆ ತೆರೆಕಾಣಲಿದೆ. ಕಪಿಲ್ ಪಾತ್ರದಲ್ಲಿ ನಟಿಸುತ್ತಿರುವ ರಣವೀರ್‌ ಸಿಂಗ್ ಚಿತ್ರದ ಪೋಸ್ಟರ್‌ನೊಂದಿಗೆ ಬಿಡುಗಡೆ ಸುದ್ದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕಬೀರ್ ಖಾನ್ ನಿರ್ದೇಶನದ ಸಿನಿಮಾ ಹಿಂದಿ ಸೇರಿದಂತೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ರೀಮೇಕ್‌ ಅವತರಣಿಕೆಗಳಲ್ಲಿ ಥಿಯೇಟರ್‌ಗೆ ಬರಲಿದೆ.

ಎಲ್ಲವೂ ಅಂದುಕೊಂಡಂತೆಯೇ ಆಗದ್ದರೆ ಚಿತ್ರ ಕಳೆದ ವರ್ಷ ಏಪ್ರಿಲ್‌ 10ಕ್ಕೆ ತೆರೆಕಾಣಬೇಕಿತ್ತು. ಕೋವಿಡ್‌ನಿಂದಾಗಿ ಚಿತ್ರೀಕರಣವೂ ತಡವಾಗಿ ಕೊನಗೆ ಬಿಡುಗಡೆಯೂ ವಿಳಂಬವಾಯ್ತು. ಮೊದಲು ಈ ಚಿತ್ರವನ್ನು ಓಟಿಟಿಯಲ್ಲೇ ತೆರೆಕಾಣಿಸಲು ನಿರ್ಮಾಪಕರು ಯೋಜಿಸಿದ್ದರು. ಇದಕ್ಕೆ ಸುಮಾರು 150 ಕೋಟಿ ರೂಪಾಯಿ ಆಫರ್ ಮಾಡಲಾಗಿತ್ತು ಎನ್ನಲಾಗಿದೆ. ಅಂತಿಮವಾಗಿ ಚಿತ್ರದ ನಿರ್ಮಾಪಕರು ಥಿಯೇಟರ್‌ನಲ್ಲೇ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡರು ಎನ್ನಲಾಗುತ್ತಿದೆ.

1983ರ ವಿಶ್ವಕಪ್ ಗೆದ್ದ ತಂಡದ ಆಟಗಾರರನ್ನು ‘ಕಪಿಲ್ ಡೆವಿಲ್ಸ್‌’ ಎಂದೇ ಕರೆಯುತ್ತಾರೆ! ಅಸಾಧಾರಣ, ಅನಿರೀಕ್ಷಿತ ಆಟದಿಂದ ಎದುರಾಳಿಗಳನ್ನು ಮಣಿಸಿದ್ದರಿಂದ ಭಾರತ ತಂಡದ ಆ ಪಂದ್ಯಗಳು ರೋಚಕವಾಗಿವೆ. ಹಾಗಾಗಿ ‘83’ ಒಂದು ಸ್ಪೋರ್ಟ್ಸ್‌ ಡ್ರಾಮಾ ಸಿನಿಮಾ ಆಗಿ ಪ್ರೇಕ್ಷಕರಿಗೆ ಇಷ್ಟವಾಗಬಹುದು ಎನ್ನುವುದು ಸಿನಿ ವಿಶ್ಲೇಷಕರ ಅಭಿಪ್ರಾಯ. ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಕಪಿಲ್‌ ದೇವ್ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ತಾಹಿರ್ ರಾಜ್ ಭಾಸಿನ್‌, ಸಕಿಬ್ ಸಲೀಂ, ಅಮಿ ವಿರ್ಕ್‌, ಸಾಹಿಲ್ ಕಟ್ಟರ್‌, ಚಿರಾಗ್ ಪಾಟೀಲ್‌, ಆದಿನಾಥ್ ಕೊಠಾರೆ, ಧೈರ್ಯ ಕರ್ವ್‌, ಜತಿನ್ ಸರ್ನಾ, ನಿಶಾಂತ್‌ ದಾಹಿಯಾ ಇತರೆ ಆಟಗಾರರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Categories
ಸಿನಿ ಸುದ್ದಿ

ಮಾರ್ಚ್ 24 ರಿಂದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಶುರು

 

ಬೆಂಗಳೂರಿನ ಒರಾಯನ್ ಮಾಲ್‍ನ ಪಿವಿಆರ್ ಚಿತ್ರಮಂದಿರದ 11 ಸ್ಕ್ರೀನ್ ನಲ್ಲಿ 50ಕ್ಕೂ ಹೆಚ್ಚು ದೇಶಗಳ ಸುಮಾರು 200 ಅತ್ಯುತ್ತಮ ಚಿತ್ರಗಳು ಪ್ರದರ್ಶಿಶನಗೊಳ್ಳಲಿವೆ.

ಅಂತೂ ಇಂತೂ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ದಿನ ನಿಗದಿಯಾಗಿದೆ. ಮಾರ್ಚ್ 24ರಿಂದ 13ನೇ ಚಿತ್ರೋತ್ಸವ ಜರುಗಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಘಟಿಸುತ್ತಿರುವ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 24 ರಿಂದ 31 ರವರೆಗೆ ನಡೆಯಲಿದೆ. ಈ ಬಾರಿ “ಭಾರತೀಯ ಪ್ರದರ್ಶನ ಕಲೆಗಳ ಮಹತ್ವ” ವಿಷಯದ ಮೇಲೆ ಚಿತ್ರೋತ್ಸವವನ್ನು ಏರ್ಪಡಿಸಲು ನಿರ್ಣಯಿಸಲಾಗಿದೆ.

ಭಾರತದ ಪ್ರತಿಷ್ಠಿತ ಚಿತ್ರೋತ್ಸವವಾಗಿ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಬೆಳೆದು ಬಂದಿದ್ದು, ಈಗಾಗಲೇ ದೇಶ-ವಿದೇಶಗಳಲ್ಲಿ ಪ್ರಸಿದ್ದಿ ಪಡೆದಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ FIAPF ಮಾನ್ಯತೆ ದೊರೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂಬುದು ಸಿಎಂ ಮಾತು.

ಕೋವಿಡ್ ನಿಯಮಾವಳಿಗಳು ಮತ್ತು ಮಾರ್ಗಸೂಚಿ ಅನ್ವಯ ಚಿತ್ರೋತ್ಸವ ನಡೆಯಬೇಕು ಎಂದು ಸೂಚಿಸಿದ್ದಾರೆ. ಬೆಂಗಳೂರಿನ ಒರಾಯನ್ ಮಾಲ್‍ನ ಪಿವಿಆರ್ ಚಿತ್ರಮಂದಿರದ 11 ಸ್ಕ್ರೀನ್ ನಲ್ಲಿ 50ಕ್ಕೂ ಹೆಚ್ಚು ದೇಶಗಳ ಸುಮಾರು 200 ಅತ್ಯುತ್ತಮ ಚಿತ್ರಗಳು ಪ್ರದರ್ಶಿಶನಗೊಳ್ಳಲಿವೆ. ಈ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.


ಏಳು ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ಏಷಿಯನ್ ಸಿನಿಮಾ, ಚಿತ್ರಭಾರತಿ (ಭಾರತೀಯ ಸಿನಿಮಾ) ಹಾಗೂ ಕನ್ನಡ ಸಿನಿಮಾಗಳ ಸ್ಪರ್ಧಾ ವಿಭಾಗವಿರುತ್ತದೆ. ಅಲ್ಲದೆ, ವಿಶ್ವಸಿನಿಮಾ, ಸಿಂಹಾವಲೋಕನ, ಗ್ರ್ಯಾಂಡ್ ಕ್ಲಾಸಿಕ್, ಕೆಲವು ದೇಶಗಳ ವಿಶೇಷ ಸಿನಿಮಾ, ಅಗಲಿದ ವಿಶ್ವದ, ಭಾರತದ ಮತ್ತು ಕನ್ನಡ ಚಿತ್ರರಂಗದ ಗಣ್ಯರ ಸಂಸ್ಮರಣೆ, ಚಲನಚಿತ್ರ ವಿಮರ್ಶಕರ ಅಂತಾರಾಷ್ಟ್ರೀಯ ಒಕ್ಕೂಟದ ಪ್ರಶಸ್ತಿ ವಿಭಾಗ, ನೆಟ್‍ಪ್ಯಾಕ್, ಜೀವನಚರಿತ್ರೆ ಆಧರಿಸಿದ ಚಿತ್ರಗಳ ವಿಭಾಗಗಳು ವಿವಿಧ ದೃಷ್ಟಿಕೋನವನ್ನು ಬಿಂಬಿಸಲಿವೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಈ ವೇಳೆ ವಿವರಿಸಿದರು.


ಚಿತ್ರೋತ್ಸವದಲ್ಲಿ ಅತ್ಯುತ್ತಮ ಸಿನಿಮಾಗಳ ಪ್ರದರ್ಶನದ ಜೊತೆ ದೇಶ-ವಿದೇಶಗಳ ನಿರ್ದೇಶಕರು, ಕಲಾವಿದರು, ತಂತ್ರಜ್ಞ ರೊಂದಿಗಿನ ಸಂವಾದ, ವಿಚಾರ ಸಂಕಿರಣ, ಚಿತ್ರಕಥೆ ರಚನೆ ಕಾರ್ಯಾಗಾರ, ಮಾಸ್ಟರ್‍ಕ್ಲಾಸ್ ಮೊದಲಾದ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಚಿತ್ರೋದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಿನಿಮಾಸಕ್ತರಿಗೆ ಅನುಕೂಲವಾಗಲಿದೆ . ಕನ್ನಡ ಸಿನಿಮಾಗಳ ಸೃಜನಶೀಲ ಮುಖಗಳನ್ನು ವಿಶ್ವದ ನಾನಾ ದೇಶಗಳಿಗೆ ಪರಿಚಯಿಸುವ ಕೆಲಸವೂ ಈ ಮೂಲಕ ನಡೆಯಲಿದೆ.


ಇದೇ ವೇಳೆ ಯಡಿಯೂರಪ್ಪ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 13ನೇ ಆವೃತ್ತಿಯ ಲಾಂಛನ ಬಿಡುಗಡೆ ಮಾಡಿದರು.
ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್.ಜೈರಾಜ್, ನಟಿ ಶೃತಿ, ತಾರಾ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಅಜುಂ ಪರ್ವೇಜ್, ಆಯುಕ್ತ ಪಿ.ಎಸ್.ಹರ್ಷ ಮತ್ತಿತರರು ಇದ್ದರು.

Categories
ಸಿನಿ ಸುದ್ದಿ

ನಿಖಿಲ್ ಕುಮಾರ್ ‘ರೈಡರ್‌’ನಲ್ಲಿ ಕೆಜಿಎಫ್ ಖ್ಯಾತಿಯ ಗರುಡ ರಾಮ್‌!

‘ಕೆಜಿಎಫ್‌’ ಸಿನಿಮಾದಲ್ಲಿ ‘ಗರುಡ’ನಾಗಿ ಅಬ್ಬರಿಸಿದ್ದ ರಾಮಚಂದ್ರ ರಾಜು (ಗರುಡ ರಾಮ್‌) ಈಗ ‘ರೈಡರ್‌’ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವಿಜಯ್‌ಕುಮಾರ್ ಕೊಂಡ ನಿರ್ದೇಶನದ ಈ ಆಕ್ಷನ್ – ಡ್ರಾಮಾ ಚಿತ್ರದಲ್ಲಿ ನಿಖಿಲ್‌ ಮತ್ತು ಕಶ್ಮೀರಾ ಪರ್ದೇಸಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ‘ಕೆಜಿಎಫ್‌’ ಚಿತ್ರದ ದೊಡ್ಡ ಯಶಸ್ಸಿನಿಂದಾಗಿ ಗರುಡ ರಾಮ್‌ ದಕ್ಷಿಣ ಭಾರತ ಸಿನಿಮಾರಂಗ ಮಾತ್ರವಲ್ಲದೆ ಬಾಲಿವುಡ್‌ಗೂ ಪರಿಚಿತರಾಗಿದ್ದಾರೆ.


ಅವರಿಗೀಗ ಕೈತುಂಬಾ ಅವಕಾಶಗಳು. ಸೂಪರ್‌ಸ್ಟಾರ್ ಮೋಹನ್‌ ಲಾಲ್‌ ನಟನೆಯ ‘ಆರಾಟ್ಟು’ ಮಲಯಾಳಂ ಚಿತ್ರದ ಪ್ರಮುಖ ಪಾತ್ರದಲ್ಲಿ ರಾಮ್‌ ನಟಿಸುತ್ತಿದ್ದಾರೆ. ತೆರೆಗೆ ಸಿದ್ಧವಾಗಿರುವ ಕಾರ್ತಿ ಅಭಿನಯದ ‘ಸುಲ್ತಾನ್‌’ನಲ್ಲೂ ಅವರು ಖಳನಟ.

ರಾಜ್ ತರುಣ್ ಹೀರೋ ಆಗಿರುವ ತೆಲುಗು ಸಿನಿಮಾ, ಅರ್ಜುನ್ ಸರ್ಜಾ ಮತ್ತು ತಾಪ್ಸಿ ಪನ್ನು ಜೋಡಿ ನಟಿಸಲಿರುವ ತಮಿಳು ಚಿತ್ರಕ್ಕೂ ಅವರು ಸಹಿ ಹಾಕಿದ್ದಾರೆ. ಸಾಮಾನ್ಯ ನಟನ ವೃತ್ತಿ ಬದುಕಿಗೆ ಚಿತ್ರವೊಂದು ಹೇಗೆ ದೊಡ್ಡ ತಿರುವಾಗುತ್ತದೆ ಎನ್ನುವುದಕ್ಕೆ ರಾಮ್‌ ಉದಾಹರಣೆಯಾಗಿದ್ದಾರೆ. ಇನ್ನು ‘ರೈಡರ್‌’ ಶೇಕಡಾ ಅರ್ಧದಷ್ಟು ಚಿತ್ರೀಕರಣ ಮುಗಿಸಿದೆ. ನಿಖಿಲ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆಯಾಗಿತ್ತು. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ‘ರೈಡರ್‌’ಗಿದೆ. ದತ್ತಣ್ಣ, ಅಚ್ಯುತ್‌ ಕುಮಾರ್‌, ಚಿಕ್ಕಣ್ಣ, ರಾಜೇಶ್ ನಟರಂಗ ಚಿತ್ರದ ಇತರೆ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ವಿಜಯ್‌ಗೆ ಖಳನಟರಾಗಲಿದ್ದಾರೆಯೇ ನವಾಜುದ್ದೀನ್‌! ಬಾಲಿವುಡ್‌ ನಟ ತಮಿಳು ಸಿನಿಮಾಗೆ ಬರ್ತಾರ?

ತಾವು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯಬಲ್ಲೆನು ಎನ್ನುವುದನ್ನು ‘ಮಾಸ್ಟರ್‌’ ತಮಿಳು ಚಿತ್ರದ ಮೂಲಕ ನಟ ವಿಜಯ್ ಮತ್ತೊಮ್ಮೆ ಸಾಬೀತು ಮಾಡಿದರು. ಕೋವಿಡ್‌ನಿಂದಾಗಿ ಥಿಯೇಟರ್‌ನಲ್ಲಿ ಶೇ.50ರಷ್ಟು ಪ್ರೇಕ್ಷಕರಿಗಷ್ಟೇ ಅವಕಾಶವಿತ್ತು. ಆದಾಗ್ಯೂ ವಿಜಯ್‌  ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿತು. ಆ ಚಿತ್ರದಲ್ಲಿ ಖಳನಾಗಿ ನಟಿಸಿದ್ದ ವಿಜಯ್ ಸೇತುಪತಿ ಕೂಡ ಭರ್ಜರಿಯಾಗಿ ಮಿಂಚಿದರು.

ಇದೀಗ ವಿಜಯ್‌ರ 65ನೇ ಚಿತ್ರದಲ್ಲೂ ಪ್ರಭಾವಿ ನಟ ಖಳಪಾತ್ರ ಮಾಡುವ ಸೂಚನೆ ಸಿಕ್ಕಿದೆ. ಬಾಲಿವುಡ್‌ನ ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ದಿಕಿ ಅವರಿಗೆ ಈ ಪಾತ್ರದಲ್ಲಿ ನಟಿಸುವಂತೆ ಕರೆ ಹೋಗಿದೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿರುವ ‘ವಿಜಯ್‌ 65’ ಚಿತ್ರದಲ್ಲಿ ಖಳಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಲಿದೆಯಂತೆ. ಹಾಗಾಗಿ ದೊಡ್ಡ ನಟನೇ ಆಗಬೇಕು ಎನ್ನುವುದು ಯೋಜನೆ. ಸಿದ್ದಿಕಿ ಅವರನ್ನು ಕರೆತಂದರೆ ಉತ್ತರ ಭಾರತದ ಪ್ರೇಕ್ಷಕರನ್ನೂ ಆಕರ್ಷಿಸಬಹುದು ಎನ್ನುವ ದೂರದ ಆಲೋಚನೆ ಕೂಡ ಸಹಜವೇ. ಸಿದ್ದಿಕಿ ಅವರು ಇದೀಗಷ್ಟೇ ‘ಸಂಗೀನ್‌’ ಚಿತ್ರೀಕರಣ ಮುಗಿಸಿಕೊಂಡು ಲಂಡನ್‌ನಿಂದ ಬಂದಿದ್ದಾರೆ. ಸದ್ಯ ವಿಜಯ್‌ ಸಿನಿಮಾಗೆ ಸಂಬಂಧಿಸಿದಂತೆ ಮಾತುಕತೆ ಜಾರಿಯಲ್ಲಿದ್ದು, ಸಿದ್ದಿಕಿ ಓಕೆ ಎನ್ನಬೇಕಿದೆ.

error: Content is protected !!