ಕನ್ನಡ ಚಿತ್ರರಂಗಕ್ಕೆ ಈ ಬಾರಿಯೂ ದೊಡ್ಡ ಹೊಡೆತವನ್ನೇ ಕೊಟ್ಟಿದೆ ಕೊರೊನಾ. ಹೌದು, ಕಳೆದ ವರ್ಷ ಕೊಟ್ಟ ದೊಡ್ಡ ಹೊಡೆತಕ್ಕೆ ಮಕಾಡೆ ಮಲಗಿದ್ದ ಚಿತ್ರರಂಗ, ಹೇಗೋ ಕಳೆದ ಅಕ್ಟೋಬರ್ ವೇಳೆಗೆ ಚೇತರಿಸಿಕೊಳ್ಳೋಕೆ ಶುರುಮಾಡಿತು. ಆ ನಂತರ ವೇಗ ಜೋರು ಮಾಡಿಕೊಂಡ ಚಿತ್ರರಂಗ, ಇನ್ನೇನು ತನ್ನ ಮೈಲೇಜ್ ಹೆಚ್ಚಾಯ್ತು ಅನ್ನುವ ಹೊತ್ತಿಗೆ ಕೊರೊನಾ ತನ್ನ ಎರಡನೇ ಅಲೆಯ ಹೊಡೆತ ಕೊಟ್ಟಿತು. ಸ್ಟಾರ್ಸ್ ಸಿನಿಮಾಗಳು ಕೂಡ ಇದರಿಂದ ತತ್ತರಿಸಿದ್ದು ಸುಳ್ಳಲ್ಲ. ಈಗ ಇಡೀ ಚಿತ್ರರಂಗಕ್ಕೆ ಕೊರೊನಾಘಾತವಾಗಿದೆ. ಸದ್ಯಕ್ಕೆ ಸ್ಯಾಂಡಲ್‌ವುಡ್ ಐಸಿಯುನಲ್ಲಿದೆ. ಕೊರೊನಾ ಇಂತಹವರಿಗಷ್ಟೇ ಆವರಿಸಿಕೊಳ್ಳುತ್ತೆ ಎಂಬುದೆಲ್ಲಾ ಸುಳ್ಳು. ಈಗಾಗಲೇ ಸಾಕಷ್ಟು ನಟ, ನಿರ್ಮಾಪಕ, ನಿರ್ದೇಶಕರು ಸೇರಿದಂತೆ ತಾಂತ್ರಿಕ ವರ್ಗದವರನ್ನೂ ಆವರಿಸಿಕೊಂಡಿದೆ. ಕೊರೊನಾ ನೃತ್ಯಕ್ಕೆ ನಲುಗಿರುವ ಸ್ಟಾರ್ಸ್, ಅದರಿಂದಾಚೆ ಬರೋಕೆ ಕಾಯುತ್ತಿದ್ದಾರೆ. ಕೊರೊನಾ ಅದೆಷ್ಟೋ ಸಿನಿಮಂದಿಯ ಬದುಕಲ್ಲಿ ಕರಾಳತೆಯನ್ನು ತುಂಬಿದೆ. ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದ ಅನೇಕರ ಜೀವ ಪಡೆದುಕೊಂಡಿದೆ. ಅಷ್ಟೇ ಅಲ್ಲ, ಪ್ರತಿ ದಿನವೂ ಕೂಡ ನರಳುವಂತೆ ಮಾಡುತ್ತಿದೆ.
ಹಾಗೆ ನೋಡಿದರೆ, ಕೊರೊನಾ ಹೀರೋಗಳಿಗೆ, ನಟಿಮಣಿಗಳಿಗೆ ಬರಲ್ಲ ಅಂತಂದುಕೊಳ್ಳುವಂತಿಲ್ಲ. ಕೊರೊನಾಗೆ ಹೀರೋ, ಯಾರು, ನಾಯಕಿ ಯಾರು ಅನ್ನೋದು ಗೊತ್ತಿಲ್ಲ. ಅದಕ್ಕೆ ಎಲ್ಲರೂ ಒಂದೇ. ಈಗಾಗಲೇ ಬಾಲಿವುಡ್ ಸೇರಿದಂತೆ ಸೌತ್ ಇಂಡಿಯಾ ಫಿಲ್ಮ್ ಫೀಲ್ಡ್‌ನಲ್ಲಿರುವ ಅನೇಕರಿಗೆ ಕೊರೊನಾ ವಕ್ಕರಿಸಿದೆ. ಕೆಲವರು ಕೊರೊನಾ ಹೊಡೆತಕ್ಕೆ ರೋಸಿಹೋಗಿದ್ದಲ್ಲದೆ, ಪ್ರಾಣವನ್ನೂ ಬಿಟ್ಟಿದ್ದಾರೆ. ಕೊರೊನಾ ನಟಿ ಸಂಜನಾ, ನಟ ಪ್ರಜ್ವಲ್, ನಿರ್ದೇಶಕ ಗುರುಪ್ರಸಾದ್, “ಲವ್ ಮಾಕ್ಟೇಲ್” ಖ್ಯಾತಿಯ ಡಾರ್ಲಿಂಗ್ ಕೃಷ್ಣ, ಮಿಲನಾ ದಂಪತಿ ಕೊರೊನಾ ಪಾಸಿಟಿವ್ ಆಗಿದೆ. ಇನ್ನು, ನಟಿ ಅನು ಪ್ರಭಾಕರ್‌ಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಈ ಬಗ್ಗೆ ಅನು ಪ್ರಭಾಕರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತುಂಬಾ ಸುರಕ್ಷಿತವಾಗಿ, ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡರೂ ಕೊರೊನಾ ಸೋಂಕು ತಗುಲಿದೆ ಎಂದು ಅನು ಪ್ರಭಾಕರ್ ಹೇಳಿದ್ದಾರೆ. ಸದ್ಯ ಅವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದು, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು, ಕೊರೊನಾ ಸಮಸ್ಯೆಯಿಂದಾಗಿ ಚಿತ್ರರಂಗದ ಹಲವು ಮಂದಿ ಅಸುನೀಗಿದ್ದಾರೆ. ಕಳೆದ ವರ್ಷ ಮೃತಪಟ್ಟವರ ಸಂಖ್ಯೆ ಲೆಕ್ಕಕ್ಕಿಲ್ಲ. ಈ ವರ್ಷದ ಎರಡನೇ ಅಲೆಗೆ ಚಿತ್ರರಂಗದ ಖ್ಯಾತ ಡಿಸೈನರ್ ಮತ್ತು ನಿರ್ದೇಶಕ ಮಸ್ತಾನ್ ಬಲಿಯಾಗಿದ್ದಾರೆ. ನಿರ್ದೇಶಕ ಮಸ್ತಾನ್ ಇತ್ತೀಚಿಗೆ ಕೊರೊನಾ ಪಾಸಿಟಿವ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೆಸರು ಘಟ್ಟ ಬಳಿ ಇರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ. ಅಂತೆಯೇ ಸಿನಿಮಾ ಪತ್ರಕರ್ತ ಕರುಣೇಶ ಕೂಡ ಕೊರೊನಾ ಪಾಸಿಟಿವ್‌ನಿಂದಾಗಿ ಮೃತಪಟ್ಟಿದ್ದಾರೆ. ಹಲವು ನಟ,ನಟಿಯರು ಕೊರೊನಾದಿಂದ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಮನೆಯಲ್ಲೇ ಇದ್ದು, ಎಲ್ಲೂ ಹೋಗದ ಹಾಗೆ ಎಚ್ಚರವಹಿಸಿ ಎಂದು ಹೇಳಿದ್ದಾರೆ. ಅದೇನೆ ಇದ್ದರೂ, ಚಿತ್ರರಂಗ ಮಾತ್ರ ಕೊರೊನಾ ಹೊಡೆತಕ್ಕೆ ನಲುಗಿರುವುದಂತೂ ನಿಜ. ಬೆಂಬಿಡದೆ ಕಾಡುತ್ತಿರುವ ಕೊರೊನಾ ಅಲೆ ಕಡಿಮೆ ಆಗೋವರೆಗೆ ಚಿತ್ರರಂಗ ಕೂಡ ಮೇಲೇಳುವುದಿಲ್ಲ ಎಂಬುದು ಸಿನಿಪಂಡಿತರ ಲೆಕ್ಕಾಚಾರ.