ಪ್ರೀತಿಗೂ ಮೀರಿದ ಜಾತಿ ಬಿಂಬಿಸುವ ಸತ್ಯಕತೆ! ಹೊರಬರಲಿದೆ ಬದನವಾಳು ಫಸ್ಟ್‌ ಲುಕ್

‌ಕನ್ನಡದಲ್ಲಿ ಈಗಾಗಲೇ ಸಾಕಷ್ಟು ನೈಜ ಘಟನೆ ಆಧರಿತ ಸಿನಿಮಾಗಳು ಬಂದಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ “ಬದನವಾಳು” ಚಿತ್ರವೂ ಸೇರಿದೆ. ಹೌದು, ಹಳೇ ಮೈಸೂರು ಪ್ರಾಂತ್ಯಕ್ಕೆ ಅಂಟಿಕೊಂಡಿರುವ “ಬದನವಾಳು” ಗ್ರಾಮದ ಒಟ್ಟು ವ್ಯವಸ್ಥೆಯನ್ನು ಬಿಂಬಿಸುವ ಪ್ರಯತ್ನ ಈ ಸಿನಿಮಾದಲ್ಲಾಗುತ್ತಿದೆ. ಅಂದಹಾಗೆ ಇದು, ಮೆಳೇಕೋಟೆ ಟೂರಿಂಗ್ ಟಾಕೀಸ್ ಹಾಗು ಸಿನಿಮಾ ಮಾರ್ಕೆಟ್ ಬ್ಯಾನರ್‌ನಡಿಯಲ್ಲಿ ತಯಾರಾದ ಚಿತ್ರ. ಉದಯ್ ಪ್ರಸನ್ನ ಈ ಚಿತ್ರದ ನಿರ್ದೇಶಕರು. ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ ಕುಮಾರ್ ಮತ್ತು ಪ್ರೇಮ ಚಂದ್ರಯ್ಯ (ನಾಗಸಂದ್ರ) ನಿರ್ಮಾಪಕರು. ಚಿತ್ರದಲ್ಲಿ ರಾಜ್ ಮಂಜು ನಾಯಕರಾಗಿ ಕಾಣಿಸಿಕೊಂಡರೆ, ಬಿಂದುಶ್ರೀ ನಾಯಕಿಯಾಗಿದ್ದಾರೆ.

ಸಾಮಾಜಿಕ ವ್ಯವಸ್ಥೆಯ ದಾರಿದ್ರ್ಯವನ್ನು ಬಿಂಬಿಸುವ ಪ್ರಯತ್ನ ಈ ಸಿನಿಮಾದಲ್ಲಾಗಿದೆ. ಜಾತಿ ವ್ಯವಸ್ಥೆಯಲ್ಲಿ ಮೇಲು-ಕೀಳು, ಅಸ್ಪೃಶ್ಯತೆಯಲ್ಲಿ ಅರಳುವ ಪ್ರೀತಿ, ಮಾನಸಿಕ ದಾರಿದ್ರ್ಯಕ್ಕೆ ಅಂಟಿಕೊಂಡಿರುವ ಪ್ರೇಮ ವೈಫಲ್ಯ, ನೀಚ ರಾಜಕಾರಣಿಗಳು ಯಾವ ರೀತಿ ಯುವ ಪಿಳಿಗೆಯನ್ನು ಅವರ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ, ದೇವರ ಹೆಸರಲ್ಲಿ ಹೇಗೆಲ್ಲಾ ಮೋಸ ನಡೆಯುತ್ತೆ, ಹೀಗೆ ಹಲವು ಪ್ರಮುಖ ಅಂಶಗಳನ್ನು ವಾಸ್ತವವಾಗಿ ಕಟ್ಟಿಕೊಡುವ ಕೆಲಸಕ್ಕೆ ನಿರ್ದೇಶಕರು ಮುಂದಾಗಿದ್ದಾರೆ.

ಏಪ್ರಿಲ್ 15ರಂದು ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಲಿದೆ. ಈಗಿನ ವಾಸ್ತವತೆಗೆ ಹತ್ತಿರವಾದಂತಹ ಅಂಶಗಳು ಸಿನಿಮಾದಲ್ಲಿದ್ದು, ಮುಖ್ಯವಾಗಿ ಇಲ್ಲಿ ಪ್ರೀತಿ, ಜಾತಿ, ಅಂತಸ್ತು ಸೇರಿದಂತೆ ಇನ್ನಿತರೆ ಪ್ರಮುಖ ಅಂಶಗಳು ಹೈಲೈಟ್‌ ಎಂಬುದು ಚಿತ್ರತಂಡದ ಮಾತು.

Related Posts

error: Content is protected !!