ಸೈದಾಪುರ ಹುಡುಗನಿಗೆ ಆತ್ಮದ ಆಶೀರ್ವಾದ! ತಮ್ಮನ ನಟನೆ ನೋಡುವ ಮುನ್ನವೇ ಹಾರಿಹೋಯ್ತು ಅಣ್ಣನ ಜೀವ

ಸಿನಿಮಾ ಅನ್ನೋದೇ ಹಾಗೆ. ಇಲ್ಲಿ ಅಷ್ಟು ಸುಲಭವಾಗಿ ಜಾಗ ಸಿಗೋದಿಲ್ಲ. ಸಿಕ್ಕರೂ, ಅದನ್ನು ಭದ್ರಪಡಿಸಿಕೊಳ್ಳೋಕೆ ಹೆಣಗಾಡಲೇಬೇಕು. ಇಲ್ಲಿ ಹೊಸಬರ ಸಂಖ್ಯೆಯೇ ಹೆಚ್ಚು. ದಿನ ಕಳೆದಂತೆ ಹೊಸಬರು ನೂರಾರು ಕನಸು ಕಟ್ಟಿಕೊಂಡು ಇಲ್ಲಿಗೆ ಬಂದೇ ಬರ್ತಾರೆ. ಅಂತಹವರ ಸಾಲಿಗೆ ಈಗ “ಸೈದಾಪುರ” ಚಿತ್ರತಂಡವೂ ಒಂದು. ಹೌದು, ಇದು ಹೊಸಬರೇ ಸೇರಿ ಮಾಡಿರುವ ಚಿತ್ರ. ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಬಿಡುಗಡೆಗೆ ರೆಡಿಯಾಗುತ್ತಿದೆ. ಅದಕ್ಕೂ ಮುಂಚೆ ಚಿತ್ರದ ಆಡಿಯೋ ರಿಲೀಸ್‌ ಕೂಡ ಆಗಿದೆ. ಇಲ್ಲಿ ಸಿನಿಮಾ ಮತ್ತು ಹಾಡುಗಳ ಬಗ್ಗೆ ಹೇಳುವುದಕ್ಕಿಂತ ಅವರೊಳಗಿರುವ ಸಿನಿಮಾ ಪ್ರೀತಿ ಬಗ್ಗೆ ಹೇಳಲೇಬೇಕು. ಎಲ್ಲಿ ಪ್ರೀತಿ ಇರುತ್ತೋ ಅಲ್ಲಿ ನೋವು ಇದ್ದೇ ಇರುತ್ತೆ. ಇಲ್ಲಿ ಪ್ರೀತಿ ಗೀತಿ ಇತ್ಯಾದಿ ಬಗ್ಗೆ ಹೇಳೋಕೆ ಕಾರಣವೇನು ಗೊತ್ತಾ? ಇಲ್ಲಿ ಇಡೀ ಚಿತ್ರತಂಡ ನೋವಲ್ಲೇ ಸಿನಿಮಾ ಮಾಡಿ ಮುಗಿಸಿದೆ. ಹಾಗಾದರೆ ಆ ನೋವೇನು? ಯಾಕೆ? ಆ ಬಗ್ಗೆ ಒಂದು ರೌಂಡಪ್.

ಸಿನಿಮಾ ಎಂಬ ರಂಗಿನ ಪ್ರಪಂಚದಲ್ಲಿ ಮಿಂದೇಳಬೇಕೆಂಬ ಆಸೆ ಯಾರಿಗೆ ತಾನೆ ಇರಲ್ಲ ಹೇಳಿ. ಬಣ್ಣದ ಲೋಕಕ್ಕೆ ಎಂಟ್ರಿಯಾಗಬೇಕು, ತಾನೂ ಇಲ್ಲೊಂದು ಗುರುತು ಮಾಡಬೇಕು ಅನ್ನೋ ಆಸೆ ಕಟ್ಟಿಕೊಂಡೇ ಇಲ್ಲಿ ಕಾಲಿಡುತ್ತಾರೆ. ಅಂತಹ ಆಸೆ ಹೊತ್ತುಕೊಂಡು ಬಂದವರಲ್ಲಿ ಭಾನುಪ್ರಕಾಶ್‌ ಬ್ರದರ್ಸ್‌ ಕೂಡ ಸೇರಿದ್ದಾರೆ. ಇವರಿಬ್ಬರ ಕನಸಿಗೆ ಸಾಕಾರವಾಗಿದ್ದೇ “ಸೈದಾಪುರ” ಎಂಬ ಸಿನಿಮಾ. ಈ ಚಿತ್ರ ಇನ್ನೇನು ಮುಗಿದು, ಸೆನ್ಸಾರ್‌ಗೆ ಹೋಗಬೇಕು ಅನ್ನುವ ಹೊತ್ತಿಗೆ ಒಂದು ಆಘಾತ ಎದುರಾಗುತ್ತೆ. ಅದು ಇಡೀ ಚಿತ್ರತಂಡವನ್ನೇ ಕುಸಿದು ಬೀಳುವಂತೆ ಮಾಡುತ್ತೆ. ಅದು ಮತ್ತೇನೂ ಅಲ್ಲ, ತನ್ನ ಸಹೋದರನಿಗಾಗಿಯೇ ಸಿನಿಮಾ ನಿರ್ಮಾಣ ಮಾಡಲು ಹೊರಟಿದ್ದ ಅಣ್ಣನ ಸಾವು!

ಮಹದೇವ ಫಿಲ್ಮ್‌ ಪ್ರೊಡಕ್ಷನ್‌ ಮೂಲಕ ಈ ಚಿತ್ರ ತಯಾರಾಗಿದೆ. ಈ ಸಿನಿಮಾಗೆ ಭಾನುಪ್ರಕಾಶ್‌ ಹೀರೋ. ತನ್ನ ತಮ್ಮನಿಗಾಗಿಯೇ ಚಿತ್ರ ನಿರ್ಮಾಣಕ್ಕಿಳಿದಿದ್ದ ಸಹೋದರ ಮಹದೇವ ಅವರು ಸಿನಿಮಾವನ್ನು ಚೆನ್ನಾಗಿಯೇ ನಿರ್ಮಾಣ ಮಾಡಿದ್ದರು. ಇನ್ನೇನು ಚಿತ್ರವನ್ನು ಸೆನ್ಸಾರ್‌ ಮಾಡಿಸಬೇಕು ಅನ್ನುವ ಹೊತ್ತಿಗೆ ಅವರು ಇಹಲೋಕ ತ್ಯಜಿಸಿಬಿಟ್ಟರು. ಈ ಆಘಾತ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಯಿತು. ದಿಕ್ಕೇ ತೋಚದಂತಾದ ಹೀರೋ ಭಾನುಪ್ರಕಾಶ್‌, ಮುಂದೇನು ಎಂಬ ಚಿಂತೆಗೀಡಾದರು. ಅವರ ಕುಟುಂಬ ಕೂಡ ಮಹದೇವನ ನೆನಪಲ್ಲೇ ಕಣ್ಣೀರು ಹಾಕತೊಡಗಿತು. ಅಣ್ಣನ ಸಿನಿಮಾ ಪ್ರೀತಿಯಿಂದಲೇ “ಸೈದಾಪುರ” ಚಿತ್ರ ತಯಾರಾಗಿದ್ದರಿಂದ, ಏನೇ ಆದರೂ ಸರಿ, ಈ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದು, ಅಣ್ಣನ ಆಸೆಯನ್ನು ಈಡೇರಿಸಬೇಕು ಎಂಬ ಛಲ ತೊಟ್ಟರು ಭಾನುಪ್ರಕಾಶ್‌. ಈಗ ಸಿನಿಮಾದ ಆಡಿಯೋ ರಿಲೀಸ್‌ ಮಾಡಲಾಗಿದೆ. ರಿಲೀಸ್‌ ವೇಳೆ ಒಂದು ಮನಕಲಕುವ ಸನ್ನಿವೇಶವೂ ಜರುಗಿತು.

ಅಂದು ಆಡಿಯೋ ರಿಲೀಸ್‌ಗೆ ಭಾನುಪ್ರಕಾಶ್‌ ತಮ್ಮ ಕುಟುಂಬವನ್ನು ಕರೆತಂದಿದ್ರು. ವೇದಿಕೆ ಏರಿದ ಆ ಕುಟುಂಬ ಕಣ್ಮರೆಯಾದ ಮಹದೇವನನ್ನು ನೆನೆದು ಕಣ್ಣೀರಾಯಿತು. ಉತ್ತರ ಕರ್ನಾಟಕ ಮೂಲದ ಯಾದಗಿರಿಯಿಂದ ಬಂದಿದ್ದ ಮಹದೇವನ ಅಪ್ಪ, ಅಮ್ಮ, ತಂಗಿ ಮತ್ತು ಬಳಗ ಕಣ್ಣುತುಂಬಿಕೊಂಡಿತು. ವೇದಿಕೆ ಮೇಲಿದ್ದ ಚಿತ್ರತಂಡದ ಕಣ್ಣಾಲಿಗಳು ಕೂಡ ಒದ್ದೆಯಾಗಿದ್ದವು. ಆ ಕ್ಷಣ ಎಲ್ಲವೂ ಮೌನ, ಎಲ್ಲರ ಹೃದಯವೂ ಭಾರ. ಅಲ್ಲಿ ಮಾತಿಲ್ಲ ಬರೀ ದುಃಖ-ದುಮ್ಮಾನ. ವೇದಿಕೆಯಲ್ಲಿ ಸಿನಿಮಾ ಬಗ್ಗೆ ಹೇಳುವುದಕ್ಕಿಂತ ಕಳೆದುಕೊಂಡ ಅಣ್ಣನ ಬಗ್ಗೆ ಗುಣಗಾನ ಮಾಡಿದ್ದೇ ಹೆಚ್ಚು. ಅದಕ್ಕಿಂತ ಹೆಚ್ಚಾಗಿ ಅವರೆಲ್ಲರ ಕಣ್ಣಂಚಲ್ಲಿ ನೀರು ಜಿನುಗಿದ್ದೇ ಹೆಚ್ಚು.

ಅದೇನೆ ಇರಲಿ, ದೂರವಾಗಿರುವ ಮಹದೇವನ ಆತ್ಮ ಅಲ್ಲಿಂದಲೇ ತನ್ನ ತಮ್ಮನ ಸಿನಿಮಾಗೆ ಆಶೀರ್ವದಿಸಲಿದೆ ಅನ್ನೋದು ಚಿತ್ರತಂಡದ ಬಲವಾದ ನಂಬಿಕೆ. ಅಂದಹಾಗೆ, ಈ ಚಿತ್ರಕ್ಕೆ ಶ್ರೀರಾಮ್‌ ನಿರ್ದೇಶಕರು. ಸಿನಿಮಾ ಬಗ್ಗೆ ಹೇಳೋದಾದರೆ, ಪ್ರೀತಿ ಸಿಗದೆ ಪರಿತಪಿಸೋ ಹುಡುಗನ ಪರದಾಟವನ್ನು ತೆರೆ ಮೇಲೆ ತರುವ ಪ್ರಯತ್ನವನ್ನು ಮಾಡಿದ್ದಾರೆ. ಹಳ್ಳಿ ಹುಡುಗನ ಹಳ್ಳಿಗಾಡಿನ ಸಿನಿಮಾಗೆ ಭಾನುಪ್ರಕಾಶ್‌ ಹೀರೋ. ಅವರಿಗೆ ಸಂಗೀತ ನಾಯಕಿ. ಈ ಚಿತ್ರಕ್ಕೆ ಅಶೋಕ್‌ ಮತ್ತು ಸುರೇಶ್‌ ಚಿಕ್ಕಣ್ಣ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ವಿನುಮನಸು ಸಂಗೀತ ನೀಡಿದರೆ, ಲೋಕೇಶ್ ಸಾಹಿತ್ಯವಿದೆ. ಬಾಲ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸದ್ಯ ರಿಲೀಸ್‌ಗೆ ಸಜ್ಜಾಗಿರುವ ಸೈದಾಪುರ ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

Related Posts

error: Content is protected !!