ಕನ್ನಡದಲ್ಲಿ ಹಾಸ್ಯ ಸಿನಿಮಾಗಳಿಗೇನೂ ಕೊರತೆ ಇಲ್ಲ. ಇಲ್ಲಿ ಸಾಕಷ್ಟು ಕಾಮಿಡಿ ಜಾನರ್ ಚಿತ್ರಗಳು ಬಂದಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ “ಶ್ರೀರಂಗ” ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಹೌದು, ಈ ಚಿತ್ರ ಈಗ ಚಿತ್ರೀಕರಣ ಪೂರೈಸಿ, ಹಿನ್ನೆಲೆ ಸಂಗೀತ ಕೆಲಸದಲ್ಲಿ ನಿರತವಾಗಿದೆ. ಬಹುತೇಕ ಬೆಂಗಳೂರು ಸುತ್ತಮುತ್ತ ಸುಮಾರು 21ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಕೊರೊನಾ ಹಾವಳಿ ಕಡಿಮೆಯಾದ ಬಳಿಕ, ಆಗಸ್ಟ್ ವೇಳೆಗೆ ಚಿತ್ರಮಂದಿರಗಳಲ್ಲಿ “ಶ್ರೀರಂಗ” ನ ದರ್ಶನವಾಗಲಿದೆ.
ರತು ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸುಮಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರವನ್ನು ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ. ಇದೊಂದು ಹಾಸ್ಯಭರಿತ ಸಿನಿಮಾ. ಇಲ್ಲಿ ಮೂರು ಹಾಡುಗಳಿದ್ದು, ಸಮೀರ್ ಕುಲಕರ್ಣಿ ಅವರು ಸಂಗೀತ ನೀಡುತ್ತಿದ್ದಾರೆ. ಮಿಥುನ್ ಛಾಯಾಗ್ರಹಣವಿದೆ. ಚಂದನ್ ಅವರ ಸಂಕಲನವಿರುವ ಈ ಚಿತ್ರದ ಇಂಟ್ರೋಡೆಕ್ಷನ್ ಹಾಡನ್ನು ವಿರಾಜ್ ಕನ್ನಡಿಗ ಅವರೆ ಬರೆದು, ಹಾಡಿದ್ದಾರೆ.
ಗುರುರಾಜ ಹೊಸಕೋಟೆ, ಯಮುನಾ ಶ್ರೀನಿಧಿ, ಶಿನವ, ರಚನಾ ರೈ, ಮಾಸ್ಟರ್ ಚಿರಾಯು ಚಕ್ರವರ್ತಿ, ರೂಪ ರಾಯಪ್ಪ, ವಂದನಾ ಶೆಟ್ಟಿ, ಸಾಗರ್ ಜಯರಾಂ, ಸೂಪರ್ ದೇವು, ರಾಮಕೃಷ್ಣ, ಜ್ಯೋತಿ ಮೂರುರು, ವೆಂಕಟ್ ಭಾರದ್ವಾಜ್ ಇತರರು ಚಿತ್ರದಲ್ಲಿ ನಟಿಸಿದ್ದಾರೆ. ಶಂಕರ್ ರಾಮನ್ ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ.