ಕಷ್ಟದಲ್ಲಿರೋ ನಿಮ್ಮ ಅಭಿಮಾನಿಗಳಿಗೆ ಏನಾದ್ರೂ ಮಾಡ್ಲಿಕ್ಕಾಗುತ್ತಾ ಡಿಯರ್‌ ಸ್ಟಾರ್ಸ್ಸ್‌? ಫ್ಯಾನ್ಸ್‌ ಪರವಾಗಿ ಸ್ಟಾರ್ಸ್‌ಗೆ ಮನಮಿಡಿಯುವ ಬಹಿರಂಗ ಪತ್ರ ಬರೆದ ವೀರಕಪುತ್ರ ಶ್ರೀನಿವಾಸ್

ದಿನ ಕಳೆದಂತೆ ಕೊರೊನಾ ಹಾವಳಿ ಹೆಚ್ಚುತ್ತಲೇ ಇದೆ. ಸೋಂಕಿತರು ಕೂಡ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅದೆಷ್ಟೋ ಮಂದಿ ಸರಿಯಾದ ಚಿಕಿತ್ಸೆ ಸಿಗದೆ ಸಾವಿಗೀಡಾಗುತ್ತಿದ್ದಾರೆ. ಇದು ತುಂಬಾನೇ ಆಘಾತಕಾರಿ ವಿಷಯ. ಇಂತಹ ಸಮಯದಲ್ಲಿ ಸ್ಟಾರ್‌ ನಟ,ನಟಿಯರು ಯಾಕೆ ಸಹಾಯಕ್ಕೆ ನಿಲ್ಲಬಾರದು? ಈ ಪ್ರಶ್ನೆ ಈಗ ಎಲ್ಲೆಡೆ ಜೋರು ಸದ್ದು ಮಾಡುತ್ತಿದೆ. ಹೀಗೆ ಕೇಳಿರೋದು ಬೇರಾರೂ ಅಲ್ಲ, ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ ವೀರಕಪುತ್ರ ಶ್ರೀನಿವಾಸ್. ಹೌದು, ಈ ಕುರಿತಂತೆ ಅವರೀಗ ಸ್ಟಾರ್‌ ನಟರಿಗೆ ಒಂದು ಪತ್ರ ಬರೆದಿದ್ದಾರೆ. ಆ ಮೂಲಕ ಅವರು ಪ್ರೀತಿಯಿಂದಲೇ ಮನವಿ ಮಾಡಿದ್ದಾರೆ. ನೀವು ಕೋಟ್ಯಾಂತರ ಫ್ಯಾನ್ಸ್‌ಗೆ ಹೀರೋ ಆಗಿದ್ದೀರಿ. ಈಗ ನಿಮ್ಮನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಅಭಿಮಾನಿಗಳು ಕಷ್ಟದಲ್ಲಿದ್ದಾರೆ. ಅಂತಹವರನ್ನು ಗುರುತಿಸಿ ಸಹಾಯಕ್ಕೆ ಮುಂದಾಗಿ ಎಂದು ಮನಮಿಡಿಯುವಂತೆ ಪತ್ರವೊಂದನ್ನು ಬರೆದಿದ್ದಾರೆ. ಅಂದಹಾಗೆ, ವೀರಕಪುತ್ರ ಶ್ರೀನಿವಾಸ್‌ ಅವರು ಬರೆದ ಸುದೀರ್ಘ ಪತ್ರದ ಸಾರಾಂಶವಿದು.

  • ಓಹ್ ಹೌದಾ.., ಹಾಗಾದ್ರೆ ಒಂದಷ್ಟು ಕುಟುಂಬಗಳಿಗೆ ಅಕ್ಕಿ ಕೊಡ್ತೀವಿ! ಒಂದಷ್ಟು ಹೊಟ್ಟೆಗಳಿಗೆ ಅನ್ನ ನೀಡ್ತೀವಿ! ಮಾಸ್ಕ್ ವಿತರಿಸ್ತೀವಿ.. ಒಂದಷ್ಟು ಜನರನ್ನು ಊರುಗಳಿಗೆ ತಲುಪಿಸೋಕೆ ಗಾಡಿ ಕಳಿಸ್ತೀವಿ..
  • ಈ ರೀತಿ ಹೇಳುವ ಸಪ್ಪೆ ನಿರ್ಧಾರಗಳಿಗೆ ಬರಬೇಡಿ ಪ್ಲೀಸ್. ಇಲ್ಲಿ ಜನರ ಜೀವಗಳು ಹೋಗ್ತಿವೆ. ನಿಜಕ್ಕೂ ಏನಾದ್ರೂ ಮಾಡುವುದಿದ್ದರೆ ನಿಮ್ಮ ಸಂಪರ್ಕ, ಪ್ರಭಾವ ಬಳಸಿ ಜನರ ಜೀವಗಳನ್ನು ಕಾಪಾಡಿ.
  • ನಿಮ್ಮ ತೋಟದ ಮನೆಯಲ್ಲೋ, ನಿಮ್ಮ ಹೋಟೆಲ್ ಗಳಲ್ಲೋ, ಅಥವಾ ನಿಮಗೆ ಗೊತ್ತಿರುವ ಕಲ್ಯಾಣಮಂಟಪಗಳಲ್ಲೋ ಒಂದು ನೂರಿನ್ನೂರು ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ತೆರೆದಿಡಿ.

ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದ ಸಾಧಕರು ನೀವು. ತಾಯಿ ಪ್ರೀತಿ ನಂತರ ಅಭಿಮಾನಿಗಳ ಪ್ರೀತಿಯೇ ಅತ್ಯಂತ ಶ್ರೇಷ್ಠವಾದದ್ದು ಎಂಬುದು ನನ್ನ ನಂಬಿಕೆ. ನೀವು ಎಂದೂ ಅವರನ್ನು ನೋಡಲ್ಲ, ನೋಡಿದ್ರೂ ಮಾತನಾಡಿಸಲ್ಲ. ಮಾತನಾಡಿಸಿದ್ರೂ ನಿಮಗೆ ಆ ವ್ಯಕ್ತಿ ಅದರಾಚೆ ನೆನಪಿರಲ್ಲ. ಆದರೂ ಆ ಅಭಿಮಾನಿ ನಿಮ್ಮನ್ನು ಅವನ ಜೀವನದ ಆರಾಧ್ಯದೈವವನ್ನಾಗಿಸಿಕೊಳ್ತಾನೆ. ಜೀವನವಿಡೀ ನಿಮ್ಮನ್ನೇ ಧ್ಯಾನಿಸುತ್ತಾನೆ! ನಿಮ್ಮ ಬಗ್ಗೆ ಎಳ್ಳಷ್ಟು ಅಪಪ್ರಚಾರವಾದ್ರೂ ಹಿಂದೆ ಮುಂದೆ ಯೋಚಿಸದೆ ನಿಮ್ಮ ಪರ ನಿಂತು ಬಿಡ್ತಾನೆ. ನಿಮಗೆ ಕಿಂಚಿತ್ತು ತೊಂದ್ರೆಯಾದ್ರೂ ನೊಂದು ಹೋಗ್ತಾನೆ. ಅಂತಹ ಅಭಿಮಾನಿ ಇವತ್ತು ಕಷ್ಟದಲ್ಲಿದ್ದಾನೆ. ಸೋಂಕಿಗೆ ಒಳಗಾಗುತ್ತಿರುವ ಲಕ್ಷಾಂತರ ಜನರಲ್ಲಿ ನಿಮ್ಮ ಅಭಿಮಾನಿಗಳೂ ಇದ್ದಾರೆ. ಆದ್ರೆ ಅವರು ತಮ್ಮ ಕಷ್ಟವನ್ನು ನಿಮ್ಮ ತನಕ ತಲುಪಿಸಲಾರರು. ಏಕೆಂದರೆ ನೀವು ಅವರಿಗೆ ಗೊತ್ತೇ ವಿನಃ, ಅವರು ನಿಮಗೆ ಗೊತ್ತಿಲ್ಲ. ನಿಮ್ಮ ಹುಟ್ದಬ್ಬಕ್ಕೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ನಿಮಗೆ ವಿಶ್ ಮಾಡಿ ಗೊತ್ತಿದೆಯೇ ಹೊರತು, ನಿಮ್ಮ ಸಂಪರ್ಕದಲ್ಲಿರೋದು ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಪರವಾಗಿ ವರ್ಷಗಟ್ಟಲೆ ಪ್ರಚಾರ ಮಾಡೋದು, ಜಗಳ ಮಾಡೋದು ಗೊತ್ತೇ ವಿನಃ, ನಿಮ್ಮಿಂದ ಏನನ್ನೂ ನಿರೀಕ್ಷಿಸಿ ಗೊತ್ತಿಲ್ಲ. ನಿಮ್ಮ ಸಿನಿಮಾ ಬಿಡುಗಡೆಯಾದಾಗ ಜಾತ್ರೆಯಂತೆ ಖರ್ಚುಮಾಡಿ ಸಂಭ್ರಮಿಸುವುದು ಗೊತ್ತಿದೆಯೇ ವಿನಃ, ಅಷ್ಟೇ ಸಲೀಸಾಗಿ ಕೊರೊನಾಗೆ ಚಿಕಿತ್ಸೆ ಪಡೆಯುವುದು ಹೇಗೆಂದು ಗೊತ್ತಿಲ್ಲ.


ಅಂತಹವರಿಗಾಗಿ ಏನಾದ್ರೂ ಮಾಡ್ಲಿಕ್ಕಾಗುತ್ತಾ ಡಿಯರ್ ಸ್ಟಾರ್ಸ್?
ಕಷ್ಟದಲ್ಲಿರುವ ಅಭಿಮಾನಿಗಳನ್ನು ಹುಡುಕುವುದು ಕಷ್ಟ ಅನ್ನೋದು ಗೊತ್ತು. ನೀವೇನಾದ್ರೂ ಸಹಾಯ ಮಾಡ್ತೀನಿ ಅಂತ ಮುಂದೆ ಬಂದ್ರೆ ಆಕಾಂಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ ಅನ್ನೋದು ಗೊತ್ತು. ಆದ್ರೂ ಏನಾದ್ರೂ ಮಾಡಬಹುದಾ ಈ ಸಂದರ್ಭದಲ್ಲಿ ನೋಡಿ ಪ್ಲೀಸ್. ಏಕೆಂದರೆ ಈ ಸಮಾಜ ನೀವು ಚೆನ್ನಾಗಿರಲು ಏನೆಲ್ಲಾ ಕೊಟ್ಟಿದೆ. ಅಂತಹ ಸಮಾಜ ಇಂದು ಕಷ್ಟದಲ್ಲಿರುವಾಗ “ಸ್ಟೇ ಹೋಮ್‌, ಸ್ಟೇ ಸೇಫ್‌” ಅಂತ ಉಚಿತ ಸಲಹೆಯೊಂದನ್ನು ಕೊಟ್ಟು ನಮ್ಮಂತಹ ಸಾಮಾನ್ಯರಂತೆ ನೀವೂ ಗೂಡು ಸೇರಿ ಕೂತು ಬಿಡೋದು ಯಾವ ನ್ಯಾಯ? ನಿಮಗೆ ಈ ಅಭಿಮಾನಿಗಳು ಮತ್ತು ಸಮಾಜ ನೀಡಿರುವ ಸ್ಥಾನಮಾನ ಸಾಮಾನ್ಯದಲ್ಲವಲ್ಲ?

ಓಹ್ ಹೌದಾ.., ಹಾಗಾದ್ರೆ ಒಂದಷ್ಟು ಕುಟುಂಬಗಳಿಗೆ ಅಕ್ಕಿ ಕೊಡ್ತೀವಿ! ಒಂದಷ್ಟು ಹೊಟ್ಟೆಗಳಿಗೆ ಅನ್ನ ನೀಡ್ತೀವಿ! ಮಾಸ್ಕ್ ವಿತರಿಸ್ತೀವಿ.. ಒಂದಷ್ಟು ಜನರನ್ನು ಊರುಗಳಿಗೆ ತಲುಪಿಸೋಕೆ ಗಾಡಿ ಕಳಿಸ್ತೀವಿ..
ಈ ರೀತಿ ಹೇಳುವ ಸಪ್ಪೆ ನಿರ್ಧಾರಗಳಿಗೆ ಬರಬೇಡಿ ಪ್ಲೀಸ್. ಇಲ್ಲಿ ಜನರ ಜೀವಗಳು ಹೋಗ್ತಿವೆ. ನಿಜಕ್ಕೂ ಏನಾದ್ರೂ ಮಾಡುವುದಿದ್ದರೆ ನಿಮ್ಮ ಸಂಪರ್ಕ, ಪ್ರಭಾವ ಬಳಸಿ ಜನರ ಜೀವಗಳನ್ನು ಕಾಪಾಡಿ. ನಿಮ್ಮ ತೋಟದ ಮನೆಯಲ್ಲೋ, ನಿಮ್ಮ ಹೋಟೆಲ್ ಗಳಲ್ಲೋ, ಅಥವಾ ನಿಮಗೆ ಗೊತ್ತಿರುವ ಕಲ್ಯಾಣಮಂಟಪಗಳಲ್ಲೋ ಒಂದು ನೂರಿನ್ನೂರು ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ತೆರೆದಿಡಿ. ಎಷ್ಟೋ ಜನ ಸಣ್ಣ ಸಣ್ಣ ರೂಮುಗಳಲ್ಲಿ, ಸಿಂಗಲ್ ಬೆಡ್ ರೂಮ್ ಇರುವ ಮನೆಗಳಲ್ಲಿ ವಾಸಿಸ್ತಿದ್ದಾರೆ. ದುಡಿಯಲು ಹೊರಗಡೆ ಹೋಗುವ ಒಬ್ಬರಿಗೆ ಕೊರೊನಾ ಬಂದರೆ ಮನೆಯವರೆಲ್ಲರೂ ಕೊರೊನಾ ಸೋಂಕಿಗೆ ಒಳಗಾಗಬೇಕಾದ ಪರಿಸ್ಥಿತಿ ಇದೆ.

ಅಂತಹವರಿಗೆ ನಿಮ್ಮ ಕೋವಿಡ್ ಕೇರ್ ಸೆಂಟರ್ ಆದ್ಯತೆ ನೀಡಲಿ. ಜೊತೆಗೆ ಸರ್ಕಾರದ ಜೊತೆ ನಿರಂತರ ಸಂಪರ್ಕ ಸಾಧಿಸಿ ನಿಜಕ್ಕೂ ಅಗತ್ಯವಿರುವಂತಹವರಿಗೆ ಹಾಸಿಗೆ, ಆಕ್ಸಿಜನ್ ಗಳನ್ನು ದೊರಕಿಸಿಕೊಡಿ! ಕೊರೊನಾ ಬಂದಿದ್ದಕ್ಕೆ ಜನ ಸಾಯ್ತಿಲ್ಲ, ಸರ್ಕಾರ ಚಿಕಿತ್ಸೆ ನೀಡಲು ವಿಫಲವಾಗಿರುವ ಕಾರಣಕ್ಕೆ ಜನ ಸಾಯ್ತಿರೋದು. ಅಂತಹ ಅಸಹಾಯಕರಿಗೆ ತಮ್ಮ ಸಹಾಯಹಸ್ತ ಸಿಗಬಾರದೇಕೆ? ನಿಮ್ಮ ಮಾತನ್ನು ಅಷ್ಟು ಸಲೀಸಾಗಿ ಅಲ್ಲಗೆಳೆಯುವಂತಹ ಯಾವ ಮಂತ್ರಿಗಳೂ, ಆಸ್ಪತ್ರೆಗಳೂ ನಮ್ಮ ಕರ್ನಾಟಕದಲ್ಲಿಲ್ಲ. ಈ ನಿಟ್ಟಿನಲ್ಲಿ ಯೋಚಿಸಬಾರದೇಕೆ?
ಕೊನೇ ಮಾತು..
ಭಾರತದಲ್ಲಿ ಸುಮಾರು ಸ್ಟಾರ್ ನಟರಿದ್ದಾರೆ. ಆದರೆ ಕೋವಿಡ್ ಬಂದ್ಮೇಲೆ ಜನ ರಿಯಲ್ ಸ್ಟಾರ್ ಎಂದು ಗುರುತಿಸಿದ್ದು ಮತ್ತು ಗೌರವಿಸಿದ್ದು ಬಾಲಿವುಡ್‌ ನಟ ಸೋನುಸೂದ್ ಎಂಬೊಬ್ಬ ಪೋಷಕನಟನನ್ನು ಮಾತ್ರ! ನಿಮ್ಮ ಅಭಿಮಾನಿಗಳಿಗೆ ನೀವು ಮಾದರಿಯಾಗಿರುವ ಹಾಗೆ, ನಿಮಗೆ ಸೋನುಸೂದ್ ಮಾದರಿಯಾಗಲೆಂದು ಆಶಿಸುವೆ..
-ವೀರಕಪುತ್ರ ಶ್ರೀನಿವಾಸ.

Related Posts

error: Content is protected !!