Categories
ಸಿನಿ ಸುದ್ದಿ

ಪ್ರೇಮ ಪೂಜೆಯಲ್ಲಿ ಪ್ರೇಮ್‌! ನೆನಪಿರಲಿ ಇದು ಬಹು ನಿರೀಕ್ಷೆಯ 25 ನೇ ಚಿತ್ರ ; ಪ್ರೇಮಂ ಪೂಜ್ಯಂ ಟೈಟಲ್‌ ಸಾಂಗ್‌ ಲಿರಿಕಲ್‌ ವಿಡಿಯೋ ಸಿಕ್ತು ಭರಪೂರ ಮೆಚ್ಚುಗೆ…

ಕನ್ನಡದ ಸ್ಪುರದ್ರೂಪಿ ನಟ ಅಂದಾಕ್ಷಣ ನೆನಪಾಗೋದೇ “ನೆನಪಿರಲಿ” ಪ್ರೇಮ್.‌ ಹೌದು, ಎಂದೂ ವಯಸ್ಸೇ ಬತ್ತದಂತಿರುವ ಸ್ಮೈಲ್‌ ಹೀರೋ ಪ್ರೇಮ್‌ ಈಗ ಪ್ರೇಮ ಪೂಜೆಯ ಜಪದಲ್ಲಿದ್ದಾರೆ. ಪ್ರೇಮ್‌ ಕನ್ನಡ ಚಿತ್ರರಂಗದ ಲವ್ಲಿಸ್ಟಾರ್ ಎಂಬ ಮಾತಿಗೆ ಹೇಳಿ ಮಾಡಿಸಿದ ಸ್ಟಾರ್‌ ಅನ್ನೋದು ಸತ್ಯ. ಇಷ್ಟು ವರ್ಷಗಳ ಕಾಲ ಎಲ್ಲಾ ಬಗೆಯ ಚಿತ್ರಗಳನ್ನು ನೀಡಿರುವ ಪ್ರೇಮ್‌, ಯುವ ಮನಸ್ಸುಗಳ ಅದರಲ್ಲೂ ಹುಡುಗಿಯರ ಫೇವರೇಟ್‌ ಹೀರೋ ಅನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಪ್ರೇಮ್‌ ಅವರ ಸಿನಿ ಜರ್ನಿಯನ್ನೊಮ್ಮೆ ಹಿಂದಿರುಗಿ ನೋಡಿದರೆ, ಅಲ್ಲಿ ಗೆಲುವಿದೆ, ಸೋಲೂ ಇದೆ. ಖುಷಿಯ ಹೆಜ್ಜೆಯೂ ಇದೆ. ನೋವಿನ ಹಾಡೂ ಇದೆ. ಆದರೆ, ಇವೆಲ್ಲವನ್ನೂ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿ, ಸಾಧನೆಯ ಮೆಟ್ಟಿಲೇರಿದ ಬ್ಯೂಟಿಫುಲ್‌ ಹೀರೋ ಎಂಬುದು ನೆನಪಿರಲಿ.
ಇಷ್ಟಕ್ಕೂ ಈಗ ಈ ಪ್ರೇಮ್‌ ಕುರಿತು ಇಷ್ಟೋಂದು ಪೀಠಿಕೆ ಯಾಕೆ ಅನ್ನೋ ಪ್ರಶ್ನೆ ಎದುರಾಗಬಹುದು. ಅದಕ್ಕೆ ಕಾರಣ, ಅವರ ಬಹು ನಿರೀಕ್ಷೆಯ “ಪ್ರೇಮಂ ಪೂಜ್ಯಂ”.

ಹೌದು, ಇದು ಅವರ 25ನೇ ಸಿನಿಮಾ ಅನ್ನೋದು ವಿಶೇಷ. ಸದ್ಯ ಬಿಡುಗಡೆಗೆ ತಯಾರಾಗಿರುವ ಈ ಚಿತ್ರ, ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಚಿತ್ರದ‌ ಟೈಟಲ್ಲೇ ಹೇಳುತ್ತೆ ಇದೊಂದು ಪಕ್ಕಾ ಇಂಟ್ರೆಸ್ಟಿಂಗ್‌ ಲವ್‌ಸ್ಟೋರಿ ಅಂತ. ಪ್ರೇಮ್‌ ಅವರ ಈವರೆಗಿನ ಲವ್‌ಸ್ಟೋರಿ ಸಿನಿಮಾಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ಗೆಲುವಿನ ಗೆರೆಗಳದ್ದೇ ಆರ್ಭಟ. ಆ ಆರ್ಭಟ ಪ್ರೇಮಂ ಪೂಜ್ಯಂವರೆಗೂ ಮುಂದುವರೆಯೋ ಸೂಚನೆ ಈಗಾಗಲೇ ಸಿಕ್ಕಿದೆ ಕೂಡ. ಆರಂಭದಿಂದಲೂ ಪೋಸ್ಟರ್ ಮೂಲಕವೇ ಸದ್ದು ಮಾಡಿದ್ದ “ಪ್ರೇಮಂ ಪೂಜ್ಯಂ”, ಈಗ ಮತ್ತೊಂದು ಸುದ್ದಿಗೂ ಕಾರಣವಾಗಿದೆ. ಯುಗಾದಿ ವಿಶೇಷ ಎಂಬಂತೆ ಚಿತ್ರದ ಟೈಟಲ್‌ ಸಾಂಗ್‌ ಲಿರಿಕಲ್‌ ವಿಡಿಯೊ ಬಿಡುಗಡೆಯಾಗಿದೆ. ಬಿಡುಗಡೆಯಾದ ಕ್ಷಣದಲ್ಲೇ ಲಕ್ಷಾಂತರ ವೀಕ್ಷಣೆ ಪಡೆದಿದೆ. ಅಷ್ಟೇ ಅಲ್ಲ, ಮೆಚ್ಚುಗೆಗೂ ಪಾತ್ರವಾಗಿದೆ.

ಪ್ರೇಮಂ ಪೂಜ್ಯಂ. ದೈವಂ ಚರಣಂ ನಿತ್ಯಂ ನಿಲಯಂ ಸತ್ಯಂ ವರದಂ… ಹೀಗೆ ಸಾಗುವ ಟೈಟಲ್‌ ಸಾಂಗ್‌ ಲಿರಿಕಲ್‌ ವಿಡಿಯೋ ನಿಜಕ್ಕೂ ಖುಷಿ ಕೊಡುತ್ತದೆ. ಪ್ರೀತಿಯ ಮಜಲುಗಳ ಬಗ್ಗೆ ಸಾರುವ ಸಾಹಿತ್ಯದಲ್ಲಿ ಒಂದ್ರೀತಿ ಲವ್ಲಿ ಸ್ಪರ್ಶವಿದೆ. ಕೆಡಂಬದಿ ಕ್ರಿಯೇಷನ್ಸ್‌ನಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್‌ ಪ್ರೇಮ್‌ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡಿದ್ದಾರೆ.

ಡಾ.ರಾಘವೇಂದ್ರ ಬಿ.ಎಸ್.‌ ಅವರು ಈ ಸಿನಿಮಾದ ನಿರ್ದೇಶನ ಮಾತ್ರವಲ್ಲ, ಸಂಗೀತ ಸಂಯೋಜನೆ ಜೊತೆ ಸಾಹಿತ್ಯವನ್ನೂ ಬರೆದಿದ್ದಾರೆ. ಹರಿಹರನ್‌ ಧ್ವನಿಯಲ್ಲಿ ಮೂಡಿ ಬಂದಿರುವ ಈ ಟೈಟಲ್‌ ಸಾಂಗ್‌ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೆ ಉಳಿಯುವಂತಿದೆ. ಸಾಹಿತ್ಯದ ಸಾಲುಗಳಲ್ಲಿ ಸಾರವಿದೆ.

ಕಿವಿಗಿಂಪೆನಿಸುವ ರಾಗ ಸಂಯೋಜನೆ ಜೊತೆ ಸಾಹಿತ್ಯ ಕೂಡ ಅರ್ಥಪೂರ್ಣ. ಹಾಗಾಗಿಯೇ, ಇದು ಯೂಥ್ಸ್‌ಗೊಂದು ಪ್ರೀತಿಯ ಹಾಡಾಗಿ ಉಳಿಯುವುದರಲ್ಲಿ ಅಚ್ಚರಿ ಇಲ್ಲ. ಇನ್ನು, ಈ ಚಿತ್ರದ ಪೋಸ್ಟರ್‌ ನೋಡಿದವರಿಗೆ ಪ್ರೇಮ್‌ ಮತ್ತಷ್ಟು ನ್ಯೂ ಲುಕ್‌ನಲ್ಲಿ ಆಕರ್ಷಿಸುತ್ತಾರೆ. ಫ್ರೆಶ್‌ ಲೊಕೇಷನ್‌ ಜೊತೆ ಅಷ್ಟೇ ಕ್ಯೂಟ್‌ ಜೋಡಿ ಕಾಣಿಸಿಕೊಂಡಿರುವುದನ್ನು ನೋಡಿದರೆ, ಸಿನಿಮಾ ನೋಡುವ ಕಾತುರ ಹೆಚ್ಚದೇ ಇರದು. ಚಿತ್ರಕ್ಕೆ ನವೀನ್‌ ಕುಮಾರ್‌ ಕ್ಯಾಮೆರಾ ಹಿಡಿದರೆ, ಹರೀಶ್‌ ಕೊಮ್ಮೆ ಸಂಕಲನವಿದೆ. ಇಂತಹ ನಿರೀಕ್ಷೆಯ ಸಿನಿಮಾಗೆ ಡಾ.ರಕ್ಷಿತ್‌ ಕೆಡಂಬದಿ, ಡಾ.ರಾಜಕುಮಾರ್‌ ಜಾನಕಿರಾಮನ್‌, ಡಾ.ರಾಘವೇಂದ್ರ ಎಸ್‌, ಮನೋಜ್‌ ಕೃಷ್ಣನ್‌ ನಿರ್ಮಾಪಕರು.

ಅದೇನೆ ಇರಲಿ, ಪ್ರತಿಯೊಬ್ಬ ನಟನಿಗೂ ತನ್ನ ಮೊದಲ ಚಿತ್ರ ಹೇಗೆ ವಿಶೇಷ ಆಗುತ್ತೋ, ಹಾಗೆಯೇ ಅವರ ಪ್ರತಿಯೊಂದು ಸಿನಿಮಾ ಕೂಡ ವಿಶೇಷವೇ. ಅದರಲ್ಲೂ 25 ನೇ ಸಿನಿಮಾ ಅಂದಾಕ್ಷಣ, ಅದೊಂದು ಮೈಲಿಗಲ್ಲು ಎನಿಸುವುದು ಸಹಜ. ಅಂತಹ ೨೫ನೇ ಹೊಸ್ತಿಲಲ್ಲಿ ಇರುವ ಪ್ರೇಮ್‌, 25ನೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ, ಚಿತ್ರದ ಕಥೆ ಮತ್ತು ಪಾತ್ರ. ಇಲ್ಲಿ ಪ್ರೀತಿಗೆ ಹೆಚ್ಚು ಆದ್ಯತೆ ಕೊಡಲಾಗಿದೆ. ಅದೇ ಪ್ರೇಮಂ ಪೂಜ್ಯಂ ವಿಶೇಷ. ಒಂದಂತೂ ನಿಜ.

ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳ ಕಾಲ ಸೋಲು-ಗೆಲುವನ್ನು ಕಂಡು ಇಂದಿಗೂ ರನ್ನಿಂಗ್‌ನಲ್ಲಿರುವುದು ಸುಲಭದ ಮಾತಲ್ಲ. ಪ್ರೇಮ್‌ ಆ ವಿಷಯದಲ್ಲಿ ಅದೃಷ್ಟವಂತರು. ಆರಂಭದಲ್ಲೇ ಯಶಸ್ಸು ಕಂಡ ಪ್ರೇಮ್‌, ಸಾಲು ಸಾಲು ಸಿನಿಮಾಗಳ ಮೂಲಕ ಗಮನಸೆಳೆದರು. ಹುಡುಗಿಯರ ಪಾಲಿಗಂತೂ ಲವ್ಲಿ ಸ್ಟಾರ್‌ಆಗಿಯೇ ಉಳಿದಿರುವ ಪ್ರೇಮ್‌ ಅವರ “ಪ್ರೇಮಂ ಪೂಜ್ಯಂ” ನೋಡಲು ತುದಿಗಾಲ ಮೇಲೆ ನಿಂತಿರೋದಂತೂ ಸತ್ಯ. ಸದ್ಯಕ್ಕೆ “ಪ್ರೇಮಂ ಪೂಜ್ಯಂ. ದೈವಂ ಚರಣಂ, ನಿತ್ಯಂ ನಿಲಯಂ, ಸತ್ಯಂ ವರದಂ… ಹಾಡು ಗುನುಗುತ್ತಿದ್ದಾರೆ ಅವರ ಫ್ಯಾನ್ಸ್.

Categories
ಸಿನಿ ಸುದ್ದಿ

ಯುಗಾದಿಗೆ ಕ್ರೇಜಿಸ್ಟಾರ್‌ ಸಾಮಾಜಿಕ ತಾಣಕ್ಕೆ ಎಂಟ್ರಿ! ಇನ್ಮುಂದೆ ಸೋಶಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್‌ಗೆ ಸಿಗ್ತಾರೆ ರವಿಚಂದ್ರನ್

ರವಿಚಂದ್ರನ್‌ ಕನ್ನಡ ಚಿತ್ರರಂಗ ಕಂಡ ಸ್ಟಾರ್‌ ನಟ. ಅವರು ಸ್ಟಾರ್ ನಟರಷ್ಟೇ ಅಲ್ಲ, ಯಶಸ್ವಿ ನಿರ್ದೇಶಕರು, ಸಕ್ಸಸ್‌ಫುಲ್‌ ನಿರ್ದೇಶಕರಷ್ಟೇ ಅಲ್ಲ, ಅವರೊಳಗೊಬ್ಬ ಒಳ್ಳೆಯ ಕಥೆಗಾರನಿದ್ದಾನೆ. ಒಟ್ಟಾರೆ, ಅವರೊಬ್ಬ ರೈಟರ್‌, ಮ್ಯೂಸಿಕ್‌ ಡೈರೆಕ್ಟರ್‌, ಲಿರಿಕ್‌ ರೈಟರ್‌ ಹೀಗೆ ಸಿನ್ಮಾ ವಿಭಾಗದಲ್ಲಿ ಎಲ್ಲವನ್ನೂ ಕರಗತ ಮಾಡಿಕೊಂಡವರು. ತಾವು ಅಂದುಕೊಂಡಿದ್ದನ್ನು ಮಾಡದೇ ಬಿಡದ ವ್ಯಕ್ತಿತ್ವ ಅವರದು. ತಮಗೆ ಇಷ್ಟವಿಲ್ಲದ್ದನ್ನು ನೇರವಾಗಿಯೇ ಹೇಳುವ ವ್ಯಕ್ತಿಯೂ ಹೌದು. ಈಗ ರವಿಚಂದ್ರನ್‌ ಅವರ ಕುರಿತು ಇಷ್ಟೊಂದು ಪೀಠಿಕೆ ಯಾಕೆ ಗೊತ್ತಾ? ಅವರು ಇನ್ನು ಮುಂದೆ ಸದಾ ಸುದ್ದಿಯಲ್ಲಿರುತ್ತಾರೆ! ಅರೇ, ಹೀಗಂದಾಕ್ಷಣ, ಇಷ್ಟು ದಿನ ಸುದ್ದಿಯಲ್ಲಿರಲಿಲ್ಲವೇ? ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತೆ. ಇದೆಲ್ಲವೂ ಹೌದು, ಅವರೀಗೆ ಸೋಶಿಯಲ್‌ ಮೀಡಿಯಾಗೆ ಎಂಟ್ರಿಯಾಗುತ್ತಿದ್ದಾರೆ.

ಅದರಲ್ಲೂ ಹೊಸ ವರ್ಷಕ್ಕೆ. ಅಂದರೆ ಯುಗಾದಿ ಹಬ್ಬಕ್ಕೆ. ಈಗಾಗಲೇ ಥೇಟ್‌ ಸಿನಿಮಾ ಶೈಲಿಯಲ್ಲೇ ಅವರು ಟೀಸರ್‌ ಬಿಡುಗಡೆ ಮಾಡುವ ಮೂಲಕ ತಾವು ಸೋಶಿಯಲ್‌ ಮೀಡಿಯಾಗೆ ಎಂಟ್ರಿ ಕೊಡುವ ಕುರಿತು ಹೇಳಿಕೊಂಡಿದ್ದರು. ಅದಕ್ಕೆ ಈಗ ಸಮಯ‌ ಬಂದಾಗಿದೆ.
ಹೌದು, ಕನ್ನಡದ ಬಹುತೇಕ ಸ್ಟಾರ್‌ ನಟರು ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಸದಾ ಟ್ವಿಟ್ಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಅಂತೆಲ್ಲಾ ಸದ್ದು ಮಾಡುತ್ತಲೇ ಇದ್ದಾರೆ. ಇಷ್ಟು ದಿನ ಸುಮ್ಮನಿದ್ದರೂ ಸುದ್ದಿಯಾಗುತ್ತಿದ್ದ ರವಿಚಂದ್ರನ್‌ ಅವರು, ಇನ್ನು ಮುಂದೆ ಸದಾ ಸೋಶಿಯಲ್‌ ಮೀಡಿಯಾ ಮೂಲಕ ತಮ್ಮ ಫ್ಯಾನ್ಸ್‌ಗೆ ಸಿಗಲಿದ್ದಾರೆ. ಹೌದು, ಅವರೂ ಕೂಡ ಇನ್ಮುಂದೆ ಟ್ವಿಟ್ಟರ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ತಾಣಗಳಲ್ಲಿ ಸಕ್ರಿಯರಾಗಲಿದ್ದಾರೆ.

ಆ ಮೂಲಕ ತಮ್ಮದೇ ಫ್ಯಾನ್ಸ್‌ ಜೊತೆ ಒಂದಷ್ಟು ವಿಷಯ ಹಂಚಿಕೊಳ್ಳಲಿದ್ದಾರೆ. ಇದರೊಂದಿಗೆ ಹೊಸ ಚಿತ್ರಗಳ ಅಪ್‌ಡೇಟ್‌ ಸೇರಿದಂತೆ ಇತ್ಯಾದಿ ವಿನೂತನ ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ. ರವಿಚಂದ್ರನ್‌ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಈಗ ರವಿಚಂದ್ರನ್‌ ಅವರು ಅಧಿಕೃತವಾಗಿ ಸೋಶಿಯಲ್‌ ಮೀಡಿಯಾಗೆ ಎಂಟ್ರಿಯಾಗುತ್ತಿದ್ದಾರೆ ಅಂದಮೇಲೆ, ಅವರನ್ನು ಸ್ವಾಗತಿಸೋಕೆ ಈಗಾಗಲೇ ಅವರ ಫ್ಯಾನ್ಸ್‌ ತುದಿಗಾಲ ಮೇಲೆ ನಿಂತಿದ್ದಾರೆ. ಇಷ್ಟು ವರ್ಷಗಳ ಕಾಲ ತೆರೆಯ ಮೇಲೆ ಭರಪೂರ ಮನರಂಜನೆ ಕೊಡುತ್ತಲೇ, ಆಗಾಗ ಅಭಿಮಾನಿಗಳಿಗೆ ದರ್ಶನ ಕೊಡುತ್ತಿದ್ದ ರವಿಚಂದ್ರನ್‌, ಇನ್ನು ಮುಂದೆ ಸೋಶಿಯಲ್‌ ಮೀಡಿಯಾ ಮೂಲಕ ಸದಾ ಕಾಣಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಕೊಡಲು ಮುಂದಾಗಿದ್ದಾರೆ.

ಸಹಜವಾಗಿಯೇ ಇದು ಅವರ ಅಭಿಮಾನಿಗಳಿಗೆ ಸಂತಸ ಕೊಟ್ಟಿದೆ. ರವಿಚಂದ್ರನ್‌ ಅವರು ಏನೇ ಮಾಡಿದರೂ ಅಲ್ಲೊಂದು ವಿಶೇಷತೆ ಇದ್ದೇ ಇರುತ್ತೆ. ಈಗ ಸೋಶಿಯಲ್‌ ಮೀಡಿಯಾದಲ್ಲಿ ಎಂಟ್ರಿಯಾಗುವ ಸುದ್ದಿ ಕೂಡ ಅಷ್ಟೇ ಸ್ಪೆಷಲ್‌ ಆಗಿದೆ. ಮುಂದಿನ ದಿನಗಳಲ್ಲಿ ರವಿಚಂದ್ರನ್‌ ತಮ್ಮ ಹೊಸ ಆಲೋಚನೆಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಫ್ಯಾನ್ಸ್‌ ಕೆಲ ಪ್ರಶ್ನೆಗಳಿಗೂ ಉತ್ತರವಾಗಲಿದ್ದಾರೆ ಎಂಬುದೇ ಅವರ ಅಭಿಮಾನಿ ಬಳಗಕ್ಕೆ ಖುಷಿ. ಅದೇನೆ ಇರಲಿ, ರವಿಚಂದ್ರನ್‌ ಅಂದರೆ, ನಿಷ್ಕಲ್ಮಷ ಪ್ರೀತಿ ಕಾಣುತ್ತೆ. ಅದು ತೆರೆ ಮುಂದೆಯೂ ಹೌದು, ತೆರೆ ಹಿಂದೆಯೂ ಹೌದು. ಅವರನ್ನು ಆಳವಾಗಿ ಬಲ್ಲವರಿಗೆ ಮಾತ್ರ ರವಿಚಂದ್ರನ್‌ ವ್ಯಕ್ತಿತ್ವ ಏನು, ಹೇಗೆ ಎಂಬುದು ಗೊತ್ತು. ಸದ್ಯ ಏಪ್ರಿಲ್‌ ೧೩ರಂದು ೯ ಗಂಟೆಗೆ ರವಿಚಂದ್ರನ್‌ ಸೋಶಿಯಲ್‌ ಮೀಡಿಯಾಗೆ ಗ್ರಾಂಡ್‌ ಎಂಟ್ರಿಕೊಡಲಿದ್ದಾರೆ. ಅಂದಹಾಗೆ, ರವಿಚಂದ್ರನ್ ಸದ್ಯ ಬಹುನಿರೀಕ್ಷೆಯ ಕನ್ನಡಿಗ ಸಿನಿಮಾ ಮುಗಿಸಿದ್ದಾರೆ. ಬಿ.ಎಂ ಗಿರಿರಾಜ್ ನಿರ್ದೇಶನದ ಈ ಚಿತ್ರದಲ್ಲಿ ರವಿಚಂದ್ರನ್ ಗುಣಭದ್ರ ಪಾತ್ರ ಮಾಡಿದ್ದಾರೆ. ಅವರ ಮತ್ತೊಂದು ಸಿನಿಮಾ “ರವಿ ಬೋಪಣ್ಣ” ಸಿನಿಮಾ ಕೂಡ ಬರಲು ಸಜ್ಜಾಗುತ್ತಿದೆ.

Categories
ಸಿನಿ ಸುದ್ದಿ

ನಟ ಸಾರ್ವಭೌಮನಿಲ್ಲದ ಹದಿನೈದು ವರ್ಷ! ಅಣ್ಣಾವ್ರನ್ನ ಪ್ರೀತಿಯಿಂದ ಸ್ಮರಿಸಿದ ಅಭಿಮಾನಿ ದೇವರು


ಕನ್ನಡ ಚಿತ್ರರಂಗದ ದಂತಕಥೆ ಡಾ.ರಾಜಕುಮಾರ್‌ ಎವರ್‌ಗ್ರೀನ್‌ ನಟ. ಏಪ್ರಿಲ್‌ ೧೨ ಅವರು ಅಗಲಿದ ದಿನ. ಅವರಿಲ್ಲದೆ ಹದಿನೈದು ವರ್ಷಗಳು ಉರುಳಿವೆ. ಆದರೆ, ಇಂದಿಗೂ ಡಾ.ರಾಜಕುಮಾರ್‌ ಕನ್ನಡಿಗರ ಆರಾಧ್ಯ ದೈವ. ಸದಾ ಕನ್ನಡ ಜನರ ಪ್ರೀತಿಯ ರಾಜರಾಗಿರುವ ಡಾ.ರಾಜಕುಮಾರ್‌ ಅವರನ್ನು ಕಳಕೊಂಡ ದಿನವಾದ್ದರಿಂದ ರಾಜ್ಯಾದ್ಯಂತ ಅವರ ಅಪಾರ ಅಭಿಮಾನಿಗಳು ಅವರನ್ನು ಸ್ಮರಿಸಿದ್ದಾರೆ, ಪೂಜಿಸಿದ್ದಾರೆ. ಇನ್ನೂ ಕೆಲವರು ದೂರದ ಊರುಗಳಿಂದಲೂ ಆಗಮಿಸಿ, ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ ಸ್ಮಾರಕಕ್ಕೆ ನಮಿಸುತ್ತಿದ್ದಾರೆ.

ಅಣ್ಣಾವ್ರ ಕುಟುಂಬ ಕೂಡ ಪ್ರತಿವರ್ಷದಂತೆ ಅಣ್ಣಾವ್ರ ಸ್ಮಾರಕ ಬಳಿ ತೆರಳಿ ಪೂಜಿಸಿದೆ. ಅವರ ಅಭಿಮಾನಿಗಳು ರಾಜಕುಮಾರ್‌ ಅವರ ಭಾವಚಿತ್ರ ಹಿಡಿದು “ಮತ್ತೆ ಹುಟ್ಟಿ ಬಾ ಅಣ್ಣಾ” ಎಂದು ಪ್ರೀತಿಯಿಂದಲೂ ಕೂಗಿದರೆ, ಇನ್ನೂ ಕೆಲವು ಅಭಿಮಾನಿಗಳು ಅವರ ಹಾಡುಗಳ ಮೂಲಕ ಮತ್ತೆ ಮತ್ತೆ ಸ್ಮರಿಸುತ್ತಲೇ ಇದ್ದಾರೆ.
.ರಾಜಕುಮಾರ್‌ ಅವರು ಒಂದೇ ವರ್ಗದವರಿಗೆ ಸೀಮಿತರಾದವರಲ್ಲ. ಅವರನ್ನು, ಕ್ರೀಡೆ, ರಾಜಕೀಯ ಹೀಗೆ ಹಲವು ಕ್ಷೇತ್ರಗಳ ಗಣ್ಯರೂ ಸ್ಮರಿಸುತ್ತಾರೆ.

ಅಷ್ಟರಮಟ್ಟಿಗೆ ಎಲ್ಲರ ಮನವನ್ನು ಸೂರೆಗೊಂಡವರು. ಅಂದಹಾಗೆ, ಡಾ.ರಾಜಕುಮಾರ್‌ ಅವರನ್ನು ಹಲವು ರಾಜಕೀಯ ಗಣ್ಯರು ಸ್ಮರಿಸಿದ್ದಾರೆ. ಹಾಗೆಯೇ ಕನ್ನಡ ಚಿತ್ರರಂಗದ ನಟ,ನಟಿಯರು, ನಿರ್ಮಾಪಕ, ನಿರ್ದೇಶಕಿಯರೂ ಅಣ್ಣಾವ್ರು ಸ್ಮರಿಸಿದ್ದಾರೆ.
ಡಾ.ರಾಜಕುಮಾರ್‌ ಅಂದಾಕ್ಷಣ, ಅವರ ಹಲವು ಸಾಮಾಜಿಕ ಸಂದೇಶವಿರುವ ಸಿನಿಮಾಗಳು ಕಣ್ಣೆದುರಿಗೆ ಬರುತ್ತವೆ. ಅವರ ಸಿನಿಮಾಗಳು ಅದೆಷ್ಟೋ ಮನಸ್ಸುಗಳನ್ನು ಒಂದು ಮಾಡಿವೆ. ಅದೆಷ್ಟೋ ಜನರಲ್ಲಿ ಹೊಸ ಬದಲಾವಣೆ ತಂದಿವೆ. ಇಂದಿಗೂ ಸಿನಿಮಾ ಮೂಲಕ ತಮ್ಮ ಬದುಕನ್ನು ಹಸನು ಮಾಡಿಕೊಂಡವರೂ ಇದ್ದಾರೆ. ಕನ್ನಡಕ್ಕೆ ಏನಾದರೂ ತೊಂದರೆ ಆಗುತ್ತೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆಯೇ ಅಣ್ಣಾವ್ರು ಹಿಂದೆ ಮುಂದೆ ನೋಡದೆ ಕನ್ನಡದ ಪರ ಧ್ವನಿ ಎತ್ತುತ್ತಿದ್ದರು. ಸದಾ ಕನ್ನಡಿಗರನ್ನು ಅಭಿಮಾನಿ ದೇವರು ಎಂದು ಕರೆಯುತ್ತಿದ್ದ ಅವರ ಪುಣ್ಯತಿಥಿ ದಿನದಂದು ಅಭಿಮಾನಿ ಬಳಗ ನಮನ ಸಲ್ಲಿಸಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಟ್ವೀಟ್ ಮೂಲಕ ”ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕರ್ನಾಟಕದ ಅತ್ಯಂತ ಜನಪ್ರಿಯ ಚಲನಚಿತ್ರ ನಟ, ಗಾಯಕ, ಅಭಿಮಾನಿಗಳಿಗೆ ದೇವರ ಸ್ಥಾನ ಕೊಟ್ಟ ನಟಸಾರ್ವಭೌಮ ಡಾ. ರಾಜಕುಮಾರ್ ಅವರ ಪುಣ್ಯತಿಥಿಗೆ ನನ್ನ ನಮನಗಳು” ಎಂದು ಹೇಳಿದ್ದಾರೆ. ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಸಹ ಟ್ವೀಟ್‌ ಮೂಲಕ ಸ್ಮರಿಸಿದ್ದಾರೆ.
ಇನ್ನು, ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು, ತಮ್ಮ ಟ್ವೀಟ್‌ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಹೆಚ್‌ಎಎಲ್‌ ಏರ್‌ಪೋರ್ಟ್‌ಗೆ ಅಣ್ಣಾವ್ರ ಹೆಸರನ್ನು ಶಿಫಾರಸ್ಸು ಮಾಡಿ. ಅಣ್ಣಾವ್ರ ಹೆಸರಿಟ್ಟ ಹೆಗ್ಗಳಿಕೆ ನಿಮ್ಮದಾಗುತ್ತದೆ” ಎಂದು ಮನವಿ ಮಾಡಿದ್ದಾರೆ.

Categories
ಸಿನಿ ಸುದ್ದಿ

ಓಟಿಟಿ ಬ್ರೊಕರ್ಸ್ ಮಾಫಿಯಾ ವಿರುದ್ಧ ಧ್ವನಿ ಎತ್ತಿದ ಚಿತ್ರರಂಗ: ಸುಲಿಗೆಯ ನಾನಾ ರೂಪ ಬಹಿರಂಗಗೊಳಿಸಿದ ನಿರ್ಮಾಪಕರು!

ಓಟಿಟಿ ಬ್ರೋಕರ್ಸ್ ವಿರುದ್ಧ ಚಿತ್ರೋದ್ಯಮ ಸೊಲ್ಲೆತ್ತಿದೆ. ಕೆಲವು ನೊಂದ ನಿರ್ಮಾಪಕರು ತಮಗಾದ ಅನ್ಯಾಯದ ವಿರುದ್ಧ ಇದೀಗ ಧ್ವನಿ ಎತ್ತಿದ್ದಾರೆ. ಈ ಬ್ರೋಕರ್ಸ್ ದಂಧೆಗೆ ಕಡಿವಾಣ ಬೀಳದಿದ್ದರೆ, ಕೊರೋನಾ ಎಂಬ ಕೆನ್ನಾಲಿಗೆಯಲ್ಲಿ ಬೆಂದ ನಿರ್ಮಾಪಕರಿಗೆ ಇನ್ನಷ್ಟು ಮೋಸ, ಮತ್ತಷ್ಟು ಅನ್ಯಾಯ ಖಚಿತ ಅಂತ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸದ್ಯಕ್ಕೆ “ಆಪರೇಷನ್ ನಕ್ಷತ್ರ”ದ ಚಿತ್ರದ ನಿರ್ಮಾಪಕ ಕಿಶೋರ್‌ ಕುಮಾರ್‌ ಅವರು ಈಗ ತಮಗಾದ ಅನ್ಯಾಯವನ್ನು ಹೊರ ಹಾಕಿದ್ದಾರೆ.

ವೆಂಕಟೇಶ್ ಆಚಾರ್ಯ ಎಂಬಾತ ತಮಗೆ ಮೋಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗಾದರೆ ಈ ಓಟಿಟಿ ಮೋಸದ ಜಾಲವಾದರೂ ಹೇಗೆ ? ಆ ಬಗ್ಗೆ ನಾವ್ ನಿಮಗೆ ಹೇಳುವ ಮುನ್ನ ಒಟಿಟಿ ಅಂದರೇನು? ಇದಕ್ಕಿಂದ್ದಂತೆ ಅದು ಹೇಗೆಲ್ಲ ಹುಟ್ಟಿಕೊಂಡಿತು, ಯಾರೆಲ್ಲ ಇದರಲ್ಲಿದ್ದಾರೆ ಎನ್ನುವುದೇ ಒಂದು ಇಂಟರೆಸ್ಟಿಂಗ್ ಸ್ಟೋರಿ. ಮೊದಲು ಆ ಕಥೆಯನ್ನೊಮ್ಮೆ ಕೇಳಿ.

ಓವರ್ ದಿ ಟಾಪ್ : ಓಟಿಟಿ ಅಂದರೆ ಇದೊಂದು ಡಿಜಿಟಲ್ ಪ್ಲಾಟ್ ಫಾರ್ಮ್. ಓವರ್ ದಿ ಟಾಪ್ ಎನ್ನುವುದು ಇದರ ಪೂರ್ಣಾರ್ಥ (ಫುಲ್ ಫಾರ್ಮ್). ಅಂದರೆ ಅಂತಾರ್ಜಾಲದಲ್ಲಿ ವೆಬ್ ಸೀರಿಸ್ ಅಥವಾ ಚಲನಚಿತ್ರಗಳನ್ನು ನಿಗದಿತ ದರಗಳ ಮೇಲೆ ಗ್ರಾಹಕರಿಗೆ ಒದಗಿಸುವ ಒಂದು ಸಾಧನ. ಸದ್ಯಕ್ಕೀಗ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಈ ಪ್ಲಾಟ್ ಫಾರ್ಮ್‌ಗೆ ಬಹುಬೇಡಿಕೆ ಬಂದಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಸಿನಿಮಾ ಅಥವಾ ವೆಬ್ ಸೀರಿಸ್ ನಿರ್ಮಾಪಕ‌ರ ಆದ್ಯತೆಗಳು ಕೂಡ ಈಗ ಓಟಿಟಿ ಕಡೆಗೆ ಹೆಚ್ಚಿವೆ. ಹಾಗೆಯೇ ಸ್ಯಾಟಲೈಟ್ ಟಿವಿ ಚಾನೆಲ್‌ಗಳು ಕೂಡ ಓಟಿಟಿ ಕೆಳಗಡೆಯೇ ಬರುತ್ತಿವೆ.
ಒಂದಲ್ಲ ಎರಡಲ್ಲ, ಹತ್ತಾರು: ಓಟಿಟಿನಲ್ಲೀಗ ಸದ್ಯಕ್ಕೆ ಅಮೇಜಾನ್ ಪ್ರೈಮ್, ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್ ಲೀಡಿಂಗ್‌ನಲ್ಲಿವೆ. ಇವು ಕನ್ನಡದ ಸ್ಟಾರ್ ಸಿನಿಮಾಗಳ ಜತೆಗೆ ಹೊಸಬರ ಸಿನಿಮಾಗಳನ್ನು ಖರೀದಿಸುತ್ತಿವೆ. ಅಂತಿಮವಾಗಿ ಅವುಗಳಿಗೂ ಲಾಭವೇ ಟಾರ್ಗೆಟ್ ಆಗಿರುವುದರಿಂದ ಕಂಟೆಟ್ ಕಡೆಗೂ‌ ಹೆಚ್ಚು ಆದ್ಯತೆ ನೀಡಿವೆ. ಇದರ ಜತೆಗೆ ಸಾಕಷ್ಟು ಪ್ಲಾಟ್ ಫಾರ್ಮ್‌ಗಳು ಹುಟ್ಟಿಕೊಂಡಿವೆ. ನಮ್ದು ಕನ್ನಡದ್ದೇ ಅಂತ ಹೇಳಿಕೊಂಡ ಓಟಿಟಿಗಳು ಈಗ ಎಲ್ಲೆಡೆ ಹುಟ್ಟಿಕೊಂಡಿವೆ. ಕೂ, ಕನ್ನಡ ಫ್ಲಿಕ್ಸ್, ಫಿಲಂ ಬಜಾರ್… ಹೀಗೆ ಲೆಕ್ಕ ಹಾಕಿದರೆ‌ ನೂರಾರು ಇವೆ. ಇವುಗಳಿಗೆ ಸಿನಿಮಾ‌ ಬೇಕು. ವೆಬ್‌ಸೀರಿಸ್‌ಗಳು ಬೇಕು. ಅವರು ಬಯಸುತ್ತಾರೋ ಇಲ್ಲವೋ ಗೊತ್ತಿಲ್ಲ, ಅವರಿಗೆಲ್ಲ ನಿಮ್ಮ ಸಿನಿಮಾ ಮಾರಾಟ ಮಾಡಿಕೊಡ್ತೀವಿ ಅಂತ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಬ್ರೋಕರ್ಸ್ ಮಾಫಿಯಾವೇ ಈಗ ತಲೆ ಎತ್ತಿದೆ ಎಂಬುದು ವಿಶೇಷ. ಅದರಲ್ಲೂ ಇವರದು ಸುಲಿಗೆ ದಂಧೆ ಅಂದರೆ ನಂಬಲೇಬೇಕು. ಹಾಗಾದರೆ, ಅದು ಹೆಂಗೆ?

ಓಟಿಟಿ‌ ಓನರ್‌ಗಳೆಲ್ಲ ಇವರ ಮಾವಂದಿರು!
ನಿಜ, ಇದು ವ್ಯವಹಾರ. ನಿರ್ಮಾಪಕರಿಗೆ ತಮ್ಮ ಸಿನಿಮಾ ಮಾರಾಟವಾಗಬೇಕು, ಓಟಿಟಿನವರಿಗೆ ಸಿನಿಮಾ ಬೇಕು. ಇವರ ಮಧ್ಯೆ ವ್ಯವಹಾರಕ್ಕೆ ಅಂತ ಈಗ ಲೆಕ್ಜವಿಲ್ಲದಷ್ಟು ಮಂದಿ ಹುಟ್ಟಿಕೊಂಡಿದ್ದಾರೆ. ಇವರೆಲ್ಲ ಯಾರು, ಎಲ್ಲಿಂದ ಬಂದರೂ? ಯಾರೊಬ್ಬರಿಗೂ ಗೊತ್ತಿಲ್ಲ. ಆದರೆ ಅವರೆಲ್ಲ ಅಮೇಜಾನ್‌ನವರು ಭಾವಂದಿರು, ನೆಟ್ ಫ್ಲಿಕ್ಸ್ ತಮಗೆ ಅಳಿಯಂದರು, ಉಳಿದವರೆಲ್ಲ ಭಾವಂದಿರು ಅಂತೆಲ್ಲ ತಮಗೆ ತಾವೇ ಅಂದುಕೊಂಡು ಫೋಸು ಕೊಡುತ್ತಾರೆ. ಇದು ರಂಗುರಂಗಿನ ದುನಿಯಾ ಆಗಿದ್ದರಿಂದ ಕೆಲವು ನಿರ್ಮಾಪಕರು ಕೂಡ ಇದು ನಿಜವೇ ಇರಬೇಕೆಂದು ನಂಬುತ್ತಾರೆ. ಕೊನೆಗೆ ಯಾರಾದರೂ ಇರಲಿ, ತಮ್ಮ ಸಿನಿಮಾ ಒಳ್ಳೆಯ ರೇಟ್‌ಗೆ ಸೇಲ್ ಆಗಿಬಿಟ್ಟರೆ ಸಾಕಪ್ಪ ಅಂತಂದುಕೊಳ್ಳುತ್ತಾರೆ. ಹಾಗಾಗಿ ಅದೇ ಅವರಿಗೆ ಬಂಡವಾಳ.

ಹೇಳೋದೊಂದು, ಮಾಡೋದೇ ಇನ್ನೊಂದು: ಇದು ಪಕ್ಕಾ ಮೋಸದ ವ್ಯವಹಾರ.‌ ಬ್ರೋಕರ್‌ಗಳ್ಯಾರು ನಿರ್ಮಾಪಕರನ್ನು ಅಮೇಜಾನ್, ನೆಟ್ ಫ್ಲಿಕ್ಸ್ ಅಥವಾ ಇನ್ನಾವುದೇ ಓಟಿಟಿ ಮಾಲೀಕರ ಹತ್ತಿರ ಕರೆದುಕೊಂಡು ಹೋಗೋದಿಲ್ಲ‌ ಅದನ್ನೇ ಬಂಡವಾಳ ಮಾಡಿಕೊಳ್ಳುವ ಬ್ರೋಕರ್ಸ್ ಅಲ್ಲಿ ತನ್ನದೇ ವ್ಯವಹಾರ ಮಾಡ್ತಾನೆ. ಹೊರಗೆ ಬಂದು ನಿರ್ಮಾಪಕನಿಗೆ ಇನ್ನೊಂದು ವ್ಯವಹಾರದ ಮೊತ್ತ ಹೇಳ್ತಾನೆ. ಟಿವಿ ರೈಟ್ಸ್ ಸೇಲ್ ಮಾಡಿಕೊಡ್ತೀನಿ ಅಂದವನು ಕೂಡ ಇದನ್ನೇ ಮಾಡ್ತಾನೆ. ಚಾನೆಲ್ ಹೆಡ್ ಬಳಿ ಮಾತನಾಡೋದೇ ಒಂದು, ನಿರ್ಮಾಪಕನಿಗೆ ಹೇಳೋದೇ ಇನ್ನೋಂದು. ಇನ್ನು ಕೆಲವರು ಸಿನಿಮಾ ಟಿವಿ ರೈಟ್ಸ್, ಓಟಿಟಿ ರೈಟ್ಸ್ ಸೇಲ್ ಅಗಿದ್ದರೂ, ನಿರ್ಮಾಪಕರ ಬಳಿ ‌ಆಗಿಲ್ಲ ಅಂತ ಸುಳ್ಳು ಹೇಳಿ ಯಾಮಾರಿಸಿದ್ದು ಇದೆ. ಸದ್ಯಕ್ಕೆ “ಆಪರೇಷನ್ ನಕ್ಷತ್ರ” ಚಿತ್ರದ ನಿರ್ಮಾಪಕ‌ ಕಿಶೋರ್ ತಮಗಾದ ಅನ್ಯಾಯವನ್ನ ಇಲ್ಲಿ ಹೊರ ಹಾಕಿದ್ದಾರೆ. ಹಾಗೆಯೇ ಅವರ ಪರವಾಗಿ ಒಂದಷ್ಟು ನಿರ್ಮಾಪಕರು ಧ್ವನಿ ಎತ್ತಿದ್ದಾರೆ.

ಪೆನ್ಸಿಲ್‌ ಬಾಕ್ಸ್‌ಗೂ ಸಮಸ್ಯೆ!
ಇವರ ಮಾತಿಗೆ ಧ್ವನಿಗೂಡಿಸಿರುವ ನಿರ್ಮಾಪಕ ನಾಗೇಶ್‌ ಕುಮಾರ್‌ ಕೂಡ ಇಂತಹ ಓಟಿಟಿ ಹೆಸರು ಹೇಳಿಕೊಂಡು ಬರುವ ಸುಳ್ಳು ಬ್ರೋಕರ್ಸ್‌ ಮೇಲೆ ಹರಿಹಾಯ್ದಿದ್ದಾರೆ. “ಈ ಓಟಿಟಿಗೆ ಸಿನಿಮಾಗಳನ್ನು ಮಾರಾಟ ಮಾಡಿಕೊಡ್ತೀವಿ ಅನ್ನುವವರ ಬಗ್ಗೆ ನಿರ್ಮಾಪಕರು ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ. ವೆಂಕಟೇಶ್‌ ಆಚಾರ್ಯ ಎಂಬಾತನೊಬ್ಬನಾದರೆ, ಕೃಷ್ಣ ಎಂಬಾತ “ಪೆನ್ಸಿಲ್‌ ಬಾಕ್ಸ್” ಸಿನಿಮಾ ರೀ ರಿಲೀಸ್‌ ಮಾಡಿಕೊಡ್ತೀನಿ ಅಂದಿದ್ದಾನೆ. ನಿರ್ಮಾಪಕರಿಗೂ ಇದು ಸಮಸ್ಯೆಯೇ. ಇಲ್ಲಿ ನ್ಯಾಯವಾಗಿರುವವರಿಗೆ ಸಂಕಷ್ಟವೇ ಜಾಸ್ತಿ. ಜಾಸ್ತಿ ತುಂಬಿಕೊಂಡಿದ್ದಾರೆ. ಡಬ್ಬಿಂಗ್‌ ರೈಟ್ಸ್‌ ಆ ರೈಟ್ಸ್‌ ಈ ರೈಟ್ಸ್‌ ಅಂತಾರೆ ತುಂಬಾನೇ ಮೋಸವಿದೆ ಇಲ್ಲಿ. ಆ ಬಗ್ಗೆ ಎಚ್ಚೆತ್ತುಕೊಳ್ಳಲೇಬೇಕು. ನೇರವಾಗಿಯೇ ಸಂಬಂಧಿಸಿದವರನ್ನು ಸಂಪರ್ಕಿಸಿ ತಮ್ಮ ಸಿನಿಮಾದ ಹಕ್ಕು ಮಾರಾಟ ಮಾಡಿ ಅಂದಿರುವ ನಾಗೇಶ್‌ ಕುಮಾರ್, ನನಗೂ ಇಂತಹ ಅನುಭವ ಆಗಿದೆ. ಇಲ್ಲಿ ಹೊಸ ನಿರ್ಮಾಪಕರು ಬಂದರೆ, ಅವರನ್ನು ಯಾಮಾರಿಸುವ ಮಂದಿ ಹೆಚ್ಚಿದ್ದಾರೆ. ಮೊದಲೇ ಕೊರೊನಾ ಹಾವಳಿಗೆ ತತ್ತರಿಸಿರುವ ನಿರ್ಮಾಪಕರಿಗೆ ಇಂತಹ ಮಾಫಿಯಾದವರು ಹುಟ್ಟುಕೊಂಡಿದ್ದಾರೆ‌. ಈ ಕುರಿತಂತೆ ನಾನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಡಬೇಕು ಅಂತ ನಿರ್ಧರಿಸಿದ್ದೇನೆ. ಈ ರೀತಿ ಮೋಸ ಹೋಗಿರುವ ನಿರ್ಮಾಪಕರೆಲ್ಲರೂ ಈ ವಿರುದ್ಧ ಧ್ವನಿ ಎತ್ತಬೇಕು ಅನ್ನೋದು ಅವರ ಮಾತು.

ಮಂಡಳಿ ಸಭೆ: ಸಂಬಂಧ ಒಂದಷ್ಟು ನಿರ್ಮಾಪಕರು ವಾಣಿಜ್ಯ ಮಂಡಳಿಯಲ್ಲಿ ದೂರು ಸಲ್ಲಿಸಿದ್ದು, ಶನಿವಾರ ಸಭೆ ಕೂಡ ನಡೆಸಲಾಗಿದೆ. ಸಭೆಯಲ್ಲಿ ನಾಗೇಶ್‌ ಕುಮಾರ್‌, ಕುಮಾರ್‌, ಕಿಶೋರ್‌ , ಶ್ರೀನಿವಾಸ್ ಅವರು ಈ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನು, ಕುಮಾರ್‌ ಎಸ್‌, ನಾಗೇಂದ್ರ ಅರಸ್ ‌ ಮೊದಲಿನಿಂದಲೂ ಈ ವಿರುದ್ಧ ‌ ಧ್ವನಿ ಎತ್ತಿದ್ದಾರೆ. ಮಂಡಳಿಯಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿದ್ದು, ನಿರ್ಮಾಪಕರು ಹೀಗೆ ಇದ್ದರೆ ಮೋಸ ಮಾಡುತ್ತಲೇ ಇರುತ್ತಾರೆ. ಎಲ್ಲಾ ನಿರ್ಮಾಪಕರಿಗೂ ಮಂಡಳಿ ಜೊತೆ ನಿಲ್ಲಲಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಯಾರು ಈ ವೆಂಕಟೇಶ್ ಆಚಾರ್ಯ : ವೆಂಕಟೇಶ್ ಆಚಾರ್ಯ ಎಂಬಾತ ಎರಡು ವರ್ಷಗಳ ಹಿಂದೆ “ಆಪರೇಷನ್‌ ನಕ್ಷತ್ರ” ಸಿನಿಮಾವನ್ನು ೧೮ ಲಕ್ಷಕ್ಕೆ ಓಟಿಟಿಗೆ ಅಂತ ಖರೀದಿ ಮಾಡಿದ್ದರು. ಆ ಸಂಬಂಧ ಅಗ್ರಿಮೆಂಟ್ ಕೂಡ ಆಗಿತ್ತು. ಆ ಪ್ರಕಾರ ಆತ ಅರವತ್ತು ದಿನಗಳಿಗೆ ಅಷ್ಟು ಅಮೌಂಟ್ ಕ್ಲಿಯರ್ ಮಾಡಬೇಕಿತ್ತು. ಇದಾಗಿ ಒಂದಷ್ಟು ದಿನಕ್ಕೆ ಆ ಚಿತ್ರ ಅಮೇಜಾನ್‌ನಲ್ಲೂ ಬಂತು. ಆದರೆ ನಮಗೆ ಬರಬೇಕಿದ್ದ ದುಡ್ಡು ಸರಿಯಾದ ಸಮಯಕ್ಕೆ ಬರಲಿಲ್ಲ. ಕೇಳಿದರೆ ನಾಳೆ, ನಾಡಿದ್ದು ಅಂತ ಹೇಳುತ್ತಲೇ ಬಂದಿದ್ದಾರೆ. ‌ಕೊನೆಗೆ ಅವರ ವಿರುದ್ಧ ಚೇಂಬರ್‌ನಲ್ಲಿ ಹೇಳಿಕೊಂಡರೂ ಅಲ್ಲೂ ನ್ಯಾಯ ಸಿಕ್ಕಿಲ್ಲ. ವೆಂಕಟೇಶ್ ಆಚಾರ್ಯ ‌ಚೇಂಬರ್ ಮೆಂಬರ್ ಅಲ್ಲ ಅಂತ ಸುಮ್ಮನಾಗಿದ್ದಾರೆ. ಸಾಲ ಮಾಡಿ ಹಣ ಹಾಕಿರುವ ನಮಗೆ ನಿಜಕ್ಕೂ ಅನ್ಯಾಯವಾಗಿದೆ ಎಂಬುದು “ಆಪರೇಷನ್ ನಕ್ಷತ್ರ” ಚಿತ್ರದ ನಿರ್ಮಾಪಕ ಕಿಶೋರ್‌ ಮಾತು.

Categories
ಸಿನಿ ಸುದ್ದಿ

ಬೆಳ್ಳಿತೆರೆಗೆ ಮತ್ತೆ ಬಂದ್ರು ರಾಮ್‌ಕುಮಾರ್‌ ; ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತು ಅಂತಾರೆ ಸ್ಪುರದ್ರೂಪಿ ನಟ!

ಕಲಾವಿದನಿಗೆ ಕಲೆ ಅನ್ನೋದು ನಿತ್ಯ ನಿರಂತರ. ಅದರಲ್ಲೂ ಕಲಾವಿದ ಒಮ್ಮೆ ಬಣ್ಣ ಹಚ್ಚಿದರೆ, ಅದು ಕೊನೆಯವರೆಗೂ ಹಚ್ಚುತ್ತಲೇ ಇರಬೇಕು, ಬೆಳ್ಳಿಪರದೆ ಮೇಲೆ ಸದಾ ಮಿಂಚುತ್ತಲೇ ಇರಬೇಕು ಅಂತೆನಿಸದೇ ಇರದು. ಇಲ್ಲೀಗ ಹೇಳಹೊರಟಿರುವ ವಿಷಯ, ತೆರೆಮೇಲೆ ಕಾಣಿಸಿಕೊಳ್ಳದೆ ಒಂದಷ್ಟು ಗ್ಯಾಪ್‌ ಕೊಟ್ಟಿದ್ದ ಒಂದು ಕಾಲದ ಸಕ್ಸಸ್‌ಫುಲ್‌ ಹೀರೋ ರಾಮ್‌ಕುಮಾರ್‌ ಅವರದ್ದು. ಹೌದು, ರಾಮ್‌ಕುಮಾರ್‌ ಈಗ ಮತ್ತೊಮ್ಮೆ ತೆರೆಮೇಲೆ ರಾರಾಜಿಸಲು ಸಜ್ಜಾಗಿದ್ದಾರೆ ಅದೇ ಈ ಹೊತ್ತಿನ ವಿಶೇಷ. ಈಗಾಗಲೇ ರಾಮ್‌ಕುಮಾರ್‌ ಅವರ ಪುತ್ರ ಧೀರನ್‌, ಪುತ್ರಿ ಧನ್ಯಾ ಅವರು ಬೆಳ್ಳಿತೆರೆಗೆ ಎಂಟ್ರಿಕೊಟ್ಟಿದ್ದಾರೆ. ವರ್ಷಗಳ ಗ್ಯಾಪ್‌ ನಂತರ ರಾಮ್‌ಕುಮಾರ್‌ ಕೂಡ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಹಾಗಂತ, ಅಪ್ಪ, ಮಗ,ಮಗಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದುಕೊಂಡರೆ ಆ ಊಹೆ ನಿಜಕ್ಕೂ ತಪ್ಪು.
ಇಷ್ಟಕ್ಕೂ ಈಗ ರಾಮ್‌ಕುಮಾರ್‌ ಅವರು ನಟಿಸುತ್ತಿರುವ ಸಿನಿಮಾದ ಹೆಸರು “ಶೀಘ್ರ ಮೇವ ಕಲ್ಯಾಣ ಪ್ರಾಪ್ತಿರಸ್ತು”. ಈ ಸಿನಿಮಾ ಮೂಲಕ ಹೊಸ ಇನ್ನಿಂಗ್ಸ್‌ ಶುರುಮಾಡಿದ್ದಾರೆ ರಾಮ್‌ಕುಮಾರ್.‌ ಇನ್ನು, ಈ ಚಿತ್ರವನ್ನು ಪ್ರವೀಣ್‌ ಚೆನ್ನಪ್ಪ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದ ರಾಮ್‌ಕುಮಾರ್‌, ಒಂದೊಳ್ಳೆಯ ಸಿನಮಾ ಮೂಲಕವೇ ಹೊಸ ಇನ್ನಿಂಗ್ಸ್‌ಗೆ ಕಾಲಿಡುತ್ತಿದಾರೆ. ಇವರೊಂದಿಗೆ “ದಿಯಾ” ಖ್ಯಾತಿಯ ದೀಕ್ಷಿತ್ ಶೆಟ್ಟಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

ಇದೊಂದು ಬಾಂಧವ್ಯದ ಸಿನಿಮಾ. ಈಗಿನ ವಾಸ್ತವತೆಗೆ ತಕ್ಕಂತಹ ಕಥಾಹಂದರ ಇಲ್ಲಿದೆ. ಸದ್ಯಕ್ಕೆ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ರಾಮ್‌ಕುಮಾರ್‌ ಇಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದರೂ, ಇಡೀ ಕಥೆ ಅವರ ಸುತ್ತವೇ ಸಾಗುತ್ತದೆ. ಅವರಿಲ್ಲಿ ಕೃಷ್ಣಮೂರ್ತಿ ಎಂಬ ಲೆಕ್ಚರರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗುತ್ತಿದೆ. ಅದೇನೆ ಇರಲಿ, ಸುಂದರ ಮೊಗದ ನಟ ರಾಮ್‌ಕುಮಾರ್‌ ಅವರು ಎಲ್ಲೋ ಮರೆಯಾಗಿಬಿಟ್ಟರು ಅನ್ನುವ ಹೊತ್ತಿಗೆ “ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತು” ಅನ್ನುತ್ತಲೇ ಅವರು ಎಂಟ್ರಿಯಾಗುತ್ತಿದ್ದಾರೆ.

ಸದ್ಯಕ್ಕೆ ಅವರನ್ನು ಪುನಃ ತೆರೆ ಮೇಲೆ ಕಾಣಲು ಒಂದಷ್ಟು ಮಂದಿ ಕಾತುರರಾಗಿರುವುದಂತೂ ನಿಜ.
ಈ ಚಿತ್ರದ ಮೂಲಕ ಮತ್ತೆ ರಾಮ್‌ಕುಮಾರ್‌ ಅವರನ್ನು ಕರೆತರುತ್ತಿರುವುದು ನಿರ್ಮಾಪಕ ನಾಗೇಶ್‌ ಕುಮಾರ್.‌ ಈ ಹಿಂದೆ “ನಮ್‌ ಗಣಿ ಬಿಕಾಂ ಪಾಸ್‌” ಎಂಬ ಮೆಚ್ಚುಗೆಯ ಸಿನಿಮಾ ನಿರ್ಮಿಸಿ ಭರವಸೆ ಮೂಡಿಸಿರುವ ನಿರ್ಮಾಪಕರು, ಈಗಾಗಲೇ “ಗಜಾನನ ಗ್ಯಾಂಗ್‌” ಎಂಬ ಚಿತ್ರವನ್ನೂ ನಿರ್ಮಿಸಿದ್ದಾರೆ. ಆ ಚಿತ್ರ ಸದ್ಯ ಪೋಸ್ಟ್‌ ಪ್ರೊಡಕ್ಷನ್‌ನಲ್ಲಿರುವ ಬೆನ್ನಲ್ಲೇ ಅವರು, “ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತುʼ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.

ಹೊಸಬರಿಗೆ ಸದಾ ಅವಕಾಶ ಕೊಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಸಿನಿಮಾಗಳನ್ನೇ ನೀಡಬೇಕು ಅಂತ ಪಣ ತೊಟ್ಟಿರುವ ನಿರ್ಮಾಪಕ ನಾಗೇಶ್‌ ಕುಮಾರ್‌, ಇಷ್ಟರಲ್ಲೇ ಹೊಸ ತಂಡದ ವಿಭಿನ್ನ ಕಥೆ ಇರುವ ಸಿನಿಮಾ ಬಗ್ಗೆಯೂ ಮಾಹಿತಿ ಕೊಡುವುದಾಗಿ ಹೇಳುತ್ತಾರೆ.

Categories
ಸಿನಿ ಸುದ್ದಿ

ಕನ್ನಡದ ಆಕ್ಟ್‌ 1978 ಹಿಂದಿಗೆ ರಿಮೇಕ್; ಬಾಲಿವುಡ್‌ನಲ್ಲಿ ನಟಿಸೋ ‌ ನಟಿ ಯಾರೆಂಬುದು ಗೌಪ್ಯ

ಕನ್ನಡದ ಹಲವು ಸಿನಿಮಾಗಳು ಬೇರೆ ಭಾಷೆಗಳಿಗೆ ರಿಮೇಕ್‌ ಆಗುವುದು ಹೊಸದೇನಲ್ಲ. ಈಗಾಗಲೇ ಸಾಕಷ್ಟು ಕನ್ನಡದ ಸಿನಿಮಾಗಳು ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಿಗೆ ರಿಮೇಕ್‌ ಆಗಿರುವುದುಂಟು. ಈಗ ಆ ಸಾಲಿಗೆ ಮಂಸೋರೆ ನಿರ್ದೇಶನದ “ಆಕ್ಟ್‌ -೧೯೭೮” ಚಿತ್ರ ಕೂಡ ಹಿಂದಿಗೆ ರಿಮೇಕ್‌ ಆಗುತ್ತಿದೆ. ಈ ವಿಷಯವನ್ನು ಸ್ವತಃ ನಿರ್ದೇಶಕ ಮಂಸೋರೆ ಅವರು ಸ್ಪಷ್ಟಪಡಿಸಿದ್ದಾರೆ.

ಯಜ್ಞಾ ಶೆಟ್ಟಿ ಪ್ರಮುಖ ಆಕರ್ಷಣೆಯಾಗಿದ್ದ ಈ ಚಿತ್ರ ವಿಭಿನ್ನ ಕಥಾಹಂದರದ ಮೂಲಕ ಎಲ್ಲರ ಮನಗೆದ್ದಿತ್ತು. ಆ ಸಿನಿಮಾಗೆ ಎಲ್ಲೆಡೆಯಿಂದಲೂ ಪ್ರಶಂಸೆ ಬಂದಿತ್ತು. ಈ ನಿಟ್ಟಿನಲ್ಲಿ ಈಗ ಹಿಂದಿ ಭಾಷೆಗೆ ರಿಮೇಕ್‌ ಆಗುತ್ತಿದೆ. ಆದರೆ, ಹಿಂದಿ ಭಾಷೆಯ ಈ ಸಿನಿಮಾಗೆ ನಿರ್ದೇಶಕರು ಯಾರು ಅನ್ನೋದು ಗೊತ್ತಿಲ್ಲ. ಯಾವ ನಟಿ ನಟಿಸುತ್ತಾರೆ ಅನ್ನೋದು ತಿಳಿದಿಲ್ಲ. ಹಾಗೇನಾದರೂ ನಿರ್ದೇಶನಕ್ಕೆ ಅವಕಾಶ ಸಿಕ್ಕರೆ, ಮಂಸೋರೆ ಅವರು ನಿರ್ದೇಶನಕ್ಕೂ ಸೈ ಎನ್ನುತ್ತಾರೆ.


ಅಂದಹಾಗೆ, ಕೊರೊನಾ ಲಾಕ್‌ಡೌನ್‌ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ, ಚಿತ್ರಮಂದಿರಕ್ಕೆ ಮೊದಲ ಬಾರಿಗೆ ಎಂಟ್ರಿಕೊಟ್ಟ ಸಿನಿಮಾ ಇದಾಗಿತ್ತು. ಭಯದ ವಾತಾವರಣದ ಸಮಯದಲ್ಲೂ ಜನರು ಚಿತ್ರಮಂದಿರಕ್ಕೆ ಬಂದಿದ್ದರು. ಬಂದವರನ್ನು ನಿರಾಸೆಗೊಳಸಿದ ಈ ಚಿತ್ರ ಯಶಸ್ವಿಯಾಗಿತ್ತು. ಮಹಿಳೆಯೊಬ್ಬಳು ಸರ್ಕಾರ ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಬುದ್ಧಿ ಕಲಿಸಲು ಯಾವ ಅಸ್ತ್ರ ಪ್ರಯೋಗಿಸುತ್ತಾಳೆ ಎಂಬುದು ಚಿತ್ರದ ಹೈಲೈಟ್.‌ ನ್ಯಾಯಕ್ಕಾಗಿ ಆಕೆ ಏನೆಲ್ಲಾ ಸರ್ಕಸ್‌ ಮಾಡ್ತಾಳೆ, ಕೊನೆಗೆ ಆಕೆ ಅದರಲ್ಲಿ ಯಶಸ್ವಿಯಾಗ್ತಾಳಾ ಇಲ್ಲವಾ ಅನ್ನೋದು ಕಥಾವಸ್ತು. ಈ ಚಿತ್ರ ಈ ಹಿಂದೆಯೇ ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದ್ದು, ಅಲ್ಲೂ ಉತ್ತಮ ಮೆಚ್ಚುಗೆ ಪಡೆದುಕೊಂಡಿದೆ.

Categories
ಸಿನಿ ಸುದ್ದಿ

ಸ್ಟಾರೇ ನಮ್ಮನೆ ದೇವ್ರು! ಕಾಲು ಕಳಕೊಂಡ್ರೂ ಯುವರತ್ನ ಮೇಲಿನ ಪ್ರೀತಿ ಕಮ್ಮಿಯಾಗಲಿಲ್ಲ; ದೇವ್ರಿಗೆ ಹರಿಕೆ ತೀರಿಸಿದ ಕಿಚ್ಚನ ಅಭಿಮಾನಿ – ಸಲಗ ಗೆಲುವಿಗೆ ಟ್ಯಾಟೋ ಹಾಕಿಸಿಕೊಂಡ ಫ್ಯಾನ್ ಇದು ಪ್ರೀತಿಯ ಅಭಿಮಾನ

ಅದೇನೋ ಗೊತ್ತಿಲ್ಲ. ಈ ಸಿನಿಮಾನೇ ಹಾಗೆ. ಇದೊಂದು ಮ್ಯಾಜಿಕ್‌ಲೋಕ. ಭಾವಗಳನ್ನು ಬೆಸೆಯುವ ಕಲೆ ಈ ಸಿನಿಮಾಗಿದೆ. ನೋವು-ನಲಿವುಗಳ ಸಂಗಮ ಇಲ್ಲಿದ್ದರೂ, ಸದಾ ಉತ್ಸಾಹ ತುಂಬುವ ಕೆಲಸ ಸಿನಿಮಾ ಮಾಡುತ್ತೆ ಅಂದರೆ ನಂಬಲೇಬೇಕು. ಹೌದು, ಫ್ಯಾನ್ಸ್‌ ಇಲ್ಲದೆ ಸ್ಟಾರ್ಸ್‌ ಇಲ್ಲ. ಸಿನಿಮಾಗಳಿಲ್ಲದೆ ಅಭಿಮಾನಿಗಳಿಲ್ಲ. ಅಷ್ಟರ ಮಟ್ಟಿಗೆ ಬೆಸೆದಿರುವ ಸಿನಿಮಾ ರಂಗವಿದು. ಅದೊಂದು ರೀತಿ ಸ್ಟಾರ್‌ಗಳಿಗೂ, ಅಭಿಮಾನಿಗಳಿಗೂ ಇರುವ ಅವಿನಾಭಾವ ಸಂಬಂಧ. ಅದೆಷ್ಟೋ ಸಿನಿಮಾಗಳು ಒಡೆದ ಮನಸ್ಸುಗಳನ್ನು ಒಂದು ಮಾಡಿವೆ. ದೂರವಾದ ಗೆಳೆಯರನ್ನು ಒಂದುಗೂಡಿಸಿವೆ. ಊರಿಗೆ ಊರೇ ಒಗ್ಗೂಡಿ ದುಡಿಮೆ ಮಾಡುವಂತಹ ಸಂದೇಶವನ್ನ ಸಾರಿವೆ. ಸಮಾಜದಲ್ಲಿ ಬದಲಾವಣೆ ತರುವಂತಹ ಕೆಲಸ ಕೂಡ ಕೆಲವು ಸಿನಿಮಾಗಳಿಂದ ಆಗಿದೆ ಅನ್ನೋದು ವಿಶೇಷ.

ಇಲ್ಲಿ ಪ್ರತಿಯೊಬ್ಬ ನಟರಿಗೂ ತನ್ನದೇ ಅಭಿಮಾನಿ ಬಳಗವಿದೆ. ಅವರಿಗೆ ತಮ್ಮ ಪ್ರೀತಿಯ ಹೀರೋ ಅಂದರೆ ಸಾಕು, ಪ್ರಾಣ ಕೊಡುವಷ್ಟರ ಮಟ್ಟಿಗೆ ಪ್ರೀತಿ ತೋರುತ್ತಾರೆ. ಈಗಾಗಲೇ ಅಂತಹ ಅನೇಕ ಘಟನೆಗಳು ಕಣ್ಣೆದುರಿಗಿವೆ. ಅಂತಹ ಅಭಿಮಾನಿಗಳ ಅಭಿಮಾನ ಕುರಿತು ಹೇಳೋದಾದರೆ, ಅದೆಷ್ಟೋ ಹಿರೋಗಳನ್ನು ಪೂಜಿಸುವ ಫ್ಯಾನ್ಸ್‌ ಇದ್ದಾರೆ. ಎದೆ ಮೇಲೆ, ಕೈ ಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದವರೂ ಇದ್ದಾರೆ. ಇನ್ನೇನು ಸಾವು-ಬದುಕಿನ ಜೊತೆ ಹೋರಾಡುವ ಅದೆಷ್ಟೋ ಫ್ಯಾನ್ಸ್‌, ನಾವು ಸಾಯುವ ಮುನ್ನ ನನ್ನ ಹೀರೋನನ್ನು ನೋಡಬೇಕು ಅಂತ ಹಠ ಹಿಡಿದು ದರ್ಶನ ಭಾಗ್ಯ ಪಡೆದವರೂ ಇದ್ದಾರೆ. ಅಂತಹ ಅಭಿಮಾನಿಗಳ ಪ್ರೀತಿಗೆ ಸೋತು ಹೋಗುವ ಸ್ಟಾರ್‌ನಟರು ಕೂಡ ತಮ್ಮ ಫ್ಯಾನ್ಸ್‌ ಆಸೆ ಈಡೇರಿಸಿರುವ ಉದಾಹರಣೆಗೆ ಲೆಕ್ಕವಿಲ್ಲ.‌

ಇತ್ತೀಚೆಗಷ್ಟೇ ಮೈಸೂರಿನ ಪುನೀತ್‌ ರಾಜಕುಮಾರ್‌ ಅಭಿಮಾನಿಯೊಬ್ಬ ಮೃತಪಟ್ಟಿದ್ದ. ಆತನಿಗೆ ಪುನೀತ್‌ ಅಂದರೆ ಎಲ್ಲಿಲ್ಲದ ಪ್ರೀತಿ. ಪುನೀತ್‌ ಸಿನಿಮಾ ನೋಡಬೇಕು ಅಂದುಕೊಂಡಿದ್ದ ಆಕಸ್ಮಿಕವಾಗಿ ಇಹಲೋಕ ತ್ಯಜಿಸಿದ್ದ. ಮಗ ಆಸೆಯಂತೆ, ಅವನ ಫೋಟೋ ಸಮೇತ ಚಿತ್ರಮಂದಿರಕ್ಕೆ ಬಂದು ಅವನಿಗೂ ಒಂದು ಟಿಕೆಟ್‌ ತೆಗೆಸಿ “ಯುವರತ್ನ” ಸಿನಿಮಾ ನೋಡಿದ ಪೋಷಕರ ಉದಾಹರಣೆ ಕಣ್ಣ ಮುಂದಿದೆ. ಈಗ ತನ್ನ ಕಾಲು ಕಳೆದುಕೊಂಡು, ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಪುನೀತ್‌ ಅವರ ಅಪ್ಪಟ ಅಭಿಮಾನಿಯೊಬ್ಬ “ಯುವರತ್ನ” ಸಿನಿಮಾ ನೋಡಲೇಬೇಕು ಅಂತ ಹಠ ಹಿಡಿದು, ಸಿನಿಮಾ ನೋಡಿ ಭಾವುಕನಾಗಿದ್ದಾನೆ. ಅಷ್ಟೇ ಅಲ್ಲ, ಮನೆಗೆ ಬಂದವನೇ, “ಯುವರತ್ನ” ಚಿತ್ರದ ಫೀಲ್‌ ದ ಪವರ್‌ ಹಾಡಿಗೆ ಪುನೀತ್‌ ಅವರಂತೆಯೇ ಒಂದೇ ಕಾಲಲ್ಲಿ ಸ್ಟೆಪ್‌ ಹಾಕಿ ಖುಷಿಪಟ್ಟಿದ್ದಾನೆ.‌

ಅಂದಹಾಗೆ, ಆ ಅಭಿಮಾನಿಯ ಹೆಸರು ಪುನೀತ್‌ ಮದುರೆ. ಜಗಳೂರಿನಲ್ಲಿ ಬೆಸ್ಕಾಂ ಮೆಕ್ಯಾನಿಕ್‌೧ ಆಗಿರುವ ಲೋಕೇಶ್‌ಅವರ ಪುತ್ರನೀತ. ೨೧ ವರ್ಷದ ಪುನೀತ್‌ ಐಟಿಐ ಮುಗಿಸಿ, ಜಾಬ್‌ ಕೋರ್ಸ್‌ ಮಾಡುತ್ತಿದ್ದ. ಕಳೆದ ವರ್ಷ ಮಾರ್ಚ್‌ನಲ್ಲಿ ಕಲ್ಲು ತುಂಬಿದ್ದ ಲಾರಿಯೊಂದು ಈ ಪುನೀತ್‌ ಮದುರೆ ಮೇಲೆ ಹರಿದು ಹೋಗಿದೆ. ಈ ಘಟನೆಯಿಂದ ಪುನೀತ್‌ ಕಾಲಿಗೆ ತೀವ್ರ ಪೆಟ್ಟು ಬಿದ್ದು, ಮಣಿಪಾಲ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ೪೮ ದಿನಗಳ ಕಾಲ ಚಿಕಿತ್ಸೆ ಕೊಡಿಸಿದರೂ ಆತನ ಕಾಲು ಮಾತ್ರ ಉಳಿಯಲಿಲ್ಲ. ಬಲಗಾಲನ್ನು ಕಟ್‌ ಮಾಡುವಂತಹ ಸ್ಥಿತಿ ಬಂತು. ತನ್ನ ಬಲಗಾಲು ಕಳೆದುಕೊಂಡಿದ್ದ ಪುನೀತ್‌, ಒಂದು ವರ್ಷ ಕಾಲ ಎಲ್ಲಿಗೂ ಹೋಗದೆ ಮನೆಯಲ್ಲೇ ಇದ್ದರು. ಆದರೆ, “ಯುವರತ್ನ” ಸಿನಿಮಾ ರಿಲೀಸ್‌ ಡೇಟ್ ಅನೌನ್ಸ್‌ ಯಾವಾಗ ಆಯ್ತೋ‌, ಆಗಿನಿಂದ ಸಿನಿಮಾ ನೋಡಲೇಬೇಕು ಅಂತ ನಿರ್ಧರಿಸಿದರು. ರಿಲೀಸ್‌ ದಿನ ಸಿನಿಮಾ ನೋಡೋಕೆ ಹಠ ಮಾಡಿದರು. ಮನೆಯಲ್ಲಿ ಕೊರೊನಾ ಇದೆ, ಅದರಲ್ಲೂ ವಿಶ್ರಾಂತಿ ಅಗತ್ಯವಿದೆ ಅಂದರೂ, ಕೇಳದೆ, ಟಿಕೆಟ್‌ ತರಿಸಿಕೊಂಡು “ಯುವರತ್ನ” ಸಿನಿಮಾ ನೋಡಿ ಖುಷಿಗೊಂಡಿದ್ದಾರೆ. ತನ್ನ ಹೆಸರೂ ಪುನೀತ್ ಆಗಿದ್ದರಿಂದಲೇ ಚಿಕ್ಕಂದಿನಿಂದಲೂ ಪುನೀತ್‌ ಅಭಿಮಾನಿ ನಾನು ಅನ್ನುತ್ತಲೇ ಇದ್ದ ಪುನೀತ್‌, ಈಗ ಕಾಲು ಕಳಕೊಂಡ ನೋವಲ್ಲಿದ್ದರೂ, ಸಿನಿಮಾ ನೋಡಿ ಆ ನೋವು ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಭಿಮಾನ ಅಂದರೆ ಇದೇ ಅಲ್ಲವೇ?

ಇದು ಪುನೀತ್‌ ಫ್ಯಾನ್‌ ಕಥೆಯಾದರೆ, ಕಿಚ್ಚ ಸುದೀಪ್‌ ಅಭಿಮಾನಿ ಕಥೆ ಕೂಡ ಇನ್ನೂ ವಿಶೇಷವಾಗಿದೆ. ಬಾಳೆ ಹಣ್ಣಿನ ಮೇಲೆ ಕೋಟಿಗೊಬ್ಬ ಹೆಸರು ಬರೆದ ಅಭಿಮಾನಿ ದೇವರಿಗೆ ಹರಿಕೆ ತೀರಿಸಿ ಸಿನಿಮಾ ಗೆಲ್ಲಬೇಕೆಂದು ದೇವರಿಗೆ ಕೈ ಮುಗಿದಿದ್ದಾನೆ. ಅಭಿನಯ ಚಕ್ರವರ್ತಿ ಅಂತಲೇ ಜನ ಪ್ರಿಯತೆ ಪಡೆದ ನಟ ಕಿಚ್ಚ ಸುದೀಪ್‌ ಅವರೇನು ಕಮ್ಮಿ ಇಲ್ಲ. ಲಕ್ಷಾಂತರ ಅಪಾರ ಅಭಿಮಾನಿ ಬಳಗವನ್ನ ಹೊಂದಿರುವ ಸ್ಟಾರ್‌ ನಟ. ಅವರ ಹೆಸರಲ್ಲೇ ಲೆಕ್ಕವಿಲ್ಲದಷ್ಟು ಅಭಿಮಾನಿ ಸಂಘಗಳಿವೆ. ಅವೇ ಸಾಕು ಅವರ ಅಭಿಮಾನಿಗಳ ಅಭಿಮಾನಕ್ಕೆ. ಅವರೆಲ್ಲ ಸುದೀಪ್‌ ಅಂದ್ರೆ ಹೊತ್ತು ಮೆರೆಯುತ್ತಾರೆ. ರಾತ್ರೋರಾತ್ರಿ ಆರಡಿ ಕಟೌಟ್‌ ಕಟ್ಟಿ, ಅದಕ್ಕೆ ಹಾಲಿನ ಅಭಿಷೇಕ ಮಾಡುತ್ತಾರೆ. ದೇವರಂತೆ ಆರಾಧಿಸುತ್ತಾರೆ. ಅವರ ಪಾಲಿಗೆ ಸುದೀಪ್‌ ಅಂದ್ರೆ ದೇವರು. ಇದು ಉತ್ಪ್ರೇಕ್ಷೆ ಎನಿಸಿದರೂ ಸತ್ಯ. ಅವರೆಲ್ಲ ಈಗ ಕೋಟಿಗೊಬ್ಬ ೩ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಆ ಚಿತ್ರದ ರಿಲೀಸ್‌ದಿನವನ್ನೇ ಕಾಯುತ್ತಿದ್ದಾರೆ.

ಈ ವರ್ಷಕ್ಕೆ ಸುದೀಪ್‌ ಅಭಿನಯದ ಸಿನಿಮಾಗಳ ಪೈಕಿ ಮುಂಚೆ ಬರಬೇಕಿರುವ ಸಿನಿಮಾ ಕೋಟಿಗೊಬ್ಬ ೩ . ಈಗಾಗಲೇ ಇದರ ರಿಲೀಸ್‌ ಡೇಟ್‌ ಕೂಡ ಅನೌನ್ಸ್‌ ಆಗಿದ್ದು ನಿಮಗೂ ಗೊತ್ತು. ಆದ್ರೆ ಈಗ ಕೊರೋನಾ ಮಹಾಮಾರಿಯ ಅಟ್ಟಹಾಸ ಹೆಚ್ಚಾಗಿದೆ. ಹಾಗಾಗಿ ಕೋಟಿಗೊಬ್ಬ ೩ ರಿಲೀಸ್‌ ಡೇಟ್‌ ಹೆಚ್ಚು ಕಡಿಮೆ ಆಗುವ ಸಾಧ್ಯತೆಗಳು ಇವೆ. ಇಷ್ಟಾಗಿಯೂ ಕಿಚ್ಚನ ಫ್ಯಾನ್ಸ್‌ ಕ್ರೇಜ್‌ ಮಾತ್ರ ಕಮ್ಮಿ ಆಗಿಲ್ಲ. ಕೋಟಿಗೊಬ್ಬ ೩ ಬುರುವುದು ಇನ್ನಾವಾಗೋ ಗೊತ್ತಿಲ್ಲ. ಆದ್ರೂ ಅದರ ನೆಕ್ಟ್‌ ಲೆವೆಲ್‌ ಕ್ರೇಜ್‌ ಶುರುವಾಗಿದೆ. ಕಿಚ್ಚನ ಅಭಿಮಾನಿಯೊಬ್ಬ ದೇವರಿಗೆ ಬಾಳೆ ಹಣ್ಣಿನ ಹರಿಕೆ ಹೊತ್ತುಕೊಂಡು, ಅದರ ಮೇಲೆ ಕೋಟಿಗೊಬ್ಬ ೩ ಅಂತ ಬರೆದು, ಹರಕೆ ತೀರಿಸಿಕೊಂಡಿದ್ದಾನೆ. ಓಹೋ…, ದೇವರೇ.. ನನ್ನ ನೆಚ್ಚಿನ ನಟನ ಚಿತ್ರ ಭರ್ಜರಿ ಯಶಸ್ಸು ಕಾಣಲಿ. ದೊಡ್ಡ ಗೆಲುವು ಕಾಣಲಿ ಅಂತೆಲ್ಲ ಆತ ಬೇಡಿಕೊಂಡು ಸ್ಟಾರ್‌ ಮೇಲಿನ ಅಭಿಮಾನ ಮೆರೆಯುತ್ತಾನೆಂದರೆ, ಅವರಿಗೆಲ್ಲ ಸ್ಟಾರ್‌ ಅಂದ್ರೆ ಮನೆ ದೇವ್ರು ಅಲ್ಲವೇ? ಇಂತಹ ಅದೆಷ್ಟೋ ಫ್ಯಾನ್ಸ್‌ ಇದ್ದಾರೆ. ಅವರೆಲ್ಲರಿಗೂ ಸುದೀಪ್‌ ಅಂದ್ರೆ ಪ್ರಾಣ.

ಇನ್ನು ದುನಿಯಾ ವಿಜಯ್‌ ಫ್ಯಾನ್‌ ಕಥೆ ಕೂಡ ವಿಭಿನ್ನ. ಸಲಗ ಶತದಿನಕ್ಕಾಗಿ ಟ್ಯಾಟೋ ಹಾಕಿಸಿಕೊಂಡ ಅಭಿಮಾನಿ ಇದ್ದಾನೆ. ಸಲಗ ಯಶಸ್ಸು ಕಾಣಬೇಕು ಅಂತ ಶಿಲಾಶಾಸನ ಮಾದರಿ ಮಾಡಿದ ಫ್ಯಾನ್ ಕೂಡ ಇದ್ದಾನೆ. ಗೋವಾ ಕನ್ನಡಿಗನೊಬ್ಬ ಸಲಗ ಟ್ಯಾಟೋ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ. ಉತ್ತರ ಕರ್ನಾಟಕ ಮೂಲದ ಹನುಮಂತ ಎಂಬ ಹುಡುಗ, ಗೋವಾದಲ್ಲಿರುವ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

ಆತನಿಗೆ ದುನಿಯಾ ವಿಜಯ್‌ ಅಂದರೆ ಪ್ರೀತಿ. ವಿಜಯ್‌ ಅವರಂತೆ ಹನುಮಂತ ಕೂಡ ತನ್ನ ತಂದೆ ತಾಯಿಯನ್ನು ಪ್ರೀತಿಯಿಂದ ಆರಾಧಿಸುತ್ತಿದ್ದಾನೆ. ವಿಜಯ್‌ ಮೊದಲ ನಿರ್ದೇಶನದ ಸಲಗ ಸಿನಿಮಾ ಯಶಸ್ವಿಯಾಗಲಿ ಎಂದು ಸಲಗ ಟೈಟಲ್‌ ಅನ್ನು ತನ್ನ ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ.‌

ದುನಿಯಾ ವಿಜಯ್ ಮತ್ತೊಬ್ಬ‌ ಅಭಿಮಾನಿಯದ್ದು ಇನ್ನೊಂದು ಕಥೆ. ಚಿತ್ರ ಯಶಸ್ವಿಯಾಗಲೆಂದು ಸಲಗ ಶಾಸನ ಬರೆದು ಅಭಿಮಾನ ತೋರಿದ್ದಾನೆ. ವೀರೇಶ್‌ ಆಚಾರ್‌ ಎಂಬಾತ, ಯಾರೂ ಮಾಡದಿರುವ ಕೆಲಸ ಮಾಡಿದ್ದಾರೆ. ಪುರಾತನ ಶಿಲಾ ಶಾಸನದ ಮಾದರಿಯಲ್ಲಿ ಸಲಗ ಶಾಸನ ರಚನೆ ಮಾಡಿ ಎಲ್ಲರ ಮನಗೆದ್ದ ಅಭಿಮಾನಿಯನ್ನು ದುನಿಯಾ ವಿಜಯ್‌ ಕೂಡ ಕೊಂಡಾಡಿದ್ದಾರೆ. ಅದೇನೆ ಇರಲಿ, ಅಭಿಮಾನಿಗಳ ಅಭಿಮಾನ ವಿಭಿನ್ನವಾಗಿಯೇ ಇರುತ್ತೆ. ಅದರಂತೆ ಸ್ಟಾರ್‌ನಟರು ಕೂಡ ತಮ್ಮ ಪ್ರೀತಿಯ ಅಭಿಮಾನಿಗಳನ್ನು ಅಷ್ಟೇ ಪ್ರೀತಿಯಿಂದ ಮಾತಾಡಿಸುವ ಮೂಲಕ ಅವರ ಅಭಿಮಾನವನ್ನು ಕೊಂಡಾಡುತ್ತಿದ್ದಾರೆ. ಕನ್ನಡದ ಅನೇಕ ನಟರ ಅಭಿಮಾನಿಗಳು ಕೂಡ ತಮ್ಮದೇ ಶೈಲಿಯಲ್ಲಿ ಅಭಿಮಾನ ತೋರುವ ಮೂಲಕ ತಮ್ಮೊಳಗೆ ವಿಶೇಷ ಖುಷಿ ಪಡುತ್ತಿದ್ದಾರೆ. ಇಂತಹ ಅಭಿಮಾನಿಗಳಿಗೆ ಸ್ಟಾರೇ ಅವರ ಮನೆ ದೇವರಾದರೆ, ಸ್ಟಾರ್‌ಗಳಿಗೆ ಅಭಿಮಾನಿಗಳೇ ನಮ್ಮನೆ ದೇವ್ರು ಅನ್ನೋದಂತೂ ಸತ್ಯ.

Categories
ಸಿನಿ ಸುದ್ದಿ

ವೀಲ್ ಚೇರ್ ರೋಮಿಯೋನ ಸ್ಪೆಷಲ್‌ ಲವ್‌ ಸ್ಟೋರಿ -ಇದು ವಿಕಲಚೇತನ, ವೇಶ್ಯೆ ನಡುವಿನ ಪ್ರೀತಿ ಗೀತಿ ಇತ್ಯಾದಿ…!

ರೋಡ್‌ ರೋಮಿಯೋ‌ ಬಗ್ಗೆ ಸಹಜವಾಗಿ ಎಲ್ಲರಿಗೂ ಗೊತ್ತೇ ಇರುತ್ತೆ. ಆದರೆ, ವೀಲ್‌ ಚೇರ್‌ ರೋಮಿಯೋ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಇಲ್ಲೊಬ್ಬ ವೀಲ್‌ ಚೇರ್‌ ರೋಮಿಯೋ ಬಗ್ಗೆ ಹೇಳಲೇಬೇಕು. ಇದು ಸಿನಿಮಾ ವಿಷಯ. ವಿಕಲಚೇತನನೊಬ್ಬನ ಲವ್‌ ಸ್ಟೋರಿ ಇಲ್ಲಿದೆ. ಹೌದು, ಇದೊಂದು ವೀಲ್‌ ಚೇರ್‌ ರೋಮಿಯೋ ಸಿನಿಮಾ.

ಕಾಲಿಲ್ಲದ ವ್ಯಕ್ತಿಯೊಬ್ಬ ವೀಲ್‌ ಚೇರ್‌ ಮೇಲೆ ಕುಳಿತು ತನ್ನ ಪ್ರೀತಿಗಾಗಿ ಪರಿತಪಿಸೋ ಕಥೆ ಇಲ್ಲಿದೆ. ಈ ಚಿತ್ರ ಈಗ ರಿಲೀಸ್‌ಗೂ ಸಜ್ಜಾಗಿದೆ. ಅದಕ್ಕೂ ಮುನ್ನ, ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದೆ. ಎಲ್ಲೆಡೆಯಿಂದಲೂ ಮೆಚ್ಚುಗೆ ಪಡೆಯುತ್ತಿದೆ. ಅಗಸ್ತ್ಯ ಕ್ರಿಯೇಷನ್ ಬ್ಯಾನರ್‌ನಲ್ಲಿ ವೆಂಕಟಾಚಲ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಟ್ರೇಲರ್‌ನಲ್ಲಿ ಮನುಷ್ಯನ ಚಿಂತನಾ ಲಹರಿಗಳನ್ನು ಒಂದೊಂದಾಗಿ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ.
ಜಿ.ನಟರಾಜ್‌ ಈ ಸಿನಿಮಾದ ನಿರ್ದೇಶಕರು. ಕಥೆ ಕೂಡ ಇವರದೇ. ಇನ್ನು, ಇಲ್ಲಿ ನಾಯಕಿಯಾಗಿ ಮಯೂರಿ ಕಾಣಿಸಿಕೊಂಡಿದ್ದಾರೆ. ಅವರದು ಇಲ್ಲಿ ಸ್ಪೆಷಲ್‌ ಪಾತ್ರ. ಅದು ಕಣ್ಣು ಕಾಣದ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಚೇತನ್ ಹೀರೋ ಆಗಿ ನಟಿಸಿದ್ದಾರೆ.

ಅವರಿಲ್ಲಿ ವೇಶ್ಯೆಯನ್ನು ಪ್ರೀತಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವೀಲ್‌ಚೇರ್‌ನಲ್ಲಿ ಕುಳಿತು ಪ್ರೀತಿಗಾಗಿ ಪರಿತಪಿಸುವ ವ್ಯಕ್ತಿಯಾಗಿ ನಟಿಸಿದ್ದಾರೆ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಕಥೆ. ಇಲ್ಲೂ ಒಂದಿಷ್ಟು ಫೈಟಿಂಗ್ ದೃಶ್ಯಗಳಿವೆ. ಹೀರೋ ತಾನು ಪ್ರೀತಿಸುವ ವೇಶ್ಯೆಯನ್ನು ಆರಾಧಿಸುತ್ತಾನೆ. ಇದನ್ನು ತಿಳಿದ ತಂದೆ ತನ್ನ ಮಗನ ಮನಸ್ಸನ್ನು ಪರಿವರ್ತಿಸಲು ಪ್ರಯತ್ನ ಮಾಡುತ್ತಾನೆ. ಮುಂದೇನಾಗುತ್ತೆ ಅನ್ನೋದು ಚಿತ್ರದ ಕಥೆ. ಹಾಗಂತ ಇಲ್ಲಿ ಯಾವುದೇ ಧ್ವಂದಾರ್ಥವಿಲ್ಲ. ಶೀಲವಂತರ ಶೀಲದ ಕುರಿತು ಸಿನಿಮಾ ಮೂಡಿ ಬಂದಿದೆ. ಆದರಿಲ್ಲಿ ಅಂಧ ವೇಶ್ಯೆ ಕುರಿತ ಸಿನಿಮಾ. ಹಾಗಂತ ಎಲ್ಲೂ ಅಶ್ಲೀಲತೆ ಇಲ್ಲಿಲ್ಲ. ಕುಟುಂಬ ಸಮೇತ ನೋಡಬಹುದಾದ ಚಿತ್ರ ಎಂಬುದು ಚಿತ್ರತಂಡದ ಮಾತು.

ಹಿರಿಯ ನಟ ಸುಚೇಂದ್ರ ಪ್ರಸಾದ್ ಕೂಡ ಸಿನಮಾ ಬಗ್ಗೆ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಒಳ್ಳೆಯ ಕಥಾಹಂದರ ಇರುವಂತಹ ಚಿತ್ರವಿದು ಎಂಬುದು ಅವರ ಮಾತು. ರಂಗಾಯಣ ರಘು ಇಲ್ಲೊಂದು ವಿಶೇಷ ಪಾತ್ರ ಮಾಡಿದ್ದಾರೆ.ಬಿ‌ಜೆ ಭರತ್ ಸಂಗೀತವಿದೆ. ಗಿರೀಶ್ ಶಿವಣ್ಣ ಸೇರಿದಂತೆ ಹಲವು ಕಲಾವಿದರು ಇಲ್ಲಲಿದ್ದಾರೆ.

Categories
ಸಿನಿ ಸುದ್ದಿ

ಹರ ಹರ ಮಹಾದೇವ!! ಸ್ಟಾರ್‌ಗಳದ್ದು ಹೆಂಗೋ ಬಿಡಿ, ಹೊಸಬರ ಸಿನಿಮಾಗೆ ಮುಂದೆ ದೇವರೇ ದಿಕ್ಕು…!?

ಚಿತ್ರೋದ್ಯಮದ ಪರಿಸ್ಥಿತಿ ಈಗ ಅಷ್ಟು ಸುಲಭವಿಲ್ಲ. ಮುಂದೇನೋ ಆಗುತ್ತೆ, ಎಲ್ಲವೂ ಸರಿ ಹೋಗುತ್ತೆ, ಮತ್ತೆ ಹಳೇ ದಿನಗಳು ಬಂದೇ ಬರುತ್ತವೆ ಅಂತೆಲ್ಲ ನಂಬ್ಕೊಂಡು ರಿಲೀಸ್‌ಗೆ ರೆಡಿ ಇರುವ ಹೊಸಬರ ಸಿನಿಮಾಗಳ ಪರಿಸ್ಥಿತಿ ಮುಂದೆಯೂ ಶೋಚನೀಯ. ಅದಂತೂ ಗ್ಯಾರಂಟಿ. ಹಾಗಂತ ಭವಿಷ್ಯ ಹೇಳಬೇಕಿಲ್ಲ. ಜ್ಯೋತಿಷಿಗಳ ಬಳಿಗೂ ಹೋಗಬೇಕಿಲ್ಲ. ಮುಂದಿರುವ ಸಂಕಷ್ಟಗಳೇ ಇದಕ್ಕೆ ಸಾಕ್ಷಿ.

2020 ಎಂಬ ಕರಾಳ ವರ್ಷದ ಅಧ್ಯಾಯ ಮುಗಿದು, 2021 ಆದ್ರೂ ಸರಿಹೋಗುತ್ತೆ ಅನ್ನೋ ನಿರೀಕ್ಷೆಯಲ್ಲಿತ್ತು ಚಿತ್ರರಂಗ. ಈಗ ಅದು ಕೂಡ ಹುಸಿಯಾಗುತ್ತಿದೆ. ಈಗಲೇ ಮೂರು ತಿಂಗಳು ಕಳೆದೇ ಹೋಗಿದೆ. ಈಗಲೂ ಕೊರೊನಾ ಅಬ್ಬರ ನಿಂತಿಲ್ಲ. ದಿನೇ ದಿನೆ ಈ ಮಹಾಮಾರಿಯ ಅಟ್ಟಹಾಸ ಹೆಚ್ಚುತ್ತಿದೆ . ಮತ್ತೆ ಲಾಕ್‌ ಡೌನ್‌ ಆಗಬಹುದೆನ್ನುವ ಆತಂಕದ ನಡುವೆ ಚಿತ್ರಮಂದಿರಗಳಲ್ಲಿನ ಹಂಡ್ರೆಡ್‌ ಪರ್ಸೆಂಟ್‌ ಆಕ್ಯುಪೆನ್ಸಿ ಈಗ ಶೇ.50 ಕ್ಕೆ ಬಂದಿದೆ. “ಯುವರತ್ನ” ಚಿತ್ರತಂಡದ ಹೋರಾಟದೊಂದಿಗೆ ಸಿಕ್ಕಿದ್ದ ನಿಟ್ಟುಸಿರು ಕೂಡ ಮುಗಿದು ಹೋಗಿದೆ. ಬೇರೆ ದಾರಿ ಇಲ್ಲ. “ಯುವರತ್ನ” ಅಮಜಾನ್‌ ಪ್ರೈಮ್‌ ಗೂ ಬಂದಾಗಿದೆ. \

ಅದರಾಚೆ ಮುಂದೆ ಬರಬೇಕಾಗಿದ್ದ ಹೊಸಬರ ಸಿನಿಮಾಗಳ ಪಾಡೇನು? ದಾರಿಯಂತೂ ಇಲ್ಲ. ಎಲ್ಲವೂ ಹರ ಹರ ಮಹಾದೇವ!
ಈ ಜಗತ್ತೇ ಈಗ ಒಂಥರ ಜಡ್ಡುಗಟ್ಟಿದೆ. ಇನ್ನಾರೋ ನಮ್ಮ ಪರವಾಗಿ ಮಾತನಾಡಲಿ ಅಂತ ಕಾಯುತ್ತಿರುತ್ತದೆ. ಚಿತ್ರರಂಗದವರು ಕೂಡ ಅದರಿಂದ ಹೊರತಾಗುಳಿದಿಲ್ಲ. ಇಲ್ಲಿ ಬಲಾಢ್ಯರು ಮಾತನಾಡುತ್ತಾರೆ. ಪ್ರಭಾವಿಗಳು ಹೇಗೋ ಲಾಭಿ ಮಾಡುತ್ತಾರೆ. ತಾವು ಬದುಕುವ ದಾರಿಗಳನ್ನು ತಾವು ಕಂಡುಕೊಳ್ಳುತ್ತಾರೆ. ಆದರೆ ಹೊಸಬರು, ಅಸಹಾಯಕರು ತಾವಾಯಿತು ತಮ್ಮ ಪಾಡಾಯಿತು ಅಂತ ಕುಳಿತು ಈಗ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆನ್ನುವುದು ಸುಳ್ಳಲ್ಲ.


ಒಂದು ಅಂದಾಜಿನ ಪ್ರಕಾರ ಈ ವರ್ಷಕ್ಕೆ ರಿಲೀಸ್‌ಗೆ ಅಂತ ಸರಿ ಸುಮಾರು 400ಕ್ಕೂ ಹೆಚ್ಚು ಚಿತ್ರಗಳು ಕಾದಿವೆ. ಈ ಪೈಕಿ 300ಕ್ಕೂ ಹೆಚ್ಚು ಚಿತ್ರಗಳು ಸೆನ್ಸಾರ್‌ ಮುಗಿಸಿವೆ. ಇದರಲ್ಲಿ ಹೆಚ್ಚು ಕಡಿಮೆ ಅರ್ಧದಷ್ಟು ಸ್ಟಾರ್‌ ಚಿತ್ರಗಳು, ಒಂದಷ್ಟು ಗುರುತಿಸಿಕೊಂಡ ನಟರ ಸಿನಿಮಾಗಳೇ. ಇಲ್ಲವೇ ಚಿತ್ರರಂಗ ಗೊತ್ತಿದ್ದವರ ಸಿನಿಮಾಗಳೇ ಅಂತಿಟ್ಟುಕೊಳ್ಳಿ, ಉಳಿದವರೆಲ್ಲ ಹೊಸಬರು. ಅವರಿಗೆ ಇಲ್ಲೇನು ಮಾಡಬೇಕು, ಹೇಗೆ ಬಿಡುಗಡೆ ಮಾಡಬೇಕು, ಹಾಕಿದ ಬಂಡವಾಳ ವಾಪಾಸ್‌ ಪಡೆದುಕೊಳ್ಳುವುದಕ್ಕೆ ಯಾರನ್ನು ಹಿಡಿಯಬೇಕು ಅಂತೆಲ್ಲ ಗೊತ್ತೇ ಇಲ್ಲ. ಅವರಿಗೆ ಈಗ ಕೊರೋನಾ ಅನ್ನೋದು ದೊಡ್ಡ ಅಘಾತವಂತೂ ಹೌದು.

ಒಂದು ಸಿನಿಮಾ ರಿಲೀಸ್‌ಗೆ ರೆಡಿಯಾದರೆ ಅದು ಏನಿಲ್ಲ ಅಂದರೂ ಐದಾರು ತಿಂಗಳಲ್ಲಿ ಚಿತ್ರ ಮಂದಿರಕ್ಕೆ ಬಂದು ಬಿಡಬೇಕು. ಯಾಕಂದ್ರೆ ರೆಡಿ ಮಾಡಿಟ್ಟುಕೊಂಡು, ಬೇಕಾದಾಗ ಮಾರಿಕೊಳ್ಳುವುದಕ್ಕೆ ಅದೇನು ಮಣ್ಣಿನ ಮಡಿಕೆ ಅಲ್ಲ. ಒಂದು ಸಿನಿಮಾದ ಕಥಾವಸ್ತು ಕಾಲ, ಸಂದರ್ಭ, ಸನ್ನಿವೇಶಗಳನ್ನು ಅವಲಂಬಿಸಿರುತ್ತೆ ಅನ್ನೋದು ಎಷ್ಟು ಸತ್ಯವೋ ಹಾಗೆಯೇ, ಮುಂದೆ ಬರುವ ಸಿನಿಮಾಗಳ ಅಂಕೆ ಸಂಖ್ಯೆಗಳ ಮೇಲೂ ಅದರ ಭವಿಷ್ಯ ನಿಂತಿರುತ್ತದೆ. ಅದೇ ಕಾರಣಕ್ಕೆ ತುರ್ತಾಗಿ ಬರಬೇಕಾದ ಸಂದರ್ಭಕ್ಕೂ ಸಿನಿಮಾಗಳ ಮೇಲೆ ಕೊರೋನಾ ಎಂಬ ಮಹಾಮಾರಿ ಅಡ್ಡಾಗಿ ನಿಂತಿದೆ.

ಸದ್ಯಕ್ಕೆ ಸಭೆ, ಸಮಾರಂಭ ಬೇಡ. ಚಿತ್ರಮಂದಿರಗಳಲ್ಲಿ ಹಂಡ್ರೆಡ್‌ ಪರ್ಸೆಂಟ್‌ ಸೀಟು ಭರ್ತಿ ಬೇಡ ಅಂತೆನ್ನುವ ಸರ್ಕಾರಗಳಿಗೆ, ಲಕ್ಷಾಂತರ ಜನ ಸೇರಿಸಿ ಚುನಾವಣಾ ಪ್ರಚಾರ ಭಾಷಣ ಮಾಡುವ ಅಗತ್ಯ ಮಾತ್ರ ಬೇಕಿದೆ. ಇದನ್ನು ಜೋರಾಗಿ ಅಥವಾ ಗಟ್ಟಿಯಾಗಿ ಕೇಳುವ ಧೈರ್ಯವೇ ಯಾವ ರಂಗಕ್ಕೂ ಇಲ್ಲ. ಚಿತ್ರರಂಗಕ್ಕೆ ಮಾತ್ರವಲ್ಲ ಜನರಿಗೂ ಅದು ಬೇಡವಾಗಿದೆ. ಜನ ಇವತ್ತು ಕೇವಲ ವೀಕ್ಷಕರಾಗಿದ್ದಾರೆ. ಯಾರೋ ಮಾಡುವ ಪ್ರತಿಭಟನೆ, ಇಲ್ಲವೇ ಯಾರೋ ಮಾಡುವ ಸಿಡಿ ನೋಡಿಕೊಂಡು ವಿಕೃತ ಖುಷಿ ಪಡುವುದರಲ್ಲಿಯೇ ಬ್ಯುಸಿಯಾಗಿದ್ದಾರೆ. ಅದರಾಚೆ ವ್ಯವಸ್ಥೆ ಬಿಗಿ ಸರಳುಗಳು ತಮ್ಮನ್ನೇ ಹೇಗೆ ಬಂಧನಕ್ಕೆ ತಳ್ಳುತ್ತವೆ ಅನ್ನೋದನ್ನೇ ಮರೆತು ಬಿಟ್ಟಿದ್ದಾರೆ. ಇದರಿಂದ ಹೊರ ಬರುವುದಕ್ಕೆ ಕೊರೊನಾ ಹೋಗಬೇಕಾ? ಉದ್ಯಮ ಒಂದಾಗಿ ಈ ಪರಿಸ್ಥಿತಿಯನ್ನು ನಿಭಾಯಿಸಬೇಕಾ? ಉತ್ತರ ಕಂಡುಕೊಳ್ಳಬೇಕಿದೆ.

Categories
ಸಿನಿ ಸುದ್ದಿ

ಯುವರತ್ನ ಈಗ ನಿಮ್ಮ ಕೈಯಲ್ಲಿ! ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಂದೇ ಬಿಡ್ತು ಪವರ್‌ಸ್ಟಾರ್‌ ಚಿತ್ರ…

ಪುನೀತ್‌ ಅಭಿನಯದ “ಯುವರತ್ನ” ಚಿತ್ರ ಇದೀಗ ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ ನೋಡಬಹುದು! ಅರೇ, ಇದೇನಾಪ್ಪ ರಿಲೀಸ್‌ ಆಗಿ ವಾರವೂ ಕಳೆದಿಲ್ಲ, ಅದಾಗಲೇ ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ “ಯುವರತ್ನ” ಚಿತ್ರ ಬಂತಾ ಎಂಬ ಪ್ರಶ್ನೆ ಎದುರಾದರೆ ಅಚ್ಚರಿ ಇಲ್ಲ. ಹೌದು, ಇದನ್ನು ಸ್ವತಃ ಹೊಂಬಾಳೆ ಫಿಲಂಸ್‌ ಘೋಷಿಸಿದೆ.

ಅಷ್ಟೇ ಅಲ್ಲ, ಅದಕ್ಕೊಂದು ಸ್ಪಷ್ಟನೆಯನ್ನೂ ನೀಡಿದೆ. “ಪ್ರಸ್ತುತ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು “ಯುವರತ್ನ” ಚಿತ್ರವನ್ನು ಚಿತ್ರಮಂದಿರಗಳಲ್ಲಿ ಹಾಗೂ ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ ಲಭ್ಯವಿರುವಂತೆ ಮಾಡಲಾಗಿದೆ. ಚಿತ್ರಮಂದಿರ ಮೇಲಿರುವ ನಿರ್ಬಂಧನೆಗಳು, “ಯುವರತ್ನ” ಚಿತ್ರದ ಪೈರಸಿ ದಾಳಿ ಹಾಗೂ ಪ್ರೇಕ್ಷಕಕರ ಒತ್ತಾಯದ ಮೇರೆಗೆ ಅಮೇಜಾನ್ ಪ್ರೈಮ್‌ ವಿಡಿಯೋದಲ್ಲಿ “ಯುವರತ್ನ” ಚಿತ್ರವನ್ನು ಹಾಕಲಾಗಿದೆ. ನೀವು ತೋರಿದ ಅಭಿಮಾನ, ಬೆಂಬಲಕ್ಕೆ ನಾವು ಚಿರಋಣಿ. “ಯುವರತ್ನ” ಹೆಚ್ಚಿನ ಜನರಿಗೆ ದೇಶಾದ್ಯಂತ ಹಾಗೂ ವಿಶ್ವಾದ್ಯಂತ ತಲುಪಲಿ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದೇವೆʼ ಎಂದು ನಿರ್ಮಾಪಕ ವಿಜಯ್‌ ಕಿರಗಂದೂರು ಹೇಳಿದ್ದಾರೆ.


ಅದೇನೆ ಇರಲಿ, ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ ಒಂದೇ ವಾರಕ್ಕೆ ಸಿನಿಮಾ ಬಂದರೆ, ಚಿತ್ರಮಂದಿರಗಳ ಪಾಡೇನು? ಅಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಸ್ಥಿತಿ ಹೇಗಾಗಬೇಡ? ಅಷ್ಟಕ್ಕೂ “ಯುವರತ್ನ” ಚಿತ್ರ ಚಿತ್ರಮಂದಿರಗಳಲ್ಲಿ ಉಳಿಯುವಂತಹ ಚಿತ್ರವೇ ಆಗಿದ್ದರೂ, ಈಗಲೇ ಯಾಕೆ ನಿರ್ಮಾಣ ಸಂಸ್ಥೆ ಅಮೇಜಾನ್‌ ಪ್ರೈಮ್‌ ವಿಡಿಯೋಗೆ ಸಿನಿಮಾ ಕೊಟ್ಟಿದೆ ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳು ಮತ್ತು ಪ್ರೇಕ್ಷಕರಲ್ಲಿ ಗಿರಕಿ ಹೊಡೆಯುತ್ತಲೇ ಇದೆ. ಅದೇನೆ ಇದ್ದರೂ, ಸರ್ಕಾರದ ಶೇ.50ರಷ್ಟು ಆಸನ ಭರ್ತಿ ಅವಕಾಶದ ನಿರ್ಧಾರ ನಿಜಕ್ಕೂ ಸಿನಿಮಾ ಮಂದಿಯನ್ನು ಅತಂತ್ರ ಸ್ಥಿತಿಗೆ ತಳ್ಳಿರುವುದಂತೂ ನಿಜ. ಇಂತಹ ಪರಿಸ್ಥಿತಿಯಲ್ಲಿ ಯಾವ ಸ್ಟಾರ್‌ ಸಿನಿಮಾಗಳಿದ್ದರೂ, ಅದು ಸಮಸ್ಯೆ ಅಲ್ಲದೆ ಮತ್ತೇನು? ಈ ಪರಿಸ್ಥಿತಿ ಮುಂದೆಯೂ ಹೀಗೆ ಮುಂದುವರೆದರೆ, ಚಿತ್ರರಂಗದ ಗತಿ ಏನಾದೀತು? ಇವೆಲ್ಲವನ್ನೂ ನೆನಪಿಸಿಕೊಳ್ಳುವ ನಿರ್ಮಾಪಕರಂತೂ ಅಕ್ಷರಶಃ ಭಯದಲ್ಲಿದ್ದಾರೆ. ರಿಲೀಸ್‌ಗೆ ರೆಡಿಯಾಗಿದ್ದ ಚಿತ್ರಗಳೂ ಮುಂದಕ್ಕೆ ಹೋಗುತ್ತಿವೆ. ಇಂತಹ ವಾತಾವರಣದಲ್ಲಿ ಸಿನಿಮಾರಂಗ ಚೇತರಿಸಿಕೊಳ್ಳುತ್ತಿದ್ದರೂ, ಈಗ ಪುನಃ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿತ್ರಮಂದಿರಕ್ಕೆ ಶೇ.50ರಷ್ಟು ಭರ್ತಿ ಅವಕಾಶ ಕೊಟ್ಟ ನಿರ್ಧಾರದಿಂದ ಇನ್ನಷ್ಟು ಗೊಂದಲಕ್ಕೀಡಾಗಿರುವುದಂತೂ ಸತ್ಯ. ಮುಂದಿನ ದಿನಗಳಲ್ಲಿ ಕೊರೊನಾ ವಿರುದ್ಧ ಜಾಗೃತಗೊಂಡು, ಅಂತರ ಕಾಪಾಡಿಕೊಂಡು ಅದನ್ನು ತಡೆಗಟ್ಟದೇ ಹೋದರೆ, ಈಗಿರುವ ಸ್ಥಿತಿಗಿಂತಲೂ ಘೋರವಾದ ಸ್ಥಿತಿ ಎದುರಿಸಬೇಕಾದೀತು. ಒಂದು ವೇಳೆ ಕೊರೊನಾ ಅಲೆ ಜೋರಾಗಿಬಿಟ್ಟರಂತೂ, ಲಾಕ್‌ಡೌನ್‌ ಘೋಷಣೆ ಅನಿವಾರ್ಯವಾದೀತು. ಅಂತಹದ್ದಕ್ಕೆ ಅವಕಾಶ ಮಾಡಿಕೊಡದಿರುವುದೇ ಒಳಿತು. ಈ ಸಮಸ್ಯೆ ಆದಷ್ಟು ಬೇಗ ಮುಗಿದು, “ಆ ದಿನಗಳು” ಬೇಗ ಬರುವಂತಾಗಲಿ ಅನ್ನೋದೇ “ಸಿನಿಲಹರಿ” ಆಶಯ.

error: Content is protected !!