ಕೆ.ಸಿ.ಎನ್.ಚಂದ್ರಶೇಖರ್ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತೀವ್ರ ಸಂತಾಪ

ಹಿರಿಯ ನಿರ್ಮಾಪಕ ಕೆ.ಸಿ.ಎನ್ ಚಂದ್ರಶೇಖರ್ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕೆ.ಸಿ.ಎನ್ ಸಂಸ್ಥೆಗೆ ದೊಡ್ಡ ಹೆಸರು. ನಿರ್ಮಾಪಕರಾಗಿ, ವಿತರಕರಾಗಿ, ಪ್ರದರ್ಶಕರಾಗಿ ಹಲವಾರು ವರ್ಷಗಳು ಚಿತ್ರೋದ್ಯಮದಲ್ಲಿ ಹೆಸರು ಮಾಡಿದವರು. ‘ಹುಲಿ ಹಾಲಿನ ಮೇವು’, ‘ಶರಪಂಜರ’, ‘ಬಬ್ರುವಾಹನ’ ಸೇರಿದಂತೆ ಸದಭಿರುಚಿಯ ಚಿತ್ರಗಳನ್ನು ನೀಡಿದ್ದ ಕೆ.ಸಿ.ಎನ್ ಚಂದ್ರಶೇಖರ್, ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಸಾಕಷ್ಟು ದುಡಿದಿದ್ದಾರೆ.
ಮೂರು ಬಾರಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವರು, ಅಂತಾರಾಷ್ಟ್ರೀಯ ಸಿನಿಮಾ ಸಂಸ್ಥೆಗಳಲ್ಲಿ ಹಾಗೂ ಅಂತಾರಾಷ್ಟ್ರೀಯ ಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿದ್ದು ಮನ್ನಣೆ ಪಡೆದಿದ್ದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿದ್ದ ಅವರು ಅವರ ಅಪೂರ್ವ ಅನುಭವದ ಸಾಮರ್ಥ್ಯ ದಿಂದ ಚಿತ್ರೋದ್ಯಮಕ್ಕೆ ಬರುತ್ತಿದ್ದ ಸಂಕಷ್ಟಗಳನ್ನು ಸುಲಭವಾಗಿ ಪರಿಹರಿಸುತ್ತಿದ್ದರು.
ವಿಶೇಷವಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿಯೊಂದಿಗೆ ಹಾಗೂ ಅಕಾಡೆಮಿಯ ಎಲ್ಲ ಚಟುವಟಿಕೆಗಳಿಗೆ ಅವರು ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ FIAPF ಅಂತಾರಾಷ್ಟ್ರೀಯ ಮಾನ್ಯತೆ ಸಿಗಲು ಪ್ರಮುಖ ಪಾತ್ರ ವಹಿಸಿದ್ದರು. ಅಕಾಡೆಮಿ ಬೆಳವಣಿಗೆಯ ಪ್ರತಿ ಹಂತದಲ್ಲೂ ಅವರು ಅತ್ಯಂತ ಉತ್ಸಾಹದಿಂದ ಜತೆಯಾಗುತ್ತಿದ್ದರು.
ಅಂತಹ ಸಹೃದಯಿ ಹಿರಿಯ ನಿರ್ಮಾಪಕರ ಅಗಲಿಕೆ ಕನ್ನಡ ಚಿತ್ರೋದ್ಯಮಕ್ಕೆ ತುಂಬಲಾರದ ನಷ್ಟ. ಕೆ.ಸಿ.ಎನ್.ಚಂದ್ರಶೇಖರ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬವರ್ಗದವರಿಗೆ ಭಗವಂತ ಕರುಣಿಸಲಿ ಎಂದು ಪುರಾಣಿಕ್ ತಿಳಿಸಿದ್ದಾರೆ.

Related Posts

error: Content is protected !!