ಚರಿತ್ರೆ ಸೃಷ್ಟಿಸಿದ ಈ ನಟನಿಗೆ ತನ್ನ ತಾಯಿಯ ಆತ್ಮ ಚರಿತ್ರೆ ಬರೆಯವ ಕನಸು ನನಸಾಗದೇ ಉಳಿಯಿತು..!

‘ಸರ್‌, ಬರವಣಿಗೆ ಅಂತ ಬಂದಾಗ ನಂಗೆ ತುಂಬಾ ಕಾಡೋದು ನನ್ನಮ್ಮನ ಬದುಕಿನ ಕಥೆ. ಅದನ್ನ ಬರೀಬೇಕು ಅನ್ನೋದು ನನ್ನ ಕನಸು…

ನಟ ಸಂಚಾರಿ ವಿಜಯ್‌ ಅವರಿಗಿದ್ದ ಬರವಣಿಗೆಯ ಕನಸಿದು. ಅದು ನನಸಾಗದೆ ಉಳಿದು ಹೋದದ್ದು ಬಹುದೊಡ್ಡ ದುರಂತ. ʼಸಿನಿ ಲಹರಿʼ ಸಂಸ್ಥೆ ನೂರು ದಿನದ ಸಂಭ್ರಮದ ಸರಳ ಕಾರ್ಯಕ್ರಮಕ್ಕೆ ಬಂದ ವೇಳೆ, ನೆನಪಿನ ಡೈರಿಗೆ ಒಂದೆಡೆ ಅನಿಸಿಕೆ ಬರೆಯುವಾಗ ಅವರು ಈ ಮಾತು ಹೇಳಿದ್ದರು. ಈಗ ಇವೆಲ್ಲ ನೆನಪಿಸಿಕೊಳ್ಳುವಾಗ ಮನಸು ಭಾರವಾಗುತ್ತೆ. ಆದರೆ, ಅವರಿಗಿದ್ದ ಕನಸು, ಹಂಬಲ, ಆಕಾಂಕ್ಷೆಯ ಕೆಲಸಗಳನ್ನು ಸ್ಮರಿಸಿಕೊಂಡಾಗ ಅವರ ಅಗಾಧ ವ್ಯಕ್ತಿತ್ವ ನಮ್ಮ ಕಣ್ಣ ಮುಂದೆ ಬರುತ್ತದೆ.
ಸಂಚಾರಿ ವಿಜಯ್‌ ಬರೀ ನಟ ಮಾತ್ರವಲ್ಲ, ಅಪ್ಪಟ ಸಾಹಿತ್ಯ ಅಭಿಮಾನಿಯೂ ಹೌದು. ನಾಡಿನ ಅನೇಕ ಸಾಹಿತಿಗಳ ಅಮೂಲ್ಯ ಪುಸ್ತಕಗಳನ್ನ ಓದಿ ತಿಳಿದುಕೊಂಡಿದ್ದ ಮಾತ್ರವಲ್ಲ ಆ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಸಿನಿಮಾ ರಂಗಕ್ಕೆ ಬಂದ ಹೊಸಬರಿಗೂ ಓದಿ ಎಂದು ಹೇಳುತ್ತಿದ್ದರು.

ಇತ್ತೀಚೆಗೆ ಹೆಸರಾಂತ ರಂಗಕರ್ಮಿ ಹಾಗೂ ನಟ ಗಿರೀಶ್‌ ಕಾರ್ನಾಡ್‌ ಅವರ ‘ಆಡಾಡುತಾ ಆಯುಷ್ಯʼ ಕೃತಿಯ ಆಡಿಯೋ ಪುಸ್ತಕಕ್ಕೆ ವಿಜಯ್‌ ಧ್ವನಿ ನೀಡಿದಾಗ ಅವರು ಆ ಪುಸ್ತಕದ ಬಗ್ಗೆ ಸೋಷಲ್‌ ಮೀಡಿಯಾದಲ್ಲಿ ಅನಿಸಿಕೆ ಹಂಚಿಕೊಂಡಿದ್ದರು. ಒಂದ್ರೀತಿ ಆ ಪುಸ್ತಕವನ್ನು ತಮ್ಮದೇ ನೋಟದಲ್ಲಿ ವಿಮರ್ಶಿಸುವುದರ ಜತೆಗೆ ಆ ಕೃತಿ ತಮ್ಮ ಅನುಭಾವವನ್ನು ಹೆಚ್ಚಿಸಿದ ಬಗೆಯನ್ನು ಅಲ್ಲಿ ತೆರೆದಿಟ್ಟಿದ್ದರು. ಹಾಗೆಯೇ ಲಾಕ್‌ ಡೌನ್‌ ದಿನಗಳಲ್ಲಿ ಅವರು ನಾಡಿನ ಅನೇಕ ಸಾಹಿತಿಗಳ ಪುಸ್ತಕ ಓದಿನಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ಬಗ್ಗೆ ಮಾತನಾಡಿದ್ದರು. ತೀರಾ ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ಮಾತಾಡುತ್ತಿದ್ದಾಗ ಬೆಂಗಳೂರಿಗೆ ಅರಂಭದ ದಿನಗಳು, ಆ ದಿನಗಳಲ್ಲಿ ಕಂಡ ಬೆಂಗಳೂರು, ಬೆರಗು ಮೂಡಿಸಿದ ಈ ಊರಿನ ಬಗ್ಗೆಯೂ ಬರೀಬೇಕೆನ್ನುವ ಪ್ರಯತ್ನಕ್ಕೂ ಕೈ ಹಾಕಿದ್ದರು. ಅದರ ಮೊದಲ ಪ್ರಯತ್ನವಾಗಿ ಬೆಂಗಳೂರಿನ ಮೆಜೆಸ್ಟಿಕ್‌ ಕುರಿತು ಅವರು ಬರೆದಿದ್ದ ಅನುಭವದ ಬರಹಕ್ಕೆ ಸೋಷಲ್‌ ಮೀಡಿಯಾದಲ್ಲಿ ಬಾರೀ ಮೆಚ್ಚುಗೆ ಸಿಕ್ಕಿತ್ತು. ಇದರ ಜತೆಗೆ ಅವರು ತಮ್ಮ ಬದುಕಿನಲ್ಲಿ ಇಂದಲ್ಲ ನಾಳೆ ಬರೆಯಲೇಬೇಕು ಅಂದುಕೊಂಡಿದ್ದು ಅವರ ತಾಯಿಯ ಬದುಕಿನ ಕಥೆಯನ್ನು. ಹೌದು, ಈ ವಿಚಾರವನ್ನು ಅವರು ಕೆಲವು ದಿನಗಳ ಹಿಂದೆ ‘ಸಿನಿ ಲಹರಿ’ ಜತೆಗೆ ಮಾತನಾಡುತ್ತಿದ್ದಾಗ ಔಪಚಾರಿಕವಾಗಿ ಹೇಳಿಕೊಂಡಿದ್ದರು.

ʼ ಸರ್‌, ನಾನೀಗ ಸಾಹಿತ್ಯದ ವಿದ್ಯಾರ್ಥಿ. ನಾಡಿನ ಅನೇಕ ಸಾಹಿತಿಗಳು, ಲೇಖಕರ ಪುಸ್ತಕಗಳನ್ನು ಈಗ ಕೊಂಡು ಓದುತ್ತಿದ್ದೇನೆ. ಈಗಾಗಲೇ ಕುವೆಂಪು. ಅನಂತ ಮೂರ್ತಿ, ಬೈರಪ್ಪ, ತೇಜಸ್ವಿ, ಲಂಕೇಶ್‌ ಸೇರಿದಂತೆ ಕೆಲವರ ಕೆಲವು ಪುಸ್ತಕಗಳನ್ನು ತಕ್ಕ ಮಟ್ಟಿಗೆ ಓದಿದ್ದೇನೆ. ಸದ್ಯಕ್ಕೆ ಈಗ ನಾನು ನಾಡಿನ ಹೆಸರಾಂತ ಸಾಹಿತಿ ಕುಂವೀ ಅವರ ಆತ್ಮ ಚರಿತ್ರೆ ʼಗಾಂಧಿ ಕ್ಲಾಸುʼ ಓದಿ ಮುಗಿಸಿದೆ. ಹೀಗೆ ಒಂದಷ್ಟು ಓದಿ, ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಅನ್ಕೊಂಡಿದ್ದೇವೆ. ಯಾಕಂದ್ರೆ ಎದೆ ಗೊಡಿನಲ್ಲಿ ಒಂದಷ್ಟು ಕಚ್ಚಾ ಸರಕು ಸೇರಿಕೊಂಡಿವೆ. ತುಂಬಾ ಗಾಢವಾಗಿ ಕಾಡುವ ಸರಕುಗಳು ಅವು. ಅವುಗಳನ್ನು ನಾನು ಬರವಣಿಗೆ ಮೂಲಕ ಹಡೆಯಲೇಬೇಕಿದೆ. ಹಾಗಾದರೂ ಮನಸ್ಸಿಗೆ ಒಂದು ನೆಮ್ಮದಿ ಸಿಗಬಹುದೇನೋ. ಅದರಲ್ಲೂ ನನ್ನ ತಾಯಿಯ ಬದುಕಿನ ಬಗ್ಗೆ ಬರೀಬೇಕು ಅನ್ನೋದು ನನ್ನ ಕನಸು. ಹಾಗಂತ ಅವರ ಬದುಕಿನ ಕಥೆಯನ್ನು ಸಾರ್ವಜನಿಕಗೊಳಿಸಬೇಕು ಅಂತಲ್ಲ. ನನ್ನೊಳಗೆ ಕಾಡುವ ಆ ನೋವು, ಸಂಕಟ, ವ್ಯಥೆಯನ್ನು ಅಕ್ಷರ ರೂಪಕ್ಕೆ ತರುವ ಮೂಲಕವಾದರೂ ಹೆತ್ತವಳಿಗೆ ನ್ಯಾಯ ಸಲ್ಲಿಸಬೇಕು ಅನ್ನೋದಷ್ಟೇ ಅದರ ಉದ್ದೇಶʼ

ಅಂತ ನಟ ಸಂಚಾರಿ ವಿಜಯ್‌ ತಮ್ಮ ತಾಯಿ ಆತ್ಮ ಚರಿತ್ರೆ ಬರೆಯುವ ಕನಸನ್ನು ಸಿನಿ ಲಹರಿ ಜತೆಗೆ ಹಂಚಿಕೊಂಡಿದ್ದರು. ಆದರೆ, ಈಗ ಅವರೇ ಇಲ್ಲ ಅನ್ನೋದು ಅತ್ಯಂತ ದುಃಖ ಮತ್ತು ನೋವಿನ ಸಂಗತಿ.
ಇಷ್ಟಕ್ಕೂ ನಟ ಸಂಚಾರಿ ವಿಜಯ್‌ ಎಲ್ಲವನ್ನೂ ಬಿಟ್ಟು ತನ್ನ ತಾಯಿಯ ಆತ್ಮ ಕಥೆ ಬರೆಯೋದು ತಮ್ಮ ಕನಸು ಅಂತ ಹೇಳಿದ್ದಾದರೂ ಯಾಕೆ? ಅದೊಂದು ದುರಂತ ಕಥೆ. ಜಾತಿ ಕಾರಣಕ್ಕೆ ವಿಜಯ್‌ ತಾಯಿ ತೀರಾ ಅವಮಾನ ಅನುಭವಿಸಿದ ಕಥೆ ಇದೆ. ಈಗ ಸಂಚಾರಿ ವಿಜಯ್‌ ನಮ್ಮವನು ಅಂತ ಒಪ್ಪಿಕೊಂಡ ಸಮಾಜವೇ , ವಿಜಯ್‌ ತಾಯಿ ಅವರನ್ನು ನಿಕೃಷ್ಟವಾಗಿ ನಡೆಸಿಕೊಂಡು, ಅವಮಾನಿಸಿದ ದುರಂತ ಕಥೆಯಲ್ಲಿ ಹುಟ್ಟಿ ಬೆಳೆದು ಬಂದವರು ನಟ ಸಂಚಾರಿ ವಿಜಯ್.‌ ಆ ಕಥೆ ಇನ್ನೆಷ್ಟು ಘೋರವಿತ್ತು ಅನ್ನೋದು ಅವರಿಗೇ ಗೊತ್ತು. ಅದನ್ನೇ ಅವರು ಬರೆಯಬೇಕು ಅಂತಂದುಕೊಂಡಿದ್ದು ಅನ್ನೋದನ್ನ ಅವರ ಆಪ್ತರು ಈಗ ಬಹಿರಂಗ ಪಡಿಸಿದ್ದಾರೆ.

Related Posts

error: Content is protected !!