ವಿಜಿ ಸರ್… ಗುಂಡಿ ತೋಡಿ ಹೂಳುವ ಸೀಕ್ವೆನ್ಸ್ ಮಾಡ್ತೀರಾ?ʼʼ ಅಂದಿದ್ದಕ್ಕೆ…ʻʻಒಂದಲ್ಲಾ ಒಂದಿನಾ ಮಲ್ಕೋಬೇಕಾಲ್ಲಾ…ʼʼ ಅಂತ ನಗ್ತಾ ಹೇಳಿದ್ರಿ.. ಆದರೀಗ…

ಸಂಚಾರಿ ವಿಜಯ್, ದೈಹಿಕವಾಗಿ ಇಲ್ಲ. ಆದರೆ, ಅವರು ತಮ್ಮ ಸಿನಿಮಾಗಳ ಮೂಲಕ ಅದೇ ನಗು ಹೊತ್ತು ಜೊತೆಗಿದ್ದಾರೆ. ಅವರ ಅಭಿನಯದ ‘ಮೇಲೊಬ್ಬ ಮಾಯಾವಿ’ ರಿಲೀಸ್ ಗೆ ರೆಡಿಯಾಗಿದೆ. ಚಿತ್ರದ ಹಾಡೊಂದು ಸಂಚಾರಿ ವಿಜಯ್ ಅವರಿಗೆ ತುಂಬಾನೇ ಇಷ್ಟವಾಗಿತ್ತು. ಬೇಗ ರಿಲೀಸ್ ಮಾಡಿ ಅಂತ ಅದೆಷ್ಟೋ ಸಲ ಹೇಳಿದ್ದರು ವಿಜಯ್. ಆದರೆ, ಕಾರಣಾಂತರಗಳಿಂದ ಆಗಿರಲಿಲ್ಲ. ಈಗ ನಿರ್ದೇಶಕ ನವೀನ್ ಕೃಷ್ಣ ಸಾಂಗ್ ರಿಲೀಸ್ ಮಾಡಿದ್ದಾರೆ. ನಿಜಕ್ಕೂ ಹಾಡು ನೋಡಿದವರ ಕಣ್ಣು ಒದ್ದೆಯಾಗದೇ ಇರದು. ಅಂದಹಾಗೆ, ನಿರ್ದೇಶಕರು ಸಂಚಾರಿ ವಿಜಯ್ ಬಗ್ಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ.

ಓವರ್ ಟು ನವೀನ್ ಕೃಷ್ಣ…

ವಿಜಿ ಸರ್…
ʻಮೇಲೊಬ್ಬ ಮಾಯಾವಿʼ ನನ್ನ ನಿಮ್ಮ ಜೊತೆಯಾಗಿಸಿತು. ಒಂದೇ ಸಿನಿಮಾದ ಒಡನಾಟದಲ್ಲಿ ಒಡಹುಟ್ಟಿದವರಿಗಿಂತ ಹತ್ತಿರವಾದ್ರಿ. ಯಾರಲ್ಲೂ ಹಂಚಿಕೊಳ್ಳಲಾಗದ, ಹಂಚಿಕೊಳ್ಳಬಾರದ ಸಂಕಟಗಳನ್ನು ಮಗುವಿನಂತೆ ಹಂಚಿಕೊಂಡ್ರಿ. ನಾನೊಬ್ಬ ಡೈರೆಕ್ಟರ್, ನೀವೊಬ್ಬ ಆಕ್ಟರ್ ಅನ್ನುವ ಕೊಂಡಿಯನ್ನು ಬಹುಬೇಗ ಕಳಚಿದ್ರಿ. ಸದಾ ಹೊಸತನ್ನು ಯೋಚಿಸುವ.. ಸದಾ ಸಂತೋಷವನ್ನು ಹಂಚುವ.. ಎಲ್ಲರಿಗೂ ಒಳ್ಳೆಯದನ್ನು ಬಯಸುವ ನಿಮ್ಮ ಜೀವನ ಸೂತ್ರವನ್ನು ಇಡೀ ತಂಡಕ್ಕೆ ಉಚಿತವಾಗಿ ಹಂಚಿದಿರಿ.


ಊಟವನ್ನು ಇಷ್ಟ ಪಡುವ ನೀವು… ಸಾಕಷ್ಟು ಬಾರಿ ಕೈತುತ್ತು ಕೊಟ್ರಿ… ನಿಮ್ಮ ನಟನೆಯ ಸ್ಕಿಲ್ ಅನ್ನು ಯಾವುದೇ ಆಮಿಷವಿಲ್ಲದೇ ಹಂಚಿದಿರಿ…
ಇವತ್ತು ರಿಲೀಸ್ ಆಗಿರುವ ವಿಡಿಯೋ ಸಾಂಗ್ ಅನ್ನು ಅವಾಗವಾಗ ʻʻಡೈರೆಕ್ಟ್ರೆ ಬೇಗ ರಿಲೀಸ್ ಮಾಡಿ ಅಂದ್ರಿʼʼ…

ಈ ಸಮಯದಲ್ಲಿ ರಿಲೀಸ್ ಮಾಡುವ ಮನಸ್ಥಿತಿ ನಮ್ಮದಲ್ಲ.. ಇಡೀ ತಂಡ ದಿಗ್ಭ್ರಮೆಯಲ್ಲಿದೆ. ಆದರೂ ರಿಲೀಸ್ ಮಾಡಿರೋದು ನಮ್ಮ ತಂಡದ ಜೊತೆ ನೀವೂ ಕೂತು ನೋಡ್ತಿದ್ದೀರಿ ಅನ್ನೋ ಉದ್ದೇಶಕ್ಕೆ.


ʻʻವಿಜಿ ಸರ್.. ಗುಂಡಿ ತೋಡಿ ಹೂಳುವ ಸೀಕ್ವೆನ್ಸ್ ಮಾಡ್ತೀರಾ… ಒಪ್ಪಿಗೇನಾ?ʼʼ ಅಂದಿದ್ದಕ್ಕೆ.. ʻʻಒಂದಲ್ಲಾ ಒಂದಿನಾ ಮಲ್ಕೋಬೇಕಾಲ್ಲಾ…ʼʼ ಅಂತ ನಗ್ತಾ ಹೇಳಿದ್ರಿ.. ಆದರೀಗ!!
ಸರ್…, ಈ ಸಾಂಗ್ ಬಗ್ಗೆ ನಾನು ಚಂದ್ರಣ್ಣ ( ಚಕ್ರವರ್ ಸರ್ ) ಸಾಕಷ್ಟು ಡಿಸ್ಕಸ್ ಮಾಡಿದ್ವಿ. ಚಂದ್ರಣ್ಣ ನಾನು ಕೊಟ್ಟ ಇನ್ಪುಟ್ಸ್ ಅನ್ನು ತುಂಬಾ ಸೀರಿಯಸ್ ಆಗಿ ತಗೊಂಡು, ನಿಮ್ಮ ಒಪ್ಪಿಗೆಯನ್ನು ಪಡೆದೇ ಶೂಟ್ ಮಾಡಲಾಯ್ತು. ಬಾಲ್ಯದ ಗೆಳೆಯ.. ನಿರ್ಮಾಪಕ ಪುತ್ತೂರು ಭರತ್, ಯಾವುದಕ್ಕೂ ನೋ ಅಂದಿಲ್ಲ. ಎಲ್ಲಾ ರಿಸ್ಕ್ ಗಳನ್ನು ತನ್ನ ಹೆಗಲ ಮೇಲೆ ಹೊತ್ತು ನಡೆದ್ರು ಈ ಕ್ಷಣಕ್ಕೂ….


ಕೊನೆಯದಾಗಿ , ವಿಜಿ ಸರ್ ನಿಮ್ಮ ಫೋಟೋ ಹಾಕಿ ʻರಿಪ್ʼ ಅನ್ನೊಲ್ಲ.. ನಮ್ಮ ಇಡೀ ಮಾಯಾವಿ ತಂಡದ ಕೊನೆ ಉಸಿರಿರುವವರೆಗೂ ನಿಮ್ಮ ನಿಮ್ಮ ಮುಗ್ಧ ಮಗುವಿನಂತ ನಗುವಿನ ಜೊತೆಗಿರುತ್ತೆ. ಸರ್.. ಬನ್ನಿ ನಾನು ನೀವು ಚಂದ್ರಣ್ಣ ಬೆಸ್ಟ್ ಒಟ್ಟೊಟ್ಟಾಗಿ ಜಗಳ ಮಾಡೋಣ.. ಅಟ್ಲೀಸ್ಟ್ ಮೂವರೂ ಒಂದು ಹಗ್ ಮಾಡೋಣ… ʻಮಿಸ್ ಯೂʼ… ಅನ್ನೋಕೂ ಆಗ್ತಿಲ್ಲ…’ ಎಂದು ಹೇಳಿದ್ದಾರೆ ನಿರ್ದೇಶಕ ಬಿ.ನವೀನ್ ಕೃಷ್ಣ.

Related Posts

error: Content is protected !!