ಸಂಚಾರಿ ವಿಜಯ್‌ ಹೆಸರಲ್ಲಿ ನೂರು ಗಿಣಿಗಳ ದತ್ತು ಪಡೆದ ಚಕ್ರವರ್ತಿ ಚಂದ್ರಚೂಡ್‌

ನಟ ಸಂಚಾರಿ ವಿಜಯ್‌ ಇರುವಷ್ಟು ದಿನ ಸದಾ ಒಂದಷ್ಟು ಸೇವೆ ಮೂಲಕ ದಿನ ಸವೆಸುತ್ತಿದ್ದದ್ದು ಎಲ್ಲರಿಗೂ ಗೊತ್ತಿದೆ. ಅವರಿಲ್ಲ ಎಂಬ ಬೇಸರ ಎಲ್ಲರಲ್ಲೂ ಇದೆ. ಆದರೆ, ಅವರು ಇಂದಿಗೂ ಸಿನಿಮಾಗಳ ಮೂಲಕ ಎಲ್ಲರ ಜೊತೆಯಲ್ಲಿದ್ದಾರೆ. ಬಹಳಷ್ಟು ಮಂದಿ ಸಂಚಾರಿ ವಿಜಯ್‌ ಅವರ ಗೆಳೆತನದ ಸವಿನೆನಪಿಗೆ ಹಲವು ಕಾರ್ಯಕ್ರಮ ರೂಪಿಸಲು ರೆಡಿಯಾಗಿದ್ದಾರೆ. ಅದಕ್ಕೂ ಮೊದಲೇ ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್, ಸಂಚಾರಿ ವಿಜಯ್ ಹೆಸರಲ್ಲೇ ಒಂದೊಳ್ಳೆಯ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಹೌದು, ದಾವಣಗೆರೆಯ ಇಂದಿರಾ ಪ್ರಿಯದರ್ಶನಿ ಪ್ರಾಣಿ ಸಂಗ್ರಹಾಲಯದಲ್ಲಿ ನೂರು ಗಿಣಿಗಳನ್ನು ಅವರು ದತ್ತು ಪಡೆದುಕೊಂಡಿದ್ದಾರೆ. ಸಂಚಾರಿ ವಿಜಯ್ ಹೆಸರಲ್ಲಿ ಆ ಗಿಣಿಗಳನ್ನು ಒಂದು ವರ್ಷಕ್ಕೆ ದತ್ತು ಪಡೆದುಕೊಂಡಿದ್ದಾರೆ.

ಈ ವಿಷಯವನ್ನು ಸ್ವತಃ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್, “ಸಂಚಾರಿ ವಿಜಯ್ ನಿನಗೆ ಗಿಣಿ ಇಷ್ಟ. ಅದಕ್ಕೇ ನಿನ್ ಹೆಸರಲ್ಲೊಂದು ತಗೊಂಡಿದೀನಿ ನೋಡಿ ಸ್ವಾಮಿ..” ಎಂದು ಬರೆದುಕೊಂಡಿದ್ದಾರೆ.

ಕೋವಿಡ್ ಸಂಕಷ್ಟದಿಂದ ಮೃಗಾಲಯಗಳಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ನೆರವು ಬೇಕಿದೆ, ದಯವಿಟ್ಟು ದತ್ತು ಪಡೆಯುವುದರ ಮೂಲಕ ಪ್ರಾಣಿಗಳನ್ನು ರಕ್ಷಿಸಬೇಕು ಎಂದು ದರ್ಶನ್‌ ಅವರು ಈ ಹಿಂದೆ ಮನವಿ ಮಾಡಿಕೊಂಡಿದ್ದರು.

ದರ್ಶನ್ ಅವರ ಮನವಿ ಬಳಿಕ ರಾಜ್ಯಾದ್ಯಂತ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ದರ್ಶನ್‌ ಅವರ ಫ್ಯಾನ್ಸ್‌ ಜೊತೆಗೆ ಈಗೀಗ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕ ನಟ,ನಟಿಯರು ಕೂಡ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದುಕೊಳ್ಳುತ್ತಿದ್ದಾರೆ.

Related Posts

error: Content is protected !!