’ನವಗ್ರಹ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಧರ್ಮಕೀರ್ತಿರಾಜ್, ತಕ್ಕಮಟ್ಟಿಗೆ ಗುರುತಿಸಿಕೊಂಡಿರುವ ಹೀರೋ. ಆ ಚಿತ್ರದ ’ಕಣ್ ಕಣ್ಣ ಸಲಿಗೆ’ ಹಾಡಿನ ಮೂಲಕ ಅಚ್ಚುಮೆಚ್ಚಿನ ಹೀರೋ ಎನಿಸಿಕೊಂಡರು. ನಂತರದ ದಿನಗಳಲ್ಲಿ ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸಿ ಕನ್ನಡದಲ್ಲಿ ತಮ್ಮದೆ ಛಾಪು ಮೂಡಿಸಿದ್ದು ಗೊತ್ತೇ ಇದೆ. ಈಗ ಈ ಧರ್ಮ ಕೀರ್ತಿರಾಜ್ ಅವರು ಹೊಸ ಸುದ್ದಿಗೆ ಕಾರಣರಾಗಿದ್ದಾರೆ. ಹೌದು, ಅವರೀಗ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ.
ಅರೇ, ಧರ್ಮ ಕೀರ್ತಿರಾಜ್ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ ಅಂದಾಕ್ಷಣ, ಹೊಸ ಸಿನಿಮಾ ಅಂದುಕೊಂಡರೆ ಆ ಊಹೆ ತಪ್ಪು. ಅವರು ಬಾಲಿವುಡ್ ಎಂಟ್ರಿಯಾಗಿರೋದು ಸಿನಿಮಾ ಮೂಲಕವಲ್ಲ. ಹಿಂದಿ ಆಲ್ಬಂ ಸಾಂಗ್ ಮೂಲಕ ಹೆಜ್ಜೆ ಇಟ್ಟಿದ್ದಾರೆ. ಅಂದಹಾಗೆ, ಆ ಆಲ್ಬಂ ಹೆಸರು ’ಕಿತ್ನಾ ಮಜಾ ಹೈ’. ಇದು ನಾಲ್ಕು ನಿಮಿಷದ ಹಿಂದಿ ವಿಡಿಯೋ ಆಲ್ಬಂ. ಪ್ರೀತಿಯಲ್ಲಿ ಮೋಸ ಹೋಗಿ ಆತ್ಮಹತ್ಯೆಗೆ ಶರಣಾಗುವ ಹುಡುಗಿಯನ್ನು ಕಾಪಾಡುವ, ಕಥೆ ಈ ಹಾಡಲ್ಲಿ ಸಾಗುತ್ತೆ. ರವಿಶರ್ಮ ಈ ಆಲ್ಬಂ ವಿಡಿಯೊ ಸಾಂಗ್ ನಿರ್ದೇಶನ ಮಾಡಿದ್ದಾರೆ. ಅಜಯ್ ದೇವಗನ್ ಮತ್ತು ರಣ್‌ಭೀರ್‌ಕಪೂರ್ ಚಿತ್ರಗಳಿಗೆ ಕೆಲಸ ಮಾಡಿರುವ ಪಪ್ಪುಮಲ ಕ್ರಿಯೇಟೀವ್ ನಿರ್ದೇಶಕರಾಗಿ ಇಲ್ಲಿ ಕೆಲಸ ಮಾಡಿದ್ದಾರೆ.
ಯುನೈಟೆಡ್ ಫಿಲಿಂಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯೊಂದಿಗೆ ಸೇರಿಕೊಂಡು ಅಶೋಕ್ ಜೈನ್ ನಿರ್ಮಾಣ ಮಾಡಿದ್ದಾರೆ.
ಹೊಸ ಪ್ರತಿಭೆ ನಗ್ಮಾಕ್ತರ್ ಇಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು, ಸಾಹಿತ್ಯ ಬರೆದು ಸಂಗೀತ ನೀಡಿ ಗೀತೆಗೆ ಧ್ವನಿಯಾಗಿರುವ ಅಲ್ತಾಫ್ ಸಯ್ಯದ್ ಕೂಡ ಈ ಹಾಡಲ್ಲಿ ಹಾಡಲ್ಲಿ ಕಾಣಿಸಿಕೊಂಡಿದ್ದಾರೆ.
ಶ್ರೀಕಾಂತ್ ಅಸತಿ ಛಾಯಾಗ್ರಹಣವಿದೆ. ರಾಕೇಶ್ ಮೆಹತಾ ಸಂಕಲನವಿದೆ. ಸದ್ಯ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿರುವ ಈ ಹಾಡು ಸಿಕ್ಕಾಪಟ್ಟೆ ವೈರಲ್ ಮೆಚ್ಚುಗೆ ಪಡೆದಿದೆ.