ಹತ್ತಾರು ವರ್ಷಗಳಿಂದ ಸಿನಿಮಾ ರಂಗದ ಅನೇಕ ವಿಭಾಗಗಳಲ್ಲಿ ದುಡಿಯುತ್ತಿದ್ದರೂ, ಕೆಲವರು ಎಲ್ಲಿಯೂ ಸದಸ್ಯರಾಗಿಲ್ಲ. ಹಾಗಾಗಿ ಅವರ ಬಳಿ ಯಾವುದೇ ಕಾರ್ಡ್ ಕೂಡ ಇಲ್ಲ. ಅದಕ್ಕೆ ಏನೇ ಕಾರಣಗಳಿದ್ದರೂ, ಇಂತಹ ಸಂದಿಗ್ಧ ಸಮಯದಲ್ಲಿ ಅದು ಮಾನದಂಡ ಆಗಬಾರದು
ಕೊರೊನಾ ಎಂಬ ಮಹಾಮಾರಿ ಎಲ್ಲರನ್ನೂ ಸಾಕಷ್ಟು ಸಂಕಷ್ಟಕ್ಕೀಡು ಮಾಡಿದೆ. ಅದರಲ್ಲೂ ಬಣ್ಣದ ಲೋಕದ ಜನರ ಪಾಡಂತೂ ಹೇಳತೀರದು. ಅವರ ಸಮಸ್ಯೆ ಅರಿತು ಈಗಾಗಲೇ ಹಲವು ಸ್ಟಾರ್ ನಟರು ಸಹಾಯ ಮಾಡಿದ್ದಾರೆ. ಸರ್ಕಾರ, ಒಕ್ಕೂಟ, ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಸಹಾಯಕ್ಕೆ ಮುಂದಾಗಿವೆ. ಇಂತಹ ಕಷ್ಟದ ಕಾಲದಲ್ಲಿ ನಿಜಕ್ಕೂ ಇದು ಒಳ್ಳೆಯ ಬೆಳವಣಿಗೆಯೇ. ಆದರೆ, ಸರ್ಕಾರದ ಸಹಾಯ ಕೆಲವರಿಗೆ ಮಾತ್ರ ಎಂಬಂತಾಗಿದೆ. ಎಲ್ಲಾ ವರ್ಗಕ್ಕೂ ಇದು ಸಲ್ಲಬೇಕು ಎಂಬ ಮಾತುಗಳು ಕೇಳಿಬರುತ್ತಿದ್ದು, ಸಂಬಂಧಿಸಿದವರು ಈ ಬಗ್ಗೆ ಗಮನಿಸಬೇಕು ಎಂಬ ಮನವಿ ಕೂಡ ಮಾಡಲಾಗುತ್ತಿದೆ. ಈ ಕುರಿತಂತೆ, ನಟ, ನಿರ್ದೇಶಕ ಯತಿರಾಜ್ ಕೂಡ ವಾಣಿಜ್ಯ ಮಂಡಳಿ, ಒಕ್ಕೂಟ ಮತ್ತು ಸಂಘ ಸಂಸ್ಥೆಗಳ ಹಾಗು ಸಂಬಂಧಿಸಿದವರಿಗೆ ಮನವಿ ಮಾಡಿದ್ದಾರೆ. ಅವರು ಮಾಡಿದ ಮನವಿ ಹೀಗಿದೆ.
ಓವರ್ ಟು ಯತಿರಾಜ್…
ಹತ್ತಾರು ವರ್ಷಗಳಿಂದ ಸಿನಿಮಾ ರಂಗದ ಅನೇಕ ವಿಭಾಗಗಳಲ್ಲಿ ದುಡಿಯುತ್ತಿದ್ದರೂ, ಕೆಲವರು ಎಲ್ಲಿಯೂ ಸದಸ್ಯರಾಗಿಲ್ಲ. ಹಾಗಾಗಿ ಅವರ ಬಳಿ ಯಾವುದೇ ಕಾರ್ಡ್ ಕೂಡ ಇಲ್ಲ. ಅದಕ್ಕೆ ಏನೇ ಕಾರಣಗಳಿದ್ದರೂ, ಇಂತಹ ಸಂದಿಗ್ಧ ಸಮಯದಲ್ಲಿ ಅದು ಮಾನದಂಡ ಆಗಬಾರದು. ದುರಾದೃಷ್ಟವಶಾತ್ ಅವರು ಸದಸ್ಯರಲ್ಲ ಎನ್ನುವ ಕಾರಣದಿಂದ ಈಗ ಸಿಗಬೇಕಾದ ಎಲ್ಲಾ ಸೌಲಭ್ಯಗಳಿಂದ ಅವರು ವಂಚಿತರಾಗುತ್ತಿದ್ದಾರೆ. ವಿಶೇಷವಾಗಿ ಸಹ ಹಾಗೂ ಸಹಾಯಕ ನಿರ್ದೇಶಕರುಗಳ ಪರಿಸ್ಥಿತಿ ತೀರಾ ಶೋಚನೀಯವಾಗಿದೆ.
ಅದೇ ರೀತಿ ಎಲ್ಲೆಡೆ ಬರಲಾಗದ ಹಿರಿಯರಿಗೂ ಕೆಲ ಸೌಲಭ್ಯಗಳು ತಲುಪುತ್ತಿಲ್ಲ. ಮುಂಚೂಣಿಯಲ್ಲಿರುವ ಸ್ವಯಂ ಸೇವಕರು ಈ ಮನವಿಯನ್ನು ಪರಿಗಣಿಸಿ ಅಸಹಾಯಕರ ಕೈ ಹಿಡಿದು, ನಾವೆಲ್ಲರೂ ಒಂದೇ ಎಂದು ಸಾರುವ ಮೂಲಕ ಮಾನವೀಯ ಮೌಲ್ಯಗಳನ್ನು ಉಳಿಸಿ ಎಂದು ವಿನಮ್ರವಾಗಿ ಬೇಡಿಕೊಳ್ಳುತ್ತೇನೆ’ ಎಂದಿದ್ದಾರೆ ಯತಿರಾಜ್.