Categories
ಸಿನಿ ಸುದ್ದಿ

ರಾಜ್‌ ಅಭಿನಯದ ಮೊದಲ ಚಿತ್ರಕ್ಕೆ ಈಗ 67 ವರ್ಷ! ಬೇಡರ ಕಣ್ಣಪ್ಪ ಕನ್ನಡದ ಅಮೂಲ್ಯ ಕೊಡುಗೆ ; ಗುಬ್ಬಿ ವೀರಣ್ಣ ನಿರ್ಮಾಣದ ಅಪರೂಪದ ಚಿತ್ರವಿದು

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಲವು ವಿಶೇಷತೆಗಳಿವೆ. ಅಂತಹ ವಿಶೇಷತೆಗಳಲ್ಲಿ ಡಾ.ರಾಜ್‌ಕುಮಾರ್‌ ಅಭಿನಯದ ಮೊದಲ ಸಿನಿಮಾ “ಬೇಡರ ಕಣ್ಣಪ್ಪ” ಚಿತ್ರವೂ ಒಂದು. ಆ ಚಿತ್ರದ ಬಗ್ಗೆ ಈಗ ಇಲ್ಲೇಕೆ ಪ್ರಸ್ತಾಪ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಕಾರಣ, ಮೇ. 7. ಹೌದು, ಈ ದಿನ ಡಾ.ರಾಜ್‌ ಅಭಿನಯದ ಮೊದಲ ಸಿನಿಮಾ “ಬೇಡರ ಕಣ್ಣಪ್ಪ” ಬಿಡುಗಡೆಯಾದ ದಿನ. ಮೇ.7, 1954ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಈಗ 67 ವರ್ಷ.

ಕನ್ನಡ ಚಿತ್ರರಂಗಕ್ಕೆ ರಾಜ್‌ಕುಮಾರ್‌ ಅವರ “ಬೇಡರ ಕಣ್ಣಪ್ಪ” ಅಮೂಲ್ಯ ಕೊಡುಗೆ. ಆಗಷ್ಟೇ ಕನ್ನಡ ಚಿತ್ರರಂಗ ಮೆಲ್ಲನೆ ಗರಿಗೆದರುತ್ತಿದ್ದ ಸಂದರ್ಭ. ಅದಾಗಲೇ ಒಂದಷ್ಟು ಕಲಾವಿದರು ಬೆಳ್ಳಿತೆರೆಗೆ ಅಪ್ಪಳಿಸಿದ್ದರು. ಅಷ್ಟೇ ಅಲ್ಲ, ಭಕ್ತಿ ಪ್ರಧಾನ ಸಿನಿಮಾಗಳು, ಸಾಮಾಜಿಕ ಚಿತ್ರಗಳು, ಐತಿಹಾಸಿಕ ಚಿತ್ರಗಳು ಆಗಷ್ಟೇ ಬರುತ್ತಿದ್ದ ಕಾಲಘಟ್ಟವದು.

ಅಂತಹ ಸಮಯದಲ್ಲೇ “ಬೇಡರ ಕಣ್ಣಪ್ಪ” ಚಿತ್ರವೂ ಬಿಡುಗಡೆಯಾಗಿತ್ತು. ಈ ಮೊದಲ ಸಾಮಾಜಿಕ ಚಿತ್ರವನ್ನು ತೆರೆಗೆ ಪರಿಚಯಿಸಿದ್ದು, ಕನ್ನಡ ರಂಗಭೂಮಿಯ ಪಿತಾಮಹರಲ್ಲಿ ಒಬ್ಬರಾದ ಗುಬ್ಬಿ ವೀರಣ್ಣ. ಹೌದು, ಈ ಚಿತ್ರ ಅವರ ನಿರ್ಮಾಣ ಸಂಸ್ಥೆಯಿಂದ ಮೂಡಿಬಂದಿದ್ದು. ಗುಬ್ಬಿ ವೀರಣ್ಣ ಕರ್ನಾಟಕ ಪ್ರೊಡಕ್ಷನ್ಸ್ ನಲ್ಲಿ ತಯಾರಾದ ಚಿತ್ರವದು. ಅಷ್ಟೇ ಅಲ್ಲ, ಅದು ಅವರದೇ ಸಾಗರ್ ಚಿತ್ರಮಂದಿರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಎಚ್‌.ಎಲ್.ಎನ್.‌ ಸಿಂಹ ನಿರ್ದೇಶಿಸಿದ್ದಾರೆ. ಹಾಡುಗಳಿಗೆ ಲಾವಣಿ ವಿಧ್ವಾನ್‌ ಎಸ್.ನಂಜಪ್ಪ ಅವರ ಸಾಹಿತ್ಯವಿದೆ. ಚಿದಂಬರಂ ಎಸ್.ಜಯರಾಮನ್‌ , ಎಂ.ಎಲ್.ವಸಂತ ಕುಮಾರಿ, ಟಿ.ಎಸ್.ಭಗವತಿ ಮೋತಿ ಅವರ ಧ್ವನಿ ಹಾಡುಗಳಿಗಿದೆ. ಎಸ್.ಮಾರುತಿರಾವ್‌ ಅವರ ಛಾಯಾಗ್ರಹಣವಿದೆ. ಆರ್.ಸುದರ್ಶನಂ ಸಂಗೀತ ನೀಡಿದ್ದಾರೆ.

ಚಿತ್ರದಲ್ಲಿ ಹಾಡೊಂದರ ಬಗ್ಗೆ ಇಲ್ಲಿ ಹೇಳಲೇಬೇಕು. “ನಲಿಯುವ ಬಾ ಇನಿಯ” ಎನ್ನುವ ಹಾಡು ಡಾ.ರಾಜಕುಮಾರ್‌ ಹಾಗೂ ನಟಿ ಪಂಡರಿಬಾಯಿ ಅವರ ಮೊದಲ ಗೀತೆ ಅನ್ನೋದು ವಿಶೇಷ. ಈ ಚಿತ್ರದ ಮೊದಲ ದೃಶ್ಯದಲ್ಲಿ ರಾಜ್ ಕುಮಾರ್ ರವರ ಎಂಟ್ರಿಯಾಗುತ್ತೆ. ಇನ್ನು, ಕಥೆ ಬಗ್ಗೆ ಹೇಳೋದಾದರೆ, ಗಂಧರ್ವರ ಲೋಕದ ಮಣಿಮಂತ ಹಾಗೂ ಶರ್ಮಿಷ್ಠಾ ಜೋಡಿಯಿಂದ ಆಗುವ ಒಂದು ಅಚಾನಕ್ ತಪ್ಪಿನ ಸಲುವಾಗಿ ಶಪಿತಗೊಂಡ ಮಣಿಮಂತ ಮತ್ತು ಶರ್ಮಿಷ್ಠಾ ದುಃಖಿಸುತ್ತಿರುವಾಗ ಪರಮೇಶ್ವರ ಹೇಳುವ ಸಂಭಾಷಣೆ ಹೀಗಿದೆ.

“ಅದೊಂದು ಕೆಟ್ಟ ಘಳಿಗೆ ಎಂದು ವ್ಯಥೆ ಪಡದೆ, ಅದೊಂದು ಮಹಾ ಘಳಿಗೆ ಎಂದು ನೀನೇಕೆ ಸಂತೋಷ ಚಿತ್ತನಾಗಿರಬಾರದು” ಇಂತಹ ಅರ್ಥಗರ್ಭಿತ ಸಂಭಾಷಣೆ ಜೊತೆ ಕನ್ನಡದ ಹೆಮ್ಮೆಯ ಕಲಾವಿದ ಬೆಳ್ಳಿ ತೆರೆಯನ್ನು ಬೆಳಗಲು ಆರಂಭಿಸಿದ ಮಹಾನ್ ಘಳಿಗೆ ಅದಾಗಿತ್ತು ಅನ್ನೋದೇ ವಿಶೇಷ.

ಮುಂಬರುವ ದಿನಗಳಲ್ಲಿ ಈ ಚಿತ್ರ ತೆಲುಗಿನಲ್ಲಿಯೂ ತೆರೆಗೆ ಬರುತ್ತೆ. ಅಲ್ಲಿ “ಕಾಳಹಸ್ತಿ ಮಹಿಮೆ” ಹೆಸರಲ್ಲಿ ಸಿನಿಮಾ ರೆಡಿಯಾಗುತ್ತೆ. ಅಲ್ಲೂ ರಾಜ್ ಕುಮಾರ್ ಅಭಿನಯಿಸಿದರು. ವಿಶೇಷವೆಂದರೆ, ರಾಜಕುಮಾರ್‌ ಅವರೇ ಪಾತ್ರಕ್ಕೆ ತೆಲುಗಲ್ಲಿ ಡಬ್‌ ಮಾಡುತ್ತಾರೆ. ನಂತರದ ದಿನಗಳಲ್ಲಿ ಈ ಸಿನಿಮಾ ಹಿಂದಿಯಲ್ಲೂ ತೆರೆಕಾಣುತ್ತೆ. ವಿಶೇಷವೆಂದರೆ, ಮತ್ತೆ ಮೂರು ದಶಕಗಳ ಬಳಿಕ ಶಿವರಾಜ್ ಕುಮಾರ್ ಅಭಿನಯದಲ್ಲಿ”ಶಿವ ಮೆಚ್ಚಿದ ಕಣ್ಣಪ್ಪ” ಸಿನಿಮಾ ಕೂಡ ಬಂತು.

ಈ ಸಿನಿಮಾ ಕೂಡ ರಾಜ್ ಸಂಸ್ಥೆಯಿಂದ ನಿರ್ಮಾಣವಾಯ್ತು. ಈ ಸಿನಿಮಾ ಮಾಡುವ ಮೊದಲು, “ಬೇಡರ ಕಣ್ಣಪ್ಪ” ಸಿನಿಮಾ ಹೆಸರಿಟ್ಟುಕೊಂಡೇ ನಟ,ನಿರ್ಮಾಪಕ ನಿರ್ದೇಶಕ ದ್ವಾರಕೀಶ್‌ ಅವರು ಮಾಡಲು ತೀರ್ಮಾನಿಸಿದ್ದರು. ಅವರು “ಕೃಷ್ಣ ನೀ ಕುಣಿದಾಗ” ಸಿನಿಮಾ ಬಿಝಿಯಲ್ಲಿದ್ದರು. ಅಷ್ಟೊತ್ತಿಗೆ ರಾಜ್‌ ಸಂಸ್ಥೆಯಿಂದ “ಶಿವ ಮೆಚ್ಚಿದ ಕಣ್ಣಪ್ಪ” ಸಿನಿಮಾ ರೆಡಿಯಾಗಿ ಬಿಡುಗಡೆಯಾಗುತ್ತೆ.


ಅದೇನೆ ಇರಲಿ, ರಾಜಕುಮಾರ್‌ ಅಭಿನಯದ ಮೊದಲ ಚಿತ್ರ ಬೇಡರ ಕಣ್ಣಪ್ಪ ಚಿತ್ರ ಬಿಡುಗಡೆಯಾಗಿ ಇಂದಿಗೆ 67 ವರ್ಷಗಳು ಅನ್ನೋದೇ ಈ ಹೊತ್ತಿನ ವಿಶೇಷ.

Categories
ಸಿನಿ ಸುದ್ದಿ

ಸೋಂಕಿತರ ಸೇವೆಗೆ ಶೂಟಿಂಗ್ ಹೌಸ್ ಕೊಡಲು ನಟಿ ನಿರ್ಧಾರ: ಸರ್ಕಾರ ಮನೆ ಬಳಕೆಗೆ ಸಾತ್ವಿಕ ಮನವಿ

ಸದ್ಯ ಬೆಂಗಳೂರಿನ ಪರಿಸ್ಥಿತಿ ನೋಡಿದಾಗ ಭಯವಾಗುತ್ತಿದೆ. ಎಷ್ಟೋ ಜನ ಆಕ್ಸಿಜನ್, ಬೆಡ್ ಇಲ್ಲದೆ ನರಳುತ್ತಿದ್ದಾರೆ. ಹೀಗಾಗಿ ನಾನು ನನ್ನ ಶೂಟಿಂಗ್ ಹೌಸ್ ವೊಂದನ್ನು ಕೋವಿಡ್ ರೋಗಿಗಳ ಸೇವೆಗೆ ನೀಡಲು ಬಯಸಿದ್ದೇನೆ. ಈ ಮೂಲಕ ಜಾಗದ ಅಭಾವ ಕಡಿಮೆ ಮಾಡುವ ಸಣ್ಣ ಪ್ರಯತ್ನ ನನ್ನದು

ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ, ಲೆಕ್ಕವಿಲ್ಲದಷ್ಟು ಮಂದಿ ಜೀವ ಬಿಡುತ್ತಿದ್ದಾರೆ. ಸರ್ಕಾರ ಮಾಡುವಷ್ಟು ಮಾಡಿದರೂ ಕೊರೊನಾ ಹಾವಳಿ ನಿಂತಿಲ್ಲ. ಸಮರೋಪಾದಿಯಲ್ಲಿ ಸೇವೆಗಳು ನಿರಂತರವಾಗಿದ್ದರೂ ನಿಯಂತ್ರಣಕ್ಕೆ ಬರದೆ, ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಇಲ್ಲಿ ಪರ, ವಿರೋಧಗಳ ಚರ್ಚೆಯೂ ನಡೆಯುತ್ತಿದೆ. ಈಗ ಆ ಬಗ್ಗೆ ಮಾತನಾಡುವ ಸಂದರ್ಭವಲ್ಲ. ಮನುಷ್ಯತ್ವ ರೂಪಿಸಿಕೊಂಡಿರುವ ಮಂದಿ ತಮ್ಮ ಕೈಲಾದ ಸೇವೆಗೆ ಮುಂದಾಗಿದ್ದಾರೆ.

ಇದಕ್ಕೆ ಸಿನಿಮಾ ರಂಗದ ಹಲವರೂ ಕೈ ಜೋಡಿಸಿದ್ದಾರೆ. ಈಗಾಗಲೇ ನಟ ಸುದೀಪ್ ಅವರು, ಆಕ್ಸಿಜನ್ ಕೊರತೆ ನೀಗಿಸಲು ಮುಂದಾಗಿದ್ದು ಗೊತ್ತೇ ಇದೆ. ಹಾಗೆಯೇ, ಗೀತ ಸಾಹಿತಿ ಕವಿರಾಜ್ ಕೂಡ ಒಂದು‌ ಸಮಾನ‌ ಮನಸ್ಕರ ತಂಡ ಕಟ್ಟಿಕೊಂಡು ಕೊರೊನಾ ಸೋಂಕಿತರ ನೆರವಿಗೆ ಧಾವಿಸಲು ರೂಪುರೇಷೆ ನಡೆಸುತ್ತಿದ್ದಾರೆ. ಅದಕ್ಕೆ ಸಿನಿಮಾದ ಒಂದಷ್ಟು ಜನ ಸಾಥ್ ಕೊಡುವ ಭರವಸೆಯನ್ನೂ ನೀಡಿದ್ದಾರೆ. ಇಲ್ಲೀಗ ಆಕ್ಸಿಜನ್ ಸಮಸ್ಯೆ ತಲೆದೋರಿದೆ. ಬೆಡ್ ವ್ಯವಸ್ಥೆ ಇಲ್ಲದೆಯೂ ಜನರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮದೂ ಒಂದು ಸಣ್ಣ ಸೇವೆ ಅಂದುಕೊಂಡು ಮುಂದೆ ಬಂದಿರುವ ಯುವ ನಟಿ ಸಾತ್ವಿಕ ಅವರು ತಮ್ಮ ಶೂಟಿಂಗ್ ಹೌಸ್ ಅನ್ನು ಕೋವಿಡ್ ಸೆಂಟರ್ ಆಗಿ ರೂಪಿಸಿ, ಕೊರೊನಾ ಸೋಂಕಿತರಿಗೆ ನೆರವಾಗಲು ತೀರ್ಮಾನಿಸಿದ್ದಾರೆ.

ಹೌದು, ನಟಿ ಸಾತ್ವಿಕ ಅವರು ಹಲವು ವರ್ಷಗಳಿಂದ ನಟನೆಯ ಜೊತೆಗೆ ಧಾರಾವಾಹಿ, ಸಿನಿಮಾಗಳ ಚಿತ್ರೀಕರಣಕ್ಕಾಗಿ ಶೂಟಿಂಗ್ ಹೌಸ್ ಅನ್ನು ನಡೆಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಮೂರು ಬಂಗಲೆಗಳನ್ನು ಶೂಟಿಂಗ್ ಬಾಡಿಗೆಗೆ ನೀಡುತ್ತಿದ್ದಾರೆ. ಇದರ ಜೊತೆಯಲ್ಲಿ ಸಾಮಾಜಿಕ ಕೆಲಸಗಳಲ್ಲೂ ತೊಡಗಿರುವ ಸಾತ್ವಿಕ, ಕೊರೊನಾ ಹಾವಳಿಗೆ ತತ್ತರಿಸುತ್ತಿರುವ ಜನರಿಗೆ ಸಿಗದ ಆಕ್ಸಿಜನ್, ಬೆಡ್ ಸಮಸ್ಯೆ ಅರಿತು ತಮ್ಮ ಶೂಟಿಂಗ್ ಹೌಸ್ ಅನ್ನು ಸೋಂಕಿತರ ಸೇವೆಗೆ ನೀಡಲು ಬಯಸಿದ್ದಾರೆ.

ಈ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ ನಟಿ ಸಾತ್ವಿಕ, ” ನಾನು ಹಲವು ವರ್ಷಗಳಿಂದ ಬೆಂಗಳೂರಲ್ಲಿ ಮೂರು ವಿಶಾಲವಾದ ಬಂಗಲೆಗಳನ್ನು ಸಿನಿಮಾ,‌ಧಾರಾವಾಹಿ ಶೂಟಿಂಗ್ ಗಾಗಿ ಬಾಡಿಗೆ ನೀಡುತ್ತ ಬಂದಿದ್ದೇನೆ. ಈಗ ಕೊರೊನಾ ಹಾವಳಿ ಇದ್ದುದರಿಂದ ಸರ್ಕಾರ ಬ್ರೇಕ್ ಹಾಕಿದೆ. ಹಾಗಾಗಿ ಶೂಟಿಂಗ್ ನಡೆಯುತ್ತಿಲ್ಲ. ಸದ್ಯ ಬೆಂಗಳೂರಿನ ಪರಿಸ್ಥಿತಿ ನೋಡಿದಾಗ ಭಯವಾಗುತ್ತಿದೆ. ಎಷ್ಟೋ ಜನ ಆಕ್ಸಿಜನ್, ಬೆಡ್ ಇಲ್ಲದೆ ನರಳುತ್ತಿದ್ದಾರೆ. ಹೀಗಾಗಿ ನಾನು ನನ್ನ ಶೂಟಿಂಗ್ ಹೌಸ್ ವೊಂದನ್ನು ಕೋವಿಡ್ ರೋಗಿಗಳ ಸೇವೆಗೆ ನೀಡಲು ಬಯಸಿದ್ದೇನೆ. ಈ ಮೂಲಕ ಜಾಗದ ಅಭಾವ ಕಡಿಮೆ ಮಾಡುವ ಸಣ್ಣ ಪ್ರಯತ್ನ ನನ್ನದು. ಅಂದಹಾಗೆ, ಕೆಂಗೇರಿ ಬಸ್ ಸ್ಟಾಪ್ ಬಳಿ ವಿಶಾಲವಾದ ಹೌಸ್ ಅನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಲು ತೀರ್ಮಾನಿಸಿದ್ದು,
ಈ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ. ನನ್ನ ಈ ಹೌಸ್ ಪಡೆದು ಕೋವಿಡ್ ಸೆಂಟರ್ ಆಗಿ ರೂಪಿಸಲಿ. ನಾನು‌ ನನ್ನ ಮನೆಯ ಜೊತೆಗೆ ನೀರು, ವಿದ್ಯುತ್ ಬಿಲ್ ವ್ಯವಸ್ಥೆ ಮಾಡುತ್ತೇನೆ. ಉಳಿದಂತೆ ಸರ್ಕಾರ ಆಕ್ಸಿಜನ್, ಬೆಡ್, ವೈದ್ಯ, ಸಿಬ್ಬಂದಿ ಸೇರಿದಂತೆ ರೋಗಿಗಳ ಸೇವೆಗಡ ಅಗತ್ಯ ವಸ್ತುಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡಲಿ” ಎಂದು ಸಾತ್ವಿಕ ಹೇಳಿದ್ದಾರೆ.

ಇನ್ನು ಮನೆ 60*80 ವಿಸ್ತೀರ್ಣ ಹೊಂದಿದ್ದು, ಮೂರು ಬೆಡ್ ರೂಮ್ ಗಳ ಎರಡು ಫ್ಲೋರ್ ಇದೆ. ಬೇಸ್ ಮೆಂಟ್ ಕೂಡ ಇದೆ. ಕ್ಲೋಸ್ಡ್ ಟೆರೇಸ್ ಕೂಡ ಇದೆ.
ಸದ್ಯಬೀ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವ ಸಾತ್ವಿಕ, ಕೂಡಲೇ ಸರ್ಕಾರದ ಜನಪ್ರತಿನಿಧಿಗಳು, ಸಂಬಂಧಿಸಿದ‌ ಅಧಿಕಾರಿಗಳು ಈ ಅನುಕೂಲ ಸದ್ಬಳಕೆ ಮಾಡಿಕೊಳ್ಳಲಿ ಎಂದಿರುವ ಸಾತ್ವಿಕ, ಕೊರೊನಾ ಸೋಂಕಿತರಿಗೆ ಈ ವ್ಯವಸ್ಥೆ ಮಾಡಲು ಮುಂದಾಗಲು‌ ಬಯಸಿದರೆ ನನ್ನ ಮೊಬೈಲ್ ಸಂಖ್ಯೆ 99008 71777 ಕರೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಅದೇನೆ ಇರಲಿ, ಒಬ್ಬ ನಟಿಯಾಗಿ ಕೊರೊನಾ ಸೋಂಕಿತರಿಗೆ ನೆರವಾಗಲು ಬಯಸಿರುವ ಸಾತ್ವಿಕ ಅವರ ಈ ಪ್ರಯತ್ನದಿಂದ ಒಂದಷ್ಟು ಮಂದಿಗೆ ಸಹಾಯವಾದರೆ ಅಷ್ಟೇ ಸಾಕು. ಸರ್ಕಾರ ಈ ಬಗ್ಗೆ ಗಮನ ಹರಿಸಿ, ಆ ಭಾಗದ ಸೋಂಕಿತರಿಗಾದರೂ ನೆರವಾಗಲಿ.

Categories
ಸಿನಿ ಸುದ್ದಿ

‘ಬಿಗ್’ ಶಾಕಿಂಗ್ ನ್ಯೂಸ್; ಆಸ್ಪತ್ರೆ ಸೇರಿದ ದಿವ್ಯಾ ಉರುಡುಗ ! ಅಷ್ಟಕ್ಕೂ ದಿವ್ಯಾಗೆ ಆಗಿದ್ದೇನು?

ಕೊರೋನಾ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವಾಗ ಕೆಲವರು ಬಿಗ್‌ ಬಾಸ್‌ ಮನೆಯೇ ಸುರಕ್ಷಿತ ತಾಣ ಅಂದುಕೊಂಡಿದ್ದು ಹೌದು. ಆದರೆ ಆ ಮನೆಯ ಬಗ್ಗೆಯೂ ಈಗ ಅನುಮಾನ ಶುರುವಾಗಿದೆ. ಯಾಕಂದ್ರೆ,  ಕಲರ್ಸ್‌ ಕನ್ನಡದ ಬಿಗ್‌ ಬಾಸ್‌ ರಿಯಾಲಿಟಿ ಶೋ ಗೂ ಅನಾರೋಗ್ಯದ ಕಂಟಕ ಎದುರಾಗಿದೆ. ಇದರ ಸ್ಟಾರ್‌ ನಿರೂಪಕರಾದ ನಟ ಸುದೀಪ್‌ ಅನಾರೋಗ್ಯದ ಕಾರಣ ಶೋ ನಿರೂಪಣೆಗೆ ಗೈರಾದ ಬೆನ್ನಲೇ, ಶೋ ನ ಕಂಟೆಂಸ್ಟ್‌ನಲ್ಲಿ ಒಬ್ಬರಾಗಿದ್ದ ಮಲೆನಾಡ ಚೆಲುವೆ ದಿವ್ಯಾ ಉರುಡುಗ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಬಿಗ್‌ ಬಾಸ್‌ ಮನೆಯಿಂದ ಹೊರ ಕರೆದುಕೊಂಡು ಬರಲಾಗಿದೆ ಎನ್ನುವ ಸುದ್ದಿ ಇದೆ.

ನಟಿ ಹಾಗೂ ಬಿಗ್‌ ಬಾಸ್‌ ಸ್ಪರ್ಧಿ ದಿವ್ಯಾ ಉರುಡುಗ ಅವರ ಅನಾರೋಗ್ಯಕ್ಕೆ ನಿಖರವಾದ ಕಾರಣ ಏನೆಂಬುದು ಇನ್ನು ಗೊತ್ತಾಗಿಲ್ಲ. ಆದರೆ ಕೊರೋನಾ ಕಂಟಕ ಮನೆ ಹೊರಗಡೆ ತಿರುಗಾಡಿದವರನ್ನು ಕಾಡುವ ಹಾಗೆ  ಮನೆಯೊಳಗಡೆ ಅಡಗಿ ಕುಳಿತವರನ್ನೂ ಬಿಟ್ಟಿಲ್ಲ ಎನ್ನುವುದು ನಿಮಗೂ ಗೊತ್ತು. ಹಾಗಾಗಿಯೇ ಕೊರೋನಾ ಕಂಟಕ ಬಿಗ್‌ ಬಾಸ್‌ ಮನೆಗೂ ಎದುರಾಯಿತಾ ಎನ್ನುವ ಆತಂಕ ಶುರುವಾಗಿದೆ. ಹೌದು. ಹಾಗಂತ ನಟಿ ದಿವ್ಯಾ ಅವರಿಗೆ ಕೊರೋನಾವೇ ಅಂತ ಭಾವಿಸಬೇಕಿಲ್ಲ. ಅವರಿಗೆ ಸಹಜವಾದ ಅನಾರೋಗ್ಯದ ಸಮಸ್ಯೆಯಂತೆ. ಹಾಗಾಗಿಯೇ ಅವರನ್ನು ಆಸ್ಪತ್ರೆಗೆ ಸೇರಿಸಲು ಬಿಗ್‌ ಬಾಸ್‌ ಮನೆಯಿಂದ ಹೊರಗೆ ಕರೆತರಲಾಗಿದೆ ಎನ್ನುವ ಮಾತುಗಳಿವೆ.

ಬಿಗ್‌ ಬಾಸ್‌ ಮನೆಯೊಳಗಿರುವ ಕಂಟೆಂಸ್ಟ್‌ ಗಳ ಪೈಕಿ ಸದಾ ಲವಲವಿಕೆಯಿಂದ ಇರುವ ಕಂಟೆಂಸ್ಟ್‌ ಅಂದ್ರೆ ದಿವ್ಯಾ ಉರುಡುಗ. ಆದರೆ ಕೆಲವು ದಿನಗಳಿಂದ ಅವರು ಇದಕ್ಕಿದ್ದಂತೆ ಮಂಕಾಗಿ ಬಿಟ್ಟಿದ್ದರು. ಇದು ವೀಕ್ಷಕರಿಗೆ ಮಾತ್ರವಲ್ಲ, ಅಲ್ಲಿದ್ದವರಿಗೂ ಅನುಮಾನ ತರಿಸಿತ್ತು. ಹೀಗೆಯೇ ಮೊನ್ನೆ ಬಿಗ್‌ ಬಾಸ್‌ ಮನೆಯೊಳಗಿನ ಅವರ ಸಹ ಸ್ಪರ್ಧಿಗಳು ವಿಚಾರಿಸಿದಾಗ ದಿವ್ಯಾ ಒಂದು ವಿಚಾರ ಹೇಳಿಕೊಂಡಿದ್ದರು. ಇದಾದ ಬಳಿಕ ಅವರನ್ನು‌ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಯಿತು. ಸದ್ಯಕ್ಕೆ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ ಅನ್ನೋದಷ್ಟೇ ಮಾಹಿತಿಇದೆ.

ಬೆಂಗಳೂರು ನಗರದ ಯಾವ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆನ್ನುವುದು ನಿಗೂಢವಾಗಿದೆ. ಏನೇ ಇರಲಿ, ಆದಷ್ಟು ಬೇಗ ಗುಣಮುಖರಾಗಲಿ. ಅದರಾಚೆ ಕುತೂಹಲ ಇರೋದು ಅಂದ್ರೆ, ಮತ್ತೆ ಅವರು ವಾಪಾಸ್‌ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾಗ್ತಾರಾ ಅಂತ.  ಯಾಕಂದ್ರೆ ಈಗ ಕೊರೋನಾ ಎಲ್ಲಾ ಕಡೆಗೂ ವ್ಯಾಪಿಸಿಕೊಂಡಿದೆ. ಆರೋಗ್ಯವಾಗಿದ್ದವರೂ ಕೂಡ ಎಷ್ಟು ಸೇಫ್‌ ಅನ್ನೋದು ಖಾತರಿ ಇಲ್ಲ. ಪ್ರತಿ ಮನೆಯಲ್ಲಿ ಒಬ್ಬರಿಗೆ ಕೊರೋನಾ ಪಾಸಿಟಿವ್‌ ಕಟ್ಟಿಟ್ಟ ಬುತ್ತಿ ಅಂತಲೇ ವೈದ್ಯರು ಹೇಳುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗೆ ಬಂದು ಹೋದ ನಂತರ ದಿವ್ಯಾ ಅವರಿಗೆ ಕೊರೋನಾ ಬರೋದಿಲ್ಲ ಅನ್ನೋದಕ್ಕೆ ಗ್ಯಾರಂಟಿ ಏನು? ಅದೇ ಕಾರಣಕ್ಕೆ  ದಿವ್ಯಾ ಅವರನ್ನು ಮತ್ತೆ ಬಿಗ್‌ಬಾಸ್‌ ಮನೆಗೆ ಕಳುಹಿಸುವುದು ಬಹುತೇಕ ಡೌಟ್.‌ ಆದರೂ ಕಲರ್ಸ್‌ ಕನ್ನಡ ಏನೆಲ್ಲ ಮುಂಜಾಗ್ರತೆ ವಹಿಸಿದೆ ಅನ್ನೋದು ಗೊತ್ತಿಲ್ಲ.

Categories
ಸಿನಿ ಸುದ್ದಿ

ಕವಿರತ್ನ ಕಾಳಿದಾಸ ಚಿತ್ರ ನಿರ್ದೇಶಕ ರೇಣುಕಾ ಶರ್ಮಾ ಕೊರೊನಾದಿಂದ ನಿಧನ

ಕನ್ನಡ ಚಿತ್ರರಂಗದಲ್ಲಿ “ಕವಿರತ್ನ ಕಾಳಿದಾಸ”, “ಅಂಜದ ಗಂಡು”, “ಕಿಂದರಿ ಜೋಗಿ” ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ರೇಣುಕಾ ಶರ್ಮಾ ಕೊರೊನಾದಿಂದ ನಿಧನರಾಗಿದ್ದಾರೆ.

81 ವರ್ಷದವರಾಗಿದ್ದ ರೇಣುಕಾ ಶರ್ಮಾ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಕಳೆದ ಕೆಲವು ದಿನಗಳಿಂದ ಗಿರಿನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿಮೋನಿಯಾ ಖಾಯಿಲೆ ಇದ್ದ ಕಾರಣ ನಿರ್ದೇಶಕ ರೇಣುಕಾ ಶರ್ಮಾ, ನಿನ್ನೆ ರಾತ್ರಿ ಕೊರೋನಾ ಸೋಂಕಿನಿಂದಾಗಿ ವಿಧಿವಶರಾಗಿದ್ದಾರೆ. 


1981ರಲ್ಲಿ “ಅನುಪಮ” ಚಿತ್ರದ ಮೂಲಕ ನಿರ್ದೇಶಕರಾದ ರೇಣುಕಾ ಶರ್ಮಾ,” ಕವಿರತ್ನ ಕಾಳಿದಾಸ” “ಶಹಬ್ಬಾಸ್ ವಿಕ್ರಮ್”, “ಸತ್ಕಾರ” ಹಾಗೂ “ನಮ್ಮ ಊರು ದೇವತೆ”, “ಅಂಜದ ಗಂಡು”, “ಕಿಂದರಿ ಜೋಗಿ”,”ಶಬರಿ ಮಲೆ ಶ್ರೀ ಅಯ್ಯಪ್ಪ”, “ಭರ್ಜರಿ ಗಂಡು” ಹಾಗೂ “ಹಠಮಾರಿ ಹೆಣ್ಣು ಕಿಲಾಡಿ ಗಂಡು”, “ಕೊಲ್ಲೂರು ಶ್ರೀ ಮೂಕಾಂಬಿಕೆ’ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ರೇಣುಕಾ ಶರ್ಮಾ ಪತ್ನಿ ಇಬ್ಬರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ. ಬೆಂಗಳೂರಿನಲ್ಲಿ ಅಂತ್ಯ ಸಂಸ್ಕಾರ ಮಾಡಲು ಕುಟುಂಬ ವರ್ಗ ತೀರ್ಮಾನಿಸಿದೆ.

Categories
ಸಿನಿ ಸುದ್ದಿ

ಹಳೇ ಕೆಲಸ‌ ಮರೆತಿಲ್ಲ ಚಿಕ್ಕಣ್ಣ ! ಗಾರೆಗೂ ಜೈ ನಟನೆಗೂ ಸೈ…! ಲಾಕ್ ಡೌನ್ ವೇಳೆ ಗಾರೆ‌ ಕೆಲಸ ಹಿಡ್ಕೊಂಡ್ರು ಹಾಸ್ಯ ನಟ

ಕೊರೊನಾ ಸಾಕಷ್ಟು ಸಮಸ್ಯೆ ತಂದೊಡ್ಡಿದೆ. ಮನೆಯಲ್ಲೇ ಇರುವಂತೆ ಮಾಡಿರುವ ಕೊರೊನಾ ಒಂದು ರೀತಿ ಹಳೆಯ ನೆನಪುಗಳಿಗೂ ಜಾರುವಂತೆ ಮಾಡಿದೆ. ಸುಮ್ಮನೆ ಕೂರದ ಹಾಗೆ ಕೆಲಸ ಮಾಡುವುದಕ್ಕೂ ಕಾರಣವಾಗಿದೆ.

ಎರಡನೇ ಅಲೆಯಿಂದ ಎಲ್ಲರೂ ನರಳುವಂತಾಗಿದೆ. ಈ ಬಾರಿಯ ಕೊರೊನಾ ಹಾವಳಿ ಜೋರಾಗಿಯೇ ಇದೆ‌.
ವರ್ಷಾನುಗಟ್ಟಲೆಯಿಂದ ಕಂಡು ಕಾಣದ ಒಂದು ಸಣ್ಣ ವೈರಾಣು ಲಕ್ಷಾಂತರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ.

ಇದಕ್ಕೆ ಸ್ಯಾಂಡಲ್ ವುಡ್ ಕೂಡ ನಲುಗಿ ಹೋಗಿದೆ. ಇಂತಹ ಸಮಯದಲ್ಲಿ ಕನ್ನಡ ಸಿನಿ ತಾರೆಯರು ಕೊರೊನಾ ವಾರಿಯರ್ಸ್ ಆಗಿಯೂ ನಿಂತಿದ್ದಾರೆ. ಸಾರ್ವಜನಿಕವಾಗಿ ಬೀದಿಗಿಳಿದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೆ, ಕೆಲವರು ತಮ್ಮ ತಮ್ಮ ಊರುಗಳಿಗೆ ತೆರಳಿ, ತೋಟದ ಕೆಲಸ ಮಾಡಿಕೊಂಡು ಸಮಯ ಕಳೆಯುತ್ತಿದ್ದಾರೆ.

ಇನ್ನೂ ಕೆಲವರು ರೆಸಾರ್ಟ್, ಫಾರ್ಮ್ ಹೌಸ್ ಸೇರಿದಂತೆ ಇತರೆಡೆ ಬೀಡು ಬಿಟ್ಟಿದ್ದಾರೆ. ಈ ಪೈಕಿ ಹಾಸ್ಯ ನಟ ಚಿಕ್ಕಣ್ಣ ಕೊಂಚ ಭಿನ್ನವಾಗಿದ್ದಾರೆ.

ಹೌದು, ಸ್ಯಾಂಡಲ್​ವುಡ್​ ಕಾಮಿಡಿ ಸ್ಟಾರ್​ ಚಿಕ್ಕಣ್ಣ ಈ ಹಿಂದೆ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನ, ಗಾರೆ ಕೆಲಸ ಮಾಡಿ ಬದುಕು‌ ಕಟ್ಟಿಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹಾಸ್ಯದ ಮೂಲಕ ಛಾಪು ಮೂಡಿಸಿದ ಹಾಸ್ಯದಿಂದ ಚಿಕ್ಕಣ್ಣ , ತಮ್ಮ ತೋಟದ ಮನೆಯಲ್ಲಿ ಗಾರೆ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

ಸದ್ಯ ಸಿನಿಮಾ ಶೂಟಿಂಗ್ ಸ್ಥಗಿತವಾಗಿದೆ. ಹೀಗಾಗಿ ಅವರು ತಮ್ಮ ತೋಟದಲ್ಲಿದ್ದಾರೆ. ಅಲ್ಲೊಂದು ಮನೆ ಕಟ್ಟುತ್ತಿದ್ದು, ಆ ಮನೆಯ ಗಾರೆ ಕೆಲಸದಲ್ಲಿ ತೊಡಗಿದ್ದಾರೆ. ಸದ್ಯಕ್ಕೆ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Categories
ಸಿನಿ ಸುದ್ದಿ

ಹೊಡಿ ಮಗ ಹೊಡಿ ಮಗ ಅಂತ ಹಾಡಿದ್ರು ಆರ್ ಸಿ ಬಿ ತಂಡದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಮ್ಯಾಕ್ಸ್ ವೆಲ್ ! ಶಿವಣ್ಣ ಸಿನಿಮಾ‌ದ ಹಾಡು ಹಾಡಿದ್ದು ಯಾಕೆ‌ ಗೊತ್ತಾ ?

ಶಿವರಾಜ ಕುಮಾರ್ ಅವರ ಹಾಡೊಂದನ್ನು ಆರ್ ಸಿ‌‌ ಬಿ ತಂಡದ ಆಸ್ಟ್ರೇಲಿಯಾ ಆಟಗಾರ ಮ್ಯಾಕ್ಸ್ ವೆಲ್ ಹಾಡಿದ್ದಾರೆ!
ಅರೇ, ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಮ್ಯಾಕ್ಸ್ ವೆಲ್ ಶಿವರಾಜ ಕುಮಾರ್ ಸಿನಿಮಾದ ಹಾಡು‌ ಹಾಡಿದ್ದು ಯಾಕೆ? ಈ ಪ್ರಶ್ನೆ ಸಹಜ. ಅದಕ್ಕೆ ಉತ್ತರ ಈ ಸುದ್ದಿ ನೋಡಿ.

ಕೊರೊನಾ ಹಾವಳಿ ಹೆಚ್ಚಾದ ಕಾರಣಕ್ಕೆ ಈ ಬಾರಿ ಐಪಿಎಲ್‌ ಅರ್ಧದಲ್ಲೇ ರದ್ದಾಗಿದೆ. ಆರ್‌ಸಿಬಿ ತಂಡ ಈ ಸಲ‌ ಸಖತ್ ಆಗಿಯೇ ಆಡುತ್ತಿತ್ತು. ಅವರ ಆಟ ನೋಡಿದರೆ ಕಪ್ ಗೆಲ್ಲುತ್ತದೆಂಬ ನಿರೀಕ್ಷೆ ಇತ್ತು. ಆದರೆ ಐಪಿಎಲ್ ರದ್ದಾಯ್ತು. ಹೀಗಾಗಿ ಕಪ್ ಆಸೆಯೂ ಕಮರಿತು.

ಆರ್‌ಸಿಬಿ ಪರವಾಗಿ ಈ ಬಾರಿ ಕಣಕ್ಕೆ ಇಳಿದಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಆಟದಲ್ಲಿ ಮುಂಚೂಣಿಯಲ್ಲಿದ್ದರು. ಆದರೆ, ಐಪಿಎಲ್‌ ರದ್ದಾಗಿ ಆ ಕನಸು‌ ಹಾಗೆಯೇ ಉಳಿದಿದೆ. ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಈ ವೇಳೆ ನೀಡಿದ ಒಂದು ಇಂಟರ್ ವ್ಯೂ ಸದ್ಯಕ್ಕೆ ಕನ್ನಡಿಗರಿಗೆ ಮತ್ತು ಶಿವರಾಜಕುಮಾರ್ ಫ್ಯಾನ್ಸ್ ಗೆ ಖುಷಿ ಕೊಟ್ಟಿದೆ.

ಅಷ್ಟಕ್ಕೂ ಆ ಖುಷಿಯ ವಿಷಯವೇನು ಗೊತ್ತಾ?
ಆರ್‌ಸಿಬಿ ತಂಡದ ಜೊತೆಗಿದ್ದು, ಸಂದರ್ಶನ, ನಿರೂಪಣೆ ಮಾಡುತ್ತಿರುವ ಮಿಸ್ಟರ್ ನ್ಯಾಗ್ಸ್ ಅಲಿಯಾಸ್ ದಾನಿಶ್ ಸೇಠ್ ಅವರು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಸ್ವಿಮ್ಮಿಂಗ್ ಪೂಲ್ ನಲ್ಲಿ ಸಂದರ್ಶನ ಮಾಡಿದ್ದಾರೆ. ಅಲ್ಲಿ ಮ್ಯಾಕ್ಸ್‌ವೆಲ್ ಅವರು ಶಿವರಾಜ್ ಕುಮಾರ್ ಅವರ ಚಿತ್ರದ ಹಾಡೊಂದನ್ನು ಗುನುಗಿದ್ದಾರೆ.


ಸಂದರ್ಶನದಲ್ಲಿ ದಾನೀಶ್ ಸೇಠ್ ಅವರು ಮ್ಯಾಕ್ಸ್‌ವೆಲ್‌ಗೆ ‘ಹೊಡಿ ಮಗ, ಹೊಡಿ ಮಗ’ ಅಂತ ಹಾಡು ಹೇಳಿಕೊಡುತ್ತಾರೆ. ಆ ಹಾಡನ್ನು ಹಾಗೆಯೇ ಗ್ಲೆನ್ ಮ್ಯಾಕ್ಸ್‌ವೆಲ್‌ ಹಾಡುತ್ತಾರೆ. ಬಳಿಕ ಈ ಹಾಡು ಯಾರದ್ದು ?’ ಎಂದು ದಾನೀಶ್ ಪ್ರಶ್ನಿಸುತ್ತಾರೆ. ಆಗ ಗ್ಲೆನ್ ಮ್ಯಾಕ್ಸ್‌ವೆಲ್, ಇದು ಶಿವಣ್ಣ ಅಂತ ಹೇಳ್ತಾರೆ.
ಸದ್ಯ ಮ್ಯಾಕ್ಸ್‌ವೆಲ್‌ ಸಂದರ್ಶನದ ಈ ವಿಡಿಯೋ ವೈರಲ್ ಆಗಿದೆ.

ಇನ್ನು ಆ ಸಂದರ್ಶನದಲ್ಲಿ ಮ್ಯಾಕ್ಸ್ ವೆಲ್ ಕನ್ನಡದ ಕೆಲ ಪದಗಳನ್ನೂ ಹೇಳುತ್ತಾರೆ. ಅದೇನೆ ಇರಲಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಕನ್ನಡ ಹಾಡು ಹಾಡಿದ್ದು ಜೋರು ಸುದ್ದಿಯಾಗಿರೋದಂತೂ ನಿಜ.

ಬೆಂಗಳೂರಿನ ಬಗ್ಗೆ, ಕೊಹ್ಲಿ, ಎಬಿಡಿ ಬಗ್ಗೆಯೂ ಮ್ಯಾಕ್ಸ್‌ವೆಲ್ ಮಾತನಾಡುತ್ತಾರೆ. ಸಚಿನ್ ಹಾಗೂ ರಿಕಿ ಪಾಂಟಿಂಗ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂದಾಗ ರಿಕಿ ಪಾಂಟಿಂಗ್ ಅನ್ನು ಆರಿಸುತ್ತಾರೆ ಮ್ಯಾಕ್ಸ್‌ವೆಲ್.

Categories
ಸಿನಿ ಸುದ್ದಿ

ಕೊರೊನಾ ಅಲೆ ಜೋರು; ಮತ್ತೆ ಫೀಲ್ಡಿಗಿಳಿದ ರಾಗಿಣಿ – ಸ್ಮಶಾನ ಸಿಬ್ಬಂದಿಗೆ ಫುಡ್‌ ಕಿಟ್‌ ವಿತರಣೆ

ನಟಿ ರಾಗಿಣಿ ಮತ್ತೆ ಫೀಲ್ಡಿಗೆ ಇಳಿದಿದ್ದಾರೆ. ಕೊರೊನಾ ಎರಡನೇ ಅಲೆಯ ಸಂಕಷ್ಟದ ಕಾಲದಲ್ಲಿ ಜೀವದ ಹಂಗು ತೊರೆದು ಅಸಹಾಯಕರ ನೆರವಿಗೆ ಧಾವಿಸಿದ್ದಾರೆ. ಕಳೆದ ವರ್ಷ ಕೂಡ ಇದೇ ರೀತಿ ಅಸಹಾಯಕ ಜನರ ನೆರವಿಗೆ ನಿಂತಿದ್ದರು. ಬೆಂಗಳೂರಿನ ಗಲ್ಲಿ ಗಲ್ಲಿಗಳಿಗೆ ಅಲೆದು ಸಾಕಷ್ಟು ಜನರಿಗೆ ಆಹಾರ ಸಾಮಾಗ್ರಿ ನೀಡಿದ್ದರು. ಈಗಲೂ ಅಂತಹದೇ ಕೆಲಸಕ್ಕೆ ನಿಂತಿದ್ದಾರೆ. ಜಿನೆಕ್ಸ್ಟ್‌ ಚಾರಿಟೆಬಲ್‌ ಟ್ರಸ್ಟ್‌ ನೇತೃತ್ವದಲ್ಲಿ ಕಾಕ್ಸ್‌ ಟೌನ್‌ ಹತ್ತಿರ ಕಲ್ಪಹಳ್ಳಿ ಹಾಗೂ ಭಾರತಿ ನಗರ ಸ್ಮಶಾನ ಸಿಬ್ಬಂದಿಗೆ ಆಹಾರ ಸಾಮಾಗ್ರಿ ವಿತರಣೆ ಮಾಡಿದರು.

ಸಾವಿನ ಸಂಖ್ಯೆಗಳು ಹೆಚ್ಚುತ್ತಿವೆ. ಇಲ್ಲಿ ಕೆಲಸ ಮಾಡುವಂತಹ ಜನರು ಒತ್ತಡಕ್ಕೆ ಸಿಲುಕಿದ್ದಾರೆ. ಅವರಿಗೂ ಜೀವ ಭಯ ಇದೆ, ಅದನ್ನು ದೂರ ಮಾಡಿಕೊಂಡು ಅವರು ಸತ್ತವರ ಅಂತ್ಯ ಸಂಸ್ಕಾರ ಮಾಡಬೇಕಿದೆ. ಅವರಿಗೆ ನಾವೀಗ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ.


” ಈ ಸಮಯದಲ್ಲಿ ನಾವು ಕಷ್ಟದಲ್ಲಿರುವವರಿಗೆ ನೆರವಿಗೆ ನಿಲ್ಲಬೇಕಿದೆ. ಅದೇ ಕಾರಣಕ್ಕೆ ನಾವೀಗ ಈ ಕೆಲಸ ಶುರು ಮಾಡಿದ್ದೇವೆ. ವಿಶೇಷವಾಗಿ ಬೆಂಗಳೂರು ನಗರದಲ್ಲಿನ ಸ್ಮಶಾನ ಸಿಬ್ಬಂದಿ ತೀವ್ರ ಸಂಕಷ್ಟದಲ್ಲಿದ್ದಾರೆ. ಯಾಕಂದ್ರೆ ಕೋವಿಡ್‌ ಎರಡನೇ ಅಲೆ ಭಯಾನಕ ಪರಿಸ್ಥಿತಿ ನಿರ್ಮಾಣ ಮಾಡಿದೆ. ಸಾವಿನ ಸಂಖ್ಯೆಗಳು ಹೆಚ್ಚುತ್ತಿವೆ. ಇಲ್ಲಿ ಕೆಲಸ ಮಾಡುವಂತಹ ಜನರು ಒತ್ತಡಕ್ಕೆ ಸಿಲುಕಿದ್ದಾರೆ. ಅವರಿಗೂ ಜೀವ ಭಯ ಇದೆ, ಅದನ್ನು ದೂರ ಮಾಡಿಕೊಂಡು ಅವರು ಸತ್ತವರ ಅಂತ್ಯ ಸಂಸ್ಕಾರ ಮಾಡಬೇಕಿದೆ. ಅವರಿಗೆ ನಾವೀಗ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ಸಾಮಾಜಿಕ ಸೇವಾ ಕಾರ್ಯಕರ್ತ ರವಿ ಅವರ ಮೂಲಕ ಇಲ್ಲಿ ಈ ಕೆಲಸ ಆಗಿದೆʼ ಎನ್ನುತ್ತಾರೆ ನಟಿ ರಾಗಿಣಿ.


ಕಳೆದ ವರ್ಷ ಕೊರೊನಾ ಶುರುವಾದ ಸಂದರ್ಭದಲ್ಲಿ ಬೆಂಗಳೂರು ನಗರದ ಸ್ಲಂ ಪ್ರದೇಶದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದಾಗ ವಿವಿಧ ಸಂಘ ಸಂಸ್ಥೆಗಳ ಮೂಲಕ ನಟಿ ರಾಗಿಣಿ, ಆಹಾರ ಸಾಮಾಗ್ರಿ ವಿತರಣೆಯಲ್ಲಿ ತೊಡಗಿಸಿಕೊಂಡು ಸಾಕಷ್ಟು ಸುದ್ದಿಯಲ್ಲಿದ್ದರು. ಇನ್ನೇನು ಕೊರೋನಾ ಸ್ವಲ್ಪ ಕಡಿಮೆ ಆಯ್ತು ಎನ್ನುವ ಹೊತ್ತಿಗೆ ಸಾಕಷ್ಟು ಸದ್ದು ಮಾಡಿದ ಡ್ರಗ್ಸ್‌ ಕೇಸ್‌ ಪ್ರಕರಣದಲ್ಲಿ ರಾಗಿಣಿ ಹೆಸರು ಕೂಡ ತಳಕು ಹಾಕಿಕೊಂಡು, ಜೈಲು ಪಾಲಾಗಿದ್ದರು.

ಜಾಮೀನು ಪಡೆದು ಅಲ್ಲಿಂದ ಹೊರ ಬಂದ ನಂತರ ಯಾವುದಕ್ಕೂ ತಲೆ ಕಡೆಸಿಕೊಳ್ಳದೆ ಮತ್ತೆ ಸಿನಿಮಾ ಚಟುವಟಿಕೆಗಳ ಜತೆಗೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡರು. ಈಗ ಮತ್ತೆ ಕೊರೊನಾಗ ಸಂಕಷ್ಟದಲ್ಲಿದ್ದವರ ನೆರವಿಗೆ ಧಾವಿಸಿದ್ದಾರೆ ರಾಗಿಣಿ

Categories
ಸಿನಿ ಸುದ್ದಿ

ಹೊಸಬರ ಕನಸಿಗೆ ಪ್ರಶಸ್ತಿಯ ಗರಿ; ಕನಸು ಮಾರಾಟಕ್ಕಿದೆ ಸಿನಿಮಾಗೆ 11ನೇ ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ

ಕನ್ನಡ ಚಿತ್ರರಂಗದಲ್ಲಿ ಹೊಸಬರು ತಮ್ಮ ಕನಸು ನನಸು ಮಾಡಿಕೊಳ್ಳುವ ಮೂಲಕ ಗಟ್ಟಿ ನೆಲೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಹೊಸಬರೇ ಸೇರಿ ಕಟ್ಟಿಕೊಂಡ ಕನಸೊಂದು ಈಡೇರಿದೆ. ಅಂದರೆ ಹೊಸಬರ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.


ಹೌದು,”ಕನಸು ಮಾರಾಟಕ್ಕಿದೆ” ಸಿನಿಮಾ 11ನೇ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಆಯ್ಕೆಯಾಗಿ, ಪ್ರಶಸ್ತಿ ಪಡೆದುಕೊಂಡಿದೆ.
ಈ ವಿಷಯವನ್ನು ನಿರ್ದೇಶಕ ಬೆಳ್ತಂಗಡಿಯ ಸ್ಮಿತೇಶ್‌ ಎಸ್‌. ಬಾರ್ಯ ಸ್ಪಷ್ಟಪಡಿಸಿದ್ದಾರೆ.

‘ಹಲವು ರಾಷ್ಟ್ರಗಳ ಸಿನಿಮಾಗಳ ಜೊತೆ ಕನ್ನಡದಿಂದ ಈ ಚಿತ್ರವು‌ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಪ್ರತಿವರ್ಷ ದೆಹಲಿಯಲ್ಲಿ ನಡೆಯುವ ಈ ಚಲನಚಿತ್ರೋತ್ಸವ ಈ ಬಾರಿ ಕೋವಿಡ್ ಕಾರಣದಿಂದಾಗಿ ಆನ್‌ಲೈನ್ ಮೂಲಕ ಅವಾರ್ಡ್ ಘೋಷಿಸಲಾಗಿದೆ. ವಿಶೇಷ ವಿಭಾಗದಲ್ಲಿ ಈ ಚಿತ್ರಕ್ಕೆ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ’ ಎಂದು ನಿರ್ದೇಶಕರು ಖುಷಿ ಹಂಚಿಕೊಂಡಿದ್ದಾರೆ.

ಈ ಚಿತ್ರಕ್ಕೆ ಶಿವಕುಮಾರ್ ಬಿ. ನಿರ್ಮಾಪಕರು. ನಾಯಕರಾಗಿ ಪ್ರಜ್ಞೇಶ್ ಕಾಣಿಸಿಕೊಂಡರೆ ನಾಯಕಿರಾಗಿ ಸ್ವಸ್ತಿಕಾ, ನವ್ಯಾ ಪೂಜಾರಿ ನಟಿಸಿದ್ದಾರೆ. ಅಲ್ಲದೆ, ‘ಕಾಮಿಡಿ ಕಿಲಾಡಿ’ ಖ್ಯಾತಿಯ ಜಿ.ಜಿ, ಅನೀಶ್ ಪೂಜಾರಿ, ಧೀರಜ್, ಚಿದಂಬರ,
ಹಿರಿಯ ನಟ ಸಿದ್ಲಿಂಗು ಶ್ರೀಧರ್, ಮೋಹನ್ ಶೇಣಿ, ಆಥಿರ ಸೇರಿದಂತೆ ಇತರರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಇವರೆಲ್ಲ ಮನುಷ್ಯರೇನ್ರಿ? ನರ ರಾಕ್ಷಸರು! ಕೂಡಲೇ, ಜೈಲಿಗಟ್ಟಿ ಎಂದ ನಟಿ ತಾರಾ ಅನುರಾಧ


ಬೆಂಗಳೂರು ನಗರದಲ್ಲಿನ ಕೋವಿಡ್‌ ವಾರ್‌ ರೂಂ ಅವ್ಯವಹಾರದ ವಿರುದ್ಧ ಹಿರಿಯ ನಟಿ ತಾರಾ ಅನುರಾಧ ಕಿಡಿಕಾರಿದ್ದಾರೆ. ಜನರ ಸಾವಿನ ನಡುವೆಯೂ ಹಣ ಮಾಡಲು ಮನುಷ್ಯ ಇಷ್ಟು ಕ್ರೂರಿ ಆಗಬಾರದಿತ್ತು. ಮನುಷ್ಯ ಸ್ವಾರ್ಥಕ್ಕೆ ಕಡಿವಾಣ ಇಲ್ಲವೇ ಅಂತ ಆತಂಕ ವ್ಯಕ್ತಪಡಿಸಿರುವ ಅವರು, ಕೋವಿಡ್‌ ವಾರ್‌ ರೂಂ ಅವ್ಯವಹಾರದಲ್ಲಿ ಭಾಗಿಯಾದವರನ್ನೆಲ್ಲ ಬಂಧಿಸಿ, ಜೈಲಿಗೆ ಕಳುಹಿಸಬೇಕು. ಯಾಕಂದ್ರೆ ಇಂತಹ ನಿರ್ಧಯಿಗಳಿಗೆ ಕನಿಕರ ಬೇಡ ಅಂತ ಆಗ್ರಹಿಸಿದ್ದಾರೆ.


” ಕೋವಿಡ್‌ ಎರಡನೆಯ ಅಲೆಯಲ್ಲಿ ನೋವು ಅನುಭವಿಸಿದವರ ಪೈಕಿ ನಾನು ಒಬ್ಬಳು. ನನ್ನ ಮನೆಯವರೆಲ್ಲ ಈ ಕೋವಿಡ್‌ ಸೋಂಕಿಗೆ ಸಿಲುಕಿ, ನೋವು ಅನುಭವಿಸಿದ್ದೆವು. ಸಾಕಷ್ಟು ದಿನ ಮನೆಯಲ್ಲಿದ್ದು, ಸೂಕ್ತ ಚಿಕಿತ್ಸೆ ಮೂಲಕ ಅದರಿಂದ ಹೊರ ಬರಬೇಕಾಯಿತು. ಅದರ ನೋವು ಹೇಗಿರುತ್ತದೆ ಎನ್ನುವುದು ನಂಗೆ ಗೊತ್ತು. ಸಾಕಾಗಿ ಹೋಯಿತು, ಅದರ ಭಾದೆ ತಾಳಲಾರದು. ಇನ್ನು ಅದರಿಂದ ಸಾವು-ನೋವು ಅನುಭವಿಸಿದವರ ಪಾಡು ಹೇಳತೀರದು. ದಿನ ನಿತ್ಯ ರಾಜ್ಯದಲ್ಲಿ ಆಗುತ್ತಿರುವ ಪ್ರಕರಣಗಳನ್ನು ನೋಡಿದರೆ ಕರಳು ಕಿವುಚಿದಂತೆ ಆಗುತ್ತದೆ. ಮನಸು ಭಾರವಾಗುತ್ತದೆ. ಪ್ರಾಣ ಕಳೆದುಕೊಂಡವರ ಕುಟುಂಬದವರ ಆಕ್ರಂಧನ ನೋಡಲಾಗದೆ ನಾನು ತೀವ್ರ ಸಂಕಟ ಪಟ್ಟಿದ್ದೇನೆʼ ಎಂಬುದಾಗಿ ತಾರಾ ಅವರು ಹೇಳಿದ್ದಾರೆ.

” ಕೋವಿಡ್‌ ರೋಗಿಗಳಿಗೆ ಬೆಂಗಳೂರು ನಗರದಲ್ಲಿ ಬೆಡ್‌ ಸಿಗುತ್ತಿಲ್ಲ ಅಂತ ಒದ್ದಾಡುತ್ತಿದ್ದಾಗ ನನಗೆ ತೀವ್ರ ಸಂಕಟ ಆಗುತ್ತಿತ್ತು. ಪರಿಚಿತರೊಬ್ಬರಿಗೆ ಬೆಡ್‌ ಕೊಡಿಸುವ ಸಂಬಂಧ ನಾನೂ ಕೂಡ ಒದ್ದಾಡಿಬಿಟ್ಟಿದ್ದೆ. ಆದರೆ ಕಾಳ ಸಂತೆಯಲ್ಲಿ ಅಕ್ರಮವಾಗಿ ಬೆಡ್‌ ಬುಕ್ಕಿಂಗ್‌ ನಡೆಯುತ್ತಿದೆ ಅನ್ನೋದನ್ನು ಕೇಳಿ ಶಾಕ್‌ ಆದೆ. ಹಣ ಮಾಡುವುದಕ್ಕಾಗಿ ಜೀವ ವಿರೋಧಿ ಕೃತ್ಯಕ್ಕೆ ತೊಡಗಿರುವ ಯಾರೋ ಒಂದಷ್ಟು ಕ್ರಿಮಿಗಳು ಮುನಷ್ಯರೇ ಅಲ್ಲ. ಅವರೆಲ್ಲ ನನ್ನ ಪ್ರಕಾರ ರಾಕ್ಷಸರು. ಅವರನ್ನು ಸರ್ಕಾರ ಸುಮ್ಮನೆ ಬಿಡಬಾರದು. ಯಾಕಂದ್ರೆ ಅವರು ಜನರ ಜೀವದ ಜತೆಗೆ ಚೆಲ್ಲಾಟ ಅಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಅವರು ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ ಅಂದಿದ್ದಾರೆ. ಹಾಗಾಗಿ ಅವರನ್ನು ನಾನು ಅಭಿನಂದಿಸುತ್ತೇನೆʼ ಎಂಬುದಾಗಿ ನಟಿ ತಾರಾ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ವಿಡಿಯೋವೊಂದನ್ನು ಅವರು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ” ಕೋವಿಡ್‌ ವಾರ್‌ ರೂಂ ಅಕ್ರಮವನ್ನು ಬಯಲಿಗೆಳದಿರುವ ಸಂಸದ ಹಾಗೂ ಸಹೋದರ ತೇಜಸ್ವಿ ಸೂರ್ಯ ಅವರ ಕಾರ್ಯ ಶ್ಲಾಘನೀಯವಾದದ್ದು. ಅವರನ್ನು ಹಾಗೂ ಸರ್ಕಾರವನ್ನು ನಾನು ಆಭಿನಂದಿಸುತ್ತೇನೆ. ಹಾಗೆಯೇ ಸರ್ಕಾರ ಈ ಕೂಡಲೇ ಸಂಬಂಧಪಟ್ಟವರನ್ನು ಬಂಧಿಸಿ ಜೈಲಿಗೆ ತಳ್ಳಬೇಕು. ಯಾಕಂದ್ರೆ ಮತ್ತೊಬ್ಬರು ಇಂತಹ ದಂಧೆಗೆ ಇಳಿಯಬಾರದು. ಜನರಿಗೆ ಈಗ ಸುಲಭವಾಗಿ ಬೆಡ್‌ ಸಿಗಬೇಕು. ಅವರು ಕೋವಿಡ್‌ ನಿಂದ ಗುಣಮುಖರಾಗಬೇಕು. ಜೀವ ಇದ್ದರೆ ಜಗತ್ತು, ನಾವು-ನೀವು ಕೂಡ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಅಂತ ನಟಿ ತಾರಾ ಮನವಿ ಮಾಡಿದ್ದಾರೆ.

Categories
ಸಿನಿ ಸುದ್ದಿ

ದಿಗಂತ್ ಈಗ ರಾಮ! ಮತ್ತೆ ಬಾಲಿವುಡ್ ಗೆ ಜಿಗಿದ ದೂದ್ ಪೇಡ ; ರಾಮ್ ಯುಗ್ ವೆಬ್ ಸೀರೀಸ್ ನಲ್ಲಿ ನಟನೆ – ಮೇ.6ರಿಂದ ಪ್ರಸಾರ

ಕನ್ನಡದ ನಟ‌ ದಿಗಂತ್ ಈಗ ಮತ್ತೆ ಬಾಲಿವುಡ್ ಕಡೆ ಜಿಗಿದಿದ್ದಾರೆ. ಅರೇ, ಅಲ್ಲೆಲ್ಲೋ “ಮಾರಿಗೋಲ್ಡ್” ಅಂತಿದ್ದ ದಿಗಂತ್, “ಗಾಳಿಪಟ” ಹಿಡಿದು ಮಂದಹಾಸ ಬೀರಿದ್ದು‌ ಗೊತ್ತೇ ಇದೆ. ಇದೀಗ ಬಾಲಿವುಡ್ ಕಡೆ ಕಣ್ಣಾಯಿಸಿದ್ದಾರೆ ಅಂದರೆ ನಂಬಲೇಬೇಕು.
ಹೌದು, ದಿಗಂತ್ ಅವರಿಗೆ ಬಾಲಿವುಡ್ ಹೊಸದೇನಲ್ಲ. ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಜಿಗಿದು ಕುಣಿದು ಕುಪ್ಪಳಿಸಿದ್ದಾರೆ. ಈಗ ಅವರು ರಾಮನಾಗಲು ಹೊರಟಿದ್ದಾರೆ. ಹೀಗಂದರೆ‌ ಕ್ಷಣ ಕಾಲ ಅಚ್ಚರಿಯಾಗಬಹುದು.


ಅವರೀಗ ” ರಾಮ್ ಯುಗ್” ಎಂಬ ವೆಬ್ ಸೀರೀಸ್ ಮಾಡಿದ್ದಾರೆ. ಈ ವೆಬ್ ಸೀರೀಸ್ ನಲ್ಲಿ ಅವರು ರಾಮನಾಗಿ ತೆರೆ ಮೇಲೆ ಮಿಂಚಲಿದ್ದಾರೆ.
ರಾಮನಾಗಿ ಸಖತ್ ಆಗಿಯೇ ಅಬ್ಬರಿಸಲಿದ್ದಾರೆ. ಅದೊಂದು ವಿಭಿನ್ನ ಸೀರೀಸ್ ಆಗಿ ಮೂಡಿಬರುತ್ತಿದೆ. ಇಲ್ಲಿ ಇನ್ನೊಂದು ವಿಶೇಷವೆಂದರೆ, ದಿಗಂತ್ ಅವರಿಗೆ ಎದುರಾಳಿಯಾಗಿ “ಪೈಲ್ವಾನ್” ವಿಲನ್ ಕಬೀರ್ ಸಿಂಗ್ ದುಹಾನ್ ಮಿಂಚುತ್ತಿದ್ದಾರೆ. ಅಂದರೆ ಅವರಿಲ್ಲಿ ರಾಮನ ಎದುರು ರಾವಣನಾಗಿ ಅಬ್ಬರಿಸಲಿದ್ದಾರೆ.

ದಿಗಂತ್ ಇಲ್ಲಿ ಮರ್ಯಾದ ಪುರುಷನಾದರೆ, ಕಬೀರ್ ಸಿಂಗ್ ಅವರನ್ನು ಡಿಸ್ಟರ್ಬ್ ಮಾಡುವ ಕೆಲಸ. ಈ ಸೀರೀಸ್ ಬೇರೇನೆ ಫೀಲ್ ಕೊಡುವುದು ಖಚಿತ. ಹಿಂದೆ ರಾಮಾಯಣ ಕಂಡ ಜನರಿಗೆ ಈ “ರಾಮ್ ಯುಗ್” ಹೊಸ ಭಾವನೆ‌ ಮೂಡಿಸಲಿದೆ. ಅಂದಹಾಗೆ, ಹನುಮ ಜಯಂತಿ ದಿನದಂದು ಈ ಸೀರೀಸ್ ನ ಮ್ಯೂಸಿಕಲ್ ಟೀಸರ್ ಹೊರಬಂದಿತ್ತು. ಈಗ ಎಂಎಕ್ಸ್ ಪ್ಲೇಯರ್ ನಲ್ಲಿ ಟ್ರೇಲರ್ ಬಿಡುಗಡೆಯಾಗಿದೆ. ಇನ್ನು ಮೇ.6 ರಂದು ಎಂಎಕ್ಸ್ ಪ್ಲೇಯರ್ ನಲ್ಲಿ ಪ್ರಸಾರವಾಗಲಿದೆ.


ಅದೇನೆ ಇರಲಿ ದಿಗಂತ್ ಅವರು ಸ್ಪುರದ್ರೂಪಿ. ರಾಮನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ಸದ್ಯ ಪ್ರಸಾರವಾಗಲಿರುವ ಈ ಸೀರೀಸ್ ಗಾಗಿ ಹಲವರು ಎದುರು ನೋಡುತ್ತಿದ್ದಾರೆ.
ದಿಗಂತ್ ಅಭಿನಯದ “ಹುಟ್ಟು ಹಬ್ಬದ ಶುಭಾಶಯಗಳು”, ” ಮಾರಿಗೋಲ್ಡ್” ಚಿತ್ರಗಳು ರಿಲೀಸ್ ಗೆ ರೆಡಿಯಾಗಿವೆ. “ಗಾಳಿಪಟ” ಕೂಡ ಹಾರಲು ಸಜ್ಜಾಗುತ್ತಿದೆ. ಈ ಬೆನ್ನಲ್ಲೇ ಅವರು “ರಾಮ್ ಯುಗ್” ಸೀರೀಸ್ ಮಾಡಿದ್ದಾರೆ.

error: Content is protected !!