ಉಪ್ಪಿ ಸಿನಿಮಾ ನಿಲ್ಲಿಸಿ, ಹೊಸ ಪ್ರತಿಭೆಗೆ ಆಕ್ಷನ್‌ ಕಟ್‌ ಹೇಳಲು ಮುಂದಾದ ನಿರ್ದೇಶಕ ಶಶಾಂಕ್‌

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಿರ್ದೇಶಕ ಶಶಾಂಕ್‌, ತಮ್ಮದೇ ನಿರ್ಮಾಣದ ಉಪೇಂದ್ರ ಹಾಗೂ ಹರಿಪ್ರಿಯ ಜೋಡಿಯ ಸಿನಿಮಾಕ್ಕೆ ಆಕ್ಷನ್‌-ಕಟ್‌ ಹೇಳಿ ಇಷ್ಟರಲ್ಲಿಯೇ ಸಿನಿಮಾವನ್ನು ರಿಲೀಸ್‌ ಹಂತಕ್ಕೆ ತಂದು ನಿಲ್ಲಿಸುತ್ತಿದ್ದರೋ ಏನೋ, ಆದರೆ, ಕೊರೊನಾ ಹಿನ್ನೆಲೆಯಲ್ಲಿ ಅವರ ಬಹು ನಿರೀಕ್ಷಿತ ಪ್ರಾಜೆಕ್ಟ್‌ ಅರ್ಧಕ್ಕೆ ನಿಂತಿದೆ. ಈ ನಡುವೆಯೇ ಈಗ ಹೊಸ ಸಿನಿಮಾವೊಂದನ್ನು ಅನೌನ್ಸ್‌ ಮಾಡಿದ್ದಾರೆ. ವಿಶೇಷ ಅಂದ್ರೆ ಈಗವರು ಹೊಸ ಪ್ರತಿಭೆಗೆ ಆಕ್ಷನ್‌ ಕಟ್‌ ಹೇಳಲು ಮುಂದಾಗಿದ್ದಾರೆ. ಆ ಚಿತ್ರದ ಟೈಟಲ್‌ ಕೂಡ ಈಗ ರಿವೀಲ್‌ ಆಗಿದೆ.


ʼಲವ್‌ 360ʼ ಎನ್ನುವುದು ಆ ಚಿತ್ರದ ಹೆಸರು. ಹೆಸರೇ ಹೇಳುವಂತೆ ಇದೊಂದು ಪಕ್ಕಾ ಲವ್‌ ಸ್ಟೋರಿ ಸಿನಿಮಾ. ಹೊಸ ತಲೆಮಾರಿನ ಯುವ ಜನತೆಗೆ ಹಿಡಿಸುವಂತಹ ಕಥೆಯೊಂದನ್ನು ರೆಡಿ ಮಾಡಿಕೊಂಡು ಲವ್‌ ೩೬೦ ಹೆಸರಲ್ಲಿ ಸಿನಿಮಾ ಮಾಡಲು ಹೊರಟಿದ್ದಾರಂತೆ ನಿರ್ದೇಶಕ ಶಶಾಂಕ್.‌ ಲವ್‌ ಅನ್ನೋದೇ ಒಂದು ಯುನಿವರ್ಸಲ್‌ ಸಬ್ಜೆಕ್ಟ್.‌ ಪ್ರತಿಯೊಬ್ಬರಲ್ಲೂ ಒಂದಲ್ಲೊಂದು ಬಗೆಯಲ್ಲಿ ಪ್ರೀತಿಯ ಧಾರೆ ಹರಿದೇ ಇರುತ್ತೆ. ಆ ದೃಷ್ಟಿಯಲ್ಲಿ ತುಂಬಾ ಆಫ್ಟ್‌ ಆಗುವ ವಿಷಯವನ್ನು ಕೈಗೆತ್ತಿಕೊಂಡಿದ್ದು ಮಾತ್ರವಲ್ಲ, ಈ ಕಥೆಗೆ ತಕ್ಕಂತೆ ಬಳ್ಳಾಗಿ ಮೂಲದ ಹೊಸ ಪ್ರತಿಭೆಯನ್ನು ಚಿತ್ರದ ನಾಯಕನನ್ನಾಗಿಯೇ ಆಯ್ಕೆ ಮಾಡಿಕೊಂಡಿದ್ದಾರೆ.


ಅಂದಹಾಗೆ, ಬಳ್ಳಾರಿ ಮೂಲದ ಯುವ ಪ್ರತಿಭೆ ಪ್ರವೀಣ್‌ ಈ ಚಿತ್ರದ ನಾಯಕ. ಎಂಜಿನಿಯರಿಂಗ್‌ ಮುಗಿಸಿರುವ ಈ ಹುಡುಗನಿಗೆ ಸಿನಿಮಾ ಅಂದ್ರೆ ವಿಪರೀತ ಹುಚ್ಚಂತೆ. ಅದರಲ್ಲೂ ನಾಯಕನಾಗಿಯೇ ತೆರೆ ಮೇಲೆ ಕಾಣಿಸಿಕೊಳ್ಳಬೇಕೆಂಬ ಹಂಬಲವಂತೆ. ಸದ್ಯಕ್ಕೆ ಈ ಚಿತ್ರಕ್ಕೆ ಪವೀಣ್‌ ನಾಯಕರಾಗಿ ಆಯ್ಕೆ ಆಗಿದ್ದು ಬಿಟ್ಟರೆ, ನಾಯಕಿ ಸೇರಿದಂತೆ ಉಳಿದ ಪಾತ್ರಗಳಿಗೆ ಕಲಾವಿದರ ಹುಡುಕಾಟ ನಡೆಸಿದ್ದಾರಂತೆ ನಿರ್ದೇಶದ ಶಶಾಂಕ್.‌ʼ ನಾಯಕಿ ಸೇರಿದಂತೆ ಉಳಿದ ಪಾತ್ರಗಳಿಗೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವ ಕೆಲಸ ಈಗ ನಡೆದಿದೆ. ಈ ವಾರದೊಳಗೆ ನಾಯಕಿ ಅಯ್ಕೆ ಫೈನಲ್‌ ಆಗಲಿದೆ. ಉಳಿದಂತೆ ಚಿತ್ರದ ತಂತ್ರಜ್ಜರು ಆಯ್ಕೆ ಈಗಾಗಲೇ ನಡೆದು ಹೋಗಿದೆ ಎನ್ನುತ್ತಾರವರು.


“ಲವ್‌ 360” ಗೆ ಶಶಾಂಕ್‌ ಅವರೇ ನಿರ್ದೇಶಕ ಕಮ್‌ ನಿರ್ಮಾಪಕ. ಶಶಾಂಕ್‌ ಫಿಲ್ಮ್‌ ಬ್ಯಾನರ್‌ ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಆಗಸ್ಟ್‌ ನಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ಶುರುವಾಗಲಿದೆಯಂತೆ. ಸದ್ಯಕ್ಕೆ ಕಲಾವಿದರ ಆಯ್ಕೆ ಹಾಗೂ ಒಂದಷ್ಟು ಸಿದ್ದತೆ ನಡೆಯುತ್ತಿವೆ ಎನ್ನುತ್ತಾರವರು. ಇನ್ನು ಅವರದೇ ಬ್ಯಾನರ್‌ನಲ್ಲಿ ನಿರ್ಮಾಣವಾಗಬೇಕಿದ್ದ ಉಪೇಂದ್ರ- ಹರಿಪ್ರಿಯ ಕಾಂಬಿನೇಷನ್‌ ಸಿನಿಮಾ ಶುರುವಾಗುವುದು ಯಾವಾಗ ಎನ್ನುವುದಕ್ಕೂ ಪ್ರತಿಕ್ರಿಯೆ ಕೊಟ್ಟಿದ್ದಾರೆ.ʼ

ಅದು ಬಿಗ್‌ ಬಜೆಟ್‌ ಸಿನಿಮಾ. ಮೇಲಾಗಿ ಜನರ ಮಧ್ಯೆಯೇ ಸಾಕಷ್ಟು ದೃಶ್ಯಗಳನ್ನು ಚಿತ್ರೀಕರಿಸಬೇಕಿದೆ. ಆದರೆ ಈ ಕೊರೋನಾ ಸಂದರ್ಭದಲ್ಲಿ ಅದೆಲ್ಲ ಸಾಧ್ಯವೇ ಇಲ್ಲ. ಅದೇ ಕಾರಣದಿಂದ ಅದನ್ನು ಸದ್ಯಕ್ಕೆ ನಿಲ್ಲಿಸಿ, ಈ ಸಿನಿಮಾ ಶುರುಮಾಡುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕ ಶಶಾಂಕ್.‌

Related Posts

error: Content is protected !!