ಲಹರಿ ಮ್ಯೂಜಿಕ್‌ ಗೆ ವಜ್ರ ಕಿರೀಟ…! ಹಲವು ದಾಖಲೆಗಳ ಸೃಷ್ಟಿಸಿದ ಲಹರಿ ಮ್ಯೂಜಿಕ್ ಯುಟ್ಯೂಬ್‌ ಚಾನೆಲ್ ; ಕನ್ನಡಿಗರಿಗೆ ಪ್ರಶಸ್ತಿ ಅರ್ಪಣೆ ಮಾಡಿದ ಲಹರಿ ವೇಲು

ಲಹರಿ, ಇದು ಕನ್ನಡಿಗರ ಮನೆ ಮಾತಾದ ಹೆಸರು. ಲಹರಿ ಅಂದಾಕ್ಷಣ ನೆನಪಾಗುವುದೆ ʼಲಹರಿ ಆಡಿಯೋ ಸಂಸ್ಥೆʼ ಯಾಕಂದ್ರೆ, ಸಿನಿಮಾ, ಭಾವಗೀತೆ ಹಾಗೂ ಭಕ್ತಿ ಗೀತೆಗಳ ಆಡಿಯೋ ಸಂಗೀತ ಕ್ಷೇತ್ರದಲ್ಲಿ ಲಹರಿ ಮ್ಯೂಜಿಕ್‌ ಗೆ ಮಹತ್ತರ ಮೈಲುಗಲ್ಲು ಸ್ಥಾಪಿಸಿದ ಹೆಗ್ಗಳಿಕೆ ಇದೆ. ಅಷ್ಟು ಮಾತ್ರವೇ ಅಲ್ಲ, ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಲಹರಿ ಆಡಿಯೋ ಸಂಸ್ಥೆಯದ್ದು. ಅದರ ಸಾಧನೆಯ ಕಿರೀಟಕ್ಕೆ ಈಗಾಗಲೇ ಸಾಕಷ್ಟು ಪ್ರತಿಷ್ಟಿತ ಪ್ರಶಸ್ತಿಗಳು ಸಂದಿವೆ. ಆ ಸಾಲಿನಲ್ಲಿ ಈಗ ಅತೀ ಶ್ರೇಷ್ಟ ಎನ್ನಬಹುದಾದ ಗೌರವದ ಗರಿ ಮೂಡಿದೆ.


ಹೌದು, ಲಹರಿ ಮ್ಯೂಜಿಕ್‌ ಯುಟ್ಯೂಬ್‌ ಚಾನೆಲ್‌ಗೆ ಈಗ 1.18 ಕೋಟಿ ಯಷ್ಟು ಜನ ಚಂದದಾರಾಗಿದ್ದಾರೆ. ಇದು ಭಾರತೀಯ ಸಂಗೀತ ಕ್ಷೇತ್ರದ ಡಿಜಿಟಲ್‌ ಯುಗಕ್ಕೆ ಹೊಚ್ಚ ಹೊಸ ದಾಖಲೆಯೇ ಹೌದು. ಈ ಹಿನ್ನೆಲೆಯಲ್ಲಿ ಅಮೆರಿಕದ ನ್ಯೂಯಾರ್ಕ್‌ ನಲ್ಲಿರುವ ಯುಟ್ಯೂಬ್‌ ಸಂಸ್ಥೆಯಿಂದ ಲಹರಿ ಮ್ಯೂಜಿಕ್‌ ಗೆ ಪ್ರತಿಷ್ಟಿತ ʼಡೈಮಂಡ್‌ ಕ್ರಿಯೇಟರ್‌ ಅವಾರ್ಡ್‌ ಸಿಕ್ಕಿದೆ. ಸಹಜವಾಗಿಯೇ ಲಹರಿ ಸಂಸ್ಥೆಯ ಮಾಲೀಕರಾದ ಮನೋಹರ್‌ ನಾಯ್ಡು ಹಾಗೂ ಲಹರಿ ವೇಲು ಅವರ ಮುಖದಲ್ಲಿ ಸಂತಸದ ನಗೆ ಮೂಡಿಸಿದೆ.

ʼ ಇದು ನಮಗೆ ಸಿಕ್ಕ ಗೌರವವಲ್ಲ, ಸಮಸ್ತ ಕನ್ನಡಿಗರ ಸಹಕಾರದ ಫಲ. ಒಂದು ಸಣ್ಣ ಸಂಸ್ಥೆಯನ್ನು ಆರು ಕೋಟಿ ಕನ್ನಡಿಗರು ಪ್ರೋತಾಹಿಸಿ, ಬೆಳೆಸುತ್ತಾ ಬಂದಿದ್ದರ ಫಲದಿಂದಾಗಿಯೇ ಲಹರಿ ಸಂಸ್ಥೆ ಇವತ್ತು ದೊಡ್ಡ ಮಟ್ಟಕ್ಕೆ ಬೆಳೆದಿದೆ. ಹಾಗಾಗಿ ಇದು ಸಮಸ್ತ ಕನ್ನಡಿಗರಿಗೆ ಸಲಬೇಕಾದ ಗೌರವ. ಅವರಿಗೆ ಇದು ಅರ್ಪಣೆʼ ಎನ್ನುತ್ತಾರೆ ಲಹರಿ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು.
ಲಹರಿ ಮ್ಯೂಜಿಕ್‌ಗೆ ಈಗಾಗಲೇ ಯುಟ್ಯೂಬ್‌ ಸಂಸ್ಥೆಯಿಂದ ಎರಡು ಅವಾರ್ಡ್‌ ಸಿಕ್ಕಿವೆ. ಯುಟ್ಯೂಬ್‌ ಚಾನೆಲ್‌ಗೆ ಚಂದದಾರರ ಬಳಗವೂ ದಾಖಲೆಯಲ್ಲಿ ಜತೆಯಾದಂತೆಯೇ ಯುಟ್ಯೂಬ್‌ ಸಂಸ್ಥೆಯ ಕಡೆಯಿಂದ ಸಿಲ್ವರ್‌ ಹಾಗೂ ಗೋಲ್ಡನ್‌ ಅವಾರ್ಡ್‌ ಬಂದಿರುವುದು ಅದರ ಸಾಧನೆಯ ಸಿಕ್ಕ ಗರಿಮೆ. ಒಂದು ಲಕ್ಷ, 50 ಲಕ್ಷ ಹಾಗೂ 1 ಕೋಟಿಯಷ್ಟು ಜನರು ಕ್ರಮವಾಗಿ ಲಹರಿ ಮ್ಯೂಜಿಕ್‌ಗೆ ಚಂದದಾರರು ಆದಂತೆಲ್ಲ, ಯುಟ್ಯೂಬ್‌ ಸಂಸ್ಥೆ ದಾಖಲೆಯ ಗೌರವಗಳನ್ನು ನೀಡುತ್ತಾ ಬಂದಿದೆ.

ಈಗ ಲಹರಿ ಮ್ಯೂಜಿಕ್‌ ಯುಟ್ಯೂಬ್‌ ಸಾಧನೆಯಲ್ಲಿ ಡೈಮೆಂಡ್‌ ಅವಾರ್ಡ್‌ ಪ್ರಾಪ್ತಿ ಆಗಿದೆ. ಆ ಮೂಲಕ ದಕ್ಷಿಣ ಭಾರತದ ಸಂಗೀತ ಕ್ಷೇತ್ರದಲ್ಲಿಯೇ ಲಹರಿ ಮ್ಯೂಜಿಕ್‌ ಅಗ್ರಗಣ್ಯ ಸ್ಥಾನಕ್ಕೇರಿದೆ.
ʼನನಗೆ ಗೊತ್ತಿರುವ ಹಾಗೆ ಇದು ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿಯೇ ಮೊದಲು. ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಯಾವುದೇ ಭಾಷೆಯಲ್ಲೂ ಇಷ್ಟು ಚಂದದಾರರ ಬಳಗವನ್ನು ಸಂಪಾದಿಸಿಕೊಂಡ ಮ್ಯೂಜಿಕ್‌ ಯುಟ್ಯೂಬ್‌ ಚಾನೆಲ್‌ ಇಲ್ಲ. ಅಂತಹ ಹೊಸ ದಾಖಲೆ ಲಹರಿ ಮ್ಯೂಜಿಕ್‌ ಗೆ ಸಿಕ್ಕಿದೆ ಎನ್ನುವುದೇ ನಮ್ಮ ಸಂಸ್ಥೆಯ ಹೆಮ್ಮೆ. ಅದಕ್ಕೆ ಕಾರಣಕರ್ತರು ನಾವು ಎನ್ನುವುದಕ್ಕಿಂತ ಸಮಸ್ತ ಕನ್ನಡಿಗರು. ಸಿನಮಾ ನಿರ್ಮಾಪಕರು, ನಿರ್ದೇಶಕರು, ಕಲಾವಿದರು. ಕಾರ್ಮಿಕರು, ವಿಶೇಷವಾಗಿ ಸಂಗೀತ ನಿರ್ದೇಶಕರು, ಗಾಯಕರು, ಸಾಹಿತಿಗಳು , ಜತೆಗೆ ಮಾಧ್ಯಮದ ಮಿತ್ರರು ಕಾರಣರು. ಅವರು ನೀಡಿದ ಅಭೂತ ಪೂರ್ವ ಬೆಂಬಲದಿಂದಲೇ ಇದೆಲ್ಲ ಸಾಧ್ಯವಾಗಿದೆʼ ಎನ್ನುತ್ತಾರೆ ಲಹರಿ ವೇಲು.


ಲಹರಿ ಯುಟ್ಯೂಬ್‌ ಚಾನೆಲ್‌ ಶುರುವಾಗಿ ಇಲ್ಲಿಗೆ ೧೦ ವರ್ಷ. ಇಷ್ಟು ಕಡಿಮೆ ಅವದಿಯಲ್ಲಿ ಅದು ೧.೧೮ ಕೋಟಿ ಚಂದದಾರರ ಬಳಗ ಹೊಂದಿದೆ. ಕನ್ನಡಕ್ಕೆ ಮಾತ್ರ ಸೀಮಿತವಾಗದೆ ತೆಲುಗು, ತಮಿಳು ಹಾಗೂ ಮಲಯಾಳಂಗೂ ವಿಸ್ತರಣೆ ಗೊಂಡಿದೆ. ಪ್ರತಿ ಭಾಷೆಯಲ್ಲೂ ಒಂದೊಂದು ತಂಡ ಹೊಂದಿದೆ. ಪ್ರತಿ ತಂಡದಲ್ಲೂ ೨೦ ರಿಂದ ೨೫ ಮಂದಿ ಕೆಲಸ ಗಾರರಿದ್ದಾರೆ. ಇದು ಲಹರಿ ಮ್ಯೂಜಿಕ್‌ ನ ಶಕ್ತಿ. ಇನ್ನು ಲಹರಿ ಆಡಿಯೋ ಸಂಸ್ಥೆ ಆಲದ ಮರದಂತೆ ಬೆಳೆದು ನಿಂತಿದೆ. ಕನ್ನಡದ ಹಿರಿಮೆ-ಗರಿಮೆ ಹೆಚ್ಚಾಗುವಂತೆ ಅದು ಕನ್ನಡದ ಚಿತ್ರಗೀತೆ ಮತ್ತು ಭಾವಗೀತೆಗಳನ್ನು ಜಗತ್ತಿನಾದ್ಯಂತ ಸಂಗೀತ ಪ್ರಿಯರಿಗೆ ಉಣಬಡಿಸುತ್ತಿದೆ. .ಆ ಮೂಲಕ ಲಹರಿ ಆಡಿಯೋ ಸಂಸ್ಥೆಯ ಮಾಲೀಕರಾದ ಮನೋಹರ್‌ ನಾಯ್ಡು ಹಾಗೂ ಲಹರಿ ವೇಲು ಇಬ್ಬರು ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರವಾಗಿದ್ದು ಲಹರಿ ಸಂಸ್ಥೆಯ ಸಾಧನೆಗೆ ಸಂದ ಬಹುದೊಡ್ಡ ಗೌರವ. ಹಾಗೆಯೇ ಕನ್ನಡದ ಹೆಮ್ಮೆಯೂ ಹೌದು.

Related Posts

error: Content is protected !!