ಬೀದಿಗೆ ಬಿತ್ತಲ್ಲ ಪುಟ್ಟಣ್ಣ ಕಟ್ಟಿದ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ! ಇಂಡ್ಯಾದಲ್ಲಿ ನಂಬರ್ 1 ಮಾಡ್ತೀವಿ ; ಹೀಗಂತ ಸೀನಿಯರ್ ಡೈರೆಕ್ಟರ್ಸ್ ಸೇರಿ ಮಾಡಿದ್ರು ಶಪಥ !!

ಗಿರೀಶ್ ಕಾಸರವಳ್ಳಿ ಸೇರಿದಂತೆ ಸುಮಾರು ಹದಿನೈದಕ್ಕೂ ಹೆಚ್ಚು ಹಿರಿಯ ನಿರ್ದೇಶಕರು ಸೇರಿ `ಅಡಾಕ್ ಕಮಿಟಿ’ ರಚನೆ ಮಾಡಲಾಗಿದ್ದು, ಅವ್ಯವಹಾರ ಮಾಡಿರುವವರ ವಿರುದ್ಧ ಕಮಿಷನರ್ ಗೆ ದೂರು ಕೊಟ್ಟು, ಅಕ್ರಮ ಸಾಬೀತಾದರೆ ಜೀವನದಲ್ಲಿ ಇನ್ನೆಂದು ಅಂತವರನ್ನ ನಿರ್ದೇಶಕರ ಸಂಘದ ಮೆಟ್ಟಿಲು ತುಳಿಯೋದಕ್ಕೆ ಅವಕಾಶ ಮಾಡಿಕೊಡಲ್ವಂತೆ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಇಂಡಿಯಾದಲ್ಲಿ ನಂಬರ್ ಒನ್ ಆಗ್ಬೇಕು ಅಂತ ಪಣತೊಟ್ಟಿದ್ದಾರೆ ಹಿರಿಯ ನಿರ್ದೇಶಕರು…

  • ಬರಹ : ವಿಶಾಲಾಕ್ಷಿ

ಇವತ್ತು ಸೌತ್ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡ್ತಿದೆ ಎಂಬುದು ನಿಮ್ಮೆಲ್ಲರಿಗೂ ಗೊತ್ತಿರುವ ವಿಷ್ಯ. ಇದಕ್ಕೆ ಗಂಧದಗುಡಿಯ ದಿಗ್ಗಜರಿಂದ ಹಿಡಿದು ರಾಕಿಭಾಯ್ ಕೂಡ ಕಾರಣ ಎಂಬುದು ನಿಮ್ಮೆಲ್ಲರಿಗೂ ಗೊತ್ತಿರೋ ಸತ್ಯ. ಹೌದು, ಕನ್ನಡ ಚಿತ್ರರಂಗಕ್ಕಿರುವ ಇತಿಹಾಸ, ಗಂಧದಗುಡಿಗಿರುವ ಶಕ್ತಿ, ಚಂದನವನದ ಕಲಾವಿದರಿಗಿರುವ ತಾಕತ್ತು ಇಡೀ ಭಾರತೀಯ ಚಿತ್ರರಂಗಕ್ಕೆ ಗೊತ್ತಾಗುತ್ತಿರುವ ದಿನಗಳಲ್ಲಿ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ ಬೀದಿಗೆ ಬಿದ್ದಿದೆ. ಇದು ನಿಜಕ್ಕೂ ದುರಂತದ ಸಂಗತಿ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಅನ್ನೋದು ಬರೀ ಸಂಘವಲ್ಲ. ಯಾರೋ ಕೆಲಸಕ್ಕೆ ಬಾರದ ನಾಲ್ಕು ಮಂದಿ ಹುಟ್ಟು ಹಾಕಿದ ಸಂಸ್ಥೆಯೂ ಅಲ್ಲ ಬದಲಾಗಿ ಗಂಧದಗುಡಿಯನ್ನ ಕಟ್ಟಿ ಬೆಳೆಸಲಿಕ್ಕೆ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್, ರಾಜೇಂದ್ರ ಸಿಂಗ್ ಬಾಬು, ದೊರೆ ಭಗವಾನ್, ಸಿದ್ದಲಿಂಗಯ್ಯ ನಾಗೇಂದ್ರ ರಾವ್, ವಿಠಲಾಚಾರ್, ಶಂಕರ್ ಸಿಂಗ್ ಸೇರಿದಂತೆ ಹಲವು ದಿಗ್ಗಜರು ಬೆವರು ಹರಿಸಿದ್ದಾರೆ. ಭದ್ರ ಬುನಾದಿ ಹಾಕಿಕೊಟ್ಟು ಮಣ್ಣಲ್ಲಿ ಮಣ್ಣಾಗಿದ್ದಾರೆ. ಇಂತಹ ಸಂಸ್ಥೆ ಇವತ್ತು ನೆಲೆಕಳೆದುಕೊಂಡಿದೆ. ಇಂತಹ ಸಂಸ್ಥೆಯನ್ನು ಬೀದಿಗೆ ತಂದು ನಿಲ್ಲಿಸಿದ್ಯಾರು ಅನ್ನೋದನ್ನ ನೋಡೋದಕ್ಕೂ ಮುನ್ನ ಈ ಸಂಸ್ಥೆಯ ಹೆಮ್ಮೆಯ ಸಂಗತಿ ಬಗ್ಗೆ ಹೇಳ್ತೀವಿ ಕೇಳಿ…

ಭಾರತದಲ್ಲೇ ಒನ್ ಆಫ್ ದಿ ಬೆಸ್ಟ್ ಡೈರೆಕ್ರ‍್ಸ್ ಅಸೋಸಿಯೇಷನ್ !
ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗಿಂತ ಈ ಅವಾರ್ಡ್ ದೊಡ್ಡದು !

ಇವತ್ತು ಬೀದಿಪಾಲಾಗಿರುವ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಪುಟ್ಟಣ್ಣ ಅವರು ಇದ್ದಾಗಭಾರತದಲ್ಲೇ ಒನ್ ಆಫ್ ದಿ ಬೆಸ್ಟ್ ಡೈರೆಕ್ರ‍್ಸ್ ಅಸೋಸಿಯೇಷನ್ ಅಂತ ಕರೆಸಿಕೊಂಡಿತ್ತು. ಭಾರತೀಯ ಚಿತ್ರರಂಗ ಕಂಡ ಬಿ ಆರ್ ಚೋಪ್ರಾ, ಮಣಿರತ್ನಂ, ಭಾರತಿರಾಜ್, ಎಲ್. ವಿ ಪ್ರಸಾದ್, ಬಾಲಚಂದಿರ್, ವಿಶ್ವನಾಥ್, ಭಾನುಮತಿಯಂತಹ ನಿರ್ದೇಶಕರು ಕನ್ನಡ ಚಲನಚಿತ್ರ ಸಂಘವನ್ನು ಹಾಡಿಹೊಗಳಿದ್ದರು. ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸೃತ ನಿರ್ದೇಶಕ ಎಲ್. ವಿ. ಪ್ರಸಾದ್ ಅವರು, `ದಾದಾಸಾಹೇಬ್ ಪಾಲ್ಕೆ ಪಡೆದು ನಂತರದ ವರ್ಷದಲ್ಲಿ ಅವರ ಪುಸ್ತಕದಲ್ಲಿ ಬರೆಯುತ್ತಾರೆ. ಕರ್ನಾಟಕ ನಿರ್ದೇಶಕರ ಸಂಘ ಕೊಡುವ ಗೌರವ ಹಾಗೂ ಪ್ರಶಸ್ತಿ ದಾದಾಸಾಹೇಬ್ ಪಾಲ್ಕೆ ಅವಾರ್ಡ್ಗಿಂತ ದೊಡ್ಡದು. ಇವರುಗಳು ಅವಾರ್ಡ್ ಕಾರ್ಯಕ್ರಮವನ್ನ ಕಂಡೆಕ್ಟ್ ಮಾಡುವ ರೀತಿ ಹಾಗೂ ಆರ್ಗನೈಸ್ ಮಾಡುವುದನ್ನ ಬೇರೆ ಯಾವ ಕಡೆನೂ ನಾನು ನೋಡಿಲ್ಲ ಅಂತ ಹೆಮ್ಮೆಯಿಂದ ಹೇಳಿಕೊಂಡಿದ್ದರು.

`ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ’ದ ವತಿಯಿಂದ ಪ್ರತಿವರ್ಷ ಅವಾರ್ಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಪ್ರಸಿದ್ದ ನಿರ್ದೇಶಕರುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿದ್ದರು. ವರನಟ ಡಾ ರಾಜ್‌ಕುಮಾರ್ ಅವ್ರಿಗೆ ನಿರ್ದೇಶಕ ಸಂಘದ ಕಾರ್ಯಕ್ರಮ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ, ತಮ್ಮ ತಂದೆ ಪುಟ್ಟಸ್ವಾಮಿಯವರ ಹೆಸರಲ್ಲಿ ಅವಾರ್ಡ್ ಇಟ್ಟಿದ್ದರು. ಬೆಸ್ಟ್ ಡೈರೆಕ್ಟರ್, ಬೆಸ್ಟ್ ಆಕ್ಟರ್, ಬೆಸ್ಟ್ ಪ್ರೊಡ್ಯೂಸರ್ ಹೀಗೆ ಸುಮಾರು 20 ವಿಭಾಗದಲ್ಲಿ ಅವಾರ್ಡ್ ನೀಡಲಾಗ್ತಿತ್ತು. ಈಗ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಅವಾರ್ಡ್ ಕಾರ್ಯಕ್ರಮವನ್ನು ನಡೆಸುವುದು ಇರಲಿ, ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಕೂರೋದಕ್ಕೆ ಜಾಗನೇ ಇಲ್ಲ.

ಚಲನಚಿತ್ರ ನಿರ್ದೇಶಕರ ಸಂಘಕ್ಕೆ ಸೂರಿಲ್ಲ ಗುರು !
ಪುಟ್ಟಣ್ಣ ಅವರ ಬೈಲಾ ಮೀರಿ ಅಧಿಕಾರ ಮಾಡಿದ್ರಾ ಇವರೆಲ್ಲರು !?

ಹೌದು, ಇವತ್ತು ಚಲನಚಿತ್ರ ಸಂಘಕ್ಕೆ ಒಂದು ಸೂರಿಲ್ಲ. ಪುಟ್ಟಣ್ಣ ಅವರು ಸಂಘ ಹುಟ್ಟು ಹಾಕಿದಾಗಿನಿಂದ ಇಲ್ಲಿವರೆಗೂ ಬಾಡಿಗೆ ಬಿಲ್ಡಿಂಗ್ ಆದರೂ ಇತ್ತು. ಆದರೆ, ವಿ. ನಾಗೇಂದ್ರ ಪ್ರಸಾದ್ ಅವರು ತಮ್ಮ ಅಧ್ಯಕ್ಷ ಪಟ್ಟವನ್ನು ಏಕಾಏಕಿ ನಿರ್ದೇಶಕ ಟೇಶಿ ವೆಂಕಟೇಶ್‌ಗೆ ಹಸ್ತಾಂತರಿಸಿದ ಮೇಲೆ ಚುನಾವಣೆ ನಡೆಯದೇ ಸ್ವಯಂ ಘೋಷಿತ ಅಧ್ಯಕ್ಷರಾಗಿ ಟೇಶಿ ವೆಂಕಟೇಶ್ ನಿರ್ದೇಶಕರ ಸಂಘದ ಜವಾಬ್ದಾರಿ ವಹಿಸಿಕೊಂಡ್ಮೇಲೆ ಸಂಘಕ್ಕೆ ಬಾಡಿಗೆ ಬಿಲ್ಡಿಂಗ್ ಕೂಡ ಇಲ್ಲ. ಸಂಘದ ನೀತಿ-ನಿಯಮಗಳನ್ನ ಪಾಲಿಸದೇ, ಪುಟ್ಟಣ್ಣ ಅವರ ಬೈಲಾ ಪ್ರಕಾರ ನಡೆದುಕೊಳ್ಳದೇ ಟೇಶಿ ವೆಂಕಟೇಶ್ ಸರ್ವಾಧಿಕಾರಿಯಂತೆ ವರ್ತಿಸಿದ್ದಾರಂತೆ. ನಿರ್ದೇಶಕರ ಸಂಘದ ಯಾರೊಬ್ಬರ ಗಮನಕ್ಕೂ ತರದೇ ಎಫ್ ಡಿ ಅಮೌಂಟ್ನ ಕೂಡ ಡ್ರಾ ಮಾಡಿಕೊಂಡಿದ್ದಾರಂತೆ.

ಹೀಗೆ ಬೈಲಾ ವಿರುದ್ದವಾಗಿ ಸಂಘದಲ್ಲಿ ಕಾರ್ಯಚಟುವಟಿಕೆಗಳು ಆಗ್ತಿದ್ದನ್ನ ಮನಗಂಡ ನಿರ್ದೇಶಕರ ಸಂಘದ ಉಪಾಧ್ಯಕ್ಷೆ ರೂಪಾ ಅಯ್ಯರ್ ಅವರು ಕಾನೂನಿನ ಮೊರೆ ಹೋಗಿದ್ದರು. ಇದೀಗ ಸರ್ಕಾರ ಕನ್ನಡ ನಿರ್ದೇಶಕರ ಸಂಘಕ್ಕೆ ಆಡಳಿತಾಧಿಕಾರಿಯನ್ನ ನೇಮಕ ಮಾಡಿದೆ. ಈ ವಿಷಯವನ್ನು ಹಾಗೂ ಇಲ್ಲಿವರೆಗೂ ನಡೆದಿರುವ ಘಟನೆಗಳನ್ನ ಹಿರಿಯ ನಿರ್ದೇಶಕರ ಸಭೆ ನಡೆಸಿ ಅವರ ಮುಂದಿಡುವ ಕೆಲಸವನ್ನ ರೂಪ ಅಯ್ಯರ್ ಮಾಡಿದ್ದಾರೆ. ಅಂದ್ಹಾಗೇ, ವಿ ನಾಗೇಂದ್ರ ಪ್ರಸಾದ್ ಹಾಗೂ ಟೇಶಿ ವೆಂಕಟೇಶ್ ಅವರ ಆಡಳಿತದ ಬಗ್ಗೆ ಸರ್ಕಾರದ ಆಡಳಿತಾಧಿಕಾರಿಯಿಂದ ಶೀಘ್ರದಲ್ಲೇ ತನಿಖೆ ಆಗಲಿದೆ. ಅಧಿಕಾರ ದುರುಪಯೋಗ ಆಗಿದ್ದಲ್ಲಿ, ಸಂಘದ ಹಣ ಉಪಯೋಗಿಸಿಕೊಂಡು ಅವ್ಯವಹಾರ ಮಾಡಿದ್ದಲ್ಲಿ ತಕ್ಕ ಶಿಕ್ಷೆಯಾಗಲಿದೆ.

ಪುಟ್ಟಣ್ಣ ಹಾಗೂ ದಿಗ್ಗಜರು ಕಟ್ಟಿದಂತಹ ನಿರ್ದೇಶಕರ ಸಂಸ್ಥೆಯನ್ನ ಬೀದಿಗೆ ತಂದು ನಿಲ್ಲಿಸಿರುವವರ ಬಗ್ಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ದೊರೆ ಭಗವಾನ್, ಹಿರಿಯ ನಟ ಶಿವರಾಂ, ಕೋಡ್ಲು ರಾಮಕೃಷ್ಣ ಸೇರಿದಂತೆ ಹಲವು ಹಿರಿಯ ನಿರ್ದೇಶಕರು ಅಸಮಾಧಾನಗೊಂಡರು. ಗಿರೀಶ್ ಕಾಸರವಳ್ಳಿ ಸೇರಿದಂತೆ ಸುಮಾರು ಹದಿನೈದಕ್ಕೂ ಹೆಚ್ಚು ಹಿರಿಯ ನಿರ್ದೇಶಕರು ಸೇರಿ `ಅಡಾಕ್ ಕಮಿಟಿ’ ರಚನೆ ಮಾಡಿದ್ದೇವೆ. ಸರ್ಕಾರ ನಿರ್ದೇಶಕರ ಸಂಘಕ್ಕೆ ನೇಮಕ ಮಾಡಿರುವ ಆಡಳಿತಾಧಿಕಾರಿಯಿಂದ ಸೂಕ್ತ ದಾಖಲೆ ಹಾಗೂ ಮಾಹಿತಿಯನ್ನು ಕಲೆಹಾಕಿಕೊಂಡು ಕಾನೂನಿನ ಮೊರೆ ಹೋಗ್ತೇವೆ. ಅವ್ಯವಹಾರ ಮಾಡಿರುವವರ ವಿರುದ್ಧ ಕಮಿಷನರ್ ಗೆ ದೂರು ಕೊಡ್ತೇವೆ. ಅಕ್ರಮ ಸಾಬೀತಾದರೆ ಜೀವನದಲ್ಲಿ ಇನ್ನೆಂದು ಅಂತವರನ್ನ ನಿರ್ದೇಶಕರ ಸಂಘದ ಮೆಟ್ಟಿಲು ತುಳಿಯೋದಕ್ಕೆ ಅವಕಾಶ ಮಾಡಿಕೊಡಲ್ಲ ಅಂತ ರಾಜೇಂದ್ರ ಸಿಂಗ್ ಬಾಬು ಕಿಡಿಕಾರಿದ್ದಾರೆ. ಜೊತೆಗೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಇಂಡಿಯಾದಲ್ಲಿ ನಂಬರ್ ಒನ್ ಆಗ್ಬೇಕು ಅಂತ ಪಣತೊಟ್ಟಿದ್ದಾರೆ.

ಇತಿಹಾಸ ಸೃಷ್ಟಿಸಿದ್ದರು `ಕೆಜಿಎಫ್’ ಸಾರಥಿ !
ಕನ್ನಡ ನಿರ್ದೇಶಕರಿಗಿದೆ ತಿರುಗಿ ನೋಡುವಂತೆ ಮಾಡೋ ಶಕ್ತಿ !

ಇಳಿವಯಸ್ಸಲ್ಲೂ ಕೂಡ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಇಂತಹದ್ದೊಂದು ದಿಟ್ಟ ಕಾರ್ಯಕ್ಕೆ ಎಲ್ಲರನ್ನೂ ಹುರಿದುಂಬಿಸುವ ರೀತಿಗೆ ಸೆಲ್ಯೂಟ್ ಹೊಡಿಬೇಕು. 100 ವರ್ಷದ ಹಿಂದೆನೇ ನಿರ್ದೇಶಕನೇ ಸಾರಥಿ ಅಂತ ಘೋಷಣೆಯಾಗಿದೆ. ಒಬ್ಬ ನಿರ್ದೇಶಕ ಮನಸ್ಸು ಮಾಡಿದ್ರೆ ಇತಿಹಾಸ' ಸೃಷ್ಟಿಯಾಗುತ್ತೆ ಅದಕ್ಕೆ ತಾಜಾ ಉದಾಹರಣೆಕೆಜಿಎಫ್’ ಅನ್ನೋ ಸಿನಿಮಾ ಇಡೀ ಇಂಡ್ಯಾವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಅವರು.

ಹೀಗೆ ಇಡೀ ದೇಶವನ್ನ ತಮ್ಮ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡುವ ಶಕ್ತಿ ನಮ್ಮ ಕನ್ನಡ ಚಿತ್ರರಂಗದ ಕ್ಯಾಪ್ಟನ್ ಗಳಿಗಿದೆ ಅಂದ್ಮೇಲೆ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘವನ್ನ ಇಂಡಿಯಾದಲ್ಲಿ ನಂಬರ್ ಒನ್ ಮಾಡುವ ತಾಕತ್ತು ಇದೆ ಅಂತ ಅರ್ಥ. ಹೀಗಿರುವಾಗ ಈಗಿನ ತಲೆಮಾರಿನ ನಿರ್ದೇಶಕರಗಳು ರಾಜೇಂದ್ರ ಸಿಂಗ್ ಬಾಬು ಅವರ ಯೋಜನೆಗೆ ಕೈ ಜೋಡಿಸಬೇಕು. ಜಗತ್ತಿನ ಬೇರೆ ಬೇರೆ ಚಿತ್ರರಂಗದ ನಿರ್ದೇಶಕರುಗಳನ್ನು ಕರೆಸಿ ಇಂಡಿಯನ್ ಕಾನ್ ಕ್ಲೇವ್ ಮಾಡಬೇಕು, ಸಿನಿಮಾ ಬಗ್ಗೆ ಚರ್ಚೆಗಳು ನಡೀಬೇಕು ಅಂತ ಸಿಂಗ್ ಬಾಬು ಅಭಿಪ್ರಾಯ ಪಟ್ಟಿದ್ದಾರೆ. ಅವರ ಆಸೆ ಆಕಾಂಕ್ಷೆ ಈಡೇರಲಿ , ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಇಂಡ್ಯಾದಲ್ಲಿ ಜನಪ್ರಿಯಗೊಳ್ಳಲಿ ಅನ್ನೋದೇ ಕನ್ನಡಿಗರ ಬಯಕೆ.

Related Posts

error: Content is protected !!