Categories
ಸಿನಿ ಸುದ್ದಿ

ಪುರ್‌ಸೊತ್‌ ಮಾಡ್ಕೊಂಡ್‌ ಲೈಫ್‌ ಎಂಜಾಯ್‌ ಮಾಡಿ! ಇದು ಸಂಚಾರಿಯ ಭಾವುಕ ಪಯಣ…

ಚಿತ್ರ ವಿಮರ್ಶೆ: ವಿಜಯ್‌ ಭರಮಸಾಗರ

ಚಿತ್ರ: ಪುಕ್ಸಟ್ಟೆ ಲೈಫು-ಪುರುಸೊತ್ತೇ ಇಲ್ಲ
ನಿರ್ಮಾಪಕ: ನಾಗರಾಜ ಸೋಮಯಾಜಿ
ನಿರ್ದೇಶನ: ಅರವಿಂದ್‌ ಕುಪ್ಳೀಕರ್‌
ತಾರಾಗಣ : ಸಂಚಾರಿ ವಿಜಯ್‌, ಅಚ್ಯುತ್‌ ಕುಮಾರ್‌, ರಂಗಾಯಣ ರಘು, ಮಾತಂಗಿ ಪ್ರಸನ್ನ ಇತರರು.

ಪೊಲೀಸು ಸಾಯಿಸ್ಬೋದು. ಆದರೆ, ಕೊಲೆ ಮಾಡಬಾರದು…
ಆ ತನಿಖಾಧಿಕಾರಿ ಈ ಡೈಲಾಗ್ ಹೇಳುವ ಹೊತ್ತಿಗೆ, ಅಲ್ಲೊಂದು ಕೊಲೆ ನಡೆದಿರುತ್ತೆ. ಅಲ್ಲಿ ಕೊಲೆಯಾದವ ಯಾರು, ಆ ಕೊಲೆ ಮಾಡಿದ್ದು ಯಾರು, ಯಾಕೆ ಅನ್ನೋ ಕುತೂಹಲವಿದ್ದರೆ, ಯಾವುದೇ ಅನುಮಾನವಿಲ್ಲದೆ “ಪುಕ್ಸಟ್ಟೆ ಲೈಫು” ಸಿನಿಮಾ ನೋಡಬಹುದು. ಅಲ್ಲಲ್ಲಿ ಕಚಗುಳಿ ಇಡುತ್ತಲೇ, ಆಗಾಗ ಕಾಡುವ, ದಿಟ್ಟಿಸಿ ನೋಡುವ, ವಾಸ್ತವತೆ ಸಾರುವ, ಒಮ್ಮೊಮ್ಮೆ ಭಾವುಕತೆಗೆ ನೂಕಿ, ಭಾರವೆನಿಸಿ ನೈಜತೆಗೆ ಹತ್ತಿರವಾಗುವ ಸಿನಿಮಾ ಇದು. ಇಲ್ಲಿ ಓದುವುದಕ್ಕಿಂತ ಹಾಗೊಮ್ಮೆ ಪುರುಸೊತ್ತು ಮಾಡಿಕೊಂಡು ಸಿನಿಮಾ ನೋಡಿದರೆ ಅದಕ್ಕೊಂದು ಅರ್ಥ.

ಇಡೀ ಸಿನಿಮಾದ ಆಕರ್ಷಣೆ ಮನಮಿಡಿಯೋ ಕಥೆ. ಅದನ್ನು ಅಷ್ಟೇ ಸೊಗಸಾಗಿಯೇ ಕಟ್ಟಿಕೊಡುವ ಪ್ರಯತ್ನ ನಿರ್ದೇಶಕ ಅರವಿಂದ್ ಕುಪ್ಳೀಕರ್‌ ಅವರಿಂದ ಆಗಿದೆ. ಮೊದಲರ್ಧ ಸುಮ್ಮನೆ ನೋಡಿಸಿಕೊಂಡು ಹೋಗುವ ತಾಕತ್ತು ಚಿತ್ರಕಥೆಗಿದೆ. ಒಂದಷ್ಟು ಕುತೂಹಲ ಕೆರಳಿಸುತ್ತಲೇ ದ್ವಿತಿಯಾರ್ಧ ಸಾಗುತ್ತದೆಯಾದರೂ, ನೋಡುವ ಪ್ರೇಕ್ಷಕನಿಗೆ ಮುಂದೇನಾಗುತ್ತೆ ಅನ್ನುವುದರ ಅರಿವು ಕೂಡ ಗೊತ್ತಾಗುತ್ತೆ. ಅಲ್ಲಲ್ಲಿ ಇನ್ನಷ್ಟು ಬಿಗಿಯಾದ ನಿರೂಪಣೆ ಇರಬೇಕಿತ್ತು. ಕೆಲವು ಕಡೆ ನಿರ್ದೇಶಕರ ಹಿಡಿತ ಕೈ ತಪ್ಪಿದೆಯಾದರೂ, ಕೊನೆ ಕೊನೆಯಲ್ಲಿ ಸೀಟಿನ ಅಂಚಿಗೆ ಕೂರಿಸುವ ತಾಕತ್ತು ಆ ಕಥೆಯಲ್ಲಿದೆ. ಎಲ್ಲೋ ಒಂದು ಕಡೆ ಕಥೆ ಆಶಯ ಬೇರೆಲ್ಲೋ ಸಾಗುತ್ತಿದೆ ಅನ್ನುವ ಹೊತ್ತಿಗೆ ಚಿತ್ರದ ಸಂಭಾಷಣೆ, ಹಿನ್ನೆಲೆ ಸಂಗೀತ ಮತ್ತು ಪಾತ್ರಗಳಲ್ಲಿನ ಲವಲವಿಕೆ ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಒಂದು ಸಿನಿಮಾ ನೈಜತೆಗೆ ಹತ್ತಿರವಾಗಿರಬೇಕು ಜೊತೆಗೆ ಸಮಾಜದೊಳಗಿನ ವಾಸ್ತವದ ಅರಿವನ್ನು ತೆರೆದಿಡುವಂತಿರಬೇಕು ಅನ್ನುವುದಕ್ಕೆ ಈ ಚಿತ್ರ ಸಾಕ್ಷಿ. ಪ್ರಸ್ತುತ ವಿದ್ಯಮಾನಗಳನ್ನೇ ಇಟ್ಟುಕೊಂಡು ನಿರೂಪಿಸಿರುವ ಜಾಣತನ ನಿರ್ದೇಶಕರದ್ದು.

ಇದು ಸಾರಾಂಶ…
ಅಲ್ಲೊಬ್ಬ ಷಹಜಾನ್. ಅವನಿಗೊಬ್ಬ ಮಮ್ತಾಜ್ ಕೂಡ ಇದ್ದಾಳೆ. ಹಾಗಂತ, ಇಲ್ಲಿ ‘ತಾಜ್ ಮಹಲ್’ನಂತಹ ಪ್ರೇಮ್ ಕಹಾನಿ ಇಲ್ಲ. ಷಹಜಾನ್ ಒಬ್ಬ ಕೀ ಮೇಕರ್. ಅಷ್ಟೇನು ಸ್ಥಿತಿವಂತನಲ್ಲದ ಷಹಜಾನ್, ಪೋಲೀಸರ ಆಟದಗೊಂಬೆ ಆಗ್ತಾನೆ. ಅದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಅಂತಿಟ್ಟುಕೊಳ್ಳಿ. ಏನನ್ನೂ ಅರಿಯದ ಷಹಜಾನ್ ತನ್ನದಲ್ಲದ ತಪ್ಪಿಗೆ ಬಂಧಿಯಾಗ್ತಾನೆ. ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿ ನಲುಗಿ ಹೋಗ್ತಾನೆ. ಘಟನೆಯೊಂದರಲ್ಲಿ ಮನಸ್ಸೊಪ್ಪದಿದ್ದರೂ ಪರಿಸ್ಥಿತಿ ಅವನನ್ನು ಕಳ್ಳನನ್ನಾಗಿಸುತ್ತೆ. ಅವನ ಆ ಪರಿಸ್ಥಿತಿಗೆ ಕಾರಣವೇನು? ಅದೇ ಸಿನಿಮಾದ ಟ್ವಿಸ್ಟು! ಈ ಕಥೆಯಲ್ಲಿ ಷಹಜಾನ್‌ನ ವ್ಯಥೆಯೂ ಇದೆ. ಅದೇನು ಎಂಬ ಪ್ರಶ್ನೆಗೆ ಉತ್ತರ ಬೇಕಿದ್ದರೆ, ಒಂದು ಬಾರಿ ಷಹಜಾನ್‌ನ ನೊಂದ-ಬೆಂದ ಕಥೆಯ ಚಿತ್ರಣ ನೋಡಬಹುದು.

ಇನ್ನು ಚಿತ್ರದ ಮತ್ತೊಂದು ಹೈಲೈಟ್‌ ಅಂದರೆ, ಸಂಗೀತ. ಚಿತ್ರದ ವೇಗಕ್ಕೆ ಹಿನ್ನೆಲೆ ಸಂಗೀತ ಹೆಗಲು ಕೊಟ್ಟಿದೆ. ಪ್ರತಿ ದೃಶ್ಯದಲ್ಲೂ ಅದ್ವೈತ ಗುರುಮೂರ್ತಿ ಅವರ ಕ್ಯಾಮೆರಾ ಕೈಚಳಕ ಖುಷಿ ಕೊಡುತ್ತದೆ. ಅದಕ್ಕೆ ಪೂರಕವಾಗಿ ಸಂಕಲನವೂ ಇದೆ. ಅಲ್ಲಲ್ಲಿ ಬರುವ ಹಾಡುಗಳಿಗೂ ಇಲ್ಲಿ ಮಹತ್ವವಿದೆ. ಇನ್ನು, ನಟನೆ ವಿಚಾರಕ್ಕೆ ಬಂದರೆ, ಸಂಚಾರಿ ವಿಜಯ್ ಅವರ ಬಗ್ಗೆ ಮಾತಾಡುವಂತಿಲ್ಲ. ಇಡೀ ಪಾತ್ರವನ್ನು ಅವರು ಜೀವಿಸಿದ್ದಾರೆ. ಮುಸ್ಲಿಂ ಯುವಕನ ಪಾತ್ರದ ನೋಡಿದವರಿಗೆ ಖಂಡಿತ ಖುಷಿಯಾಗದೇ ಇರದು. ಆ ಪಾತ್ರ ಮೂಲಕವೂ ಅವರು ಭಾವುಕತೆ ಹೆಚ್ಚಿಸಿದ್ದಾರೆ.

ಸಿನಿಮಾ ನೋಡಿ ಹೊರಬಂದವರಿಗೆ ಸಂಚಾರಿಯ ಭಾವುಕ ಪಯಣ ನೆನಪಾಗದೇ ಇರದು. ಅಷ್ಟರಮಟ್ಟಿಗೆ ಆವರಿಸಿಕೊಂಡಿದ್ದಾರೆ. ಉಳಿದಂತೆ ಅಚ್ಯುತ ಎಂದಿನಂತೆಯೇ ಗಮನ ಸೆಳೆಯುತ್ತಾರೆ. ಪೊಲೀಸ್‌ ಅಧಿಕಾರಿಯೊಬ್ಬನ ಹಣದಾಸೆ ಹೇಗೆಲ್ಲಾ ಇರುತ್ತೆ, ಅದರೊಂದಿಗೂ ಸಣ್ಣದ್ದೊಂದು ಮಾನವೀಯ ಗುಣವುಳ್ಳ ಪಾತ್ರವದು. ಇನ್ನು, ರಂಗಾಯಣ ರಘು ತನಿಖಾಧಿಕಾರಿಯಾಗಿ ಇಷ್ಟವಾಗುತ್ತಾರೆ. ಈವರೆಗೆ ಮಾಡಿದ ಪಾತ್ರಗಳಿಗಿಂತ ಇಲ್ಲಿನ ಪಾತ್ರ ವಿಭಿನ್ನ ಮತ್ತು ವಿಶಿಷ್ಟ ಎನ್ನಬಹುದು. ಉಳಿದಂತೆ ಅಲ್ಲಲ್ಲಿ ಬರುವ ಪ್ರತಿ ಪಾತ್ರಗಳು ಸಹ ಸಿನಿಮಾದಲ್ಲಿ ಜೀವಿಸಿವೆ.

ಕೊನೇ ಮಾತು: ಈ ಭಾವುಕ ಪಯಣದಲ್ಲಿ ಪುರುಸೊತ್ತು ಮಾಡ್ಕೊಂಡು ‘ಲೈಫ್’ ಎಂಜಾಯ್ ಮಾಡಿ..

Categories
ಸಿನಿ ಸುದ್ದಿ

ಹೊಂಬಾಳೆ ಫಿಲಂಸ್ ಮನಸ್ಸು ಮಾಡಿದ್ರೆ ಇದೇನು ಮಹಾ ಕಷ್ಟ-ವಿಜಯ್‌ ಕಿರಗಂದೂರು ಮನಸ್ಸು ಮಾಡುವರೇ?

ವಿಶೇಷ ಲೇಖನ: ದೇಶಾದ್ರಿ ಹೊಸ್ಮನೆ

ಕೊರೋನಾವೂ ಸೇರಿದಂತೆ ಅನೇಕ ಕಾರಣಗಳಿಗೆ ರಾಜ್ಯದಲ್ಲೀಗ ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲು ಹಾಕುತ್ತಿವೆ. ಆಗೊಂದು ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚಿದ್ದ ಚಿತ್ರಮಂದಿರಗಳ ಸಂಖ್ಯೆ ಈಗ ೫೦೦ಕ್ಕೆ ಬಂದಿದೆ ಎನ್ನುತ್ತವೆ ಮೂಲಗಳು. ಭವಿಷ್ಯದ ದಿನಗಳಲ್ಲಿ ಈ ಸಂಖ್ಯೆ ನೂರಿನ್ನೂರಕ್ಕೆ ಇಳಿದರೂ ಅಚ್ಚರಿ ಇಲ್ಲ. ಇದಕ್ಕೆ ಪರ್ಯಾಯವಾಗಿ ಸಿನಿಮಾದ ಹೊಸ ಮಾರುಕಟ್ಟೆ ಓಟಿಟಿ. ಅಮೆಜಾನ್‌, ನೆಟ್‌ ಫ್ಲಿಕ್ಸ್‌ ಸೇರಿದಂತೆ ಇದಕ್ಕೂ ಈಗ ಹತ್ತಾರು ಪ್ಲಾಟ್‌ ಫಾರ್ಮ್‌ ಇವೆ. ಆದರೂ ಕನ್ನಡಕ್ಕೆ ಯೋಗ್ಯವಾದ್ದದೊಂದು ಓಟಿಟಿ ಫ್ಲಾಟ್‌ ಫಾರ್ಮ್‌ ಈಗಲೂ ಇಲ್ಲ. ಅದೇ ಕಾರಣಕ್ಕೆ ಹೊಂಬಾಳೆ ಫಿಲಂಸ್‌ ನಂತಹ ಒಂದು ದೊಡ್ಡ ಸಂಸ್ಥೆ ಕನ್ನಡ ಸಿನಿಮಾಗಳಿಗೇ ಮೀಸಲಾಗಿ ಒಂದು ಒಟಿಟಿ ಪ್ಲಾಟ್‌ ಫಾರ್ಮ್‌ ಶುರು ಮಾಡಿದರೆ ಕನ್ನಡ ಸಿನಿಮಾ ಉಳಿಯುತ್ತೆ, ಹಾಗೆಯೇ ಕನ್ನಡ ಸಿನಿಮಾ ನಂಬಿ ಬಂದ ನಿರ್ಮಾಪಕರೂ ಉಳಿಯಬಲ್ಲರು ಅಲ್ಲವೇ?

ಹೊಂಬಾಳೆ ಫಿಲಂಸ್‌… ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿಯೇ ಅತೀ ಹೆಚ್ಚು ಸೌಂಡ್‌ ಮಾಡುತ್ತಿರುವ ಚಿತ್ರ ನಿರ್ಮಾಣ ಸಂಸ್ಥೆ. ಇದು ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್‌ ಹೌಸ್‌ ಅನ್ನೋದು ಮತ್ತೊಂದು ಹೆಮ್ಮೆ. ಅದಕ್ಕೆ ಕಾರಣ ʼಕೆಜಿಎಫ್‌ʼ ಚಿತ್ರ. ಕನ್ನಡ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿಯೇ ʼಕೆಜಿಎಫ್‌ʼ ಸಂಚಲನ ಸೃಷ್ಟಿ ಮಾಡಿದ ರೀತಿ ಈಗಲೂ ಸೋಜಿಗ. ಸಮುದ್ರದೊಳಗೆ ಇದಕ್ಕಿದ್ದಂತೆ ದೊಡ್ಡ ಅಲೆಯೇ ಎದ್ದು ಬಂದಂತೆ ಭಾರತೀಯ ಚಿತ್ರರಂಗಕ್ಕೆ ಸುನಾಮಿಯಂತೆ ಅಪ್ಪಳಿಸಿದ್ದು ಕೆಜಿಎಫ್‌ ಚಿತ್ರ. ಈ ಸಿನಿಮಾ ಸೃಷ್ಟಿಸಿದ ಅಬ್ಬರಕ್ಕೆ ಇಡೀ ಭಾರತೀಯ ಚಿತ್ರರಂಗವೇ ಅರೆಕ್ಷಣ ಕನ್ನಡದತ್ತ ತಿರುಗಿ ನೋಡಿದ್ದೀಗ ಇತಿಹಾಸ. ಕನ್ನಡದ ಚಿತ್ರವೊಂದು ಆ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿದ್ದು ಅದೇ ಮೊದಲು. ಅದರ ಕೀರ್ತಿ ಹೊಂಬಾಳೆ ಫಿಲಂಸ್‌ನ ರೂವಾರಿ ವಿಜಯ್‌ ಕಿರಗಂದೂರು ಹಾಗೂ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರದ್ದು.

ಕೆಜಿಎಫ್‌ ಮೂಲಕ ನಿರ್ದೇಶಕ ಪ್ರಶಾಂತ್‌ ನೀಲ್‌ ಸೃಷ್ಟಿಸಿದ ಆ ಮ್ಯಾಜಿಕ್‌ ಬಗ್ಗೆ ಎಷ್ಟು ವರ್ಣಿಸಿದರು ಕಮ್ಮಿಯೇ. ಅದರ ದೊಡ್ಡ ಪ್ರಭಾವವೇ ಕನ್ನಡ ಸಿನಿಮಾರಂಗದಲ್ಲೂ ಎದ್ದು ನಿಂತ ಪ್ಯಾನ್‌ ಇಂಡಿಯಾ ಟ್ರೆಂಡ್. ಅದೇ ಕಾರಣಕ್ಕೆ ಇವತ್ತು ಇಡಿಯಾ ಲೆವೆಲ್‌ ನಲ್ಲಿ ಕನ್ನಡ ಸಿನಿಮಾ ಅಂದ್ರೆ ಹೊಂಬಾಳೆ ಫಿಲಂಸ್‌ ಎನ್ನುವಷ್ಟರ ಮಟ್ಟಿಗೆ ಕೆಜಿಎಫ್‌ ದೊಡ್ಡ ಹವಾ ಸೃಷ್ಟಿಸಿದೆ. ಹಾಗಂತ ಕನ್ನಡ ಸಿನಿಮಾ ಅಂದ್ರೆ ಹೊಂಬಾಳೆ ಫಿಲಂಸ್‌ ಅಂತ ನಾವು ಹೇಳುತ್ತಿಲ್ಲ. ಅಷ್ಟೇ ಯಾಕೆ, ಈ ಮಾತನ್ನು ಹೊಂಬಾಳೆ ಫಿಲಂಸ್‌ ನ ರೂವಾರಿ ವಿಜಯ್‌ ಕಿರಗಂದೂರು ಕೂಡ ಒಪ್ಪುವುದಿಲ್ಲ. ಯಾಕಂದ್ರೆ ಕನ್ನಡ ಸಿನಿಮಾದ ಇತಿಹಾಸ ದೊಡ್ಡದಿದೆ. ಆದರೆ ಬದಲಾದ ಕಾಲದ ಸಿನಿಮಾ ಮಾರ್ಕೆಟ್‌ ದೃಷ್ಟಿಯಲ್ಲಿ ಕನ್ನಡ ಸಿನಿಮಾ ಅಂದ್ರೆ ಬಾಲಿವುಡ್‌ ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಒಂದು ಕ್ಷಣ ಅಚ್ಚರಿಯಾಗುವಂತೆ ಮಾಡಿದ್ದು ಕೆಜಿಎಫ್‌ ಚಿತ್ರ ಎನ್ನುವುದಕ್ಕೆ ಬಹುಶ: ಯಾರದೇ ತಕರಾರು ಇರದು.‌

ಅಷ್ಟು ಮಾತ್ರವಲ್ಲ, ʼಕೆಜಿಎಫ್‌ʼ ಬಂದು ಹೋದ ನಂತರ ಉಂಟಾದ ಪ್ರಭಾವ ಸಾಕಷ್ಟಿದೆ. ಆನಂತರ ಕನ್ನಡದಲ್ಲಿ ಶುರುವಾದ ಪ್ಯಾನ್‌ ಇಂಡಿಯಾಗಳ ದೊಡ್ಡ ಪಟ್ಟಿಯೇ ಅದಕ್ಕೆ ಸಾಕು. ಇರಲಿ, ಅದು ಕೆಜಿಎಫ್‌ ನ ತಾಕತ್ತು. ಅಲ್ಲಿಂದೀಗ ಕನ್ನಡದ ಸಿನಿಮಾ ಪ್ರೇಕ್ಷಕ ಮಾತ್ರವಲ್ಲ ಇಡೀ ಭಾರತೀಯ ಚಿತ್ರೋದ್ಯಮವೇ ʼಕೆಜಿಎಫ್‌ ೨ʼ ಚಿತ್ರದ ರಿಲೀಸ್‌ ದಿನಕ್ಕೆ ಕಾಯುತ್ತಿದೆ. ಹಾಗೆಯೇ ದೊಡ್ಡ ಕುತೂಹಲ ಹೊಂಬಾಳೆ ಫಿಲಂಸ್‌ ಬ್ಯಾನರ್‌ನ ಇತರೆ ಸಿನಿಮಾಗಳ ಮೇಲೂ ಇದೆ. ಪ್ರಭಾಸ್‌ ಅಭಿನಯದ ʼಸಲಾರ್ʼ ಮೊದಲ್ಗೊಂದು ಬುಧವಾರವಷ್ಟೇ ಅನೌನ್ಸ್‌ ಆದ ಹೊಂಬಾಳೆ ಫಿಲಂಸ್‌ ನ 12 ನೇ ಚಿತ್ರ ʼರಾಘವೇಂದ್ರ ಸ್ಟೋರ್ಸ್‌ʼ ಮೇಲೂ ಅಷ್ಟೇ ನಿರೀಕ್ಷೆ ಇದೆ. ಹೊಂಬಾಳೆ ಫಿಲಂಸ್‌ ಅಂದ್ರೆ ಸಿನಿಮಾ ಪ್ರೇಕ್ಷಕ ಪಾಲಿಗೆ ಅಂತಹ ಕುತೂಹಲ ಹಾಗೂ ನಿರೀಕ್ಷೆಗೆ ಕಾರಣವಾಗಿದ್ದು ʼಕೆಜಿಎಫ್‌ʼ ಚಿತ್ರ.

ಆ ಕತೆ ಇರಲಿ, ಕನ್ನಡದ ಸಿನಿಮಾ ಚೈತನ್ಯ ಕೊರೋನಾ ಕಾಲದಲ್ಲೂ ಕಿಂಚಿತ್ತು ಉಡುಗದಂತೆ ಮಾಡಿದ್ದು ಹೊಂಬಾಳೆ ಫಿಲಂಸ್‌ ಇನ್ನೊಂದು ಮಹತ್ಕಾರ್ಯ. ಯಾಕಂದ್ರೆ, ಕೊರೋನಾ ಅಂತ ಇಡೀ ಉದ್ಯಮ ಈಗಲೂ ಕೈ ಕಟ್ಟಿ ಕುಳಿತಿದೆ. ಅವಕಾಶ ಇದ್ದಾಗ್ಯೂ ಈಗ ಸಿನಿಮಾ ರಿಲೀಸ್‌ ಮಾಡೋದಿಕ್ಕೆ ಹಿಂದೆ ಮುಂದೆ ನೋಡಬೇಕಾದ ಸ್ಥಿತಿ ಇದೆ. ಇನ್ನು ದೊಡ್ಡ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಗಳೇ ಹೊಸ ಸಿನಿಮಾಗಳ ನಿರ್ಮಾಣಕ್ಕೆ ಮನಸ್ಸು ಮಾಡದೆ, ತಲೆ ಮೇಲೆ ಕೈ ಹೊತ್ತು ಕುಳಿತಿವೆ. ಕೊರೋನಾದ ಈ ಕಾಲದಲ್ಲಿ ದುಡ್ಡು ಹಾಕಿ ಸಿನಿಮಾ ಮಾಡಿದರೆ, ಮುಂದೆ ಹೇಗೋ ಎನೋ ಎನ್ನುವ ಆತಂಕ ಅವರಿಗೆ ಮನೆ ಮಾಡಿದೆ. ಆದರೆ ಹೊಂಬಾಳೆ ಫಿಲಂಸ್‌ ಮಾತ್ರ, ಕೊರೋನಾ ಕಾಲದಲ್ಲೂ ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಅನೌನ್ಸ್‌ ಮಾಡುತ್ತಾ, ಕನ್ನಡ ಚಿತ್ರೋದ್ಯಮಕ್ಕೆ ಹೊಸ ಚೈತನ್ಯ ತುಂಬಿದ್ದು ಮಾತ್ರವಲ್ಲ, ನೆರೆ ಚಿತ್ರೋದ್ಯಮದ ಮಂದಿ ಅಚ್ಚರಿಯಾಗುವಂತೆ ಮಾಡಿದೆ.

ಇದು ಸ್ವಂತಕ್ಕೋ, ಸ್ವಾರ್ಥಕ್ಕೋ ಅದು ಏನೇ ಆಗಿದ್ದರೂ, ಒಂದು ಸಿನಿಮಾ ನಿರ್ಮಾಣವಾಗುತ್ತಿದೆ ಅಂದರೆ ಅದರಿಂದ ಅದೆಷ್ಟೋ ಕಾರ್ಮಿಕರಿಗೆ ಕೆಲಸ ಸಿಗುತ್ತದೆ. ಹಾಗೆಯೇ ಉದ್ಯಮ ಕೂಡ ಜೀವಂತವಾಗುಳಿದಿರುತ್ತದೆ ಎನ್ನುವುದು ಅಷ್ಟೇ ಸತ್ಯ. ಒಂದಲ್ಲ ಎರಡಲ್ಲ ಇವತ್ತು ಆರು ಸಿನಿಮಾಗಳು ಹೊಂಬಾಳೆ ಫಿಲಂಸ್‌ ಮೂಲಕ ಪ್ರೊಡಕ್ಷನ್‌ ಹಂತದಲ್ಲಿವೆ. ಅಲ್ಲಿಗೆ ನೂರು, ಇನ್ನೂರು ಮಾತ್ರವಲ್ಲ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಸಿಗುತ್ತಿದೆ. ಹಾಗೆಯೇ ಕೊರೋನಾ ಎಂಬ ಸಂಕಷ್ಟದಿಂದ ಚಿತ್ರೋದ್ಯಮ ಹೊರ ಬರುವುದಕ್ಕೆ ಇದು ದೊಡ್ಡ ಸಹಕಾರಿ ಆಗಿದೆ. ಆ ಮಟ್ಟಿಗೆ ಹೊಂಬಾಳೆ ಫಿಲಂಸ್‌ ನ ಸಿನಿಮಾ ಮೇಲಿನ ಕಾಳಜಿಗೆ ಒಂದು ಸೆಲ್ಯೂಟ್‌.

ಯಾಕಂದ್ರೆ, ಇದು ಸಿನಿಮಾ ಮೇಲಿನ ಪ್ರೀತಿಗಾಗಿ ಮಾಡುತ್ತಿರುವ ಕೆಲಸ. ಅದೊಂದೇ ಕಾರಣಕ್ಕೆ ದುಡ್ಡಿಗಿಂತ ಹೆಚ್ಚಾಗಿ ಕಲೆಗೆ ಬೆಲೆ ಕೊಟ್ಟು ಹೊಂಬಾಳೆ ಫಿಲಸ್‌ ಕನ್ನಡದ ಸ್ಟಾರ್ ಗಳಿಗೆ, ಪ್ರತಿಭಾವಂತ ನಿರ್ದೇಶಕರನ್ನೆಲ್ಲ ತನ್ನ ಕುಟುಂಬಕ್ಕೆ ಸೇರಿಸಿಕೊಂಡು ಸಿನಿಮಾ ಕಟ್ಟುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಅದೇ ಹಾದಿಯಲ್ಲಿ ಅದೀಗ ಇನ್ನೊಂದು ಸಾಹಸ ಮಾಡಿದರೆ ಉದ್ಯಮವೂ ಉಳಿಯುತ್ತದೆ. ಆ ಕೆಲಸವೇ ಒಟಿಟಿ ಪ್ಲಾಟ್‌ ಫಾರ್ಮ್.‌ ಹಾಗಂತ ಕನ್ನಡ ಸಿನಿಮಾಗಳ ಮಾರುಕಟ್ಟೆಗೆ ಬೇರಾವುದೇ ಒಟಿಟಿ ಪ್ಲಾಟ್‌ ಫಾರ್ಮ್‌ ಇಲ್ಲಿಲ್ಲ ಅಂತಲ್ಲ. ಅಮೆಜಾನ್‌, ನೆಟ್‌ ಪ್ಲಿಕ್ಸ್‌ ಸೇರಿದಂತೆ ಸಾಕಷ್ಟು ಒಟಿಟಿ ಪ್ಲಾಟ್‌ ಫಾರ್ಮ್‌ ಇಲ್ಲಿವೆ. ಆದರೆ ಕನ್ನಡಕ್ಕೆ ಯೋಗ್ಯವಾದ ಒಂದು ಒಟಿಟಿ ಪ್ಲಾಟ್‌ ಫಾರ್ಮ್‌ ಇಲ್ಲ. ಇದ್ದವರು ಕೂಡ ಕನ್ನಡದ ನಿರ್ಮಾಪಕರಿಗೆ ಪೂರಕವಾಗಿಲ್ಲ. ಅದೊಂದು ಬೇಸರ ಈಗ ಇಡೀ ಚಿತ್ರೋದ್ಯಮವನ್ನು ಆವರಿಸಿಕೊಂಡಿದೆ.

ಅದು ದೂರವಾಗಬೇಕಾದರೆ ಕನ್ನಡದ ನಿರ್ಮಾಪಕರನ್ನು ಉಳಿಸುವಂತಹ, ಕಂಟೆಂಟ್‌ ಆಧರಿತ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುವಂತಹ ಒಂದು ಚೆಂದದ ಉದ್ಯಮ ಸ್ನೇಹಿ ಪ್ಲಾಟ್‌ ಫಾರ್ಮ್‌ ಕನ್ನಡಕ್ಕೆ ಬೇಕಿದೆ. ಆ ಕೆಲಸವನ್ನು ಹೊಂಬಾಳೆ ಫಿಲಂಸ್‌ಗೆ ಮಾಡುವ ಸಾಮಾರ್ಥ್ಯವಿದೆ.ತೆಲುಗಿನಲ್ಲೀಗ ನಟ ಅಲ್ಲು ಅರ್ಜುನ್‌ ಆಹಾ ಹೆಸರಲ್ಲೊಂದು ಒಟಿಟಿ ಪ್ಲಾಟ್‌ ಫಾರ್ಮ್‌ ಶುರು ಮಾಡಿದ್ದಾರೆ. ಅದು ತೆಲುಗು ಸಿನಿಮಾ, ವೆಬ್‌ ಸೀರಿಸ್‌ ಗೆ ಮಾತ್ರ ಸೀಮಿತವಾಗಿದೆ. ಅಂತಹದೇ ಒಂದು ಪ್ಲಾಟ್‌ ಫಾರ್ಮ್‌ ಅನ್ನು ಹೊಂಬಾಳೆ ಫಿಲಂಸ್‌ ಶುರು ಮಾಡಿದರೆ, ಕನ್ನಡದ ಅದೆಷ್ಟೋ ಸ್ಟಾರ್ ಗಳು, ನಿರ್ದೇಶಕರು, ತಂತ್ರಜ್ಜರಿಗೆ ಕೆಲಸ ಕೊಟ್ಟ ಹಾಗೆಯೇ, ಕನ್ನಡದ ಅದೆಷ್ಟೋ ನಿರ್ಮಾಪಕರನ್ನು ಉಳಿಸುವ ಕೆಲಸ ಆಗುತ್ತದೆ. ಹೊಂಬಾಳೆ ಫಿಲಂಸ್‌ ನಂತಹ ದೈತ್ಯ ಸಂಸ್ಥೆಗೆ ಇದೇನು ಕಷ್ಟದ ಕೆಲಸವೇನು ಅಲ್ಲ. ಮನಸ್ಸು ಮಾಡಬೇಕು ಅಷ್ಟೇ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಡಾರ್ಲಿಂಗ್‌ ಕೃಷ್ಣನ ಜೊತೆ ಜೊತೆಯಲಿ ಮೇಘಾ ಶೆಟ್ಟಿ; ಶಿವತೇಜಸ್ ನಿರ್ದೇಶನದ ಚಿತ್ರಕ್ಕೆ ನಾಯಕಿ


ಶಿವತೇಜಸ್‌ ನಿರ್ದೇಶನದ ಈ ಚಿತ್ರದಲ್ಲಿಇಬ್ಬರು ನಾಯಕಿಯರು. ಆ ಪೈಕಿ ಒಬ್ಬರು ಈಗ ಅಂತಿಮಗೊಂಡಿದ್ದಾರೆ. ಅದು ಬೇರಾರು ಅಲ್ಲ, “ಜೊತೆ ಜೊತೆಯಲಿ” ಖ್ಯಾತಿಯ ಮೇಘಾಶೆಟ್ಟಿ. ಈಗಾಗಲೇ ಗಣೇಶ್‌ ಅಭಿನಯದ “ತ್ರಿಬಲ್‌ ರೈಡಿಂಗ್‌” ಸಿನಿಮಾಗೆ ನಾಯಕಿಯಾಗಿಋುವ ಮೇಘಾಶೆಟ್ಟಿ, ಈಗ ಶಿವತೇಜಸ್‌ ನಿರ್ದೇಶನದ ಸಿನಿಮಾಗೆ ನಾಯಕಿ. ಇಲ್ಲಿ ಮೇಘಾಶೆಟ್ಟಿ ಪಾತ್ರವೇನು? ಎಂಬುದನ್ನು ಸಿನಿಮಾದಲ್ಲೇ ಕಾಣಬೇಕು

ನಿರ್ದೇಶಕ ಶಿವತೇಜಸ್‌ ಅವರು “ಡಾರ್ಲಿಂಗ್‌” ಕೃಷ್ಣ ಅವರಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆ ಚಿತ್ರಕ್ಕೆ ಸುಮಂತ್‌ ಕ್ರಾಂತಿ ನಿರ್ಮಾಣ ಮಾಡುತ್ತಿರುವುದು ಗೊತ್ತು. ಆ ಚಿತ್ರದ ಶೀರ್ಷಿಕೆ ಏನೆಂಬುದನ್ನು ನಿರ್ದೇಶಕರು ಗೌಪ್ಯವಾಗಿಟ್ಟಿದ್ದಾರೆ. ಸೆಪ್ಟೆಂಬರ್‌ 27ರಂದು ಸಂಜೆ 6.30ಕ್ಕೆ ಐಪಿಎಸ್‌ ಅಧಿಕಾರಿ ರವಿ ಡಿ.ಚನ್ನಣ್ಣವರ್ ಚಿತ್ರದ ಶೀರ್ಷಿಕೆ ಅನಾವರಣ‌ ಮಾಡಲಿದ್ದಾರೆ. ಈಗ ಹೊಸ ಸುದ್ದಿ ಅಂದರೆ, ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಆ ಪೈಕಿ ಒಬ್ಬರು ಅಂತಿಮಗೊಂಡಿದ್ದಾರೆ. ಅದು ಬೇರಾರು ಅಲ್ಲ, “ಜೊತೆ ಜೊತೆಯಲಿ” ಖ್ಯಾತಿಯ ಮೇಘಾಶೆಟ್ಟಿ. ಹೌದು, ಈಗಾಗಲೇ ಮೇಘಾಶೆಟ್ಟಿ ಅವರು ಗಣೇಶ್‌ ಅಭಿನಯದ “ತ್ರಿಬಲ್‌ ರೈಡಿಂಗ್‌” ಸಿನಿಮಾಗೆ ನಾಯಕಿಯಾಗಿದ್ದಾರೆ. ಈಗ ಶಿವತೇಜಸ್‌ ನಿರ್ದೇಶನದ ಸಿನಿಮಾಗೆ ನಾಯಕಿ. ಈ ಚಿತ್ರದಲ್ಲಿ ಮೇಘಾಶೆಟ್ಟಿ ಅವರ ಪಾತ್ರವೇನು? ಅದನ್ನು ಬಿಟ್ಟುಕೊಡದ ನಿರ್ದೇಶಕರು, ಸಿನಿಮಾದಲ್ಲೇ ಅದನ್ನು ಕಾಣಬೇಕು ಎನ್ನುತ್ತಿದ್ದಾರೆ.


ಶಿವತೇಜಸ್‌ ಹೆಣೆದಿರುವ ಬ್ಯೂಟಿಫುಲ್‌ ಲವ್‌ಸ್ಟೋರಿ ಕೇಳಿದ “ಡಾರ್ಲಿಂಗ್‌” ಕೃಷ್ಣ ಅದಕ್ಕೆ ಒಪ್ಪಿಕೊಂಡು ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಸ್ಕ್ರಿಪ್ಟ್ ಪೂಜೆ ನಡೆದಿದೆ. ಈ ಚಿತ್ರದಲ್ಲಿ ಹಲವು ವಿಶೇಷತೆಗಳೇ ತುಂಬಿವೆ. ಆ ವಿಶೇಷತೆಗಳಲ್ಲಿ ಮೊದಲ ಸ್ಪೆಷಲ್‌ ಅಂದರೆ, ನಿರ್ದೇಶಕ ಶಿವತೇಜಸ್‌ ಅವರನ್ನು ನಂಬಿ, ಅವರು ಮಾಡಿಕೊಂಡಿರುವ ಲವ್‌ಸ್ಟೋರಿಯನ್ನು ಒಪ್ಪಿ, ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿರೋದು ನಿರ್ಮಾಪಕ ಸುಮಂತ್‌ ಕ್ರಾಂತಿ ಇದು ಅವರ ರಶ್ಮಿ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ.‌

ಸುಮಂತ್‌ ಕ್ರಾಂತಿ ನಿರ್ದೇಶಕರು. ಈಗ ಶಿವತೇಜಸ್‌ ಕಥೆಗೆ ಹಣ ಹಾಕುವ ಮೂಲಕ ನಿರ್ಮಾಪಕರಾಗಿಯೂ ಗುರುತಿಸಿಕೊಂಡಾಗಿದೆ. ಈ ಹಿಂದೆಯೇ ಸುಮಂತ್‌ ಕ್ರಾಂತಿ “ಕಾಲಚಕ್ರ” ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.

ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇನ್ನು, “ಬರ್ಕ್ಲಿ” ಎಂಬ ಮತ್ತೊಂದು ಫೆಂಟಾಸ್ಟಿಕ್‌ ಸಿನಿಮಾ ಮಾಡಿದ್ದು, ಅದರ ಹಿಂದೆಯೇ ಅವರು ಪ್ರಜ್ವಲ್‌ ದೇವರಾಜ್‌ ಅವರಿಗೊಂದು ಸಿನಿಮಾ ಮಾಡಲೂ ಮುಂದಾಗಿದ್ದಾರೆ.

ಒಬ್ಬ ನಿರ್ದೇಶಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಕೊಟ್ಟಿರುವುದೇ ವಿಶೇಷ. ಶಿವತೇಜಸ್ ಈ ಬಾರಿ ಪುನಃ ಬ್ಯೂಟಿಫುಲ್‌ ಲವ್‌ಸ್ಟೋರಿ ಜೊತೆ ಬರುತ್ತಿದ್ದಾರೆ. ನವೆಂಬರ್‌ನಿಂದ ಸಿನಿಮಾ ಶುರುವಾಗಲಿದೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದಾರೆ. ಉಳಿದಂತೆ ಇನ್ನಿತರೆ ಕಲಾವಿದರ ಆಯ್ಕೆ ನಡೆಯುತ್ತಿದೆ.

Categories
ಸಿನಿ ಸುದ್ದಿ

ಹೊಸಬರ ಸುಕನ್ಯ ದ್ವೀಪ; ಫಸ್ಟ್‌ ಶೆಡ್ಯೂಲ್‌ ಮುಗಿಸಿದ ಚಿತ್ರತಂಡ

ಸುಕನ್ಯ ದ್ವೀಪ ಎನ್ನುವ ಟೈಟಲ್ ಕೇಳಿದೊಡನೆ ಇದೊಂದು ಸಸ್ಪೆನ್ಸ್ ಚಿತ್ರ ಇರಬದುದೇನೋ ಎಂಬ ಪ್ರಶ್ನೆ ಎದುರಾಗುತ್ತೆ. ಆದರೆ, ಇದು ಸಸ್ಪೆನ್ಸ್‌ ಸಿನಿಮಾವಂತೂ ಅಲ್ಲ. ಇದೊಂದು ಪಕ್ಕಾ ಫ್ಯಾಮಿಲಿ ಮತ್ತು ಲವ್‌ ಜಾನರ್‌ ಕಥೆ ಹೊಂದಿರುವ ಸಿನಿಮಾ. ಇದರೊಂದಿಗೆ ಹಾಸ್ಯದ ಲೇಪನವೂ ಇಲ್ಲಿದೆ. ಅಂದಹಾಗೆ, ಈ ಚಿತ್ರವನ್ನು ಎಂ.ಡಿ. ಅಫ್ಜಲ್ ನಿರ್ದೇಶನ ಮಾಡಿದ್ದಾರೆ. ಈಗಾಗಲೇ “ಮೊಬೈಲ್ ರಾಜʼ ಸಿನಿಮಾ ನಿರ್ದೇಶಿಸಿರುವ ಅಫ್ಜಲ್‌, ಆ ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ. ಅದರ ಬೆನ್ನಲ್ಲೇ, ಇದೀಗ “ಸುಕನ್ಯ ದ್ವೀಪ” ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ.


ನಿರ್ದೇಶಕ ಅಫ್ಜಲ್ ಅವರು, ಇದುವರೆಗೆ 18 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ನಿರ್ದೇಶನದ ‌ಎರಡನೇ ಸಿನಿಮಾ ಇದಾಗಿದ್ದು, ರಾಜ್‌ಪ್ರಭು ಅವರ ಮೂಲಕ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಮೂವರು ಅಕ್ಕ-ತಂಗಿಯರ ಸುತ್ತ ನಡೆಯುವ ಕಥಾಹಂದರ ಇಲ್ಲಿದೆ. ಇಲ್ಲಿ ವಿಶೇಷ ಪಾತ್ರದಲ್ಲಿ ರಾಜ್‌ಪ್ರಭು ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿ ಸಬ್ಜೆಕ್ಟ್ ನಲ್ಲಿ ಲವ್‌ಸ್ಟೋರಿ ಕೂಡ ಇದೆ. ಕಾಮಿಡಿಗೆ ಹೆಚ್ಚು ಒತ್ತು ನೀಡಿರುವುದು ಇನ್ನೊಂದು ವಿಶೇಷ. ಈಗಾಗಲೇ ಬೆಂಗಳೂರು ಸುತ್ತಮುತ್ತ ಒಂದು ಹಂತದ ಶೂಟಿಂಗ್ ಮುಗಿಸಿದ್ದು, ಮುಂದಿನ ಹಂತದಲ್ಲಿ ಹಾಸನ, ಕಳಸ, ಬೇಲೂರು ಹೀಗೆ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಿಸುವ ಯೋಜನೆ ಚಿತ್ರತಂಡದ್ದು. “ಸುಕನ್ಯ” ಎಂದರೆ ಹೆಣ್ಣು, ದ್ವೀಪ ಎಂದರೆ ಅವರಿರುವ ಮನೆಗೆ ಹೋಲಿಸಲಾಗಿದೆ. ಆ ಮೂವರು ಹೆಣ್ಣು ಮಕ್ಕಳು ಪ್ರೇಮದ ಬಲೆಗೆ ಬಿದ್ದಾಗ ಫ್ಯಾಮಿಲಿಯಿಂದ ಅಡ್ಡಿಯಾಗುತ್ತದೆ, ನಂತರ ಚಿತ್ರದಲ್ಲೊಂದು ಮೇಜರ್ ಟ್ವಿಸ್ಟ್ ಇದೆ. ಹಾಗಂತ, ಕೊಲೆ, ಸಸ್ಪೆನ್ಸ್ ಅಂಥದ್ದೇನೂ ಇಲ್ಲ. ಸ್ನೇಹಿತ ಅಲ್ವಿನ್ ಸೊಗಸಾದ ಡೈಲಾಗ್‌ಗಳನ್ನು ಬರೆದುಕೊಟ್ಟಿದ್ದಾರೆ ಎಂದು ಮಾಹಿತಿ ಕೊಡುತ್ತಾರೆ ನಿರ್ದೇಶಕ ಅಫ್ಜಲ್.

ಕಾರ್ಯಕಾರಿ ನಿರ್ಮಾಪಕ ರಾಜ್ ಪ್ರಭು ಅವರು, ತಮಿಳಿನ ಹಾಸ್ಯನಟ ದಿ. ವಿವೇಕ್ ಅವರಿಂದ ಸ್ಫೂರ್ತಿ ಪಡೆದು ಈ ಈ ಕಥೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ ನನ್ನ ಪಾತ್ರ ಸೆಕೆಂಡ್ ಹಾಫ್ ನಲ್ಲಿ ಬರುತ್ತೆ, ಅದರಲ್ಲಿ ಒಂದಷ್ಟು ಕುತೂಹಲವೂ ಇದೆ ಅನ್ನುತ್ತಾರೆ ಅವರು. ಸಂಗೀತ ನಿರ್ದೇಶಕ ಕೌಶಿಕ್ ಹರ್ಷ ಅವರಿಗೆ ರಾಜ್‌ಪ್ರಭು ಕಥೆ ಹೇಳಿದಾಗ ಇಷ್ಟವಾಯ್ತು, ಚಿತ್ರದ ೫ ಹಾಡುಗಳಿಗೆ ಸಂಗೀತ ನೀಡಲಾಗಿದೆ ಎಂಬ ಮಾಹಿತಿ ಕೊಡುತ್ತಾರೆ.
ನಿರ್ಮಾಪಕ ವೀರಬಾಹು, ರಾಜಪ್ರಭು ಒಂದೊಳ್ಳೆ ಕಥೆ ರೆಡಿ ಇದೆ. ಸಿನಿಮಾ ಮಾಡೋಣ ಅಂದರು. ಒನ್ ಲೈನ್ ಕಥೆ ಕೇಳಿಯೇ ನಾನು ನಿರ್ಮಾಣಕ್ಕೆ ಒಪ್ಪಿದೆ. ಮಚ್ಚು, ಲಾಂಗು ಇಲ್ಲದ ನೀಟ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಇದು ಎಂದರು.

ಚಿತ್ರದ ನಾಯಕರಲ್ಲೊಬ್ಬರಾದ ಸಚಿನ್ ಪುರೋಹಿತ್, “ಸ್ಟೂಡೆಂಟ್ʼ, “ಚರಂತಿ”, “ಗಡಿಯಾರ” ನಂತರ ಇದು ನನ್ನ ನಾಲ್ಕನೇ ಚಿತ್ರ, “ತಮಸ್‌”ನಲ್ಲಿ ನಾನು ರಾಜ್‌ಪ್ರಭು ಒಟ್ಟಿಗೇ ಕೆಲಸ ಮಾಡಿದ್ದೆವು. ನನ್ನದು ಲವರ್ ಬಾಯ್ ಥರದ ಪಾತ್ರ ಅಂದರು. ಮತ್ತೊಬ್ಬ ನಟ ರವಿ ಅನುಭವ ಹಂಚಿಕೊಂಡರು. ಛಾಯಾಗ್ರಾಹಕ ವಿಘ್ನೇಶ್ ನಾಗೇಂದ್ರ, ನಾಯಕಿಯರಾದ ಶ್ರೇಯಾ ವಸಂತ್, ಅಕ್ಷಿತ ನಾಗರಾಜ್, ಚುಂಬಿತ ಮಾತನಾಡಿದರು. ಇಲ್ಲಿ ಎಂ.ಡಿ. ಕೌಶಿಕ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಅಪಾರ್ಟ್‌ಮೆಂಟ್ಸ್‌ನಲ್ಲಿ ರೋಚʼಕಥೆʼ! ಸಸ್ಪೆನ್ಸ್-‌ಥ್ರಿಲ್ಲರ್‌ ಬಿಡುಗಡೆಗೆ ʼಅಮೃತʼ ಘಳಿಗೆ! ಬೆಂಗಳೂರಿಗರ ಕಥೆ-ವ್ಯಥೆಯ ಚಿತ್ರಣವಿದು…

ಗುರುರಾಜ ಕುಲಕರ್ಣಿ ನಿರ್ಮಾಣದಲ್ಲಿ ಆಸಕ್ತಿ ಹೊಂದಿ ಸದಭಿರುಚಿಯ ಸಿನಿಮಾ ಕೊಡಬೇಕು ಅನ್ನುವ ಉತ್ಸಾಹದಲ್ಲಿದ್ದವರು. ಈಗಾಗಲೇ “ಆಕ್ಸಿಡೆಂಟ್”‌ ಮತ್ತು “ಲಾಸ್ಟ್‌ ಬಸ್‌” ಸಸ್ಪೆನ್ಸ್‌ , ಥ್ರಿಲ್ಲರ್‌ ಕಥಾ ಹಂದರ ಚಿತ್ರಗಳಿಗೆ ನಿರ್ಮಾಣದಲ್ಲೂ ಸಾಥ್‌ ಕೊಟ್ಟವರು. ಈಗ ಗುರುರಾಜ ಕುಲಕರ್ಣಿ ಅವರು ಮೊದಲ ಬಾರಿಗೆ ನಿರ್ದೇಶನದ ಪಟ್ಟ ಅಲಂಕರಿಸಿದ್ದಾರೆ. ಅದರೊಂದಿಗೆ ಜಿ 9 ಕಮ್ಯುನಿಕೇಷನ್ಸ್‌ ಮೀಡಿಯಾ ಅಂಡ್‌ ಎಂಟರ್‌ಟೈನ್‌ಮೆಂಟ್ಸ್‌ ಬ್ಯಾನರ್‌ನಡಿ ನಿರ್ಮಾಣದ ಜವಾಬ್ದಾರಿಯೂ ಅವರದೇ ಅನ್ನೋದು ವಿಶೇಷ.

ಸಿನಿಮಾದ ಸೆಳೆತವೇ ಹಾಗೆ. ಇಲ್ಲಿ ಯಾರು ಯಾವಾಗ ಏನ್‌ ಬೇಕಾದರೂ ಆಗಬಹುದು. ಅಂಥದ್ದೊಂದು ಮ್ಯಾಜಿಕ್‌ ಈ ಬಣ್ಣದ ಲೋಕದಲ್ಲಿದೆ. ಹೌದು, ಇಲ್ಲಿ ನಿರ್ದೇಶಕರಾದವರು ಹೀರೋ ಆಗಿದ್ದಾರೆ. ಹೀರೋ ಆಗಿದ್ದವರು ನಿರ್ದೇಶಕರಾಗಿದ್ದಾರೆ. ನಿರ್ಮಾಪಕರು ಹೀರೋ ಆಗಿರುವ ಉದಾಹರಣೆ ಬೇಕಾದಷ್ಟಿದೆ. ಆದರೆ, ನಿರ್ಮಾಪಕರು ನಿರ್ದೇಶಕರಾದ ಉದಾಹರಣೆ ಬೆರಳೆಣಿಕೆಯಷ್ಟು ಮಾತ್ರ. ಆ ಸಾಲಿಗೆ ಗುರುರಾಜ ಕುಲಕರ್ಣಿ ಕೂಡ ಸೇರಿದ್ದಾರೆ. ಹೌದು, ಗುರುರಾಜ ಕುಲಕರ್ಣಿ ನಿರ್ಮಾಣದಲ್ಲಿ ಆಸಕ್ತಿ ಹೊಂದಿ ಸದಭಿರುಚಿಯ ಸಿನಿಮಾ ಕೊಡಬೇಕು ಅನ್ನುವ ಉತ್ಸಾಹದಲ್ಲಿದ್ದವರು. ಈಗಾಗಲೇ “ಆಕ್ಸಿಡೆಂಟ್”‌ ಮತ್ತು “ಲಾಸ್ಟ್‌ ಬಸ್‌” ಸಸ್ಪೆನ್ಸ್‌ , ಥ್ರಿಲ್ಲರ್‌ ಕಥಾ ಹಂದರ ಚಿತ್ರಗಳಿಗೆ ನಿರ್ಮಾಣದಲ್ಲೂ ಸಾಥ್‌ ಕೊಟ್ಟವರು. ಈಗ ಗುರುರಾಜ ಕುಲಕರ್ಣಿ ಅವರು ಮೊದಲ ಬಾರಿಗೆ ನಿರ್ದೇಶನದ ಪಟ್ಟ ಅಲಂಕರಿಸಿದ್ದಾರೆ. ಅದರೊಂದಿಗೆ ಜಿ೯ ಕಮ್ಯುನಿಕೇಷನ್ಸ್‌ ಮೀಡಿಯಾ ಅಂಡ್‌ ಎಂಟರ್‌ಟೈನ್‌ಮೆಂಟ್ಸ್‌ ಬ್ಯಾನರ್‌ನಡಿ ನಿರ್ಮಾಣದ ಜವಾಬ್ದಾರಿಯೂ ಅವರದೇ ಅನ್ನೋದು ವಿಶೇಷ. ಅಂದಹಾಗೆ, ಅವರ ರಚನೆಯ ಚೊಚ್ಚಲ ನಿರ್ದೇಶನದ ಸಿನಿಮಾ “ಅಮೃತ್‌ ಅಪಾರ್ಟ್‌ಮೆಂಟ್ಸ್‌”.

ಈ ಶೀರ್ಷಿಕೆ ಕೇಳಿದವರಿಗೆ ಎಲ್ಲೋ ಒಂದು ಕಡೆ ಕುತೂಹಲ ಮೂಡಿಸುವುದು ನಿಜ. ಹೌದು, ಈಗಾಗಲೇ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ ಕೆರಳಿಸಿದ್ದಲ್ಲದೆ, ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಇತ್ತೀಚೆಗೆ ಆಪ್ತರಿಗೊಂದು ಪ್ರದರ್ಶನ ಏರ್ಪಡಿಸಿದ್ದ ನಿರ್ದೇಶಕ ಗುರುರಾಜ ಕುಲಕರ್ಣಿ ಅವರ ಕೆಲಸವನ್ನು ಚಿತ್ರರಂಗದ ಹಲವು ತಾಂತ್ರಿಕ ವರ್ಗದವರು ಮೆಚ್ಚಿಕೊಂಡಿದ್ದಾರೆ. ಸಹಜವಾಗಿಯೇ ಚಿತ್ರತಂಡಕ್ಕೆ ಆ ಮೆಚ್ಚುಗೆ ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದಕ್ಕೂ ಮೊದಲು “ಅಮೃತ‌ ಅಪಾರ್ಟ್‌ಮೆಂಟ್ಸ್‌ʼ ಚಿತ್ರದ ಫಸ್ಟ್‌ ಲುಕ್‌ ಹಾಗೂ ಟೀಸರ್‌ ಹೊರ ಬಂದಿದ್ದು, ಚಿತ್ರದ ಬಗ್ಗೆ ತೀವ್ರ ರೋಚಕತೆ ಮೂಡಿಸುವ ಟೀಸರ್‌ ಸೋಷಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಈಗ ಸಿನಿಮಾ ಅಕ್ಟೋಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ. ಸದ್ಯ ನಿರ್ದೇಶಕರು ಬಿಡುಗಡೆಗೆ ಸಜ್ಜಗೊಳ್ಳುತ್ತಿದ್ದು, ಇಷ್ಟರಲ್ಲೇ ಬಿಡುಗಡೆಯ ದಿನವನ್ನು ಘೋಷಣೆ ಮಾಡಲಿದ್ದಾರೆ.

ಇನ್ನು, “ಅಮೃತ‌ ಅಪಾರ್ಟ್‌ ಮೆಂಟ್ಸ್‌ʼ ಚಿತ್ರವನ್ನು ಕನ್ನಡದ ಪ್ರೇಕ್ಷಕರ ಮುಂದೆ ತರಲು ರೆಡಿಯಾಗಿರುವ ನಿರ್ದೇಶಕ ಗುರುರಾಜ ಕುಲಕರ್ಷಣಿ, ಒಂದೊಳ್ಳೆಯ ಸಂದೇಶ ಕೊಡುವ ಹುಮ್ಮಸ್ಸಿನಲ್ಲಿದ್ದಾರೆ. ಅಂದಹಾಗೆ, ಇದೊಂದು ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನೊಳಗೊಂಡ ಚಿತ್ರ. ಬಾಲಾಜಿ ಮನೋಹರ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿ. ತಾರಕ್ ಪೊನ್ನಪ್ಪ ನಾಯಕರಾಗಿದ್ದಾರೆ.

ಊರ್ವಶಿ ಗೋರ್ವಧನ್‌ ಅವರಿಗೆ ನಾಯಕಿಯಾಗಿದ್ದಾರೆ. ಉಳಿದಂತೆ ನಟಿ ಮಾನಸ ಜೋಷಿ ಇಲ್ಲೊಂದು ವಿಶೇಷ ಪೊಲೀಸ್‌ ಅಧಿಕಾರಿ [ಪಾತ್ರ ಮಾಡಿದ್ದಾರೆ. ಸೀತಾ ಕೋಟೆ ಲಾಯರ್‌ ಆಗಿದ್ದಾರೆ. ಸಂಪತ್‌ ಕುಮಾರ್‌, ಮಾಲತೇಶ್, ಸಿತಾರಾ, ಜಗದೀಶ್ ಜಾಲಾ, ಅರುಣ ಮೂರ್ತಿ, ರಾಜು ನೀನಾಸಂ, ಶಂಕರ್ ಶೆಟ್ಟಿ ರಂಗಸ್ವಾಮಿ ಇತರರು ನಟಿಸಿದ್ದಾರೆ.

ಚಿತ್ರದ ಬಗ್ಗೆ ನಿರ್ದೇಶಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.”ಇದು ಬೆಂಗಳೂರಿನ ಕಥೆ. ಐಟಿಬಿಟಿ ಅನ್ನೋ ಈ ಜಮಾನಾದ ಕಥೆ. ಬೆಂಗಳೂರಿಗರು ಸದ್ಯ ಏನಾಗುತ್ತಿದ್ದಾರೆ ಎಂಬುದನ್ನು ಈ ಸಿನಿಮಾ ಮೂಲಕ ಸಸ್ಪೆನ್ಸ್ ಶೈಲಿಯಲ್ಲಿ ತೋರಿಸಲು ಹೊರಟಿದ್ದಾರೆ. ಒಡೆದು ಹೋದ ಮನಸ್ಸುಗಳನ್ನು ಒಂದು ಮಾಡುವ ಕೆಲಸ ಈ ಸಿನಿಮಾದಲ್ಲಿ ಆಗಿದೆ ಅನ್ನೋದು ನಿರ್ದೇಶಕರ ಮಾತು.


ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅರ್ಜುನ್ ಅಜಿತ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಕನ್ನಡದ ನೂರಾರು ಸಿನಿಮಾಗಳಿಗೆ ಕತ್ತರಿ ಹಾಕಿರುವ ಕೆಂಪರಾಜ್ ಅರಸ್ ಅವರ ಸಂಕಲನ ಇಲ್ಲಿದೆ. ಎಸ್.ಡಿ ಅರವಿಂದ್ 3 ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಕೆ.ಕಲ್ಯಾಣ್, ಡಾ. ಬಿ.ಆರ್ ಪೊಲೀಸ್ ಪಾಟೀಲ್ , ವಿ.ಮನೋಹರ್‌ ಅವರ ಸಾಹಿತ್ಯವಿದೆ.

ಚಿತ್ರಕ್ಕೆ ಮಹೇಶ್‌ ಎಸ್‌.ಪಿ.ಸಹ ನಿರ್ದೇಶಕರಾದರೆ, ಸುನೀಲ್‌ ವೈ.ಕೆ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಹರೀಶ ಮೂರ್ತಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಸುನೀಲ್‌ ಆರ್.‌ ಡಿ ಮತ್ತು ನರಸಿಂಹ ಕುಲಕರ್ಣಿ ಅವರು ಸಹ ನಿರ್ಮಾಪಕರಾಗಿದ್ದಾರೆ.
ತೇಜಸ್ ಹರಿದಾಸ್, ವಾಣಿ ಹರಿಕೃಷ್ಣ, ಅರವಿಂದ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

Categories
ಸಿನಿ ಸುದ್ದಿ

ಎರಡ್ಮೂರು ದಿನಗಳಲ್ಲಿ ಚಿತ್ರ ರಂಗಕ್ಕೆ ಗುಡ್‌ ನ್ಯೂಸ್‌! ಚಿತ್ರಮಂದಿರಗಳಲ್ಲಿ‌ನೂರರಷ್ಟು ಸೀಟು ಭರ್ತಿಗೆ ಮನವಿ

ಸಿನಿಮಾ‌ರಂಗ ಹೊಸ ಮನ್ವಂತರಕ್ಕೆ ತೆರೆದುಕೊಳ್ಳಲು ರೆಡಿಯಾಗುತ್ತಿದೆ.ಇಷ್ಟರಲ್ಲಿಯೇ ಚಿತ್ರಮಂದಿರಗಳಲ್ಲಿನ ನೂರರಷ್ಟು ಸೀಟು ಭರ್ತಿಗೆ ಸರ್ಕಾರ ಅವಕಾಶ‌ನೀಡುವ ಸಾದ್ಯತೆ ಇದೆ. ಹಾಗೊಂದು ಸುಳಿವು ಮಂಗಳವಾರ ಸರ್ಕಾರದಿಂದ ಸಿಕ್ಕಿದೆ. ಮಂಗಳವಾರ ಸಿನಿಮಾ ರಂಗವನ್ನು ಪ್ರತಿನಿಧಿಸಿ ನಿರ್ಮಾಪಕರಾದ ಸೂರಪ್ಪ ಬಾಬು, ಕೆ.ಪಿ.ಶ್ರೀಕಾಂತ್ ಹಾಗೂ ಜಯಣ್ಣ ಸೇರಿದಂತೆ ಒಂದು ನಿಯೋಗವು ಆರೋಗ್ಯ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿತ್ತು‌ . ಈ ಸಂದರ್ಭದಲ್ಲಿ ಚಿತ್ರರಂಗದ ಸದ್ಯದ ಸ್ಥಿತಿಗತಿ ಹಾಗೂ ಸದ್ಯಕ್ಕೆ ಇರುವ ವಾತಾವರಣ ವನ್ನು ವಿವರಿಸಿ, ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ‌ಮಾಡಿತು.ನಿರ್ಮಾಪಕರ ಜತೆಗಿನ ಮಾತುಕತೆ ನಂತರ ಸಚಿವ ಸುಧಾಕರ್ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ಕಾರಣಕ್ಕೆ ಸಿನಿಮಾ ರಂಗ ಆನುಭವಿಸಿದ ಕಷ್ಟದ ಅರಿವು ನಮಗೂ ಇದೆ. ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರ ಜೊತೆ ಮಾತನಾಡುತ್ತೇವೆ. ಬಹುತೇಕ ತಾಂತ್ರಿಕ ಸಮಿತಿ ಕೂಡ ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಇಷ್ಟರಲ್ಲಿಯೇ ಅವಕಾಶ ನೀಡುವ ಆಶಾಭಾವನೆ ನಮಗೂ ಇದೆ ಎಂದರು.


ಚಿತ್ರಮಂದಿರಗಳಲ್ಲಿ ಈಗಾಗಲೇ ಶೇ.೫೦ರಷ್ಟು ಮಾತ್ರ ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ. ಈಗಷ್ಟೇ ನಿರ್ಮಾಪಕರು ನನ್ನನ್ನ ಭೇಟಿ ಮಾಡಿದ್ದರು. ಅವರು ಚಿತ್ರಮಂದಿರಗಳಲ್ಲಿ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಕೊರೊನಾ ಕಾರಣಕ್ಕೆ ಸಿನಿಮಾ ರಂಗಕ್ಕಾದ ನಷ್ಟದ ಬಗ್ಗೆ ಅವರು ಹೇಳಿದ್ದಾರೆ. ಸಿನಿಮಾ ರಂಗದವರು ಸಾಕಷ್ಟು ನಷ್ಟ ಅನುಭವಿಸುತ್ತಿರುವುದರ ಬಗ್ಗೆ ನಮಗೂ ಅರಿವಿದೆ. ಇದನ್ನು ಮುಖ್ಯಮಂತ್ರಿಗಳ ಜತೆಗೂ ಮಾತನಾಡುತ್ತೇನೆ. ಆದಷ್ಟು ಬೇಗ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದರು.


ಕೊರೋನಾ ಈಗಲೂ ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಈಗಲೂ ಒಂದಷ್ಟು ಪಾಸಿಟಿವ್‌ ಕೇಸುಗಳು ಬರುತ್ತಿವೆ. ಈಗ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ತಜ್ಞರ ಸಲಹೆಯೇ ಅಂತಿಮ. ಈ ನಿಟ್ಟಿನಲ್ಲಿಯೇ ಈಗಾಗಲೇ ತಾಂತ್ರಿಕ ಪರಿಣಿತರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇವೆ. ಮುಂದಿನ ಎರಡು ಮೂರು ದಿನಗಳಲ್ಲಿ ತಾಂತ್ರಿಕ ತಜ್ಞರ ಜೊತೆ ಮತ್ತೆ ಮಾತನಾಡುತ್ತೇವೆ. ಆ ಸಮಿತಿ ಯಾವ ಅಭಿಪ್ರಾಯ ನೀಡಬಹುದು ಎನ್ನುವ ಬಗ್ಗೆ ನಮಗೂ ಕುತೂಹಲ ಇದೆ. ಸದ್ಯಕ್ಕೆ ಕೊರೋನಾ ಪಾಸಿಟಿವ್‌ ಸಂಖ್ಯೆ ಕಮ್ಮಿ ಆಗುತ್ತಿರುವುದರಿಂದ ಸಿನಿಮಾ ಮಂದಿರಗಳಿಗೆ ಶೇ.100 ರಷ್ಟು ಅವಕಾಶ ಸಿಗಬಹುದು ಎಂಬ ಆಶಾಭಾವನೆ ಇದೆ ಎಂದರು.


ಪೂರ್ಣಪ್ರಮಾಣದ ಸೀಟು ಭರ್ತಿಗೆ ಅವಕಾಶ ನೀಡುವುದಕ್ಕೂ ಮೊದಲು ಚರ್ಚೆ ನಡೆಸಬೇಕಿದೆ. ಬಳಿಕ ಸೋಂಕಿತರ ಸಂಖ್ಯೆ ನೋಡಿಕೊಂಡು ತೀರ್ಮಾನ ಮಾಡಲಿದ್ದೇವೆ. ಸೋಂಕು ಮತ್ತೆ ಹೆಚ್ಚಳವಾಗದಂತೆ ಕ್ರಮ ವಹಿಸಬೇಕಾಗುತ್ತದೆ. ಸಿಎಂ, ನಾನು ಹಾಗೂ ಎಲ್ಲರೂ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

Categories
ಸಿನಿ ಸುದ್ದಿ

ಚಡ್ಡಿ ದೋಸ್ತ್ ಚಿತ್ರ ನೋಡಿದವರಿಗೆ ಚಿನ್ನದ ನಾಣ್ಯ ಉಚಿತ! ಯಾರಿಗುಂಟು ಇಂಥಾ ಅದೃಷ್ಟ!!

ಕನ್ನಡದ ಸಿನಿಪ್ರೇಮಿಗಳಿಗೆ ಗೋಲ್ಡನ್ ಆಪರ್ಚುನಿಟಿ. “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರದ ನಿರ್ಮಾಪಕರಾದ ರೆಡ್ ಅಂಡ್ ವೈಟ್ ಸೆವೆನ್ ರಾಜ್ ರವರು, ಮಾಗಡಿ ರಸ್ತೆಯ ವೀರೇಶ್ ಚಿತ್ರ ಮಂದಿರದಲ್ಲಿ ಚಡ್ಡಿದೋಸ್ತ್ ಚಿತ್ರ ವೀಕ್ಷಿಸಿದವರಿಗೆ ಉಚಿತವಾಗಿ ಬಂಗಾರದ ನಾಣ್ಯ ವನ್ನು ಕೊಡುವುದಾಗಿ ಘೋಷಿಸಿದ್ದಾರೆ.

ಹೌದು, ಈ ಕೊಡುಗೆ ಪ್ರತಿ ಪ್ರದರ್ಶನಕ್ಕೂ ಅನ್ವಯಿಸಲಿದೆ. ಒಂದು ಪ್ರದರ್ಶನದಲ್ಲಿ ಎಷ್ಟು ಜನ ಸಿನಿಮಾ ನೋಡುತ್ತಾರೋ ಅವರಲ್ಲಿ ಒಬ್ಬರನ್ನು ಲಕ್ಕಿ ಡಿಪ್ ಮೂಲಕ ಆರಿಸಿ ಅವರಿಗೆ ಅರ್ಧ ಗ್ರಾಂ ಚಿನ್ನದ ನಾಣ್ಯವನ್ನು ಬಹುಮಾನವಾಗಿ ಕೊಡಲಿದ್ದಾರೆ.

ಸ್ವತಃ ನಿರ್ಮಾಪಕ ಸೆವೆನ್ ರಾಜ್ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಆಸ್ಕರ್ ಕೃಷ್ಣ ನಿರ್ದೇಶಿಸಿ, ಅವರೊಂದಿಗೆ ಲೋಕೇಂದ್ರ ಸೂರ್ಯ ನಾಯಕ ನಟರಾಗಿ ಅಭಿನಯಿಸಿರುವ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರವು ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಯಶಸ್ಸಿನ ಖುಷಿಯಲ್ಲಿ ನಿರ್ಮಾಪಕ ಸೆವೆನ್ ರಾಜ್ ರವರು ಈ ಕೊಡುಗೆ ನೀಡಲು ಮುಂದಾಗಿದ್ದಾರೆ.

ಈ ಕೊಡುಗೆಯು 21-09-2021 ರಿಂದ ವೀರೇಶ್ ಚಿತ್ರಮಂದಿರದಲ್ಲಿ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಮಾತ್ರ ಅನ್ವಯಿಸಲಿದೆ.

ಇನ್ನೇಕೆ ತಡ, ನಾಳೆಯಿಂದ ‘ಚಡ್ಡಿ ದೋಸ್ತ್’ ಸಿನಿಮಾ ನೋಡಿ, ಬಂಗಾರದ ನಾಣ್ಯ ಗೆಲ್ಲಿ.

Categories
ಸಿನಿ ಸುದ್ದಿ

ಹೊಂಬಾಳೆ ಫಿಲ್ಮ್ಸ್ ಹಬ್ಬದೂಟ; ಸೆಪ್ಟೆಂಬರ್ 22ಕ್ಕೆ ಸಿನಿ ಪ್ರೇಮಿಗಳಿಗೆ ಬಾಳೆದೆಲೆ ಬಾಡೂಟ !

ಗಂಧದಗುಡಿಯಲ್ಲಿ ಹೊಡೆದ ಹೊಂಬಾಳೆ ಗೊನೆಗೆ ಇವತ್ತು ಪಕ್ಕದ ರಾಜ್ಯದಲ್ಲಿ ಮಾತ್ರವಲ್ಲ ಹೊರದೇಶದಲ್ಲೂ ಬೇಡಿಕೆ‌ ಇದೆ. ಅದಕ್ಕೆ ಕಾರಣ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣಗೊಳ್ಳುವ ಚಿತ್ರಗಳು‌ ಸಿನಿಮಾ ಪ್ರೇಕ್ಷಕರಿಗೆ ಬಾಳೆದೆಲೆಯಲ್ಲಿ ಹಬ್ಬದೂಟ ಸವಿದಂತಿರುತ್ತದೆ. ಅಟ್ ದಿ‌ ಸೇಮ್ ಟೈಮ್ ಬಾಳೆದೆಲೆಯಲ್ಲಿಯೇ ಬಿರಿಯಾನಿ ಬಡಿದ್ಹಂಗೆ ಇರುತ್ತೆ. ಸದ್ಯ ಹಾಟ್ ಅಂಡ್ ಸ್ಮೈಸಿ ಸಮಾಚಾರ್ ಅಂದರೆ ಹೊಂಬಾಳೆ ಮುಖ್ಯಸ್ಥರು ಸೆಪ್ಟೆಂಬರ್ 22 ರಂದು ಹಬ್ಬದೂಟ ಬಡಿಸೋದಕ್ಕೆ ರೆಡಿಯಾಗಿರುವುದು.

ಹೌದು, ಪ್ರತಿಯೊಬ್ಬರಲ್ಲೂ ಹಸಿವಿದೆ, ಪ್ರತಿ ಅಗಳಿನಲ್ಲೂ ತಿನ್ನುವವರ ಹೆಸರಿದೆ.
‘ಅನ್ನದಾತೋ ಸುಖೀಭವ’ ಹೀಗಂತ ಬಾಳೆದೆಲೆಯಲ್ಲಿಯೇ ಬರೆದು ತಮ್ಮ ಹೊಂಬಾಳೆಯ 12ನೇ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ನ ಇದೇ ಸೆಪ್ಟೆಂಬರ್ 22 ರಂದು ರಿವೀಲ್ ಮಾಡುವುದಾಗಿ ಹೊಂಬಾಳೆ ಮುಖ್ಯಸ್ಥರು ಸೋಷಿಯಲ್ ಮೀಡಿಯಾ ದಲ್ಲಿ ಅನೌನ್ಸ್ ಮಾಡಿದ್ದಾರೆ.

ಹೊಂಬಾಳೆಯ 12ನೇ ಚಿತ್ರದ ಹೀರೋ ಯಾರು? ನಿರ್ದೇಶಕರು ಯಾರು? ಈ ಕೂತೂಹಲದ ಪ್ರಶ್ನೆಗೆ ಉತ್ತರ ಬಾಳೆದೆಲೆಯ ಪೋಸ್ಟರ್ ಉತ್ತರ ಕೊಟ್ಟಿಲ್ಲ. ಆದರೆ, ಕಳೆದೆರಡು ದಿನಗಳ ಹಿಂದೆ ರಾಜಕುಮಾರ ಸಾರಥಿ ಸಂತೋಷ್ ಆನಂದ್ ರಾಮ್ ‌ಅವರು, ಪವರ್ ಸ್ಟಾರ್ ಗೆ ಮತ್ತೆ ಆಕ್ಷನ್ ಕಟ್ ಹೇಳ್ತಿರುವುದಾಗಿ ತಿಳಿಸಿದ್ದರು. ಹ್ಯಾಟ್ರಿಕ್ ಬಾರಿಸೋ ಜುಗಲ್ ಬಂಧಿಗೆ ಹೊಂಬಾಳೆ ಸಂಸ್ಥೆ ದುಡ್ಡುಹಾಕುವ ಸುದ್ದಿ ಈ ಹಿಂದೆಯೇ ಹೊರಬಿದ್ದಿತ್ತು. ಹೀಗಾಗಿ, ಹೊಂಬಾಳೆ ಬ್ಯಾನರ್ ನ 12ನೇ ಚಿತ್ರ ಪುನೀತ್-ಸಂತೋಷ್ ಆನಂದ್ ರಾಮ್ ಕಾಂಬೋದ ಮೂರನೇ ಚಿತ್ರ ಆಗಿರ್ಬೋದು ಅಂತ ಪ್ರಿಡಿಕ್ಟ್ ಮಾಡ್ಬೋದು.

ಸದ್ಯಕ್ಕೆ ಹೊಂಬಾಳೆ‌ ಫಿಲ್ಮ್ಸ್ ಸಿನಿಮಾ ತೋಟದಲ್ಲಿ ಆರು ಚಿತ್ರಗಳು ಅರಳುವ ಹಂತದಲ್ಲಿವೆ. ಕೆಜಿಎಫ್ ಚಾಪ್ಟರ್ 2, ಸಲಾರ್, ಭಗೀರ, ದ್ವಿತ್ವ, ರಿಚರ್ಡ್ ಆಂಟನಿ, ಕಾಂತಾರ, ಹೀಗೆ ಬ್ಯಾಕ್ ಟು‌ ಬ್ಯಾಕ್ ಚಿತ್ರಗಳು ಅದ್ದೂರಿಯಾಗಿ ನಿರ್ಮಾಣಗೊಳ್ತಿವೆ.

ಕೆಜಿಎಫ್ ಚಾಪ್ಟರ್ ೨ ಹಾಗೂ ಸಲಾರ್ ಗಾಗಿ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಎದುರುನೋಡ್ತಿದೆ. ಈ ಮಧ್ಯೆಯೇ ಒಂದಾದ ಮೇಲೊಂದರಂತೆ ಹೊಂಬಾಳೆ ಸಂಸ್ಥೆ ಸಿನಿಮಾ ಅನೌನ್ಸ್ ಮಾಡ್ತಿದೆ. ಸೆ.22 ರಂದು 12 ನೇ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಹೊರಬರಲಿದೆ. ಹೇಗಿರಲಿದೆ ಟೈಟಲ್ ಕಮ್ ಫಸ್ಟ್ ಲುಕ್ ಜಸ್ಟ್ ವೇಯ್ಟ್ ಅಂಡ್ ವಾಚ್.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮೈಸೂರಲ್ಲೊಂದು ಮ್ಯೂಸಿಕಲ್‌ ಲವ್‌ಸ್ಟೋರಿ! ಅನಿವಾಸಿ ಕನ್ನಡಿಗನೊಬ್ಬನ ಲವ್‌ ಹಿಸ್ಟರಿ


ಮೈಸೂರು ಅಂದಾಕ್ಷಣ ನೆನಪಾಗೋದೇ ಅರಮನೆ, ದಸರಾ ವೈಭವ. ಈಗ ಮೈಸೂರು ಹೆಸರಿನ ಸಿನಿಮಾವೊಂದು ಸದ್ದಿಲ್ಲದೆಯೇ ಚಿತ್ರೀಕರಣಗೊಂಡಿದೆ. ಹೌದು, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಹೆಸರಿನ ಸಿನಿಮಾ ರೆಡಿಯಾಗಿದ್ದು, ಇನ್ನೇನು ಪ್ರೇಕ್ಷಕರ ಮುಂದೆ ಬರೋಕೆ ಸಜ್ಜಾಗುತ್ತಿದೆ. ಇದು ರಾಜ್ಯದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗನೊಬ್ಬನ ಲವ್‌ಸ್ಟೋರಿ ಹೊಂದಿದೆ.

ಸದ್ಯ ಚಿತ್ರೀಕರಣಗೊಂಡಿರುವ ಈ ಚಿತ್ರ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ, ಭುವನೇಶ್ವರ್ ಇತರೆ ಸ್ಥಳಗಳಲ್ಲಿ ಸುಮಾರು ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಕಿರುತೆರೆಯಲ್ಲಿ ಕೆಲಸ ಮಾಡಿ ಅನುಭವ ಇರುವ ವಾಸುದೇವ ರೆಡ್ಡಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಎಸ್. ಆರ್. ಕಂಬೈನ್ಸ್ ಬ್ಯಾನರ್‌ನಲ್ಲಿ ವಾಸುದೇವ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಜಗದೀಶ್ (ಜೆ.ಕೆ), ಕೆ.ಆರ್.ಅಪ್ಪಾಜಿ (ಕೊಡವತ್ತಿ) ಈ ಚಿತ್ರದ ಸಹ‌ ನಿರ್ಮಾಪಕರಾಗಿದ್ದಾರೆ.


ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಲಾವಿದನಾಗಿ ಗುರುತಿಸಿಕೊಂಡಿರುವ ಜ್ಯೂನಿಯರ್ ನರಸಿಂಹರಾಜು ಅವರ ಸಾರಥ್ಯದಲ್ಲಿ ಈ ಚಿತ್ರ ತಯಾರಾಗುತ್ತಿದೆ ಎಂಬುದು ವಿಶೇಷ.
ಸಂವಿತ್ ಈ ಚಿತ್ರದ ನಾಯಕರಾಗಿದ್ದಾರೆ. ಅವರು ತೆಲುಗು, ಬಂಗಾಳಿ, ಭೋಜಪುರಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಇವರಿಗೆ ಕನ್ನಡದ ಮೊದಲ ಚಿತ್ರವಿದು. ಇನ್ನು, ಪೂಜಾ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಜೂ.ನರಸಿಂಹರಾಜು, ಸತ್ಯಜಿತ್‌, ಕುರಿ ಪ್ರತಾಪ್, ಭಾಸ್ಕರ್ ಶೆಟ್ಟಿ, ಅಶೋಕ್ ಹೆಗ್ಡೆ, ಜೈ ಶ್ರೀ, ರವಿಕುಮಾರ್‌ ಇತರರು ಈ ಚಿತ್ರದಲ್ಲಿದ್ದಾರೆ. ರಘು ಶಾಸ್ತ್ರಿ, ರವಿಶಂಕರ್ ನಾಗ್, ಅನಿತಕೃಷ್ಣ ಬರೆದಿರುವ ಹಾಡುಗಳಿಗೆ ರಮಣಿ ಸುಂದರೇಶನ್, ಅನಿತಕೃಷ್ಣ, ವಿಜಯ್ ರಾಜ್ ಸಂಗೀತ ನೀಡಿದ್ದಾರೆ.
ಕೃಷ್ಣ ಮಳವಳ್ಳಿ ಸಂಭಾಷಣೆ ಬರೆದಿದ್ದಾರೆ. ಭಾಸ್ಕರ್ ವಿ ರೆಡ್ಡಿ ಛಾಯಾಗ್ರಹಣವಿದೆ. ಸಿದ್ದು ಭಗತ್ ಸಂಕಲನ ಮಾಡಿದರೆ, ಸ್ಟಾರ್ ನಾಗಿ, ಮೈಸೂರು ರಾಜು, ಸುಧಾಕರ್ ವಸಂತ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಶ್ರೀಕಾಂತ್ ಸಾಹಸವಿದೆ.

Categories
ಸಿನಿ ಸುದ್ದಿ

ಯಜಮಾನರ ಕೈ ಸೇರಿದ ಸೈಮಾ ಕಿರೀಟ !

ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಜಮಾನ ಚಿತ್ರಕ್ಕೆ ಸೈಮಾ ಪ್ರಶಸ್ತಿ ಸಿಕ್ಕಿದೆ. ಒಡೆಯನ ಅನುಪಸ್ಥಿತಿಯಲ್ಲಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ‌ಅವರು ಸ್ವೀಕರಿಸಿದ್ದರು. ಹೈದ್ರಾಬಾದ್ ನಿಂದ ಮರಳಿದ ಬೆನ್ನಲ್ಲೇ ಸೈಮಾ ಅವಾರ್ಡ್ ನ ಚಕ್ರವರ್ತಿಗೆ ತಲುಪಿಸಿದ್ದಾರೆ. ಖುಷಿ ಖುಷಿಯಾಗಿ ಕ್ಯಾಮೆರಾಗೆ ಒಂದು ಪೋಸ್ ಕೊಟ್ಟಿದ್ದಾರೆ. ಆ ಸಂತೋಷದ ಗಳಿಗೆಯ ಪಿಕ್ಚರ್ ಇದು.

ಅಂದ್ಹಾಗೇ,2021ರ ಸೈಮಾ ಅವಾರ್ಡ್ ಹೈದ್ರಾಬಾದ್ ಅಖಾಡದಲ್ಲಿ ಅದ್ದೂರಿಯಾಗಿ ತೆರೆಬಿದ್ದಿದೆ. ಯಾವತ್ತೂ ಕೂಡ ಸಿನಿಮಾ ಚಿತ್ರೋತ್ಸವದಲ್ಲಿ ಚಕ್ರವರ್ತಿ ಭಾಗಿಯಾಗಲ್ಲ. ಅದಕ್ಕೆ ಬಲವಾದ ಕಾರಣ ಇದೆ.

ಗುಂಪಲ್ಲಿ ಗೋವಿಂದ ಅಂತ ಎದ್ದುಬರುವ ಜಾಯಮಾನ ಗಂಧದಗುಡಿಯ ಮಂದಿಯ ಕಲಾವಿದರದ್ದಲ್ಲ‌ ಬಿಡಿ.ಯಾವತ್ತು ಕನ್ನಡ ಚಿತ್ರರಂಗದ ಸಿನಿಮಾ ಮಂದಿಗೆ ಫ್ರಂಟ್ ರೋ ನಲ್ಲಿ ಕೂರೋದಕ್ಕೆ ಅವಕಾಶ ಸಿಗುತ್ತೋ, ಅವತ್ತು ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗ್ತೇನೆ. ಅಲ್ಲಿವರೆಗೂ, ಯಾವುದೇ ಕಾರಣಕ್ಕೆ ಚಿತ್ರೋತ್ಸವಕ್ಕೆ ಬಂದು ಹಿಂದೆ ಎಲ್ಲೋ ಮೂಲೆಯಲ್ಲಿ ಕನ್ನಡದ ಕಲಾವಿದರೆಲ್ಲ ಕೂರೋದಕ್ಕೆ ನಂಗೆ ಇಷ್ಟವಿಲ್ಲ.

ಹೀಗಾಗಿ, ನಾನು ಬರುವುದಿಲ್ಲ ಎನ್ನುವ ತೀರ್ಮಾನ ಡಿಬಾಸ್ ದರ್ಶನ್ ರದ್ದು. ಅವರ ನಿರ್ಧಾರ ಸರಿಯಾಗಿದೆ ಬಿಡ್ರಿ. ಯಾವತ್ತು ಕನ್ನಡ ಚಿತ್ರರಂಗದ ಸಾಧಕರನ್ನ ಫಿಲ್ಮ್ ಫೆಸ್ಟಿವಲ್ ನಲ್ಲಿ ಮೊದಲ ಸಾಲಿನಲ್ಲಿ ಕೂರಿಸುವ ತೀರ್ಮಾನಕ್ಕೆ ಚಿತ್ರೋತ್ಸವದ ಮಂದಿ ಬರ್ತಾರೋ, ಅಂದೇ ಬಾಕ್ಸ್ ಆಫೀಸ್ ಸುಲ್ತಾನ್ ಹೋಗಲಿ ಅಲ್ಲವೇ.‌

error: Content is protected !!