ಅಪ್ಪು ಬದಲಾದ್ರಾ ? ಗೊತ್ತಿಲ್ಲ. ಸದ್ಯಕ್ಕೆ ಹಾಗೊಂದು ಮುನ್ಸೂಚನೆ ಸಿಕ್ಕಿದೆ. ನಿರ್ದೇಶಕ ಲೂಸಿಯಾ ಪವನ್ ಕುಮಾರ್ ಹಾಗೂ ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ಒಂದಾಗಿದ್ದಾರೆಂದ್ರೆ ಸಮಥಿಂಗ್ ಈಸ್ ಚೇಂಜ್ ಅಂತಲೇ ಹೌದು. ಅದೆಲ್ಲ ಹೇಗೆ ಎನ್ನುವುದಕ್ಕಿಂತ ನಟ ಪುನೀತ್ ರಾಜ್ ಕುಮಾರ್ ಅವರ ಪಾಲಿಗಂತೂ ಇದೊಂಥರ ಕಾಕತಾಳೀಯ. ಎಲ್ಲವೂ ಟೈಮ್ ಅಂತಾರಲ್ಲ ಹಾಗಿದೆ ಈ ಸಂದರ್ಭ. ʼಯುವರತ್ನʼ ರಿಲೀಸ್ ಆಗಿ ಹೆಚ್ಚು ಕಡಿಮೆ ಹದಿನೈದು ಆಗುತ್ತಾ ಬಂದಿವೆ. ಚಿತ್ರ ತಂಡ ಏನೇ ಹೇಳಿಕೊಂಡರೂ, ಪುನೀತ್ ಅವರ ಇಮೇಜ್ ತಕ್ಕಂತೆ ಈ ಚಿತ್ರಕ್ಕೆ ದೊಡ್ಡ ಸಕ್ಸಸ್ ಸಿಗಲೇ ಇಲ್ಲ. ಟಿವಿ ರೈಟ್ಸ್, ಡಿಜಿಟಲ್ ರೈಟ್ಸ್ ಅಂತೆನ್ನುವುದರ ಜತೆಗೆ ಚಿತ್ರಕ್ಕೆ ಹಾಕಿದ ಹಣ ವಾಪಾಸ್ ಬಂತು ಅಂತ ಚಿತ್ರತಂಡ ಹೇಳಿಕೊಂಡರೂ, ಸಿನಿಮಾ ನಿರೀಕ್ಷಿತ ಮಟ್ಟಕ್ಕೆ ಹೋಗಿಲ್ಲ ಅನ್ನೋದು ಅಷ್ಟೇ ಸತ್ಯ.
ಅಪ್ಪು ಸಿನಿಮಾ ಅಂದ್ರೆ ಬೇರೆನು ಹೇಳಬೇಕಿಲ್ಲ. ಒಂದೊಳ್ಳೆಯ ಕಥೆಯ ಜತೆಗೆ ಫೈಟ್ಸು, ಸಾಂಗ್ಸು, ಡಾನ್ಸು ಸೇರಿದಂತೆ ಮನರಂಜನೆಯ ಎಲ್ಲಾ ಅಂಶಗಳಿಗೆ ಮೋಸವೇ ಇರೋದಿಲ್ಲ. ಹಾಗಾಗಿಯೇ “ಯುವರತ್ನʼ ಮೇಲೂ ಫ್ಯಾನ್ಸಿಗೆ ದೊಡ್ಡ ನಿರೀಕ್ಷೆ ಇದ್ದೇ ಇತ್ತು. ಅದರ ಜತೆಗೆ ಹೊಂಬಾಳೆ ಫಿಲಂಸ್ ನಿರ್ಮಾಣ ಸಿನಿಮಾ. ಹಾಗೆಯೇ ʼರಾಜಕುಮಾರʼ ಚಿತ್ರದ ನಂತರ ಅಪ್ಪು ಹಾಗೂ ಸಂತೋಷ್ ಆನಂದ್ ರಾಮ್ ಇಲ್ಲಿ ಮತ್ತೆ ಒಂದಾಗಿದ್ದಾರೆ ಅಂತಲೂ ಫ್ಯಾನ್ಸ್ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದಿದ್ದರು. ಅದೆಲ್ಲ ಈಗ ಬಹುತೇಕ ಹುಸಿ ಆಯಿತು. ಕೊರೋನಾ ಸಂದರ್ಭವೋ, ಸನ್ನಿವೇಶಗಳೋ ಎನೇ ಅಂತಂದ್ರುಕೊಂಡ್ರು ಫಲಿತಾಂಶ ಕಣ್ಣೆದುರೇ ಇದೆ. “ಯುವರತ್ನ’ ರಿವೀವ್ಯೂ ಕುರಿತು ಸೋಷಲ್ ಮೀಡಿಯಾದಲ್ಲಿ ಈಗಲೂ ದೊಡ್ಡ ಚರ್ಚೆ ನಡೆಯುತ್ತಿದೆ. ಪಾಸಿಟಿವ್‌ಕ್ಕಿಂತ ನೆಗೆಟಿವ್ ಕಾಮೆಂಟ್ಸ್ ಹೆಚ್ಚಾಗಿ ಬಂದಿವೆ.
ಹೌದು, ಪುನೀತ್ ಅಭಿನಯದ ಸಿನಿಮಾಗಳ ಪೈಕಿ ಯಾವ ಸಿನಿಮಾಕ್ಕೂ ಹೀಗೊಂದು ರೆಸ್ಪಾನ್ಸ್ ಸಿಕ್ಕಿರಲಿಲ್ಲ. ದೊಡ್ಡ ನಿರೀಕ್ಷೆಯೇ ಇಲ್ಲಿ ಹುಸಿಯಾಗಿದೆ. ಫ್ಯಾನ್ಸ್ ಗಳೇ ಸಿನಿಮಾದ ಕಥೆ ಬಗ್ಗೆ ತಕರಾರು ಎತ್ತಿಬಿಟ್ಟರು. ಸೋಷಲ್ ಮೀಡಿಯಾದಲ್ಲಿ ಈ ಚಿತ್ರದ ರಿವಿವ್ಯೂ ಕುರಿತೇ ದೊಡ್ಡ ಚರ್ಚೆ ನಡೆದಿದೆ. ಪುನೀತ್ ಅವರ ಇಮೇಜ್‌ಗೆ ಇದು ದೊಡ್ಡ ಸೋಲು ಅಂತಲೂ ವಿಶ್ಲೇಷಣೆ ಮಾಡಲಾಯಿತು. ಹಾಗೆಯೇ ಅಪ್ಪು ಗೆ ಇದು ಬದಲಾಗುವ ಕಾಲ ಅಂತಲೂ ಸಿನಿಮಾ ಪ್ರೇಕ್ಷಕರು ಸೋಷಲ್ ಮೀಡಿಯಾದಲ್ಲಿ ಸಲಹೆ ಕೊಟ್ಟರು. ಆದ್ರೆ ಅಪ್ಪು ಅಂದ್ರೆ ಬರೀ ಹೀರೋ ಅಲ್ಲ, ಪವರ್‌ಫುಲ್ ಕಮರ್ಷಿಯಲ್ ಹೀರೋ. ನೋ ಡೌಟ್, ಪುನೀತ್ ಅಂದ್ರೆ ಕನ್ನಡದ ಪಕ್ಕಾ ಕಮರ್ಷಿಯಲ್ ಹೀರೋ. ಅವರ ಮೇಲೆ ಬಂಡವಾಳ ಹಾಕಿದವರೆಲ್ಲ ಲಾಸ್ ಅಂತ ಹೇಳಿದ್ದೇ ಇಲ್ಲ. ಅವರ ಸಿನಿಮಾ ಸೋತಿದ್ದೇ ಇಲ್ಲ. ಕಮರ್ಷಿಯಲ್, ಕಲೆಕ್ಷನ್ ಆಚೆಗೆ ಸಿನಿಮಾ ಪ್ರೇಕ್ಷಕರಿಗೂ ಅಪ್ಪು ಸಿನಿಮಾ ಬೇಸರ ಮೂಡಿಸಿದ್ದೇ ಇಲ್ಲ.
ಪಕ್ಕಾ ಪ್ರೇಮಕಥೆಗಳಲ್ಲಿ ಅಪ್ಪು ಹೀರೋ ಅಗಿ ಕಾಣಸಿಕೊಂಡರೂ, ನಾನಾ ಪಾತ್ರಗಳ ಮೂಲಕ ತೆರೆ ಮೇಲೆ ತಮ್ಮದೇ ಖದರ್ ತೋರಿಸಿ ಅಭಿಮಾನಿಗಳನ್ನು ಭರಪೂರ ರಂಜಿಸಿದ ನಟ ಅವರು. ಆದರೆ ಅವೆಲ್ಲವೂ ಕಮರ್ಷಿಯಲ್ ಚಿತ್ರಗಳೆನ್ನುವುದು ಹೌದು. ಹಾಗಾದ್ರೆ, ಅಪ್ಪು ಬರೀ ಕಮರ್ಷಿಯಲ್ ಹೀರೋನಾ ? ಇಲ್ಲ, ” ಮೈತ್ರಿʼ ಯಂತಹ ಒಂದು ಪ್ರಯೋಗಾತ್ಮಕ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಅದಕ್ಕೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಅಲ್ಲಿಂದ ಅಪ್ಪು ಹಾಗೆಲ್ಲ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ಥಾರೆನ್ನುವ ನಿರೀಕ್ಷೆಯ ನಡುವೆಯೇ, ಮತ್ತೆ ತಮ್ಮದೇ ಕಂಪರ್ಟ್ ಝೋನ್ ಗೆ ಬಂದು ನಿಂತಿದ್ದು ಹಳೇ ಮಾತು. ಅದೇ ದಾರಿಯಲ್ಲಿಯೇ ಬಂದಿದ್ದು ʼಯುವರತ್ನʼ ಚಿತ್ರ ಕೂಡ. ಅದೇನೋ ಗೊತ್ತಿಲ್ಲ. ಪುನೀತ್ ಈಗ ಬದಲಾಗಿದ್ದಾರೆ. ಲೂಸಿಯಾ ಪವನ್ ಕುಮಾರ್ ಜತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಪವನ್ ಜತೆಗೆ ಸಿನಿಮಾ ಮಾಡುತ್ತಾರಂದ್ರೆ ಅಪ್ಪು ಬದಲಾಗಲೇಬೇಕು. ಯಾಕೆ ಗೊತ್ತಾ ?
ಲೂಸಿಯಾ ಪವನ್ ಕುಮಾರ್ ಅಂದ್ರೆ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದು ಡಿಫೆರೆಂಟ್ ಕಾನ್ಸೆಫ್ಟ್ ಮೂಲಕ. ಎಲ್ಲರದ್ದೂ ಒಂದು ದಾರಿಯಾದರೆ ಅವರದ್ದೇ ಇನ್ನೊಂದು ದಾರಿ. ವಿಭಿನ್ನ ಕಥಾ ಹಂದರದ ಲೂಸಿಯಾ ಸಿನಿಮಾ ಮಾಡಿದಾಗ ಇವರಾರು ಪವನ್ ಕುಮಾರ್ ಅಂತಂದ್ರು ಸಿನಿಮಾ ಮಂದಿ. ಕೊನೆಗೆ ಈ ಸಿನಿಮಾ ದೊಡ್ಡದಾಗಿ ಸದ್ದು ಮಾಡಿದಾಗ ಪವನ್ ಕುಮಾರ್ ಪರಿಚಯವಾಗಿದ್ದು ಒಬ್ಬ ಟ್ಯಾಲೆಂಟೆಡ್ ನಿರ್ದೇಶಕರಾಗಿ. ಅಲ್ಲಿಂದ ಯೂಟರ್ನ್ ಬಂದಾಗಲೂ ಅದು ಮತ್ತೊಮ್ಮೆ ಸಾಬೀತು ಆಯಿತು. ಹೊಸ ಬಗೆಯ ಕಥೆ, ಡಿಫೆರೆಂಟ್ ನರೇಷನ್ ಮೂಲಕವೇ ಪವನ್ ಕುಮಾರ್ ನಿರ್ದೇಶನದಲ್ಲಿ ಮ್ಯಾಜಿಕ್ ಮಾಡಿದ್ರು. ಒಂದೇ ಮಾತಿನಲ್ಲಿ ಹೇಳೋದಾದ್ರೆ ಪವನ್ ಸಿನಿಮಾದಲ್ಲಿ ಕಥೆಯೇ ಸ್ಟಾರ್. ಹಾಗಾದ್ರೆ ಪವರ್ ಸ್ಟಾರ್ ಕಥೆ ಏನು ? ನಾವು ನಟ ಪುನೀತ್ ಈಗ ಬದಲಾಗಿದ್ದಾರೆ ಅಂತ ನಾವು ಹೇಳಿದ್ದೇ ಇದೇ ಕಾರಣಕ್ಕೆ.
“ಯುವರತ್ನʼ ಚಿತ್ರಕ್ಕೆ ಬಂದ ಮಿಕ್ಸ್ ರೆಸ್ಪಾನ್ಸ್ ಬೆನ್ನಲೇ ಹೀಗೊಂದು ನಿರ್ಧಾರ ಮಾಡಿಕೊಂಡಿರಲಿಕ್ಕೂ ಸಾಕು. ಈಗವರು ಕಥೆಗೆ ಹೆಚ್ಚು ಒತ್ತು ನೀಡುವುದಕ್ಕೆ ಮುಂದಾಗಿದ್ದಾರೆ. ತಾವು ಸ್ಟಾರ್ ಎನ್ನುವುದಕ್ಕಿಂತ ಕಥೆಯೇ ಸ್ಟಾರ್ ಆಗಿರಬೇಕೆನ್ನುವ ಆಧಾರದಲ್ಲಿ ಪವನ್ ಜತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರಂತೆ ಪವರ್ ಸ್ಟಾರ್. ಅದೇ ಕಾರಣಕ್ಕೆ ಕುತೂಹಲ ಹುಟ್ಟಿಸಿದೆ ಹೊಂಬಾಳೆ ಫಿಲಂಸ್ ನಿರ್ಮಾಣದ ೯ ನೇ ಚಿತ್ರ. ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಇದು ನಾಲ್ಕನೇ ಚಿತ್ರ. ನಿನ್ನಿಂದಲೇ, ರಾಜ ಕುಮಾರ, ಯುವರತ್ನ ಚಿತ್ರಗಳ ನಂತರವೀಗ ಈಗ ಪವನ್ ಕುಮಾರ್ ಕಾಂಬಿನೇಷನಲ್ಲಿ ನಾಲ್ಕನೇ ಚಿತ್ರ. ಯುಗಾದಿ ಹಬ್ಬಕ್ಕೆ ಇದು ಅಧಿಕೃತವಾಗಿ ಅನೌನ್ಸ್ ಆಗಿದೆ. ಪವರ್ ಸ್ಟಾರ್ ಜತೆಗೆ ಯಾರೆಲ್ಲ ಇರುತ್ತಾರೆ ? ಉಳಿದ ಟೆಕ್ನಿಷಿಯನ್ ಯಾರು? ಇದು ಶುರುವಾಗುವುದು ಯಾವಾಗ? ಅದೆಲ್ಲದರ ಮಾಹಿತಿ ಇಷ್ಟರಲ್ಲಿಯೇ ರಿವೀಲ್ ಆಗಲಿದೆಯಂತೆ. ಸದ್ಯಕ್ಕೆ ಪವರ್ ಸ್ಟಾರ್ ಹಾಗೂ ಪವನ್ ಕುಮಾರ್ ತೆರೆ ಮೇಲೆ ಹೇಗೆಲ್ಲ ಮ್ಯಾಜಿಕ್ ಮಾಡಬಹುದು ಅನ್ನೋದಷ್ಟೇ ಕುತೂಹಲ.