ಮೃತ್ಯುವನ್ನು ಗೆಲ್ಲಲ್ಲು ಹೊರಟವನೇ ಮೃತ್ಯುಂಜಯ- ʼಮಂತ್ರಂʼ ನಂತರ ಮತ್ತೊಂದು ಚಿತ್ರದೊಂದಿಗೆ ಸೌಂಡ್‌ ಮಾಡಿದ ಸಂಗಮೇಶ್‌ ಸಜ್ಜನ್‌ !

ಯುವ ನಿರ್ದೇಶಕ ಸಂಗಮೇಶ್‌ ಸಜ್ಜನ್‌ ಈಗ ಮತ್ತೊಂದು ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಇವರು ಮಂತ್ರಂ ಹೆಸರಿನ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ಹಾರರ್‌ ಜಾನರ್‌ ಕಥಾ ಹಂದರ ಈ ಚಿತ್ರ ಸಾಕಷ್ಟು ಸೌಂಡ್‌ ಮಾಡಿತ್ತು. ಆ ನಂತರವೀಗ ಮತ್ತೊಂದು ಹಾರರ್‌ ಕಥಾ ಹಂದರದ ಕಥೆಯುಳ್ಳ “ಮೃತ್ಯುಂಜಯ್ಯʼ ಹೆಸರಿನ ಚಿತ್ರವನ್ನು ನಿರ್ದೇಶಿಸಿ, ತೆರೆಗೆ ತರಲು ರೆಡಿ ಆಗಿದ್ದಾರೆ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಮೃತ್ಯುವನ್ನು ಗೆಲ್ಲುವವನ ಕಥೆ. ಅವನೇ ಮೃತ್ಯುಂಜಯ್ಯ. ಸಸ್ಪೆನ್ಸ್‌, ಥ್ರಿಲ್ಲರ್‌ ಅಂಶಗಳ ಜತೆಗೆ ಹಾರರ್‌ ಈ ಚಿತ್ರದ ಹೈಲೈಟ್ಸ್.‌ ಚಿತ್ರದ ಕಥಾ ನಾಯಕ ಕಷ್ಟದ ಸಂದರ್ಭವೊಂದನ್ನು ಎದುರಿಸಲಾಗದೆ, ಆತ್ಮಹತ್ಯೆಗೆ ಯತ್ನಿಸುತ್ತಾನೆ. ಆದರೆ ಒಂದು ಹಂತದಲ್ಲಿ ಅದು ತಪ್ಪು ಅಂತ ಅರಿವಾಗುತ್ತದೆ. ಅದು ಹೇಗೆ ಅನ್ನೋದನ್ನು ಈ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರಂತೆ ನಿರ್ದೇಶಕ ಸಂಗಮೇಶ್‌ ಸಜ್ಜನ್.

ಚಿತ್ರೀಕರಣ ಮುಗಿದಿದೆ. ಒಂದ್ರೀತಿ ದಾಖಲೆ ಎನ್ನುವ ಹಾಗೆ ಚಿತ್ರ ತಂಡ 192 ಗಂಟೆಗಳಲ್ಲಿ ಈ ಚಿತ್ರದ ಚಿತ್ರೀಕರಣ ಮುಗಿಸಿದೆ. ಲಾಕ್‌ ಡೌನ್‌ ದಿನಗಳಲ್ಲಿಯೇ ಚಿತ್ರ ತಂಡ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಚಿತ್ರೀಕರಣ ಮುಗಿಸಿದೆಯಂತೆ. ವಿಶೇಷ ಅಂದ್ರೆ ಚಿತ್ರದ ಕ್ಲೈಮ್ಯಾಕ್ಸ್‌ ಚಿತ್ರೀಕರಣಕ್ಕೆ 800 ಜನರನ್ನು ಬಳಸಿಕೊಳ್ಳಲಾಗಿತ್ತಂತೆ. ಆಗಲೂ ಸೂಕ್ತ ಕೊರೋನಾ ಮುನ್ನೆಚ್ಚರಿಕೆ ಕೈಗೊಂಡಿದ್ದಾಗಿ ನಿರ್ದೇಶಕ ಸಂಗಮೇಶ್‌ ಸಜ್ಜನ್‌ ಹೇಳುತ್ತಾರೆ.

ಚಿತ್ರೀಕರಣದ ಜತೆಗೆ ಚಿತ್ರ ತಂಡ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಕೂಡ ಮುಗಿಸಿದೆ. ರಿಲೀಸ್‌ಗೆ ಸಿದ್ಧತೆ ನಡೆಸಿದೆ. ಇದೀಗ ಟ್ರೇಲರ್‌ ಲಾಂಚ್‌ ಮೂಲಕ ಚಿತ್ರ ತಂಡ ಮಾಧ್ಯಮದ ಮುಂದೆ ಬಂದಿತ್ತು. ಅಲ್ಲಿ ಚಿತ್ರ ತಂಡ ಚಿತ್ರದ ವಿಶೇಷತೆ ಕುರಿತು ಮಾತನಾಡಿತು.
ಚಿತ್ರಕ್ಕೆ ಹೊಸ ಪ್ರತಿಭೆ ಹಿತೇಶ್‌ ನಾಯಕ ನಟ. ಶ್ರೇಯಾ ಶೆಟ್ಟಿ ನಾಯಕಿ. ಅವರೊಂದಿಗೆ ಸುಮನ್‌ ನಗರ್‌ ಕರ್‌, ಆಟೋ ರಾಜ, ದುರ್ಗಾ ಪ್ರಸಾದ್‌, ಚೇತನ್‌ ದುರ್ಗ, ಶಿವು ಮಜಾ ಭಾರತ, ಚೈತ್ರಾ, ಪವಿತ್ರಾ, ಬಾಬಣ್ಣ ಮತ್ತಿತರರು ಇದ್ದಾರೆ. ಬೆಳದಿಂಗಳ ಬಾಲೆ ಅಂತಲೇ ಜನಪ್ರಿಯತೆ ಪಡೆದಿರುವ ನಟಿ ಸುಮನ್‌ ನಗರ್ಕರ್‌ ಇಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.‌ ಇದೇ ಮೊದಲು ಅವರು ಸೈಕ್ಯಾಟ್ರಿಸ್ಟ್ ‌ ಆಗಿ ಕಾಣಿಸಿಕೊಂಡಿದ್ದಾರಂತೆ. ಚಿತ್ರತಂಡ ಮಾತಿಗಿಳಿದಾಗ ಮೊದಲು ಮಾತು ಶುರು ಮಾಡಿದ್ದೇ ನಟಿ ಸುಮನ್‌ ನಗರ್ಕರ್‌ ಅವರು. ” ಲಾಕ್‌ ಡೌನ್‌ ದಿನಗಳಲ್ಲಿ ಮೊಟ್ಟ ಮೊದಲ ಬಾರಿಗೆ ಸಿಕ್ಕ ಅವಕಾಶ ಇದು. ನಾನಿಲ್ಲಿ ಒಬ್ಬ ಸೈಕ್ಯಾಟ್ರಿಸ್ಟ್‌ .‌ ತುಂಬಾ ಪ್ರಾಮುಖ್ಯತೆ ಇರುವಂತಹ ಪಾತ್ರ. ಇಡೀ ತುಂಬಾ ಸಪೋರ್ಟ್‌ ಮಾಡಿದೆʼ ಎಂದರು.

ನಿರ್ದೇಶಕ ಸಜ್ಜನ್‌ ಮಾತನಾಡಿ, ಚಿತ್ರದ ಹಾರರ್‌ ಎಳೆಗಳ ಬಗ್ಗೆ ವಿವರಿಸಿದರು. ಹಾರರ್‌ ಎಲಿಮೆಂಟ್‌ ಹ್ಯಾಂಡಲ್‌ ಮಾಡೋದಂದ್ರೆ ತಮಗೆ ತುಂಬಾನೆ ಇಷ್ಟ ಅಂತಲೂ ಹೇಳಿಕೊಂಡರು. ಚಿತ್ರಕ್ಕೆ ಅವರೇ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ನಾಯಕ ಹಿತೇಶ್‌, ನಾಯಕಿ ಶ್ರೇಯಾ ಶೆಟ್ಟಿ, ಛಾಯಾಗ್ರಾಹಕ ವಡ್ಡೆ ದೇವೇಂದ್ರ ರೆಡ್ಡಿ, ಸಂಗೀತ ನಿರ್ದೇಶಕ ಆನಂದ್‌ ರಾಜ್‌ ಜತೆಗೆ ನಿರ್ಮಾಪಕ ಶೈಲಜಾ ಪ್ರಕಾಶ್‌ ಹಾಜರಿದ್ದರು.ನಟ ಯಶಸ್ಸು ಸೂರ್ಯ ಅಥಿತಿಯಾಗಿ ಬಂದಿದ್ದರು. ಹೊಸಬರ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಸದ್ಯಕ್ಕೆ ಕ್ಯೂಯಾರಿಟಿ ಹುಟ್ಟಿಸುವ ಟ್ರೇಲರ್‌ ಲಾಂಚ್‌ ಮಾಡಿರುವ ಚಿತ್ರ ತಂಡ ಇಷ್ಟರಲ್ಲಿಯೇ ಚಿತ್ರವನ್ನು ತೆರೆಗೆ ತರುವ ಉತ್ಸಾಹದಲ್ಲಿದೆ.

Related Posts

error: Content is protected !!