Categories
ಸಿನಿ ಸುದ್ದಿ

ಮಿನಿಸ್ಟರ್ ಮುನಿರತ್ನಅವರು ಮನಸ್ಸು ಮಾಡಿದರೆ, ಇದೇನು ಕಷ್ಟವೇನಲ್ಲ…

ಚಿತ್ರರಂಗ ಈಗ ಸಂಕಷ್ಟದಲ್ಲಿದೆ. ಸದ್ಯಕ್ಕೆ ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಚಿತ್ರಮಂದಿರಗಳು ಓಪನ್ ಆಗಲು ಅವಕಾಶ ಸಿಕ್ಕಿದೆ. ಹಾಗೆಯೇ ಚಿತ್ರೀಕರಣಕ್ಕೂ ಅನುಮತಿ ನೀಡಿದೆ. ಆದರೆ ಲಾಕ್ ಡೌನ್ ಕಾರಣದಿಂದ ಉದ್ಯಮ ಈಗ ಭಾರೀ ಆರ್ಥಿಕ ಹೊಡೆತಕ್ಕೆ ಸಿಲುಕಿದೆ. ಈ ಹೊತ್ತಲ್ಲಿ ಸರ್ಕಾರದಿಂದ ಒಂದಷ್ಟು ರಿಯಾಯಿತಿಗಳು ಸಿಕ್ಕರೆ ಉದ್ಯಮ ಚೇತರಿಕೆ ಕಾಣಬಹುದು ಅಂತಲೂ ಉದ್ಯಮದ ಜನರ ನಿರೀಕ್ಷೆ ಹೊಂದಿದ್ದಾರೆ. ಈ ಹೊತ್ತಲ್ಲಿಯೇ ನಿರ್ಮಾಪಕರೂ ಆದ ಬೆಂಗೂರಿನ ಆರ್.ಆರ್. ನಗರ ಶಾಸಕ ಮುನಿರತ್ನ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವರಾಗಿರೋದು ಚಿತ್ರೋದ್ಯಮದ ಪಾಲಿಗೆ ಹೊಸ ಭರವಸೆಯಂತೂ ಮೂಡಿಸಿದೆ.
ಹಾಗಂತ ಮುನಿರತ್ನ ಅವರೇನು ಚಿತ್ರೋದ್ಯಮಕ್ಕೆ ಸ್ವರ್ಗವನ್ನೇ ಸೃಷ್ಟಿಸಿ ಬಿಡುತ್ತಾರೆ ಅಂತಲ್ಲ. ಸರ್ಕಾರದ ಮಟ್ಟದಲ್ಲಿ ಉದ್ಯಮದ ಪರವಾಗಿ ಗಟ್ಟಿ ಧ್ವನಿಯಾಗುವ ನಂಬಿಕೆಯಂತೂ ಇದೆ. ಯಾಕಂದ್ರೆ ಚಿತ್ರೋದ್ಯಮದ ಸಂಕಷ್ಟಗಳೇನು ಅನ್ನೋದನ್ನು ಅವರು ಹತ್ತಿರದಿಂದ ನೋಡಿದ್ದಾರೆ. ತಾವೇ ನಿರ್ಮಾಪಕರಾಗಿ ಅದನ್ನು ಅನುಭವಿಸಿದ್ದಾರೆ. ಉದ್ಯಮವನ್ನೇ ನಂಬಿಕೊಂಡು ಎಷ್ಟೇಲ್ಲ ಜನ ಇಲ್ಲಿದ್ದಾರೆನ್ನುವುದು ಅವರಿಗೆ ಗೊತ್ತಿದೆ. ಹಾಗಾಗಿ ಅವರ ಬಳಿ ಉದ್ಯಮದ ಕಷ್ಟಗಳನ್ನ ಹೇಳಿಕೊಂಡರೆ ಕನಿಷ್ಠ ಸರ್ಕಾರದ ಕಿವಿಗಾದರೂ ತಲುಪಿಸಬಹುದು ಅಂತಲೂ ಇದೆ. ಅದೇ ಕಾರಣಕ್ಕೆ ಮುನಿರತ್ನ ಸಚಿವರಾಗಿರೋದು ಸಹಜವಾಗಿಯೇ ಚಿತ್ರೋದ್ಯಮದಲ್ಲಿ ಸಂತಸ ಮೂಡಿಸಿದೆ.

ಮುಂದೆ ಚಿತ್ರೋದ್ಯಮಕ್ಕೆ ಭವಿಷ್ಯ ಇದೀಯಾ? ಲಾಕ್ ಡೌನ್ ಸೃಷ್ಟಿಸಿದ ಅವಾಂತರದಿಂದ ಹೀಗೊಂದು ಆತಂಕ ಇದ್ದೇ ಇದೆ. ಯಾಕಂದ್ರೆ ಕೊರೋನಾ, ಕೊರೋನಾ ಅಂತ ಸಿನಿಮಾ ಚಟುವಟಿಕೆಗಳೆಲ್ಲಾ ಬಂದ್ ಆಗಿ, ಚಿತ್ರಮಂದಿರಗಳು ಬಾಗಿಲು ಮುಚ್ಚಿದರೆ, ಇದನ್ನ ನಂಬಿಕೊಂಡವರು ಮಣ್ಣು ತಿನ್ನಬೇಕಷ್ಟೇ. ಕೊರೋನಾ ಶುರುವಾದ ಈ ಒಂದೂವರೆ ವರ್ಷದ ಭೀಕರತೆ ಅಕ್ಷರಶ: ಸಿನಿಮಾ ಮಂದಿಗೆ ಮಣ್ಣು ತಿನ್ನಿಸಿದೆ. ಅದರಿಂದ ಒಂದಷ್ಟು ಚೇತರಿಕೆ ಕಾಣಬೇಕಾದರೆ, ಸರ್ಕಾರವು ಉದ್ಯಮದ ಕೈ ಹಿಡಿಯಲೇಬೇಕಿದೆ. ಇದು ಯಾವ ಥರ? ಈ ಪ್ರಶ್ನೆಗೆ ತಕ್ಷಣವೇ ಉತ್ತರ ಕಂಡುಕೊಳ್ಳುವುದು ಕಷ್ಟ. ಕಾಲ ಕಾಲಕ್ಕೆ ಸರ್ಕಾರ ಉದ್ಯಮವನ್ನು ಅನುದಾನದ ಮೂಲಕವೇ, ಆರ್ಥಿಕ ನೆರವಿನ ಮೂಲಕವೋ, ತೆರೆಗೆಯ ರಿಯಾಯಿತಿಯ ಮೂಲಕವೋ ಕೈಹಿಡಿದು ಪ್ರೋತ್ಸಾಹಿಸುತ್ತಾ ಬಂದರೆ, ಚಿತ್ರೋದ್ಯಮಕ್ಕೆ ಒಂದಷ್ಟು ಚೇತರಿಕೆ ಸಿಗುವುದು ಖಚಿತ. ಆ ಕೆಲಸಕ್ಕೆ ಮುನಿರತ್ನ ಅವರು ಸರ್ಕಾರ ಮತ್ತು ಉದ್ಯಮದ ಗಟ್ಟಿ ಸೇತುವೆಯಾದರೆ ಸಾಕು ಎನ್ನುವ ಮಾತನ್ನು ಉದ್ಯಮದ ಮಂದಿ ಹೇಳುತ್ತಿದ್ದಾರೆ.

ಆರಂಭದಲ್ಲೀಗ ಚಿತ್ರಮಂದಿರಗಳ ನೂರರಷ್ಟು ಸೀಟಉ ಭರ್ತಿ ಸವಾಲಿದೆ. ಕೊರೋನಾ ಕಾರಣಕ್ಕೆ ಸರ್ಕಾರ ಈಗ ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಮಾತ್ರ ಚಿತ್ರ ಪ್ರದರ್ಶನ ನಡೆಸಲು ಅನುಮತಿ ನೀಡಿದೆ. ಆದರೆ ಚಿತ್ರಮಂದಿರ ಪೂರ್ಣ ಪ್ರಮಾಣದಲ್ಲಿ ಸೀಟು ಭರ್ತಿಗೆ ಅವಕಾಶ ಸಿಗುವ ತನಕ ಸಿನಿಮಾ ರಂಗಕ್ಕೆ ಭವಿಷ್ಯ ಇಲ್ಲ ಅನ್ನೋದು ಸಿನಿಮಾ ರಂಗದ ಆತಂಕ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸರಿಯಾಗಿ ಮಾತನಾಡಿ, ಸಿನಿಮಾ ಉದ್ಯಮದ ವಾಸ್ತವವನ್ನು ಸರ್ಕಾರಕ್ಕೆ ಮನವರಿ ಕೆ ಮಾಡಿಕೊಡಬೇಕಿದೆ. ಮುನಿರತ್ನ ಅವರಿಂದ ಇದು ಸಾಧ್ಯವಾಗುತ್ತೆ. ಆ ನಿಟ್ಟಿನಲ್ಲಿ ಅವರನ್ನು ಉದ್ಯಮ ಬಳಸಿಕೊಳ್ಳಬೇಕು ಅಂತಲೂ ಹೇಳುತ್ತಿ ವೆ ಮೂಲಗಳು. ಉಳಿದಂತೆ ಸಿನಿಮಾ ಉದ್ಯಮ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆ ಬಗ್ಗೆ ಮುಂದೆ ಆಲೋಚಿ ಸಬಹುದು ಅನ್ನುತ್ತಾರೆ ಉದ್ಯಮದ ಹಿರಿಯ ನಿರ್ಮಾ ಪಕರೊಬ್ಬರು.

Categories
ಸಿನಿ ಸುದ್ದಿ

ಚಿತ್ರೋದ್ಯಮಕ್ಕೂ ಒಂದು ಚಾನ್ಸ್‌ ಸಿಗ್ತು- ನಿರ್ಮಾಪಕ ಮುನಿರತ್ನಗೆ ಕೊನೆಗೂ ಸಿಕ್ಕಿತು ಮಂತ್ರಿ ಪಟ್ಟ !

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸಚಿವ ಸಂಪುಟ ರಚನೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಬುಧವಾರ ನೂತನ ಸಚಿವರಾಗಿ ೨೯ ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಲ್ಲಿ ಕನ್ನಡ ಚಿತ್ರರಂಗಕ್ಕೂ ಒಂದು ಮಂತ್ರಿ ಸ್ಥಾನ ಸಿಕ್ಕಿದೆ. ಅಂದ್ರೆ ಸಿನಿಮಾ ನಿರ್ಮಾಪಕರೂ ಆದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರಿಗೆ ಕೊನೆಗೂ ಮಂತ್ರಿ ಸ್ಥಾನ ಸಿಕ್ಕಿದೆ. ಸಚಿವ ಸ್ಥಾನದ ಕಾರಣಕ್ಕಾಗಿಯೇ ಅವರು ಈ ಹಿಂದೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರಾರೂ, ಆ ಸಂದರ್ಭದಲ್ಲಿ ಅವರಿಗೆ ಮಂತ್ರಿ ಸ್ಥಾನ ಕೈ ತಪ್ಪಿ ಹೊಗಿತ್ತು. ಈಗ ಮಂತ್ರಿ ಆಗುವ ಅದೃಷ್ಟ ಅವರಿಗೆ ಸಿಕ್ಕಿದೆ.

ಬುಧವಾರ ಮಧ್ಯಾಹ್ನ ಬೆಂಗಳೂರಿನ ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುನಿರತ್ಮ ಅವರು ನೂತನ ಸಚಿವರಾಗಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಕಾರಣಿ ಆಗಿದ್ದರೂ ನಿರ್ಮಾಪಕರಾಗಿ ಹಲವು ವರ್ಷಗಳಿಂದ ಚಿತ್ರೋದ್ಯಮ ಜತೆಗೆ ಗುರುತಿಸಿಕೊಡಿರುವ ಅವರು, ʼಆಂಟಿ ಪ್ರೀತ್ಸೆʼ,ʼ ರಕ್ತ ಕಣ್ಣೀರುʼ, ʼಅನಾಥರುʼ, ʼಕಠಾರಿ ವೀರ ಸುರಸುಂದರಾಂಗಿʼ ಹಾಗೂ ʼಮುನಿರತ್ಮ ಕುರುಕ್ಷೇತ್ರʼಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಅವರದು. ಅದೆಲ್ಲಕ್ಕಿಂತ ಮುಖ್ಯವಾಗಿ ಸ್ಟಾರ್‌ ಸಿನಿಮಾಗಳನ್ನೇ ನಿರ್ಮಾಣ ಮಾಡಿದ್ದು ಮಾತ್ರವಲ್ಲ, ಬಿಗ್‌ ಬಜೆಟ್‌ ಸಿನಿಮಾ ಮಾಡಿದ ಖ್ಯಾತಿಯೂ ಅವರಿಗಿದೆ.

ಅದರ ಜತೆಗೆ ಹಿಂದೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರು ಆಗಿದ್ದರು. ಹಾಗೆಯೇ ಕನ್ನಡದ ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್‌ ಅವರ ಸಂಬಂಧಿಯೂ ಹೌದು. ಈ ಮೂಲಕ ನಿರ್ಮಾಪಕರು ಆದ ಶಾಸಕ ಮುನಿರತ್ನ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಇಡೀ ಚಿತ್ರರಂಗವೇ ಖುಷಿ ಪಟ್ಟಿದೆ. ಹಾಗಂತ ಸಿನಿಮಾದಿಂದ ಸಚಿವರಾಗುತ್ತಿರುವವರಲ್ಲಿ ಇವರೇ ಮೊದಲಿಗರಲ್ಲ. ಸಿನಿಮಾಕ್ಕೂ ರಾಜಕಾರಣಕ್ಕೂ ಇರುವ ನಂಟಿನ ಇತಿಹಾಸ ದೊಡ್ಡದ್ದು. ರಾಮಕೃಷ್ಣ ಹೆಗಡೆ ಮಂತ್ರಿ ಮಂಡಲದಲ್ಲಿ ಹಿರಿಯ ನಟ ಅನಂತ್‌ ನಾಗ್‌ ಮಂತ್ರಿಯಾಗಿದ್ದು. ಆಮೇಲೆ ಜೆ.ಎಚ್.‌ ಪಟೇಲ್‌ ಕಾಲಕ್ಕೂ ಆವರು ಮಂತ್ರಿ ಆಗಿದ್ದರು.

ಮುಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅವಧಿಯಲ್ಲಿ ಹಿರಿಯ ನಟ ಅಂಬರೀಷ್‌ ವಸತಿ ಸಚಿವರಾಗಿದ್ದರು. ಹಾಗೆಯೇ ಜಯಮಾಲಾ, ಉಮಾಶ್ರೀ ಕೂಡ ಸಚಿವರಾದರು. ಸದ್ಯಕ್ಕೀಗ ಸಿನಿಮಾ ರಂಗದಿಂದ ಬಿಜೆಪಿ ಸರ್ಕಾರದ ಅವದಿಯಲ್ಲಿ ಹಿರಿಯ ನಟಿ ತಾರಾ, ಶ್ರುತಿ ನಿಗಮ ಮಂಡಳಿ ಅಧ್ಯಕ್ಷರಾಗಿದ್ದರೆ, ನಿರ್ಮಾಪಕ, ನಟ ಹಾಗೂ ನಿರ್ದೇಶಕ ಸುನೀಲ್‌ ಪುರಾಣಿಕ್‌ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದಾರೆ. ಈ ನಡುವೆ ರಾಜಕಾರಣಿಯೂ ಆಗಿರುವ ಬಿ.ಸಿ. ಪಾಟೀಲ್‌ ಅವರಿಗೂ ಸಿನಿಮಾ ನಂಟಿದೆ. ನಟರಾಗಿಯೇ ಅವರು ದೊಡ್ಡ ಯಶಸ್ಸು ಕಂಡವರು. ಆಮೂಲಕವೇ ರಾಜಕೀಯಕ್ಕೂ ಹೋದವರು. ಈಗ ಅವರು ಕೂಡ ಎರಡನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಸಿನಿಮಾ ರಂಗ ಇವರಿಗೆ ಶುಭಾಶಯ ಕೋರಿದೆ.

Categories
ಸಿನಿ ಸುದ್ದಿ

ಪವರ್ ಪಕ್ಕದಲ್ಲಿ ನಿಲ್ಲೋಕೆ ತಮನ್ನಾ ರೆಡಿಯಿದ್ದಾರೆ; ನೋಡು ಯೋಚನೆ ಮಾಡು ತ್ರಿಷಾ !?

ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಪಕ್ಕದಲ್ಲಿ ನಿಲ್ಲಬೇಕು ಅಂತ ಕಾಯ್ತಿರುವವರು ಒಬ್ಬರಾ..ಇಬ್ಬರಾ…ಲೆಕ್ಕಾನೇ ಇಲ್ಲ ಬುಡು ಗುರು. ಅಪ್ಪು ಜೊತೆ ಆಕ್ಟ್ ಮಾಡೋದಕ್ಕೆ ಒಂದೇ ಒಂದು ಚಾನ್ಸ್ ಸಿಕ್ಕರೆ ಸಾಕು ಅಂತ ಅದೆಷ್ಟೋ ಹೀರೋಯಿನ್ಸ್ ಮನೆದೇವರಿಗೆ ಹರಕೆ ಬೇರೆ ಕಟ್ಟಿಕೊಂಡಿದ್ದಾರೆ. ಅಣ್ಣಾಬಾಂಡ್‌ಗೆ ಜೊತೆಯಾಗ್ಬೇಕು ಮುತ್ತಿನ ತೇರಲ್ಲಿ ದೊಡ್ಮನೆ ಹುಡುಗನ ಜೊತೆ ಮೆರವಣಿಗೆ ಹೊರಡಬೇಕು ಅಂತ ಕನಸು ಕಟ್ಟಿಕೊಂಡಿದ್ದಾರೆ. ಇಂತಹದ್ದೊಂದು ಕನಸಿನ ಸಾಕಾರಕ್ಕಾಗಿ ಜಿಮ್-ವರ್ಕೌಟ್-ಡಯಟ್ ಅಂತ ಫಿಗರ್‌ನ ಮೆಂಟೇನ್ ಮಾಡೋದಲ್ಲದೇ ಆಕ್ಟಿಂಗ್‌ನಲ್ಲಿ ಪರ್ಫೆಕ್ಟ್ ಆಗೋದಕ್ಕೆ ಬೆವರು ಸುರಿಸುತ್ತಿದ್ದಾರೆ. ಅಸಲಿಯತ್ತು ಹೀಗಿರುವಾಗ, ಯುವರತ್ನನ ಹವಾ ಹೃದಯ ಗೆದ್ದಿರುವಾಗ ಸೌತ್ ಸುಂದರಿ ನೋ ಅನ್ನೋದಕ್ಕೆ ಚಾನ್ಸ್ ಇದೆಯಾ ಸದ್ಯಕ್ಕಂತೂ ಗೊತ್ತಿಲ್ಲ.

ಕಳೆದ ಎರಡು ದಿನಗಳಿಂದ ಬಜಾರ್‌ನಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿರುವ `ಪವರ್’ ಹೀರೋಯಿನ್ ಮ್ಯಾಟರ್ ನಿಮ್ಮೆಲ್ಲರಿಗೂ ಗೊತ್ತಾಗಿರುತ್ತೆ. ಪವರ್ ಕಾಂಬಿನೇಷನ್ ಮತ್ತೆ ಒಂದಾಗುವ ಸುದ್ದಿ ಕೇಳಿ ಅಪ್ಪು ಫ್ಯಾನ್ಸ್ ಮಾತ್ರವಲ್ಲ ಗಾಂಧಿನಗರದ ಮಂದಿ ಕೂಡ ಥ್ರಿಲ್ಲಾಗಿದ್ದಾರೆ. ಪವರ್ ಜೋಡಿಯನ್ನು ಮತ್ತೆ ಕಣ್ತುಂಬಿಕೊಳ್ಳೋದಕ್ಕೆ ಕಾತುರರಾಗಿದ್ದಾರೆ. ಆದರೆ, ದ್ವಿತ್ವ ಚಿತ್ರತಂಡ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಸೌತ್ ಸುಂದರಿ ಹೇಳಿದ್ದೇನು ಎಂಬದನ್ನು ಇನ್ನೂ ರಿವೀಲ್ ಮಾಡಿಲ್ಲ.

ಹೌದು, ದ್ವಿತ್ವ ಚಿತ್ರದ ನಾಯಕಿಯ ಬಗ್ಗೆ ಬಜಾರ್‌ನಲ್ಲಿ ಸಾಕಷ್ಟು ಚರ್ಚೆಗಳಾಗ್ತಿದೆ. ಸೌತ್ ಸುಂದರಿ ತ್ರಿಷಾ ಅಪ್ಪುಗೆ ಜೋಡಿಯಾಗಲಿದ್ದಾರೆ ಎನ್ನುವ ಸುದ್ದಿ ಟೂಪೀಸ್ ಧರಿಸಿಕೊಂಡು
ಸ್ಯಾಂಡಲ್‌ವುಡ್ ಅಂಗಳದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. `ಪವರ್’ ಚಿತ್ರದಲ್ಲಿ ಅಣ್ಣಾಬಾಂಡ್‌ಗೆ ಜತೆಯಾಗಿ ಕಿಕ್ಕೇರಿಸಿದ್ದ ತ್ರಿಷಾ ಮತ್ತೆ ದ್ವಿತ್ವ ಚಿತ್ರದಲ್ಲಿ ಅಪ್ಪು ಪಕ್ಕದಲ್ಲಿ ನಿಲ್ತಾರೆನ್ನುವ ಸುದ್ದಿ ಹಬ್ಬಿದೆ. ಅಂದ್ಹಾಗೇ, ತ್ರಿಷಾ ಜೊತೆ ಸಿಟ್ಟಿಂಗ್ ಕೂತು ಬೈಟು ಕಾಫಿ ಕುಡಿಯುತ್ತಾ ನಿರ್ದೇಶಕ ಪವನ್ ಕುಮಾರ್ ಕಥೆ ಹೇಳಿದ್ದಾರಂತೆ. ದ್ವಿತ್ವ ಕಥೆ ಕೇಳಿ ಥ್ರಿಲ್ಲಾಗಿರುವ ತ್ರಿಷಾ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರಂತೆ.

ಹಾಗಾದ್ರೆ ತ್ರಿಷಾ ಏನಂದ್ರು? ಓಕೆ ಅಂದರಂತಾ? ಪವರ್ ಬಗಲಲ್ಲಿ ನಿಲ್ತಾರಂತಾ? ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರವಿಲ್ಲ ಯಾಕಂದ್ರೆ ಚಿತ್ರತಂಡ ಎಲ್ಲವನ್ನೂ ಸಸ್ಪೆನ್ಸ್ ಆಗಿಯೇ ಇಟ್ಟಿದೆ. ಅಂದ್ಹಾಗೇ, ತ್ರಿಷಾ ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ ಈ ಕಾರಣದಿಂದ ತ್ರಿಷಾ ಗ್ರೀನ್ ಸಿಗ್ನಲ್ ಕೊಡೋದಕ್ಕೆ ಹಿಂದೇಟು ಹಾಕ್ತಾರೋ ಅಥವಾ ಪವರ್‌ಗೋಸ್ಕರ ಜಿಗಿಜಿಗಿದು ಬರ‍್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ದೊಡ್ಮನೆ ಹುಡುಗನ ಪಕ್ಕದಲ್ಲಿ ನಿಲ್ಲೋದಕ್ಕೆ ನಾನ್ ಯಾವಾಗ್ಲೂ ರೆಡಿ ಅಂತ ಮಿಲ್ಕಿಬ್ಯೂಟಿ ತಮನ್ನಾ ಬಹಳ ದಿನದ ಹಿಂದೆಯೇ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. ಹೀಗಾಗಿ, ತ್ರಿಷಾ ನೋ ಅನ್ನೋದಕ್ಕೂ ಮೊದಲು ಕೊಂಚ ಯೋಚನೆ ಮಾಡಿದರೆ ಒಳ್ಳೆಯದು ಎಂಬುದು ಅಪ್ಪು ಫ್ಯಾನ್ಸ್ ಅಭಿಪ್ರಾಯ

ಉಳಿದಂತೆ ದ್ವಿತ್ವ ಒಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ಫಸ್ಟ್ ಟೈಮ್ ಪವನ್‌ಕುಮಾರ್-ಪವರ್‌ಸ್ಟಾರ್ ಜೊತೆಯಾಗ್ತಿದ್ದಾರೆ. ಪೋಸ್ಟರ್‌ನಿಂದಲೇ ಸಾಕಷ್ಟು ಕೂತೂಹಲಕ್ಕೆ ಕಾರಣವಾಗಿರುವ ದ್ವಿತ್ವ ಈಗ ಸಿನಿಮಾ ನಾಯಕಿ ವಿಚಾರಕ್ಕೆ ಸಾಕಷ್ಟು ಸುದ್ದಿಮಾಡ್ತಿದೆ. ಪುನೀತ್ ರಾಜ್‌ಕುಮಾರ್ ಅವರನ್ನು ಹೊರತುಪಡಿಸಿ ಉಳಿದ ತಾರಾಗಣದ ಬಗ್ಗೆ ಪವನ್ ಇನ್ನಷ್ಟೇ ರಿವೀಲ್ ಮಾಡ್ಬೇಕಿದೆ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದ್ದು `ದ್ವಿತ್ವ’ ಮೇಲೆ ನಿರೀಕ್ಷೆಗಳು ಗರಿಗೆದರಿವೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮಿನುಗುವ ನಕ್ಷತ್ರವೊಂದು ಜಾರಿಬಿದ್ದ ಸಂಕಟ, ತೆರೆ ಮೇಲಿನ ಒನಕೆ ಒಬವ್ವ ಈಗ ಬರೀ ನೆನಪು ಮಾತ್ರ !

ಕಲಾವಿದರಿಗೆ ʼಸ್ಟಾರ್‌ʼ ಅಂತಾರೆ. ಸ್ಟಾರ್‌ ಅಂದ್ರೆ ಮಿನುಗುವ ನಕ್ಷತ್ರ ಅನ್ನೋದು ನಿಮಗೂ ಗೊತ್ತಿದೆ. ನಿಜವಾದ ನಕ್ಷತ್ರಗಳು ಆಗಸದಲ್ಲಿ ಮಿನುಗಿದರೆ, ಕಲಾವಿದರು ಬೆಳ್ಳಿಪರದೆ ಮೇಲೆ ಮಿನುಗುವ ನಕ್ಷತ್ರ ಗಳು.ಅಂತೆಯೇ ಸ್ಟಾರ್‌ ಎನಿಸಿಕೊಂಡ ಈಗಿನ ಕಲಾವಿದರೆಲ್ಲ ಅದೆಷ್ಟು ಮಿನುಗು ತ್ತಾರೋ ಗೊತ್ತಿಲ್ಲ, ಆದರೆ ಕನ್ನಡ ಚಿತ್ರರಂಗ ಕಂಡ ಅತ್ಯಾ ದ್ಭುತ ನಟಿ, ಅಭಿನಯ ಶಾರದೆ ಜಯಂತಿ ಅಂದ್ರೆ ಬೆಳ್ಳಿ ಪರದೆ ಮೇಲೆ ನಿರಂತರವಾಗಿ ಮಿನುಗಿದ ನಕ್ಷತ್ರ. ಅಂತಹ ಬೆಳ್ಳಿ ನಕ್ಷತ್ರವೇ ಈಗ ಕಳಚಿ ಬಿದ್ದಿದೆ. ಅವರಿನ್ನು ನೆನಪು ಮಾತ್ರ ಎನ್ನುವ ಸಂಕಟ ಇಡೀ ಸಿನಿಮಾ ರಸಿಕರಲ್ಲಿ ಮನೆ ಮಾಡಿದೆ.

ಹಿರಿಯ ನಟಿ ಜಯಂತಿ ಕನ್ನಡ ಚಿತ್ರರಂಗ ಕಂಡ ಅಪರೂಪದ ನಟಿ. ಈಗಿನ ತಲೆಮಾರಿಗೆ ಇಂತಹ ನಟಿಯರನ್ನು ಇನ್ನೆಂದೂ ಕಾಣಲು ಸಾಧ್ಯವೇ ಇಲ್ಲ. ಪಂಡರಿಬಾಯಿ, ಲೀಲಾವತಿ, ಸರೋಜದೇವಿ, ಕಲ್ಪನಾ , ಭಾರತಿ ಹಾಗೂ ಜಯಂತಿ ಅವರೆಲ್ಲ ಆ ಕಾಲದಲ್ಲಿ ನಾಯಕಿಯರಾಗಿ ಕನ್ನಡ ಚಿತ್ರರಂಗ ಬಹುಕಾಲ ಆಳಿದವರು. ನಿರಂತರವಾದ ಅವರ ಅಳ್ವಿಕೆಗೆ ಕಾರಣವಾಗಿದ್ದೇ ನಟನೆಯ ಮೇಲಿದ್ದ ಅವರ ಆಸಕ್ತಿ ಮತ್ತು ಬದ್ಧತೆ. ನೇಮ್‌ ಅಂಡ್‌ ಫೇಮ್‌ ಎನ್ನುವುದಕ್ಕಿಂದ ನಟನೆಯ ಹಸಿವಿಗಾಗಿಯೇ ಅವರೆಲ್ಲ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದು ಇದೆ. ಈ ಕಾಲಕ್ಕೆ ಅದೆಲ್ಲ ಸಾಧ್ಯವೇ? ಅದೆಲ್ಲಕ್ಕಿಂದ ಮುಖ್ಯವಾಗಿ ಖಾಸಗಿ ಬದುಕಿನಲ್ಲಿ ಸಂತೋಷಕ್ಕಿಂತ ನೋವನ್ನೇ ಉಂಡ ನಟಿ ಜಯಂತಿ ಅವರಂತೂ ತಮ್ಮ ಇಡೀ ಜೀವನವನ್ನೂ ನಟನೆಗಾಗಿಯೇ ಮೀಸಲಿ ಟ್ಟಿದ್ದರೂ ಎನ್ನುವುದಕ್ಕೆ ಅವರು ಅಭಿನಯಿಸಿದ ಸಿನಿಮಾಗಳ ಸಂಖ್ಯೆ ಸಾಕ್ಷಿ.

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ 5೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ ಮಹಾನಟಿ ಅವರು. ಸಿನಿಮಾ ಅಂದ್ರೆ ಆಗ ಒಂದಷ್ಟು ಮಡಿ, ಮೈಲಿಗೆಗಳು ಇದ್ದ ಕಾಲದಲ್ಲೇ ನಾಯಕಿ ಆಗಿ ಬಂದವರು ನಟಿ ಜಯಂತಿ. ಒಂದ್ರೀತಿ ಅವರ ಹಾದಿಯ ಆರಂಭವೇ ಸಂಪ್ರಾದಾಯಗಳನ್ನು ಧಿಕ್ಕರಿಸಿ ಬಂದಿದ್ದು. ಸಿನಿಮಾ ಅಂದ್ರೆ ಹೀಗೆಯೇ ಅಂತ ಬೇಲಿ ಹಾಕಿಕೊಂಡಿದ್ದಾಗ ಹದಿ ಹರೆಯದ ಯುವತಿಯೊಬ್ಬಳು ಕ್ಯಾಮೆರಾ ಮುಂದೆ ಈಜುಡುಗೆ ತೊಡುವುದೆಂದರೆ ಅದು ಅಷ್ಟು ಸುಲಭ ವೇನು ಆಗಿರಲಿಲ್ಲ, ಹಾಗೆಲ್ಲ ಮಾಡಿದರೆ ದೊಡ್ಡ ಪ್ರತಿರೋಧವೇ ವ್ಯಕ್ತವಾಗಲಿದ್ದ ಕಾಲವದು. ಅಂತಹ ದಿನಮಾನದಲ್ಲೇ ನಟಿ ಜಯಂತಿ ಅವರು ಮಿಸ್‌ ಲೀಲಾವತಿ ಚಿತ್ರದಲ್ಲಿಈಜುಡುಗೆ ತೊಟ್ಟು ಕ್ಯಾಮೆರಾ ಮುಂದೆ ನಿಂತಿದ್ದರು ಎನ್ನುವುದಕ್ಕೆ ನೇಮ್‌ ಅಂಡ್‌ ಫೇಮ್‌ ಕಾರಣ ಅಂತೆನ್ನಲಾಗದು.ಆ ಮೂಲಕ ದೊಡ್ಡ ಕ್ರಾಂತಿಗೆ ಕಾರಣವಾದರು ಅನ್ನೋ ದು ಈಗ ಸುಲಭವಾಗಿ ಹೇಳುವ ಮಾತಾದರೂ, ಆಗ ಅದನ್ನ ವರು ಅರಗಿಸಿಕೊಂಡಿದ್ದೇ ಬಹುದೊಡ್ಡ ಸಾಹಸ. ಪಾತ್ರ ಯಾವು ದದಾರೂ ಸರಿ ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಜಯಂತಿ ಅವರಿಗೆ ನಟನೆಯೇ ಸಂಗಾತಿಯಂತಾಗಿತ್ತು. ಹಾಗಾಗಿ ಪಾತ್ರಗಳನ್ನ ಅರಸಿ, ಪರಭಾಷೆಗಳಿಗೂ ಹೋದರು. ಅಲ್ಲೂ ತಮ್ಮ ಮನೋಜ್ಜ ಅಭಿನಯದ ಮೂಲಕ ಮನೆ ಮಾತಾಗಿದ್ದರು ಎನ್ನುವುದು ಕನ್ನಡದ ಹೆಮ್ಮೆಯೇ ಹೌದು.

ಮಿಸ್‌ ಲೀಲಾವತಿ ಚಿತ್ರದಲ್ಲಿನ ಅವರ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂತು ಎನ್ನುವುದು ನಿಜವೇ ಆಗಿದ್ದರೂ, ಜಯಂತಿ ಅವರು ಕನ್ನಡಿಗರ ಮನೆ ಮಾತಾಗಿದ್ದು ನಾಗರಾಹಾವು ಚಿತ್ರದಲ್ಲಿನ ಒನಕೆ ಒಬವ್ವ ಪಾತ್ರದ ಮೂಲಕ. ಈಗಲೂ ಜಯಂತಿ ಅಂದ್ರೆ ಕನ್ನಡಿಗರ ಮನದಲ್ಲಿ ಚಿತ್ರದುರ್ಗದ ಕಲ್ಲಿನಕೋಟೆ, ಅಲ್ಲಿಗೆ ದೆಂಡೆತ್ತಿ ಬಂದಿದ್ದ ಹೈದರಾಲಿ ಸೈನ್ಯ, ಆ ಸೈನ್ಯವನ್ನು ಬಗ್ಗ ಬಡಿದ ವೀರ ವನಿತೆ ಒನಕೆ ಒಬವ್ವ ಳ ಪರಾಕ್ರ ಮವೇ ನದಿಯಂತೆ ಹರಿದುಹೋಗುತ್ತದೆ. ಅಂತಹದೊಂದು ಬೆಳ್ಳಿ ಪರದೆಯ ನಕ್ಷತ್ರವೇ ಈಗ ಕಳಚಿ ಬಿದ್ದಿದೆ.

Categories
ಸಿನಿ ಸುದ್ದಿ

ಅಂಬಿ ಮಾಮ ಎನ್ನುತ್ತಿದ್ದರು ಜಯಂತಿ ; ಹೀಗನ್ನುತ್ತಿದ್ದರು ಕರ್ಣ ?

ಅಭಿನಯ ಶಾರದೆ ಜಯಂತಿಯವರು ದೈಹಿಕವಾಗಿ ಮರೆಯಾಗಿರಬಹುದು ಅಷ್ಟೇ ಶತಶತಮಾನಗಳು ಉರುಳಿದರೂ ಕೂಡ ಪಾತ್ರಗಳ ಮೂಲಕ ಅಜರಾಮರವಾಗಿರುತ್ತಾರೆ. ಮುಖಕ್ಕೆ ಬಣ್ಣ ಹಚ್ಚಿದಾಗಿನಿಂದ ಬಣ್ಣದ ಲೋಕದಲ್ಲಿ ಅಭಿನೇತ್ರಿಯಾಗಿ ಮಿಂಚಿದ ಜಯಂತಿಯವರು ಕೋಟ್ಯಾಂತರ ಮನಸ್ಸುಗಳಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಡಾ ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಉದಯ್‌ಕುಮಾರ್, ಎನ್‌ಟಿರಾಮ್‌ರಾವ್, ಜೆಮಿನಿ ಗಣೇಶನ್, ಎಂ.ಜಿ ರಾಮಚಂದ್ರನ್ ಸೇರಿದಂತೆ ಸೌತ್ ಸಿನಿಮಾ ಇಂಡಸ್ಟ್ರಿಯ ಬಹುತೇಕ ಎಲ್ಲಾ ದಿಗ್ಗಜರೊಟ್ಟಿಗೆ ತೆರೆಹಂಚಿಕೊಂಡು ಸೈ ಎನಿಸಿಕೊಂಡವರು ಜಯಂತಿಯವರು. ಇಂತಿಪ್ಪ ಈ ಎವರ್‌ಗ್ರೀನ್ ನಾಯಕಿ ರೆಬೆಲ್‌ಸ್ಟಾರ್ ಅಂಬರೀಷ್ ಅವರೊಟ್ಟಿಗೂ ಸ್ಕ್ರೀನ್ ಶೇರ್ ಮಾಡಿದ್ದರು.
ವಜ್ರದ ಜಲಪಾತ, ಲೀಡರ್ ವಿಶ್ವನಾಥ್, ಹೊಸ ತೀರ್ಪು, ಮಸಣದ ಹೂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಂಬರೀಷ್ ಹಾಗೂ ಜಯಂತಿಯವರು ಒಟ್ಟಿಗೆ ನಟಿಸಿದ್ದರು.

ಮಂಡ್ಯದ ಗಂಡು ಅಂಬರೀಷ್‌ರನ್ನ ನಟಿ ಜಯಂತಿಯವರು ಅಂಬಿಮಾಮ ಎನ್ನುತ್ತಿದ್ದರು ಅನ್ನೋದು ಇಂಟ್ರೆಸ್ಟಿಂಗ್ ವಿಷ್ಯ. ಹೌದು, ಶೂಟಿಂಗ್ ಸೆಟ್‌ನಲ್ಲಿ ರೆಬೆಲ್‌ಸ್ಟಾರ್‌ನ ಜಯಂತಿಯವರು ಅಂಬಿಮಾಮ ಎನ್ನುತ್ತಿದ್ದರಂತೆ. ಇದಕ್ಕೆ ಅಂಬ್ರೀಶ್‌ಯವರು ನೀನು `ಜೇಡರಭಲೇ’ ಎಂದು ಪ್ರೀತಿಯಿಂದಲೇ ರೇಗಿಸುತ್ತಿದ್ದರಂತೆ ಈ ಸಂಗತಿಯನ್ನ ಖಾಸಗಿ ಮಾಧ್ಯಮಕ್ಕೆ ಸಂದರ್ಶನ ಕೊಟ್ಟಾಗ ಸ್ವತಃ ಜಯಂತಿಯವರೇ ಬಿಚ್ಚಿಟ್ದಿದ್ದರು.

ಸಿನಿಮಾ ಹೊರತಾಗಿಯೂ ಅಂಬರೀಶ್ ಹಾಗೂ ಅವರ ಕುಟುಂಬದೊಟ್ಟಿಗೆ ಜಯಂತಿ ಅಮ್ಮನವರು ಆತ್ಮೀಯತೆ ಬೆಸೆದುಕೊಂಡಿದ್ದರು. ಅಭಿನಯ ಶಾರದೆಯ ಆರೋಗ್ಯ ಹದಗೆಟ್ಟಿದೆ ಎನ್ನುವ ಸುದ್ದಿ ತಿಳಿದರೆ ಸಾಕು ಅಂಬಿಯಣ್ಣ ಎಲ್ಲೇ ಇದ್ದರೂ ಓಡೋಡಿ ಬರುತ್ತಿದ್ದರು. ಆಸ್ಪತ್ರೆಗೆ ಭೇಟಿಕೊಟ್ಟು ಕಷ್ಟ-ಸುಖ ವಿಚಾರಿಸುತ್ತಿದ್ದರಲ್ಲದೇ ಜಯಂತಿ ಅಮ್ಮವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುತ್ತಿದ್ದರು. ಸುಮಲತಾ ಅಂಬರೀಷ್ ಕೂಡ ಅಮ್ಮನವರ ಕ್ಷೇಮ-ಸಮಾಚಾರ ವಿಚಾರಿಸಿಕೊಳ್ಳುತ್ತಿದ್ದರು. ಈಗ ಅಮ್ಮನವರ ಅಗಲಿಕೆಗೆ ಸುಮಲತಾ ಕೂಡ ಕಂಬನಿ ಮಿಡಿದಿದ್ದಾರೆ. `ಕನ್ನಡದ ಮೇರು ನಟಿ, ಅಭಿನಯ ಶಾರದೆ ಹಾಗೂ ನನ್ನ ನಲ್ಮೆಯ ಜಯಂತಿ ಅಮ್ಮನ ನಿಧನದ ಸುದ್ದಿ ಅತೀವ ದುಃಖ ತಂದಿದೆ. ದಶಕಗಳಿಂದ ಅವರು ನಮ್ಮ ಕುಟುಂಬದ ಸದಸ್ಯರೇ ಆಗಿದ್ದು, ನಮ್ಮ ಸುಖ ದುಃಖಗಳಲ್ಲಿ ಜೊತೆಗಿದ್ದರು. ಅವರ ನಿಧನದಿಂದ ಭಾರತದ ಚಿತ್ರರಂಗ ಒಂದು ಅಪೂರ್ವ ಅಭಿನೇತ್ರಿಯನ್ನು ಕಳೆದುಕೊಂಡು ಅನಾಥವಾಗಿದೆ’ ಎಂದು ಸುಮಲತಾ ಭಾವುಕರಾಗಿದ್ದಾರೆ.

Categories
ಸಿನಿ ಸುದ್ದಿ

ಚಿತ್ರನಟಿ ಜಯಂತಿ ನಿಧನಕ್ಕೆ ಸುನೀಲ್ ಪುರಾಣಿಕ್ ಕಂಬನಿ

ಅಭಿನಯ ಶಾರದೆ, ಖ್ಯಾತ ಅಭಿನೇತ್ರಿ ಜಯಂತಿ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಕಂಬನಿ ಮಿಡಿದಿದ್ದಾರೆ. ಭಾರತೀಯ ಚಿತ್ರರಂಗದ ಮೇರು ನಟಿ ಜಯಂತಿ ಅವರು ಈ ಶತಮಾನ ಕಂಡ ಅತ್ಯಂತ ಜನಪ್ರಿಯ ಮತ್ತು ಮೋಹಕ ನಟಿ ಎಂದು ಹೆಸರು ಪಡೆದವರು.

ಮೂಲತಃ ಬಳ್ಳಾರಿಯವರಾದ ಅವರು 1963 ರಲ್ಲಿ ಜೇನುಗೂಡು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು.ಕಪ್ಪು ಬಿಳಿಪು ಚಿತ್ರದ ಕಾಲದಿಂದ ಇತ್ತೀಚಿನವರೆಗೂ ಅವರ ಚಿತ್ರರಂಗದ ಸಾಧನೆ ಅಪಾರ.ಡಾ.ರಾಜಕುಮಾರ್ ಅವರೊಂದಿಗೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ ಹೆಗ್ಗಳಿಕೆ ಜಯಂತಿ ಅವರದು.ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಅವರ ಅಭಿನಯ ಸಾರ್ವಕಾಲಿಕ ಶ್ರೇಷ್ಠ ಅಭಿನಯ ಎಂದು ಪರಿಗಣಿಸಲ್ಪಟ್ಟಿದ್ದು,

ಜಯಂತಿ ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಅದ್ಭುತ ಕಲಾವಿದೆಯನ್ನು ಕಳೆದು ಕೊಂಡಂತಾಗಿದೆ.ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗು ಜಯಂತಿಯವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಅಪಾರ ಅಭಿಮಾನಿಗಳು, ಕುಟುಂಬದವರಿಗೆ ಭಗವಂತ ಕರುಣಿಸಲಿ ಎಂದು ಪುರಾಣಿಕ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಜೀವನ ಪಯಣ ಮುಗಿಸಿದ ಅಭಿನಯ ಶಾರದೆ- ಕಸ್ತೂರಿ ನಿವಾಸದ ಕಲಾವಿದೆಯ ಅಗಲಿಕೆಗೆ ಚಿತ್ರರಂಗ ಕಣ್ಣೀರು

ಕನ್ನಡ‌ ಚಿತ್ರರಂಗ ಕಂಡ ಅತ್ಯದ್ಭುತ ನಟಿ, ಅಭಿನಯ ಶಾರದೆ ಎಂತನೇ ಜನಪ್ರಿಯಗೊಂಡಿದ್ದ ಹಿರಿಯ‌ ನಟಿ ಜಯಂತಿಯವರು ಜೀವನ ಪಯಣ ಮುಗಿಸಿದ್ದಾರೆ. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತಿ ಅಮ್ಮ ಭಾನುವಾರ ರಾತ್ರಿ ತೀವ್ರ ಉಸಿರಾಟದ ಸಮಸ್ಯೆಯುಂಟಾಗಿ ಕೊನೆಯುಸಿರೆಳೆದಿದ್ದಾರೆ. ಅಭಿನಯ ಶಾರದೆಯ ಅಗಲಿಕೆಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿಯುತ್ತಿದೆ.

500 ಚಿತ್ರಗಳಲ್ಲಿ ಅಭಿನಯ ಶಾರದೆ ಮಿಂಚು

ಜೇನುಗೂಡು ಜಯಂತಿಯವರು ಬಣ್ಣ ಹಚ್ಚಿದ ಮೊದಲ‌ ಕನ್ನಡದ ಸಿನಿಮಾ.‌ ತಮ್ಮ ಎರಡನೇ ಚಿತ್ರ ಚಂದವಳ್ಳಿಯ ತೋಟದಲ್ಲಿ ಡಾ ರಾಜ್ ಕುಮಾರ್ ಗೆ ನಾಯಕಿಯಾದರು. ಅಣ್ಣಾವ್ರು ಹಾಗೂ ಅಭಿನಯ ಶಾರದೆಯ ಜೋಡಿ ಕೂಡ ಅಭಿಮಾನಿ ದೇವರುಗಳ ಮನಸ್ಸು ಗೆದ್ದಿತ್ತು. ಜಯಂತಿ ಯವರಿಗೆ ಡಾ ರಾಜ್ ಕುಮಾರ್ ಜೊತೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಚಂದವಳ್ಳಿಯ ತೋಟ, ಮಿಸ್ ಲೀಲಾವತಿ, ಮಂತ್ರಾಲಯ ಮಹಾತ್ಮೆ, ಲಗ್ನ ಪತ್ರಿಕೆ, ಜೇಡರಭಲೇ, ಶ್ರೀ ಕೃಷ್ಣದೇವರಾಯ, ಪರೋಪಕಾರಿ, ಕಸ್ತೂರಿ ನಿವಾಸ, ದೇವರು ಕೊಟ್ಟ ತಂಗಿ, ಎಡಕಲ್ಲು ಗುಡ್ಡದ ಮೇಲೆ, ಮಸಣದ ಹೂ, ಚಿತ್ರಗಳಲ್ಲಿ ಜಯಂತಿ ಅಣ್ಣಾವ್ರಿಗೆ ಜೋಡಿಯಾಗಿದ್ದರು.

ಇಂದಿರಾಗಾಂಧಿಯವರಿಂದ ಪ್ರಶಸ್ತಿ ಸ್ವೀಕಾರ !

ಮಿಸ್ ಲೀಲಾವತಿ ಚಿತ್ರದ ಜಯಂತಿ ಅವರ ಅಭಿನಯಕ್ಕೆ ರಾಜ್ಯಪ್ರಶಸ್ತಿ ಮುಡಿಗೇರಿತ್ತು. ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಜಯಂತಿ ಅವರಿಗೆ ರಾಷ್ಟ್ರ ಪ್ರಶಸ್ತಿ ಪ್ರಧಾನ ಮಾಡಿದ್ದರು. ʼಮಿಸ್ ಲೀಲಾವತಿ’ ನಟಿ ಜಯಂತಿಯವರ ಖ್ಯಾತಿಯನ್ನ ಉತ್ತುಂಗಕ್ಕೇರಿಸಿದ ಚಿತ್ರ. ಮಡಿ ವಂತಿ ಕೆಯ ಸಂಪ್ರದಾಯವನ್ನು ಮುರಿದು ಜಯಂತಿಯವರು ಮಾದಕ ನಟಿಯಾಗಿ ಮಿಂಚಿದ್ದೇ ಬಂತು ಸ್ಯಾಂಡಲ್ ವುಡ್ ಅಂಗಳ ದಲ್ಲಿ ಸುಂಟರಗಾಳಿ ಎಬ್ಬಿಸಿದರು. ಸ್ವಿಮ್ ಸೂಟ್ ಧರಿಸಿದ ಮೊದಲ ಕನ್ನಡದ ನಟಿ ಎನ್ನುವ ಖ್ಯಾತಿ ಗಳಿಸಿದರು. ಮೋಸ್ಟ್ ಬೋಲ್ಡ್ ಅಂಡ್ ಬ್ಯೂಟಿಫುಲ್ ನಾಯಕಿ ಪಟ್ಟಕ್ಕೇರಿ ತಮ್ಮದೇ ಆದ ನಯಾ ಮೇನಿಯಾ ಸೃಷ್ಟಿಸಿಕೊಂಡರು.

ಸ್ಕರ್ಟ್, ಟೀಶರ್ಟ್, ಸ್ವಿಮ್ ಸೂಟ್ ಈ ತರ ಮತ್ತೇರಿಸೋ ಕಾಸ್ಟ್ಯೂಮ್ ನಲ್ಲಿ ಕ್ಯಾಮೆರಾ ಮುಂದೆ ನಿಲ್ಲೋಕೆ ಅಂಜುತ್ತಿದ್ದ ಕಾಲವದು. ಅಂತಹ ಟೈಮ್ ನಲ್ಲಿ ನಟಿ ಜಯಂತಿಯವರು ಮನಸ್ಸನ್ನು ಬಿಗಿಯಾಗಿಸಿ ಕೊಂಡರು. ಯಾವುದೇ ಪಾತ್ರವಾದರೂ ಸರೀ ಲೀಲಾಜಾಲ ವಾಗಿ ಮಾಡಬಲ್ಲೇ ಎನ್ನುವಂತೆ ಯಾವುದೇ ಕಾಸ್ಟ್ಯೂಮ್ ಆದರೂ ಸರೀ ಅದನ್ನು ಧರಿಸಿ ಪಾತ್ರಕ್ಕೋಸ್ಕರ ಕ್ಯಾಮೆರಾ ಮುಂದೆ ನಿಲ್ಲಬಲ್ಲೇ ಎಂಬುದನ್ನು ಮಿಸ್ ಲೀಲಾವತಿ‌ ಚಿತ್ರದ ಮೂಲಕ ತೋರಿಸಿಕೊಟ್ಟರು. ಜಯಂತಿಯವರು ಕ್ಲಿಕ್ ಆದರೂ, ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯ್ತು.

ಅಭಿನಯ ಶಾರದೆ ಕನ್ನಡಕ್ಕಷ್ಟೇ ಅಲ್ಲ…

ಕನ್ನಡ, ತೆಲುಗು, ತಮಿಳು. ಮಲೆಯಾಳಂ, ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ಮೇರುನಾಯಕಿಯಾಗಿ‌ ಮಿಂಚಿದರು. 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರು. ತಮ್ಮ ಸಿನಿಮಾ ನಟನೆಗೆ ಏಳು ಭಾರಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಎರಡು ಭಾರಿ ಫಿಲ್ಮ್ ಫೇರ್ ಅವಾರ್ಡ್ ಪಡೆದುಕೊಂಡಿದ್ದರು. ಕನ್ನಡ ಚಿತ್ರರಂಗ ಕೊಟ್ಟ ಅಭಿನಯ ಶಾರದೆ ಎನ್ನುವ ಕಿರೀಟಕ್ಕೆ ಮುತ್ತಿಟ್ಟಿದ್ದರು.

ಒನಕೆ ಓಬ್ಬವ್ವಳಾಗಿ ಕರ್ನಾಟಕದ ಆರೂವರೆ ಕೋಟಿ ಮಂದಿಯ ಮನಸ್ಸು ಗೆದ್ದರು. ಕಮಲ‌ಕುಮಾರಿ ನಟಿ ಜಯಂತಿಯವರ ಹುಟ್ಟು ನಾಮಧೇಯ. ಚಿತ್ರರಂಗಕ್ಕೆ ಬಂದಮೇಲೆ ಜಯಂತಿ ಅಂತ ಹೆಸರು ಬದಲಾಯಿಸಿ ಕೊಂಡರು. ಹುಟ್ಟೂರು ಬಳ್ಳಾರಿ. ಬಾಲಸುಬ್ರಹ್ಮಣ್ಯಂ ಮತ್ತು ಸಂತಾನ ಲಕ್ಷ್ಮಿಯವರ ಸು ಪುತ್ರಿಯಾಗಿ ಜನಿಸಿದರು. ಈಗ ಪುತ್ರನನ್ನ ಅಗಲಿದ್ದಾರೆ. ಅಮ್ಮನ ಅಗಲಿಕೆಗೆ ಮಗ ಮಾತ್ರವಲ್ಲ ಇಡೀ ಸಿನಿಮಾ ಲೋಕ ಕಂಬನಿ‌ ಮಿಡಿಯುತ್ತಿದೆ

Categories
ಸಿನಿ ಸುದ್ದಿ

ತೋರ ಬಾರದ ಬೆಟ್ಟು ತೋರಿಸಿ ಬೆಪ್ಪಾದ ಚಂದ್ರಚೂಡ್ – ತಪ್ಪಾಯ್ತು ಬಿಡಿ ಸರ್, ಅಂದ್ರು ಬಿಡಲಿಲ್ಲ ಕಿಚ್ಚ ಸುದೀಪ್, ಮಾಡಿದ ತಪ್ಪಿಗೆ ಹೊರ ಬರ್ತಾರಾ ಚೂಡ್!

ಚಕ್ರವರ್ತಿ.. ಚಕ್ರವರ್ತಿ.. ಚಕ್ರವರ್ತಿ.. ಈ‌ ಹೆಸರಿಗೊಂದು ಘನತೆಯಿದೆ , ಗೌರವವಿದೆ , ಬೆಲೆಕಟ್ಟಲಾಗದ ಶಕ್ತಿಯಿದೆ. ಮಾತ್ರವಲ್ಲ ಶತಶತ ಮಾನ ಗಳಿಂದಲೂ ಚಕ್ರವರ್ತಿ ಎನ್ನುವ ಹೆಸರಿಗೆ ಒಂದು ವಿಶೇಷವಾದ ಸ್ಥಾನವಿದೆ. ಮಾನವಿದೆ. ಅದು ಇಡೀ ಮನುಕುಲಕ್ಕೆ ಗೊತ್ತಿರುವ ಸತ್ಯ.‌ ಆದರೂ ಈ ಚಕ್ರವರ್ತಿ ಮಾತ್ರ ಚಕ್ರವರ್ತಿ ಎನ್ನುವ ಹೆಸರಿಗೆ ಕಳಂಕವೇ? ಹೆಣ್ಣು ಅಂದ್ರೆ ಈ ಚಕ್ರವರ್ತಿಗೆ ಅದ್ಯಾಕೆ ಅಷ್ಟು ಕೋಪ? ಇಷ್ಟಕ್ಕೂ ನಾವ್ ಇಲ್ಲಿ ಹೇಳ್ತಿರೋದು ಅದ್ಯಾವ ಚಕ್ರವರ್ತಿ ಅಂತ ನೀವೇನು ಕನ್ ಪ್ಯೂಸ್ ಆಗೋದು ಬೇಡ.‌ನಾವಿಲ್ಲಿ ಹೇಳ್ತಿರೋದು ನಿರ್ದೇಶಕ, ಬರಹಗಾರ, ಪತ್ರಕರ್ತ ಹಾಗೂ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾ ಗಿರುವ ಚಕ್ರವರ್ತಿ ಚಂದ್ರಚೂಡ್ ಅವರ ಬಗ್ಗೆ.

ಹಾಗಂತ ಅವರದೇನು ಕಥೆ ಅಂತ ವಿವರಿಸಿ ಹೇಳಬೇಕಿಲ್ಲ ಅನಿಸು ತ್ತೆ.ಬಿಗ್ ಬಾಸ್ ಮನೆಯಲ್ಲಿ ಒಂದು ಹೆಣ್ಣು ಮಗಳಿಗೆ ಆತ , ಕೋಪದಿಂದ ತೋರ ಬಾರದ ಬೆರಳು ತೋರಿಸಿದ ಕಾರಣಕ್ಕೆ ಆ ಯುವತಿ ನೊಂದು ಕೊಂಡಿದ್ದು ಅಷ್ಟಿಷ್ಟಲ್ಲ. ಅದನ್ನು ಇಡೀ ಕರುನಾಡೇ ಕಂಡು‌ ಕ್ಯಾಕರಿಸಿ ಉಗಿಯಿತು. ಸೋಷಲ್ ಮೀಡಿಯಾದಲ್ಲಿ ಆ ಏಪಿಸೋಡ್ ಗೆ ಬಂದ ಕಾಮೆಂಟ್ ನೋಡಿದ್ರೆ, ಅಬ್ಬಾ, ಚಕ್ರವರ್ತಿ ಚಂದ್ರಚೂಡ್ ಗೆ ಪಿಂಕಿ ಅಲಿಯಾಸ್ ಪ್ರಿಯಾಂಕಾ ಅವರ ಶಾಪ ಮಾತ್ರವಲ್ಲ ಸಕಲ ಹೆಣ್ಣು ಮಕ್ಕಳ ಶಾಪ ತಟ್ಟುವುದಂತೂ ಗ್ಯಾರಂಟಿ ಅಂತೆನಿಸಿ ದ್ದು ಹೌದು. ಅದೇನಾಗುತ್ತೋ ಗೊತ್ತಿಲ್ಲ, ಆದರೆ ಬಿಗ್ ಬಾಸ್ ನಿರೂಪಕರಾದ ಕಿಚ್ಚ ಸುದೀಪ್ ಮಾತ್ರ ಶಮಿವಾರ ಕೆಂಡಾಮಂಡ‌ಲ‌ ಆಗಿದ್ದನ್ನು ಕಂಡ ಕರುನಾಡು ಒಂದು ಕ್ಷಣ ಅಚ್ಚರಿಯಿಂದ ನೋಡಿದ್ದಂತೂ ಹೌದು. ಯಾಕಂದ್ರೆ ಚಂದ್ರ ಚೂಡ್ ಗೆ ನಟ ಸುದೀಪ್ ಕ್ಲಾಸ್ ತೆಗೆದುಕೊಂಡ ಪರಿಯೇ ಹಾಗಿತ್ತು.

ಶನಿವಾರ ಚಕ್ರವರ್ತಿಗೆ ಚಳಿಬಿಡಿಸಿರುವ ಕಿಚ್ಚ ಭಾನುವಾರ ಗೇಟ್ ಪಾಸ್ ಕೊಟ್ಟು ಕಳುಹಿಸೋದು ಖಚಿತ ಎನ್ನುವ ಮಾತು ಕೇಳಿಬರ್ತಿದೆ. ಅದಕ್ಕೆ ಕಾರಣ ಈ‌ ಘಟನೆಯಿಂದ ಚಂದ್ರಚೂಡ್ ಮೇಲೆ ಸುದೀಪ್ ಅವರಿಗಿರುವ ಕೋಪ ಅಂತ ಭಾವಿಸಬೇಕಿಲ್ಲ. ಯಾಕಂದ್ರೆ ಈ ವಾರ ನಾಮಿನೇಟ್ ಆದವರ ಪೈಕಿ ಚಂದ್ರಚೂಡ್ ಕೂಡ ಒಬ್ಬರು. ಶುಭಾಪುಂಜಾ, ಪ್ರಶಾಂತ್ ಸಂಬರ್ಗಿ, ಶಮಂತ್, ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಉರುಡುಗ ಈ ಐವರು ಈ ವಾರ ನಾಮಿನೇಟ್ ಆಗಿದ್ದಾರೆ. ಈ ಐವರಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರೇ ಕಿಕ್ ಔಟ್ ಆಗೋದು ಎನ್ನುವ ಸುದ್ದಿ ಹಲ್ ಚಲ್ ಎಬ್ಬಿಸುತ್ತಿದೆ. ಅದಕ್ಕೆ ಬೆಟ್ಟು ತೋರಿಸಿದ ವಿವಾದವೂ ಒಂದು.

ಅಂದ್ಹಾಗೇ ಚಕ್ರವರ್ತಿ ಚಂದ್ರಚೂಡ್ ಫಿನಾಲೆಗೆ ತಲುಪಲಿದ್ದ ಕ್ಯಾಂಡಿಡೇಟ್. ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಳ್ಳುವ ಅವಕಾಶ ಮಿಸ್ಸಾಗಬಹುದು. ಆದರೆ ಫೈನಲ್ ತಲುಪೋದು ಗ್ಯಾರಂಟಿ ಎನ್ನುವ ಮಾತು ಜನರ ಬಾಯಲ್ಲಿ ಬಂದಿತ್ತು. ಆದ್ರೀಗ, ಅದೇ ಜನರ ಬಾಯಲ್ಲಿ ಚಕ್ರವರ್ತಿಗೆ ಗೇಟ್ ಪಾಸ್ ಕೊಡಿಸುವ ಮಾತು ಕೇಳಿಬರ್ತಿದೆ. ಅದಕ್ಕೆ ಕಾರಣ ಪಿಂಕಿ ಅಲಿಯಾದ್ ಪ್ರಿಯಾಂಕಾ ತಿಮ್ಮೇಶ್ ಬಿಗ್ ಬಾಸ್ ನಿಂದ ಕಿಕ್ ಔಟ್ ಆದಾಗ ಚಕ್ರವರ್ತಿ ಮಧ್ಯದ ಬೆರಳನ್ನು ಅಶ್ಲೀಲವಾಗಿ ತೋರಿಸಿದ್ದಿರೆನ್ನುವುದೇ ಕಾರಣ. ಇಷ್ಟಕ್ಕೂ ಚಂದ್ರಚೂಡ್ ಅವರಿಗೆ ನಟಿ ಪ್ರಿಯಾಂಕಾ ತಿಮ್ಮೇಶ್ ಅವರ ಮೇಲೆ ಅದ್ಯಾಕೆ ಅಷ್ಟು ಕೋಪವೋ ಗೊತ್ತಿಲ್ಲ. ಅವರನ್ನು ಕಂಡಾಗೆಲ್ಲ ಗುರ್ ಎನ್ನುತ್ತಿದ್ದರು. ಕೊನೆಗೆ ಆ ಸಿಟ್ಟು ತೋರಿಸಿಯೇ ಬಿಟ್ಟರು. ಆದರೆ ಅದರ ಪರಿಣಾಮ ಈಗ ಬೇರೆಯೇ ಆಗಿದೆ.

ಹೆಣ್ಣುಮಕ್ಕಳಿಗೆ ತುಂಬಾ ಗೌರವ ಕೊಡ್ತೀನಿ ಅಂತ ಗರ್ವದಿಂದ ಹೇಳಿಕೊಳ್ಳುವ ಚಕ್ರವರ್ತಿಯವರು ಅಶ್ಲೀಲ ಸನ್ನೆ ತೋರಿಸಿದ್ದಕ್ಕೆ ಹೆಣ್ಣು ಮಕ್ಕಳು ಮಾತ್ರವಲ್ಲ ರಾಜ್ಯದ ಜನರು ಕೆಂಡಾಮಂಡಲವಾದರು. ಬಿಗ್ ಬಾಸ್ ಕಿಚ್ಚ ಕೂಡ ಇದನ್ನ ಖಂಡಿಸಿದರು. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಕೊನೆಗೆ ಚಕ್ರವರ್ತಿಯವರು ನನ್ನಿಂದ ತಪ್ಪಾಯ್ತು ಅಂತ ಒಪ್ಪಿಕೊಂಡರು. ಆದರೆ, ರಾಜ್ಯದ ಜನರು‌ ಚಕ್ರವರ್ತಿಯವರ ಕ್ಷಮೆಯನ್ನ ಮನ್ನಿಸ್ತಾರಾ ? ಹೆಣ್ಣು ಮಕ್ಕಳ ಶಾಪದಿಂದ ಚಂದ್ರಚೂಡ್‌ ವಿಮುಕ್ತರಾಗುತ್ತಾರಾ? ಸದ್ಯಕ್ಕೆ ನಾಮಿನೇಟೆಡ್‌ ಆಗಿರುವ ಚಂದ್ರಚೂಡ್‌ ವಿಲಿಮಿನೇಟ್‌ ಆಗೋದ್ರಿಂದಲೂ ಈ ವಾರ ತಪ್ಪಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ. ಯಾಕಂದ್ರೆ ಈ ವಾರ ಎಲಿಮಿನೇಟೆಡ್‌ ಪ್ರಕ್ರಿಯೆಯೇ ಇಲ್ಲ ಎನ್ನಲಾಗಿದೆ. ಆದರೆ ಮುಂದೆ?

ಈ‌ ನಡುವೆ ಕಿಚ್ಚನ ಅದೊಂದು ಮಾತು ಚಕ್ರವರ್ತಿ ಕಿಕ್ ಔಟ್ ಆಗೋ ದು ಪಕ್ಕಾ ಎನ್ನುವುದಕ್ಕೆ ರೆಕ್ಕೆ ಪುಕ್ಕ ಕಟ್ಟುತ್ತಿದೆ. ಮುಂದಿನ ವಾರ ನೀವಿದ್ದರೆ ಕ್ಲಿಪ್ಪಿಂಗ್ಸ್ ಸಮೇತ ತೋರಿಸ್ತೀನಿ ಅಂತ ಕಿಚ್ಚ ಹೇಳಿದ ಮಾತನ್ನ ಸೂಕ್ಷ್ಮವಾಗಿ ಗಮನಿಸಿದರೆ ಮುಂದಿನ‌ ವಾರ ಅಲ್ಲ ಇವತ್ತು ರಾತ್ರಿಯಿಂದಲೇ ಚಕ್ರವರ್ತಿಯವರಿಗೆ ದೊಡ್ಮನೆಯಲ್ಲಿ ಜಾಗವಿಲ್ಲ ಎನ್ನುವ ಅನುಮಾನ‌ ಮೂಡ್ತಿದೆ.‌ ಈ‌ ಅನುಮಾನ ಬರೀ ಅನುಮಾನ ವಾಗಿ ಉಳಿಯುತ್ತಾ? ಜಸ್ಟ್ ವೇಯ್ಟ್ ಅಂಡ್ ವಾಚ್.

Categories
ಸಿನಿ ಸುದ್ದಿ

ಆ ಜಾಗಕ್ಕೆ ಹೋಗಿ ಬಂದರೆ ದಾಸನಿಗೆ ನೆಮ್ಮದಿ; ಪ್ರತಿವರ್ಷ ಅಲ್ಲಿಗೆ ಭೇಟಿಕೊಡ್ತಾರೆ ದಚ್ಚು !

ಈ ಜಗತ್ತಲ್ಲಿ ದುಡ್ಡು ಕೊಟ್ಟರೇ ಏನ್ ಬೇಕಾದರೂ ಸಿಗುತ್ತೆ ಆದರೆ ಆ ಎರಡನ್ನು ಹೊರತುಪಡಿಸಿ. ಯಾವುದು ಆ ಎರಡು ಅಂದರೆ ಹೆತ್ತವರ ನಿಷ್ಕಲ್ಮಶ ಪ್ರೀತಿ ಮತ್ತು ನೆಮ್ಮದಿ. ಈ ವಿಚಾರ ನಿಮ್ಮೆಲ್ಲರಿಗೂ ಗೊತ್ತೆಯಿರುತ್ತೆ ಬಿಡಿ. ಅಷ್ಟಕ್ಕೂ, ನಾವ್ ಈಗ ಹೇಳೋದಕ್ಕೆ ಹೊರಟಿರುವುದು ದಚ್ಚು ನೆಮ್ಮದಿ ಅರಸಿ ಹೊರಟ ಜಾಗದ ಬಗ್ಗೆ

ಕಳೆದ ಕೆಲವು ದಿನಗಳಿಂದ ಸಾರಥಿಯ ನೆಮ್ಮದಿ ಕದಡುವಂತಹ ಘಟನೆಗಳು ನಡೆಯುತ್ತಲೇ ಇವೆ. ದರ್ಶನ್ ಹೆಸರಲ್ಲಿ 25 ಕೋಟಿ ವಂಚನೆ ಪ್ರಕರಣದಿಂದ ಶುರುವಾದ ವಿವಾದ ದೊಡ್ಮನೆ ಆಸ್ತಿ ಮೇಲೆ ದಾಸ ಕಣ್ಣುಹಾಕಿದ್ದರು ಎಂಬಲ್ಲಿಗೆ ಬಂದುನಿಂತಿರುವುದನ್ನು ಇಡೀ ಕರುನಾಡು ನೋಡಿದೆ. ಯಾವುದು ಸತ್ಯ-ಯಾವುದು ಸುಳ್ಳು ಎಂಬುದು ತಿಳಿಯುತ್ತಿಲ್ಲ. ಬರೀ ಆರೋಪ-ಪ್ರತ್ಯಾರೋಪಗಳೇ ನಡೆಯುತ್ತಿವೆ. ಈ ಮಧ್ಯೆ ಚಾಲೆಂಜಿಂಗ್ ಚಕ್ರವರ್ತಿಯ ಹೆಸರಿಗೆ ಮಸಿ ಬಳಿಯುವ ಹಾಗೂ ತೇಜೋವಧೆ ಮಾಡುವಂತಹ ಕೆಲಸ ಆಗ್ತಿದೆಯೆಂದು ದಾಸನ ಭಕ್ತರು ಕೆಂಡಾಮಂಡಲಗೊಂಡಿದ್ದಾರೆ. `ಸತ್ಯಾನಾ ಧಫನ್ ಮಾಡುವ ಕಫನ್ ಇನ್ನೂ ಯಾರೂ ಕಂಡುಹಿಡಿದಿಲ್ಲ’ ಎನ್ನುತ್ತಾ ಗರ್ಜಿಸಿರುವ ಜಗ್ಗುದಾದ, ನೆಮ್ಮದಿ ಅರಸಿ ಆ ದಿವ್ಯಜಾಗಕ್ಕೆ ಭೇಟಿಕೊಟ್ಟಿದ್ದಾರೆ

ದಾಸ ದೇವರ ಮಗ ಅಪ್ಪಟ ದೈವಭಕ್ತ ಎಂಬುದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಕಷ್ಟ-ದುಃಖ-ನೋವು-ನಲಿವು-ಸುಖ-ಸಂಭ್ರಮ ಏನೇ ಇರಲಿ ತಾಯಿ ಚಾಮುಂಡೇಶ್ವರಿಯ ಸನ್ನಿಧಿಗೆ ಭೇಟಿಕೊಟ್ಟು ದೇವಿಯ ಆಶೀರ್ವಾದ ಬೇಡುವ ದಾಸ, ಬೆಂಗಳೂರಿನ ಬಂಡಿಮಹಾಕಾಳಮ್ಮ, ಮಂಜುನಾಥಸ್ವಾಮಿ, ತಿರುಪತಿ ತಿಮ್ಮಪ್ಪ, ರಾಘವೇಂದ್ರಸ್ವಾಮಿಯನ್ನು ಆರಾಧಿಸುತ್ತಾರೆ. ಅದರಂತೇ, ತಮಿಳುನಾಡಿನ ತಿರುನಲ್ಲಾರ್‌ನಲ್ಲಿರುವ ಶನಿಮಹಾರಾಜನಿಗೆ ನಡೆದುಕೊಳ್ಳುತ್ತಾರೆ. ಪ್ರತಿವರ್ಷ ಶನಿಮಹಾತ್ಮ ದೇಗುಲಕ್ಕೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸುತ್ತಾರೆ.

ಶನಿಮಹಾರಾಜನ ಸನ್ನಿಧಿಗೆ ಸಾರಥಿ ಪ್ರತಿವರ್ಷ ಭೇಟಿ !

ಪ್ರತಿವರ್ಷದಂತೆ ಈ ವರ್ಷವೂ ಸಾರಥಿ ತಮಿಳುನಾಡಿನ ತಿರುನಲ್ಲಾರ್‌ನಲ್ಲಿರುವ ಶನಿಮಹಾತ್ಮನ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ಸ್ನೇಹಿತರ ಜೊತೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿರುವ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವಿವಾದಗಳು ಒಂದಾದ ಮೇಲೊಂದರಂತೆ ಸುತ್ತಿಕೊಳ್ಳುತ್ತಿರುವ ಈ ಹೊತ್ತಲ್ಲಿ ದಿವ್ಯದೇಗುಲಕ್ಕೆ ದಚ್ಚು ಭೇಟಿಕೊಟ್ಟಿರುವುದರಿಂದ ನೆಮ್ಮದಿ ಅರಸಿ ದಾಸ ಶನಿಮಹಾತ್ಮನ ಸನ್ನಿಧಿಗೆ ತೆರಳಿದ್ದಾರೆಂದು ಸುದ್ದಿಯಾಗ್ತಿದೆ.

ಶನಿಮಹಾರಾಜನ ದರ್ಶನ ಮಾಡಿದರೆ ಶನಿಭಾದೆ ಇರುವುದಿಲ್ಲ ಎಂಬ ನಂಬಿಕೆಯಿದೆ. ದೈವಶಕ್ತಿಯ ಮೇಲೆ ಅಪಾರ ನಂಬಿಕೆಯಿಟ್ಟಿರುವ ದೇವರ ಮಗ ದಾಸ, ಬಂದದ್ದೆಲ್ಲಾ ಬರಲಿ ನಿನ್ನ ದಯೆಯೊಂದು ಇರಲೆಂದು ಬೇಡಿಕೊಂಡರ‍್ತಾರೆ. ತನ್ನೊಟ್ಟಿಗೆ ತನ್ನ ಸುತ್ತಮುತ್ತಲಿನವರನ್ನು ಕಾಪಾಡೆಂದು ಸದಾ ಬೇಡುವ ಸಾರಥಿಗೆ ತಿರುನಲ್ಲಾರ್‌ನಲ್ಲಿರುವ ನೆಲೆಸಿರುವ ಶನಿಮಹಾರಾಜ ತಥಾಸ್ತು ಎನ್ನದಿರಲು ಸಾಧ್ಯವೇ ನೀವೇ ಹೇಳಿ.

ಆರೋಪಗಳಿಂದ ಮುಕ್ತಿ ಸಿಗಲಿ ಸಾರಥಿಗೆ

ಸದ್ಯಕ್ಕೆ ದಚ್ಚು ಮೇಲೆ ಕೇಳಿಬರುತ್ತಿರುವ ಆರೋಪಗಳು ಹುಸಿಯಾಗಲಿ. ದಾಸನ ಹೆಸರಲ್ಲಿ ೨೫ ಕೋಟಿ ಲಪಟಾಯಿಸೋಕೆ ಸ್ಕೆಚ್ ಹಾಕಿದವರು ಮೊದಲು ತಗಲಾಕಿಕೊಳ್ಳಲಿ.
ಸಾರಥಿ-ಉಮಾಪತಿ ನಡುವೆ ಹುಳಿಹಿಂಡೋಕೆ ಪ್ರಯತ್ನಪಟ್ಟವರು ಯಾರೆಂಬ ಸತ್ಯ ತಿಳಿಯಲಿ. ಉಮಾಪತಿಯವರು ದಚ್ಚು ಜೊತೆ ಮುಂದಿನ ಸಿನಿಮಾ ಅನೌನ್ಸ್ ಮಾಡಲಿ. ಪ್ರೇಮ್ ಅಂಡ್ ರಕ್ಷಿತಾ ಪ್ರೇಮ್ ಜೊತೆ ದಚ್ಚು ಪಾರ್ಟಿ ಮಾಡುವ ಟೈಮ್ ಬರಲಿ. ಮೈಸೂರಿನ ಸ್ನೇಹಿತರ ಜೊತೆ ಮೊದಲಿನಂತೆ ಕುಳಿತು ಫಾರ್ಮ್ಹೌಸ್‌ನಲ್ಲಿ ಬಿರಿಯಾನಿ ಸವಿಯಲಿ.ಇಂದ್ರಜಿಂತ್ ಲಂಕೇಶ್ ಅವರ ಆರೋಪದಲ್ಲಿ ಸತ್ಯವಿದ್ದರೆ ಕಾನೂನು ಅದನ್ನು ಸಾಬೀತುಮಾಡಲಿ ನಂತರ ಏನಾಗ್ಬೇಕೋ ಅದು ಆಗುತ್ತೆ ಅದನ್ನು ಯಾರು ತಪ್ಪಿಸೋದಕ್ಕೆ ಆಗಲ್ಲ. ಅಲ್ಲಿವರೆಗೂ ಗಾಳಿಲಿ ಗುಂಡು ಹಾರಿಸೋದನ್ನು ಕಡಿಮೆ ಮಾಡ್ಲಿ ಎಲ್ಲರೂ ಅನ್ನೋದೇ ಸಿನಿಲಹರಿ ಆಶಯ

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಸಾಫ್ಟ್ ವೇರ್ ಟು ಸ್ಯಾಂಡಲ್‌ವುಡ್-11 ವರ್ಷದ ಸಂಭ್ರಮ; ಸಿಂಪಲ್‌ಸ್ಟಾರ್‌ಗೆ ನ್ಯಾಷನಲ್‌ಸ್ಟಾರ್ ಕಿರೀಟ !

ಅಣ್ಣಾವ್ರು, ವಿಷ್ಣುದಾದಾ, ಶಂಕರ್‌ನಾಗ್‌ರಂತಹ ದಿಗ್ಗಜರು ಕಟ್ಟಿಬೆಳೆಸಿದ ಗಂಧದಗುಡಿಯಲ್ಲಿ ಶೆಟ್ರು ನಾಯಕನಾಗಿ ಮೆರವಣಿಗೆ ಹೊರಟು ಹನ್ನೊಂದು ವರ್ಷ ತುಂಬಿದೆ. ಈ ಸಂತೋಷವನ್ನು-ಸಂಭ್ರಮವನ್ನು ಶೆಟ್ಟರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದು ಸಾಫ್ಟ್ ವೇರ್ ಕೆಲಸಕ್ಕೆ ಗುಡ್‌ಬೈ ಹೇಳಿ ಗಾಂಧಿನಗರಕ್ಕೆ ಎಂಟ್ರಿಕೊಟ್ಟ ಗೋಧಿಬಣ್ಣ ಸಾಧಾರಣ ಮೈಕಟ್ಟಿನ ಶೆಟ್ರು ಸ್ಯಾಂಡಲ್‌ವುಡ್‌ನ ಶೇಕ್ ಮಾಡಿದ್ದಾರೆ. ಹನ್ನೊಂದು ವರ್ಷದ ಸಿನಿಜರ್ನಿಯಲ್ಲಿ ನಾಯಕರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಂದು 1 ಕೋಟಿ 35 ಲಕ್ಷದ ಹೊಡೆತಕ್ಕೆ ಸಿನಿಮಾ ಸಹವಾಸವೇ ಬೇಡ ಅಂತ ನಿರ್ಧರಿಸಿದ್ದ ಶೆಟ್ಟರು ಇಂದು ಕೋಟಿ ಕೋಟಿ ಎಣಿಸುತ್ತಿದ್ದಾರೆ. ರಿಚರ್ಡ್ ಆಂಟನಿಯಾಗಿ ಹೊಸ ಸವಾಲ್‌ವೊಂದನ್ನು ಸ್ವೀಕರಿಸಿದ್ದಾರೆ.

ಶೆಟ್ಟರು ಈಗ ಕೇವಲ ಸಿಂಪಲ್‌ಸ್ಟಾರ್ ಆಗಿ ಉಳಿದಿಲ್ಲ..ಸ್ಯಾಂಡಲ್‌ವುಡ್‌ಗೆ ಮಾತ್ರ ಸೀಮಿತವಾಗಿಲ್ಲ.. ಬದಲಿಗೆ ಬಾರ್ಡರ್ ದಾಟಿದ್ದಾರೆ, ಪರಭಾಷಾ ಅಂಗಳದಲ್ಲೂ ಹವಾ ಎಬ್ಬಿಸಿದ್ದಾರೆ, ಅವನೇ ಶ್ರೀಮನ್ನಾರಾಯಣನ ಅವತಾರವೆತ್ತುವ ಮೂಲಕ ನ್ಯಾಷನಲ್‌ಸ್ಟಾರ್ ಪಟ್ಟಕ್ಕೇರಿ ನಯಾ ಮೇನಿಯಾ ಸೃಷ್ಟಿಸಿಕೊಂಡಿದ್ದಾರೆ. ಈ ಎಲ್ಲಾ ವಿಚಾರ ನಿಮ್ಮೆಲ್ಲರಿಗೂ ಗೊತ್ತು. ಅದರಂತೇ, ಬೆಳ್ಳಿಪರದೆ ಹಾಗೂ ಬಾಕ್ಸ್ಆಫೀಸ್‌ಗೂ ಗೊತ್ತು. ಹೀಗಾಗಿನೇ, ಶೆಟ್ಟರ ಹನ್ನೊಂದನೇ ವರ್ಷದ ಸಿನಿಮಾಜರ್ನಿಗೆ ಫ್ಯಾನ್ಸ್ ಜೊತೆ ಸಿಲ್ವರ್‌ಸ್ಕ್ರೀನ್ ಹಾಗೂ ಬಾಕ್ಸ್ಆಫೀಸ್ ಕೂಡ ಬೆಸ್ಟ್ ಆಫ್ ಲಕ್ ಹೇಳ್ತಿದೆ. `ರಿಚರ್ಡ್ ಆಂಟನಿಯಾಗಿ ಬಾ’ ಕಾಲೆಳೆದವರು ಕಣ್ಣುಜ್ಜಿಕೊಳ್ಳುವಂತೆ ಮಾಡ್ತೇವೆ. ನಿಮ್ಮವರೆಲ್ಲಾ ನೋಡ ನೋಡ ಎನ್ನುವಷ್ಟರಲ್ಲಿ ನಿನ್ನನ್ನು ಇಂಟರ್‌ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿಸಿಬಿಡ್ತೇವೆ ಹೀಗಂತ ಈಗಲೇ ಮಾತನಾಡಿಕೊಳ್ಳುತ್ತಿವೆ ಬೆಳ್ಳಿಪರದೆ ಹಾಗೂ ಬಾಕ್ಸ್ಆಫೀಸ್ ಡಬ್ಬಗಳು.

ಅಪ್‌ಕೋರ್ಸ್ ಮಾತನಾಡಿಕೊಳ್ಳಲೆಬೇಕು ಯಾಕಂದ್ರೆ `ರಿಚರ್ಡ್ ಆಂಟನಿ’ ಸಾಮಾನ್ಯ ಸಿನಿಮಾ ಅಲ್ಲ. ರಿಚರ್ಡ್ ಆಂಟನಿಗೆ ದುಡ್ಡು ಹಾಕುತ್ತಿರುವವರು ಸಾಮಾನ್ಯರಲ್ಲ ಕೆಜಿಎಫ್‌ನಂತಹ ಚಿನ್ನದ ಸಾಮ್ರಾಜ್ಯದ ಒಡೆಯರು. ಇಡೀ ದೇಶವೇ ಕಣ್ಣರಳಿಸಿ ನೋಡುವಂತಹ ಸಿನಿಮಾ ಕೊಟ್ಟ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಈಗ ನ್ಯಾಷನಲ್‌ಸ್ಟಾರ್ ರಕ್ಷಿತ್ ಶೆಟ್ಟಿಗೆ ಬಂಡವಾಳ ಸುರಿಯಲಿದ್ದಾರೆ. ಸಾಗರದ ಅಧಿಪತಿಯಾಗಲಿಕ್ಕೆ ಹೊರಟಿರುವ ಶೆಟ್ರಿಗೆ ಕೋಟಿ ಕೋಟಿ ಹೂಡೋದಕ್ಕೆ ಸಜ್ಜಾಗಿದ್ದಾರೆ. ಟೈಟಲ್‌ನಿಂದಲೇ ಬಜಾರ್‌ನಲ್ಲಿ ಧೂಳೆಬ್ಬಿಸಿರುವ ರಿಚರ್ಡ್ ಆಂಟನಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರ್ಮಾಣಗೊಳ್ಳಲಿದೆ. ಶೆಟ್ರಿಗೆ ರಿಚರ್ಡ್ ಆಂಟನಿ ಸವಾಲಿನ ಸಿನಿಮಾ ಆಗಿದೆ. ಗಂಧದಗುಡಿಯಲ್ಲಿ ಸ್ವಂತ ಬ್ರ್ಯಾಂಡ್ ಆದರೂ ಕೂಡ ಕಾಲೆಳೆಯುತ್ತಿರುವ ಮಂದಿಗೆ ನಾಯಕ ಕಮ್ ನಿರ್ದೇಶನಾಗಿ ಟಕ್ಕರ್ ಕೊಡಬೇಕಿದೆ ಕೊಡ್ತಾರೆ ಎನ್ನುವ ಭರವಸೆ ಶೆಟ್ಟರ ಅಭಿಮಾನಿಗಳಲ್ಲಿದೆ.

ಅಂದ್ಹಾಗೇ, ಈಗಾಗಲೇ ಶೆಟ್ಟರು ನಿರ್ದೇಶಕನಾಗಿ ಸೈ ಎನಿಸಿಕೊಂಡಿದ್ದಾರೆ. ಉಳಿದವರು ಕಂಡಂತೆ' ಸಿನಿಮಾದ ಮೂಲಕ ತಮ್ಮೊಳಗಿನ ಚಿತ್ರಬ್ರಹ್ಮನನ್ನು ಬಣ್ಣದ ಲೋಕಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ. ಬಾಕ್ಸ್ಆಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆಹೊಡೆಯಲಿಲ್ಲ ಅನ್ನೋದನ್ನ ಬಿಟ್ಟರೆ ರಕ್ಷಿತ್ ನಿರ್ದೇಶನದ ಕಲೆಗೆ ಬೆಲೆಕಟ್ಟಲಾಗದ ಪ್ರಶಂಸೆಗಳು ಈ ಚಿತ್ರಕ್ಕೆ ಹರಿದುಬಂದಿದ್ವು.ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಮೂಲಕ ಹೀರೋ ಆಗಿ ಸ್ವಲ್ಪ ಸೌಂಡ್ ಮಾಡಿದ ಶೆಟ್ಟರು, ಉಳಿದವರು ಕಂಡಂತೆ ಮೂಲಕ ಡೈರೆಕ್ಟರ್ ಕಮ್ ಹೀರೋ ಆಗಿ ಕಮಾಲ್ ಮಾಡಿದರು. ರಿಕ್ಕಿ ಚಿತ್ರ ಮಾಡಿ ಬಹುಪರಾಕ್ ಹಾಕಿಸಿಕೊಂಡರು. ಕಿರಿಕ್ ಪಾರ್ಟಿ ಮೂಲಕ ಬೆಳ್ಳಿಪರದೆಯನ್ನೇ ಹುಚ್ಚೆಬ್ಬಿಸಿ ಅವನೇ ಶ್ರೀಮನ್ನಾರಾಯಣ'ನಾಗಿ ಗಡಿದಾಟಿದರು. ಈಗಚಾರ್ಲಿ’, `ಸಪ್ತಸಾಗರದಾಚೆ ಎಲ್ಲೋ’, ರಿಚರ್ಡ್ ಆಂಟನಿ ಚಿತ್ರಗಳ ಮೂಲಕ ಸಖತ್ ಸೌಂಡ್ ಮಾಡ್ತಿದ್ದಾರೆ.

ಶೆಟ್ಟರು ಸಾಮಾನ್ಯರಲ್ಲ ಗೋಲ್ಡನ್ ಸ್ಪೂನ್ ಬಾಯಲ್ಲಿಟ್ಟುಕೊಂಡೇ ಭೂಮಿಗೆ ಬಂದವರು. ವೆಲ್ ಎಜುಕೇಟೆಡ್ ಶೆಟ್ಟರು ಹೆಸರಾಂತ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡು ೫೦೦೦೦ ಸಾವಿರ ಸಂಬಳ ಎಣಿಸುತ್ತಿದ್ದರು. ಈ ನಡುವೆ ಬಣ್ಣದ ಲೋಕದ ಕಡೆ ಆಕರ್ಷಿತರಾದರು. ಮುಖಕ್ಕೆ ಬಣ್ಣ ಹಚ್ಚಬೇಕು ಎನ್ನುವ ಕನಸು ಕಂಡರು. ದಿಗ್ಗಜರು ಕಟ್ಟಿ ಬೆಳೆಸಿದ ಗಂಧದಗುಡಿಯಲ್ಲಿ ತನ್ನದೊಂದು ಛಾಪು ಮೂಡಿಸ್ಬೇಕು ಎನ್ನುವ ಹಠಕ್ಕೆ ಬಿದ್ದರು. ಅದರಂತೇ, ನಮ್ ಏರಿಯಲ್ ಒಂದಿನಾ' ಸಿನಿಮಾಗೆ ಬಣ್ಣ ಹಚ್ಚಿಕೊಂಡು ಹೀರೋ ಆದರು. ಚೊಚ್ಚಲ ಚಿತ್ರದಲ್ಲಿ ಚಮಕ್ ಕೊಡೋದಕ್ಕೆ ಆಗಲಿಲ್ಲ ಹಾಗಂತ ರಕ್ಷಿತ್ ಸೈಡಿಗೆ ಹೋಗಲಿಲ್ಲ ಬದಲಾಗಿತುಘಲಕ್’ ಚಿತ್ರದ ಮೂಲಕ ಮತ್ತೆ ಹೀರೋ ಆಗಿ ಕ್ಯಾಮೆರಾ ಎದುರಿಸಿದರು. ಅಷ್ಟೇ ಅಲ್ಲ ಭರ್ತಿ ಒಂದೂ ಕೋಟಿ ೩೫ ಲಕ್ಷ ಬಂಡವಾಳನೂ ಸುರಿದರು. ಆದರೆ, ತುಘಲಕ್ ದರ್ಬಾರ್ ಬೆಳ್ಳಿಪರದೆ ಮೇಲೆ ನಡೆಯಲಿಲ್ಲ ಹೀಗಾಗಿ ಶೆಟ್ಟರು ಸಿನಿಮಾ ಸಹವಾಸವೇ ಬೇಡ ಮತ್ತೆ ಸಾಫ್ಟ್ ವೇರ್ ಫೀಲ್ಡ್ ಗೆ ಹೋಗಿ `ತುಘಲಕ್’ ಸಾಲ ತೀರಿಸ್ತೀನಿ ಅಂತ ಗೆಳೆಯ ರಿಷಬ್ ಶೆಟ್ಟಿ ಜೊತೆ ತ್ರಿಭುವನ್ ಥಿಯೇಟರ್ ಮುಂದೆ ಹೇಳಿಕೊಂಡು ಕಣ್ಣೀರಿಟ್ಟರು. ಆಗ ರಕ್ಷಿತ್‌ಗೆ ಧೈರ್ಯ ತುಂಬಿದ್ದು ಗೆಳೆಯ ರಿಷಬ್ ಶೆಟ್ಟಿ.

ಅಂದು ರಕ್ಷಿತ್‌ಗೆ ರಿಷಬ್ ಶೆಟ್ಟಿಯವರು ಮಗಾ ನಾನು ನಿನ್ನ ಜೊತೆ ಇರ‍್ತೀನಿ ಅಂತ ಧೈರ್ಯ ತುಂಬದೇ ಹೋಗಿದ್ದರೆ, `ತುಘಲಕ್’ ಸೋಲಿಗೆ ಹಾಗೂ ಸಾಲಕ್ಕೆ ಹೆದರಿ ಸಿನಿಮಾ ಇಂಡಸ್ಟ್ರಿಗೆ ಗುಡ್‌ಬೈ ಹೇಳಿದರೆ ಇವತ್ತು ಶೆಟ್ಟರು ನ್ಯಾಷನಲ್‌ಸ್ಟಾರ್ ಆಗುತ್ತಿರಲಿಲ್ಲ. ಸ್ಯಾಂಡಲ್‌ವುಡ್ ಮಾತ್ರವಲ್ಲ ಪರಭಾಷಾ ಮಂದಿ ರಕ್ಷಿತ್ ಚಿತ್ರಕ್ಕೋಸ್ಕರ ಕಾಯುತ್ತಿರುವ ಘಳಿಗೆ ಬರುತ್ತಿರಲಿಲ್ಲ. ಕೋಟ್ಯಾಂತರ ಅಭಿಮಾನಿಗಳು ಹುಟ್ಟಿಕೊಳ್ಳುತ್ತಿರಲಿಲ್ಲ. ನಟನಾಗಿ-ನಿರ್ದೇಶಕನಾಗಿ-ನಿರ್ಮಾಪಕನಾಗಿ ಸೈ ಎನಿಸಿಕೊಳ್ಳೋದಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಸ್ಯಾಂಡಲ್‌ವುಡ್‌ನಲ್ಲಿ ಸ್ವಂತ ಬ್ರ್ಯಾಂಡ್ ಕಟ್ಟೋದಕ್ಕೆ, ಪರಂವಃ ಸ್ಟುಡಿಯೋ ಹುಟ್ಟಿಹಾಕೋದಕ್ಕೆ, ಹೊಸ ಪ್ರತಿಭೆಗಳಿಗೆ ರೆಡ್‌ಕಾರ್ಪೆಟ್ ಹಾಕೋದಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಕೋಟಿ ಕೋಟಿ ಹಣ ಶೆಟ್ಟರ ಖಾತೆಯಲ್ಲಿ ಕುಣಿಯುತ್ತಿರಲಿಲ್ಲ. ಇಂದು ಇಷ್ಟೆಲ್ಲಾ ಸಾಧ್ಯವಾಗಿದೆ ಅಂದರೆ ಅದಕ್ಕೆ ಕಾರಣ ಸಿಂಪಲ್‌ಸ್ಟಾರ್‌ಗೆ ಸಿನಿಮಾ ಮೇಲಿರುವ ಶ್ರದ್ದಾಭಕ್ತಿ ಹಾಗೂ ಶೆಟ್ಟರ ಗೆಳೆಯರ ಬಳಗ ಅಂದರೆ ತಪ್ಪಾಗಲಿಕ್ಕಿಲ್ಲ. ಶೆಟ್ಟರು ಧೈರ್ಯ ಕಳೆದುಕೊಂಡಾಗ, ಕುಗ್ಗಿದಾಗ, ಬಿದ್ದಾಗ, ಶೆಟ್ಟರ ಸ್ನೇಹಬಳಗ ಕೈಹಿಡಿದು ಮೇಲೆತ್ತಿದೆ ಹೊಸ ಹುರುಪು ತುಂಬಿದೆ ಧೈರ್ಯ ಹೇಳಿ ಸಂತೈಸಿದೆ ಹೀಗಾಗಿ ಸಿಂಪಲ್‌ಸ್ಟಾರ್ ಸದ್ದಿಲ್ಲದೇ ನ್ಯಾಷನಲ್‌ಸ್ಟಾರ್ ಆದರೂ ಮುಂದೆ ಇಂಟರ್‌ನ್ಯಾಷನಲ್ ಸ್ಟಾರ್ ಕೂಡ ಆಗ್ತಾರೆ ಅದಕ್ಕೆ ಒಳ್ಳೆ ಟೈಮ್ ಬರಬೇಕು ಅಷ್ಟೆ. ಹೀಗಾಗಿ ಸಿಂಪಲ್‌ಸ್ಟಾರ್ ಹೇಳ್ತಿದ್ದಾರೆ ಅಪ್ನಾ ಟೈಮ್ ಆಯೇಗಾ

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!