ಚಿತ್ರೋದ್ಯಮಕ್ಕೂ ಒಂದು ಚಾನ್ಸ್‌ ಸಿಗ್ತು- ನಿರ್ಮಾಪಕ ಮುನಿರತ್ನಗೆ ಕೊನೆಗೂ ಸಿಕ್ಕಿತು ಮಂತ್ರಿ ಪಟ್ಟ !

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸಚಿವ ಸಂಪುಟ ರಚನೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಬುಧವಾರ ನೂತನ ಸಚಿವರಾಗಿ ೨೯ ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಲ್ಲಿ ಕನ್ನಡ ಚಿತ್ರರಂಗಕ್ಕೂ ಒಂದು ಮಂತ್ರಿ ಸ್ಥಾನ ಸಿಕ್ಕಿದೆ. ಅಂದ್ರೆ ಸಿನಿಮಾ ನಿರ್ಮಾಪಕರೂ ಆದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರಿಗೆ ಕೊನೆಗೂ ಮಂತ್ರಿ ಸ್ಥಾನ ಸಿಕ್ಕಿದೆ. ಸಚಿವ ಸ್ಥಾನದ ಕಾರಣಕ್ಕಾಗಿಯೇ ಅವರು ಈ ಹಿಂದೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರಾರೂ, ಆ ಸಂದರ್ಭದಲ್ಲಿ ಅವರಿಗೆ ಮಂತ್ರಿ ಸ್ಥಾನ ಕೈ ತಪ್ಪಿ ಹೊಗಿತ್ತು. ಈಗ ಮಂತ್ರಿ ಆಗುವ ಅದೃಷ್ಟ ಅವರಿಗೆ ಸಿಕ್ಕಿದೆ.

ಬುಧವಾರ ಮಧ್ಯಾಹ್ನ ಬೆಂಗಳೂರಿನ ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುನಿರತ್ಮ ಅವರು ನೂತನ ಸಚಿವರಾಗಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಕಾರಣಿ ಆಗಿದ್ದರೂ ನಿರ್ಮಾಪಕರಾಗಿ ಹಲವು ವರ್ಷಗಳಿಂದ ಚಿತ್ರೋದ್ಯಮ ಜತೆಗೆ ಗುರುತಿಸಿಕೊಡಿರುವ ಅವರು, ʼಆಂಟಿ ಪ್ರೀತ್ಸೆʼ,ʼ ರಕ್ತ ಕಣ್ಣೀರುʼ, ʼಅನಾಥರುʼ, ʼಕಠಾರಿ ವೀರ ಸುರಸುಂದರಾಂಗಿʼ ಹಾಗೂ ʼಮುನಿರತ್ಮ ಕುರುಕ್ಷೇತ್ರʼಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಅವರದು. ಅದೆಲ್ಲಕ್ಕಿಂತ ಮುಖ್ಯವಾಗಿ ಸ್ಟಾರ್‌ ಸಿನಿಮಾಗಳನ್ನೇ ನಿರ್ಮಾಣ ಮಾಡಿದ್ದು ಮಾತ್ರವಲ್ಲ, ಬಿಗ್‌ ಬಜೆಟ್‌ ಸಿನಿಮಾ ಮಾಡಿದ ಖ್ಯಾತಿಯೂ ಅವರಿಗಿದೆ.

ಅದರ ಜತೆಗೆ ಹಿಂದೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರು ಆಗಿದ್ದರು. ಹಾಗೆಯೇ ಕನ್ನಡದ ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್‌ ಅವರ ಸಂಬಂಧಿಯೂ ಹೌದು. ಈ ಮೂಲಕ ನಿರ್ಮಾಪಕರು ಆದ ಶಾಸಕ ಮುನಿರತ್ನ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಇಡೀ ಚಿತ್ರರಂಗವೇ ಖುಷಿ ಪಟ್ಟಿದೆ. ಹಾಗಂತ ಸಿನಿಮಾದಿಂದ ಸಚಿವರಾಗುತ್ತಿರುವವರಲ್ಲಿ ಇವರೇ ಮೊದಲಿಗರಲ್ಲ. ಸಿನಿಮಾಕ್ಕೂ ರಾಜಕಾರಣಕ್ಕೂ ಇರುವ ನಂಟಿನ ಇತಿಹಾಸ ದೊಡ್ಡದ್ದು. ರಾಮಕೃಷ್ಣ ಹೆಗಡೆ ಮಂತ್ರಿ ಮಂಡಲದಲ್ಲಿ ಹಿರಿಯ ನಟ ಅನಂತ್‌ ನಾಗ್‌ ಮಂತ್ರಿಯಾಗಿದ್ದು. ಆಮೇಲೆ ಜೆ.ಎಚ್.‌ ಪಟೇಲ್‌ ಕಾಲಕ್ಕೂ ಆವರು ಮಂತ್ರಿ ಆಗಿದ್ದರು.

ಮುಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅವಧಿಯಲ್ಲಿ ಹಿರಿಯ ನಟ ಅಂಬರೀಷ್‌ ವಸತಿ ಸಚಿವರಾಗಿದ್ದರು. ಹಾಗೆಯೇ ಜಯಮಾಲಾ, ಉಮಾಶ್ರೀ ಕೂಡ ಸಚಿವರಾದರು. ಸದ್ಯಕ್ಕೀಗ ಸಿನಿಮಾ ರಂಗದಿಂದ ಬಿಜೆಪಿ ಸರ್ಕಾರದ ಅವದಿಯಲ್ಲಿ ಹಿರಿಯ ನಟಿ ತಾರಾ, ಶ್ರುತಿ ನಿಗಮ ಮಂಡಳಿ ಅಧ್ಯಕ್ಷರಾಗಿದ್ದರೆ, ನಿರ್ಮಾಪಕ, ನಟ ಹಾಗೂ ನಿರ್ದೇಶಕ ಸುನೀಲ್‌ ಪುರಾಣಿಕ್‌ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದಾರೆ. ಈ ನಡುವೆ ರಾಜಕಾರಣಿಯೂ ಆಗಿರುವ ಬಿ.ಸಿ. ಪಾಟೀಲ್‌ ಅವರಿಗೂ ಸಿನಿಮಾ ನಂಟಿದೆ. ನಟರಾಗಿಯೇ ಅವರು ದೊಡ್ಡ ಯಶಸ್ಸು ಕಂಡವರು. ಆಮೂಲಕವೇ ರಾಜಕೀಯಕ್ಕೂ ಹೋದವರು. ಈಗ ಅವರು ಕೂಡ ಎರಡನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಸಿನಿಮಾ ರಂಗ ಇವರಿಗೆ ಶುಭಾಶಯ ಕೋರಿದೆ.

Related Posts

error: Content is protected !!