ಅಂಬಿ ಮಾಮ ಎನ್ನುತ್ತಿದ್ದರು ಜಯಂತಿ ; ಹೀಗನ್ನುತ್ತಿದ್ದರು ಕರ್ಣ ?

ಅಭಿನಯ ಶಾರದೆ ಜಯಂತಿಯವರು ದೈಹಿಕವಾಗಿ ಮರೆಯಾಗಿರಬಹುದು ಅಷ್ಟೇ ಶತಶತಮಾನಗಳು ಉರುಳಿದರೂ ಕೂಡ ಪಾತ್ರಗಳ ಮೂಲಕ ಅಜರಾಮರವಾಗಿರುತ್ತಾರೆ. ಮುಖಕ್ಕೆ ಬಣ್ಣ ಹಚ್ಚಿದಾಗಿನಿಂದ ಬಣ್ಣದ ಲೋಕದಲ್ಲಿ ಅಭಿನೇತ್ರಿಯಾಗಿ ಮಿಂಚಿದ ಜಯಂತಿಯವರು ಕೋಟ್ಯಾಂತರ ಮನಸ್ಸುಗಳಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಡಾ ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಉದಯ್‌ಕುಮಾರ್, ಎನ್‌ಟಿರಾಮ್‌ರಾವ್, ಜೆಮಿನಿ ಗಣೇಶನ್, ಎಂ.ಜಿ ರಾಮಚಂದ್ರನ್ ಸೇರಿದಂತೆ ಸೌತ್ ಸಿನಿಮಾ ಇಂಡಸ್ಟ್ರಿಯ ಬಹುತೇಕ ಎಲ್ಲಾ ದಿಗ್ಗಜರೊಟ್ಟಿಗೆ ತೆರೆಹಂಚಿಕೊಂಡು ಸೈ ಎನಿಸಿಕೊಂಡವರು ಜಯಂತಿಯವರು. ಇಂತಿಪ್ಪ ಈ ಎವರ್‌ಗ್ರೀನ್ ನಾಯಕಿ ರೆಬೆಲ್‌ಸ್ಟಾರ್ ಅಂಬರೀಷ್ ಅವರೊಟ್ಟಿಗೂ ಸ್ಕ್ರೀನ್ ಶೇರ್ ಮಾಡಿದ್ದರು.
ವಜ್ರದ ಜಲಪಾತ, ಲೀಡರ್ ವಿಶ್ವನಾಥ್, ಹೊಸ ತೀರ್ಪು, ಮಸಣದ ಹೂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಂಬರೀಷ್ ಹಾಗೂ ಜಯಂತಿಯವರು ಒಟ್ಟಿಗೆ ನಟಿಸಿದ್ದರು.

ಮಂಡ್ಯದ ಗಂಡು ಅಂಬರೀಷ್‌ರನ್ನ ನಟಿ ಜಯಂತಿಯವರು ಅಂಬಿಮಾಮ ಎನ್ನುತ್ತಿದ್ದರು ಅನ್ನೋದು ಇಂಟ್ರೆಸ್ಟಿಂಗ್ ವಿಷ್ಯ. ಹೌದು, ಶೂಟಿಂಗ್ ಸೆಟ್‌ನಲ್ಲಿ ರೆಬೆಲ್‌ಸ್ಟಾರ್‌ನ ಜಯಂತಿಯವರು ಅಂಬಿಮಾಮ ಎನ್ನುತ್ತಿದ್ದರಂತೆ. ಇದಕ್ಕೆ ಅಂಬ್ರೀಶ್‌ಯವರು ನೀನು `ಜೇಡರಭಲೇ’ ಎಂದು ಪ್ರೀತಿಯಿಂದಲೇ ರೇಗಿಸುತ್ತಿದ್ದರಂತೆ ಈ ಸಂಗತಿಯನ್ನ ಖಾಸಗಿ ಮಾಧ್ಯಮಕ್ಕೆ ಸಂದರ್ಶನ ಕೊಟ್ಟಾಗ ಸ್ವತಃ ಜಯಂತಿಯವರೇ ಬಿಚ್ಚಿಟ್ದಿದ್ದರು.

ಸಿನಿಮಾ ಹೊರತಾಗಿಯೂ ಅಂಬರೀಶ್ ಹಾಗೂ ಅವರ ಕುಟುಂಬದೊಟ್ಟಿಗೆ ಜಯಂತಿ ಅಮ್ಮನವರು ಆತ್ಮೀಯತೆ ಬೆಸೆದುಕೊಂಡಿದ್ದರು. ಅಭಿನಯ ಶಾರದೆಯ ಆರೋಗ್ಯ ಹದಗೆಟ್ಟಿದೆ ಎನ್ನುವ ಸುದ್ದಿ ತಿಳಿದರೆ ಸಾಕು ಅಂಬಿಯಣ್ಣ ಎಲ್ಲೇ ಇದ್ದರೂ ಓಡೋಡಿ ಬರುತ್ತಿದ್ದರು. ಆಸ್ಪತ್ರೆಗೆ ಭೇಟಿಕೊಟ್ಟು ಕಷ್ಟ-ಸುಖ ವಿಚಾರಿಸುತ್ತಿದ್ದರಲ್ಲದೇ ಜಯಂತಿ ಅಮ್ಮವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುತ್ತಿದ್ದರು. ಸುಮಲತಾ ಅಂಬರೀಷ್ ಕೂಡ ಅಮ್ಮನವರ ಕ್ಷೇಮ-ಸಮಾಚಾರ ವಿಚಾರಿಸಿಕೊಳ್ಳುತ್ತಿದ್ದರು. ಈಗ ಅಮ್ಮನವರ ಅಗಲಿಕೆಗೆ ಸುಮಲತಾ ಕೂಡ ಕಂಬನಿ ಮಿಡಿದಿದ್ದಾರೆ. `ಕನ್ನಡದ ಮೇರು ನಟಿ, ಅಭಿನಯ ಶಾರದೆ ಹಾಗೂ ನನ್ನ ನಲ್ಮೆಯ ಜಯಂತಿ ಅಮ್ಮನ ನಿಧನದ ಸುದ್ದಿ ಅತೀವ ದುಃಖ ತಂದಿದೆ. ದಶಕಗಳಿಂದ ಅವರು ನಮ್ಮ ಕುಟುಂಬದ ಸದಸ್ಯರೇ ಆಗಿದ್ದು, ನಮ್ಮ ಸುಖ ದುಃಖಗಳಲ್ಲಿ ಜೊತೆಗಿದ್ದರು. ಅವರ ನಿಧನದಿಂದ ಭಾರತದ ಚಿತ್ರರಂಗ ಒಂದು ಅಪೂರ್ವ ಅಭಿನೇತ್ರಿಯನ್ನು ಕಳೆದುಕೊಂಡು ಅನಾಥವಾಗಿದೆ’ ಎಂದು ಸುಮಲತಾ ಭಾವುಕರಾಗಿದ್ದಾರೆ.

Related Posts

error: Content is protected !!