ನಟ ಶ್ರೀಮುರಳಿ ಅವರ “ಮದಗಜ” ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಟೀಸರ್ ಕೂಡ ಬಿಡುಗಡೆಯಾಗಿ ಭರ್ಜರಿ ವೀಕ್ಷಣೆ ಪಡೆದಿತ್ತು. ಅದಷ್ಟೇ ಅಲ್ಲ, ತೆಲುಗಿನಲ್ಲೂ “ರೋರಿಂಗ್ ಮದಗಜ” ಸಿನಿಮಾದ ಟೀಸರ್ ಕೂಡ ಹೊರಬಂದು ಸಖತ್ ಸೌಂಡು ಮಾಡುತ್ತಿದೆ. ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರ, ಸದ್ಯ ಚಿತ್ರೀಕರಣದಲ್ಲಿದೆ. ಇದರ ನಡುವೆಯೇ ಅವರ ಅನಾರೋಗ್ಯ ಹದಗೆಟ್ಟ ಸುದ್ದಿ ಇದೆ. ಹೌದು, ಶ್ರೀಮುರಳಿ ಅವರಿಗೆ ಹುಷಾರಿಲ್ಲವಂತೆ. ಈ ಮಾತನ್ನು ಸ್ವತಃ ಅವರ ತಂದೆ ಚಿನ್ನೇಗೌಡ ಅವರೇ ಹೇಳಿದ್ದಾರೆ. ಹಾಗಂತ ಶ್ರೀಮುರಳಿ ಅವರ ಅಭಿಮಾನಿಗಳು ಭಯಪಡುವಂಥದ್ದೇನೂ ಇಲ್ಲ. ಇಷ್ಟಕ್ಕೂ ಚಿನ್ನೇಗೌಡ ಅವರು ಹೇಳಿದ್ದು, ಒಂದು ಚಿತ್ರದ ಪತ್ರಿಕಾಗೋಷ್ಠಿಯಲ್ಲಿ.
ಜನವರಿ 4 ರಂದು ರೇಣುಕಾಂಬ ಸ್ಟುಡಿಯೋದಲ್ಲಿ ಹೊಸಬರೇ ಸೇರಿ ಮಾಡಿರುವ “ಬ್ರೇಕ್ ಫೇಲ್ಯೂರ್” ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ಆ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ್ದು ಚಿನ್ನೇಗೌಡರು. ಪೋಸ್ಟರ್ ಲಾಂಚ್‌ಗೂ ಮೊದಲು ಮಾತನಾಡಿದ ಚಿನ್ನೇಗೌಡರು, “ಈ ಚಿತ್ರದ ಪೋಸ್ಟರ್ ಲಾಂಚ್ ಅನ್ನು ಶ್ರೀಮುರಳಿ ಅವರು ಮಾಡಬೇಕಿತ್ತು. ಆದರೆ, ಅವರಿಗೆ ಹುಷಾರಿಲ್ಲ. ಹಾಗಾಗಿ, ಅವರ ಬದಲು ನಾನು ಬರಬೇಕಾಗಿ ಬಂದಿದೆ. ಈ ಚಿತ್ರತಂಡಕ್ಕೆ ಒಳಿತಾಗಲಿ, ಎಲ್ಲರಿಗೂ ಚಿತ್ರ ಗೆಲುವು ತಂಡು ಕೊಡಲಿ” ಎಂದಷ್ಟೇ ಹೇಳಿ ಸುಮ್ಮನಾದರು.
ಅಲ್ಲಿ ಕುಳಿತಿದ್ದ ಕೆಲವರಿಗೆ ಶ್ರೀಮುರಳಿ ಅವರಿಗೇನಾಯಿತು ಎಂಬ ಪ್ರಶ್ನೆ ಕಾಡಿದ್ದು ನಿಜ. ಅದೇನೆ ಇರಲಿ, ಶ್ರೀಮುರಳಿ ತುಂಬಾ ಉತ್ಸಾಹಿ ನಟ. ಸದಾ ಎನರ್ಜಿಯಲ್ಲೇ ಕೆಲಸ ಮಾಡುತ್ತಾರೆ. ಕಳೆದ ಎರಡು ದಿನಗಳಿಂದಲೂ ಹವಾಮಾನ ಏರುಪೇರಾಗಿದೆ. ಹೀಗಾಗಿ ಸಣ್ಣಪುಟ್ಟ ಶೀತ, ನೆಗಡಿ ಸಹಜ. ಈ ಕಾರಣಕ್ಕೆ ಶ್ರೀಮುರಳಿ ಅವರು ಹೊರಗಡೆ ಬರದೇ ಇರಬಹುದು. ಹೊಸಬರ “ಬ್ರೇಕ್ ಫೇಲ್ಯೂರ್” ಚಿತ್ರದ ಪೋಸ್ಟರ್ ಲಾಂಚ್ ಕಾರ್ಯಕ್ರಮಕ್ಕೂ ಬ್ರೇಕ್ ಹಾಕಿರಬಹುದು. ಹಾಗಂತ, ಅವರ ಫ್ಯಾನ್ಸ್ ಯಾವುದೇ ಆತಂಕ ಪಡಬೇಕಾಗಿಲ್ಲ.
“ಸೂರರೈ ಪಟ್ರುʼ ಬೆನ್ನಲೇ ಸಿನಿಮಾ ಆಗುವ ಹಾದಿಯಲ್ಲಿವೆ ಹಲವು ಸಾಧಕರ ಬಯೋಪಿಕ್
ಅಯ್ಯೋ…ನಮ್ಮವರಿಗ್ಯಾಕೆ ಇದು ಹೊಳಿಲಿಲ್ಲ ? ತಮಿಳಿನ ಸೂಪರ್ ಸ್ಟಾರ್ ನಟ ಸೂರ್ಯ ಅಭಿನಯದʼ ಸೂರರೈ ಪಟ್ರು ʼ ಚಿತ್ರ ಭಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸಕ್ಸಸ್ ಕಂಡಾಗ ಕನ್ನಡದ ಸಿನಿಮಾ ಪ್ರೇಕ್ಷಕರಿಂದ ಇಂತಹ ಮಾತು ಕೇಳಿ ಬಂತು. ಗಾಂಧಿನಗರದಲ್ಲೂ ಇದು ಭಾರೀ ಚರ್ಚೆಗೆ ಗ್ರಾಸವಾಯಿತು. ಆ ಕತೆ ನಾವೇ ಮಾಡಿದ್ದರೆ, ಅದೇ ಕನೆಕ್ಷನ್ ನಮ್ದೆ ಆಗ್ತಿತಲ್ವಾ ಅಂತ ಕೆಲವು ನಿರ್ಮಾಪಕರು ಅಂದುಕೊಂಡ್ರಂತೆ.
ಕ್ಯಾಪ್ಟನ್ ಗೋಪಿನಾಥ್
ಅದು ಯಾಕೆ ಗೊತ್ತಾ, ʼಸೂರರೈ ಪಟ್ರುʼ ಸಿನಿಮಾ ಕತೆ ಕನ್ನಡದ್ದೇ. ಅದು ಕನ್ನಡದವರೇ ಆದ ಕ್ಯಾಫ್ಟನ್ ಗೋಪಿನಾಥ್ ಅವರ ಜೀವನ ಆಧರಿತ ಸಿನಿಮಾ. ಅದೇ ರೀತಿ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಜೀವನ ಕೂಡ ಸಿನಿಮಾ ಆಗುತ್ತಿದೆ. ಅವರು ೫ ರೂ. ಇಟ್ಕೊಂಡು ಇನ್ಫೋಸಿಸ್ ಅಂತಹ ದೊಡ್ಡ ಸಂಸ್ಥೆ ಕಟ್ಟಿದವರು. ಅವರೇನು ಅನ್ನೋದು ಇಡೀ ಜಗತ್ತಿಗೆ ಗೊತ್ತು. ಅವರ ಸಿನಿಮಾ ಅಂದ್ರೆ ಅದು ಬರೀ ಪ್ಯಾನ್ ಇಂಡಿಯಾ ಅಲ್ಲ, ವರ್ಲ್ಡ್ ವೈಡ್ ಮಾರ್ಕೆಟ್ ಕಾಣುವ ಸಿನಿಮಾ. ಆದ್ರೆ ಅದು ಆಗುತ್ತಿರುವುದು ಕನ್ನಡದಲಲ್ಲ, ಹಿಂದಿಯಲ್ಲಿ ಎನ್ನುವುದು ಕನ್ನಡಿಗರಿಗಾದ ಬೇಸರ.
ನಾರಾಯಣ ಮೂರ್ತಿ
ಕನ್ನಡದ ಸಿನಿಮಾ ಮಂದಿಗೆ ಎಚ್ಚರ ಆಗುವುದು ಹೀಗೆಯೇ ? ಯಾರಾದ್ರೂ, ನಮ್ದೆ ಊರಿನ ಸಾಧಕರ ಕತೆ ಅಥವಾ ಸಂಪನ್ಮೂಲ ಬಳಸಿಕೊಂಡು ದೊಡ್ಡಮಟ್ಟದಲ್ಲಿ ಗೆದ್ದಾಗ, ಇಲ್ಲವೇ ಹಣ ಮಾಡಿಕೊಂಡಾಗ ನಾವು ನಿದ್ದೆಯಿಂದ ಏಳುತ್ತೇವೆ. ಅರರೆ…ಅದು ನಮ್ದೆ ಕತೆ ಅಲ್ವಾ , ನಮ್ದೇ ಸಂಪನ್ಮೂಲ ಅಲ್ವೇ, ಅದನ್ನು ನಾವೇ ಬಳಸಿಕೊಂಡಿದ್ರೇ, ಅಷ್ಟು ದುಡ್ಡು ನಾವೇ ದುಡಿದುಕೊಳ್ಳಬಹುದಾಗಿತ್ತು ಅಲ್ವಾ , ಅಂತೆಲ್ಲ ಯೋಚಿಸುತ್ತೇವೆ. ಈಗಲೂ ಅದೇ ಆಗಿದೆ !
ಬಿ. ಎಸ್. ಯಡಿಯೂರಪ್ಪ
ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆ ಕಟ್ಟಿ ದೊಡ್ಡ ಸಕ್ಸಸ್ ಕಂಡಿದ್ದ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಆಧರಿತ ʼಸೂರರೈ ಪಟ್ರುʼ ಬಂದು ಹೋದ ಮೇಲೆ ಕನ್ನಡದ ಸಿನಿಮಾ ಮಂದಿ ಕೊಂಚ ಎಚ್ಚೇತ್ತುಕೊಂಡ ಹಾಗೆ ಕಾಣುತ್ತಿದೆ. ನಮ್ಮವರ ಕತೆಗಳನ್ನು ನಾವೇ ಬೆಳ್ಳಿತೆರೆಗೆ ತರಬೇಕೆನ್ನುವ ಛಲವೋ, ಅಥವಾ ನಮ್ಮ ಸಾಧಕರ ಮೇಲಿನ ಕಾಳಜಿಯೋ ಗೊತ್ತಿಲ್ಲ, ಒಟ್ಟಿನಲ್ಲಿ ಕನ್ನಡದ ಹಲವು ಅಗ್ರಗಣ್ಯ ಸಾಧಕರ ಜೀವನದ ಕತೆಗಳ ಮೇಲೆ ಸಿನಿಮಾ ಮಂದಿ ಕಣ್ಣು ಬಿದ್ದಿದೆ.
ಮೂಲಗಳ ಪ್ರಕಾರ ಈಗ ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರ ಜೀವನ ಆಧರಿಸಿ ಯಾರೋ ಸಿನಿಮಾ ಮಾಡಲು ಹೊರಟಿದ್ದಾರೆನ್ನುವ ಸುದ್ದಿಯಿದೆ. ಅದು ಎಷ್ಟರ ಮಟ್ಟಿಗೆ ಸತ್ಯವೋ, ಇನ್ನು ಗೊತ್ತಾಗಿಲ್ಲ. ಆದರೆ ಯಾರೇ ಸಿನಿಮಾ ಮಾಡಲು ಹೊರಟರು ಅದಕ್ಕೆ ಸುಮಲತಾ ಅವರ ಒಪ್ಪಿಗೆ ಬೇಕು, ಜತೆಗೆ ಯಾವ ವಿಚಾರದ ಮೇಲೆ ಸಿನಿಮಾ ಮಾಡಲು ಹೊರಟಿದ್ದಾರೆಂಬ ಬಗ್ಗೆ ಮಾಹಿತಿ ಪಡೆಯಬೇಕು, ಇದೆಲ್ಲ ಮುಗಿದ ಮೇಲೆ ಸಿನಿಮಾ ಆಗುವುದು ವಾಡಿಕೆ. ಸದ್ಯಕ್ಕೆ ಹಾಗೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ಸುಮಲತಾ ಅಂಬರೀಶ್
ಗೊತ್ತಿಲ್ಲ, ಇದು ಗಾಸಿಪ್ ಕೂಡ ಆಗಿರಬಹುದು. ಅದರಾಚೆ, ಬಹಳಷ್ಟು ಸಾಧಕರ ಜೀವನ ಕತೆಗಳ ಮೇಲೆ ಸಿನಿಮಾ ಮಂದಿ ಕಣ್ಣಿಟ್ಟಿದ್ದಾರೆ. ಈಗಾಗಲೇ ಆ ನಿಟ್ಟಿನಲ್ಲಿ ಕೆಲವರು ಕೆಲಸ ಕೂಡ ಶುರು ಮಾಡಿರುವ ಬಗ್ಗೆ ಮಾತುಗಳು ಕೇಳಿ ಬಂದಿವೆ. ಸದ್ಯಕ್ಕೆ ಬಯೋಪಿಕ್ ಸಿನಿಮಾಗಳ ಸಾಲಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜತೆಗೆ ವಿಆರ್‌ಎಲ್ ಸಂಸ್ಥೆಯ ಸ್ಥಾಪಕ ವಿಜಯ್ ಸಂಕೇಶ್ವರ ಹೆಸರು ಕೂಡ ಚಾಲ್ತಿಯಲ್ಲಿವೆ.
ಸಿದ್ದರಾಮಯ್ಯ
ಈ ಪ್ರಯತ್ನಗಳ ಹಿಂದೆ ಯಾರೆಲ್ಲ ಇದ್ದಾರೆನ್ನುವುದು ಸದ್ಯಕ್ಕೆ ನಿಗೂಢ. ಯಾವುದೇ ಮಾಹಿತಿಗಳು ರಿವೀಲ್ ಆಗಿಲ್ಲ. ಆದರೆ ಈ ಇಬ್ಬರು ಸಾಧಕರ ಕುರಿತು ಸಿನಿಮಾ ಆಗುತ್ತಿರುವುದು ನಿಜ ಎನ್ನುತ್ತಿವೆ ಮೂಲಗಳು. ಹಾಗೆ ನೋಡಿದರೆ, ಈ ಇಬ್ಬರು ಸಾಧಕರ ಜೀವನ ಕತೆಗಳು ʼಸೂರರೈ ಪಟ್ರುʼ ಸಿನಿಮಾ ಕತೆಗೇನು ಕಮ್ಮಿ ಇಲ್ಲ. ಕರ್ನಾಟಕ ಕಂಡ ರಾಜಕಾರಣಿಗಳಲ್ಲಿ ಯಡುಯೂರಪ್ಪ ಹಾಗೂ ಸಿದ್ದರಾಮಯ್ಯ ಬರೀ ಜನ ನಾಯಕರು ಮಾತ್ರವಲ್ಲ, ವರ್ಣರಂಜಿತ ರಾಜಕಾರಣಿಗಳು ಕೂಡ. ಅವರ ಕುರಿತು ಸಿನಿಮಾ ಮಾಡುವುದು ಒಂದು ಕ್ರೇಜ್. ಸದ್ಯಕ್ಕೆ ಇವುಗಳ ಹಿಂದಿರುವವರು ಯಾರು? ಸಸ್ಪೆನ್ಸ್.
ಸಿನಿಮಾ ಮಂದಿಗೆ ಹೋಳಿಗೆ ರುಚಿ ತೋರಿಸಿದ ಭಾಸ್ಕರ್ ಮನೆ ಹೋಳಿಗೆ ಹಾಗೂ ಕುರುಕ್ ತಿಂಡಿ ಮಳಿಗೆ
ಬಿಗ್‌ಬಾಸ್ ಖ್ಯಾತಿಯ ನಟ ಶೈನ್‌ಶೆಟ್ಟಿ, ಎಲ್ಲಾ ಬಿಟ್ಟು ಮನೆ ಹೋಳಿಗೆ ಕುರುಕ್ ತಿಂಡಿ ಮಾರಾಟ ಮಳಿಗೆ ತೆರೆದ್ರಾ ? ಬೆಂಗಳೂರಿನ ಬನಶಂಕರಿಯಲ್ಲಿ ಮೊನ್ನೆ ” ಭಾಸ್ಕರ್ ಮನೆ ಹೋಳಿಗೆ ಹಾಗೂ ಕುರುಕ್ ತಿಂಡಿʼ ಮಾರಾಟ ಮಳಿಗೆ ಮುಂದೆ ನಟ ಶೈನ್ ಶೆಟ್ಟಿ ಅವರನ್ನು ಕಂಡಾಗ ಎಲ್ಲರೂ ಅಂದುಕೊಂಡಿದ್ದೇ ಹಾಗೆ. ಆದರೆ ಅದು ಹಾಗಲ್ಲ. ʼಭಾಸ್ಕರ್ ಮನೆ ಹೋಳಿಗೆ ಹಾಗೂ ಕುರುಕ್ ತಿಂಡಿʼ ಮಾರಾಟ ಮಳಿಗೆಯ ಹತ್ತನೇ ಶಾಖೆ ಅಂದು ಉದ್ಘಾಟನೆ ಗೊಂಡಿತು. ಅಲ್ಲಿಗೆ ಮುಖ್ಯ ಅತಿಥಿಯಾಗಿ ಬಂದಿದ್ದು ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ. ಅವರೊಂದಿಗೆ ಒಗ್ಗರಣೆ ಡಬ್ಬಿ ಖ್ಯಾತಿಯ ಮುರುಳಿ, ಬಿಜೆಪಿ ಮುಖಂಡ ಉಮೇಶ್ (ಕಟ್ಟಾಳ್), ಬಿಬಿಎಂಪಿ ವಿರೋಧ ಪಕ್ಷದ ನಾಯಕ ಬಸವರಾಜ್, ಧರ್ಮಗಿರಿ ದೇವಸ್ಥಾನದ ಸ್ಥಾಪಕ ವೆಂಕಟೇಶ್ ಗೆಸ್ಟ್ ಆಗಿ ಬಂದಿದ್ದರು. ಅವರೆಲ್ಲ ಭಾಸ್ಕರ್ ಮನೆ ಹೋಳಿಗೆ ಹಾಗೂ ಕುರುಕ್ ತಿಂಡಿ ಹೊಸ ಶಾಖೆಗೆ ಶುಭ ಕೋರಿದರು.
ಇನ್ನು ಭಾಸ್ಕರ್ ಮನೆ ಹೋಳಿಗೆ ಹಾಗೂ ಕುರುಕ್ ತಿಂಡಿ ಮಾರಾಟ ಮಳಿಗೆಗೂ ಸಿನಿಮಾ ಮಂದಿಗೂ ಅಪಾರವಾದ ನಂಟು. ಅದಕ್ಕೆ ಕಾರಣ ಅದರ ಗುಣಮಟ್ಟ. ಬೆಂಗಳೂರು, ಹುಬ್ಬಳ್ಳಿ, ಮಂಗಳೂರಿನಲ್ಲಿ ಅದು ಶಾಖೆಗಳನ್ನು ಹೊಂದಿದ್ದು, ಗ್ರಾಹಕರ ಪಾಲಿಗೆ ಮನೆ ಮಾತು. ನೂತನ ಶಾಖೆಯ ಆರಂಭದ ನೆನಪಿಗಾಗಿ ಅಂದು ಒಂದು ರೂಪಾಯಿಗೆ ಒಂದು ಹೋಳಿಗೆ ಮಾರಾಟ ಮಾಡಿದ್ದು ವಿಶೇಷವಾಗಿತ್ತು.
ಬಹುಭಾಷಾ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಅವರ ವಿವಾಹ ಕಾರ್ಯಕ್ರಮ ಡಿಸೆಂಬರ್ 28 ರಂದು ನಡೆಯಿತು. ಗೆಳೆಯ ಅಕ್ಷಯ್ ಅವರನ್ನು ನಿಹಾರಿಕಾ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ. ಎರಡು ಕುಟುಂಬದವರ ಸಮ್ಮುಖದಲ್ಲಿ ಅಕ್ಷಯ್ ಹಾಗೂ ನಿಹಾರಿಕಾ ವಿವಾಹ ಕಾರ್ಯಕ್ರಮ ನಡೆಯಿತು. ಇದೀಗ ಈ ನವ ದಂಪತಿಯ ಆರತಕ್ಷತೆ ಕಾರ್ಯಕ್ರಮ ಜನವರಿ ಎರಡನೇ ವಾರ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿ ಈಗ ಗಣ್ಯರನ್ನು ಆಹ್ವಾನಿಸುವುದರಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರೋದ್ಯಮ, ರಾಜಕೀಯ ಸೇರಿದಂತೆ ಎಲ್ಲಾ ವಿಭಾಗದ ಸ್ನೇಹಿತರು, ಹಿತೈಷಿಗಳಿಗೂ ಆಹ್ವಾನ ನೀಡಲಾಗುತ್ತಿದೆ. ವಿಶೇಷವಾಗಿ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಗಳ ಆರತಕ್ಷತೆ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.
” ನಾವು ಅವರನ್ನು ನಿಗದಿತ ಸಮಯದಲ್ಲಿ ಭೇಟಿ ಮಾಡಿದ ಸಂದರ್ಭ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡ ಮುಖ್ಯಮಂತ್ರಿ ಅವರು, ಉಭಯ ಕುಶಲೋಹಾರಿ ಮಾತುಗಳ ನಂತರ ನಮ್ಮ ಆಹ್ವಾನ ಸ್ವೀಕರಿಸಿ, ಪ್ರೀತಿಯಿಂದ ಬರುವುದಾಗಿ ಹೇಳಿದ್ದಾರೆ. ಅವರು ಬರುವ ನಿರೀಕ್ಷೆ ನಮಗಿದೆʼ ಎಂದು ನಟ ರಮೇಶ್ ಅರವಿಂದ್ ಪ್ರತಿಕ್ರಿಯಿಸಿದ್ದಾರೆ.
ಕನ್ನಡದಲ್ಲಿ ಈಗಾಗಲೇ “ಚಡ್ಡಿದೋಸ್ತ್” ಸಿನಿಮಾ ಬಂದು ಹೋಗಿದ್ದು ಎಲ್ಲರಿಗೂ ಗೊತ್ತಿದೆ. ಈಗ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರದ ಸರದಿ. ಹೌದು, ಈಗಾಗಲೇ ಈ ಸಿನಿಮಾ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ತೆರೆಗೆ ಬರಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇಷ್ಟರಲ್ಲೇ ಚಿತ್ರ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದೆ.
ಅಂದಹಾಗೆ, ಈ “ಚಡ್ಡಿದೋಸ್ತ್”ಗಳು ಬೇರಾರೂ ಅಲ್ಲ, “ಆಸ್ಕರ್” ಕೃಷ್ಣ ಮತ್ತು ಲೋಕೇಂದ್ರ ಸೂರ್ಯ. ಈ ಪೈಕಿ “ಆಸ್ಕರ್” ಕೃಷ್ಣ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ “ಆಸ್ಕರ್”, “ಮನಸಿನ ಮರೆಯಲಿ”, “ಮಿಸ್ ಮಲ್ಲಿಗೆ”,”ಮೋನಿಕಾ ಈಸ್ ಮಿಸ್ಸಿಂಗ್” ಸಿನಿಮಾಗಳನ್ನು ನಿರ್ದೇಶಿಸಿದ್ದ “ಆಸ್ಕರ್” ಕೃಷ್ಣ ಈಗ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಸಿನಿಮಾ ಮಾಡಿದ್ದಾರೆ. ಇದೊಂದು ಕಾಮಿಡಿ ಥ್ರಿಲ್ಲರ್ ಕಥಾಹಂದರ ಹೊಂದಿದೆ.
ಇನ್ನು ಚಿತ್ರವನ್ನು ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್‍ರಾಜ್ ಅವರು ನಿರ್ಮಿಸಿದ್ದಾರೆ. ನಿರ್ದೇಶಕ “ಆಸ್ಕರ್” ಕೃಷ್ಣ ಅವರು ಇಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಲೋಕೇಂದ್ರ ಸೂರ್ಯ ಕೂಡ ಸಾಥ್ ನೀಡಿದ್ದಾರೆ. “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್‌ಸ್ಬುಟ್ಟ” ಚಿತ್ರ ಈಗಾಗಲೇ ಡಬ್ಬಿಂಗ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲವನ್ನೂ ಮುಗಿಸಿಕೊಂಡು ಬಿಡುಗಡೆಗೆ ರೆಡಿಯಾಗಿದೆ. ಇತ್ತೀಚೆಗೆ ಚಿತ್ರದ ಸೆನ್ಸಾರ್ ಕೂಡ ಆಗಿದೆ.
ಸದ್ಯದಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾ ರಿಲೀಸ್ ಮಾಡುವ ಯೋಚನೆ ನಿರ್ದೇಶಕರದ್ದು. ಅಂದಹಾಗೆ, ಇದು ಕೌಂಡಿನ್ಯ ಅವರ “ಮೈ ಡಿಯರ್ ಫ್ರೆಂಡ್” ಎನ್ನುವ ಕಾದಂಬರಿಯನ್ನು ಆಧರಿಸಿದೆ. ಮತ್ತೊಬ್ಬ ನಾಯಕ ಲೋಕೇಂದ್ರ ಸೂರ್ಯ ಅವರು ಇದಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಈ ಸಿನಿಮಾಗೆ ಮಲಯಾಳಿ ಬೆಡಗಿ ಗೌರಿನಾಯರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಅನಂತ್ ಆರ್ಯನ್ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಗಗನ್‍ಕುಮಾರ್ ಅವರ ಛಾಯಾಗ್ರಹಣ, ಮರಿಸ್ವಾಮಿ ಅವರ ಸಂಕಲನ, ಅಕುಲ್ ಅವರ ನೃತ್ಯ ನಿರ್ದೇಶನ ಹಾಗೂ ವೈಲೆಂಟು ವೇಲು ಅವರ ಸಾಹಸ ನಿರ್ದೇಶನವಿದೆ.
ಸದ್ಯಕ್ಕೆ ಕೊರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಶುರುವಾಗಿಲ್ಲ. ಕೆಲವು ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಬಹುತೇಕ ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿದ್ದಂತೆಯೇ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಇಡದೆ.
ಚಿತ್ರದಲ್ಲಿ ರೆಡ್ ಅಂಡ್ ವೈಟ್ ಸೆವೆನ್‍ರಾಜ್, ಸಿ.ವಿ.ಜಿ. ಅವರು ಖಳನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಸರಿ, ಇಲ್ಲಿ ಯಾವ ದೋಸ್ತ್ ಏನೆಲ್ಲಾ ಮಾಡ್ತಾನೆ ಎಂಬ ವಿಷಯ ತಿಳಿದುಕೊಳ್ಳಬೇಕಾದರೆ, ಚಿತ್ರ ಬರುವವರೆಗೆ ಕಾಯಲೇಬೇಕು.
ಹೊಂಬಾಳೆ ಯುಟ್ಯೂಬ್ ಚಾನೆಲ್‌ನಲ್ಲಿ ಜನವರಿ 8ರಂದು ಯಶ್ ಬರ್ತ್‌ಡೇಗೆ ಟೀಸರ್ ಬಿಡುಗಡೆ
ಕನ್ನಡ ಚಿತ್ರರಂಗದಲ್ಲಿ “ಕೆಜಿಎಫ್” ಬಹುದೊಡ್ಡ ಬಜೆಟ್ ಸಿನಿಮಾ. ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಜೋರು ಸುದ್ದಿಯಾದ ಚಿತ್ರವೂ ಹೌದು. ಈಗ “ಕೆಜಿಎಫ್ -೨” ಮೇಲೆ ಎಲ್ಲರಿಗೂ ಸಾಕಷ್ಟು ನಿರೀಕ್ಷೆಯಂತೂ ಇದೆ. ಅದಕ್ಕೆ ಕಾರಣ, ಮೊದಲ ಭಾಗ ಮಾಡಿದ ಮೋಡಿ. ಈಗ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.
ಯಶ್ ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಜನವರಿ 8 ರಂದು ಯಶ್ ಅವರ ಹುಟ್ಟುಹಬ್ಬ ಇರುವದರಿಂದ, ಅಂದೇ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಜೋರು ತಯಾರಿ ನಡೆಸುತ್ತಿದೆ. ಈ ಟೀಸರ್ ಹೊಂಬಾಳೆ ಫಿಲಂಸ್ ಯುಟ್ಯೂಬ್ ಚಾನೆಲ್‌ನಲ್ಲೇ ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ “ಕೆಜಿಎಫ್-೨” ಸಾಕಷ್ಟು ಕುತೂಹಲ ಕೆರಳಿಸಿರುವುದಂತೂ ನಿಜ.
ಆ ಕುತೂಹಲಕ್ಕೆ ಕಾರಣವೆಂದರೆ, ನಿರ್ದೇಶಕ ಪ್ರಶಾಂತ್ ನೀಲ್ ಅವರು, “ಕೆಜಿಎಫ್-೨” ಚಿತ್ರದ ಹೊಸದೊಂದು ಫೋಟೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಫೋಟೋದೊಂದಿಗೆ “ಸಾಮ್ರಾಜ್ಯದ ಬಾಗಿಲು ತೆರೆಯಲು ಕ್ಷಣಗಣನೆ ಪ್ರಾರಂಭವಾಗಿದೆ” ಎಂಬ ಕ್ಯಾಪ್ಷನ್ ಕೂಡ ಹಾಕಿದ್ದಾರೆ. “ಕೆಜಿಎಫ್ -2” ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಒಂದಷ್ಟು ಬಾಕಿ ದೃಶ್ಯಗಳು, ಕೆಲ ಕೆಲಸಗಳನ್ನು ಮಾತ್ರ ಚಿತ್ರತಂಡ ಉಳಿಸಿಕೊಂಡಿದ್ದು, ಅದರ ಕಡೆ ಗಮನಹರಿಸಿದೆ.
ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್‌ದತ್ ಅಭಿನಯಿಸಿರುವುದರಿಂದ ಇನ್ನಷ್ಟು ನಿರೀಕ್ಷೆಯನ್ನೂ ಹೆಚ್ಚಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಯಶ್ ಹುಟ್ಟುಹಬ್ಬದ ಬಳಿಕ ಚಿತ್ರಕ್ಕೆ ಕುಂಬಳಕಾಯಿ ಹೊಡೆಯುವ ಯೋಚನೆ ತಂಡದ್ದು. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣುತ್ತಿರುವುದು ವಿಶೇಷತೆಗಳಲ್ಲೊಂದು.
ಇನ್ನು, ಹೊಂಬಾಳೆ ಫಿಲಂಸ್ ಬ್ಯಾನರ್‌ನಡಿ ವಿಜಯ್ ಕಿರಗಂದೂರು ಈ ಅದ್ಧೂರಿ ಚಿತ್ರಕ್ಕೆ ನಿರ್ಮಾಪಕರು. ಭುವನ್ ಗೌಡ ಕ್ಯಾಮೆರಾ ಹಿಡಿದರೆ, ರವಿಬಸ್ರೂರು ಸಂಗೀತವಿದೆ.
ಹಿರಿಯ ನಟ ಶನಿಮಹದೇವಪ್ಪ ವಿಧಿ ವಶರಾಗಿದ್ದಾರೆ. ದೀರ್ಘ ಕಾಲದ ಅನಾರೋಗ್ಯ ದ ಜತೆಗೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು, ಭಾನುವಾರ ಸಂಜೆ ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
88ವರ್ಷದ ಹಿರಿಯ ನಟ ಶನಿ ಮಹದೇವಪ್ಪ. ಕನ್ನಡ, ತೆಲುಗು, ತಮಿಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಮೇರು ನಟ ಡಾ ರಾಜ್ಕುಮಾರ್ ಜೊತೆಯಲ್ಲಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹ ನಟಿಸಿದ್ದರು. ಕವಿರತ್ನ ಕಾಳಿದಾಸ, ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ ಸೇರಿದಂತೆ ಇತರೆ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದರು.
ನಾಳೆ( ಜ.೪) ಸುಮನಹಳ್ಳಿಯ ಚಿತಾಗಾರದಲ್ಲಿ ಮಹದೇವಪ್ಪರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಬೆಳಕವಾಡಿ ಶನಿಮಹದೇವಪ್ಪರ ಹುಟ್ಟೂರು. ಅವರ ತಂದೆ ಕೆಂಚಪ್ಪ ಹಳ್ಳಿಯ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ತಂದೆ ನಟಿಸುತ್ತಿದ್ದ ನಾಟಕಗಳನ್ನು ನೋಡುತ್ತಾ ಬೆಳೆದ ಅವರು ರಂಗಭೂಮಿಯತ್ತ ಆಕರ್ಷಿತರಾದರು. ‘ರಾಜಾ ವಿಕ್ರಮ’ ನಾಟಕದೊಂದಿಗೆ ಬಣ್ಣ ಹಚ್ಚಿದ ಅವರಿಗೆ ‘ಶನೀಶ್ವರ ಮಹಾತ್ಮೆ’ಯ ಶನಿದೇವನ ಪಾತ್ರ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಈ ಯಶಸ್ಸಿನೊಂದಿಗೆ ‘ಮಹದೇವಪ್ಪ’ ಮುಂದೆ ‘ಶನಿಮಹದೇವಪ್ಪ’ ಎಂದೇ ಹೆಸರಾದರು. ಕನ್ನಡ ಥಿಯೇಟರ್ಸ್ ಮತ್ತು ಗುಬ್ಬಿ ಕಂಪನಿಯ ‘ಬಡವನ ಬಾಳು’, ‘ಅತ್ತೆ ಸೊಸೆ’, ‘ಬಿಡುಗಡೆ’, ‘ಸತ್ಯವಿಜಯ’, ‘ಚಂದ್ರಹಾಸ’ ನಾಟಕಗಳಲ್ಲಿ ನಾಯಕನಾಗಿ ಅಭಿನಯಿಸಿದರು.
‘ಧರ್ಮಸ್ಥಳ ಮಹಾತ್ಮೆ’ (1962) ಚಿತ್ರದ ಬ್ರಹ್ಮನ ಪಾತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಶನಿಮಹದೇವಪ್ಪ ಮುಂದೆ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುತ್ತಾ ಬಂದರು. ‘ಭಕ್ತ ಕುಂಬಾರ’ ಚಿತ್ರದಲ್ಲಿ ಜ್ಞಾನೇಶ್ವರನಾಗಿ, ‘ಮೂರೂವರೆ ವಜ್ರಗಳು’ ಚಿತ್ರದಲ್ಲಿ ಶಕುನಿಯಾಗಿ, ‘ಕವಿರತ್ನ ಕಾಳಿದಾಸ’ ಚಿತ್ರದಲ್ಲಿ ಡಿಂಡಿಮ ಕವಿಯಾಗಿ… ಹೀಗೆ ಹತ್ತಾರು ಪಾತ್ರಗಳಲ್ಲಿ ಶನಿಮಹದೇವಪ್ಪ ಸಿನಿಪ್ರೇಮಿಗಳಿಗೆ ನೆನಪಾಗುತ್ತಾರೆ. ವರನಟ ರಾಜಕುಮಾರ್ ಅವರಿಗೆ ಆಪ್ತರಾಗಿದ್ದ ಅವರು ರಾಜ್ ಅಭಿನಯದ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದೊಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶನಿಮಹದೇವಪ್ಪ ಇಂದು ಇಹಲೋಕ ತ್ಯಜಿಸಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ರಾತ್ರೋರಾತ್ರಿ ಏನಾಗಬಹುದು? ಸುಮ್ಮನೆ ಉಹಿಸಿಕೊಂಡರೆ, ನೂರೆಂಟು ಘಟನೆಗಳು ನೆನಪಾಗಬಹುದು. ದರ್ಘಟನೆಗಳು ನಡೆಯಬಹುದು, ಸರ್ಕಾರಗಳೇ ಬದಲಾಗಬಹುದು, ಅಪರಿಚಿತ ಕೂಡ ರಾತ್ರೋರಾತ್ರಿ ಸ್ಟಾರ್ ಆಗಬಹುದು, ಇಲ್ಲವೇ ರಾತ್ರೋರಾತ್ರಿ ಒಂದು ದೇಶ ಬಿಟ್ಟು ಇನ್ನೊಂದು ದೇಶಕ್ಕೆ ಪಯಣ ಬೆಳಿಸಿಬಿಡಬಹುದು, ಇಲ್ಲವೇ ರಾತ್ರೋರಾತ್ರಿ ದರೋಡೆಗಳು,ಕೊಲೆ – ಸುಲಿಗೆಗಳು..ಹೀಗೆ ಏನೇನೋಆಗಬಹುದು. ಸದ್ಯಕ್ಕೆ ಇದರಲ್ಲಿ ಇಲ್ಲಿ ಯಾವುದು ಘಟಿಸುತ್ತೋ ಗೊತ್ತಿಲ್ಲ. ನಿರ್ಮಾಪಕ ಪವನ್ ಕುಮಾರ್ ಮಾತ್ರ ‘ರಾತ್ರೋರಾತ್ರಿ’ ಎನ್ನುವ ಹೆಸರಲ್ಲಿ ಒಂದು ಸಿನಿಮಾ ಮಾಡಲು ಹೊರಟಿದ್ದಾರೆ.
ಚಿತ್ರಕ್ಕೆ ಅವರು ನಿರ್ಮಾಪಕ ಕಮ್ ನಾಯಕ ನಟ. ಡೀಲ್ ಮುರುಳಿ ಇದರ ನಿರ್ದೇಶಕ. ಶ್ರೀಧರ್ ನರಸಿಂಹನ್ ಇದರ ಸಂಗೀತ ನಿರ್ದೇಶಕ. ಹಾಗೆಯೇ, ಕಿರಣ್ ಗಜ, ಅರುಣ್ ಥಾಮಸ್, ಹರೀಶ್ ನಟರಾಜನ್, ಸುನೀಲ್ ಮಂಡ್ಯ ಚಿತ್ರದ ತಾಂತ್ರಿಕ ವಿಭಾಗದಲ್ಲಿದ್ದಾರೆ. ಉಳಿದಂತೆ ಚಿತ್ರದ ತಾರಾಗಣದ ಜತೆಗೆ ಪವನ್ ಕುಮಾರ್ ಪ್ರಕಾರ ರಾತ್ರೋರಾತ್ರಿ ಏನ್ ನಡೆಯುತ್ತೆ ಅಂತ ಜ.4 ರಂದು ಚಿತ್ರ ತಂಡ ಸುದ್ದಿ ಗೋಷ್ಠಿಯಲ್ಲಿ ಎಲ್ಲವನ್ನು ರಿವೀಲ್ ಮಾಡಲಿದೆ.
ಕೃತಿಕಾ ರವೀಂದ್ರಗೆ ಸಾಥ್ ಕೊಟ್ಟ ಹ್ಯಾಂಡ್ ಸಮ್ ಗಾಯ್ ವರುಣ್ ಗೌಡ
ಸ್ಟಾರ್ ಗಳೇ ಈಗ ಅದ್ದೂರಿ ವೆಚ್ಚದ ಆಲ್ಬಂಗಳಲ್ಲಿ ಕಾಣಿಸಿಕೊಳ್ಳುವುದು ಮಾಮೂಲಾಗುತ್ತದೆ.ಮೊನ್ನೆ ಮೊನ್ನೆಯಷ್ಟೇ ಲಾಂಚ್ ಆಗಿದ್ದ ಚಂದನ್ ಶೆಟ್ಟಿ ಅವರ ಮ್ಯೂಜಿಕ್ ವಿಡಿಯೋ ಆಲ್ಬಂನಲ್ಲಿ ನಟಿ ನಿಶ್ವಿಕಾ ನಾಯ್ಡ ಸೊಂಟ ಬಳುಕಿಸಿದ್ದನ್ನು ನೀವು ನೋಡಿದ್ರಿ. ಈಗ ಸುಕೃಶಿ ಕ್ರಿಯೇಷನ್ಸ್ ಸುಕೃಶಿ ಕ್ರಿಯೇಷನ್ಸ್ ಸಂಸ್ಥೆ ಹೊರ ತಂದಿರುವ ಅಂತಹದೇ ಅದ್ದೂರಿ ವೆಚ್ಚದ ಆಲ್ಬಮ್ ಸಾಂಗ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿ ಕೃತಿಕಾ ರವೀಂದ್ರ ಭರ್ಜರಿ ಯಾಗಿ ಮಿಂಚಿದ್ದಾರೆ.ಹ್ಯಾಂಡ್ ಸಮ್ ಗಾಯ್ ವರುಣ್ ಗೌಡ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
ಇದೊಂದು ಸಮಾನ ಮನಸ್ಕ ಯುವಕರು ನಿರ್ಮಾಣ ಮಾಡಿರುವ ಅದ್ದೂರಿ ವೆಚ್ಚದ ವಿನೂತನ ವಿಡಿಯೋ ಸಾಂಗ್ ಆಲ್ಬಂ. ಒಲವೇ ಎನ್ನುವ ಹೆಸರಲ್ಲಿ ಹೊರ ಬಂದಿದೆ. ಸಿನಿಮಾ ಹಾಡಿನ ಹಾಗೆಯೇ ಎಲ್ಲಾ ರೀತಿಯಲ್ಲೂ ಗುಣಮಟ್ಟದೊಂದಿಗೆ ನಿರ್ಮಾಣವಾಗಿದೆ. ಹಾಗೆಯೇ ನಾನಾ ಬಗೆಯಲ್ಲಿ ಸಿನಿಮೀಯ ರೂಪುರೇಷೆ ಹೊಂದಿದೆ.
ಶಿವಾನಿ
ಯುವ ನಿರ್ದೇಶಕಿ ನಟಿ M S ಶಿವಾನಿ ಯವರ ಪರಿಕಲ್ಪನೆಗೆ ಗಾಯನ,ಸಾಹಿತ್ಯ ಹಾಗೂ ಸಂಗೀತ ಒದಗಿಸಿದ್ದಾರೆ ಗಾಯಕರಾದ ಡಾ॥ಸುಚೇತನ್ ರಂಗಸ್ವಾಮಿಯವರು. ಒಂದು ಭಾವಪೂರ್ಣ ಕಥೆಯ ನಿರೂಪಣೆ ಹೊಂದಿರುವ ಈ ಗೀತೆಯ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ನಡೆದಿದ್ದು ಕಾರ್ತಿಕ್ ಹಾಗೂ ನವೀನ್ ಛಾಯಾಗ್ರಹಣ ಮಾಡಿದ್ದಾರೆ. ಆಲ್ಭಂ ಅದ್ಬುತವಾಗಿ ಮೂಡಿ ಬರುವಲ್ಲಿ ಇವರಿಬ್ಬರ ಕೈಚಳಕ ಕೂಡ ಪ್ಲಸ್ ಆಗಿದೆ.
ಕೆಜಿಎಫ್ ಚಿತ್ರ ದ ಖ್ಯಾತಿಯ ಸಂಕಲನಕಾರರಾದ ಶ್ರೀಕಾಂತ್ ಈ ಹಾಡಿನ ವೀಡಿಯೋ ಎಡಿಟ್ ಮಾಡಿದ್ದಾರೆ. ಸುಪ್ರಸಿದ್ಧ ಆಡಿಯೋ ಕಂಪನಿ ಆನಂದ್ ಆಡಿಯೋಸ್ ಈ ಗೀತೆಯನ್ನು ಲಾಂಚ್ ಮಾಡುತ್ತಿದೆ. ಜ.3 ರಿಂದ ಆನಂದ್ ಆಡಿಯೋಸ್ ನ ಎಲ್ಲಾ ಅಂತರ್ಜಾಲ ವೇದಿಕೆಗಳಲ್ಲಿ ಈ ಹಾಡು ಬಿಡುಗಡೆ ಆಗುತ್ತಿದೆ. ಸದ್ಯಕ್ಕೆ ವಿಡಿಯೋಸಾಂಗ್ ಆಲ್ಬಂ ಮೂಲಕ ಸದ್ದುಮಾಡಲು ಹೊರಟಿರುವ ಸುಕೃಶಿ ಸಂಸ್ಥೆಮುಂದೆ ಸಿನಿಮಾ ನಿರ್ಮಾಣಕ್ಕೂ ಸಿದ್ಧತೆ ನಡೆಸಿದೆ ಎನ್ನುತ್ತಿವೆ ಸಂಸ್ಥೆಯ ಮೂಲಗಳು.