ನಮ್ಮವರಿಗೂ ಬಂತಾ ಬಯೋಪಿಕ್‌ ಛಲ ? ಸಾಧಕರ ಬೆನ್ನತ್ತಿದ ಸಿನ್ಮಾ ಮಂದಿ

ಇದು ಸಿನಿಲಹರಿ ವಿಶೇಷ

“ಸೂರರೈ ಪಟ್ರುʼ ಬೆನ್ನಲೇ ಸಿನಿಮಾ ಆಗುವ ಹಾದಿಯಲ್ಲಿವೆ ಹಲವು ಸಾಧಕರ ಬಯೋಪಿಕ್‌

ಅಯ್ಯೋ…ನಮ್ಮವರಿಗ್ಯಾಕೆ ಇದು ಹೊಳಿಲಿಲ್ಲ ? ತಮಿಳಿನ ಸೂಪರ್‌ ಸ್ಟಾರ್‌ ನಟ ಸೂರ್ಯ ಅಭಿನಯದʼ ಸೂರರೈ ಪಟ್ರು ʼ ಚಿತ್ರ ಭಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಸಕ್ಸಸ್‌ ಕಂಡಾಗ ಕನ್ನಡದ ಸಿನಿಮಾ ಪ್ರೇಕ್ಷಕರಿಂದ ಇಂತಹ ಮಾತು ಕೇಳಿ ಬಂತು. ಗಾಂಧಿನಗರದಲ್ಲೂ ಇದು ಭಾರೀ ಚರ್ಚೆಗೆ ಗ್ರಾಸವಾಯಿತು. ಆ ಕತೆ ನಾವೇ ಮಾಡಿದ್ದರೆ, ಅದೇ ಕನೆಕ್ಷನ್‌ ನಮ್ದೆ ಆಗ್ತಿತಲ್ವಾ  ಅಂತ ಕೆಲವು ನಿರ್ಮಾಪಕರು ಅಂದುಕೊಂಡ್ರಂತೆ.

ಕ್ಯಾಪ್ಟನ್‌ ಗೋಪಿನಾಥ್

ಅದು ಯಾಕೆ ಗೊತ್ತಾ, ʼಸೂರರೈ ಪಟ್ರುʼ ಸಿನಿಮಾ ಕತೆ ಕನ್ನಡದ್ದೇ. ಅದು ಕನ್ನಡದವರೇ ಆದ ಕ್ಯಾಫ್ಟನ್‌ ಗೋಪಿನಾಥ್‌ ಅವರ ಜೀವನ ಆಧರಿತ ಸಿನಿಮಾ. ಅದೇ ರೀತಿ ಇನ್ಫೋಸಿಸ್‌ ನಾರಾಯಣ ಮೂರ್ತಿ ಅವರ ಜೀವನ ಕೂಡ ಸಿನಿಮಾ ಆಗುತ್ತಿದೆ. ಅವರು ೫ ರೂ. ಇಟ್ಕೊಂಡು ಇನ್ಫೋಸಿಸ್‌ ಅಂತಹ ದೊಡ್ಡ ಸಂಸ್ಥೆ ಕಟ್ಟಿದವರು. ಅವರೇನು ಅನ್ನೋದು ಇಡೀ ಜಗತ್ತಿಗೆ ಗೊತ್ತು. ಅವರ ಸಿನಿಮಾ ಅಂದ್ರೆ ಅದು ಬರೀ ಪ್ಯಾನ್‌ ಇಂಡಿಯಾ ಅಲ್ಲ, ವರ್ಲ್ಡ್ ವೈಡ್‌ ಮಾರ್ಕೆಟ್‌ ಕಾಣುವ ಸಿನಿಮಾ. ಆದ್ರೆ ಅದು ಆಗುತ್ತಿರುವುದು ಕನ್ನಡದಲಲ್ಲ, ಹಿಂದಿಯಲ್ಲಿ ಎನ್ನುವುದು ಕನ್ನಡಿಗರಿಗಾದ ಬೇಸರ.

ನಾರಾಯಣ ಮೂರ್ತಿ

ಕನ್ನಡದ ಸಿನಿಮಾ ಮಂದಿಗೆ ಎಚ್ಚರ ಆಗುವುದು ಹೀಗೆಯೇ ? ಯಾರಾದ್ರೂ, ನಮ್ದೆ ಊರಿನ ಸಾಧಕರ ಕತೆ ಅಥವಾ ಸಂಪನ್ಮೂಲ ಬಳಸಿಕೊಂಡು ದೊಡ್ಡಮಟ್ಟದಲ್ಲಿ ಗೆದ್ದಾಗ, ಇಲ್ಲವೇ ಹಣ ಮಾಡಿಕೊಂಡಾಗ ನಾವು ನಿದ್ದೆಯಿಂದ ಏಳುತ್ತೇವೆ. ಅರರೆ…ಅದು ನಮ್ದೆ ಕತೆ ಅಲ್ವಾ , ನಮ್ದೇ ಸಂಪನ್ಮೂಲ ಅಲ್ವೇ, ಅದನ್ನು ನಾವೇ ಬಳಸಿಕೊಂಡಿದ್ರೇ, ಅಷ್ಟು ದುಡ್ಡು ನಾವೇ ದುಡಿದುಕೊಳ್ಳಬಹುದಾಗಿತ್ತು ಅಲ್ವಾ , ಅಂತೆಲ್ಲ ಯೋಚಿಸುತ್ತೇವೆ. ಈಗಲೂ ಅದೇ ಆಗಿದೆ !

ಬಿ. ಎಸ್.‌ ಯಡಿಯೂರಪ್ಪ

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥೆ ಕಟ್ಟಿ ದೊಡ್ಡ ಸಕ್ಸಸ್‌ ಕಂಡಿದ್ದ ಕ್ಯಾಪ್ಟನ್‌ ಗೋಪಿನಾಥ್‌ ಅವರ ಜೀವನ ಆಧರಿತ ʼಸೂರರೈ ಪಟ್ರುʼ ಬಂದು ಹೋದ ಮೇಲೆ ಕನ್ನಡದ ಸಿನಿಮಾ ಮಂದಿ ಕೊಂಚ ಎಚ್ಚೇತ್ತುಕೊಂಡ ಹಾಗೆ ಕಾಣುತ್ತಿದೆ. ನಮ್ಮವರ ಕತೆಗಳನ್ನು ನಾವೇ ಬೆಳ್ಳಿತೆರೆಗೆ ತರಬೇಕೆನ್ನುವ ಛಲವೋ, ಅಥವಾ ನಮ್ಮ ಸಾಧಕರ ಮೇಲಿನ ಕಾಳಜಿಯೋ ಗೊತ್ತಿಲ್ಲ, ಒಟ್ಟಿನಲ್ಲಿ ಕನ್ನಡದ ಹಲವು ಅಗ್ರಗಣ್ಯ ಸಾಧಕರ ಜೀವನದ ಕತೆಗಳ ಮೇಲೆ ಸಿನಿಮಾ ಮಂದಿ ಕಣ್ಣು ಬಿದ್ದಿದೆ.

ಮೂಲಗಳ ಪ್ರಕಾರ ಈಗ ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್‌ ಅವರ ಜೀವನ ಆಧರಿಸಿ ಯಾರೋ ಸಿನಿಮಾ ಮಾಡಲು ಹೊರಟಿದ್ದಾರೆನ್ನುವ ಸುದ್ದಿಯಿದೆ. ಅದು ಎಷ್ಟರ ಮಟ್ಟಿಗೆ ಸತ್ಯವೋ, ಇನ್ನು ಗೊತ್ತಾಗಿಲ್ಲ. ಆದರೆ ಯಾರೇ ಸಿನಿಮಾ ಮಾಡಲು ಹೊರಟರು ಅದಕ್ಕೆ ಸುಮಲತಾ ಅವರ ಒಪ್ಪಿಗೆ ಬೇಕು, ಜತೆಗೆ ಯಾವ ವಿಚಾರದ ಮೇಲೆ ಸಿನಿಮಾ ಮಾಡಲು ಹೊರಟಿದ್ದಾರೆಂಬ ಬಗ್ಗೆ ಮಾಹಿತಿ ಪಡೆಯಬೇಕು, ಇದೆಲ್ಲ ಮುಗಿದ ಮೇಲೆ ಸಿನಿಮಾ ಆಗುವುದು ವಾಡಿಕೆ. ಸದ್ಯಕ್ಕೆ ಹಾಗೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಸುಮಲತಾ ಅಂಬರೀಶ್

ಗೊತ್ತಿಲ್ಲ, ಇದು ಗಾಸಿಪ್‌ ಕೂಡ ಆಗಿರಬಹುದು. ಅದರಾಚೆ, ಬಹಳಷ್ಟು ಸಾಧಕರ ಜೀವನ ಕತೆಗಳ ಮೇಲೆ ಸಿನಿಮಾ ಮಂದಿ ಕಣ್ಣಿಟ್ಟಿದ್ದಾರೆ. ಈಗಾಗಲೇ ಆ ನಿಟ್ಟಿನಲ್ಲಿ ಕೆಲವರು ಕೆಲಸ ಕೂಡ ಶುರು ಮಾಡಿರುವ ಬಗ್ಗೆ ಮಾತುಗಳು ಕೇಳಿ ಬಂದಿವೆ. ಸದ್ಯಕ್ಕೆ ಬಯೋಪಿಕ್‌ ಸಿನಿಮಾಗಳ ಸಾಲಿನಲ್ಲಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜತೆಗೆ ವಿಆರ್‌ಎಲ್‌ ಸಂಸ್ಥೆಯ ಸ್ಥಾಪಕ ವಿಜಯ್‌ ಸಂಕೇಶ್ವರ ಹೆಸರು ಕೂಡ ಚಾಲ್ತಿಯಲ್ಲಿವೆ.

ಸಿದ್ದರಾಮಯ್ಯ

ಈ ಪ್ರಯತ್ನಗಳ ಹಿಂದೆ ಯಾರೆಲ್ಲ ಇದ್ದಾರೆನ್ನುವುದು ಸದ್ಯಕ್ಕೆ ನಿಗೂಢ. ಯಾವುದೇ ಮಾಹಿತಿಗಳು ರಿವೀಲ್‌ ಆಗಿಲ್ಲ. ಆದರೆ ಈ ಇಬ್ಬರು ಸಾಧಕರ ಕುರಿತು ಸಿನಿಮಾ ಆಗುತ್ತಿರುವುದು ನಿಜ ಎನ್ನುತ್ತಿವೆ ಮೂಲಗಳು. ಹಾಗೆ ನೋಡಿದರೆ, ಈ ಇಬ್ಬರು ಸಾಧಕರ ಜೀವನ ಕತೆಗಳು ʼಸೂರರೈ ಪಟ್ರುʼ ಸಿನಿಮಾ ಕತೆಗೇನು ಕಮ್ಮಿ ಇಲ್ಲ. ಕರ್ನಾಟಕ ಕಂಡ ರಾಜಕಾರಣಿಗಳಲ್ಲಿ ಯಡುಯೂರಪ್ಪ ಹಾಗೂ ಸಿದ್ದರಾಮಯ್ಯ ಬರೀ ಜನ ನಾಯಕರು ಮಾತ್ರವಲ್ಲ, ವರ್ಣರಂಜಿತ ರಾಜಕಾರಣಿಗಳು ಕೂಡ. ಅವರ ಕುರಿತು ಸಿನಿಮಾ ಮಾಡುವುದು ಒಂದು ಕ್ರೇಜ್.‌ ಸದ್ಯಕ್ಕೆ ಇವುಗಳ ಹಿಂದಿರುವವರು ಯಾರು? ಸಸ್ಪೆನ್ಸ್.‌

ವಿಜಯ ಸಂಕೇಶ್ವರ್

Related Posts

error: Content is protected !!